Revised Common Lectionary (Semicontinuous)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.
128 ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿ
ಆತನ ಚಿತ್ತಾನುಸಾರವಾಗಿ ಜೀವಿಸುವವರೆಲ್ಲರು ಧನ್ಯರಾಗಿದ್ದಾರೆ.
2 ನೀನು ದುಡಿದು ಸಂಪಾದಿಸಿದ್ದನ್ನು ನೀನೇ ಅನುಭವಿಸುವೆ.
ನೀನು ಸಂತೋಷದಿಂದಿರುವೆ.
ನಿನಗೆ ಒಳ್ಳೆಯದಾಗುವುದು.
3 ಮನೆಯಲ್ಲಿರುವ ನಿನ್ನ ಹೆಂಡತಿ ಫಲಭರಿತವಾದ ದ್ರಾಕ್ಷಿಬಳ್ಳಿಯಂತಿರುವಳು.
ಊಟದ ಮೇಜಿನ ಸುತ್ತಲೂ ಕುಳಿತುಕೊಳ್ಳುವ ನಿನ್ನ ಮಕ್ಕಳು, ನೀನು ನೆಟ್ಟ ಆಲಿವ್ ಮರಗಳಂತಿರುವರು.
4 ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಹೀಗೆಯೇ ಆಶೀರ್ವದಿಸುವನು.
5 ಯೆಹೋವನು ನಿನ್ನನ್ನು ಚೀಯೋನಿನಿಂದ ಆಶೀರ್ವದಿಸಲಿ.
ನಿನ್ನ ಜೀವಮಾನವೆಲ್ಲಾ ನೀನು ಜೆರುಸಲೇಮಿನಲ್ಲಿ ಆಶೀರ್ವಾದಗಳನ್ನು ಅನುಭವಿಸುವಂತಾಗಲಿ.
6 ನೀನು ಜೀವದಿಂದಿದ್ದು ನಿನ್ನ ಮೊಮ್ಮಕ್ಕಳನ್ನು ಕಾಣುವಂತಾಗಲಿ.
ಇಸ್ರೇಲಿನಲ್ಲಿ ಶಾಂತಿ ನೆಲೆಸಿರಲಿ.
ಒಗಟ್ಟಿನಲ್ಲಿ ಬಲವಿದೆ
9 ಇಬ್ಬರು ಒಬ್ಬನಿಗಿಂತಲೂ ಉತ್ತಮ. ಇಬ್ಬರು ಒಟ್ಟಾಗಿ ದುಡಿದರೆ ಹೆಚ್ಚು ಗಳಿಸುವರು.
10 ಒಬ್ಬನು ಬಿದ್ದರೆ ಇನ್ನೊಬ್ಬನು ಎತ್ತುವನು. ಬಿದ್ದಾಗ ಒಬ್ಬಂಟಿಗನಾಗಿದ್ದರೆ ಎತ್ತಲು ಯಾರೂ ಇಲ್ಲದಿರುವುದರಿಂದ ಅವನಿಗೆ ದುರ್ಗತಿಯಾಗುವುದು.
11 ಇಬ್ಬರು ಒಟ್ಟಿಗೆ ಮಲಗಿಕೊಂಡರೆ ಅವರಿಬ್ಬರಿಗೂ ಬೆಚ್ಚಗಾಗುವುದು; ಆದರೆ ಒಬ್ಬಂಟಿಗನಿಗೆ ಬೆಚ್ಚಗಾಗುವುದಿಲ್ಲ.
12 ವೈರಿಯೊಬ್ಬನು ಒಬ್ಬನನ್ನು ಸೋಲಿಸಬಹುದು; ಆದರೆ ಇಬ್ಬರನ್ನು ಸೋಲಿಸಲು ಅವನಿಗೆ ಕಷ್ಟವಾಗುವುದು; ಒಂದುವೇಳೆ ಮೂವರಿದ್ದರೆ ಅವರು ಮೂರೆಳೆಯ ಹಗ್ಗದಂತೆ ಇರುವುದರಿಂದ ಅವನಿಗೆ ಮತ್ತಷ್ಟು ಕಷ್ಟವಾಗುವುದು.
ಜನರು, ರಾಜಕೀಯ ಮತ್ತು ಪ್ರಖ್ಯಾತಿ
13 ಜ್ಞಾನಿಯಾದ ಬಡಯುವಕನು ಎಚ್ಚರದ ಮಾತಿಗೆ ಕಿವಿಗೊಡದ ಮೂಢ ವೃದ್ಧರಾಜನಿಗಿಂತ ಉತ್ತಮ. 14 ಆ ಬಡಯುವಕನು ದೇಶದ ಒಂದು ಬಡಕುಟುಂಬದಲ್ಲಿ ಹುಟ್ಟಿದ್ದಿರಬಹುದು ಅಥವಾ ದೇಶವನ್ನು ಆಳುವುದಕ್ಕಾಗಿ ಸೆರೆಮನೆಯಿಂದ ಬಿಡುಗಡೆ ಮಾಡಲ್ಪಟ್ಟಿರಬಹುದು. 15 ಆದರೆ ನಾನು ಗಮನಿಸಿದ ಪ್ರಕಾರ ಜನರು ಆ ಯೌವನಸ್ಥನ ಪಕ್ಷವಹಿಸುವರು. ಅವನು ಹೊಸರಾಜನಾಗುವನು. 16 ಅನೇಕಾನೇಕ ಜನರು ಆ ಯೌವನಸ್ಥನಿಗೆ ಬೆಂಬಲನೀಡುವರು. ಆದರೆ ಕೊನೆಗಾಲದಲ್ಲಿ ಅವರೇ ಅವನನ್ನು ಇಷ್ಟಪಡುವುದಿಲ್ಲ. ಇದು ಸಹ ಗಾಳಿಯನ್ನು ಹಿಂದಟ್ಟಿದಂತೆ ವ್ಯರ್ಥ.
ಸ್ವಾರ್ಥಪರರರಾದ ಶ್ರೀಮಂತರನ್ನು ದಂಡಿಸಲಾಗುವುದು
5 ಶ್ರೀಮಂತ ಜನರೇ, ಕೇಳಿರಿ! ನಿಮಗೆ ಮಹಾಕಷ್ಟವು ಬರಲಿರುವುದರಿಂದ ಗೋಳಾಡಿರಿ, ದುಃಖಪಡಿರಿ. 2 ನಿಮ್ಮ ಶ್ರೀಮಂತಿಕೆಯು ಕೊಳೆತುಹೋಗುತ್ತದೆ ಮತ್ತು ಬೆಲೆಯಿಲ್ಲದಂತಾಗುತ್ತದೆ. ನಿಮ್ಮ ಬಟ್ಟೆಗಳನ್ನು ನುಸಿಗಳು ತಿಂದುಹಾಕುತ್ತವೆ. 3 ನಿಮ್ಮ ಬೆಳ್ಳಿಬಂಗಾರಗಳು ತುಕ್ಕು ಹಿಡಿಯುತ್ತವೆ. ನೀವು ತಪ್ಪಿತಸ್ಥರೆಂಬುದಕ್ಕೆ ಅದೇ ಸಾಕ್ಷಿಯಾಗಿದೆ. ಅವುಗಳ ತುಕ್ಕು ನಿಮ್ಮ ದೇಹವನ್ನು ಬೆಂಕಿಯಂತೆ ತಿಂದುಬಿಡುತ್ತವೆ. ನೀವು ಈ ಕೊನೆಯ ದಿನಗಳಲ್ಲಿ ನಿಮ್ಮ ಭಂಡಾರವನ್ನು ತುಂಬಿಸಿಕೊಂಡಿದ್ದೀರಿ. 4 ಜನರು ನಿಮ್ಮ ಹೊಲಗಳಲ್ಲಿ ಕೆಲಸ ಮಾಡಿದರೂ ನೀವು ಅವರಿಗೆ ಕೂಲಿಯನ್ನು ಕೊಡಲಿಲ್ಲ. ಅವರು ನಿಮ್ಮ ವಿರುದ್ಧವಾಗಿ ಗೋಳಾಡುತ್ತಿದ್ದಾರೆ. ಅವರು ನಿಮ್ಮ ಬೆಳೆಗಳ ಸುಗ್ಗಿಯನ್ನು ಮಾಡಿದರು. ಈಗ ಪರಲೋಕ ಸೇನೆಯ ಅಧಿಪತಿಯಾದ ಪ್ರಭುವು ಅವರ ಗೋಳಾಟವನ್ನು ಕೇಳಿಸಿಕೊಂಡಿದ್ದಾನೆ.
5 ನಿಮ್ಮ ಈ ಲೋಕದ ಜೀವನವು ಐಶ್ವರ್ಯದಿಂದ ತುಂಬಿದೆ. ನೀವು ಇಷ್ಟಪಟ್ಟದ್ದನ್ನೆಲ್ಲ ಪಡೆದುಕೊಂಡು ತೃಪ್ತರಾದಿರಿ. ವಧಿಸುವ ಕಾಲಕ್ಕೆ ಸಿದ್ಧವಾಗಿರುವ ಪಶುವಿನಂತೆ ನಿಮ್ಮನ್ನು ಕೊಬ್ಬಿಸಿಕೊಂಡಿದ್ದೀರಿ. 6 ನೀವು ಒಳ್ಳೆಯ ಜನರಿಗೆ ದಂಡನೆ ವಿಧಿಸಿದಿರಿ. ಅವರು ನಿಮಗೆ ವಿರೋಧವಾಗಿಲ್ಲದಿದ್ದರೂ ಅವರನ್ನು ಕೊಂದುಹಾಕಿದಿರಿ.
Kannada Holy Bible: Easy-to-Read Version. All rights reserved. © 1997 Bible League International