Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಎಸ್ತೇರಳು 7:1-6

ಹಾಮಾನನು ಗಲ್ಲಿಗೇರಿಸಲ್ಪಟ್ಟನು

ಅರಸನೂ ಹಾಮಾನನೂ ರಾಣಿಯ ಅರಮನೆಗೆ ಔತಣಕ್ಕಾಗಿ ಹೋದರು. ಈ ಔತಣ ಸಮಾರಂಭದ ಎರಡನೆಯ ದಿನದಂದು ಅವರಿಬ್ಬರೂ ದ್ರಾಕ್ಷಾರಸ ಸೇವನೆ ಮಾಡುತ್ತಿರುವಾಗ ತಿರಿಗಿ ರಾಜನು ತನ್ನ ರಾಣಿಯನ್ನು ಪ್ರಶ್ನಿಸಿದನು, “ಎಸ್ತೇರ್ ರಾಣಿಯೇ, ನಿನಗೆ ಬೇಕಾದದ್ದನ್ನು ಕೇಳಿಕೊ. ನಾನು ಕೊಡುವೆನು; ಅರ್ಧ ರಾಜ್ಯ ಬೇಕಾದರೂ ನಾನು ಕೊಡುತ್ತೇನೆ” ಎಂದನು.

ಆಗ ಎಸ್ತೇರ್ ರಾಣಿಯು, “ರಾಜನೇ, ನೀನು ನನ್ನನ್ನು ಮೆಚ್ಚಿ ಪ್ರೀತಿಸುವದಾದರೆ ದಯಮಾಡಿ ನಾನು ಬದುಕುವಂತೆ ಮಾಡು. ಅಲ್ಲದೇ ನನ್ನ ಜನರನ್ನು ಉಳಿಸು. ಇದೇ ನನ್ನ ಬಿನ್ನಹ. ಯಾಕೆಂದರೆ ನಾನು, ನನ್ನ ಜನರೂ ಕೊಲ್ಲಲ್ಪಡಲು, ನಾಶವಾಗಲು, ಸಂಪೂರ್ಣವಾಗಿ ನಿರ್ಮೂಲವಾಗಲು ಮಾರಲ್ಪಟ್ಟಿರುತ್ತೇವೆ. ನಾವು ಬರೇ ಗುಲಾಮರಾಗಿ ಮಾರಲ್ಪಟ್ಟಿದರೆ ನಾನು ಸುಮ್ಮನಿರುತ್ತಿದ್ದೆ. ಯಾಕೆಂದರೆ ಅದು ರಾಜನನ್ನು ತೊಂದರೆಪಡಿಸುವಂಥ ದೊಡ್ಡ ವಿಷಯವಲ್ಲ” ಎಂದು ಉತ್ತರಿಸಿದಳು.

ಆಗ ರಾಜನು ಎಸ್ತೇರಳಿಗೆ, “ಹೀಗೆ ನಿನಗೆ ಯಾರು ಮಾಡಿದರು? ನಿನ್ನ ಜನರಿಗೆ ಇಂಥಾ ಕೆಲಸವನ್ನು ಮಾಡಲು ಯಾರಿಗೆ ಧೈರ್ಯವಾಯಿತು?” ಎಂದು ಕೇಳಿದನು.

ಎಸ್ತೇರಳು ಉತ್ತರಿಸುತ್ತಾ, “ನಮ್ಮನ್ನು ದ್ವೇಷಿಸುವ ಮನುಷ್ಯನು ಈ ಕೆಟ್ಟ ಹಾಮಾನನೇ” ಎಂದು ಹೇಳಿದಳು.

ಆಗ ಹಾಮಾನನು ಭಯದಿಂದ ನಡುಗಿದನು.

ಎಸ್ತೇರಳು 7:9-10

ಇದನ್ನು ಹೇಳಿದೊಡನೆಯೇ ಹತ್ತಿರದಲ್ಲಿದ್ದ ಸೇವಕರು ಬಂದು ಹಾಮಾನನ ಮುಖಕ್ಕೆ ಮುಸುಕುಹಾಕಿದರು. ಅವರಲ್ಲಿದ್ದ ಹರ್ಬೋನ ಎಂಬ ಕಂಚುಕಿಯು, “ಹಾಮಾನನು ತನ್ನ ಮನೆಯ ಬಳಿಯಲ್ಲಿ ಎಪ್ಪತ್ತೈದು ಅಡಿ ಎತ್ತರದ ಗಲ್ಲುಮರವನ್ನು ಮೊರ್ದೆಕೈಗೋಸ್ಕರ ಮಾಡಿಸಿದ್ದಾನೆ. ನಿನ್ನನ್ನು ಕೊಲ್ಲಲು ನಡೆಸಿದ್ದ ಸಂಚನ್ನು ನಿನಗೆ ತಿಳಿಸಿ ನಿನ್ನನ್ನು ಕಾಪಾಡಿದವನೇ ಮೊರ್ದೆಕೈ” ಎಂದು ಹೇಳಿದನು.

ಅದಕ್ಕೆ ರಾಜನು, “ಹಾಮಾನನನ್ನು ಅದೇ ಗಲ್ಲುಮರಕ್ಕೆ ತೂಗುಹಾಕಿರಿ” ಎಂದನು.

10 ಮೊರ್ದೆಕೈಗೋಸ್ಕರ ಸಿದ್ಧಮಾಡಿದ್ದ ಗಲ್ಲುಮರಕ್ಕೆ ಸೇವಕರು ಹಾಮಾನನನ್ನು ತೂಗುಹಾಕಿದರು. ಅನಂತರ ರಾಜನ ಸಿಟ್ಟು ಇಳಿಯಿತು.

ಎಸ್ತೇರಳು 9:20-22

20 ನಡೆದ ಸಂಗತಿಗಳನ್ನೆಲ್ಲಾ ಮೊರ್ದೆಕೈ ಬರೆದಿಟ್ಟು ಅಹಷ್ವೇರೋಷನ ಸಾಮ್ರಾಜ್ಯದಲ್ಲಿ ವಾಸಿಸಿದ್ದ ಎಲ್ಲಾ ಯೆಹೂದ್ಯರಿಗೆ, ದೂರ ಮತ್ತು ಹತ್ತಿರದಲ್ಲಿರುವ ಯೆಹೂದ್ಯರಿಗೂ ಪತ್ರ ಬರೆಯಿಸಿದನು. 21 ಅದರಲ್ಲಿ ಅವನು ಯೆಹೂದ್ಯರೆಲ್ಲರೂ ಪ್ರತೀ ವರ್ಷ ಅದಾರ್ ತಿಂಗಳಿನ ಹದಿನಾಲ್ಕನೇ ಮತ್ತು ಹದಿನೈದನೇ ದಿವಸಗಳನ್ನು ಪೂರಿಮ್ ದಿವಸಗಳನ್ನಾಗಿ ಆಚರಿಸಬೇಕು ಎಂಬದಾಗಿ ಆದೇಶ ನೀಡಿದನು. 22 ಯಾಕೆಂದರೆ ಆ ದಿವಸದಲ್ಲಿ ಯೆಹೂದ್ಯರು ತಮ್ಮ ಶತ್ರುಗಳನ್ನು ಸದೆಬಡಿದರು. ಆ ದಿವಸದಲ್ಲಿ ಅವರಿಗೆ ಶೋಕದ ಬದಲಾಗಿ ಸಂತಸವು ಒದಗಿಬಂತು. ಆ ದಿವಸದಲ್ಲಿ ಅವರ ರೋಧನವು ಹರ್ಷಧ್ವನಿಯಾಗಿ ಮಾರ್ಪಟ್ಟಿತು. ಮೊರ್ದೆಕೈಯು ಎಲ್ಲಾ ಯೆಹೂದ್ಯರಿಗೆ ಪತ್ರ ಬರೆಯಿಸಿದನು. ಆ ದಿವಸದಲ್ಲಿ ಹಬ್ಬವನ್ನು ಆಚರಿಸಿ ಒಬ್ಬರಿಗೊಬ್ಬರು ಉಡುಗೊರೆಗಳನ್ನು ಕೊಡಬೇಕು ಎಂಬುದಾಗಿ ಬರೆಯಿಸಿದನು.

ಕೀರ್ತನೆಗಳು 124

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ. ರಚನೆಗಾರ: ದಾವೀದ.

124 ಯೆಹೋವನು ನಮ್ಮ ಕಡೆ ಇಲ್ಲದಿದ್ದಿದ್ದರೆ ನಮ್ಮ ಗತಿ ಏನಾಗುತ್ತಿತ್ತು?
    ಇಸ್ರೇಲರೇ, ನನಗೆ ಉತ್ತರಹೇಳಿ.
ವೈರಿಗಳು ನಮ್ಮ ಮೇಲೆ ಆಕ್ರಮಣ ಮಾಡಿದಾಗ
    ಯೆಹೋವನು ನಮ್ಮ ಕಡೆ ಇಲ್ಲದಿದ್ದಿದ್ದರೆ ನಮ್ಮ ಗತಿ ಏನಾಗುತ್ತಿತ್ತು?
ಶತ್ರುಗಳು ನಮ್ಮಮೇಲೆ ಕೋಪಗೊಂಡಾಗಲೆಲ್ಲಾ
    ನಮ್ಮನ್ನು ಜೀವಂತವಾಗಿ ನುಂಗಿಬಿಡುತ್ತಿದ್ದರು.
ಶತ್ರುಸೈನ್ಯಗಳು ನಮ್ಮನ್ನು ಕೊಚ್ಚಿಕೊಂಡು ಹೋಗುವ
    ಪ್ರವಾಹದಂತೆಯೂ ಮುಳುಗಿಸುವ ನದಿಯಂತೆಯೂ ಆಗಿರುತ್ತಿದ್ದರು.
ಆ ಗರ್ವಿಷ್ಠರು ನಮ್ಮ ಪಾಲಿಗೆ ಬಾಯಿಯವರೆಗೂ
    ಮೇಲೇರಿ ಮುಳುಗಿಸುವ ನೀರಿನಂತಾಗುತ್ತಿದ್ದರು.

ಯೆಹೋವನಿಗೆ ಸ್ತೋತ್ರವಾಗಲಿ!
    ನಮ್ಮ ಶತ್ರುಗಳು ನಮ್ಮನ್ನು ಹಿಡಿದು ಕೊಲ್ಲಲು ಆತನು ಅವಕಾಶ ಕೊಡಲಿಲ್ಲ.

ನಾವು ಬಲೆಯಿಂದ ತಪ್ಪಿಸಿಕೊಂಡ ಪಕ್ಷಿಯಂತಿದ್ದೇವೆ.
    ಬಲೆಯು ಹರಿದುಹೋದದ್ದರಿಂದ ನಾವು ತಪ್ಪಿಸಿಕೊಂಡೆವು.
ನಮಗೆ ಸಹಾಯವು ಯೆಹೋವನಿಂದಲೇ ಬಂದಿತು.
    ಭೂಮ್ಯಾಕಾಶಗಳನ್ನು ಸೃಷ್ಟಿಮಾಡಿದವನು ಆತನೇ.

ಯಾಕೋಬನು 5:13-20

ಪ್ರಾರ್ಥನೆಯ ಶಕ್ತಿ

13 ನಿಮ್ಮಲ್ಲಿ ತೊಂದರೆಗೆ ಒಳಗಾಗಿರುವವನು ಪ್ರಾರ್ಥಿಸಬೇಕು. ನಿಮ್ಮಲ್ಲಿ ಸಂತೋಷದಿಂದಿರುವವನು ಹಾಡಬೇಕು. 14 ನಿಮ್ಮಲ್ಲಿ ಕಾಯಿಲೆಯಾಗಿರುವವನು ಸಭಾಹಿರಿಯರನ್ನು ಕರೆಯಿಸಬೇಕು. ಹಿರಿಯರು ಅವನಿಗೆ ಎಣ್ಣೆಯನ್ನು ಹಚ್ಚಿ, ಪ್ರಭುವಿನ ಹೆಸರಿನಲ್ಲಿ ಅವನಿಗೋಸ್ಕರ ಪ್ರಾರ್ಥಿಸಬೇಕು. 15 ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ಕಾಯಿಲೆಯಲ್ಲಿರುವವನನ್ನು ಗುಣಪಡಿಸುತ್ತದೆ. ಪ್ರಭುವು ಅವನನ್ನು ಗುಣಪಡಿಸುತ್ತಾನೆ. ಒಂದುವೇಳೆ, ಆ ವ್ಯಕ್ತಿಯು ಪಾಪ ಮಾಡಿದ್ದರೆ, ಪ್ರಭುವು ಅವನನ್ನು ಕ್ಷಮಿಸುತ್ತಾನೆ.

16 ನೀವು ಮಾಡಿದ ತಪ್ಪುಗಳನ್ನು ಒಬ್ಬರಿಗೊಬ್ಬರು ಯಾವಾಗಲೂ ಹೇಳಿಕೊಳ್ಳಿರಿ. ಬಳಿಕ ಒಬ್ಬರಿಗೊಬ್ಬರು ಪ್ರಾರ್ಥಿಸಿರಿ. ನೀವು ಹೀಗೆ ಮಾಡಿದರೆ, ದೇವರು ನಿಮ್ಮನ್ನು ಗುಣಪಡಿಸುವನು. ನೀತಿವಂತನ ಅತ್ಯಾಸಕ್ತಿಯುಳ್ಳ ಪ್ರಾರ್ಥನೆಯು ಬಲವಾಗಿದೆ. 17 ಎಲೀಯನು ಸಹ ನಮ್ಮಂತೆಯೇ ಒಬ್ಬ ಮನುಷ್ಯನಾಗಿದ್ದನು. ಮಳೆ ಬಾರದಂತೆ ಅವನು ಪ್ರಾರ್ಥಿಸಿದಾಗ ಮೂರುವರೆ ವರ್ಷಗಳವರೆಗೆ ಆ ನಾಡಿನಲ್ಲಿ ಮಳೆಯೇ ಬೀಳಲಿಲ್ಲ! 18 ಬಳಿಕ ಎಲೀಯನು ಮಳೆ ಬರುವಂತೆ ಪ್ರಾರ್ಥಿಸಿದಾಗ ಆಕಾಶದಿಂದ ಮಳೆ ಸುರಿದು ಭೂಮಿಯಲ್ಲಿ ಮತ್ತೆ ಬೆಳೆಯು ಫಲಿಸಿತು.

ಆತ್ಮವನ್ನು ರಕ್ಷಿಸಿ

19 ನನ್ನ ಸಹೋದರ ಸಹೋದರಿಯರೇ, ನಿಮ್ಮಲ್ಲಿ ಒಬ್ಬನು ಸತ್ಯದಿಂದ ದೂರವಾಗಿ ಅಲೆದಾಡುತ್ತಿದ್ದರೆ, ಮತ್ತೊಬ್ಬನು ಅವನಿಗೆ ಸಹಾಯಮಾಡಿ ಅವನನ್ನು ಸತ್ಯಕ್ಕೆ ನಡೆಸಬೇಕು. 20 ಇದನ್ನು ಜ್ಞಾಪಕದಲ್ಲಿಟ್ಟುಕೊಂಡಿರಿ: ಒಬ್ಬ ಪಾಪಿಯನ್ನು ತಪ್ಪಾದ ಮಾರ್ಗದಿಂದ ಸರಿಯಾದ ಮಾರ್ಗಕ್ಕೆ ನಡೆಸುವವನು ಆ ಪಾಪಿಯ ಆತ್ಮವನ್ನು ಮರಣದಿಂದ ಪಾರುಮಾಡಿದವನೂ ಅನೇಕ ಪಾಪಗಳಿಗೆ ಕ್ಷಮಾಪಣೆಯಾಗುವಂತೆ ಮಾಡಿದವನೂ ಆಗುತ್ತಾನೆ.

ಮಾರ್ಕ 9:38-50

ನಮ್ಮ ವೈರಿಯಲ್ಲದವನು ನಮ್ಮ ಮಿತ್ರನೇ

(ಲೂಕ 9:49-50)

38 ಆಗ ಯೋಹಾನನು, “ಗುರುವೇ, ಯಾರೋ ಒಬ್ಬನು ನಿನ್ನ ಹೆಸರಿನ ಮೂಲಕ ದೆವ್ವಗಳನ್ನು ಬಿಡಿಸುತ್ತಿರುವುದನ್ನು ನಾವು ನೋಡಿದೆವು. ಅವನು ನಮ್ಮವನಲ್ಲ. ಆದ್ದರಿಂದ ನಿನ್ನ ಹೆಸರನ್ನು ಹೇಳಕೂಡದೆಂದು ಅವನಿಗೆ ಹೇಳಿದೆವು” ಎಂದನು.

39 ಯೇಸು ಅವರಿಗೆ, “ಅವನನ್ನು ತಡೆಯಬೇಡಿ. ನನ್ನ ಹೆಸರಿನ ಮೂಲಕ ಅದ್ಭುತಕಾರ್ಯಗಳನ್ನು ಮಾಡುವವನು ಆ ಕೂಡಲೇ ನನ್ನ ಬಗ್ಗೆ ಕೆಟ್ಟ ಸಂಗತಿಗಳನ್ನು ಹೇಳಲು ಸಾಧ್ಯವಿಲ್ಲ. 40 ನಮ್ಮ ವೈರಿಯಲ್ಲದವನು ನಮ್ಮ ಮಿತ್ರನೇ ಸರಿ. 41 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಕ್ರಿಸ್ತನವರೆಂದು ಯಾವನಾದರೂ ನಿಮಗೆ ಕುಡಿಯಲು ನೀರು ಕೊಟ್ಟರೂ ಅವನಿಗೆ ಅದರ ಪ್ರತಿಫಲ ಖಂಡಿತವಾಗಿ ಸಿಕ್ಕುವುದು.

ಇತರರನ್ನು ಪಾಪಕ್ಕೆ ನಡೆಸುವುದರ ಬಗ್ಗೆ ಯೇಸುವಿನ ಎಚ್ಚರಿಕೆ

(ಮತ್ತಾಯ 18:6-9; ಲೂಕ 17:1-2)

42 “ನನ್ನಲ್ಲಿ ನಂಬಿಕೆಯಿಟ್ಟಿರುವ ಈ ಚಿಕ್ಕ ಮಕ್ಕಳಲ್ಲಿ ಒಬ್ಬನನ್ನು ಪಾಪಕ್ಕೆ ನಡೆಸುವ ವ್ಯಕ್ತಿಯು ತನ್ನ ಕುತ್ತಿಗೆಗೆ ಬೀಸುವ ಕಲ್ಲನ್ನು ಕಟ್ಟಿಕೊಂಡು, ಸಮುದ್ರದಲ್ಲಿ ಮುಳುಗುವುದೇ ಒಳ್ಳೆಯದು. 43 ನಿನ್ನ ಕೈ ನಿನ್ನನ್ನು ಪಾಪದಲ್ಲಿ ಸಿಲುಕಿಸುವುದಾದರೆ ಅದನ್ನು ಕತ್ತರಿಸಿಬಿಡು. ಎರಡು ಕೈಗಳನ್ನು ಇಟ್ಟುಕೊಂಡು, ನಂದಿಹೋಗದ ಬೆಂಕಿಯಿರುವ ನರಕಕ್ಕೆ ಹೋಗುವುದಕ್ಕಿಂತ ಅಂಗವಿಕಲನಾಗಿದ್ದು ನಿತ್ಯಜೀವವನ್ನು ಪಡೆಯುವುದೇ ಮೇಲು. ಆ ಸ್ಥಳದಲ್ಲಿ ಬೆಂಕಿ ಆರಿಹೋಗುವುದೇ ಇಲ್ಲ. 44 [a] 45 ನಿನ್ನ ಕಾಲು ನಿನ್ನನ್ನು ಪಾಪದಲ್ಲಿ ಸಿಕ್ಕಿಸುವುದಾದರೆ, ಅದನ್ನು ಕತ್ತರಿಸಿಬಿಡು. ಎರಡು ಕಾಲುಗಳನ್ನು ಇಟ್ಟುಕೊಂಡು ನರಕದೊಳಗೆ ಎಸೆಯಲ್ಪಡುವುದಕ್ಕಿಂತ ಕುಂಟನಾಗಿರುವುದೇ ಮೇಲು. 46 [b] 47 ನಿನ್ನ ಕಣ್ಣು ನಿನ್ನನ್ನು ಪಾಪದಲ್ಲಿ ಸಿಲುಕಿಸುವುದಾದರೆ, ಅದನ್ನು ಕಿತ್ತುಬಿಡು. ಎರಡು ಕಣ್ಣುಗಳನ್ನಿಟ್ಟುಕೊಂಡು ನರಕದೊಳಗೆ ಎಸೆಯಲ್ಪಡುವುದಕ್ಕಿಂತ ಒಂದೇ ಕಣ್ಣುಳ್ಳವನಾಗಿದ್ದು ನಿತ್ಯಜೀವವನ್ನು ಹೊಂದಿಕೊಳ್ಳುವುದೇ ಮೇಲು. 48 ನರಕದಲ್ಲಿ ಮನುಷ್ಯರನ್ನು ತಿನ್ನುವ ಹುಳಗಳು ಸಾಯುವುದೇ ಇಲ್ಲ ಮತ್ತು ಬೆಂಕಿಯು ಆರುವುದೇ ಇಲ್ಲ.

49 “ಪ್ರತಿಯೊಬ್ಬನನ್ನೂ ಬೆಂಕಿಯಿಂದ ಶಿಕ್ಷಿಸಲಾಗುತ್ತದೆ.

50 “ಉಪ್ಪು ಒಳ್ಳೆಯದು. ಆದರೆ ಉಪ್ಪು ತನ್ನ ರುಚಿಯನ್ನು ಕಳೆದುಕೊಂಡರೆ, ಅದನ್ನು ಮತ್ತೆ ನೀವು ಉಪ್ಪನ್ನಾಗಿ ಮಾಡಲಾರಿರಿ. ಆದ್ದರಿಂದ ಒಳ್ಳೆಯತನದಿಂದ[c] ತುಂಬಿದವರಾಗಿರಿ ಮತ್ತು ಒಬ್ಬರೊಡನೊಬ್ಬರು ಸಮಾಧಾನದಿಂದಿರಿ” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International