Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 73:21-28

21-22 ನಾನು ಬಹು ಮೂಢನಾಗಿದ್ದೆ.
    ಶ್ರೀಮಂತರ ಕುರಿತಾಗಿಯೂ ದುಷ್ಟರ ಕುರಿತಾಗಿಯೂ ಆಲೋಚಿಸಿ ಗಲಿಬಿಲಿಗೊಂಡೆ.
ದೇವರೇ, ನಾನು ನಿನ್ನ ಮೇಲೆ ಕೋಪಗೊಂಡಿದ್ದೆನು; ಬೇಸರಗೊಂಡಿದ್ದೆನು!
    ನಾನು ಮೂಢ ಪಶುವಿನಂತೆ ವರ್ತಿಸಿದೆನು.
23 ಆದರೂ ನಾನು ಯಾವಾಗಲೂ ನಿನ್ನ ಸಂಗಡವಿದ್ದೇನೆ.
    ನನ್ನ ಕೈಯನ್ನು ಹಿಡಿದುಕೊ.
24 ನನಗೆ ಉಪದೇಶಿಸುತ್ತಾ ನನ್ನನ್ನು ಮುನ್ನಡೆಸು.
    ಬಳಿಕ ನಿನ್ನ ಮಹಿಮೆಗೆ ನನ್ನನ್ನು ಸೇರಿಸಿಕೊ.
25 ಪರಲೋಕದಲ್ಲಿ ನೀನಲ್ಲದೆ ನನಗೆ ಬೇರೆ ಯಾರ ಅಗತ್ಯವಿದೆ?
    ಈ ಲೋಕದಲ್ಲಿ ನಿನ್ನನ್ನಲ್ಲದೆ ಬೇರೆ ಯಾರನ್ನು ಬಯಸಲಿ?
26 ನನ್ನ ಹೃದಯವೂ ದೇಹವೂ ನಾಶವಾಗುತ್ತವೆ;
    ಆದರೆ ಎಂದೆಂದಿಗೂ ನೀನೇ ನನಗೆ ಆಶ್ರಯಸ್ಥಾನವೂ
    ನನ್ನ ದೇವರೂ ಆಗಿರುವೆ.
27 ನಿನ್ನನ್ನು ತೊರೆದುಬಿಟ್ಟವರು ನಾಶವಾಗುವರು.
    ನಿನಗೆ ದ್ರೋಹಮಾಡಿದವರನ್ನೆಲ್ಲ ನೀನು ನಾಶಮಾಡುವೆ.
28 ನನಗಾದರೋ ದೇವರ ಸಮೀಪದಲ್ಲಿರುವುದೇ ಭಾಗ್ಯವಾಗಿದೆ.
    ನನ್ನ ಒಡೆಯನಾದ ಯೆಹೋವನನ್ನು ನನ್ನ ಆಶ್ರಯಸ್ಥಾನವನ್ನಾಗಿ ಮಾಡಿಕೊಂಡಿರುವೆ.
    ದೇವರೇ, ನಿನ್ನ ಎಲ್ಲಾ ಕಾರ್ಯಗಳ ಕುರಿತಾಗಿ ಹೇಳಲು ಬಂದಿರುವೆ.

ಜ್ಞಾನೋಕ್ತಿಗಳು 22:1-21

22 ಬಹು ಧನಕ್ಕಿಂತಲೂ ಒಳ್ಳೆಯ ಹೆಸರೇ ಉತ್ತಮ. ಬೆಳ್ಳಿಬಂಗಾರಗಳಿಗಿಂತಲೂ ಸನ್ಮಾನಿತರಾಗಿರುವುದೇ ಅಮೂಲ್ಯ.

ಐಶ್ವರ್ಯವಂತರಿಗೂ ಬಡವರಿಗೂ ಯಾವ ವ್ಯತ್ಯಾಸವಿಲ್ಲ. ಯಾಕೆಂದರೆ ಎಲ್ಲರನ್ನು ನಿರ್ಮಿಸಿದಾತನು ಯೆಹೋವನೇ.

ಜ್ಞಾನಿಗಳು ಕೇಡನ್ನು ಕಂಡು ದೂರವಾಗುತ್ತಾರೆ. ಮೂಢರಾದರೋ ನೇರವಾಗಿ ಹೋಗಿ ಆಪತ್ತಿಗೀಡಾಗುವರು.

ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿದ್ದು ದೀನತೆಯಿಂದಿರು; ಆಗ ನೀನು ಐಶ್ವರ್ಯ, ಸನ್ಮಾನ ಮತ್ತು ನಿಜಜೀವವನ್ನು ಹೊಂದಿಕೊಳ್ಳುವೆ.

ವಕ್ರಬುದ್ಧಿಯುಳ್ಳವರು ಅನೇಕ ಆಪತ್ತುಗಳಿಗೆ ಸಿಕ್ಕಿಕ್ಕೊಂಡಿದ್ದಾರೆ. ಆದರೆ ತನ್ನ ಆತ್ಮದ ಬಗ್ಗೆ ಚಿಂತಿಸುವವನು ಆ ಆಪತ್ತುಗಳಿಂದ ದೂರವಿರುವನು.

ಮಗನಿಗೆ ಬಾಲ್ಯದಲ್ಲಿಯೇ ಒಳ್ಳೆಯ ಮಾರ್ಗವನ್ನು ಉಪದೇಶಿಸು. ಅವನು ಬೆಳೆದು ದೊಡ್ಡವನಾದಾಗ ಅದೇ ರೀತಿಯಲ್ಲಿ ಜೀವಿಸುವನು.

ಬಡವನು ಐಶ್ವರ್ಯವಂತನಿಗೆ ಗುಲಾಮನಾಗಿದ್ದಾನೆ. ಸಾಲ ತೆಗೆದುಕೊಳ್ಳುವವನು ಸಾಲಕೊಡುವವನಿಗೆ ಸೇವಕನಾಗಿದ್ದಾನೆ.

ಕೇಡನ್ನು ಬಿತ್ತುವವನು ಕೇಡನ್ನು ಕೊಯ್ಯುವನು. ಅವನ ದುಷ್ಟಶಕ್ತಿಯು ನಾಶವಾಗುವುದು.

ಉದಾರಿಯು ತನ್ನ ಆಹಾರವನ್ನು ಬಡವರೊಂದಿಗೆ ಹಂಚಿಕೊಳ್ಳುವುದರಿಂದ ಆಶೀರ್ವಾದ ಹೊಂದುವನು.

10 ದುರಾಭಿಮಾನಿಯನ್ನು ಬಲವಂತವಾಗಿ ಹೊರಗಟ್ಟಿ. ಆಗ ಜಗಳವಾಗಲಿ ವಾದಗಳಾಗಲಿ ಅವಮಾನಗಳಾಗಲಿ ಇರುವುದಿಲ್ಲ.

11 ನೀನು ಶುದ್ಧಹೃದಯವನ್ನೂ ಸವಿಮಾತುಗಳನ್ನೂ ಪ್ರೀತಿಸಿದರೆ ರಾಜನು ನಿನಗೆ ಸ್ನೇಹಿತನಾಗುವನು.

12 ಯೆಹೋವನು ಜ್ಞಾನಿಗಳ ಮೇಲೆ ಲಕ್ಷ್ಯವಿಟ್ಟು ಕಾಪಾಡುವನು; ವಂಚಕರ ಮಾತುಗಳನ್ನಾದರೋ ನಾಶಪಡಿಸುವನು.

13 “ನಾನು ಕೆಲಸಕ್ಕೆ ಹೋಗಲಾರೆ. ಹೊರಗಡೆ ಸಿಂಹವಿದೆ. ಅದು ನನ್ನನ್ನು ಕೊಲ್ಲುತ್ತದೆ” ಎನ್ನುತ್ತಾನೆ ಸೋಮಾರಿ.

14 ಕಾಮುಕಿಯ ಬಾಯಿ ಆಳವಾದ ಗುಂಡಿಯಂತಿದೆ. ಯೆಹೋವನಿಂದ ಶಪಿಸಲ್ಪಟ್ಟವರು ಆ ಗುಂಡಿಯೊಳಗೆ ಬೀಳುವರು.

15 ಮಕ್ಕಳು ಮೂಢಕಾರ್ಯಗಳನ್ನು ಮಾಡುವರು. ನೀವು ಅವರನ್ನು ಶಿಕ್ಷಿಸಿದರೆ, ಅವುಗಳನ್ನು ಮಾಡಬಾರದೆಂದು ಅವರಿಗೆ ಗೊತ್ತಾಗುವುದು.

16 ಐಶ್ವರ್ಯವಂತರಾಗಲು ಬಡವರನ್ನು ಹಿಂಸಿಸುವವರಿಗೂ ಐಶ್ವರ್ಯವಂತರಿಗೆ ಉಡುಗೊರೆಗಳನ್ನು ಕೊಡುವವರಿಗೂ ಕೊರತೆಯೇ ಗತಿ.

ಮೂವತ್ತು ಜ್ಞಾನೋಕ್ತಿಗಳು

17 ನನ್ನ ಉಪದೇಶಗಳಿಗೆ ಕಿವಿಗೊಡು. ಜ್ಞಾನಿಗಳ ಉಪದೇಶವನ್ನೇ ನಾನು ನಿನಗೆ ಉಪದೇಶಿಸುವೆನು. ಈ ಉಪದೇಶಗಳಿಂದ ಕಲಿತುಕೊ. 18 ನೀನು ಈ ಉಪದೇಶಗಳನ್ನು ಜ್ಞಾಪಕದಲ್ಲಿಟ್ಟುಕೊಂಡರೆ ನಿನಗೆ ಒಳ್ಳೆಯದಾಗುವುದು. ನೀನು ಈ ಉಪದೇಶಗಳನ್ನು ಹೇಳಬಲ್ಲವನಾದರೆ ನಿನಗೆ ಅನುಕೂಲವಾಗುವುದು. 19 ಆ ಜ್ಞಾನೋಕ್ತಿಗಳನ್ನು ನಾನೀಗ ಉಪದೇಶಿಸುವೆನು, ನೀನು ಯೆಹೋವನಲ್ಲಿ ಭರವಸೆ ಇಡಬೇಕೆಂಬುದೇ ನನ್ನ ಅಪೇಕ್ಷೆ. 20 ನಾನು ನಿನಗೋಸ್ಕರ ಮೂವತ್ತು ನುಡಿಗಳನ್ನು ಬರೆದಿರುವೆ. ಇವು ಬುದ್ಧಿವಾದದ ಮತ್ತು ವಿವೇಕದ ನುಡಿಗಳಾಗಿವೆ. 21 ಈ ನುಡಿಗಳು ನಿನಗೆ ಸತ್ಯವನ್ನೂ ಮುಖ್ಯವಾದವುಗಳನ್ನೂ ಉಪದೇಶಿಸುತ್ತವೆ. ಆಗ ನೀನು ನಿನ್ನನ್ನು ಕಳುಹಿಸಿದವನಿಗೆ ಒಳ್ಳೆಯ ಉತ್ತರಗಳನ್ನು ಕೊಡಬಲ್ಲವನಾಗುವೆ.[a]

ರೋಮ್ನಗರದವರಿಗೆ 3:9-20

ಎಲ್ಲಾ ಜನರು ಅಪರಾಧಿಗಳಾಗಿದ್ದಾರೆ

ಹೀಗಿರಲು, ಯೆಹೂದ್ಯರಾದ ನಾವು ಬೇರೆಯವರಿಗಿಂತ ಉತ್ತಮರಾಗಿದ್ದೇವೋ? ಇಲ್ಲ! ಯೆಹೂದ್ಯರಿಗೂ ಯೆಹೂದ್ಯರಲ್ಲದವರಿಗೂ ಯಾವ ವ್ಯತ್ಯಾಸವಿಲ್ಲವೆಂದು ಆಗಲೇ ನಿರೂಪಿಸಿದ್ದೇನೆ. ಅವರೆಲ್ಲರೂ ಪಾಪಮಾಡಿ ಅಪರಾಧಿಗಳಾಗಿದ್ದಾರೆ. 10 ಪವಿತ್ರ ಗ್ರಂಥವು ಹೀಗೆ ಹೇಳುತ್ತದೆ:

“ಪಾಪವಿಲ್ಲದ ಒಬ್ಬನೂ ಇಲ್ಲ. ಇಲ್ಲವೇ ಇಲ್ಲ!
11     ಅರ್ಥಮಾಡಿಕೊಳ್ಳುವ ಒಬ್ಬನೂ ಇಲ್ಲ.
ದೇವರೊಂದಿಗಿರಲು ನಿಜವಾಗಿ ಬಯಸುವ ಒಬ್ಬನೂ ಇಲ್ಲ.
12 ಎಲ್ಲಾ ಜನರು ದಾರಿ ತಪ್ಪಿದ್ದಾರೆ.
    ಎಲ್ಲಾ ಜನರು ಅಯೋಗ್ಯರಾಗಿದ್ದಾರೆ.
ಒಳ್ಳೆಯದನ್ನು ಮಾಡುವ ಒಬ್ಬನೂ ಇಲ್ಲ. ಇಲ್ಲವೇ ಇಲ್ಲ!”(A)

13 “ಜನರ ಬಾಯಿಗಳು ತೆರೆದ ಸಮಾಧಿಗಳಂತಿವೆ.
    ಅವರು ಸುಳ್ಳು ಹೇಳಲು ತಮ್ಮ ನಾಲಿಗೆಗಳನ್ನು ಬಳಸುತ್ತಾರೆ.”(B)

“ಅವರು ಹೇಳುವ ಸಂಗತಿಗಳು ವಿಷಪೂರಿತವಾದ ಹಾವುಗಳಂತಿವೆ.”(C)

14 “ಅವರ ಬಾಯಿಗಳಲ್ಲಿ ಶಾಪವೂ ಕಠೋರತೆಯೂ ತುಂಬಿವೆ.”(D)

15 “ಹಿಂಸಿಸಲು ಮತ್ತು ಕೊಲ್ಲಲು ಜನರು ಯಾವಾಗಲೂ ಸಿದ್ಧರಾಗಿದ್ದಾರೆ.
16     ಅವರು ಹೋದಲ್ಲೆಲ್ಲಾ ನಾಶನವನ್ನೂ ಸಂಕಟವನ್ನೂ ಬರಮಾಡುತ್ತಾರೆ.
17 ಜನರು ಶಾಂತಿಯ ಮಾರ್ಗವನ್ನು ತಿಳಿದಿಲ್ಲ.”(E)

18 “ಅವರಿಗೆ ದೇವರಲ್ಲಿ ಭಯವಾಗಲಿ ಗೌರವವಾಗಲಿ ಇಲ್ಲ.”(F)

19 ಧರ್ಮಶಾಸ್ತ್ರದ ಅಧೀನದಲ್ಲಿರುವ ಜನರ ವಿಷಯವಾಗಿಯೇ ಧರ್ಮಶಾಸ್ತ್ರವು ಈ ಸಂಗತಿಯನ್ನು ಹೇಳುತ್ತಿದೆ. ಆದ್ದರಿಂದ ಯೆಹೂದ್ಯರು ನೆವ ಹೇಳಲು ಸಾದ್ಯವಿಲ್ಲ. ಅಲ್ಲದೆ ಇಡೀ ಲೋಕವೇ ದೇವರ ನ್ಯಾಯತೀರ್ಪಿಗೆ ಒಳಗಾಗಿದೆ. 20 ಏಕೆಂದರೆ ಧರ್ಮಶಾಸ್ತ್ರವನ್ನು ಅನುಸರಿಸುವುದರ ಮೂಲಕ ನೀತಿವಂತರಾಗಲು ಯಾರಿಗೂ ಸಾಧ್ಯವಿಲ್ಲ. ಧರ್ಮಶಾಸ್ತ್ರವು ನಮ್ಮ ಪಾಪವನ್ನು ಮಾತ್ರ ತೋರ್ಪಡಿಸುತ್ತದೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International