Revised Common Lectionary (Semicontinuous)
ರಚನೆಗಾರ: ದಾವೀದ.
19 ಆಕಾಶಮಂಡಲವು ದೇವರ ಮಹಿಮೆಯನ್ನು ಪ್ರಕಟಿಸುವುದು.
ಗಗನವು ಆತನ ಕೈಕೆಲಸವನ್ನು ತಿಳಿಸುವುದು.
2 ಪ್ರತಿಯೊಂದು ದಿನವೂ ಅದರ ಕುರಿತು ಹೊಸ ವಿಷಯವನ್ನು ತಿಳಿಸುವುದು.
ಪ್ರತಿಯೊಂದು ರಾತ್ರಿಯೂ ಅದರ ಕುರಿತು ಹೊಸ ಸಂಗತಿಯನ್ನು ಪ್ರಕಟಿಸುವುದು.
3 ಅವುಗಳ ಮಾತಾಗಲಿ
ನುಡಿಗಳಾಗಲಿ ಸ್ವರವಾಗಲಿ ನಮಗೆ ಕೇಳಿಸದು.
4 ಆದರೂ ಅವುಗಳ ಸಂದೇಶವು ಭೂಲೋಕದಲ್ಲೆಲ್ಲಾ ಹರಡುತ್ತದೆ;
ಭೂಮಿಯ ಕಟ್ಟಕಡೆಗಳವರೆಗೂ ವ್ಯಾಪಿಸುತ್ತದೆ.
ಆಕಾಶವು ಸೂರ್ಯನಿಗೆ ಮನೆಯಂತಿದೆ.
5 ಮದುವೆಯ ಮಂಟಪದಿಂದ ಆನಂದದಿಂದ ಬರುವ ಮದುಮಗನಂತೆ ಸೂರ್ಯನು ಮುಂಜಾನೆ ಉದಯಿಸುವನು.
ಕ್ರೀಡಾಪಟುವಿನಂತೆ
ಸೂರ್ಯನು ಆಕಾಶದಲ್ಲಿ ಓಡಲಾರಂಭಿಸುವನು.
6 ಸೂರ್ಯನು ಆಕಾಶದ ಒಂದು ಕಡೆಯಿಂದ ಉದಯಿಸಿ
ಮತ್ತೊಂದು ಕೊನೆಗೆ ಓಡುತ್ತಾಹೋಗುವನು.
ಅವನ ತಾಪಕ್ಕೆ ಯಾವುದೂ ಮರೆಯಾಗಿರಲಾರದು.
7 ಯೆಹೋವನ ಉಪದೇಶಗಳು ನಿಷ್ಕಳಂಕವಾಗಿವೆ.
ಅವು ದೇವಜನರಿಗೆ ಬಲವನ್ನು ಕೊಡುತ್ತವೆ.
ಯೆಹೋವನ ಕಟ್ಟಳೆಯು ಭರವಸೆಗೆ ಯೋಗ್ಯವಾಗಿದೆ.
ಅದು ಮೂಢರನ್ನು ಜ್ಞಾನಿಗಳನ್ನಾಗಿ ಮಾಡುತ್ತದೆ.
8 ಯೆಹೋವನ ನಿಯಮಗಳು ನೀತಿಯ ಕಟ್ಟಳೆಗಳಾಗಿವೆ.
ಅವು ಮನುಸ್ಸನ್ನು ಸಂತೋಷಗೂಳಿಸುತ್ತವೆ.
ಯೆಹೋವನ ಆಜ್ಞೆಗಳು ಒಳ್ಳೆಯ ಆಜ್ಞೆಗಳಾಗಿವೆ.
ಅವು ಕಣ್ಣುಗಳಿಗೆ ಬೆಳಕನ್ನು ನೀಡುತ್ತವೆ.
9 ಯೆಹೋವನಲ್ಲಿಡುವ ಭಯಭಕ್ತಿಯು ಪರಿಶುದ್ಧವಾಗಿದೆ;
ಅದು ಶಾಶ್ವತವಾದದ್ದು.
ಯೆಹೋವನ ವಿಧಿಗಳು ಯಥಾರ್ಥವಾಗಿವೆ;
ಅವು ಯಾವಾಗಲೂ ನ್ಯಾಯಾನುಸಾರವಾಗಿವೆ.
10 ಆತನ ಉಪದೇಶಗಳು ಬಂಗಾರಕ್ಕಿಂತಲೂ ಅಮೂಲ್ಯವಾಗಿವೆ;
ಅಪ್ಪಟವಾದ ಜೇನುತುಪ್ಪಕ್ಕಿಂತಲೂ ಮಧುರವಾಗಿವೆ.
11 ಆತನ ಉಪದೇಶಗಳು ಆತನ ಸೇವಕನನ್ನು ಎಚ್ಚರಿಸುತ್ತವೆ;
ಅವುಗಳನ್ನು ಕೈಕೊಂಡು ನಡೆದರೆ ಒಳ್ಳೆಯದಾಗುವುದು.
12 ಯೆಹೋವನೇ, ಯಾವನೂ ತನ್ನ ತಪ್ಪುಗಳನ್ನೆಲ್ಲಾ ತಿಳಿದುಕೊಳ್ಳುವುದಿಲ್ಲ.
ಆದ್ದರಿಂದ ಗುಪ್ತ ಪಾಪಗಳನ್ನು ಮಾಡಲು ನನ್ನನ್ನು ಬಿಟ್ಟುಬಿಡಬೇಡ.
13 ನನ್ನ ಇಷ್ಟಾನುಸಾರ ಪಾಪಮಾಡಲು ನನ್ನನ್ನು ಬಿಟ್ಟುಬಿಡಬೇಡ.
ಆ ಪಾಪಗಳು ನನ್ನನ್ನು ಆಳದಿರಲಿ.
ನೀನು ಸಹಾಯಮಾಡಿದರೆ
ನಾನು ಪರಿಶುದ್ಧನಾಗಿಯೂ ಪಾಪದಿಂದ ವಿಮುಕ್ತನಾಗಿಯೂ ಇರಲು ಸಾಧ್ಯ.
14 ನನ್ನ ಮಾತುಗಳೂ ನನ್ನ ಆಲೋಚನೆಗಳೂ ನಿನಗೆ ಮೆಚ್ಚಿಕೆಯಾಗಿರಲಿ.
ಯೆಹೋವನೇ, ನೀನೇ ನನ್ನ ಬಂಡೆಯಾಗಿರುವೆ.[a] ನನ್ನನ್ನು ರಕ್ಷಿಸುವಾತನು ನೀನೇ.
15 ಸಮಾಧಾನದ ಉತ್ತರ ಕೋಪವನ್ನು ಕಡಿಮೆ ಮಾಡುವುದು; ಒರಟು ಉತ್ತರ ಕೋಪವನ್ನು ಹೆಚ್ಚಿಸುವುದು.
2 ಜ್ಞಾನಿಯ ಮಾತನ್ನು ಜನರು ಕೇಳಬಯಸುತ್ತಾರೆ. ಮೂಢನು ಕೇವಲ ಮೂರ್ಖತನವನ್ನೇ ಮಾತಾಡುವನು.
3 ಯೆಹೋವನ ದೃಷ್ಟಿಗೆ ಪ್ರತಿಯೊಂದೂ ಕಾಣುತ್ತದೆ. ಆತನು ಕೆಡುಕರನ್ನೂ ಒಳ್ಳೆಯವರನ್ನೂ ಗಮನಿಸುತ್ತಿದ್ದಾನೆ.
4 ಹಿತನುಡಿಗಳು ಜೀವವುಳ್ಳ ಮರದಂತಿವೆ. ಸುಳ್ಳು ಮಾತುಗಳು ಮನುಷ್ಯನ ಆತ್ಮವನ್ನು ಜಜ್ಜಿಹಾಕುತ್ತವೆ.
5 ಮೂರ್ಖನು ತಂದೆಯ ಬುದ್ಧಿಮಾತನ್ನು ತಿರಸ್ಕರಿಸುವನು. ಬುದ್ಧಿಮಾತನ್ನು ಸ್ವೀಕರಿಸಿಕೊಳ್ಳುವವನು ಜ್ಞಾನಿಯಾಗುತ್ತಾನೆ.
6 ಒಳ್ಳೆಯವರ ಮನೆಗಳಲ್ಲಿ ಬಹಳ ಐಶ್ವರ್ಯವಿರುತ್ತದೆ. ಕೆಡುಕರ ಸಂಪಾದನೆಯಾದರೋ ಆಪತ್ತನ್ನು ಬರಮಾಡುತ್ತದೆ.
7 ಜ್ಞಾನಿಯ ಮಾತುಗಳು ತಿಳುವಳಿಕೆಯನ್ನು ಹರಡುತ್ತವೆ. ಮೂಢರ ಮಾತುಗಳು ಕೇಳಲು ಯೋಗ್ಯವಲ್ಲ.
8 ಕೆಡುಕರ ಕಾಣಿಕೆಯನ್ನು ಯೆಹೋವನು ದ್ವೇಷಿಸುವನು; ಒಳ್ಳೆಯವರ ಪ್ರಾರ್ಥನೆಯನ್ನು ಸಂತೋಷದಿಂದ ಕೇಳುವನು.
9 ದುಷ್ಟರ ಜೀವಿತವು ಯೆಹೋವನಿಗೆ ಅಸಹ್ಯ. ಒಳ್ಳೆಯದನ್ನು ಮಾಡಲಿಚ್ಛಿಸುವವರು ಯೆಹೋವನಿಗೆ ಪ್ರಿಯ.
10 ನೀತಿಮಾರ್ಗವನ್ನು ತೊರೆದವನಿಗೆ ಮಹಾದಂಡನೆಯಾಗುವುದು; ಶಿಕ್ಷಣ, ಗದರಿಕೆಯನ್ನು ದ್ವೇಷಿಸುವವನು ನಾಶವಾಗುವನು.
11 ಮೃತ್ಯುಲೋಕದಲ್ಲಿ ನಡೆಯುತ್ತಿರುವುದು ಯೆಹೋವನಿಗೆ ತಿಳಿದಿದೆ. ಜನರ ಹೃದಯಗಳಲ್ಲಿರುವ ಆಲೋಚನೆಗಳು ಸಹ ಆತನಿಗೆ ಗೊತ್ತಿವೆ.
12 ಮೂಢನು ತನ್ನ ತಪ್ಪನ್ನು ಬೇರೆಯವರಿಂದ ಕೇಳಲು ಇಷ್ಟಪಡನು. ಮೂಢನು ಉಪದೇಶಕ್ಕಾಗಿ ಜ್ಞಾನಿಗಳ ಬಳಿಗೆ ಹೋಗುವುದಿಲ್ಲ.
13 ಸಂತೋಷವಾಗಿರುವವನ ಮುಖದಲ್ಲಿ ಆನಂದ ಎದ್ದುಕಾಣುವುದು. ದುಃಖಗೊಂಡಿರುವವನ ಆತ್ಮದಲ್ಲಿ ವ್ಯಥೆ ಎದ್ದುಕಾಣುವುದು.
14 ವಿವೇಕಿಯು ಮತ್ತಷ್ಟು ತಿಳುವಳಿಕೆಯನ್ನು ಪಡೆದುಕೊಳ್ಳಲು ಪ್ರಯತ್ನಿಸುವನು. ಮೂಢನು ಮತ್ತಷ್ಟು ಮೂಢತನವನ್ನು ಬಯಸುತ್ತಾನೆ.
15 ಬಡಜನರ ದಿನಗಳೆಲ್ಲಾ ದುಃಖಕರ. ಸಂತೋಷದ ಹೃದಯದಲ್ಲಿ ಸದಾ ಔತಣ.
16 ಬಹಳ ಐಶ್ವರ್ಯವನ್ನು ಹೊಂದಿದ್ದು ಸಮಾಧಾನವಿಲ್ಲದೆ ಇರುವುದಕ್ಕಿಂತ ಸ್ವಲ್ಪ ಐಶ್ವರ್ಯವನ್ನು ಹೊಂದಿದ್ದು ಯೆಹೋವನಲ್ಲಿ ಭಯಭಕ್ತಿಯಿಂದಿರುವುದೇ ಮೇಲು.
17 ದ್ವೇಷವಿರುವಲ್ಲಿ ಹೆಚ್ಚಾಗಿ ತಿನ್ನುವುದಕ್ಕಿಂತಲೂ ಪ್ರೀತಿಯಿರುವಲ್ಲಿ ಸ್ವಲ್ಪ ತಿನ್ನುವುದೇ ಉತ್ತಮ.
17-18 ದೇವರು ಅಬ್ರಹಾಮನ ನಂಬಿಕೆಯನ್ನು ಪರೀಕ್ಷಿಸಿದನು. ಇಸಾಕನನ್ನು ಯಜ್ಞವಾಗಿ ಸಮರ್ಪಿಸೆಂದು ದೇವರು ಅವನಿಗೆ ಹೇಳಿದನು. ಅಬ್ರಹಾಮನಲ್ಲಿ ನಂಬಿಕೆಯಿದ್ದುದರಿಂದ ವಿಧೇಯನಾದನು. ದೇವರು ಅವನಿಗೆ, “ನಿನ್ನ ಸಂತತಿಗಳವರು ಇಸಾಕನ ಮೂಲಕ ಬರುವರು”(A) ಎಂದು ಮೊದಲೇ ವಾಗ್ದಾನ ಮಾಡಿದ್ದನು. ಆದರೂ ತನ್ನ ಒಬ್ಬನೇ ಮಗನನ್ನು ಅರ್ಪಿಸಲು ಅವನು ಸಿದ್ಧನಾಗಿದ್ದನು. 19 ದೇವರು ಸತ್ತವರನ್ನು ಜೀವಂತವಾಗಿ ಎಬ್ಬಿಸಬಲ್ಲನೆಂದು ಅವನು ನಂಬಿದ್ದನು. ಇಸಾಕನನ್ನು ಕೊಲ್ಲದಂತೆ ದೇವರು ಅವನನ್ನು ತಡೆದಾಗ, ಅವನಿಗೆ ನಿಜವಾಗಿಯೂ ಇಸಾಕನನ್ನು ಸಾವಿನಿಂದ ಮರಳಿ ಪಡೆದಂತಾಯಿತು.
20 ಇಸಾಕನು ಯಾಕೋಬನ ಮತ್ತು ಏಸಾವನ ಭವಿಷ್ಯತ್ತನ್ನು ಆಶೀರ್ವದಿಸಿದನು. ಇಸಾಕನಲ್ಲಿದ್ದ ನಂಬಿಕೆಯೇ ಇದಕ್ಕೆ ಕಾರಣ. 21 ಯಾಕೋಬನು ಯೋಸೇಫನ ಮಕ್ಕಳಿಬ್ಬರನ್ನೂ ತಾನು ಸಾಯುವ ಗಳಿಗೆಯಲ್ಲಿ ಆಶೀರ್ವದಿಸಿದನು. ಅವನು ಊರುಗೋಲಿನ ಮೇಲೆ ಬಾಗಿಕೊಂಡು ದೇವರನ್ನು ಆರಾಧಿಸುತ್ತಿದ್ದನು. ಅವನಲ್ಲಿದ್ದ ನಂಬಿಕೆಯೇ ಇದಕ್ಕೆ ಕಾರಣ.
22 ಯೋಸೇಫನು ಸಾಯುವ ಗಳಿಗೆಯಲ್ಲಿದ್ದಾಗ, ಇಸ್ರೇಲರು ಈಜಿಪ್ಟನ್ನು ಬಿಟ್ಟುಹೋಗುವುದರ ಕುರಿತು ಮಾತನಾಡಿದನು; ತನ್ನ ದೇಹವನ್ನು ಏನು ಮಾಡಬೇಕೆಂಬುದರ ಬಗ್ಗೆಯೂ ತಿಳಿಸಿದನು. ಅದಕ್ಕೆ ಅವನ ನಂಬಿಕೆಯೇ ಕಾರಣ.
Kannada Holy Bible: Easy-to-Read Version. All rights reserved. © 1997 Bible League International