Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 80:1-2

ಸ್ತುತಿಗೀತೆ. ರಚನೆಗಾರ: ಆಸಾಫ.

80 ಇಸ್ರೇಲನ್ನು ಕಾಯುವ ಕುರುಬನೇ,
    ಯೋಸೇಫನ ಜನರನ್ನು ಕುರಿಮಂದೆಯಂತೆ ನಡೆಸುವಾತನೇ,
ಕೆರೂಬಿ ದೂತರ ಮೇಲೆ ರಾಜನಂತೆ ಕುಳಿತಿರುವಾತನೇ,
    ಕಿವಿಗೊಡು. ನಾವು ನಿನ್ನನ್ನು ನೋಡುವಂತಾಗಲಿ.
ಇಸ್ರೇಲನ್ನು ಕಾಯುವ ಕುರುಬನೇ, ನಿನ್ನ ಮಹತ್ವವನ್ನು ಎಫ್ರಾಯೀಮನಿಗೂ ಬೆನ್ಯಾಮೀನನಿಗೂ ಮನಸ್ಸೆಗೂ ತೋರಿಸು.
    ಬಂದು ನಮ್ಮನ್ನು ರಕ್ಷಿಸು.

ಕೀರ್ತನೆಗಳು 80:8-19

ಹಿಂದಿನ ಕಾಲದಲ್ಲಿ ನೀನು ನಮ್ಮನ್ನು
    ಅಮೂಲ್ಯವಾದ ಸಸಿಯಂತೆ ನೋಡಿಕೊಂಡೆ.
ನಿನ್ನ “ದ್ರಾಕ್ಷಾಲತೆ”ಯನ್ನು ಈಜಿಪ್ಟಿನಿಂದ ತೆಗೆದುಕೊಂಡು ಬಂದೆ.
    ನೀನು ಬೇರೆ ಜನರನ್ನು ಈ ನಾಡಿನಿಂದ ಹೊರಗಟ್ಟಿ ನಿನ್ನ “ದ್ರಾಕ್ಷಾಲತೆ”ಯನ್ನು ನೆಟ್ಟೆ.
“ದ್ರಾಕ್ಷಾಲತೆ”ಯು ಬೆಳೆಯಲೆಂದು ಭೂಮಿಯನ್ನು ಹದ ಮಾಡಿದೆ.
    ಅದರ ಬೇರುಗಳು ಬಲವಾಗಿ ಬೆಳೆಯಲು ಸಹಾಯಮಾಡಿದೆ.
    ಬಹುಬೇಗನೆ “ದ್ರಾಕ್ಷಾಲತೆ”ಯು ದೇಶದಲ್ಲೆಲ್ಲಾ ಹಬ್ಬಿಕೊಂಡಿತು.
10 ಅದರ ನೆರಳಿನಿಂದ ಬೆಟ್ಟಗಳು ಕವಿದುಕೊಂಡವು.
    ಅದರ ಎಲೆಗಳ ನೆರಳಿನಿಂದ ದೇವದಾರು ವೃಕ್ಷಗಳು ಕವಿದುಕೊಂಡವು.
11     ಅದರ ಬಳ್ಳಿಗಳು ಮೆಡಿಟರೇನಿಯನ್ ಸಮುದ್ರದವರೆಗೂ ಹಬ್ಬಿಕೊಂಡವು.
    ಅದರ ರೆಂಬೆಗಳು ಯೂಫ್ರೇಟೀಸ್ ನದಿಯವರೆಗೂ ಹಬ್ಬಿಕೊಂಡವು.
12 ನಿನ್ನ “ದ್ರಾಕ್ಷಾಲತೆ”ಯ ಸಂರಕ್ಷಣೆಗಾಗಿ ಕಟ್ಟಿದ್ದ ಗೋಡೆಗಳನ್ನು ನೀನು ಕೆಡವಿಬಿಟ್ಟದ್ದೇಕೆ?
    ಈಗ ಅದರ ಸಮೀಪದಲ್ಲಿ ಹೋಗುವ ಪ್ರತಿಯೊಬ್ಬರೂ ಅದರ ಹಣ್ಣುಗಳನ್ನು ತೆಗೆದುಕೊಳ್ಳುವರು.
13 ಕಾಡುಹಂದಿಗಳು ಬಂದು ನಿನ್ನ “ದ್ರಾಕ್ಷಾಲತೆ”ಯ ಮೇಲೆ ನಡೆಯುತ್ತವೆ.
    ಕಾಡುಪ್ರಾಣಿಗಳು ಬಂದು ಅವುಗಳ ಎಲೆಗಳನ್ನು ತಿನ್ನುತ್ತವೆ.
14 ಸೇನಾಧೀಶ್ವರನಾದ ದೇವರೇ, ಹಿಂತಿರುಗಿ ಬಾ.
    ಪರಲೋಕದಿಂದ ನಿನ್ನ “ದ್ರಾಕ್ಷಾಲತೆ”ಯನ್ನು ನೋಡಿ ಅದನ್ನು ಸಂರಕ್ಷಿಸು.
15 ನಿನ್ನ ಸ್ವಂತ ಕೈಗಳಿಂದ ನೀನು ನೆಟ್ಟ “ದ್ರಾಕ್ಷಾಲತೆ”ಯನ್ನು ನೋಡು.
    ನೀನು ಬೆಳೆಸಿದ ಎಳೆ ಸಸಿಯನ್ನು[a] ನೋಡು.
16 ನಿನ್ನ “ದ್ರಾಕ್ಷಾಲತೆ”ಯು ಒಣಗಿದ ಗೊಬ್ಬರದಂತೆ ಬೆಂಕಿಯಿಂದ ಸುಟ್ಟುಹೋಗಿದೆ.
    ನೀನು ಅದರ ಮೇಲೆ ಕೋಪಗೊಂಡು ನಾಶಮಾಡಿದೆ.

17 ನೀನು ಆರಿಸಿಕೊಂಡಿರುವಾತನ[b] ಕಡೆಗೆ ಕೈಚಾಚಿ ಸಹಾಯ ಮಾಡು.
    ನೀನು ಬೆಳೆಸಿದ ಜನರ[c] ಕಡೆಗೆ ಕೈಚಾಚು.
18 ಆಗ ನಾವು ನಿನ್ನನ್ನು ಎಂದಿಗೂ ತ್ಯಜಿಸುವುದಿಲ್ಲ.
    ನಮ್ಮನ್ನು ಬದುಕಿಸು.
    ನಾವು ಬದುಕುವಂತೆ ಮಾಡು, ಆಗ ನಾವು ನಿನ್ನನ್ನು ಆರಾಧಿಸುವೆವು.
19 ಸೇನಾಧೀಶ್ವರನಾದ ಯೆಹೋವ ದೇವರೇ, ನಮ್ಮನ್ನು ಮತ್ತೆ ಸ್ವೀಕರಿಸಿಕೊ,
    ಪ್ರಸನ್ನಮುಖದಿಂದ ನಮ್ಮ ಕಡೆಗೆ ನೋಡಿ ನಮ್ಮನ್ನು ರಕ್ಷಿಸು.

ಯೆಶಾಯ 3:1-17

ನಾನು ಹೇಳುವದನ್ನೆಲ್ಲಾ ಮನದಟ್ಟುಮಾಡಿಕೊಳ್ಳಿರಿ: ನಮ್ಮ ಒಡೆಯನೂ ಸರ್ವಶಕ್ತನೂ ಆದ ಯೆಹೋವನು ಯೆಹೂದ ಮತ್ತು ಇಸ್ರೇಲಿನ ಆಧಾರಗಳನ್ನೆಲ್ಲಾ ತೆಗೆದುಬಿಡುವನು. ಆತನು ಅವರ ಅನ್ನಪಾನಗಳನ್ನೆಲ್ಲಾ ತೆಗೆದುಬಿಡುವನು. ಆತನು ಎಲ್ಲಾ ವೀರರನ್ನೂ ಮಹಾಸೈನಿಕರನ್ನೂ ತೆಗೆದುಬಿಡುವನು. ದೇವರು ಎಲ್ಲಾ ನ್ಯಾಯಾಧೀಶರನ್ನೂ ಪ್ರವಾದಿಗಳನ್ನೂ ಹಿರಿಯರನ್ನೂ ಇಂದ್ರಜಾಲಗಾರರನ್ನು ತೆಗೆದುಬಿಡುವನು. ದೇವರು ಸೇನಾಪತಿಗಳನ್ನೂ ಸರ್ಕಾರದ ಅಧಿಪತಿಗಳನ್ನೂ ತೆಗೆದುಬಿಡುವನು. ಆತನು ಉತ್ತಮ ಸಲಹೆಗಾರರನ್ನೂ ಮಾಂತ್ರಿಕರನ್ನೂ ಭವಿಷ್ಯ ಹೇಳುವವರನ್ನೂ ತೊಲಗಿಸುವನು.

ಯೆಹೋವನು ಹೇಳುವುದೇನೆಂದರೆ: “ನಾನು ಬಾಲಕರನ್ನು ನಿಮ್ಮ ನಾಯಕರನ್ನಾಗಿ ಮಾಡುವೆನು. ಪ್ರಜೆಗಳು ಒಬ್ಬರಿಗೊಬ್ಬರು ವಿರೋಧಿಗಳಾಗುವರು; ಬಾಲಕರು ಹಿರಿಯರನ್ನು ಗೌರವಿಸರು. ಸಾಮಾನ್ಯರು ಗಣ್ಯವ್ಯಕ್ತಿಗಳನ್ನು ಸನ್ಮಾನಿಸರು.”

ಆ ಸಮಯದಲ್ಲಿ ಒಬ್ಬನು ತನ್ನ ಸ್ವಂತ ಕುಟುಂಬದ ಸಹೋದರನನ್ನು ಹಿಡಿದು, “ನಿನಗೆ ನಿಲುವಂಗಿಯದೆ. ಆದ್ದರಿಂದ ನೀನು ನಮಗೆ ನಾಯಕನಾಗು. ಈ ಅವಶೇಷಗಳೆಲ್ಲಾ ನಿನಗೆ ಅಧೀನವಾಗಿರಲಿ” ಎಂದು ಹೇಳುವರು.

ಆದರೆ ಆ ಸಹೋದರನು ಎದ್ದುನಿಂತು, “ನನ್ನಿಂದ ಆಗುವುದಿಲ್ಲ, ನನ್ನ ಮನೆಯಲ್ಲಿ ಸಾಕಷ್ಟು ಧಾನ್ಯವಾಗಲಿ ಬಟ್ಟೆಯಾಗಲಿ ಇಲ್ಲ. ನನ್ನನ್ನು ನಾಯಕನನ್ನಾಗಿ ಮಾಡಬೇಡಿ” ಎಂದು ಹೇಳುವನು.

ಜೆರುಸಲೇಮ್ ಮುಗ್ಗರಿಸಿಬಿದ್ದು ಕೆಟ್ಟಕಾರ್ಯಗಳನ್ನು ಮಾಡಿದ್ದರಿಂದ ಹೀಗಾಗುವದು. ಯೆಹೂದವು ಪಾಪದಲ್ಲಿ ಬಿದ್ದು ದೇವರನ್ನು ಹಿಂಬಾಲಿಸುವುದನ್ನು ನಿಲ್ಲಿಸಿಯದೆ. ಅವರಾಡುವ ಮಾತುಗಳು, ಮಾಡುವ ಕ್ರಿಯೆಗಳು ಯೆಹೋವನಿಗೆ ವಿರುದ್ಧವಾಗಿವೆ. ಯೆಹೋವನ ಮಹಿಮಾಶಕ್ತಿಯಿಂದ ಕೂಡಿದ ಕಣ್ಣುಗಳು ಇವೆಲ್ಲವನ್ನು ನೋಡುವವು.

ಜನರ ಮುಖಭಾವವೇ ಅವರ ದುಷ್ಕೃತ್ಯಗಳನ್ನು ಎತ್ತಿತೋರಿಸುವವು. ಅವರು ತಮ್ಮ ಪಾಪಗಳಿಗಾಗಿ ಹೆಚ್ಚಳಪಡುವರು. ಅವರು ಸೊದೋಮಿನ ಜನರಂತಿದ್ದಾರೆ. ತಮ್ಮ ಪಾಪಗಳನ್ನು ಯಾರು ನೋಡಿದರೂ ಅವರಿಗೆ ಚಿಂತೆಯಿಲ್ಲ. ಇದು ನಿಜವಾಗಿಯೂ ಭಯಂಕರವಾದದ್ದು. ಅವರು ತಮಗೆ ಬಹಳ ಸಂಕಟಗಳನ್ನು ಬರಮಾಡಿಕೊಂಡಿದ್ದಾರೆ.

10 ಒಳ್ಳೆಯವರಿಗೆ ಒಳ್ಳೆಯವುಗಳೇ ಸಂಭವಿಸುತ್ತವೆ ಎಂಬುದಾಗಿ ತಿಳಿಸು. ಅವರು ಮಾಡುವ ಒಳ್ಳೆಯ ಕಾರ್ಯಗಳಿಗಾಗಿ ಅವರಿಗೆ ಬಹುಮಾನ ದೊರೆಯುವುದು. 11 ಆದರೆ ದುಷ್ಟರ ಗತಿಯನ್ನು ಏನು ಹೇಳಲಿ. ದುಷ್ಟರಿಗೆ ಕೆಡುಕು ಸಂಭವಿಸುವದು. ಅವರಿಗೆ ಬಹಳ ಸಂಕಟಗಳು ಬಂದೊದಗುವವು. ಅವರು ಮಾಡಿರುವ ಎಲ್ಲಾ ದುಷ್ಟಕ್ರಿಯೆಗಳಿಗೆ ಶಿಕ್ಷೆ ಕೊಡಲ್ಪಡುವದು. 12 ಮಕ್ಕಳು ನನ್ನ ಜನರನ್ನು ಸೋಲಿಸಿಬಿಡುವರು. ಸ್ತ್ರೀಯರು ನನ್ನ ಜನರನ್ನು ಆಳುವರು.

ನನ್ನ ಜನರೇ, ನಿಮ್ಮ ಮಾರ್ಗದರ್ಶಕರು ನಿಮ್ಮನ್ನು ತಪ್ಪುದಾರಿಯಲ್ಲಿ ನಡಿಸುವರು; ಸರಿಯಾದ ದಾರಿಯಿಂದ ನಿಮ್ಮನ್ನು ಅಡ್ಡದಾರಿಗೆ ನಡಿಸುವರು.

ದೇವರು ತನ್ನ ಜನರ ಬಗ್ಗೆ ಮಾಡಿದ ತೀರ್ಮಾನ

13 ಯೆಹೋವನು ತನ್ನ ಜನರಿಗೆ ನ್ಯಾಯತೀರಿಸಲು ಎದ್ದುನಿಂತಿದ್ದಾನೆ. 14 ನಾಯಕರಿಗೂ ಹಿರಿಯರಿಗೂ ಅವರು ಮಾಡಿದ ಕಾರ್ಯಗಳ ವಿರುದ್ಧವಾಗಿ ಆತನು ನ್ಯಾಯತೀರಿಸುವನು.

ಯೆಹೋವನು ಹೇಳುವುದೇನೆಂದರೆ: “ನೀವು ದಾಕ್ಷಾತೋಟವನ್ನು (ಯೆಹೂದವನ್ನು) ಸುಟ್ಟುಹಾಕಿದ್ದೀರಿ; ಬಡಜನರಿಂದ ನೀವು ಕಿತ್ತುಕೊಂಡ ವಸ್ತುಗಳನ್ನು ಈಗಲೂ ನಿಮ್ಮ ಮನೆಗಳಲ್ಲಿ ಇಟ್ಟುಕೊಂಡಿದ್ದೀರಿ. 15 ನನ್ನ ಜನರನ್ನು ಕುಗ್ಗಿಸಲು ನಿಮಗೆ ಯಾವ ಅಧಿಕಾರವಿದೆ? ಬಡಜನರ ಮುಖವನ್ನು ಧೂಳಿನಲ್ಲಿ ಹಾಕಿ ಉಜ್ಜಲು ನಿಮಗೆ ಯಾವ ಅಧಿಕಾರವಿದೆ?” ಇದು ನನ್ನ ಒಡೆಯನೂ ಸರ್ವಶಕ್ತನೂ ಆಗಿರುವ ಯೆಹೋವನ ನುಡಿಗಳು.

16 ಯೆಹೋವನು ಹೇಳುವುದೇನೆಂದರೆ: “ಚೀಯೋನಿನ ಸ್ತ್ರೀಯರು ವಯ್ಯಾರದಿಂದ ತಲೆಯಾಡಿಸುತ್ತಾ, ಕುಡಿನೋಟ ಬೀರುತ್ತಾ, ಕುಲುಕಿ ಹೆಜ್ಜೆಯಿಡುತ್ತಾ, ಕಾಲುಗೆಜ್ಜೆಯನ್ನು ಝಣಝಣಿಸುತ್ತಾ ನಡೆಯುತ್ತಾರೆ.”

17 ನನ್ನ ಒಡೆಯನಾದ ಯೆಹೋವನು ಚೀಯೋನಿನ ಸ್ತ್ರೀಯರ ತಲೆಯ ಮೇಲೆ ಹುಣ್ಣುಗಳನ್ನು ಬರಮಾಡಿ ಅವರ ತಲೆಕೂದಲು ಉದುರಿ ತಲೆಬೋಳಾಗುವಂತೆ ಮಾಡುವನು.

ಇಬ್ರಿಯರಿಗೆ 10:32-39

ನಿಮ್ಮಲ್ಲಿರುವ ಸಂತೋಷ ಮತ್ತು ಧೈರ್ಯಗಳನ್ನು ಬಿಡಬೇಡಿ

32 ನೀವು ಸತ್ಯವನ್ನು ತಿಳಿದುಕೊಂಡ ಆ ದಿನಗಳನ್ನು ನೆನಪು ಮಾಡಿಕೊಳ್ಳಿ. ನೀವು ಅನೇಕ ಸಂಕಟಗಳಲ್ಲಿ ಹೋರಾಟ ಮಾಡಿದರೂ, ಧೃತಿಗೆಡದೆ ಮುಂದುವರಿದಿರಿ. 33 ಕೆಲವು ಸಂದರ್ಭಗಳಲ್ಲಿ ಜನರು ನಿಮಗೆ ದ್ವೇಷಮಯ ಸಂಗತಿಗಳನ್ನು ಹೇಳಿದರು ಹಾಗೂ ಅನೇಕ ಜನರ ಮುಂದೆ ನಿಮ್ಮನ್ನು ಹಿಂಸಿಸಿದರು. ಅದೇ ರೀತಿಯ ಹಿಂಸೆಗೆ ಗುರಿಯಾಗಿದ್ದ ಜನರಿಗೆ ಕೆಲವು ಸಂದರ್ಭಗಳಲ್ಲಿ ಸಹಾಯ ಮಾಡಿದಿರಿ. 34 ಹೌದು, ಸೆರೆಯಲ್ಲಿರುವ ಜನರಿಗೆ ಸಹಾಯ ಮಾಡಿದಿರಿ ಮತ್ತು ಅವರ ಸಂಕಟಗಳಲ್ಲಿ ಪಾಲ್ಗೊಂಡಿರಿ. ನಿಮ್ಮ ಸ್ವತ್ತುಗಳನ್ನೆಲ್ಲ ನಿಮ್ಮಿಂದ ಕಿತ್ತುಕೊಂಡು ಹೋದಾಗಲೂ ಸಂತೋಷದಿಂದಲೇ ಇದ್ದಿರಿ. ಅದಕ್ಕಿಂತಲೂ ಉತ್ತಮವಾದದ್ದೂ ಶಾಶ್ವತವಾದದ್ದೂ ನಿಮಗೆ ದೊರೆತಿದೆ ಎಂದು ನಿಮಗೆ ತಿಳಿದಿದ್ದ ಕಾರಣ ನೀವು ಸಂತೋಷವಾಗಿದ್ದಿರಿ.

35 ಹಿಂದೆ ಹೊಂದಿದ್ದ ಧೈರ್ಯವನ್ನು ಬಿಟ್ಟುಬಿಡಬೇಡಿ. ನಿಮ್ಮ ಧೈರ್ಯಕ್ಕೆ ತಕ್ಕ ಪ್ರತಿಫಲವು ಸಿಗುತ್ತದೆ. 36 ನೀವು ತಾಳ್ಮೆಯಿಂದಿರಬೇಕು, ನೀವು ದೇವರ ಚಿತ್ತಾನುಸಾರವಾಗಿ ಮಾಡಿದ ನಂತರ ಆತನ ವಾಗ್ದಾನದಂತೆ ನಿಮಗೆ ಪ್ರತಿಫಲವು ಸಿಕ್ಕೇ ಸಿಗುತ್ತದೆ. 37 ಆತನು ಹೀಗೆ ಹೇಳುತ್ತಾನೆ:

“ಸ್ವಲ್ಪಕಾಲದಲ್ಲಿಯೇ, ಬರುವಾತನು ಬರುತ್ತಾನೆ.
    ಆತನು ತಡಮಾಡುವುದಿಲ್ಲ.
38 ನೀತಿವಂತನು ನಂಬಿಕೆಯಿಂದಲೇ
    ಜೀವವನ್ನು ಹೊಂದಿಕೊಳ್ಳುವನು.
ಆದರೆ ಅವನು ಭಯದಿಂದ ಹಿಂಜರಿದರೆ
    ನಾನು ಅವನಲ್ಲಿ ಸಂತೋಷಪಡುವುದಿಲ್ಲ.”(A)

39 ಆದರೆ ನಾವು ಹಿಂಜರಿಯುವ ಜನರಲ್ಲ, ನಾಶವಾಗುವ ಜನರೂ ಅಲ್ಲ. ನಾವು ನಂಬಿಕೆಯುಳ್ಳವರಾಗಿದ್ದೇವೆ ಮತ್ತು ರಕ್ಷಣೆ ಹೊಂದಿದವರಾಗಿದ್ದೇವೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International