Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 19

ರಚನೆಗಾರ: ದಾವೀದ.

19 ಆಕಾಶಮಂಡಲವು ದೇವರ ಮಹಿಮೆಯನ್ನು ಪ್ರಕಟಿಸುವುದು.
    ಗಗನವು ಆತನ ಕೈಕೆಲಸವನ್ನು ತಿಳಿಸುವುದು.
ಪ್ರತಿಯೊಂದು ದಿನವೂ ಅದರ ಕುರಿತು ಹೊಸ ವಿಷಯವನ್ನು ತಿಳಿಸುವುದು.
    ಪ್ರತಿಯೊಂದು ರಾತ್ರಿಯೂ ಅದರ ಕುರಿತು ಹೊಸ ಸಂಗತಿಯನ್ನು ಪ್ರಕಟಿಸುವುದು.
ಅವುಗಳ ಮಾತಾಗಲಿ
    ನುಡಿಗಳಾಗಲಿ ಸ್ವರವಾಗಲಿ ನಮಗೆ ಕೇಳಿಸದು.
ಆದರೂ ಅವುಗಳ ಸಂದೇಶವು ಭೂಲೋಕದಲ್ಲೆಲ್ಲಾ ಹರಡುತ್ತದೆ;
    ಭೂಮಿಯ ಕಟ್ಟಕಡೆಗಳವರೆಗೂ ವ್ಯಾಪಿಸುತ್ತದೆ.

ಆಕಾಶವು ಸೂರ್ಯನಿಗೆ ಮನೆಯಂತಿದೆ.
    ಮದುವೆಯ ಮಂಟಪದಿಂದ ಆನಂದದಿಂದ ಬರುವ ಮದುಮಗನಂತೆ ಸೂರ್ಯನು ಮುಂಜಾನೆ ಉದಯಿಸುವನು.
ಕ್ರೀಡಾಪಟುವಿನಂತೆ
    ಸೂರ್ಯನು ಆಕಾಶದಲ್ಲಿ ಓಡಲಾರಂಭಿಸುವನು.
ಸೂರ್ಯನು ಆಕಾಶದ ಒಂದು ಕಡೆಯಿಂದ ಉದಯಿಸಿ
    ಮತ್ತೊಂದು ಕೊನೆಗೆ ಓಡುತ್ತಾಹೋಗುವನು.
    ಅವನ ತಾಪಕ್ಕೆ ಯಾವುದೂ ಮರೆಯಾಗಿರಲಾರದು.

ಯೆಹೋವನ ಉಪದೇಶಗಳು ನಿಷ್ಕಳಂಕವಾಗಿವೆ.
    ಅವು ದೇವಜನರಿಗೆ ಬಲವನ್ನು ಕೊಡುತ್ತವೆ.
ಯೆಹೋವನ ಕಟ್ಟಳೆಯು ಭರವಸೆಗೆ ಯೋಗ್ಯವಾಗಿದೆ.
    ಅದು ಮೂಢರನ್ನು ಜ್ಞಾನಿಗಳನ್ನಾಗಿ ಮಾಡುತ್ತದೆ.
ಯೆಹೋವನ ನಿಯಮಗಳು ನೀತಿಯ ಕಟ್ಟಳೆಗಳಾಗಿವೆ.
    ಅವು ಮನುಸ್ಸನ್ನು ಸಂತೋಷಗೂಳಿಸುತ್ತವೆ.
ಯೆಹೋವನ ಆಜ್ಞೆಗಳು ಒಳ್ಳೆಯ ಆಜ್ಞೆಗಳಾಗಿವೆ.
    ಅವು ಕಣ್ಣುಗಳಿಗೆ ಬೆಳಕನ್ನು ನೀಡುತ್ತವೆ.

ಯೆಹೋವನಲ್ಲಿಡುವ ಭಯಭಕ್ತಿಯು ಪರಿಶುದ್ಧವಾಗಿದೆ;
    ಅದು ಶಾಶ್ವತವಾದದ್ದು.
ಯೆಹೋವನ ವಿಧಿಗಳು ಯಥಾರ್ಥವಾಗಿವೆ;
    ಅವು ಯಾವಾಗಲೂ ನ್ಯಾಯಾನುಸಾರವಾಗಿವೆ.
10 ಆತನ ಉಪದೇಶಗಳು ಬಂಗಾರಕ್ಕಿಂತಲೂ ಅಮೂಲ್ಯವಾಗಿವೆ;
    ಅಪ್ಪಟವಾದ ಜೇನುತುಪ್ಪಕ್ಕಿಂತಲೂ ಮಧುರವಾಗಿವೆ.
11 ಆತನ ಉಪದೇಶಗಳು ಆತನ ಸೇವಕನನ್ನು ಎಚ್ಚರಿಸುತ್ತವೆ;
    ಅವುಗಳನ್ನು ಕೈಕೊಂಡು ನಡೆದರೆ ಒಳ್ಳೆಯದಾಗುವುದು.

12 ಯೆಹೋವನೇ, ಯಾವನೂ ತನ್ನ ತಪ್ಪುಗಳನ್ನೆಲ್ಲಾ ತಿಳಿದುಕೊಳ್ಳುವುದಿಲ್ಲ.
    ಆದ್ದರಿಂದ ಗುಪ್ತ ಪಾಪಗಳನ್ನು ಮಾಡಲು ನನ್ನನ್ನು ಬಿಟ್ಟುಬಿಡಬೇಡ.
13 ನನ್ನ ಇಷ್ಟಾನುಸಾರ ಪಾಪಮಾಡಲು ನನ್ನನ್ನು ಬಿಟ್ಟುಬಿಡಬೇಡ.
    ಆ ಪಾಪಗಳು ನನ್ನನ್ನು ಆಳದಿರಲಿ.
ನೀನು ಸಹಾಯಮಾಡಿದರೆ
    ನಾನು ಪರಿಶುದ್ಧನಾಗಿಯೂ ಪಾಪದಿಂದ ವಿಮುಕ್ತನಾಗಿಯೂ ಇರಲು ಸಾಧ್ಯ.
14 ನನ್ನ ಮಾತುಗಳೂ ನನ್ನ ಆಲೋಚನೆಗಳೂ ನಿನಗೆ ಮೆಚ್ಚಿಕೆಯಾಗಿರಲಿ.
    ಯೆಹೋವನೇ, ನೀನೇ ನನ್ನ ಬಂಡೆಯಾಗಿರುವೆ.[a] ನನ್ನನ್ನು ರಕ್ಷಿಸುವಾತನು ನೀನೇ.

ಜ್ಞಾನೋಕ್ತಿಗಳು 21:1-17

21 ಯೆಹೋವನು ರಾಜನ ಮನಸ್ಸನ್ನು ನೀರಿನ ಕಾಲುವೆಯಂತೆ ಹತೋಟಿಯಲ್ಲಿಡುವನು. ಆತನು ತನ್ನ ಇಷ್ಟಾನುಸಾರ ಅದಕ್ಕೆ ಮಾರ್ಗದರ್ಶನ ನೀಡುವನು.

ತನ್ನ ನಡತೆ ಸರಿಯೆಂದು ಒಬ್ಬನು ಭಾವಿಸಿಕೊಳ್ಳಬಹುದು; ಆದರೆ ಉದ್ದೇಶಗಳಿಗನುಸಾರವಾಗಿ ತೀರ್ಪು ನೀಡುವವನು ಯೆಹೋವನೇ.

ಸರಿಯಾದ ಮತ್ತು ನ್ಯಾಯವಾದ ಕಾರ್ಯಗಳನ್ನು ಮಾಡು. ಯೆಹೋವನು ಅವುಗಳನ್ನು ಯಜ್ಞಗಳಿಗಿಂತಲೂ ಹೆಚ್ಚಾಗಿ ಪ್ರೀತಿಸುವನು.

ಗರ್ವದ ಕಣ್ಣುಗಳು ಮತ್ತು ದುರಾಭಿಮಾನದ ಹೃದಯ ಪಾಪಮಯವಾಗಿದ್ದು ದುಷ್ಟನಿಗೆ ಮಾರ್ಗದರ್ಶನ ನೀಡುತ್ತವೆ.

ಕಷ್ಟಪಟ್ಟು ದುಡಿಯುವವನ ಆಲೋಚನೆಗಳು ಲಾಭಕ್ಕೆ ನಡೆಸುತ್ತವೆ. ಆದರೆ ಆತುರತೆಯಲ್ಲೇ ಇರುವವನು ಬಡವನಾಗುವನು.

ನೀನು ಮೋಸದಿಂದ ಐಶ್ವರ್ಯವಂತನಾದರೆ, ಆ ಐಶ್ವರ್ಯವು ಬಹುಬೇಗನೆ ಇಲ್ಲವಾಗುತ್ತದೆ. ನಿನ್ನ ಐಶ್ವರ್ಯವು ನಿನ್ನನ್ನು ಮರಣಕ್ಕೆ ನಡೆಸುತ್ತದೆ.

ಕೆಡುಕರು ಕೊಡುವ ಹಿಂಸೆಯು ಅವರನ್ನೇ ನಾಶಮಾಡುತ್ತದೆ; ಯಾಕೆಂದರೆ ಒಳ್ಳೆಯದನ್ನು ಮಾಡಲು ಅವರು ಒಪ್ಪುವುದೇ ಇಲ್ಲ.

ಕೆಟ್ಟವರು ಬೇರೆಯವರನ್ನು ಮೋಸಗೊಳಿಸುವುದಕ್ಕೇ ಪ್ರಯತ್ನಿಸುವರು. ಒಳ್ಳೆಯವರಾದರೋ ಯಥಾರ್ಥವಂತರೂ ನ್ಯಾಯವಂತರೂ ಆಗಿದ್ದಾರೆ.

ಮನೆಯೊಳಗೆ ವಾದಿಸುವ ಹೆಂಡತಿಯ ಜೊತೆಯಲ್ಲಿ ವಾಸಿಸುವುದಕ್ಕಿಂತ ಮನೆಯ ಮೇಲ್ಛಾವಣಿಗೆಯ ಮೂಲೆಯಲ್ಲಿ ವಾಸಿಸುವುದೇ ಮೇಲು.

10 ಕೆಡುಕರು ಕೇಡುಮಾಡುವುದಕ್ಕೇ ಇಷ್ಟಪಡುವರು; ಅವರು ತಮ್ಮ ಸುತ್ತಮುತ್ತಲಿರುವ ಜನರಿಗೆ ಕರುಣೆ ತೋರುವುದಿಲ್ಲ.

11 ದುರಾಭಿಮಾನಿಯು ದಂಡಿಸಲ್ಪಟ್ಟರೆ ದಡ್ಡನು ಜ್ಞಾನಿಯಾಗುವನು. ಜ್ಞಾನಿಗೆ ಉಪದೇಶಿಸಿದರೆ ತಾನೇ ತಿಳುವಳಿಕೆಯನ್ನು ಹೊಂದವನು.

12 ದೇವರು ನೀತಿಸ್ವರೂಪನು. ಆತನು ದುಷ್ಟರ ದುಷ್ಕೃತ್ಯಗಳನ್ನು ಬಲ್ಲವನಾಗಿದ್ದು ಅವರನ್ನು ದಂಡಿಸುವನು.

13 ಬಡವರಿಗೆ ಸಹಾಯಮಾಡದವನು ತಾನೇ ಕೊರತೆಯಲ್ಲಿರುವಾಗ ಯಾರೂ ಅವನಿಗೆ ಸಹಾಯ ಮಾಡುವುದಿಲ್ಲ.

14 ನಿನ್ನ ಮೇಲೆ ಕೋಪಗೊಂಡಿರುವವನಿಗೆ ಒಂದು ಉಡುಗೊರೆಯನ್ನು ಗುಟ್ಟಾಗಿ ಕೊಡು. ಗುಟ್ಟಾಗಿ ಕೊಟ್ಟ ಉಡುಗೊರೆಯು ಮಹಾ ಕೋಪವನ್ನೂ ಅಡಗಿಸಬಲ್ಲದು.

15 ನ್ಯಾಯವಾದ ತೀರ್ಪು ಒಳ್ಳೆಯವರಿಗೆ ಸಂತೋಷ; ಕೆಡುಕರಿಗೆ ಬಹುಭಯ.

16 ಜ್ಞಾನದ ಮಾರ್ಗವನ್ನು ತೊರೆದವನು ನಾಶನದ ಕಡೆಗೆ ಹೋಗುತ್ತಿರುವನು.

17 ಸುಖವನ್ನು ಪ್ರೀತಿಸುವವನು ಬಡವನಾಗುವನು. ದ್ರಾಕ್ಷಾರಸವನ್ನೂ ತೈಲವನ್ನೂ ಪ್ರೀತಿಸುವವನು ಐಶ್ವರ್ಯವಂತನಾಗಲಾರನು.

ಮತ್ತಾಯ 21:23-32

ಯೇಸುವಿನ ಅಧಿಕಾರದ ಬಗ್ಗೆ ಯೆಹೂದ್ಯನಾಯಕರ ಸಂದೇಹ

(ಮಾರ್ಕ 11:27-33; ಲೂಕ 20:1-8)

23 ಯೇಸು ದೇವಾಲಯಕ್ಕೆ ಹೋದನು. ಯೇಸು ಅಲ್ಲಿ ಉಪದೇಶಿಸುತ್ತಿದ್ದಾಗ, ಮಹಾಯಾಜಕರು ಮತ್ತು ಜನರ ಹಿರಿಯ ನಾಯಕರು ಯೇಸುವಿನ ಬಳಿಗೆ ಬಂದರು. ಅವರು ಯೇಸುವಿಗೆ, “ನೀನು ಇವುಗಳನ್ನು ಯಾವ ಅಧಿಕಾರದಿಂದ ಮಾಡುತ್ತಿರುವೆ? ಈ ಅಧಿಕಾರವನ್ನು ನಿನಗೆ ಕೊಟ್ಟವರು ಯಾರು? ನಮಗೆ ತಿಳಿಸು!” ಎಂದರು.

24 ಯೇಸು, “ನಾನೂ ನಿಮಗೊಂದು ಪ್ರಶ್ನೆಯನ್ನು ಕೇಳುತ್ತೇನೆ. ನೀವು ನನಗೆ ಉತ್ತರ ಕೊಟ್ಟರೆ, ಇವುಗಳನ್ನು ಯಾವ ಅಧಿಕಾರದಿಂದ ಮಾಡುತ್ತಿದ್ದೇನೆಂದು ನಿಮಗೆ ತಿಳಿಸುತ್ತೇನೆ. 25 ದೀಕ್ಷಾಸ್ನಾನ ಕೊಡುವ ಅಧಿಕಾರ ಯೋಹಾನನಿಗೆ ದೇವರಿಂದ ಬಂದಿತೋ ಇಲ್ಲವೆ ಮನುಷ್ಯನಿಂದ ಬಂದಿತೋ? ನನಗೆ ಹೇಳಿ!” ಎಂದು ಉತ್ತರ ಕೊಟ್ಟನು.

ಯಾಜಕರು ಮತ್ತು ಯೆಹೂದ್ಯ ನಾಯಕರು ಯೇಸುವಿನ ಪ್ರಶ್ನೆಯನ್ನು ಕುರಿತು ತಮ್ಮೊಳಗೆ, “‘ಯೋಹಾನನು ಕೊಟ್ಟ ದೀಕ್ಷಾಸ್ನಾನವು ದೇವರಿಂದ ಬಂದಿತು’ ಎಂದರೆ, ‘ಹಾಗಾದರೆ ಯೋಹಾನನನ್ನು ನೀವು ಏಕೆ ನಂಬಲಿಲ್ಲ?’ ಎಂದು ಕೇಳುವನು. 26 ‘ಅದು ಮನುಷ್ಯನಿಂದ ಬಂದಿತು’ ಎಂದರೆ ಜನರೆಲ್ಲರೂ ನಮ್ಮ ಮೇಲೆ ಕೋಪಗೊಳ್ಳುವರು. ಅವರೆಲ್ಲರೂ ಯೋಹಾನನನ್ನು ಒಬ್ಬ ಪ್ರವಾದಿ ಎಂದು ನಂಬಿರುವುದರಿಂದ ನಾವು ಅವರಿಗೆ ಹೆದರಬೇಕಾಗಿದೆ” ಎಂದು ಮಾತಾಡಿಕೊಂಡರು.

27 ಬಳಿಕ ಅವರು, “ಯೋಹಾನನಿಗೆ ಎಲ್ಲಿಂದ ಅಧಿಕಾರ ಬಂದಿತೋ ನಮಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟರು.

ಆಗ ಯೇಸು, “ಇವುಗಳನ್ನು ಯಾವ ಅಧಿಕಾರದಿಂದ ಮಾಡುತ್ತಿದ್ದೇನೆ ಎಂಬುದನ್ನು ನಾನು ಸಹ ನಿಮಗೆ ಹೇಳುವುದಿಲ್ಲ” ಎಂದನು.

ಇಬ್ಬರು ಗಂಡುಮಕ್ಕಳನ್ನು ಕುರಿತು ಯೇಸು ಹೇಳಿದ ಸಾಮ್ಯ

28 “ಒಬ್ಬ ಮನುಷ್ಯನಿಗೆ ಇಬ್ಬರು ಗಂಡುಮಕ್ಕಳಿದ್ದರು. ಆ ಮನುಷ್ಯನು ಮೊದಲನೆಯ ಮಗನ ಬಳಿಗೆ ಹೋಗಿ, ‘ಮಗನೇ ಈ ದಿನ ನೀನು ಹೋಗಿ, ನನ್ನ ದ್ರಾಕ್ಷಿತೋಟದಲ್ಲಿ ಕೆಲಸ ಮಾಡು’ ಎಂದು ಹೇಳಿದನು.

29 “ಅದಕ್ಕೆ ಮಗನು, ‘ನಾನು ಹೋಗುವುದಿಲ್ಲ’ ಎಂದನು. ಆದರೆ ಆ ಬಳಿಕ ತನ್ನ ಮನಸ್ಸನ್ನು ಬದಲಾಯಿಸಿಕೊಂಡು ಕೆಲಸಕ್ಕೆ ಹೋದನು.

30 “ತಂದೆಯು ಇನ್ನೊಬ್ಬ ಮಗನ ಬಳಿಗೆ ಹೋಗಿ, ‘ಮಗನೇ, ಈ ದಿನ ನೀನು ದ್ರಾಕ್ಷಿತೋಟಕ್ಕೆ ಹೋಗಿ ಕೆಲಸ ಮಾಡು’ ಎಂದನು. ಮಗನು, ‘ಆಗಲಿಯಪ್ಪಾ, ನಾನು ಹೋಗಿ ಕೆಲಸ ಮಾಡುತ್ತೇನೆ’ ಎಂದನು. ಆದರೆ ಆ ಮಗನು ಹೋಗಲೇ ಇಲ್ಲ.

31 “ಈ ಇಬ್ಬರು ಗಂಡುಮಕ್ಕಳಲ್ಲಿ ತಂದೆಗೆ ಯಾರು ವಿಧೇಯರಾದರು?”

ಆಗ ಯೆಹೂದ್ಯ ನಾಯಕರು, “ಮೊದಲನೆಯ ಮಗ” ಎಂದು ಉತ್ತರಕೊಟ್ಟರು.

ಯೇಸು ಅವರಿಗೆ, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಸುಂಕವಸೂಲಿಗಾರರನ್ನು ಮತ್ತು ವೇಶ್ಯೆಯರನ್ನು ಕೆಟ್ಟಜನರೆಂದು ನೀವು ಅಂದುಕೊಂಡಿದ್ದೀರಿ. ಆದರೆ ಅವರು ನಿಮಗಿಂತ ಮುಂಚೆಯೇ ದೇವರ ರಾಜ್ಯಕ್ಕೆ ಪ್ರವೇಶಿಸುತ್ತಾರೆ. 32 ನೀವು ಜೀವಿಸತಕ್ಕ ಸರಿಯಾದ ಮಾರ್ಗವನ್ನು ತೋರಿಸಲು ಯೋಹಾನನು ಬಂದನು. ನೀವು ಯೋಹಾನನನ್ನು ನಂಬಲಿಲ್ಲ, ಆದರೆ ಸುಂಕವಸೂಲಿಗಾರರು ಮತ್ತು ವೇಶ್ಯೆಯರು ನಂಬಿದ್ದನ್ನು ನೀವು ನೋಡಿದ್ದೀರಿ. ಆದರೆ ನೀವಿನ್ನೂ ಬದಲಾವಣೆ ಹೊಂದಲು ಮತ್ತು ಅವನನ್ನು ನಂಬಲು ಇಷ್ಟಪಡುತ್ತಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International