Revised Common Lectionary (Semicontinuous)
ಪ್ರಿಯತಮೆ
8 ಅಗೋ, ನನ್ನ ಪ್ರಿಯನ ಸ್ವರ!
ಅವನು ಬೆಟ್ಟಗಳ ಮೇಲೆ ನೆಗೆಯುತ್ತಾ
ಗುಡ್ಡಗಳ ಮೇಲೆ ಕುಪ್ಪಳಿಸುತ್ತಾ ಬರುತ್ತಿದ್ದಾನೆ.
9 ನನ್ನ ಪ್ರಿಯನು ಸಾರಂಗದಂತೆಯೂ
ಪ್ರಾಯದ ಜಿಂಕೆಯಂತೆಯೂ ಇದ್ದಾನೆ.
ಅಗೋ, ಅವನು ನಮ್ಮ ಗೋಡೆಯ ಆಚೆ ನಿಂತಿದ್ದಾನೆ;
ತಡಕೆಗಳಿಂದ ಇಣಿಕಿಹಾಕುತ್ತಿದ್ದಾನೆ;
ಕಿಟಕಿಗಳಿಂದ ನೋಡುತ್ತಿದ್ದಾನೆ.
10 ನನ್ನ ಪ್ರಿಯನು ನನಗೆ ಹೀಗೆಂದನು:
“ನನ್ನ ಪ್ರಿಯಳೇ, ನನ್ನ ಸುಂದರಿಯೇ,
ಎದ್ದೇಳು, ನಾವು ದೂರ ಹೋಗೋಣ!
11 ಇಗೋ, ಚಳಿಗಾಲ ಕಳೆಯಿತು;
ಮಳೆಗಾಲ ಮುಗಿದುಹೋಯಿತು.
12 ಭೂಮಿಯ ಮೇಲೆ ಹೂವುಗಳು ಕಾಣುತ್ತವೆ;
ಪಕ್ಷಿಗಳು ಹಾಡುವ ಸಮಯವು ಬಂದಿದೆ.
ದೇಶದಲ್ಲಿ ಪಾರಿವಾಳದ ಸ್ವರವು ಕೇಳಿಸುತ್ತದೆ.
13 ಅಂಜೂರದ ಮರ ಕಾಯಿಗಳನ್ನು ಬಿಡುತ್ತಿದೆ;
ದ್ರಾಕ್ಷಿಬಳ್ಳಿಯ ಹೂವುಗಳಿಂದ ಸುವಾಸನೆಯು ಬರುತ್ತಿದೆ.
ನನ್ನ ಪ್ರಿಯಳೇ, ನನ್ನ ಸುಂದರಿಯೇ, ಎದ್ದೇಳು,
ನಾವು ದೂರ ಹೋಗೋಣ!”
ರಚನೆಗಾರರು: ಕೋರಹೀಯರು.
45 ಒಂದು ದಿವ್ಯ ವಿಷಯವನ್ನು ಹೇಳಲು
ನನ್ನ ಹೃದಯವು ತವಕಪಡುತ್ತದೆ;
ನನ್ನ ರಾಜನನ್ನು ಕುರಿತು ಸುಂದರವಾದ ಗೀತೆಯೊಂದನ್ನು ರಚಿಸುವೆ.
ನನ್ನ ನಾಲಿಗೆಯು ಕವಿಯ ಲೇಖನಿಯಂತೆ ಸಿದ್ಧವಾಗಿದೆ.
2 ನೀನು ಎಲ್ಲರಿಗಿಂತಲೂ ಅತಿಸುಂದರನಾಗಿರುವೆ.
ನಿನ್ನ ಮಾತುಗಳು ಮನೋಹರವಾಗಿವೆ.
ದೇವರ ಆಶೀರ್ವಾದವು ನಿನ್ನ ಮೇಲೆ ಸದಾಕಾಲವಿರುವುದು.
6 ದೇವರೇ,[a] ನಿನ್ನ ಸಿಂಹಾಸನವು ಶಾಶ್ವತವಾದದ್ದು.
ಒಳ್ಳೆಯತನವು ನಿನ್ನ ರಾಜದಂಡವಾಗಿದೆ.
7 ನೀನು ನೀತಿಯನ್ನು ಪ್ರೀತಿಸುವೆ; ದುಷ್ಟತನವನ್ನು ದ್ವೇಷಿಸುವೆ.
ಆದ್ದರಿಂದ ನಿನ್ನ ದೇವರಾಗಿರುವಾತನು
ನಿನ್ನನ್ನು ನಿನ್ನ ಸ್ನೇಹಿತರಿಗೆ ರಾಜನನ್ನಾಗಿ ಆರಿಸಿಕೊಂಡಿದ್ದಾನೆ.[b]
8 ನಿನ್ನ ಬಟ್ಟೆಗಳು ಪರಿಮಳದ್ರವ್ಯಗಳಾದ ಗೋಲರಸ, ಅಗರು ಮತ್ತು ಚಂದನಗಳಿಂದ ಕೂಡಿವೆ.
ಗಜದಂತದಿಂದ ಶೃಂಗರಿಸಿರುವ ಅರಮನೆಗಳಲ್ಲಿ ನಿನ್ನನ್ನು ಸಂತೋಷಪಡಿಸಲು ವಾದ್ಯಗಳನ್ನು ನುಡಿಸುವರು.
9 ನಿನ್ನ ಸ್ತ್ರೀಪರಿವಾರದಲ್ಲಿರುವವರು ರಾಜಕುಮಾರಿಯರೇ,
ನಿನ್ನ ಪಟ್ಟದರಾಣಿಯು ಓಫೀರ್ ದೇಶದ ಬಂಗಾರದಿಂದ ಮಾಡಿದ ಕಿರೀಟವನ್ನು ಧರಿಸಿಕೊಂಡು ನಿನ್ನ ಬಲಗಡೆಯಲ್ಲಿ ನಿಂತಿರುವಳು.
17 ಎಲ್ಲಾ ಒಳ್ಳೆಯ ದಾನಗಳೂ ಕುಂದಿಲ್ಲದ ವರಗಳೂ, ಎಲ್ಲಾ ಬೆಳಕುಗಳಿಗೆ (ಸೂರ್ಯ, ಚಂದ್ರ, ನಕ್ಷತ್ರಗಳು) ಮೂಲ ಕಾರಣನಾದ ಸೃಷ್ಟಿ ಕರ್ತನಿಂದ ಬರುತ್ತವೆ. ದೇವರು ಬದಲಾಗುವುದಿಲ್ಲ. ಆತನು ಎಲ್ಲಾ ಕಾಲದಲ್ಲಿಯೂ ಒಂದೇ ರೀತಿಯಲ್ಲಿರುತ್ತಾನೆ. 18 ದೇವರು ಸತ್ಯವಾಕ್ಯದ ಮೂಲಕ ನಮಗೆ ಜೀವವನ್ನು ದಯಪಾಲಿಸಲು ತೀರ್ಮಾನಿಸಿದ್ದಾನೆ. ತನ್ನಿಂದ ಸೃಷ್ಟಿಸಲ್ಪಟ್ಟ ಎಲ್ಲಾ ವಸ್ತುಗಳಲ್ಲಿಯೂ ನಾವು ಅತ್ಯಂತ ಮುಖ್ಯರಾಗಬೇಕೆಂಬುದೇ ಆತನ ಅಪೇಕ್ಷೆ.
ಕೇಳುವಿಕೆ ಮತ್ತು ವಿಧೇಯತೆ
19 ನನ್ನ ಸಹೋದರ ಸಹೋದರಿಯರೇ, ಯಾವಾಗಲೂ ಮಾತನಾಡುವುದಕ್ಕಿಂತ ಕೇಳುವುದರಲ್ಲಿ ಆಸಕ್ತರಾಗಿರಿ. ಸುಲಭವಾಗಿ ಕೋಪಗೊಳ್ಳದಿರಿ. 20 ಒಬ್ಬ ವ್ಯಕ್ತಿಯ ಕೋಪವು ದೇವರು ಅಪೇಕ್ಷಿಸಿದಂತೆ ಯೋಗ್ಯ ಜೀವನವನ್ನು ನಡೆಸಲು ಅವನಿಗೆ ಸಹಾಯಕವಾಗುವುದಿಲ್ಲ. 21 ಆದ್ದರಿಂದ ಎಲ್ಲಾ ನೀಚತನವನ್ನೂ ದುಷ್ಟತನವನ್ನೂ ನಿಮ್ಮ ಜೀವನದಿಂದ ದೂರತಳ್ಳಿರಿ. ನಿಮ್ಮ ಹೃದಯದಲ್ಲಿ ಬೇರೂರಿರುವ ದೇವರ ವಾಕ್ಯವನ್ನು ದೀನತೆಯಿಂದ ಒಪ್ಪಿಕೊಳ್ಳಿರಿ. ಅದು ನಿಮ್ಮ ಆತ್ಮಗಳನ್ನು ರಕ್ಷಿಸುತ್ತದೆ.
22 ದೇವರ ವಾಕ್ಯವನ್ನು ಕೇವಲ ಕೇಳುವವರಾಗಿರದೆ ಅದನ್ನು ಕಾರ್ಯರೂಪಕ್ಕೆ ತನ್ನಿರಿ. ಇಲ್ಲವಾದರೆ ನಿಮ್ಮನ್ನು ನೀವೇ ಮೋಸಗೊಳಿಸಿಕೊಳ್ಳುವಿರಿ. 23 ದೇವರ ವಾಕ್ಯವನ್ನು ಕೇಳಿಯೂ ಅದರಂತೆ ನಡೆಯದವನು ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿಕೊಂಡವನಂತಿರುವನು. 24 ಅವನು ಅಲ್ಲಿಂದ ಹೊರಟು ಹೋಗಿ, ತಾನು ಹೇಗಿದ್ದೇನೆಂಬುದನ್ನು ಬೇಗನೆ ಮರೆತುಬಿಡುತ್ತಾನೆ. 25 ಜನರನ್ನು ಬಿಡುಗಡೆ ಮಾಡುವ ದೇವರ ಪರಿಪೂರ್ಣ ನಿಯಮವನ್ನು ಎಚ್ಚರಿಕೆಯಿಂದ ಅಭ್ಯಾಸ ಮಾಡುವವನು ನಿಜವಾಗಿಯೂ ಸಂತೋಷಭರಿತನಾಗಿದ್ದಾನೆ. ಅವನು ಅದನ್ನು ಅಭ್ಯಾಸ ಮಾಡುತ್ತಲೇ ಇರುತ್ತಾನೆ. ಅವನು ದೇವರ ವಾಕ್ಯವನ್ನು ಕೇಳುತ್ತಾನೆ ಮತ್ತು ತಾನು ಕೇಳಿದ್ದನ್ನು ಮರೆತುಬಿಡುವುದಿಲ್ಲ. ಅವನು ದೇವರ ವಾಕ್ಯಕ್ಕೆ ವಿಧೇಯನಾಗಿರುತ್ತಾನೆ. ಆದ್ದರಿಂದಲೇ ಅವನು ಸಂತೋಷಭರಿತನಾಗಿರುತ್ತಾನೆ.
ದೇವರನ್ನು ಆರಾಧಿಸತಕ್ಕ ನಿಜವಾದ ಮಾರ್ಗ
26 ಸದ್ಭಕ್ತನೆಂದು ತನ್ನ ಬಗ್ಗೆ ಹೇಳಿಕೊಳ್ಳುವವನು ತನ್ನ ನಾಲಿಗೆಗೆ ಕಡಿವಾಣವನ್ನು ಹಾಕದೆಹೋದರೆ ಅವನು ತನ್ನನ್ನು ತಾನೇ ಮೋಸಗೊಳಿಸಿಕೊಂಡಂತಾಗುವುದು. ಅವನ “ಭಕ್ತಿ”ಗೆ ಬೆಲೆಯಿಲ್ಲ. 27 ದೇವರು ಒಪ್ಪಿಕೊಳ್ಳುವ ಭಕ್ತಿಯು ಹೀಗಿದೆ: ಕೊರತೆಯಲ್ಲಿರುವ ಅನಾಥರನ್ನೂ ವಿಧವೆಯರನ್ನೂ ನೋಡಿಕೊಳ್ಳುವುದು ಮತ್ತು ಲೋಕದ ಕೆಟ್ಟತನದಿಂದ ಪ್ರಭಾವಿತರಾಗದಂತೆ ಅದರಿಂದ ದೂರವಿರುವುದು. ದೇವರು ಇಂಥ ಭಕ್ತಿಯನ್ನು ಪರಿಶುದ್ಧವಾದದ್ದೆಂದೂ ಒಳಿತಾದದ್ದೆಂದೂ ಪರಿಗಣಿಸಿ ಸ್ವೀಕರಿಸಿಕೊಳ್ಳುವನು.
ದೇವರ ಧರ್ಮಶಾಸ್ತ್ರ ಮತ್ತು ಜನರ ಸ್ವನಿಯಮ
(ಮತ್ತಾಯ 15:1-20)
7 ಕೆಲವು ಫರಿಸಾಯರು ಮತ್ತು ಧರ್ಮೋಪದೇಶಕರು ಜೆರುಸಲೇಮಿನಿಂದ ಬಂದರು. ಅವರು ಯೇಸುವಿನ ಸುತ್ತಲೂ ಒಟ್ಟಿಗೆ ಸೇರಿದರು. 2 ಯೇಸುವಿನ ಶಿಷ್ಯರಲ್ಲಿ ಕೆಲವರು ಕೈಗಳನ್ನು ತೊಳೆಯದೆ[a] ಅಶುದ್ಧವಾದ ಕೈಗಳಿಂದ ಊಟ ಮಾಡುತ್ತಿರುವುದನ್ನು ಫರಿಸಾಯರು ಮತ್ತು ಧರ್ಮೋಪದೇಶಕರು ನೋಡಿದರು. 3 ಫರಿಸಾಯರು ಮತ್ತು ಇತರ ಯೆಹೂದ್ಯರೆಲ್ಲರೂ ಸಂಪ್ರದಾಯದಂತೆ ಕೈಗಳನ್ನು ತೊಳೆಯದೆ ಊಟಮಾಡುತ್ತಿರಲಿಲ್ಲ. ತಮ್ಮ ಪಿತೃಗಳಿಂದ ಬಂದ ಆಚಾರಗಳನ್ನು ಅನುಸರಿಸುವುದಕ್ಕಾಗಿ ಅವರು ಹೀಗೆ ಮಾಡುತ್ತಿದ್ದರು. 4 ಅವರು ಏನನ್ನಾದರೂ ಮಾರುಕಟ್ಟೆಯಲ್ಲಿ ಕೊಂಡುಕೊಂಡರೆ, ವಿಶೇಷವಾದ ರೀತಿಯಲ್ಲಿ ಅದನ್ನು ತೊಳೆಯದೆ ತಿನ್ನುತ್ತಿರಲಿಲ್ಲ. ತಮ್ಮ ಪಿತೃಗಳಿಂದ ಬಂದ ಇತರ ಆಚಾರಗಳನ್ನು ಅಂದರೆ ಲೋಟ, ಬಟ್ಟಲು, ತಪ್ಪಲೆ ಮತ್ತು ದೋಲಿಗಳನ್ನು ತೊಳೆಯುವಾಗಲೂ ಈ ನಿಯಮಗಳನ್ನು ಅನುಸರಿಸುತ್ತಿದ್ದರು.
5 ಫರಿಸಾಯರು ಮತ್ತು ಧರ್ಮೋಪದೇಶಕರು ಯೇಸುವಿಗೆ, “ನಮ್ಮ ಪಿತೃಗಳ ಸಂಪ್ರದಾಯವನ್ನು ನಿನ್ನ ಶಿಷ್ಯರು ಅನುಸರಿಸದೆ ಅಶುದ್ಧವಾದ ಕೈಗಳಿಂದ ಆಹಾರವನ್ನು ತಿನ್ನುವುದೇಕೆ?” ಎಂದು ಕೇಳಿದರು.
6 ಯೇಸು, “ನೀವೆಲ್ಲ ಕಪಟಿಗಳು. ನಿಮ್ಮ ಬಗ್ಗೆ ಯೆಶಾಯನು ಸರಿಯಾಗಿ ಹೇಳಿದ್ದಾನೆ:
‘ನನ್ನನ್ನು ಗೌರವಿಸುವುದಾಗಿ ಈ ಜನರು ಹೇಳುತ್ತಾರೆ,
ಆದರೆ ಇವರ ಹೃದಯಗಳು ನನ್ನಿಂದ ಬಹುದೂರವಾಗಿವೆ.
7 ಇವರು ನನ್ನನ್ನು ಆರಾಧಿಸುವುದು ಕೇವಲ ವ್ಯರ್ಥ.
ಏಕೆಂದರೆ ಮಾನವ ನಿಯಮಗಳನ್ನೇ ಇವರು ಬೋಧಿಸುತ್ತಾರೆ.’(A)
8 ನೀವು ದೇವರ ಆಜ್ಞೆಗಳಿಗೆ ವಿಧೇಯರಾಗದೆ ಜನರ ಸಂಪ್ರದಾಯಗಳನ್ನು ಅನುಸರಿಸುತ್ತಿರುವಿರಿ” ಎಂದು ಹೇಳಿದನು.
14 ಯೇಸು ಜನರನ್ನು ಮತ್ತೆ ತನ್ನ ಬಳಿಗೆ ಕರೆದು, “ನಾನು ಹೇಳುವುದನ್ನು ಪ್ರತಿಯೊಬ್ಬರು ಕೇಳಿರಿ ಮತ್ತು ಅರ್ಥಮಾಡಿಕೊಳ್ಳಿರಿ. 15 ಒಬ್ಬ ವ್ಯಕ್ತಿಯ ಅಂತರಂಗದೊಳಕ್ಕೆ ಹೋಗಿ ಅವನನ್ನು ಅಶುದ್ಧನನ್ನಾಗಿ ಮಾಡುವಂಥದ್ದು ಯಾವುದೂ ಇಲ್ಲ. ಒಬ್ಬ ವ್ಯಕ್ತಿಯ ಒಳಗಿಂದ ಬಂದ ಸಂಗತಿಗಳೇ ಅವನನ್ನು ಅಶುದ್ಧನನ್ನಾಗಿ ಮಾಡುತ್ತವೆ” ಎಂದು ಹೇಳಿದನು.
21 ಒಬ್ಬ ವ್ಯಕ್ತಿಯ ಅಂತರಂಗದಲ್ಲಿ ಈ ಕೆಟ್ಟ ಆಲೋಚನೆಗಳೆಲ್ಲವೂ ಆರಂಭವಾಗುತ್ತವೆ: ದುರಾಲೋಚನೆ, ಲೈಂಗಿಕಪಾಪ, ಕಳ್ಳತನ, ಕೊಲೆ, 22 ವ್ಯಭಿಚಾರ, ಹಣದಾಶೆ, ಕೆಡುಕುತನ, ಭಂಡತನ, ಅಸೂಯೆ, ಚಾಡಿಕೋರತನ, ಅಹಂಕಾರ ಮತ್ತು ಬುದ್ಧಿಗೇಡಿತನ. 23 ಈ ಕೆಟ್ಟ ವಿಷಯಗಳೆಲ್ಲಾ ಮನುಷ್ಯನ ಅಂತರಂಗದಿಂದ ಬಂದು ಅವನನ್ನು ಅಶುದ್ಧನನ್ನಾಗಿ ಮಾಡುತ್ತವೆ” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International