Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 124

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ. ರಚನೆಗಾರ: ದಾವೀದ.

124 ಯೆಹೋವನು ನಮ್ಮ ಕಡೆ ಇಲ್ಲದಿದ್ದಿದ್ದರೆ ನಮ್ಮ ಗತಿ ಏನಾಗುತ್ತಿತ್ತು?
    ಇಸ್ರೇಲರೇ, ನನಗೆ ಉತ್ತರಹೇಳಿ.
ವೈರಿಗಳು ನಮ್ಮ ಮೇಲೆ ಆಕ್ರಮಣ ಮಾಡಿದಾಗ
    ಯೆಹೋವನು ನಮ್ಮ ಕಡೆ ಇಲ್ಲದಿದ್ದಿದ್ದರೆ ನಮ್ಮ ಗತಿ ಏನಾಗುತ್ತಿತ್ತು?
ಶತ್ರುಗಳು ನಮ್ಮಮೇಲೆ ಕೋಪಗೊಂಡಾಗಲೆಲ್ಲಾ
    ನಮ್ಮನ್ನು ಜೀವಂತವಾಗಿ ನುಂಗಿಬಿಡುತ್ತಿದ್ದರು.
ಶತ್ರುಸೈನ್ಯಗಳು ನಮ್ಮನ್ನು ಕೊಚ್ಚಿಕೊಂಡು ಹೋಗುವ
    ಪ್ರವಾಹದಂತೆಯೂ ಮುಳುಗಿಸುವ ನದಿಯಂತೆಯೂ ಆಗಿರುತ್ತಿದ್ದರು.
ಆ ಗರ್ವಿಷ್ಠರು ನಮ್ಮ ಪಾಲಿಗೆ ಬಾಯಿಯವರೆಗೂ
    ಮೇಲೇರಿ ಮುಳುಗಿಸುವ ನೀರಿನಂತಾಗುತ್ತಿದ್ದರು.

ಯೆಹೋವನಿಗೆ ಸ್ತೋತ್ರವಾಗಲಿ!
    ನಮ್ಮ ಶತ್ರುಗಳು ನಮ್ಮನ್ನು ಹಿಡಿದು ಕೊಲ್ಲಲು ಆತನು ಅವಕಾಶ ಕೊಡಲಿಲ್ಲ.

ನಾವು ಬಲೆಯಿಂದ ತಪ್ಪಿಸಿಕೊಂಡ ಪಕ್ಷಿಯಂತಿದ್ದೇವೆ.
    ಬಲೆಯು ಹರಿದುಹೋದದ್ದರಿಂದ ನಾವು ತಪ್ಪಿಸಿಕೊಂಡೆವು.
ನಮಗೆ ಸಹಾಯವು ಯೆಹೋವನಿಂದಲೇ ಬಂದಿತು.
    ಭೂಮ್ಯಾಕಾಶಗಳನ್ನು ಸೃಷ್ಟಿಮಾಡಿದವನು ಆತನೇ.

ಎಸ್ತೇರಳು 2

ಎಸ್ತೇರಳನ್ನು ರಾಣಿಯಾಗಿ ಮಾಡಿದ್ದು

ಸ್ವಲ್ಪಕಾಲವಾದನಂತರ ಅರಸನ ಕೋಪವು ಇಳಿಯಿತು. ಆಗ ವಷ್ಟಿಯನ್ನೂ ಆಕೆ ಮಾಡಿದ್ದನ್ನೂ ಅವಳಿಂದಾಗಿ ತಾನು ಹೊರಡಿಸಿದ ರಾಜಾಜ್ಞೆಯನ್ನೂ ನೆನಪಿಗೆ ತಂದುಕೊಂಡನು. ಆಗ ರಾಜನ ಸನ್ನಿಧಿಸೇವಕರು ಈ ಸಲಹೆಕೊಟ್ಟರು: “ರಾಜನಿಗೋಸ್ಕರ ರೂಪವತಿಯರಾದ ಕನ್ಯೆಯರನ್ನು ಹುಡುಕಿರಿ. ರಾಜನು ತನ್ನ ಸಾಮ್ರಾಜ್ಯದ ಪ್ರತಿಯೊಂದು ಪ್ರಾಂತ್ಯದಲ್ಲೂ ನಾಯಕರುಗಳನ್ನು ಆರಿಸಲಿ. ಆ ನಾಯಕರು ಅತ್ಯಂತ ರೂಪವತಿಯರಾದ ಕನ್ನಿಕೆಯರನ್ನು ಶೂಷನ್ ರಾಜಧಾನಿಗೆ ಕರೆದುಕೊಂಡು ಬಂದು ಅವರನ್ನು ರಾಜನ ಸ್ತ್ರೀಯರೊಡನೆ ಇರಿಸಲಿ. ಆ ಸ್ತ್ರೀಯರು ಮೇಲ್ವಿಚಾರಕನಾದ ರಾಜನ ಕಂಚುಕಿ ಹೇಗೈಯ ಪರಿಪಾಲನೆಯಲ್ಲಿರಲಿ. ಬಳಿಕ ಅವರಿಗೆ ಸೌಂದರ್ಯವರ್ಧಕ ಚಿಕಿತ್ಸೆ ಕೊಡಲಿ. ಅನಂತರ ರಾಜನಿಗೆ ಇಷ್ಟವಾದ ಕನ್ನಿಕೆಯನ್ನು ವಷ್ಟಿಯ ಬದಲಾಗಿ ರಾಣಿಯನ್ನಾಗಿ ಮಾಡಲಿ” ಎಂದು ಹೇಳಿದರು. ಅವರ ಸಲಹೆ ರಾಜನಿಗೆ ಸರಿಯೆನಿಸಿದ್ದರಿಂದ ಅವನು ಅದಕ್ಕೆ ಒಪ್ಪಿಕೊಂಡನು.

ಆ ಸಮಯದಲ್ಲಿ ಬೆನ್ಯಾಮೀನ್ ಕುಲಕ್ಕೆ ಸೇರಿದ ಮೊರ್ದೆಕೈ ಎಂಬ ಹೆಸರಿನ ಒಬ್ಬ ಯೊಹೂದ್ಯನಿದ್ದನು. ಇವನು ಯಾಯೀರನ ಮಗನೂ ಕೀಷನ ಮೊಮ್ಮಗನೂ ಆಗಿದ್ದು ರಾಜಧಾನಿಯಾದ ಶೂಷನ್‌ನಲ್ಲಿಯೇ ವಾಸಮಾಡುತ್ತಿದ್ದನು. ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ಜೆರುಸಲೇಮಿನಿಂದ ಮೊರ್ದೆಕೈಯನ್ನು ಸೆರೆಹಿಡಿದು ತಂದಿದ್ದನು. ಯೆಹೂದದ ಅರಸನಾದ ಯೆಹೋಯಾಕೀನನೊಂದಿಗೆ ಸೆರೆಒಯ್ಯಲ್ಪಟ್ಟ ಗುಂಪಿನೊಂದಿಗೆ ಇವನೂ ಇದ್ದನು. ಇವನ ಬಳಿಯಲ್ಲಿ ಇವನ ಚಿಕ್ಕಪ್ಪನ ಮಗಳಾದ ಹದೆಸ್ಸಾ ಎಂಬ ಕನ್ನಿಕೆ ಇದ್ದಳು. ಈಕೆ ತಂದೆಯೂ ತಾಯಿಯೂ ಇಲ್ಲದ ತಬ್ಬಲಿಯಾಗಿದ್ದಳು. ಈಕೆಯ ತಂದೆತಾಯಿಗಳು ಸತ್ತಂದಿನಿಂದ ಈಕೆಯನ್ನು ಮೊರ್ದೆಕೈಯು ತನ್ನ ಮಗಳನ್ನಾಗಿ ಸ್ವೀಕರಿಸಿ ಸಾಕುತ್ತಿದ್ದನು. ಹದೆಸ್ಸಾಳನ್ನು ಎಸ್ತೇರ್ ಎಂಬ ಹೆಸರಿನಿಂದಲೂ ಕರೆಯುತ್ತಿದ್ದರು. ತುಂಬಾ ಸೌಂದರ್ಯವತಿಯಾಗಿದ್ದ ಈಕೆ ಆಕರ್ಷಕಳಾಗಿದ್ದಳು.

ರಾಜಾಜ್ಞೆಯು ರಾಜ್ಯದ ಎಲ್ಲಾ ಭಾಗಗಳಲ್ಲಿ ಪ್ರಕಟಿಸಲ್ಪಟ್ಟಾಗ ಅನೇಕ ಕನ್ಯೆಯರನ್ನು ರಾಜಧಾನಿಯಾದ ಶೂಷನ್‌ಗೆ ಕರೆದುಕೊಂಡು ಬಂದರು. ಇವರನ್ನೆಲ್ಲಾ ಹೇಗೈಯ ವಶಕ್ಕೆಕೊಟ್ಟರು. ಆ ಕನ್ಯೆಯರಲ್ಲಿ ಎಸ್ತೇರಳು ಸಹ ಒಬ್ಬಳಾಗಿದ್ದಳು. ಎಸ್ತೇರಳನ್ನೂ ಅರಮನೆಗೆ ಕರೆದುಕೊಂಡು ಹೋಗಿ ಹೇಗೈಯ ವಶಕ್ಕೆ ಕೊಟ್ಟರು. ಹೇಗೈ ಎಸ್ತೇರಳನ್ನು ಇಷ್ಟಪಟ್ಟನು. ಆಕೆ ಅವನ ಮೆಚ್ಚಿಗೆಗೆ ಪಾತ್ರಳಾದಳು. ಆಕೆಗೆ ಅರಮನೆಯಿಂದ ಏಳು ಮಂದಿ ಸೇವಕಿಯರನ್ನು ಕೊಟ್ಟು ಆಕೆಯ ಊಟೋಪಚಾರಗಳಲ್ಲಿ ಅಥವಾ ಸೌಂದರ್ಯ ಅಭಿವೃದ್ಧಿಗಾಗಿ ಲೇಪನ ವಸ್ತುಗಳ ವಿಷಯದಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದನು. ಇದಾದ ಬಳಿಕ ಎಸ್ತೇರ್ ಮತ್ತು ಆಕೆಯ ಸೇವಕಿಯರನ್ನು ಅಂತಃಪುರದ ಉತ್ತಮ ಭಾಗದಲ್ಲಿ ಇಳಿದುಕೊಳ್ಳುವ ವ್ಯವಸ್ಥೆ ಮಾಡಿದನು. 10 ತಾನು ಯೆಹೂದ್ಯಳು ಎಂದು ಎಸ್ತೇರಳು ಯಾರಿಗೂ ಹೇಳಲಿಲ್ಲ. ತನ್ನ ವಂಶ, ಮನೆತನದ ವಿಚಾರವಾಗಿಯೂ ಯಾರಿಗೂ ತಿಳಿಸಲಿಲ್ಲ. ಯಾಕೆಂದರೆ ಮೊರ್ದೆಕೈ ಆಕೆಗೆ ತನ್ನ ವಿಷಯವಾಗಿ ಯಾರಿಗೂ ಹೇಳಬಾರದೆಂದೂ ಕಟ್ಟಪ್ಪಣೆ ಮಾಡಿದ್ದನು. 11 ಪ್ರತಿದಿನ ಮೊರ್ದೆಕೈ ಅಂತಃಪುರದ ಎದುರಿನಿಂದ ಹೋಗುತ್ತಾ ಬರುತ್ತಾ ಎಸ್ತೇರಳು ಹೇಗಿದ್ದಾಳೆಂದೂ ಅವಳಿಗೆ ಮುಂದೆ ಸಂಭವಿಸುವುದನ್ನೂ ವಿಚಾರಿಸುತ್ತಿದ್ದನು.

12 ಸರದಿಯ ಪ್ರಕಾರ ಒಬ್ಬ ಕನ್ಯೆಯನ್ನು ಅರಸನ ಬಳಿಗೆ ಕರೆದೊಯ್ಯುವ ಮೊದಲು ಆಕೆಯು ಹನ್ನೆರಡು ತಿಂಗಳು ಕಾಲ ಸೌಂದರ್ಯೋಪಾಸನದ ವಿಧಿಕ್ರಮಗಳನ್ನೆಲ್ಲಾ ನೆರವೇರಿಸಿರಬೇಕು. ಆರುತಿಂಗಳ ಕಾಲ ರಕ್ತಬೋಳದ ಎಣ್ಣೆಯ ಅಭ್ಯಂಜನದಿಂದಲೂ ನಂತರದ ಆರುತಿಂಗಳು ಕಾಂತಿವರ್ಧಕ ಲೇಪನ, ಸುಗಂಧವಸ್ತುಗಳಿಂದ ಆಕೆಯು ಸೌಂದರ್ಯದ ಆರೈಕೆ ಮಾಡಿಸಿಕೊಳ್ಳಬೇಕಾಗಿತ್ತು. 13 ರಾಜನ ಬಳಿಗೆ ಹೋಗುವಾಗ ಆಕೆಗೆ ಏನುಬೇಕೋ ಅದನ್ನು ಅಂತಃಪುರದಿಂದ ಕೊಡಲ್ಪಡುತ್ತಿತ್ತು. 14 ಮುಸ್ಸಂಜೆಯ ಸಮಯದಲ್ಲಿ ಕನ್ಯೆಯು ರಾಜನಿವಾಸವನ್ನು ಪ್ರವೇಶಿಸುವಳು. ಮರುದಿವಸ ಮುಂಜಾನೆ ಆಕೆಯು ಅಲ್ಲಿಂದ ಹಿಂತಿರುಗಿ ರಾಜನ ಉಪಪತ್ನಿಯರು ಉಳಿದುಕೊಳ್ಳುವ ಅಂತಃಪುರದ ಇನ್ನೊಂದು ಭಾಗದಲ್ಲಿ ನೆಲೆಸುವಳು. ಅಲ್ಲಿ ಆಕೆ ರಾಜನ ಕಂಚುಕಿ ಶವಷ್ಗಜನ ಮೇಲ್ವಿಚಾರಣೆಯಲ್ಲಿರುವಳು. ಶವಷ್ಗಜನು ರಾಜನ ಉಪಪತ್ನಿಗಳ ಮೇಲ್ವಿಚಾರಕನಾಗಿದ್ದನು. ರಾಜನು ಆಕೆಯ ಹೆಸರೆತ್ತಿ ಕರೆದಾಗ ಮಾತ್ರವೇ ಆಕೆಯು ತಿರುಗಿ ರಾಜನ ಬಳಿಗೆ ಹೋಗುವಳು. ಕರೆಯದಿದ್ದಲ್ಲಿ ಆಕೆಯು ಅಲ್ಲಿಯೇ ಇರುವಳು.

15 ರಾಜನ ಬಳಿಗೆ ಹೋಗಲು ಎಸ್ತೇರಳ ಸರದಿ ಬಂದಾಗ ಆಕೆ ಏನನ್ನೂ ಕೇಳಿಕೊಳ್ಳಲಿಲ್ಲ. ತಾನು ಏನನ್ನು ತೆಗೆದುಕೊಂಡು ಹೋಗಬೇಕೆಂದು ರಾಜನ ಸ್ತ್ರೀಯರ ಮೇಲ್ವಿಚಾರಕನಾಗಿದ್ದ ರಾಜಕಂಚುಕಿ ಹೇಗೈನನ್ನು ಮಾತ್ರ ಕೇಳಿದಳು. (ಎಸ್ತೇರಳು ಮೊರ್ದೆಕೈಯ ಚಿಕ್ಕಪ್ಪ ಅಭೀಹೈಲನ ಮಗಳೂ ತನ್ನ ಸಾಕು ಮಗಳೂ ಆಗಿದ್ದಳು.) ಎಸ್ತೇರಳನ್ನು ನೋಡಿದವರೆಲ್ಲರೂ ಆಕೆಯನ್ನು ಮೆಚ್ಚುತ್ತಿದ್ದರು. 16 ಹೀಗೆ ಹತ್ತನೇ ತಿಂಗಳಾದ ಟೆಬೇತ್ ಮಾಸದಲ್ಲಿ ರಾಜನ ಏಳನೇ ವರ್ಷದಲ್ಲಿ ಎಸ್ತೇರಳು ಅಹಷ್ವೇರೋಷನ ರಾಜನಿವಾಸಕ್ಕೆ ಕರೆದೊಯ್ಯಲ್ಪಟ್ಟಳು.

17 ಎಲ್ಲಾ ಕನ್ಯೆಯರಿಗಿಂತ ರಾಜನು ಎಸ್ತೇರಳನ್ನು ಬಹಳವಾಗಿ ಪ್ರೀತಿಸಿದನು. ಆಕೆ ಅವನ ಮೆಚ್ಚಿಕೆಗೆ ಪಾತ್ರಳಾದಳು. ಎಲ್ಲಾ ಕನ್ಯೆಯರಲ್ಲಿ ಅವಳನ್ನು ಮಾತ್ರ ರಾಜನು ಹೆಚ್ಚಾಗಿ ಇಷ್ಟಪಟ್ಟನು. ಅರಸನಾದ ಅಹಷ್ವೇರೋಷನು ರಾಜ ಕಿರೀಟವನ್ನು ಆಕೆಯ ತಲೆಯ ಮೇಲಿರಿಸಿ ವಷ್ಟಿಯ ಬದಲಾಗಿ ಎಸ್ತೇರಳನ್ನು ತನ್ನ ರಾಣಿಯನ್ನಾಗಿ ಮಾಡಿದನು. 18 ಎಸ್ತೇರಳಿಗೆ ರಾಜನು ಒಂದು ದೊಡ್ಡ ಔತಣವನ್ನೇರ್ಪಡಿಸಿ ಅದಕ್ಕೆ ರಾಜ್ಯದ ಮುಖ್ಯ ಅಧಿಕಾರಿಗಳನ್ನೂ ನಾಯಕರನ್ನೂ ಆಮಂತ್ರಿಸಿ, ರಾಜ್ಯದಲ್ಲೆಲ್ಲಾ ಒಂದು ದಿವಸದ ರಜೆಯನ್ನು ಘೋಷಿಸಿದನು; ಮತ್ತು ಜನರಿಗೆ ಉದಾರವಾಗಿ ದಾನಧರ್ಮಗಳನ್ನು ಮಾಡಿದನು.

ರಾಜಹತ್ಯೆಯ ಒಳಸಂಚನ್ನು ಮೊರ್ದೆಕೈ ಬಯಲುಪಡಿಸಿದ್ದು

19 ಕನ್ಯೆಯರು ಎರಡನೆ ಸಲ ಸಭೆ ಸೇರಿದ್ದಾಗ ಮೊರ್ದೆಕೈಯು ಅರಮನೆಯ ಹೆಬ್ಬಾಗಿಲಲ್ಲಿ ಕುಳಿತುಕೊಂಡಿದ್ದನು. 20 ಮೊರ್ದೆಕೈ ಎಸ್ತೇರಳಿಗೆ ಹೇಳಿದ ಮೇರೆಗೆ ಆಕೆ ತನ್ನ ಪೂರ್ವಿಕರ ದೇಶದ ಬಗ್ಗೆಯಾಗಲಿ ತನ್ನ ಕುಟುಂಬದ ಹಿನ್ನಲೆಯ ಬಗ್ಗೆಯಾಗಲಿ ಯಾರಿಗೂ ಹೇಳಲಿಲ್ಲ. ಹಿಂದೆ ಆಕೆ ಹೇಗೆ ಮೊರ್ದೆಕೈ ಹೇಳಿದ ಪ್ರಕಾರ ನಡೆದುಕೊಳ್ಳುತ್ತಿದ್ದಳೋ ಹಾಗೆಯೇ ಈಗಲೂ ನಡೆದುಕೊಳ್ಳುತ್ತಿದ್ದಳು.

21 ಮೊರ್ದೆಕೈ ಅರಮನೆಯ ಹೆಬ್ಬಾಗಿಲ ಬಳಿ ಕುಳಿತುಕೊಂಡಿದ್ದ ಸಮಯದಲ್ಲಿ ಒಂದು ವಿಷಯ ನಡೆಯಿತು. ಬಿಗೆತಾನ್ ಮತ್ತು ತೆರೆಷ್ ಎಂಬ ಇಬ್ಬರು ದ್ವಾರಪಾಲಕರು ಅರಸನ ಮೇಲೆ ಕೋಪಗೊಂಡು ಅವನನ್ನು ಕೊಲ್ಲಲು ಒಳಸಂಚು ಮಾಡುತ್ತಿದ್ದರು. 22 ಮೊರ್ದೆಕೈಗೆ ಈ ವಿಷಯ ಗೊತ್ತಾದಾಗ ಅವನು ಅದನ್ನು ಎಸ್ತೇರಳಿಗೆ ತಿಳಿಸಿದನು. ಎಸ್ತೇರ್ ರಾಣಿಯು ಇದನ್ನು ಕೊಡಲೇ ಅರಸನಿಗೆ ತಿಳಿಸಿದಳು. ಅಷ್ಟೇ ಅಲ್ಲ, ಮೊರ್ದೆಕೈ ಎಂಬವನು ಈ ಒಳಸಂಚನ್ನು ಕಂಡುಹಿಡಿದು ತನಗೆ ತಿಳಿಸಿದನು ಎಂಬದಾಗಿಯೂ ಅರಸನಿಗೆ ವರದಿ ಮಾಡಿದಳು. 23 ಕೂಡಲೇ ವಿಚಾರಣೆ ನಡೆಸಿದಾಗ ಮೊರ್ದೆಕೈಯು ಹೇಳಿದ ವಿಷಯವು ಸತ್ಯ ಎಂದು ಗೊತ್ತಾಯಿತು. ಆ ಎರಡು ದ್ವಾರಪಾಲಕರನ್ನು ಹಿಡಿದು ಗಲ್ಲಿಗೇರಿಸಿದರು. ಈ ಎಲ್ಲಾ ಸಮಾಚಾರವನ್ನು ರಾಜನ ಬಳಿಯಲ್ಲಿರುವ ರಾಜಕಾಲ ವೃತ್ತಾಂತ ಪುಸ್ತಕದಲ್ಲಿ ಬರೆಯಲ್ಪಟ್ಟವು.

ಅಪೊಸ್ತಲರ ಕಾರ್ಯಗಳು 12:20-25

20 ಟೈರ್ ಮತ್ತು ಸಿದೋನ್ ಪಟ್ಟಣಗಳ ಜನರ ಮೇಲೆ ಹೆರೋದನು ಬಹು ಕೋಪಗೊಂಡಿದ್ದನು. ಆ ಜನರೆಲ್ಲರೂ ಹೆರೋದನನ್ನು ಭೇಟಿಯಾಗಲು ಒಟ್ಟಾಗಿ ಹೋದರು. ಅವರು ಬ್ಲಾಸ್ತನನ್ನು ತಮ್ಮ ಕಡೆಗೆ ಒಲಿಸಿಕೊಂಡರು. ಬ್ಲಾಸ್ತನು ರಾಜನ ವೈಯಕ್ತಿಕ ಸೇವಕನಾಗಿದ್ದನು. ಆ ಜನರು ತಮ್ಮೊಂದಿಗೆ ಶಾಂತಿಸಂಧಾನ ಮಾಡಿಕೊಳ್ಳಬೇಕೆಂದು ಹೆರೋದನನ್ನು ಕೇಳಿಕೊಂಡರು. ಯಾಕೆಂದರೆ ಅವರ ನಾಡಿಗೆ ಹೆರೋದನ ನಾಡಿನಿಂದ ಆಹಾರವನ್ನು ತರಿಸಿಕೊಳ್ಳಬೇಕಾಗಿತ್ತು.

21 ಅವರನ್ನು ಸಂಧಿಸುವುದಕ್ಕಾಗಿ ಹೆರೋದನು ದಿನವೊಂದನ್ನು ಗೊತ್ತುಮಾಡಿದನು. ಅಂದು ಹೆರೋದನು ಸುಂದರವಾದ ರಾಜವಸ್ತ್ರವನ್ನು ಧರಿಸಿಕೊಂಡಿದ್ದನು. ಅವನು ತನ್ನ ಸಿಂಹಾಸನದ ಮೇಲೆ ಕುಳಿತುಕೊಂಡು ಜನರಿಗೆ ಭಾಷಣ ಮಾಡಿದನು. 22 ಆ ಜನರು, “ಈ ಧ್ವನಿಯು ಮನುಷ್ಯನದಲ್ಲ, ದೇವರದೇ!” ಎಂದು ಕೂಗಿದರು. 23 ಹೆರೋದನು ಈ ಹೊಗಳಿಕೆಯನ್ನು ತಾನೇ ಸ್ವೀಕರಿಸಿಕೊಂಡನು. ದೇವರನ್ನು ಮಹಿಮೆಪಡಿಸಲಿಲ್ಲ. ಆದ್ದರಿಂದ ಆ ಕ್ಷಣವೇ, ಪ್ರಭುವಿನ ದೂತನೊಬ್ಬನು ಅವನಿಗೆ ಕಾಯಿಲೆಯನ್ನು ಬರಮಾಡಿದನು. ಅವನ ದೇಹದ ಒಳಭಾಗವನ್ನು ಹುಳಗಳು ತಿಂದುಹಾಕಿದ್ದರಿಂದ ಅವನು ಸತ್ತುಹೋದನು.

24 ದೇವರ ಸಂದೇಶವು ಹಬ್ಬುತ್ತಿತ್ತು ಮತ್ತು ಹೆಚ್ಚುಹೆಚ್ಚು ಜನರ ಮೇಲೆ ಪ್ರಭಾವ ಬೀರುತ್ತಿತ್ತು. ಇದರಿಂದ ವಿಶ್ವಾಸಿಗಳ ಸಮುದಾಯವು ದೊಡ್ಡದಾಗತೊಡಗಿತು.

25 ಬಾರ್ನಬ ಮತ್ತು ಸೌಲರು ಜೆರುಸಲೇಮಿನಲ್ಲಿ ತಮ್ಮ ಕಾರ್ಯವನ್ನು ಮುಗಿಸಿದ ಮೇಲೆ ಅಂತಿಯೋಕ್ಯಕ್ಕೆ ಹಿಂತಿರುಗಿದರು. ಮಾರ್ಕನೆಂಬ ಯೋಹಾನನು ಅವರೊಂದಿಗಿದ್ದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International