Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 140

ಸ್ತುತಿಗೀತೆ. ರಚನೆಗಾರ: ದಾವೀದ.

140 ಯೆಹೋವನೇ, ಕೆಡುಕರಿಂದ ನನ್ನನ್ನು ರಕ್ಷಿಸು.
    ಕ್ರೂರಿಗಳಿಂದ ನನ್ನನ್ನು ಕಾಪಾಡು.
    ಅವರು ಕೇಡುಮಾಡಬೇಕೆಂದಿದ್ದಾರೆ. ಅವರು ಯಾವಾಗಲೂ ಜಗಳವೆಬ್ಬಿಸುತ್ತಾರೆ.
ಅವರ ನಾಲಿಗೆಗಳು ಸರ್ಪಗಳಂತಿವೆ.
    ಅವರ ನಾಲಿಗೆಯ ಕೆಳಗೆ ಹಾವಿನ ವಿಷವಿದೆ.

ಯೆಹೋವನೇ, ದುಷ್ಟರಿಂದ ನನ್ನನ್ನು ರಕ್ಷಿಸು.
    ಕ್ರೂರಿಗಳಿಂದ ನನ್ನನ್ನು ಕಾಪಾಡು.
    ಅವರು ನನ್ನನ್ನು ಹಿಂದಟ್ಟಿ ನನಗೆ ಕೇಡುಮಾಡಬೇಕೆಂದಿದ್ದಾರೆ.
ಆ ಗರ್ವಿಷ್ಠರು ನನಗೆ ಉರುಲನ್ನು ಒಡ್ಡಿದ್ದಾರೆ;
    ನನ್ನನ್ನು ಹಿಡಿಯಲು ಬಲೆಯನ್ನು ಹಾಸಿದ್ದಾರೆ;
    ನನ್ನ ದಾರಿಯಲ್ಲಿ ಬೋನನ್ನು ಇಟ್ಟಿದ್ದಾರೆ.

ಯೆಹೋವನೇ, ನನ್ನ ದೇವರು ನೀನೇ.
    ನನ್ನ ಪ್ರಾರ್ಥನೆಗೆ ಕಿವಿಗೊಡು.
ಯೆಹೋವನೇ, ನನ್ನ ಬಲಿಷ್ಠನಾದ ಒಡೆಯನು ನೀನೇ.
    ನನ್ನ ರಕ್ಷಕನೂ ನೀನೇ, ನನ್ನ ಶಿರಸ್ತ್ರಾಣವೂ ನೀನೇ.
ಯೆಹೋವನೇ, ಆ ದುಷ್ಟರ ದುರಾಶೆಯೂ
    ದುರಾಲೋಚನೆಯೂ ನೆರವೇರಲು ಬಿಡಬೇಡ.

ನನ್ನ ವೈರಿಗಳಿಗೆ ಜಯವಾಗಲು ಬಿಡಬೇಡ.
    ಅವರು ಕುಯುಕ್ತಿಗಳನ್ನು ಮಾಡುತ್ತಿದ್ದಾರೆ; ಅವುಗಳನ್ನು ವಿಫಲಗೊಳಿಸು.
10 ಅವರ ತಲೆಗಳ ಮೇಲೆ ಉರಿಯುವ ಕೆಂಡಗಳನ್ನು ಸುರಿದು
    ಬೆಂಕಿಯೊಳಗೆ ಎಸೆದುಬಿಡು;
    ಎಂದಿಗೂ ಹತ್ತಿ ಬರಲಾಗದ ಗುಂಡಿಯೊಳಗೆ ಅವರನ್ನು ಎಸೆದುಬಿಡು.
11 ಆ ಸುಳ್ಳುಗಾರರನ್ನು ಜೀವಂತವಾಗಿ ಉಳಿಸಬೇಡ.
    ಆ ಕೆಡುಕರಿಗೆ ಕೇಡುಗಳಾಗುವಂತೆ ಮಾಡು.
12 ಯೆಹೋವನು ದೀನರಿಗೆ ನ್ಯಾಯವಾದ ತೀರ್ಪನ್ನು ಪಾಲಿಸುತ್ತಾನೆಂದು ನನಗೆ ಗೊತ್ತಿದೆ.
    ದೇವರು ಅಸಹಾಯಕರಿಗೆ ಸಹಾಯಮಾಡುವನು.
13 ನೀತಿವಂತರು ನಿನ್ನ ಹೆಸರನ್ನು ಕೊಂಡಾಡುವರು;
    ಯಥಾರ್ಥವಂತರು ನಿನ್ನ ಸನ್ನಿಧಿಯಲ್ಲಿ ಜೀವಿಸುವರು.

ಎಸ್ತೇರಳು 4

ಎಸ್ತೇರಳು ಸಹಾಯ ಮಾಡಲು ಮೊರ್ದೆಕೈಯ ಒತ್ತಾಯ

ನಡೆದ ಎಲ್ಲಾ ಸಂಗತಿಗಳನ್ನು ಮೊರ್ದೆಕೈ ಕೇಳಿಕೊಂಡನು. ಯೆಹೂದ್ಯರನ್ನೆಲ್ಲಾ ಕೊಲ್ಲಲು ರಾಜಾಜ್ಞೆ ಹೊರಟಿದೆ ಎಂದು ಕೇಳಿದಾಗ ಅವನು ತನ್ನ ಬಟ್ಟೆಗಳನ್ನು ಹರಿದುಕೊಂಡು ಶೋಕದ ಬಟ್ಟೆಗಳನ್ನು ಧರಿಸಿ ತಲೆಯ ಮೇಲೆ ಬೂದಿಯನ್ನು ಸುರಿದುಕೊಂಡನು. ಆಮೇಲೆ ಗಟ್ಟಿಯಾಗಿ ಅಳುತ್ತಾ ನಗರ ಬೀದಿಗಳಲ್ಲಿ ನಡೆದನು. ಅವನು ಶೋಕವನ್ನು ಸೂಚಿಸುವ ಬಟ್ಟೆಗಳನ್ನು ಧರಿಸಿದ್ದ ಕಾರಣ ಅರಮನೆಯ ಹೆಬ್ಬಾಗಿಲ ತನಕ ಮಾತ್ರವೇ ಅವನಿಗೆ ಹೋಗಲು ಸಾಧ್ಯವಾಯಿತು. ಅರಮನೆಯ ಪ್ರಾಕಾರದೊಳಗೆ ಶೋಕವಸ್ತ್ರವನ್ನು ಧರಿಸಿ ಯಾರೂ ಹೋಗುವ ಹಾಗಿಲ್ಲ. ಪ್ರತಿಯೊಂದು ಸಂಸ್ಥಾನದಲ್ಲೂ ರಾಜನ ಆಜ್ಞೆ ಪ್ರಕಟಿಸಲ್ಪಟ್ಟಾಗ ಯೆಹೂದ್ಯರೊಳಗೆ ಕೂಗಾಟವೂ ದುಃಖವೂ ತುಂಬಿತು. ಉಪವಾಸ ಮಾಡುತ್ತಾ ಅವರು ಗಟ್ಟಿಯಾಗಿ ರೋಧಿಸಿದರು. ಎಷ್ಟೋ ಮಂದಿ ಯೆಹೂದ್ಯರು ಶೋಕವಸ್ತ್ರವನ್ನು ಧರಿಸಿ ತಲೆಗೆ ಬೂದಿ ಸುರಿದು ನೆಲದ ಮೇಲೆ ಬಿದ್ದುಕೊಂಡು ಗಟ್ಟಿಯಾಗಿ ಅತ್ತರು.

ಎಸ್ತೇರಳ ಸೇವಕಿಯರು ಮತ್ತು ಕಂಚುಕಿಯರು ಮೊರ್ದೆಕೈ ವಿಚಾರವಾಗಿ ಆಕೆಗೆ ತಿಳಿಸಿದರು. ಇದನ್ನು ಕೇಳಿ ಎಸ್ತೇರ್ ರಾಣಿಗೆ ತುಂಬಾ ಗಲಿಬಿಲಿಯೂ ದುಃಖವೂ ಆಯಿತು. ಆಕೆ ಅವನಿಗೋಸ್ಕರ ಬಟ್ಟೆಗಳನ್ನು ಕಳುಹಿಸಿ ಶೋಕದ ಬಟ್ಟೆಯನ್ನು ತೆಗೆದುಹಾಕಲು ಹೇಳಿಸಿದಳು. ಆದರೆ ಅವನು ಅವಳ ಬಟ್ಟೆಗಳನ್ನು ಸ್ವೀಕರಿಸಲಿಲ್ಲ. ಆಗ ಎಸ್ತೇರಳು ಹತಾಕನನ್ನು ಬರಹೇಳಿದಳು. ಹತಾಕನು ರಾಜಕಂಚುಕಿಯಾಗಿದ್ದು ಎಸ್ತೇರ್ ರಾಣಿಯ ಸೇವೆಯನ್ನು ಮಾಡುವವನಾಗಿದ್ದನು. ಹತಾಕನಿಗೆ ಹೋಗಿ ಮೊರ್ದೆಕೈಗೆ ಏನು ತೊಂದರೆಯಾಯಿತು; ಅವನು ಯಾತಕ್ಕಾಗಿ ದುಃಖತಪ್ತನಾಗಿದ್ದಾನೆ ಎಂಬುದನ್ನು ವಿಚಾರಿಸಿಕೊಂಡು ಬರಲು ಆಜ್ಞಾಪಿಸಿದಳು. ಅರಮನೆಯ ಹೆಬ್ಬಾಗಿಲು ಎದುರಿನಲ್ಲಿದ್ದ ಬಯಲಿನಲ್ಲಿ ಮೊರ್ದೆಕೈಯನ್ನು ಹತಾಕನು ಸಂಧಿಸಿದಾಗ ಮೊರ್ದೆಕೈ ನಡೆದ ಸಂಗತಿಗಳನ್ನೆಲ್ಲಾ ಹೇಳಿದನು. ಹಾಮಾನನು ರಾಜನಿಗೆ ಯೆಹೂದ್ಯರನ್ನು ಕೊಲ್ಲಿಸಲು ಆಜ್ಞೆ ಹೊರಡಿಸಿದ್ದುದಕ್ಕಾಗಿ ಕೊಟ್ಟ ಹಣದ ಸರಿಯಾದ ಮೊತ್ತವನ್ನು ತಿಳಿಸಿದನು. ಯೆಹೂದ್ಯರನ್ನು ಕೊಲ್ಲಬೇಕೆಂಬುವ ಅರಸನ ಆಜ್ಞಾಪತ್ರದ ಒಂದು ಪ್ರತಿಯನ್ನು ಹತಾಕನ ಕೈಯಲ್ಲಿ ಮೊರ್ದೆಕೈ ಕೊಟ್ಟನು. ಈ ಆಜ್ಞಾಪತ್ರವನ್ನು ಶೂಷನ್ ನಗರದ ಎಲ್ಲೆಡೆಯಲ್ಲಿಯೂ ಕಳುಹಿಸಲ್ಪಟ್ಟಿತ್ತು. ಹತಾಕನು ಆ ಪ್ರತಿಯನ್ನು ಎಸ್ತೇರಳಿಗೆ ತೋರಿಸಿ ಎಲ್ಲವನ್ನು ವಿವರಿಸಬೇಕೆಂದು ಮೊರ್ದೆಕೈ ಉದ್ದೇಶಿಸಿದನು. ಅಷ್ಟೇ ಅಲ್ಲ. ಎಸ್ತೇರ್ ರಾಣಿ ಅರಸನ ಬಳಿಗೆ ಹೋಗಿ ತನಗೂ ಆಕೆಯ ಜನರಿಗೂ ದಯೆ ತೋರಿಸಲು ಅರಸನೊಡನೆ ಬೇಡಲಿ ಎಂದು ಹತಾಕನೊಡನೆ ಹೇಳಿ ಕಳುಹಿಸಿದನು.

ಹತಾಕನು ಹಿಂತಿರುಗಿ ಹೋಗಿ ಎಸ್ತೇರಳಿಗೆ ಮೊರ್ದೆಕೈ ಹೇಳಿದ್ದೆಲ್ಲವನ್ನು ತಿಳಿಸಿದನು.

10 ಎಸ್ತೇರಳು ಹತಾಕನಿಗೆ, “ಮೊರ್ದೆಕೈ ಹತ್ತಿರ ಹೋಗಿ ಹೀಗೆ ಹೇಳು: 11 ಮೊರ್ದೆಕೈ, ಸಾಮ್ರಾಜ್ಯದಲ್ಲಿರುವ ಎಲ್ಲಾ ಅಧಿಕಾರಿಗಳಿಗೂ ಪ್ರಜೆಗಳಿಗೂ ತಿಳಿದಿರುವ ಒಂದು ವಿಷಯವೇನೆಂದರೆ, ರಾಜನು ಕರೆಯದೆ ಯಾರಾದರೂ ಆತನ ಬಳಿಗೆ ಹೋದರೆ ಅದಕ್ಕೆ ಮರಣದಂಡನೆಯೇ ಶಿಕ್ಷೆ ಎಂಬುದು. ರಾಜನು ತನ್ನ ಬಂಗಾರದ ದಂಡವನ್ನು ಯಾರ ಮೇಲೆ ತೋರಿಸುವನೋ ಅವನು ಮರಣಶಿಕ್ಷೆಯಿಂದ ಪಾರಾಗುವನು. ಈಗ ರಾಜನು ನನ್ನನ್ನು ಕರೆದು ಮೂವತ್ತು ದಿವಸಗಳಾದವು.”

12-13 ಎಸ್ತೇರಳ ಸಂದೇಶವು ಮೊರ್ದೆಕೈಗೆ ತಲುಪಿತು. ಅದಕ್ಕುತ್ತರವಾಗಿ ಮೊರ್ದೆಕೈ ಹೀಗೆ ಹೇಳಿ ಕಳುಹಿಸಿದನು: “ಎಸ್ತೇರಳೇ, ನೀನು ಅರಮನೆಯಲ್ಲಿ ವಾಸವಾಗಿರುವುದರಿಂದ ಯೆಹೂದ್ಯಳಾದ ನೀನೊಬ್ಬಳೇ ಸಾಮೂಹಿಕ ಹತ್ಯೆಯಿಂದ ಪಾರಾಗುವೆ ಎಂದು ನೆನೆಸಬೇಡ. 14 ನೀನು ಈಗ ಸುಮ್ಮನಿದ್ದರೆ ಯೆಹೂದ್ಯರಿಗೆ ಸಹಾಯವೂ ಸ್ವಾತಂತ್ರ್ಯವೂ ಬೇರೆ ದಿಕ್ಕಿನಿಂದ ಬರುವವು. ಆದರೆ ನೀನೂ ನಿನ್ನ ತಂದೆಯ ಬಳಗದವರೆಲ್ಲರೂ ಸಾಯುವರು. ಇಂಥ ಸಮಯದಲ್ಲಿ ನೀನು ರಾಣಿಯಾಗಿ ಆಯ್ಕೆಯಾದದ್ದು ಇದಕ್ಕೋಸ್ಕರವೋ ಎಂದು ಯಾರಿಗೆ ಹೇಳಲು ಸಾಧ್ಯ?”

15-16 ಆಗ ಎಸ್ತೇರಳು ಈ ಉತ್ತರವನ್ನು ಮೊರ್ದೆಕೈಗೆ ಕಳುಹಿಸಿದಳು: “ಮೊರ್ದೆಕೈ, ನೀನು ಹೋಗಿ ಶೂಷನ್‌ನಲ್ಲಿರುವ ಎಲ್ಲಾ ಯೆಹೂದ್ಯರನ್ನು ಒಟ್ಟಿಗೆ ಸೇರಿಸಿ ನನಗಾಗಿ ಉಪವಾಸವಿರಲು ಅವರಿಗೆ ಹೇಳು. ಮೂರು ದಿನ ಹಗಲುರಾತ್ರಿ ಊಟಮಾಡಲೂಬಾರದು ಕುಡಿಯಲೂಬಾರದು. ನಾನೂ ನಿಮ್ಮ ಹಾಗೆ ಉಪವಾಸದಿಂದಿರುವೆನು. ನನ್ನೊಂದಿಗೆ ನನ್ನ ಸೇವಕಿಯರೂ ಉಪವಾಸ ಮಾಡುವರು. ನಾವು ಉಪವಾಸ ಮಾಡಿದ ಬಳಿಕ ನಾನು ರಾಜನ ಬಳಿಗೆ ಹೋಗುವೆನು. ಆತನು ಕರೆಯದೆ ನಾನು ಆತನ ಬಳಿಗೆ ಹೋಗುವುದು ನ್ಯಾಯಬಾಹಿರ. ಆದರೂ ನಾನು ಹೋಗುವೆನು, ನಾನು ಸಾಯಬೇಕಾದರೆ ಸಾಯುವೆನು.”

17 ಮೊರ್ದೆಕೈ ಹೊರಟುಹೋಗಿ ಎಸ್ತೇರಳು ಹೇಳಿದ ಪ್ರಕಾರ ಮಾಡಿದನು.

1 ಪೇತ್ರನು 1:3-9

ಜೀವಂತವಾದ ನಿರೀಕ್ಷೆ

ನಮ್ಮ ಪ್ರಭುವಾಗಿರುವ ಯೇಸು ಕ್ರಿಸ್ತನ ತಂದೆಯಾದ ದೇವರಿಗೆ ಸ್ತೋತ್ರವಾಗಲಿ. ದೇವರು ಮಹಾ ಕರುಣಾಳುವಾಗಿದ್ದಾನೆ. ಆತನು ತನ್ನ ಕರುಣೆಯಿಂದಲೇ ನಮಗೆ ಹೊಸ ಜೀವವನ್ನು ನೀಡಿದನು. ಸತ್ತವರೊಳಗಿಂದ ಎದ್ದುಬಂದ ಯೇಸು ಕ್ರಿಸ್ತನ ಮೂಲಕ ಅದು ನಮಗೆ ಒಂದು ಜೀವಂತ ನಿರೀಕ್ಷೆಯನ್ನು ತರುತ್ತದೆ. ದೇವರು ತನ್ನ ಮಕ್ಕಳಿಗೆ ನೀಡುವ ಆಶೀರ್ವಾದಗಳಲ್ಲಿ ಈಗ ನಮಗೆ ನಿರೀಕ್ಷೆಯಿದೆ. ಅವು ನಿಮಗಾಗಿ ಪರಲೋಕದಲ್ಲಿ ಇಡಲ್ಪಟ್ಟಿವೆ. ಅವು ಹಾಳಾಗುವುದಿಲ್ಲ, ನಾಶವಾಗುವುದಿಲ್ಲ ಮತ್ತು ಸೌಂದರ್ಯವನ್ನು ಕಳೆದುಕೊಳ್ಳುವುದಿಲ್ಲ.

ದೇವರ ಶಕ್ತಿಯು ನಿಮ್ಮ ನಂಬಿಕೆಯ ಮೂಲಕ ನಿಮ್ಮನ್ನು ಕಾಯುತ್ತದೆ. ನಿಮಗೆ ರಕ್ಷಣೆಯಾಗುವವರೆಗೆ ನಿಮ್ಮನ್ನು ಸುರಕ್ಷಿತವಾಗಿಡುತ್ತದೆ. ಸಿದ್ಧವಾಗಿರುವ ಆ ರಕ್ಷಣೆಯು ಅಂತ್ಯಕಾಲದಲ್ಲಿ ನಿಮಗೆ ದೊರೆಯುವುದು. ಇದು ನಿಮ್ಮನ್ನು ಬಹಳ ಸಂತೋಷಗೊಳಿಸುತ್ತದೆ. ಆದರೆ ಈಗ ಸ್ವಲ್ಪಕಾಲ ಅನೇಕ ವಿಧವಾದ ತೊಂದರೆಗಳು ನಿಮ್ಮಲ್ಲಿ ದುಃಖವನ್ನು ಉಂಟುಮಾಡಬಹುದು. ನಿಮ್ಮ ನಂಬಿಕೆಯು ಪರಿಶುದ್ಧವಾಗಿದೆ ಎಂಬುದನ್ನು ಪ್ರಕಟಿಸಲು ಈ ತೊಂದರೆಗಳು ಸಂಭವಿಸುತ್ತವೆ. ನಿಮ್ಮ ನಂಬಿಕೆಯ ಪರಿಶುದ್ಧತೆಯು ಬಂಗಾರದ ಮೌಲ್ಯಕ್ಕಿಂತಲೂ ಹೆಚ್ಚಿನದಾಗಿದೆ. ಬಂಗಾರವು ನಶಿಸಿಹೋಗುವಂಥದ್ದಾಗಿದ್ದರೂ ಅದನ್ನು ಬೆಂಕಿಯಲ್ಲಿ ಪುಟ ಹಾಕಿ ಅದರ ಪರಿಶುದ್ಧತೆಯನ್ನು ಶೋಧಿಸುವರು. ಯೇಸು ಕ್ರಿಸ್ತನು ಪ್ರತ್ಯಕ್ಷನಾದಾಗ, ನಿಮ್ಮ ನಂಬಿಕೆಯ ಪರಿಶುದ್ಧತೆಯು ನಿಮಗೆ ಕೀರ್ತಿ, ಪ್ರಭಾವ ಮತ್ತು ಗೌರವಗಳನ್ನು ತರುತ್ತದೆ.

ನೀವು ಕ್ರಿಸ್ತನನ್ನು ನೋಡದಿದ್ದರೂ ಆತನನ್ನು ಪ್ರೀತಿಸುವಿರಿ. ಈಗ ಆತನನ್ನು ನೋಡದಿದ್ದರೂ ಆತನಲ್ಲಿ ನಂಬಿಕೆಯಿಟ್ಟಿದ್ದೀರಿ. ನಿಮ್ಮಲ್ಲಿ ಹೇಳಲಾಗದಷ್ಟು ಆನಂದವು ತುಂಬಿಕೊಂಡಿದೆ. ಆ ಆನಂದವು ಪ್ರಭಾವಪೂರ್ಣವಾಗಿದೆ. ನಿಮ್ಮ ನಂಬಿಕೆಗೆ ಒಂದು ಗುರಿಯಿದೆ. ನಿಮ್ಮ ಆತ್ಮವನ್ನು ರಕ್ಷಿಸಬೇಕೆಂಬುದೇ ಆ ಗುರಿ. ನಿಮ್ಮ ಗುರಿಯಾಗಿರುವ ರಕ್ಷಣೆಯನ್ನು ಹೊಂದಿಕೊಳ್ಳುವಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International