Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 144:9-15

ಯೆಹೋವನೇ, ನಿನಗೆ ನೂತನ ಕೀರ್ತನೆಯನ್ನು ಹಾಡುವೆನು.
    ನಾನು ಹತ್ತು ತಂತಿಗಳ ಹಾರ್ಪ್‌ವಾದ್ಯವನ್ನು ನುಡಿಸುತ್ತಾ ನಿನ್ನನ್ನು ಸ್ತುತಿಸುವೆನು.
10 ರಾಜರುಗಳಿಗೆ ಸಹಾಯಮಾಡಿ ಯುದ್ಧಗಳಲ್ಲಿ ಗೆಲ್ಲಿಸುವವನೂ ನೀನೇ.
    ನಿನ್ನ ಸೇವಕನಾದ ದಾವೀದನನ್ನು ಅವನ ಶತ್ರುಗಳ ಖಡ್ಗಗಳಿಂದ ರಕ್ಷಿಸಿದವನೂ ನೀನೇ.
11 ಈ ಅನ್ಯಜನರಿಂದ ನನ್ನನ್ನು ರಕ್ಷಿಸು.
    ಅವರ ಬಾಯಿಗಳು ಸುಳ್ಳುಗಳಿಂದ ತುಂಬಿವೆ.
    ಅವರ ಬಲಗೈಗಳು ಮೋಸದಿಂದ ತುಂಬಿವೆ.

12 ನಮ್ಮ ಯುವಕರು ಮಹಾವೃಕ್ಷಗಳಂತಿದ್ದಾರೆ.
    ನಮ್ಮ ಯುವತಿಯರು ಅರಮನೆಯಲ್ಲಿ ಸುಂದರವಾಗಿ ಕೆತ್ತಲ್ಪಟ್ಟ ಕಂಬಗಳಂತಿರುವರು.
13 ನಮ್ಮ ಕಣಜಗಳು ಸಕಲ ಬಗೆಯ ದವಸಧಾನ್ಯಗಳಿಂದ ತುಂಬಿರುತ್ತವೆ.
    ನಮ್ಮ ಹೊಲಗಳಲ್ಲಿರುವ ಕುರಿಗಳು ಸಾವಿರಾರು ಮರಿಗಳನ್ನು ಈಯುತ್ತವೆ.
14     ನಮ್ಮ ಸೈನಿಕರು ಸುರಕ್ಷಿತವಾಗಿದ್ದಾರೆ.
ಯಾವ ಶತ್ರುಗಳೂ ನುಗ್ಗಿಬರಲು ಪ್ರಯತ್ನಿಸುತ್ತಿಲ್ಲ.
    ನಾವು ಯುದ್ಧಕ್ಕೆ ಹೋಗುವುದೂ ಇಲ್ಲ;
ನಮ್ಮ ಬೀದಿಗಳಲ್ಲಿ ಗೋಳಾಟವೂ ಇರುವುದಿಲ್ಲ.

15 ಇಂಥ ಸುಸ್ಥಿತಿಯಲ್ಲಿರುವ ಜನರೇ ಧನ್ಯರು.
    ಯಾರಿಗೆ ಯೆಹೋವನು ದೇವರಾಗಿರುತ್ತಾನೋ ಅವರೇ ಭಾಗ್ಯವಂತರು.

ಪರಮ ಗೀತ 5:2-6:3

ಪ್ರಿಯತಮೆ

ನಾನು ನಿದ್ರೆಮಾಡುತ್ತಿರುವಾಗಲೂ
    ಹೃದಯ ಎಚ್ಚರವಾಗಿರುವುದು.
ನನ್ನ ಪ್ರಿಯನು ಬಾಗಿಲು ತಟ್ಟುತ್ತಿರುವುದು ನನಗೆ ಕೇಳುತ್ತಿದೆ.
    “ನನ್ನ ಪ್ರಿಯಳೇ, ನನ್ನ ಕಾಂತಳೇ,
ನನ್ನ ಪಾರಿವಾಳವೇ, ನನ್ನ ನಿರ್ಮಲೆಯೇ, ಬಾಗಿಲು ತೆರೆ!
    ನನ್ನ ತಲೆಯು ಇಬ್ಬನಿಯಿಂದ ತೇವವಾಗಿದೆ;
ನನ್ನ ಕೂದಲು ರಾತ್ರಿ ಬೀಳುವ
    ಹನಿಗಳಿಂದ ತೇವವಾಗಿದೆ.”

“ನಾನು ನನ್ನ ಮೇಲಂಗಿಯನ್ನು ತೆಗೆದಿದ್ದೇನೆ;
    ಅದನ್ನು ಮತ್ತೆ ಹಾಕಿಕೊಳ್ಳಲು ನನಗೆ ಇಷ್ಟವಿಲ್ಲ.
ನಾನು ನನ್ನ ಪಾದಗಳನ್ನು ತೊಳೆದಿದ್ದೇನೆ.
    ಅವುಗಳನ್ನು ಮತ್ತೆ ಕೊಳೆಮಾಡಲು ನನಗೆ ಇಷ್ಟವಿಲ್ಲ.”

ನನ್ನ ಪ್ರಿಯನು ಬಾಗಿಲ ಚಿಲಕದ ರಂಧ್ರದಲ್ಲಿ ಕೈ ನೀಡಿದಾಗ
    ಅವನ ಮೇಲೆ ನನಗೆ ಮರುಕವಾಯಿತು.
ನನ್ನ ಪ್ರಿಯನಿಗೆ ಬಾಗಿಲು ತೆರೆಯಲು ನಾನು ಎದ್ದಾಗ
    ಅಗುಳಿಯ ಹಿಡಿಗಳ ಮೇಲೆ ನನ್ನ ಕೈಗಳಿಂದ ಗೋಲರಸವೂ
ನನ್ನ ಬೆರಳುಗಳಿಂದ ಸುವಾಸನೆಯ ಗೋಲರಸವೂ
    ತೊಟ್ಟಿಕ್ಕಿದವು.
ನಾನು ನನ್ನ ಪ್ರಿಯನಿಗಾಗಿ ಬಾಗಿಲನ್ನು ತೆರೆಯುವಷ್ಟರಲ್ಲಿ
    ನನ್ನ ಪ್ರಿಯನು ಹೊರಟುಹೋಗಿದ್ದನು!
ಅವನು ಇಲ್ಲದಿರುವುದನ್ನು ಕಂಡು
    ನನ್ನ ಹೃದಯವು ಕುಸಿದುಹೋಯಿತು.
ನಾನು ಅವನಿಗಾಗಿ ಹುಡುಕಿದರೂ ಅವನು ಸಿಕ್ಕಲಿಲ್ಲ.
    ನಾನು ಅವನಿಗಾಗಿ ಕೂಗಿದರೂ ಅವನು ಉತ್ತರಿಸಲಿಲ್ಲ.
ನಗರದಲ್ಲಿ ಗಸ್ತು ತಿರುಗುವ ಕಾವಲುಗಾರರು ನನ್ನನ್ನು ಕಂಡು
    ಹೊಡೆದು ಗಾಯಮಾಡಿದರು.
ಕೋಟೆಯ ಕಾವಲುಗಾರರು ನನ್ನ ಮೇಲ್ಹೋದಿಕೆಯನ್ನು
    ತೆಗೆದುಕೊಂಡರು.

ಜೆರುಸಲೇಮಿನ ಸ್ತ್ರೀಯರೇ,
    ನೀವು ನನ್ನ ಪ್ರಿಯನನ್ನು ಕಂಡರೆ, ಅವನಿಗೆ ನಾನು ಅನುರಾಗದಿಂದ ಅಸ್ವಸ್ಥಳಾಗಿದ್ದೇನೆಂದು ತಿಳಿಸಿರಿ.

ಜೆರುಸಲೇಮಿನ ಸ್ತ್ರೀಯರು ಪ್ರಿಯತಮೆಗೆ

ಸ್ತ್ರೀಯರಲ್ಲಿ ಅತ್ಯಂತ ಸೌಂದರ್ಯವತಿಯೇ,
    ನಿನ್ನ ಪ್ರಿಯನ ಅತಿಶಯವೇನು?
ನೀನು ಹೀಗೆ ನಮ್ಮಿಂದ ಪ್ರಮಾಣ ಮಾಡಿಸಲು
    ನಿನ್ನ ಪ್ರಿಯನ ಅತಿಶಯವೇನು?

ಪ್ರಿಯತಮೆಯು ಜೆರುಸಲೇಮಿನ ಸ್ತ್ರೀಯರಿಗೆ

10 ನನ್ನ ಪ್ರಿಯನದು ಹೊಳಪಾದ ಕಂದುಬಣ್ಣ.
    ಹತ್ತು ಸಾವಿರ ಪುರುಷರಲ್ಲಿ ಅವನೇ ಆಕರ್ಷಕ ಪುರುಷ.
11 ಅವನ ತಲೆಯು ಚೊಕ್ಕ ಬಂಗಾರದಂತಿದೆ;
    ಅವನ ಗುಂಗುರು ಕೂದಲು ಕಾಗೆಯಷ್ಟೇ ಕಪ್ಪಾಗಿದೆ.
12 ಅವನ ಕಣ್ಣುಗಳು
    ಹಾಲಿನಲ್ಲಿ ಸ್ನಾನಮಾಡಿದ ಪಾರಿವಾಳಗಳಂತೆಯೂ
    ಆಭರಣದಲ್ಲಿ ಜೋಡಿಸಿರುವ ಮುತ್ತಿನಂತೆಯೂ ಇವೆ.
13 ಅವನ ಕೆನ್ನೆಗಳು ಸುಗಂಧಸಸ್ಯಗಳ ದಿಬ್ಬಗಳಂತೆಯೂ
    ಸುವಾಸನೆಯುಳ್ಳ ಹೂವುಗಳಂತೆಯೂ ಇವೆ.
ಅವನ ತುಟಿಗಳು ಕೆಂದಾವರೆಗಳಂತಿವೆ;
    ಅವನ ತುಟಿಗಳಲ್ಲಿ ಗೋಲರಸವು ತೊಟ್ಟಿಕ್ಕುತ್ತದೆ.
14 ಅವನ ಕೈಗಳು ಪೀತರತ್ನದಿಂದ ಕೂಡಿದ
    ಬಂಗಾರದ ಸಲಾಕೆಯಂತಿವೆ;
ಅವನ ದೇಹವು ನೀಲಿಬಣ್ಣದ ಕಲ್ಲುಗಳಿಂದ ಕೂಡಿದ
    ನಯವಾದ ದಂತದಂತಿದೆ.
15 ಅವನ ಕಾಲುಗಳು ಬಂಗಾರದ ಪಾದಗಳುಳ್ಳ
    ಅಮೃತ ಶಿಲೆಯ ಕಂಬಗಳಂತಿವೆ.
ಅವನು ಲೆಬನೋನಿನ
    ದೇವದಾರು ವೃಕ್ಷದಂತೆ ಎತ್ತರವಾಗಿದ್ದಾನೆ.
16 ಹೌದು, ಜೆರುಸಲೇಮಿನ ಸ್ತ್ರೀಯರೇ,
    ನನ್ನ ಪ್ರಿಯನು ಅತ್ಯಂತ ಮನೋಹರನು;
ಅವನ ನುಡಿ ಬಹು ಇಂಪು.
    ಅವನೇ ನನ್ನ ಪ್ರಿಯನು; ಅವನೇ ನನ್ನ ಕಾಂತನು.

ಜೆರುಸಲೇಮಿನ ಸ್ತ್ರೀಯರು ಪ್ರಿಯತಮೆಗೆ

ನಿನ್ನ ಪ್ರಿಯನು ಎಲ್ಲಿಗೆ ಹೋದನು?
    ನೀನು ಸ್ತ್ರೀಯರಲ್ಲಿ ಅತ್ಯಂತ ಸೌಂದರ್ಯವತಿ.
ನಿನ್ನ ಪ್ರಿಯನು ಯಾವ ಕಡೆಗೆ ಹೋದನು?
    ನೀನು ಹೇಳಿದರೆ, ನಾವು ನಿನಗೋಸ್ಕರ ಅವನನ್ನು ಹುಡುಕುವೆವು.

ಪ್ರಿಯತಮೆಯು ಜೆರುಸಲೇಮಿನ ಸ್ತ್ರೀಯರಿಗೆ

ನನ್ನ ಪ್ರಿಯನು ತನ್ನ ತೋಟದಲ್ಲಿರುವ
    ಸುಗಂಧಸಸ್ಯಗಳ ದಿಬ್ಬಗಳಿಗೆ ಹೋಗಿದ್ದಾನೆ;
ತೋಟಗಳಲ್ಲಿ ಮಂದೆಯನ್ನು ಮೇಯಿಸುವುದಕ್ಕೂ
    ನೆಲದಾವರೆಗಳನ್ನು ಕೊಯ್ಯುವುದಕ್ಕೂ ಹೋಗಿದ್ದಾನೆ.
ನನ್ನ ಪ್ರಿಯನು ನನ್ನವನೇ; ನಾನು ಅವನವಳೇ.
    ಅವನು ನೆಲದಾವರೆಗಳ ಮಧ್ಯದಲ್ಲಿ ಮಂದೆಯನ್ನು ಮೇಯಿಸುವವನಾಗಿದ್ದಾನೆ.

1 ಪೇತ್ರನು 2:19-25

19 ಒಬ್ಬನು ಅನ್ಯಾಯವಾಗಿ ಸಂಕಟಕ್ಕೆ ಒಳಗಾದಾಗ ದೇವರಿಗಾಗಿ ಅದನ್ನು ಸಹಿಸಿಕೊಂಡರೆ ದೇವರ ಮೆಚ್ಚುಗೆಗೆ ಪಾತ್ರನಾಗುತ್ತಾನೆ. 20 ಆದರೆ ನಿಮ್ಮ ತಪ್ಪಿಗಾಗಿ ನೀವು ದಂಡಿಸಲ್ಪಟ್ಟರೆ ಆ ದಂಡನೆಯನ್ನು ನೀವು ಅನುಭವಿಸಿದ್ದಕ್ಕೆ ನಿಮಗೇನೂ ಕೀರ್ತಿ ಬರುವುದಿಲ್ಲ. ಆದರೆ ನೀವು ಒಳ್ಳೆಯದನ್ನು ಮಾಡಿದ್ದರಿಂದ ಸಂಕಟಕ್ಕೆ ಒಳಗಾಗಿ ಅದನ್ನು ತಾಳ್ಮೆಯಿಂದ ಸಹಿಸಿಕೊಂಡರೆ ಅದು ದೇವರನ್ನು ಸಂತೋಷ ಪಡಿಸುತ್ತದೆ. 21 ಇದಕ್ಕಾಗಿಯೇ ನಿಮ್ಮನ್ನು ಕರೆಯಲಾಯಿತು. ನೀವು ಅನುಸರಿಸತಕ್ಕ ಮಾದರಿಯು ಕ್ರಿಸ್ತನೇ ಆಗಿದ್ದಾನೆ. ಆತನು ಮಾಡಿದಂತೆ ನೀವೂ ಮಾಡಿರಿ. ನೀವು ಸಂಕಟವನ್ನು ಅನುಭವಿಸುವಾಗ ತಾಳ್ಮೆಯಿಂದಿರಬೇಕು, ಏಕೆಂದರೆ ಕ್ರಿಸ್ತನು ನಿಮಗಾಗಿ ಸಂಕಟಪಟ್ಟನು.

22 “ಆತನು (ಕ್ರಿಸ್ತನು) ಪಾಪವನ್ನು ಮಾಡಲಿಲ್ಲ.
    ಆತನ ಬಾಯಿಂದ ಯಾವ ಸುಳ್ಳು ಮಾತೂ ಬರಲಿಲ್ಲ.”(A)

23 ಜನರು ಕ್ರಿಸ್ತನನ್ನು ಬಯ್ದರೂ ಆತನು ಅವರನ್ನು ಬಯ್ಯಲಿಲ್ಲ. ಆತನು ಸಂಕಟವನ್ನು ಅನುಭವಿಸಿದರೂ ಜನರನ್ನು ಹೆದರಿಸಲಿಲ್ಲ. ಆತನು ತನ್ನ ಕಾರ್ಯವನ್ನು ದೇವರಿಗೆ ವಹಿಸಿದನು. ಸರಿಯಾದ ನ್ಯಾಯತೀರ್ಪು ನೀಡುವಾತನು ದೇವರೊಬ್ಬನೇ. 24 ಕ್ರಿಸ್ತನು ನಮ್ಮ ಪಾಪಗಳನ್ನೆಲ್ಲಾ ತನ್ನ ದೇಹದಲ್ಲಿ ಹೊತ್ತುಕೊಂಡು ಶಿಲುಬೆಯನ್ನೇರಿದನು. ನಾವು ಪಾಪಕ್ಕೋಸ್ಕರ ಜೀವಿಸದೆ, ನೀತಿವಂತರಾಗಿ ಜೀವಿಸಬೇಕೆಂಬುದೇ ಆತನ ಉದ್ದೇಶವಾಗಿತ್ತು. ಆತನ (ಕ್ರಿಸ್ತನ) ಬಾಸುಂಡೆಗಳಿಂದ ನಿಮಗೆ ಗುಣವಾಯಿತು. 25 ನೀವು ದಾರಿ ತಪ್ಪಿದ ಕುರಿಗಳಾಗಿದ್ದಿರಿ. ಆದರೆ ಈಗ ನೀವು ನಿಮ್ಮ ಕುರುಬನ ಬಳಿಗೆ ಅಂದರೆ ನಿಮ್ಮ ಆತ್ಮಗಳನ್ನು ಕಾಪಾಡುವಾತನ ಬಳಿಗೆ ಹಿಂತಿರುಗಿ ಬಂದಿರುವಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International