Revised Common Lectionary (Semicontinuous)
ರಚನೆಗಾರ: ಆಸಾಫ.
50 ದೇವಾಧಿದೇವನಾದ ಯೆಹೋವನು ಪೂರ್ವದಿಂದ ಪಶ್ಚಿಮದವರೆಗೂ
ಇರುವ ಭೂನಿವಾಸಿಗಳೆಲ್ಲರನ್ನು ತನ್ನ ಸನ್ನಿಧಿಗೆ ಬರಲು ಆಜ್ಞಾಪಿಸುವನು.
2 ಸೌಂದರ್ಯದಿಂದ ಕಂಗೊಳಿಸುತ್ತಿರುವ ಚೀಯೋನಿನಲ್ಲಿ ದೇವರು ಪ್ರಕಾಶಿಸುತ್ತಾನೆ.
3 ನಮ್ಮ ದೇವರು ಬರುತ್ತಿದ್ದಾನೆ; ಆತನು ಸುಮ್ಮನಿರುವುದಿಲ್ಲ.
ಆತನ ಮುಂಭಾಗದಲ್ಲಿ ಬೆಂಕಿಯು ಪ್ರಜ್ವಲಿಸುವುದು.
ಆತನ ಸುತ್ತಲೂ ಬಿರುಗಾಳಿ ಬೀಸುವುದು.
4 ಯೆಹೋವನು ತನ್ನ ಜನರಿಗೆ ನ್ಯಾಯವಿಚಾರಣೆಗಾಗಿ
ಭೂಮ್ಯಾಕಾಶಗಳನ್ನು ಸಾಕ್ಷಿಗಳಾಗಿ ಕರೆಯುವನು.
5 ದೇವರು, “ನನ್ನೊಡನೆ ಯಜ್ಞದ ಮೂಲಕ ಒಡಂಬಡಿಕೆ ಮಾಡಿಕೊಂಡ ನನ್ನ ಪವಿತ್ರ ಪ್ರಜೆಗಳೇ,
ನನ್ನ ಸುತ್ತಲೂ ಸೇರಿಬನ್ನಿರಿ” ಎಂದು ಆಜ್ಞಾಪಿಸುವನು.
6 ದೇವರೊಬ್ಬನೇ ನ್ಯಾಯಾಧಿಪತಿ;
ಆತನು ನೀತಿಸ್ವರೂಪನೆಂದು ಆಕಾಶಮಂಡಲವು ಘೋಷಿಸುವುದು.
7 ದೇವರು ಹೀಗೆನ್ನುತ್ತಾನೆ: “ನನ್ನ ಜನರೇ, ಇಸ್ರೇಲರೇ, ನನಗೆ ಕಿವಿಗೊಡಿರಿ!
ನಾನು ನಿಮಗೆ ವಿರುದ್ಧವಾಗಿ ಸಾಕ್ಷಿ ಹೇಳುವೆನು.
ದೇವರಾದ ನಾನೇ ನಿಮ್ಮ ದೇವರು!
8 ನಿಮ್ಮ ಯಜ್ಞಗಳ ಬಗ್ಗೆ ನಾನು ದೂರು ಹೇಳುತ್ತಿಲ್ಲ.
ಇಸ್ರೇಲರಾದ ನೀವು ನನಗೆ ಸರ್ವಾಂಗಹೋಮಗಳನ್ನು ನಿತ್ಯವೂ ಅರ್ಪಿಸುತ್ತಲೇ ಇದ್ದೀರಿ.
22 ದೇವರನ್ನು ಮರೆತುಬಿಟ್ಟವರೇ,
ಇದನ್ನು ಗಮನಕ್ಕೆ ತಂದುಕೊಳ್ಳಿರಿ.
ಇಲ್ಲವಾದರೆ ನಿಮ್ಮನ್ನು ತುಂಡುತಂಡು ಮಾಡುವೆನು;
ಯಾರೂ ನಿಮ್ಮನ್ನು ರಕ್ಷಿಸಲಾರರು!
23 ನನಗೆ ಕೃತಜ್ಞತಾಯಜ್ಞವನ್ನು ಅರ್ಪಿಸುವವನೇ ನನ್ನನ್ನು ಸನ್ಮಾನಿಸುವವನು.
ಆದರೆ ನೀತಿವಂತನಾಗಿ ಜೀವಿಸುವವನಿಗೆ ನನ್ನ ರಕ್ಷಣಾಶಕ್ತಿಯನ್ನು ತೋರಿಸುವೆನು.”
ಸ್ವಜನರ ವಿರುದ್ಧವಾಗಿ ದೇವರ ದೂರು
2 ಭೂಮ್ಯಾಕಾಶಗಳೇ, ಯೆಹೋವನ ಮಾತನ್ನು ಆಲಿಸಿರಿ! ಯೆಹೋವನು ಹೇಳುತ್ತಿದ್ದಾನೆ:
“ನಾನು ಸಾಕಿ ಸಲಹಿದ ಮಕ್ಕಳೇ
ನನಗೆ ದ್ರೋಹಮಾಡಿದ್ದಾರೆ.
3 ಎತ್ತು ತನ್ನ ದಣಿಯನ್ನು ತಿಳಿದದೆ;
ಕತ್ತೆಯು ತನ್ನ ದಣಿಯ ಕೊಟ್ಟಿಗೆಯನ್ನು ತಿಳಿದದೆ.
ಆದರೆ ಇಸ್ರೇಲರು ನನ್ನನ್ನು ತಿಳಿದೇ ಇಲ್ಲ.
ನನ್ನ ಜನರು ನನ್ನನ್ನು ಅರ್ಥಮಾಡಿಕೊಳ್ಳುವುದೇ ಇಲ್ಲ.”
4 ಇಸ್ರೇಲ್ ದೇಶವು ಪಾಪದಿಂದ ತುಂಬಿಹೋಗಿದೆ; ಅವರ ಪಾಪವೇ ಅವರಿಗೆ ಭಾರವಾದ ಹೊರೆಯಾಗಿದೆ; ಅವರು ದುಷ್ಟಕುಟುಂಬಗಳ ಕೆಟ್ಟಮಕ್ಕಳಂತಿದ್ದಾರೆ. ಅವರು ಯೆಹೋವನನ್ನು ತ್ಯಜಿಸಿದ್ದಾರೆ; ಇಸ್ರೇಲಿನ ಪರಿಶುದ್ಧ ದೇವರನ್ನು ಅವಮಾನಪಡಿಸಿದ್ದಾರೆ; ಅವರು ಆತನನ್ನು ತೊರೆದು ಅಪರಿಚಿತನೋ ಎಂಬಂತೆ ಪರಿಗಣಿಸಿದ್ದಾರೆ.
5 ನಾನು ನಿಮ್ಮನ್ನು ಯಾಕೆ ಶಿಕ್ಷಿಸುತ್ತಲೇ ಇರಬೇಕು? ನಾನು ನಿಮ್ಮನ್ನು ಶಿಕ್ಷಿಸಿದೆನು, ಆದರೆ ನೀವು ಬದಲಾಗಲಿಲ್ಲ. ನೀವು ನನಗೆ ವಿರುದ್ಧವಾಗಿ ಏಳುತ್ತಲೇ ಇದ್ದೀರಿ. ಈಗ ಪ್ರತಿಯೊಂದು ತಲೆಯೂ ಪ್ರತಿಯೊಂದು ಹೃದಯವೂ ರೋಗಕ್ಕೆ ಬಲಿಯಾಗಿದೆ. 6 ನಿಮ್ಮ ಅಂಗಾಲಿನಿಂದ ಹಿಡಿದು ನಡುನೆತ್ತಿಯವರೆಗೂ ನಿಮ್ಮ ದೇಹದಲ್ಲೆಲ್ಲಾ ಗಾಯಗಳೂ ಬಾಸುಂಡೆಗಳೂ ಹುಣ್ಣುಗಳೂ ತುಂಬಿಕೊಂಡಿವೆ. ಆದರೆ ಆ ಹುಣ್ಣುಗಳಿಗೆ ನೀವು ಸರಿಯಾಗಿ ಚಿಕಿತ್ಸೆ ಕೊಡಲಿಲ್ಲ; ಅವುಗಳನ್ನು ಒರೆಸಲಿಲ್ಲ, ಕಟ್ಟಲಿಲ್ಲ.
7 ನಿಮ್ಮ ದೇಶವು ಹಾಳಾಗಿದೆ; ನಿಮ್ಮ ನಗರಗಳು ಬೆಂಕಿಯಿಂದ ಸುಡಲ್ಪಟ್ಟಿವೆ. ನಿಮ್ಮ ಶತ್ರುಗಳು ನಿಮ್ಮ ದೇಶವನ್ನು ವಶಪಡಿಸಿಕೊಂಡಿದ್ದಾರೆ; ಅನ್ಯದೇಶವು ಶತ್ರುಸೈನ್ಯದಿಂದ ಹಾಳಾಗುವಂತೆಯೇ, ನಿಮ್ಮ ದೇಶವೂ ಹಾಳಾಗಿದೆ.
ಜೆರುಸಲೇಮಿಗೆ ಎಚ್ಚರಿಕೆ
8 ಚೀಯೋನ್ ನಗರಿಯು ದ್ರಾಕ್ಷಿತೋಟದಲ್ಲಿರುವ ಜನಶೂನ್ಯವಾದ ಡೇರೆಯಂತಿದೆ; ಸೌತೆಯ ಹೊಲದಲ್ಲಿ ಪಾಳುಬಿದ್ದಿರುವ ಮನೆಯಂತಿದೆ; ಶತ್ರುಗಳಿಗೆ ಸೋತುಹೋದ ನಗರದಂತಿದೆ. 9 ಆದರೆ ಸರ್ವಶಕ್ತನಾದ ಯೆಹೋವನು ಸ್ವಲ್ಪ ಮಂದಿಯನ್ನಾದರೂ ಉಳಿಸಿ ಅಲ್ಲಿ ವಾಸಿಸುವಂತೆ ಮಾಡಿದ್ದಾನೆ. ನಾವು ಸೊದೋಮ್ ಗೊಮೋರ ಪಟ್ಟಣಗಳಂತೆ ಸಂಪೂರ್ಣವಾಗಿ ನಾಶವಾಗಲಿಲ್ಲ.
ಜೆರುಸಲೇಮು ದೇವರಿಗೆ ದ್ರೋಹಮಾಡಿದೆ
21 ದೇವರು ಹೇಳುವುದೇನೆಂದರೆ: “ಜೆರುಸಲೇಮಿನ ಕಡೆಗೆ ನೋಡಿರಿ. ಆಕೆ ನನ್ನ ಮೇಲೆ ನಂಬಿಕೆ ಇಟ್ಟು ಹಿಂಬಾಲಿಸಿದಂಥ ನಗರಿಯಾಗಿದ್ದಳು. ಆದರೆ ಈಗ ಆಕೆ ಸೂಳೆಯಾಗಲು ಕಾರಣವೇನು? ಈಗ ಆಕೆ ನನ್ನನ್ನು ಹಿಂಬಾಲಿಸುತ್ತಿಲ್ಲ. ಜೆರುಸಲೇಮು ನ್ಯಾಯನೀತಿಗಳಿಂದ ತುಂಬಿರಬೇಕಿತ್ತು. ಅಲ್ಲಿ ವಾಸಿಸುವ ಜನರು ದೇವರ ಇಚ್ಛೆಯಂತೆ ನಡೆಯಬೇಕಿತ್ತು. ಆದರೆ ಈಗ ಕೊಲೆಗಡುಕರು ಅಲ್ಲಿ ವಾಸಿಸುತ್ತಿದ್ದಾರೆ.
22 “ಒಳ್ಳೆಯತನವು ಬೆಳ್ಳಿಯಂತಿದೆ. ಆದರೆ ನಿಮ್ಮ ಬೆಳ್ಳಿಯು ಬೆಲೆಯಿಲ್ಲದ್ದಾಗಿದೆ. ನಿಮ್ಮ ದ್ರಾಕ್ಷಾರಸ (ಒಳ್ಳೆಯತನ) ನೀರಿನೊಂದಿಗೆ ಬೆರತಿದೆ. ಅದು ತೆಳ್ಳಗಾಗಿದೆ. 23 ನಿಮ್ಮನ್ನಾಳುವವರು ದಂಗೆಕೋರರಾಗಿದ್ದಾರೆ; ಕಳ್ಳರ ಮಿತ್ರರಾಗಿದ್ದಾರೆ; ಲಂಚಕೋರರಾಗಿದ್ದಾರೆ; ಹಣಕ್ಕಾಗಿ ಕೆಟ್ಟದ್ದನ್ನು ಮಾಡುತ್ತಾರೆ; ಹಣಕ್ಕಾಗಿ ಮೋಸ ಮಾಡುತ್ತಾರೆ. ಅನಾಥರಿಗೆ ಸಹಾಯ ಮಾಡದವರಾಗಿದ್ದಾರೆ; ವಿಧವೆಯರ ಅಗತ್ಯತೆಗಳಿಗೆ ಲಕ್ಷ್ಯ ಕೊಡದವರಾಗಿದ್ದಾರೆ.”
ಹಣಕ್ಕಿಂತ ದೇವರೇ ಬಹು ಮುಖ್ಯ
(ಲೂಕ 12:33-34; 11:34-36; 16:13)
19 “ನಿಮಗೋಸ್ಕರ ಈ ಭೂಮಿಯ ಮೇಲೆ ಭಂಡಾರಗಳನ್ನು ಮಾಡಿಕೊಳ್ಳಬೇಡಿ. ಅವು ಕಿಲುಬುಹತ್ತಿ ಹಾಳಾಗುತ್ತವೆ. ಕಳ್ಳರು ನಿಮ್ಮ ಮನೆಯೊಳಗೆ ಕನ್ನಕೊರೆದು ನಿಮ್ಮಲ್ಲಿರುವುದನ್ನು ಕದಿಯಬಲ್ಲರು. 20 ಆದ್ದರಿಂದ ನಿಮ್ಮ ಭಂಡಾರಗಳನ್ನು ಪರಲೋಕದಲ್ಲಿ ಮಾಡಿಟ್ಟುಕೊಳ್ಳಿ. ಅಲ್ಲಿ ಅವುಗಳಿಗೆ ನುಸಿ ಹಿಡಿಯುವುದಿಲ್ಲ. ಕಿಲುಬುಹತ್ತುವುದಿಲ್ಲ, ಕಳ್ಳರು ಕನ್ನಕೊರೆದು ಕದಿಯುವುದಿಲ್ಲ. 21 ನಿಮ್ಮ ಭಂಡಾರ ಎಲ್ಲಿರುವುದೋ ಅಲ್ಲೇ ನಿಮ್ಮ ಮನಸ್ಸಿರುವುದು.
22 “ಕಣ್ಣು ಶರೀರಕ್ಕೆ ಬೆಳಕಾಗಿದೆ. ನಿನ್ನ ಕಣ್ಣು ಸರಿಯಿದ್ದರೆ, ನಿನ್ನ ದೇಹವೆಲ್ಲಾ ಬೆಳಕಿನಿಂದ ಕೂಡಿರುವುದು. 23 ಆದರೆ ನಿನ್ನ ಕಣ್ಣು ಕೆಟ್ಟಿದ್ದರೆ, ನಿನ್ನ ಶರೀರವೆಲ್ಲ ಕತ್ತಲೆಯಿಂದ (ಪಾಪದಿಂದ) ತುಂಬಿರುವುದು. ನಿನ್ನಲ್ಲಿರುವ ಒಂದೇ ಬೆಳಕು ನಿಜವಾಗಿಯೂ ಕತ್ತಲಾದರೆ, ಆಗ ನೀನು ಕಗ್ಗತ್ತಲಲ್ಲಿರುವೆ.
24 “ಯಾವನೂ ಇಬ್ಬರು ಯಜಮಾನರಿಗೆ ಒಂದೇ ಸಮಯದಲ್ಲಿ ಸೇವೆ ಮಾಡಲಾರನು. ಅವನು ಒಬ್ಬ ಯಜಮಾನನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುತ್ತಾನೆ ಅಥವಾ ಒಬ್ಬ ಯಜಮಾನನನ್ನು ಹಿಂಬಾಲಿಸಿ ಮತ್ತೊಬ್ಬನನ್ನು ತಾತ್ಸಾರ ಮಾಡುತ್ತಾನೆ. ಆದ್ದರಿಂದ ನೀನು ದೇವರಿಗೆ ಮತ್ತು ಹಣಕ್ಕೆ ಒಂದೇ ಸಮಯದಲ್ಲಿ ಸೇವೆ ಮಾಡಲಾರೆ.
Kannada Holy Bible: Easy-to-Read Version. All rights reserved. © 1997 Bible League International