Revised Common Lectionary (Semicontinuous)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.
125 ಯೆಹೋವನಲ್ಲಿ ಭರವಸವಿಟ್ಟಿರುವವರು ಚೀಯೋನ್ ಪರ್ವತದಂತಿರುವರು.
ಅವರೆಂದಿಗೂ ಕದಲದೆ ಶಾಶ್ವತವಾಗಿರುವರು.
2 ಪರ್ವತಗಳು ಜೆರುಸಲೇಮಿನ ಸುತ್ತಲೂ ಇವೆ.
ಯೆಹೋವನು ತನ್ನ ಜನರ ಸುತ್ತಲೂ ಇರುವನು.
ಆತನು ತನ್ನ ಜನರನ್ನು ಸದಾಕಾಲ ಸಂರಕ್ಷಿಸುವನು.
3 ದುಷ್ಟರು ನೀತಿವಂತರನ್ನು ಶಾಶ್ವತವಾಗಿ ಆಳುವುದಿಲ್ಲ.
ಅವರು ಶಾಶ್ವತವಾಗಿ ಆಳಿದರೆ ನೀತಿವಂತರೂ ದುಷ್ಕೃತ್ಯಗಳನ್ನು ಮಾಡತೊಡಗಬಹುದು.
4 ಯೆಹೋವನೇ, ನೀತಿವಂತರಿಗೂ
ಯಥಾರ್ಥವಂತರಿಗೂ ಉಪಕಾರಮಾಡು.
5 ದುಷ್ಟರು ಕುತಂತ್ರಗಳನ್ನು ಮಾಡುವರು.
ಯೆಹೋವನು ಅವರನ್ನು ದಂಡಿಸುವನು.
ಇಸ್ರೇಲಿನಲ್ಲಿ ಶಾಂತಿ ನೆಲೆಸಿರಲಿ.
10 ಮಗನೇ, ನನ್ನ ಮಾತನ್ನು ಕೇಳು. ನಾನು ಹೇಳಿದಂತೆ ಮಾಡು, ಆಗ ನೀನು ಬಹುಕಾಲ ಬದುಕುವೆ. 11 ನಾನು ನಿನಗೆ ಜ್ಞಾನದ ಕುರಿತು ಉಪದೇಶಿಸುತ್ತಿರುವೆನು. ನಾನು ನಿನ್ನನ್ನು ಧರ್ಮದ ಮಾರ್ಗದಲ್ಲಿ ನಡೆಸುತ್ತಿರುವೆನು. 12 ಈ ದಾರಿಯಲ್ಲೇ ಹೋಗು, ಆಗ ನಿನ್ನ ಕಾಲುಗಳು ಇಕ್ಕಟ್ಟಿಗೆ ಸಿಕ್ಕಿಕೊಳ್ಳುವುದಿಲ್ಲ. ನೀನು ಓಡಿದರೂ ಮುಗ್ಗರಿಸುವುದಿಲ್ಲ. 13 ಈ ಉಪದೇಶಗಳನ್ನು ಯಾವಾಗಲೂ ನೆನಪುಮಾಡಿಕೊ; ಮರೆತುಬಿಡಬೇಡ. ಅವು ನಿನಗೆ ಜೀವವಾಗಿವೆ!
14 ಕೆಡುಕರ ಮಾರ್ಗದಲ್ಲಿ ನಡೆಯಬೇಡ. ಅವರಂತೆ ಜೀವಿಸಬೇಡ. 15 ದುಷ್ಟತನಕ್ಕೆ ದೂರವಾಗಿರು. ಅದರ ಬಳಿಗೆ ಹೋಗಬೇಡ. ನೇರವಾಗಿ ನಡೆದು ಅದರಿಂದ ದೂರವಾಗು. 16 ಏನಾದರೂ ಕೇಡುಮಾಡದಿದ್ದರೆ ಕೆಡುಕರಿಗೆ ನಿದ್ರೆಬಾರದು. ಯಾರಿಗಾದರೂ ನೋವು ಮಾಡದೆ ಅವರು ನಿದ್ರಿಸಲಾರರು. 17 ಅವರು ಬೇರೆಯವರಿಗೆ ಕೇಡನ್ನಾಗಲಿ ನೋವನ್ನಾಗಲಿ ಮಾಡದೆ ಜೀವಿಸಲಾರರು. ಅದೇ ಅವರ ಆಹಾರ ಮತ್ತು ಪಾನೀಯ.
18 ನೀತಿವಂತರ ಜೀವಿತವು ಮಧ್ಯಾಹ್ನದವರೆಗೂ ಹೆಚ್ಚುತ್ತಾ ಬರುವ ಮುಂಜಾನೆಯ ಬೆಳಕಿನಂತಿರುವುದು. 19 ಆದರೆ ದುಷ್ಟರ ಜೀವಿತವು ರಾತ್ರಿಯ ಕತ್ತಲೆಯಂತಿದೆ. ಅವರು ಕತ್ತಲೆಯಲ್ಲಿ ತಪ್ಪಿಸಿಕೊಂಡಿದ್ದು ತಮಗೆ ಕಾಣದ ವಸ್ತುಗಳ ಮೇಲೆ ಎಡವಿ ಬೀಳುತ್ತಾರೆ.
20 ನನ್ನ ಮಗನೇ, ನನ್ನ ಮಾತುಗಳಿಗೆ ಗಮನಕೊಡು. ನನ್ನ ನುಡಿಗಳಿಗೆ ಕಿವಿಗೊಡು. 21 ನಿನ್ನ ದೃಷ್ಟಿಯು ಅವುಗಳ ಮೇಲಿರಲಿ, ಅವುಗಳನ್ನು ನಿನ್ನ ನೆನಪಿನಲ್ಲಿಟ್ಟುಕೋ. 22 ನನ್ನ ಉಪದೇಶಕ್ಕೆ ಕಿವಿಗೊಡುವವರು ಜೀವವನ್ನು ಹೊಂದಿಕೊಳ್ಳುವರು. ನನ್ನ ಮಾತುಗಳು ದೇಹಕ್ಕೆ ಒಳ್ಳೆಯ ಆರೋಗ್ಯವನ್ನು ನೀಡುತ್ತವೆ. 23 ನಿನ್ನ ಆಲೋಚನೆಗಳ ವಿಷಯದಲ್ಲಿ ಎಚ್ಚರಿಕೆಯಿಂದಿರು. ನಿನ್ನ ನಡತೆಯು ನಿನ್ನ ಆಲೋಚನೆಗಳ ಮೇಲೆ ಆಧಾರಗೊಂಡಿದೆ.
24 ಸತ್ಯವನ್ನು ಸೊಟ್ಟಗೆ ಮಾಡದಿರು; ಸುಳ್ಳನ್ನು ಹೇಳದಿರು. 25 ಒಳ್ಳೆಯದನ್ನೇ ದೃಷ್ಟಿಸು; ನಿನ್ನ ನೋಟವನ್ನು ನಿನ್ನ ಗುರಿಯ ಮೇಲೆ ಕೇಂದ್ರೀಕರಿಸು. 26 ನಿನ್ನ ಕಾರ್ಯಗಳನ್ನು ಎಚ್ಚರಿಕೆಯಿಂದ ಮಾಡು; ಆಗ ನಿನ್ನ ಜೀವನವು ದೃಢವಾಗಿರುವುದು. 27 ಒಳ್ಳೆಯ ಮಾರ್ಗವನ್ನು ಬಿಟ್ಟು ಹೋಗಬೇಡ; ಆದರೆ ಕೆಡುಕಿಗೆ ಯಾವಾಗಲೂ ದೂರವಾಗಿರು.
12 ಧರ್ಮಶಾಸ್ತ್ರವನ್ನು ಹೊಂದಿರುವ ಜನರು ಮತ್ತು ಧರ್ಮಶಾಸ್ತ್ರದ ಬಗ್ಗೆ ಕೇಳಿಯೂ ಇಲ್ಲದ ಜನರು ಪಾಪ ಮಾಡುವಾಗ ಅವರಿಬ್ಬರಿಗೂ ಯಾವ ವ್ಯತ್ಯಾಸವಿರುವುದಿಲ್ಲ. ಧರ್ಮಶಾಸ್ತ್ರವಿಲ್ಲದವರಾಗಿ ಪಾಪ ಮಾಡುವವರು ನಾಶವಾಗುವರು. ಅದೇ ರೀತಿಯಲ್ಲಿ, ಧರ್ಮಶಾಸ್ತ್ರವನ್ನು ಹೊಂದಿದವರಾಗಿ ಪಾಪ ಮಾಡುವವರು ಧರ್ಮಶಾಸ್ತ್ರಕ್ಕನುಸಾರವಾಗಿ ತೀರ್ಪನ್ನು ಹೊಂದುವರು. 13 ಧರ್ಮಶಾಸ್ತ್ರವನ್ನು ಕೇಳಿದ ಮಾತ್ರಕ್ಕೆ ಜನರು ನೀತಿವಂತರಾಗುವುದಿಲ್ಲ. ಧರ್ಮಶಾಸ್ತ್ರ ಹೇಳುವ ಪ್ರತಿಯೊಂದಕ್ಕೂ ವಿಧೇಯರಾಗುವ ಜನರನ್ನು ಧರ್ಮಶಾಸ್ತ್ರವು ನೀತಿವಂತರನ್ನಾಗಿ ಮಾಡುತ್ತದೆ.
14 ಯೆಹೂದ್ಯರಲ್ಲದವರು ಧರ್ಮಶಾಸ್ತ್ರವನ್ನು ಹೊಂದಿಲ್ಲ. ಆದರೆ ಅವರು ಧರ್ಮಶಾಸ್ತ್ರವನ್ನು ಸ್ವಾಭಾವಿಕವಾಗಿ ಅನುಸರಿಸಿದ್ದೇಯಾದರೆ, ಅವರಿಗೆ ಧರ್ಮಶಾಸ್ತ್ರವಿಲ್ಲದಿದ್ದರೂ ಅವರ ಅಂತರಂಗವೇ ಅವರಿಗೆ ಧರ್ಮಶಾಸ್ತ್ರವಾಗುತ್ತದೆ. 15 ಧರ್ಮಶಾಸ್ತ್ರದ ಆಜ್ಞಾವಿಧಿಗಳಿಗನುಸಾರವಾಗಿ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತಮ್ಮ ಹೃದಯಗಳು ಬಲ್ಲವೆಂದು ಅವರು ತಮ್ಮ ನಡತೆಯಿಂದಲೇ ತೋರ್ಪಡಿಸುತ್ತಾರೆ. ಇದು ಸತ್ಯವೆಂಬುದನ್ನು ಅವರ ಮನಸ್ಸಾಕ್ಷಿಯು ಖಚಿತಪಡಿಸುತ್ತದೆ. ಅವರ ಅಂತಃಪ್ರಜ್ಞೆಯೇ ಅವರನ್ನು ದೋಷಿಗಳೆಂದೋ ಇಲ್ಲವೆ ನಿರ್ದೋಷಿಗಳೆಂದೋ ತೀರ್ಮಾನಿಸುತ್ತದೆ.
16 ಮನುಷ್ಯರ ಅಂತರಂಗದಲ್ಲಿರುವ ರಹಸ್ಯ ಸಂಗತಿಗಳಿಗೆ ದೇವರು ತೀರ್ಪುಮಾಡುವ ದಿನದಂದು ಇವುಗಳೆಲ್ಲಾ ನೆರವೇರುವವು. ದೇವರು ಯೇಸು ಕ್ರಿಸ್ತನ ಮೂಲಕ ಜನರಿಗೆ ತೀರ್ಪು ಮಾಡುತ್ತಾನೆ ಎಂಬುದಾಗಿ ಸುವಾರ್ತೆಯು ತಿಳಿಸುತ್ತದೆ. ನಾನು ಜನರಿಗೆ ತಿಳಿಸುವುದು ಆ ಸುವಾರ್ತೆಯನ್ನೇ.
Kannada Holy Bible: Easy-to-Read Version. All rights reserved. © 1997 Bible League International