Revised Common Lectionary (Semicontinuous)
ಸ್ತುತಿಗೀತೆ. ರಚನೆಗಾರ: ಆಸಾಫ.
75 ದೇವರೇ, ನಿನ್ನನ್ನು ಕೊಂಡಾಡುವೆವು!
ನಿನ್ನ ಹೆಸರನ್ನು ಸ್ತುತಿಸುವೆವು; ಯಾಕೆಂದರೆ ನೀನು ನನ್ನ ಸಾಮಿಪ್ಯದಲ್ಲಿರುವೆ;
ನಿನ್ನ ಮಹತ್ಕಾರ್ಯಗಳ ಬಗ್ಗೆ ಜನರು ಹೇಳುತ್ತಲೇ ಇದ್ದಾರೆ.
2 ದೇವರು ಹೀಗೆನ್ನುತ್ತಾನೆ: “ನಾನು ನ್ಯಾಯತೀರ್ಪಿಗಾಗಿ ತಕ್ಕ ಸಮಯವನ್ನು ಗೊತ್ತುಪಡಿಸುವೆ;
ನಾನು ನೀತಿಯಿಂದಲೇ ತೀರ್ಪುಕೊಡುವೆ.
3 ಭೂಮಿಯು ಅದರ ಮೇಲಿರುವ ಸಮಸ್ತದೊಡನೆ ನಡುಗುತ್ತಿದ್ದರೂ
ಭೂಸ್ತಂಭಗಳನ್ನು ಸ್ಥಿರಗೊಳಿಸುವಾತನು ನಾನೇ.
4-5 “ಗರ್ವಿಷ್ಠರೇ, ‘ಕೊಚ್ಚಿಕೊಳ್ಳಬೇಡಿ’ ದುಷ್ಟರೇ, ‘ಅಹಂಕಾರ ಪಡಬೇಡಿ!
ಸೊಕ್ಕಿನ ಕುತ್ತಿಗೆಯಿಂದ ಮಾತಾಡಬೇಡಿ’” ಎಂದು ಹೇಳುವೆನು.
6 ಭೂಲೋಕದ ಯಾವ ಶಕ್ತಿಯೂ
ಮನುಷ್ಯನನ್ನು ಉದ್ಧಾರ ಮಾಡಲಾರದು.
7 ನ್ಯಾಯಾಧಿಪತಿಯು ದೇವರೇ.
ಯಾರನ್ನು ಉದ್ಧಾರಮಾಡಬೇಕು ಎಂಬ ನಿರ್ಣಯವನ್ನು ತೆಗೆದುಕೊಳ್ಳುವಾತನು ದೇವರೇ.
ದೇವರು ಒಬ್ಬನನ್ನು ಉನ್ನತಿಗೇರಿಸುವನು; ಮತ್ತೊಬ್ಬನನ್ನು ಅವನತಿಗಿಳಿಸುವನು.
8 ಯೆಹೋವನ ಕೈಯಲ್ಲಿ ಪಾತ್ರೆಯಿದೆ.
ಆ ಪಾತ್ರೆಯು ವಿಷ ದ್ರಾಕ್ಷಾರಸದಿಂದ ತುಂಬಿದೆ.
ಆತನು ದಂಡನೆಯೆಂಬ ಆ ವಿಷ ದ್ರಾಕ್ಷಾರಸವನ್ನು ಸುರಿಯುವನು;
ದುಷ್ಟರು ಕೊನೆಯ ತೊಟ್ಟಿನವರೆಗೂ ಅದನ್ನು ಕುಡಿಯುವರು!
9 ನಾನು ಇವುಗಳ ಬಗ್ಗೆ ಜನರಿಗೆ ಹೇಳುತ್ತಲೇ ಇರುವೆನು;
ಇಸ್ರೇಲರ ದೇವರನ್ನು ಸಂಕೀರ್ತಿಸುವೆನು.
10 ದುಷ್ಟರಿಂದ ಅಧಿಕಾರವನ್ನು ಕಿತ್ತುಕೊಂಡು
ಒಳ್ಳೆಯವರಿಗೆ ಅದನ್ನು ಒಪ್ಪಿಸಿಕೊಡುವೆನು.
ಮೋವಾಬ್ ದೇಶವು ಇಸ್ರೇಲಿನಿಂದ ಬೇರ್ಪಟ್ಟಿತು
4 ಮೇಷನು ಮೋವಾಬಿನ ರಾಜನಾಗಿದ್ದನು. ಮೇಷನು ಅನೇಕ ಕುರಿಗಳ ಒಡೆಯನಾಗಿದ್ದನು. ಮೇಷನು ಒಂದು ಲಕ್ಷ ಕುರಿಗಳ ಮತ್ತು ಒಂದು ಲಕ್ಷ ಟಗರುಗಳ ಉಣ್ಣೆಯನ್ನು ಇಸ್ರೇಲಿನ ರಾಜನಿಗೆ ಕೊಡುತ್ತಿದ್ದನು. 5 ಆದರೆ ಅಹಾಬನು ಸತ್ತಾಗ ಮೋವಾಬಿನ ರಾಜನು ಇಸ್ರೇಲಿನ ರಾಜನ ವಿರುದ್ಧವಾಗಿ ದಂಗೆಯೆದ್ದು ಅವನ ಆಳ್ವಿಕೆಯಿಂದ ಬೇರೆಯಾದನು.
6 ಆಗ ರಾಜನಾದ ಯೋರಾಮನು ಸಮಾರ್ಯದಿಂದ ಹೊರಗೆ ಹೋಗಿ, ಇಸ್ರೇಲಿನ ಜನರನ್ನೆಲ್ಲ ಒಟ್ಟುಗೂಡಿಸಿದನು. 7 ಯೋರಾಮನು ಯೆಹೂದದ ರಾಜನಾದ ಯೆಹೋಷಾಫಾಟನ ಬಳಿಗೆ ಸಂದೇಶಕರನ್ನು ಕಳುಹಿಸಿ, “ನನ್ನ ಆಳ್ವಿಕೆಯಿಂದ ಮೋವಾಬಿನ ರಾಜನು ಬೇರ್ಪಟ್ಟಿದ್ದಾನೆ. ಮೋವಾಬಿನ ವಿರುದ್ಧ ಹೋರಾಡಲು ನನ್ನ ಜೊತೆ ಬರುವೆಯಾ?” ಎಂದು ಕೇಳಿದನು.
ಯೆಹೋಷಾಫಾಟನು, “ಆಗಲಿ, ನಿನ್ನ ಜೊತೆ ನಾನೂ ಬರುತ್ತೇನೆ. ನಾನೂ ನೀನೂ ಒಂದೇ. ನನ್ನ ಜನರೂ ನಿನ್ನ ಜನರೂ ಒಂದೇ. ನನ್ನ ಕುದುರೆಗಳೂ ನಿನ್ನ ಕುದುರೆಗಳೂ ಒಂದೇ” ಎಂದು ಹೇಳಿದನು.
ಮೂವರು ರಾಜರು ಎಲೀಷನ ಸಲಹೆ ಕೇಳುವರು
8 ಯೆಹೋಷಾಫಾಟನು ಯೋರಾಮನನ್ನು, “ನಾವು ಯಾವ ಮಾರ್ಗದಲ್ಲಿ ಹೋಗೋಣ?” ಎಂದು ಕೇಳಿದನು.
“ನಾವು ಎದೋಮಿನ ಮರಳುಗಾಡಿನ ಮೂಲಕ ಹೋಗೋಣ” ಎಂದು ಯೋರಾಮನು ಉತ್ತರಿಸಿದನು.
9 ಆದ್ದರಿಂದ ಇಸ್ರೇಲಿನ ರಾಜನು ಯೆಹೂದದ ಮತ್ತು ಎದೋಮಿನ ರಾಜರೊಂದಿಗೆ ಹೋದನು. ಅವರು ಏಳು ದಿನಗಳ ಕಾಲ ಪ್ರಯಾಣ ಮಾಡಿದರು. ಅವರ ಸೇನೆಗೆ ಮತ್ತು ಪ್ರಾಣಿಗಳಿಗೆ ಸಾಕಾಗುವಷ್ಟು ನೀರು ಅಲ್ಲಿ ಇರಲಿಲ್ಲ. 10 ಆಗ ಇಸ್ರೇಲಿನ ರಾಜನಾದ ಯೋರಾಮನು, “ಅಯ್ಯೋ, ಮೂವರು ರಾಜರಾದ ನಮ್ಮನ್ನು ನಿಜವಾಗಿಯೂ ಒಟ್ಟಿಗೆ ಬರಮಾಡಿದ ಯೆಹೋವನು ನಮ್ಮನ್ನು ಮೋವಾಬ್ಯರು ಸೋಲಿಸುವಂತೆ ಮಾಡಿದನಲ್ಲಾ!” ಎಂದು ಹೇಳಿದನು.
11 ಆದರೆ ಯೆಹೋಷಾಫಾಟನು, “ಯೆಹೋವನ ಪ್ರವಾದಿಗಳಲ್ಲಿ ನಿಜವಾಗಿಯೂ ಯಾರಾದರೊಬ್ಬರು ಇಲ್ಲಿರಬೇಕು. ನಾವೇನು ಮಾಡಬೇಕೆಂದು ಯೆಹೋವನು ಹೇಳುತ್ತಾನೆ. ಅದಕ್ಕಾಗಿ ನಾವು ಆ ಪ್ರವಾದಿಯನ್ನು ಕೇಳೋಣ” ಎಂದು ಹೇಳಿದನು.
ಇಸ್ರೇಲಿನ ರಾಜನ ಸೇವಕರಲ್ಲಿ ಒಬ್ಬನು, “ಶಾಫಾಟನ ಮಗನಾದ ಎಲೀಷನು ಇಲ್ಲಿಯೇ ಇದ್ದಾನೆ. ಎಲೀಷನು ಎಲೀಯನ ಸೇವಕನಾಗಿದ್ದನು”[a] ಎಂದು ಹೇಳಿದನು.
12 ಯೆಹೋಷಾಫಾಟನು, “ಯೆಹೋವನ ನುಡಿಗಳು ಎಲೀಷನಲ್ಲಿವೆ!” ಎಂದು ಹೇಳಿದನು.
ಇಸ್ರೇಲಿನ ರಾಜನಾದ ಯೋರಾಮನು, ಯೆಹೋಷಾಫಾಟನು ಮತ್ತು ಎದೋಮಿನ ರಾಜನು ಎಲೀಷನನ್ನು ನೋಡಲು ಹೋದರು.
13 ಎಲೀಷನು ಇಸ್ರೇಲಿನ ರಾಜನಿಗೆ, “ನನ್ನಿಂದ ನಿನಗೆ ಏನು ಬೇಕಾಗಿದೆ? ನಿನ್ನ ತಂದೆತಾಯಿಯರ ಪ್ರವಾದಿಗಳ ಬಳಿಗೆ ಹೋಗು!” ಎಂದು ಹೇಳಿದನು.
ಇಸ್ರೇಲಿನ ರಾಜನು ಎಲೀಷನಿಗೆ, “ಇಲ್ಲ, ನಾವು ನಿನ್ನನ್ನು ನೋಡಲೆಂದು ಇಲ್ಲಿಗೆ ಬಂದಿದ್ದೇವೆ, ಏಕೆಂದರೆ ಯೆಹೋವನು ಮೂವರು ರಾಜರನ್ನು ಒಟ್ಟಿಗೆ ಬರಮಾಡಿ, ನಮ್ಮನ್ನು ಮೋವಾಬ್ಯರು ಸೋಲಿಸುವಂತೆ ಮಾಡಿದ್ದಾನೆ. ನಾವು ನಿನ್ನ ಸಹಾಯವನ್ನು ಬಯಸಿದ್ದೇವೆ” ಎಂದನು.
14 ಎಲೀಷನು, “ಸರ್ವಶಕ್ತನಾದ ಯೆಹೋವನ ಸೇವೆಯನ್ನು ಮಾಡುವವನು ನಾನು. ಯೆಹೋವನಾಣೆ, ನಾನು ನಿಜವನ್ನು ಹೇಳುತ್ತೇನೆ. ಯೆಹೂದದ ರಾಜನಾದ ಯೆಹೋಷಾಫಾಟನು ಇಲ್ಲಿ ಇಲ್ಲದಿದ್ದರೆ, ನಾನು ನಿನ್ನನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ; ನಿನ್ನನ್ನು ಗಮನಿಸುತ್ತಲೂ ಇರಲಿಲ್ಲ. 15 ಆದರೆ ಈಗ ಕಿನ್ನರಿ ಬಾರಿಸುವ ಒಬ್ಬನನ್ನು ನನ್ನ ಬಳಿಗೆ ಕರೆತನ್ನಿ” ಎಂದು ಹೇಳಿದನು.
ಅವನು ಕಿನ್ನರಿಯನ್ನು ಬಾರಿಸಿದಾಗ ಯೆಹೋವನ ಶಕ್ತಿಯು ಎಲೀಷನ ಮೇಲೆ ಬಂದಿತು. 16 ಆಗ ಎಲೀಷನು, “ಯೆಹೋವನು ಹೀಗೆನ್ನುತ್ತಾನೆ: ಕಣಿವೆಯಲ್ಲಿ ಗುಂಡಿಗಳನ್ನು ತೋಡಿರಿ. 17 ನೀವು ಗಾಳಿಯನ್ನು ನೋಡುವುದಿಲ್ಲ, ಮಳೆಯನ್ನೂ ನೋಡುವುದಿಲ್ಲ; ಆದರೆ ಆ ಕಣಿವೆಯು ನೀರಿನಿಂದ ತುಂಬಿಕೊಳ್ಳುತ್ತದೆ. ಆಗ ನಿಮಗೆ, ನಿಮ್ಮ ಹಸುಗಳಿಗೆ ಮತ್ತು ಇತರ ಪಶುಗಳಿಗೆ ಕುಡಿಯಲು ನೀರು ಸಿಗುತ್ತದೆ. 18 ಯೆಹೋವನಿಗೆ ಇದು ಸುಲಭ ಸಾಧ್ಯ. ಮೋವಾಬ್ಯರನ್ನು ನೀವು ಸೋಲಿಸುವಂತೆ ಆತನೇ ಅವಕಾಶ ಮಾಡುತ್ತಾನೆ. 19 ಪ್ರತಿಯೊಂದು ಬಲಾಢ್ಯವಾದ ನಗರವನ್ನು ಮತ್ತು ಉತ್ತಮ ನಗರವನ್ನು ನೀವು ಮುತ್ತಿಗೆ ಹಾಕುವಿರಿ. ಪ್ರತಿಯೊಂದು ಒಳ್ಳೆಯ ಮರವನ್ನೂ ನೀವು ಕಡಿದು ಉರುಳಿಸುತ್ತೀರಿ. ಎಲ್ಲಾ ನೀರಿನ ಬುಗ್ಗೆಗಳನ್ನೂ ನೀವು ನಿಲ್ಲಿಸುವಿರಿ. ನೀವು ಕಲ್ಲುಗಳನ್ನೆಸೆದು ಪ್ರತಿಯೊಂದು ಒಳ್ಳೆಯ ತೋಟವನ್ನು ನಾಶಗೊಳಿಸುತ್ತೀರಿ.”
20 ಮುಂಜಾನೆ, ಯಜ್ಞಗಳನ್ನು ಅರ್ಪಿಸುವ ಕಾಲದಲ್ಲಿ ಎದೋಮಿನ ಕಡೆಯಿಂದ ನೀರು ಹರಿಯಲಾರಂಭಿಸಿತು ಮತ್ತು ಕಣಿವೆಯು ತುಂಬಿಕೊಂಡಿತು.
6 ಅಸತ್ಯವಾದ ಸಂಗತಿಗಳನ್ನು ಹೇಳಿ ನಿಮ್ಮನ್ನು ಮೋಸಪಡಿಸಲು ಯಾರಿಗೂ ಅವಕಾಶ ಕೊಡಬೇಡಿ. ಆ ಕೆಟ್ಟಸಂಗತಿಗಳ ನಿಮಿತ್ತ ದೇವರ ಕೋಪವು ಆತನಿಗೆ ವಿಧೇಯರಾಗದ ಜನರ ಮೇಲೆ ಬರುತ್ತದೆ. 7 ಆದ್ದರಿಂದ ನೀವು ಅಂಥ ಜನರೊಂದಿಗೆ ಪಾಲುಗಾರರಾಗಬೇಡಿ. 8 ಹಿಂದಿನ ಕಾಲದಲ್ಲಿ ನೀವು ಕಗ್ಗತ್ತಲೆಯಾಗಿದ್ದಿರಿ. ಈಗಲಾದರೋ ನೀವು ಕರ್ತನಲ್ಲಿ ಪೂರ್ಣಬೆಳಕಾಗಿದ್ದೀರಿ. ಆದ್ದರಿಂದ ಬೆಳಕಿಗೆ ಸೇರಿದ ಮಕ್ಕಳಂತೆ ಜೀವಿಸಿರಿ. 9 ಬೆಳಕಿನ ಫಲವು ಉಪಕಾರದಲ್ಲಿಯೂ ನೀತಿಯಲ್ಲಿಯೂ ಸತ್ಯದಲ್ಲಿಯೂ ಕಂಡುಬರುತ್ತದೆ. 10 ಪ್ರಭುವಿಗೆ ಯಾವುದು ಮೆಚ್ಚಿಕೆಯಾದದ್ದೆಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿ. 11 ಕತ್ತಲೆಯಲ್ಲಿರುವ ಜನರು ಮಾಡುವಂಥ ಕಾರ್ಯಗಳನ್ನು ಮಾಡಬೇಡಿ. ಅವುಗಳಿಂದ ಒಳ್ಳೆಯದೇನೂ ಆಗುವುದಿಲ್ಲ. ಆದರೆ ಕತ್ತಲೆಯಲ್ಲಿ ನಡೆಯುವ ಕಾರ್ಯಗಳು ತಪ್ಪಾದವುಗಳೆಂದು ತೋರಿಸಲು ಒಳ್ಳೆಯ ಕಾರ್ಯಗಳನ್ನು ಮಾಡಿರಿ. 12 ಆ ಜನರು ಕತ್ತಲೆಯಲ್ಲಿ ಮಾಡುವ ಗುಪ್ತಕಾರ್ಯಗಳ ಬಗ್ಗೆ ಮಾತಾಡುವುದಕ್ಕೂ ನಾಚಿಕೆಯಾಗುತ್ತದೆ. 13 ಆದರೆ ಆ ಕಾರ್ಯಗಳು ತಪ್ಪಾದವುಗಳೆಂದು ನಾವು ತೋರಿಸುವಾಗ ಬೆಳಕಿನಿಂದ ಆ ಕಾರ್ಯಗಳು ಸ್ಪಷ್ಟವಾಗಿ ಕಾಣಿಸುತ್ತವೆ. 14 ಪ್ರತಿಯೊಂದನ್ನು ಸ್ಪಷ್ಟವಾಗಿ ತೋರಿಸುವಂಥದ್ದೇ ಬೆಳಕು. ಆದ್ದರಿಂದಲೇ ಹೀಗೆ ಬರೆದದೆ:
“ನಿದ್ರೆಮಾಡುವವನೇ, ಎಚ್ಚರವಾಗು!
ಸತ್ತವರನ್ನು ಬಿಟ್ಟು ಎದ್ದೇಳು,
ಕ್ರಿಸ್ತನು ನಿನ್ನ ಮೇಲೆ ಪ್ರಕಾಶಿಸುವನು.”
15 ಆದ್ದರಿಂದ ನೀವು ಹೇಗೆ ಜೀವಿಸುತ್ತಿದ್ದೀರಿ ಎಂಬುದರ ಬಗ್ಗೆ ಬಹು ಎಚ್ಚರಿಕೆಯಿಂದಿರಿ. ಅವಿವೇಕಿಗಳಂತೆ ಜೀವಿಸದೆ ವಿವೇಕಿಗಳಾಗಿ ಜೀವಿಸಿರಿ. 16 ಈ ದಿನಗಳು ಕೆಟ್ಟವುಗಳಾಗಿವೆ. ಆದ್ದರಿಂದ ನಿಮಗಿರುವ ಪ್ರತಿಯೊಂದು ಅವಕಾಶವನ್ನು ಒಳ್ಳೆಯದಕ್ಕಾಗಿ ಉಪಯೋಗಿಸಿರಿ. 17 ನಿಮ್ಮ ಜೀವಿತಗಳ ಬಗ್ಗೆ ಮೂರ್ಖರಾಗಿರದೆ ದೇವರ ಚಿತ್ತವೇನೆಂಬುದನ್ನು ತಿಳಿದುಕೊಳ್ಳಿರಿ. 18 ಮದ್ಯಪಾನಮಾಡಿ ಮತ್ತರಾಗಬೇಡಿ, ಅದು ಪಾಪಕೃತ್ಯಗಳಿಗೆ ನಡೆಸುತ್ತದೆ, ಆದರೆ ಯಾವಾಗಲೂ ಪವಿತ್ರಾತ್ಮಭರಿತರಾಗಿರಿ. 19 ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಆತ್ಮಿಕ ಹಾಡುಗಳಿಂದಲೂ ಒಬ್ಬರಿಗೊಬ್ಬರು ಮಾತಾಡಿರಿ. ನಿಮ್ಮ ಹೃದಯಗಳಲ್ಲಿ ಪ್ರಭುವಿಗೆ ವಾದ್ಯ ನುಡಿಸುತ್ತಾ ಹಾಡಿರಿ. 20 ಪ್ರತಿಯೊಂದು ವಿಷಯದಲ್ಲಿಯೂ ತಂದೆಯಾದ ದೇವರಿಗೆ ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಹೆಸರಿನಲ್ಲಿ ಯಾವಾಗಲೂ ಸ್ತೋತ್ರಮಾಡಿರಿ.
Kannada Holy Bible: Easy-to-Read Version. All rights reserved. © 1997 Bible League International