Revised Common Lectionary (Semicontinuous)
9 ಯೆಹೋವನೇ, ನಿನಗೆ ನೂತನ ಕೀರ್ತನೆಯನ್ನು ಹಾಡುವೆನು.
ನಾನು ಹತ್ತು ತಂತಿಗಳ ಹಾರ್ಪ್‌ವಾದ್ಯವನ್ನು ನುಡಿಸುತ್ತಾ ನಿನ್ನನ್ನು ಸ್ತುತಿಸುವೆನು.
10 ರಾಜರುಗಳಿಗೆ ಸಹಾಯಮಾಡಿ ಯುದ್ಧಗಳಲ್ಲಿ ಗೆಲ್ಲಿಸುವವನೂ ನೀನೇ.
ನಿನ್ನ ಸೇವಕನಾದ ದಾವೀದನನ್ನು ಅವನ ಶತ್ರುಗಳ ಖಡ್ಗಗಳಿಂದ ರಕ್ಷಿಸಿದವನೂ ನೀನೇ.
11 ಈ ಅನ್ಯಜನರಿಂದ ನನ್ನನ್ನು ರಕ್ಷಿಸು.
ಅವರ ಬಾಯಿಗಳು ಸುಳ್ಳುಗಳಿಂದ ತುಂಬಿವೆ.
ಅವರ ಬಲಗೈಗಳು ಮೋಸದಿಂದ ತುಂಬಿವೆ.
12 ನಮ್ಮ ಯುವಕರು ಮಹಾವೃಕ್ಷಗಳಂತಿದ್ದಾರೆ.
ನಮ್ಮ ಯುವತಿಯರು ಅರಮನೆಯಲ್ಲಿ ಸುಂದರವಾಗಿ ಕೆತ್ತಲ್ಪಟ್ಟ ಕಂಬಗಳಂತಿರುವರು.
13 ನಮ್ಮ ಕಣಜಗಳು ಸಕಲ ಬಗೆಯ ದವಸಧಾನ್ಯಗಳಿಂದ ತುಂಬಿರುತ್ತವೆ.
ನಮ್ಮ ಹೊಲಗಳಲ್ಲಿರುವ ಕುರಿಗಳು ಸಾವಿರಾರು ಮರಿಗಳನ್ನು ಈಯುತ್ತವೆ.
14 ನಮ್ಮ ಸೈನಿಕರು ಸುರಕ್ಷಿತವಾಗಿದ್ದಾರೆ.
ಯಾವ ಶತ್ರುಗಳೂ ನುಗ್ಗಿಬರಲು ಪ್ರಯತ್ನಿಸುತ್ತಿಲ್ಲ.
ನಾವು ಯುದ್ಧಕ್ಕೆ ಹೋಗುವುದೂ ಇಲ್ಲ;
ನಮ್ಮ ಬೀದಿಗಳಲ್ಲಿ ಗೋಳಾಟವೂ ಇರುವುದಿಲ್ಲ.
15 ಇಂಥ ಸುಸ್ಥಿತಿಯಲ್ಲಿರುವ ಜನರೇ ಧನ್ಯರು.
ಯಾರಿಗೆ ಯೆಹೋವನು ದೇವರಾಗಿರುತ್ತಾನೋ ಅವರೇ ಭಾಗ್ಯವಂತರು.
ಜೆರುಸಲೇಮಿನ ಸ್ತ್ರೀಯರ ಮಾತುಗಳು
6 ಮಹಾ ಜನಸಮೂಹದೊಡನೆ
ಅಡವಿಯಿಂದ ಬರುತ್ತಿರುವ ಈ ಸ್ತ್ರೀ ಯಾರು?
ಗೋಲರಸ, ಧೂಪ, ವರ್ತಕರ ಸಕಲ ಸುಗಂಧ ದ್ರವ್ಯಗಳನ್ನು ಸುಡುವಾಗ
ಮೇಲೇರುವ ಹೊಗೆಯಂತೆ ಧೂಳು ಮೇಲೇರುತ್ತಿದೆ.
7 ನೋಡಿ, ಅದು ಸೊಲೊಮೋನನ ಪಲ್ಲಕ್ಕಿ.
ಅದರ ಸುತ್ತಲೂ ಅರವತ್ತು ಮಂದಿ ಸೈನಿಕರಿದ್ದಾರೆ.
ಅವರು ಇಸ್ರೇಲಿನ ಸೈನಿಕರು!
8 ಯುದ್ಧವೀರರಾದ ಅವರು ಕೈಯಲ್ಲಿ ಕತ್ತಿ ಹಿಡಿದಿದ್ದಾರೆ;
ರಾತ್ರಿಯ ಅಪಾಯದ ನಿಮಿತ್ತ
ಅವರು ಸೊಂಟಕ್ಕೆ ಕತ್ತಿ ಕಟ್ಟಿಕೊಂಡಿದ್ದಾರೆ.
9 ರಾಜನಾದ ಸೊಲೊಮೋನನು ತನಗೋಸ್ಕರ ಪಲ್ಲಕ್ಕಿಯನ್ನು
ಲೆಬನೋನಿನ ದೇವದಾರು ಮರದಿಂದ ಮಾಡಿಸಿದ್ದಾನೆ.
10 ಅದರ ಕಂಬಗಳನ್ನು ಬೆಳ್ಳಿಯಿಂದಲೂ
ಅದರ ಅಡ್ಡಕಂಬಗಳನ್ನು ಚಿನ್ನದಿಂದಲೂ ಮಾಡಲಾಗಿದೆ.
ಅದರ ಆಸನವನ್ನು ನೇರಳೆ ಬಣ್ಣದ ಬಟ್ಟೆಯಿಂದ ಹೊದಿಸಲಾಗಿದೆ.
ಆ ಬಟ್ಟೆಯನ್ನು ಜೆರುಸಲೇಮಿನ ಸ್ತ್ರೀಯರು ಕಸೂತಿ ಕೆಲಸದಿಂದ ಅಲಂಕರಿಸಿದ್ದಾರೆ.
11 ಚೀಯೋನಿನ ಸ್ತ್ರೀಯರೇ,
ಹೊರಗೆ ಹೋಗಿ ರಾಜನಾದ ಸೊಲೊಮೋನನನ್ನು ನೋಡಿರಿ.
ಅವನ ಮದುವೆಯ ದಿನದಲ್ಲಿ
ಹೃದಯವು ಹರ್ಷಗೊಂಡಿದ್ದಾಗ
ಅವನ ತಾಯಿ ತಲೆಗಿಟ್ಟ ಕಿರೀಟವನ್ನು ಧರಿಸಿಕೊಂಡಿದ್ದಾನೆ.
ಕ್ರಿಸ್ತ ಯೇಸುವಿನ ಒಳ್ಳೆಯ ಸೇವಕನಾಗಿರು
6 ಅಲ್ಲಿರುವ ಸಹೋದರ ಸಹೋದರಿಯರಿಗೆ ಈ ಸಂಗತಿಗಳನ್ನು ತಿಳಿಸಿದರೆ, ನೀನು ಕ್ರಿಸ್ತ ಯೇಸುವಿನ ಒಳ್ಳೆಯ ಸೇವಕನಾಗಿರುವೆ ಎಂಬುದನ್ನೂ ನಂಬಿಕೆಯ ನುಡಿಗಳಿಂದ ಮತ್ತು ಉತ್ತಮ ಉಪದೇಶಗಳನ್ನು ಅನುಸರಿಸಿದ್ದರಿಂದ ಬಲಗೊಂಡಿರುವೆ ಎಂಬುದನ್ನೂ ತೋರಿಸಿದಂತಾಗುತ್ತದೆ. 7 ದೇವರ ಸತ್ಯಕ್ಕೆ ಹೊಂದಿಕೆಯಾಗದ ಕ್ಷುಲ್ಲಕ ಕಥೆಗಳನ್ನು ಜನರು ಹೇಳುತ್ತಾರೆ. ಆ ಕಥೆಗಳ ಬೋಧನೆಯನ್ನು ಅನುಸರಿಸಬೇಡ. ದೇವರಿಗೆ ನಿಜವಾದ ಸೇವೆ ಮಾಡಲು ನಿನಗೆ ನೀನೇ ಬೋಧಿಸಿಕೊ. 8 ನೀನು ದೇಹವನ್ನು ಪಳಗಿಸಿಕೊಂಡರೆ ನಿನಗೆ ಕೆಲವು ರೀತಿಯಲ್ಲಿ ಸಹಾಯಕವಾಗುವುದು. ಆದರೆ ದೇವರ ಸೇವೆಯು ನಿನಗೆ ಎಲ್ಲಾ ರೀತಿಯಲ್ಲಿಯೂ ಸಹಾಯಕವಾಗುವುದು. ದೇವರ ಸೇವೆಯು ಇಹಪರಗಳೆರಡರಲ್ಲೂ ನಿನಗೆ ಆಶೀರ್ವಾದವನ್ನು ಉಂಟು ಮಾಡುವುದು. 9 ಈ ಸಂಗತಿಯು ನಂಬತಕ್ಕದ್ದೂ ಸರ್ವಾಂಗಿಕಾರಕ್ಕೆ ಯೋಗ್ಯವಾದದ್ದೂ ಆಗಿದೆ. 10 ಆದಕಾರಣವೇ, ನಾವು ಜೀವಸ್ವರೂಪನಾದ ದೇವರ ಮೇಲೆ ನಿರೀಕ್ಷೆಯಿಟ್ಟು ದುಡಿಯುತ್ತಿದ್ದೇವೆ ಮತ್ತು ಹೋರಾಡುತ್ತಿದ್ದೇವೆ. ಆತನು ಎಲ್ಲಾ ಜನರಿಗೆ ರಕ್ಷಕನಾಗಿದ್ದಾನೆ. ತನ್ನಲ್ಲಿ ನಂಬಿಕೆಯಿಡುವ ಜನರಿಗೆಲ್ಲಾ ಆತನು ವಿಶೇಷವಾದ ರೀತಿಯಲ್ಲಿ ರಕ್ಷಕನಾಗಿದ್ದಾನೆ.
11 ಇವುಗಳನ್ನು ಆಜ್ಞಾಪಿಸು ಮತ್ತು ಬೋಧಿಸು. 12 ನೀನು ಯೌವನಸ್ಥನಾಗಿರುವುದರಿಂದ ನಿನ್ನನ್ನು ಪ್ರಮುಖನಲ್ಲವೆಂದು ಪರಿಗಣಿಸಿ ಅಸಡ್ಡೆಮಾಡಲು ಯಾರಿಗೂ ಅವಕಾಶಕೊಡದಿರು. ವಿಶ್ವಾಸಿಗಳು ಹೇಗೆ ಜೀವಿಸಬೇಕೆಂಬುದಕ್ಕೆ ನೀನೇ ಅವರಿಗೆ ಮಾದರಿಯಾಗಿರು. ನಡೆನುಡಿಗಳಲ್ಲಿ, ಪ್ರೀತಿಯಲ್ಲಿ, ನಂಬಿಕೆಯಲ್ಲಿ ಮತ್ತು ಪರಿಶುದ್ಧ ಜೀವನದಲ್ಲಿ ನೀನೇ ಅವರಿಗೆ ಮಾದರಿಯಾಗಿರು.
13 ದೇವರ ವಾಕ್ಯವನ್ನು ಜನರಿಗೆ ಓದಿಹೇಳಿ ಅವರನ್ನು ಬಲಪಡಿಸು ಮತ್ತು ಅವರಿಗೆ ಬೋಧಿಸು. ನಾನು ಬರುವತನಕ ಈ ಕಾರ್ಯಗಳನ್ನು ಮಾಡುತ್ತಿರು. 14 ನಿನ್ನಲ್ಲಿರುವ ವರವನ್ನು ಜ್ಞಾಪಿಸಿಕೊಳ್ಳುತ್ತಿರು. ಸಭೆಯ ಹಿರಿಯರು ಪ್ರವಾದನೆಗಳೊಂದಿಗೆ ತಮ್ಮ ಕೈಗಳನ್ನು ನಿನ್ನ ಮೇಲಿಟ್ಟಾಗ ಆ ವರವು ನಿನಗೆ ಕೊಡಲ್ಪಟ್ಟಿತು. 15 ಈ ಕಾರ್ಯಗಳನ್ನು ಮಾಡುತ್ತಲೇ ಇರು. ಈ ಕಾರ್ಯಗಳನ್ನು ಮಾಡಲು ನಿನ್ನ ಜೀವನವನ್ನು ಮುಡಿಪಾಗಿಡು. ಆಗ ನಿನ್ನ ಕಾರ್ಯವು ಅಭಿವೃದ್ಧಿಗೊಳ್ಳುತ್ತಿರುವುದನ್ನು ಜನರೆಲ್ಲರೂ ನೋಡುವರು. 16 ನಿನ್ನ ಜೀವನದಲ್ಲಿಯೂ ನಿನ್ನ ಬೋಧನೆಯಲ್ಲಿಯೂ ಎಚ್ಚರಿಕೆಯಿಂದಿರು. ಯೋಗ್ಯವಾದ ರೀತಿಯಲ್ಲಿ ಜೀವಿಸುತ್ತಾ ಬೋಧಿಸು. ಆಗ ನೀನು, ನಿನ್ನನ್ನೂ ನಿನ್ನ ಬೋಧನೆ ಕೇಳುವವರನ್ನೂ ರಕ್ಷಿಸುವೆ.
Kannada Holy Bible: Easy-to-Read Version. All rights reserved. © 1997 Bible League International