Revised Common Lectionary (Semicontinuous)
ದೇವಾಲಯದಲ್ಲಿ ಒಡಂಬಡಿಕೆಯ ಪೆಟ್ಟಿಗೆ
8 ರಾಜನಾದ ಸೊಲೊಮೋನನು ಇಸ್ರೇಲಿನ ಹಿರಿಯರೆಲ್ಲರಿಗೆ, ಕುಲಗಳ ಮುಖ್ಯಸ್ಥರಿಗೆ ಮತ್ತು ಇಸ್ರೇಲಿನ ಕುಟುಂಬ ಪ್ರಧಾನರಿಗೆ ಜೆರುಸಲೇಮಿನಲ್ಲಿದ್ದ ತನ್ನ ಬಳಿಗೆ ಬರಬೇಕೆಂದು ತಿಳಿಸಿದನು. ಒಡಂಬಡಿಕೆಯ ಪೆಟ್ಟಿಗೆಯನ್ನು ದಾವೀದ ನಗರದಿಂದ ಆಲಯಕ್ಕೆ ತರುವಾಗ ಅವರು ಸಹ ತನ್ನೊಂದಿಗಿರಬೇಕೆಂಬುದು ಸೊಲೊಮೋನನ ಅಪೇಕ್ಷೆಯಾಗಿತ್ತು.
6 ಆಗ ಯಾಜಕರು ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಅದರ ಸರಿಯಾದ ಸ್ಥಳದಲ್ಲಿ ಇಟ್ಟರು. ಇದು ಆಲಯದ ಮಹಾ ಪವಿತ್ರಸ್ಥಳವಾಗಿತ್ತು. ಒಡಂಬಡಿಕೆಯ ಪೆಟ್ಟಿಗೆಯನ್ನು ಕೆರೂಬಿಗಳ ರೆಕ್ಕೆಗಳ ಅಡಿಯಲ್ಲಿ ಇಟ್ಟರು.
10 ಯಾಜಕರು ಪವಿತ್ರ ಪೆಟ್ಟಿಗೆಯನ್ನು ಮಹಾ ಪವಿತ್ರಸ್ಥಳದಲ್ಲಿ ಇಟ್ಟರು. ಯಾಜಕರು ಪವಿತ್ರಸ್ಥಳದಿಂದ ಹೊರಬಂದಾಗ, ಯೆಹೋವನ ಆಲಯವು ಮೋಡದಿಂದ ತುಂಬಿಕೊಂಡಿತು. 11 ಯೆಹೋವನ ತೇಜಸ್ಸು ಆಲಯವನ್ನು ತುಂಬಿಕೊಂಡಿದ್ದರಿಂದ ಯಾಜಕರು ತಮ್ಮ ಕಾರ್ಯವನ್ನು ಮುಂದುವರಿಸಲಾಗಲಿಲ್ಲ.
22 ಬಳಿಕ ಸೊಲೊಮೋನನು ಯೆಹೋವನ ಯಜ್ಞವೇದಿಕೆಯ ಎದುರಿನಲ್ಲಿ ನಿಂತುಕೊಂಡನು. ಜನರೆಲ್ಲರೂ ಅವನ ಎದುರಿನಲ್ಲಿ ನಿಂತುಕೊಂಡಿದ್ದರು. ರಾಜನಾದ ಸೊಲೊಮೋನನು ತನ್ನ ಕೈಗಳನ್ನು ಚಾಚಿ, ಆಕಾಶದ ಕಡೆಗೆ ದೃಷ್ಟಿಸಿ,
23 “ಇಸ್ರೇಲಿನ ದೇವರಾದ ಯೆಹೋವನೇ, ಭೂಲೋಕದಲ್ಲಾಗಲಿ ಆಕಾಶಮಂಡಲದಲ್ಲಾಗಲಿ ನಿನ್ನಂತಹ ದೇವರು ಮತ್ತೊಬ್ಬರಿಲ್ಲ. ನೀನು ಜನರನ್ನು ಪ್ರೀತಿಸುವುದರಿಂದ ಅವರೊಂದಿಗೆ ಒಡಂಬಡಿಕೆ ಮಾಡಿಕೊಂಡೆ. ನೀನು ನಿನ್ನ ಒಡಂಬಡಿಕೆಗಳನ್ನು ನೆರವೇರಿಸುವೆ. ನಿನ್ನನ್ನು ಪೂರ್ಣಮನಸ್ಸಿನಿಂದ ಅನುಸರಿಸುವ ಜನರಿಗೆ ನೀನು ದಯಾಳುವಾಗಿರುವೆ ಮತ್ತು ನಂಬಿಗಸ್ತನಾಗಿರುವೆ. 24 ನಿನ್ನ ಸೇವಕನೂ ನನ್ನ ತಂದೆಯೂ ಆದ ದಾವೀದನಿಗೆ ನೀನೊಂದು ವಾಗ್ದಾನ ಮಾಡಿದ್ದೆ. ನೀನು ಆ ವಾಗ್ದಾನವನ್ನು ನೆರವೇರಿಸಿದೆ. ನಿನ್ನ ಬಾಯಿಂದಲೇ ನೀನು ಆ ವಾಗ್ದಾನವನ್ನು ಮಾಡಿದೆ. ನೀನು ನಿನ್ನ ಮಹಾಶಕ್ತಿಯಿಂದ ಆ ವಾಗ್ದಾನವನ್ನು ಇಂದು ನೆರವೇರುವಂತೆ ಮಾಡಿದೆ. 25 ಈಗಲಾದರೋ ಇಸ್ರೇಲಿನ ದೇವರಾದ ಯೆಹೋವನೇ, ನಿನ್ನ ಸೇವಕನೂ ನನ್ನ ತಂದೆಯೂ ಆದ ದಾವೀದನಿಗೆ ನೀನು ಮಾಡಿದ ಇತರ ವಾಗ್ದಾನಗಳನ್ನು ಈಗ ನೆರವೇರಿಸು. ನೀನು ನನ್ನ ತಂದೆಗೆ, ‘ದಾವೀದನೇ, ನೀನು ನನ್ನನ್ನು ಅನುಸರಿಸಿದಂತೆ ನಿನ್ನ ಮಕ್ಕಳೂ ಎಚ್ಚರಿಕೆಯಿಂದ ನನ್ನನ್ನು ಅನುಸರಿಸಿದರೆ, ನಿನ್ನ ಕುಟುಂಬದಲ್ಲಿನ ಯಾವನಾದರೊಬ್ಬನು ಇಸ್ರೇಲಿನ ಜನರನ್ನು ಆಳುತ್ತಲೇ ಇರುವನು’ ಎಂದು ಹೇಳಿದೆ. 26 ಇಸ್ರೇಲಿನ ದೇವರಾದ ಯೆಹೋವನೇ, ನನ್ನ ತಂದೆಗೆ ನೀಡಿದ ಆ ವಾಗ್ದಾನವನ್ನು ನೆರವೇರಿಸೆಂದು ನಾನು ನಿನ್ನಲ್ಲಿ ಮತ್ತೆ ಬೇಡಿಕೊಳ್ಳುತ್ತೇನೆ.
27 “ದೇವರೇ, ನೀನು ನಿಜವಾಗಿಯೂ ನಮ್ಮೊಡನೆ ಭೂಲೋಕದಲ್ಲಿ ವಾಸಿಸುವೆಯಾ? ಆಕಾಶವೆಲ್ಲವೂ ಹಾಗೂ ಉನ್ನತೋನ್ನತವಾದ ಪರಲೋಕವೆಲ್ಲವೂ ನಿನ್ನನ್ನು ಹಿಡಿಸಲಾರವು. ಹೀಗಿರಲು, ನಾನು ನಿನಗಾಗಿ ನಿರ್ಮಿಸಿರುವ ಈ ಆಲಯವು ನಿನ್ನ ವಾಸಕ್ಕೆ ಖಂಡಿತವಾಗಿಯೂ ಸಾಲುವುದಿಲ್ಲ. 28 ಆದರೆ ದಯವಿಟ್ಟು ನನ್ನ ಪ್ರಾರ್ಥನೆಯನ್ನು ಮತ್ತು ಮನವಿಯನ್ನು ಕೇಳು. ನಾನು ನಿನ್ನ ಸೇವಕ. ಯೆಹೋವನೇ, ನೀನೇ ನನ್ನ ದೇವರು. ಇಂದು ನಿನಗೆ ನಾನು ಮಾಡುತ್ತಿರುವ ಈ ಪ್ರಾರ್ಥನೆಯನ್ನು ಲಾಲಿಸು. 29 ‘ಅಲ್ಲಿ ನಾನು ಸನ್ಮಾನಿಸಲ್ಪಡುವೆನು’ ಎಂದು ನೀನು ಬಹುಕಾಲದ ಹಿಂದೆ ಹೇಳಿರುವೆ. ಆದ್ದರಿಂದ ಈ ಆಲಯವನ್ನು ಹಗಲಿರುಳೂ ದೃಷ್ಟಿಸು. ನಾನು ಈ ಆಲಯದಲ್ಲಿ ನಿನಗೆ ಮಾಡುವ ಪ್ರಾರ್ಥನೆಯನ್ನು ದಯವಿಟ್ಟು ಕೇಳು. 30 ಯೆಹೋವನೇ, ನಾನು ಮತ್ತು ಇಸ್ರೇಲಿನ ಜನರೆಲ್ಲರೂ ಈ ಸ್ಥಳದ ಕಡೆಗೆ ತಿರುಗಿ, ನಿನ್ನಲ್ಲಿ ಪ್ರಾರ್ಥಿಸುತ್ತೇವೆ. ದಯವಿಟ್ಟು ಆ ಪ್ರಾರ್ಥನೆಗಳನ್ನು ಲಾಲಿಸು. ನೀನು ಪರಲೋಕದಲ್ಲಿ ವಾಸಿಸುತ್ತಿರುವಿಯೆಂದು ನಮಗೆ ಗೊತ್ತಿದೆ. ನೀನು ನಮ್ಮ ಪ್ರಾರ್ಥನೆಗಳನ್ನು ಅಲ್ಲಿಯೇ ಕೇಳಿ, ನಮಗೆ ಕ್ಷಮೆಯನ್ನು ಅನುಗ್ರಹಿಸು.
41-42 “ನಿನ್ನ ನಾಮಮಹತ್ತನ್ನು ಮತ್ತು ಶಕ್ತಿಯನ್ನು ಇತರ ಸ್ಥಳಗಳ ಜನರು ಕೇಳುತ್ತಾರೆ. ಈ ಆಲಯದಲ್ಲಿ ಪ್ರಾರ್ಥಿಸುವುದಕ್ಕಾಗಿ ಅವರು ದೂರದಿಂದ ಬರುತ್ತಾರೆ. 43 ನಿನ್ನ ನಿವಾಸವಾದ ಪರಲೋಕದಿಂದಲೇ ಅವರ ಪ್ರಾರ್ಥನೆಗಳನ್ನು ದಯವಿಟ್ಟು ಆಲಿಸು, ಅನ್ಯ ಸ್ಥಳದವರಾದ ಆ ಜನರು ನಿನ್ನಲ್ಲಿ ಬೇಡುವುದನ್ನೆಲ್ಲ ದಯವಿಟ್ಟು ಈಡೇರಿಸು. ಆಗ, ಇಸ್ರೇಲಿನ ಜನರಂತೆ ಭೂಲೋಕದವರೆಲ್ಲರಿಗೂ ನಿನ್ನ ಹೆಸರು ಗೊತ್ತಾಗುವುದು ಮತ್ತು ಅವರು ನಿನಗೆ ಭಯಪಡುವರು. ಈ ಆಲಯವನ್ನು ನಿನ್ನ ಗೌರವಕ್ಕಾಗಿ ನಾನು ಕಟ್ಟಿಸಿದೆನೆಂಬುದು ಆಗ ಎಲ್ಲಾ ಕಡೆಯ ಜನರಿಗೂ ತಿಳಿಯುವುದು.
ರಚನೆಗಾರರು: ಕೋರಹೀಯರು.
84 ಸೇನಾಧೀಶ್ವರನಾದ ಯೆಹೋವನೇ, ನಿನ್ನ ಆಲಯವು ಎಷ್ಟೋ ರಮ್ಯವಾಗಿದೆ.
2 ಯೆಹೋವನೇ, ನಿನ್ನ ಆಲಯದೊಳಗೆ ಪ್ರವೇಶಿಸಲು ಕಾತುರಗೊಂಡಿರುವೆ.
ನನ್ನ ಅಂಗಾಂಗಗಳೆಲ್ಲಾ ಚೈತನ್ಯಸ್ವರೂಪನಾದ ದೇವರೊಂದಿಗೆ ಇರಲು ಬಯಸುತ್ತಿವೆ.
3 ಸೇನಾಧೀಶ್ವರನಾದ ಯೆಹೋವನೇ, ನನ್ನ ರಾಜನೇ,
ನನ್ನ ದೇವರೇ, ಗುಬ್ಬಚ್ಚಿಗಳಿಗೂ ಪಾರಿವಾಳಗಳಿಗೂ ನಿನ್ನ ಆಲಯದಲ್ಲಿ ಗೂಡುಗಳಿವೆ.
ನಿನ್ನ ಯಜ್ಞವೇದಿಕೆಯ ಸಮೀಪದಲ್ಲಿಯೇ
ಗೂಡು ಕಟ್ಟಿಕೊಂಡು ಮರಿ ಮಾಡುತ್ತವೆ.
4 ನಿನ್ನ ಆಲಯದಲ್ಲಿ ವಾಸಿಸುವವರು ಭಾಗ್ಯವಂತರೇ ಸರಿ!
ಅವರು ನಿನ್ನನ್ನು ನಿತ್ಯವೂ ಸ್ತುತಿಸುತ್ತಿರುವರು.
5 ನಿನ್ನ ಶಕ್ತಿಯನ್ನೇ ಆಶ್ರಯಿಸಿಕೊಂಡು ಚೀಯೋನ್ ಪರ್ವತಕ್ಕೆ
ಯಾತ್ರಿಕರಾಗಿ ಬರಲು ಬಯಸುವವರು ಎಷ್ಟೋ ಭಾಗ್ಯವಂತರು.
6 ಒರತೆಯನ್ನಾಗಿ ಮಾಡಿರುವ ಬಾಕಾ ಕಣಿವೆಯ ಮೂಲಕ ಅವರು ಪ್ರಯಾಣಮಾಡುವರು.
ಮುಂಗಾರು ಮಳೆಯು ಅದನ್ನು ನೀರಿನ ತೊರೆಗಳಿಂದ ಸಮೃದ್ಧಿಗೊಳಿಸುವುದು.
7 ಜನರು ದೇವರನ್ನು ಸಂದರ್ಶಿಸಲು
ಊರಿಂದ ಊರಿಗೆ ಪ್ರಯಾಣ ಮಾಡುತ್ತಾ ಚೀಯೋನಿಗೆ ಬರುವರು.
8 ಸೇನಾಧೀಶ್ವರ ಯೆಹೋವ ದೇವರೇ, ನನ್ನ ಪ್ರಾರ್ಥನೆಗೆ ಕಿವಿಗೊಡು.
ಯಾಕೋಬನ ದೇವರೇ, ನನ್ನ ಮೊರೆಯನ್ನು ಕೇಳು.
9 ದೇವರೇ, ನಮಗೆ ಗುರಾಣಿಯಾಗಿರುವವನನ್ನು ನೋಡು.
ನೀನು ಅಭಿಷೇಕಿಸಿದವನಿಗೆ ಕರುಣೆತೋರು.
10 ಬೇರೊಂದು ಸ್ಥಳದಲ್ಲಿ ಸಾವಿರ ದಿನಗಳಿರುವುದಕ್ಕಿಂತಲೂ
ನಿನ್ನ ಆಲಯದಲ್ಲಿ ಒಂದು ದಿನವಿರುವುದೇ ಉತ್ತಮ.
ದುಷ್ಟರ ಮನೆಯಲ್ಲಿ ವಾಸಿಸುವುದಕ್ಕಿಂತಲೂ
ನನ್ನ ದೇವರ ಆಲಯದಲ್ಲಿ ದ್ವಾರಪಾಲಕನಾಗಿರುವುದೇ ಉತ್ತಮ.[a]
11 ಯೆಹೋವ ದೇವರು ನಮ್ಮ ಸಂರಕ್ಷಕನೂ ಮಹಿಮಾ ಪೂರ್ಣನಾದ ರಾಜನೂ ಆಗಿದ್ದಾನೆ.[b]
ಯೆಹೋವನು ನಮಗೆ ದಯೆಯನ್ನೂ ಘನತೆಯನ್ನೂ ಅನುಗ್ರಹಿಸುವನು.
ಆತನು ಎಲ್ಲಾ ಒಳ್ಳೆಯವುಗಳನ್ನು
ತನ್ನ ಭಕ್ತರಿಗೆ ಕೊಡುವನು.
12 ಸೇನಾಧೀಶ್ವರನಾದ ಯೆಹೋವನೇ, ನಿನ್ನಲ್ಲಿ ಭರವಸವಿಡುವವರು ಭಾಗ್ಯವಂತರೇ ಸರಿ!
ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ
10 ಕಡೇ ಮಾತೇನೆಂದರೆ, ಪ್ರಭುವಿನಲ್ಲಿಯೂ ಆತನ ಮಹಾಶಕ್ತಿಯಲ್ಲಿಯೂ ಬಲವಾಗಿರಿ. 11 ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ. ಆಗ ಸೈತಾನನ ಕುತಂತ್ರಗಳಿಗೆ ವಿರುದ್ಧವಾಗಿ ಹೋರಾಡಲು ನಿಮಗೆ ಸಾಧ್ಯವಾಗುವುದು. 12 ನಮ್ಮ ಹೋರಾಟವು ಜನರ ವಿರುದ್ಧವಲ್ಲ. ನಾವು ಅಂಧಕಾರದ ಅಧಿಪತಿಗಳಿಗೂ ಅಧಿಕಾರಿಗಳಿಗೂ ಮತ್ತು ಈ ಲೋಕದ ಕತ್ತಲೆಯ ಶಕ್ತಿಗಳಿಗೂ ಆಕಾಶಮಂಡಲದ ದುಷ್ಟಶಕ್ತಿಗಳಿಗೂ ವಿರುದ್ಧವಾಗಿ ಹೋರಾಡುತ್ತಿದ್ದೇವೆ. 13 ಆದಕಾರಣವೇ ನೀವು ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳಬೇಕು. ಆಗ ಯುದ್ಧದ ದಿನದಲ್ಲಿಯೂ ಹೋರಾಟವು ಸಂಪೂರ್ಣವಾಗಿ ಮುಗಿದಾದ ಮೇಲೆಯೂ ದೃಢವಾಗಿನಿಂತುಕೊಳ್ಳಲು ನಿಮಗೆ ಸಾಧ್ಯವಾಗುವುದು.
14 ಆದ್ದರಿಂದ ಸತ್ಯವೆಂಬ ನಡುಕಟ್ಟನ್ನು ಕಟ್ಟಿಕೊಂಡು ನೀತಿಯೆಂಬ ವಜ್ರಕವಚವನ್ನು ಎದೆಗೆ ಬಿಗಿದುಕೊಂಡು 15 ಸಮಾಧಾನದ ಸುವಾರ್ತೆಯೆಂಬ ಪಾದರಕ್ಷೆಯನ್ನು ಹಾಕಿಕೊಂಡು ದೃಢವಾಗಿ ನಿಂತುಕೊಳ್ಳಿರಿ. 16 ಅಲ್ಲದೆ ನಂಬಿಕೆಯೆಂಬ ಗುರಾಣಿಯನ್ನೂ ಹಿಡಿದುಕೊಳ್ಳಿರಿ. ಕೆಡುಕನ ಅಗ್ನಿಬಾಣಗಳನ್ನೆಲ್ಲಾ ತಡೆಯಲು ನಿಮಗೆ ಇದರಿಂದ ಸಾಧ್ಯವಾಗುವುದು. 17 ದೇವರ ರಕ್ಷಣೆಯನ್ನು ಶಿರಸ್ತ್ರಾಣವನ್ನಾಗಿ ಧರಿಸಿಕೊಳ್ಳಿರಿ. ಪವಿತ್ರಾತ್ಮನ ಖಡ್ಗವನ್ನು ಅಂದರೆ ದೇವರ ವಾಕ್ಯವನ್ನು ತೆಗೆದುಕೊಳ್ಳಿರಿ. 18 ನೀವು ಪವಿತ್ರಾತ್ಮನ ಸಹಾಯದಿಂದ ಯಾವಾಗಲೂ ದೇವರಲ್ಲಿ ಪ್ರಾರ್ಥಿಸುತ್ತಾ ಸಕಲವಿಧವಾದ ವಿಜ್ಞಾಪನೆಗಳನ್ನು ಮಾಡಿರಿ ಮತ್ತು ನಿಮಗೆ ಅಗತ್ಯವಾದವುಗಳಿಗಾಗಿ ಬೇಡಿಕೊಳ್ಳಿರಿ. ಇದಕ್ಕಾಗಿ ಯಾವಾಗಲೂ ಸಿದ್ಧರಾಗಿರಿ. ಪ್ರಾರ್ಥನೆಯನ್ನು ಬಿಟ್ಟುಕೊಡಬೇಡಿರಿ. ದೇವಜನರೆಲ್ಲರಿಗೋಸ್ಕರ ಯಾವಾಗಲೂ ಪ್ರಾರ್ಥಿಸಿರಿ.
19 ಅಲ್ಲದೆ ನನಗಾಗಿಯೂ ಪ್ರಾರ್ಥಿಸಿರಿ. ನಾನು ಮಾತಾಡುವಾಗ ಸುವಾರ್ತೆಯ ರಹಸ್ಯಸತ್ಯವನ್ನು ನಿರ್ಭಯದಿಂದ ತಿಳಿಸಲು ಬೇಕಾದ ಮಾತನ್ನು ದೇವರು ನನಗೆ ಅನುಗ್ರಹಿಸುವಂತೆ ಪ್ರಾರ್ಥಿಸಿರಿ. 20 ಸುವಾರ್ತೆಯನ್ನು ತಿಳಿಸುವುದೇ ನನ್ನ ಕೆಲಸ. ಈಗ ಸೆರೆಮನೆಯಲ್ಲಿಯೂ ನಾನು ಆ ಕೆಲಸವನ್ನು ಮಾಡುತ್ತಿದ್ದೇನೆ. ನಾನು ಯಾವ ರೀತಿ ಮಾತಾಡಬೇಕೋ ಅದೇ ರೀತಿ ನಿರ್ಭಯದಿಂದ ಮಾತಾಡಲು ಸಾಧ್ಯವಾಗುವಂತೆ ಪ್ರಾರ್ಥಿಸಿರಿ.
56 ನನ್ನ ದೇಹವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನು ನನ್ನಲ್ಲಿ ವಾಸಿಸುತ್ತಾನೆ. ನಾನು ಅವನಲ್ಲಿ ವಾಸಿಸುತ್ತೇನೆ.
57 “ತಂದೆಯೇ ನನ್ನನ್ನು ಕಳುಹಿಸಿದನು. ತಂದೆಯು ಜೀವಸ್ವರೂಪನಾಗಿದ್ದಾನೆ. ನಾನು ತಂದೆಯಿಂದಲೇ ಜೀವಿಸುತ್ತೇನೆ. ಆದ್ದರಿಂದ ನನ್ನನ್ನು ತಿನ್ನುವವನು ನನ್ನಿಂದಲೇ ಜೀವಿಸುವನು. 58 ನಮ್ಮ ಪಿತೃಗಳು ತಿಂದ ರೊಟ್ಟಿಯಂತಲ್ಲ ನಾನು. ಅವರು ಆ ರೊಟ್ಟಿಯನ್ನು ತಿಂದರೂ ಎಲ್ಲಾ ಜನರಂತೆ ಸತ್ತು ಹೋದರು. ನಾನು ಪರಲೋಕದಿಂದ ಇಳಿದುಬಂದ ರೊಟ್ಟಿ. ಈ ರೊಟ್ಟಿಯನ್ನು ತಿನ್ನುವವನು ಸದಾಕಾಲ ಜೀವಿಸುವನು,” ಎಂದು ಹೇಳಿದನು.
59 ಯೇಸು ಕಪೆರ್ನೌಮಿನ ಸಭಾಮಂದಿರದಲ್ಲಿ ಉಪದೇಶಿಸುತ್ತಿದ್ದಾಗ ಈ ಸಂಗತಿಗಳನ್ನೆಲ್ಲಾ ಹೇಳಿದನು.
ನಿತ್ಯಜೀವದ ನುಡಿಗಳು
60 ಇದನ್ನು ಕೇಳಿದ ಆತನ ಶಿಷ್ಯರಲ್ಲಿ ಅನೇಕರು, “ಈ ಉಪದೇಶವು ಕಠಿಣವಾಗಿದೆ. ಇದನ್ನು ಯಾರು ಗ್ರಹಿಸಿಕೊಳ್ಳಬಲ್ಲರು?” ಎಂದರು.
61 ತನ್ನ ಶಿಷ್ಯರು ಆಕ್ಷೇಪಿಸುತ್ತಿರುವುದನ್ನು ತಿಳಿದಿದ್ದ ಯೇಸು, “ಈ ಉಪದೇಶದಿಂದ ನಿಮಗೆ ಬೇಸರವಾಯಿತೇ? 62 ಹಾಗಾದರೆ ಮನುಷ್ಯಕುಮಾರನು ತಾನು ಬಿಟ್ಟುಬಂದ ಸ್ಥಳಕ್ಕೆ ಮರಳಿಹೋಗುವುದನ್ನು ನೀವು ನೋಡುವಾಗ ಬೇಸರಪಡುವಿರಾ? 63 ಒಬ್ಬನಿಗೆ ಜೀವವನ್ನು ಕೊಡುವಂಥದ್ದು ದೈಹಿಕ ಸಂಗತಿಗಳಲ್ಲ. ಜೀವವನ್ನು ಕೊಡುವಂಥದ್ದು ದೇವರಾತ್ಮ. ನಾನು ನಿಮಗೆ ಹೇಳಿದ ಸಂಗತಿಗಳು ಆತ್ಮಿಕ ಸಂಗತಿಗಳಾಗಿವೆ. ಆದ್ದರಿಂದ ಈ ಸಂಗತಿಗಳೇ ಜೀವವನ್ನು ಕೊಡುತ್ತವೆ. 64 ಆದರೆ ನಿಮ್ಮಲ್ಲಿ ಕೆಲವರು ನಂಬುವುದಿಲ್ಲ” ಎಂದು ಹೇಳಿದನು. (ತನ್ನನ್ನು ನಂಬಿಲ್ಲದವರು ಯಾರೆಂದೂ ತನಗೆ ದ್ರೋಹ ಮಾಡುವವನು ಯಾರೆಂದೂ ಯೇಸುವಿಗೆ ಮೊದಲಿಂದಲೂ ತಿಳಿದಿತ್ತು.) 65 ಇದಲ್ಲದೆ ಯೇಸು, “ತಂದೆಯ ಅನುಮತಿ ಇಲ್ಲದೆ ಯಾವನೂ ನನ್ನ ಬಳಿಗೆ ಬರಲಾರನು ಎಂದು ನಾನು ನಿಮಗೆ ಹೇಳಿದ್ದಕ್ಕೆ ಅದೇ ಕಾರಣ” ಎಂದನು.
66 ಯೇಸು ಈ ಸಂಗತಿಗಳನ್ನು ಹೇಳಿದ ಮೇಲೆ ಆತನ ಹಿಂಬಾಲಕರಲ್ಲಿ ಅನೇಕರು ಆತನನ್ನು ತೊರೆದುಬಿಟ್ಟರು. ಅವರು ಆತನನ್ನು ಹಿಂಬಾಲಿಸಲಿಲ್ಲ.
67 ಯೇಸು ತನ್ನ ಹನ್ನೆರಡು ಮಂದಿ ಶಿಷ್ಯರಿಗೆ, “ನೀವು ಸಹ ನನ್ನನ್ನು ಬಿಟ್ಟುಹೋಗಬೇಕೆಂದಿರುವಿರಾ?” ಎಂದು ಕೇಳಿದನು.
68 ಸೀಮೋನ್ ಪೇತ್ರನು ಯೇಸುವಿಗೆ, “ಪ್ರಭುವೇ, ನಾವೆಲ್ಲಿಗೆ ಹೋಗೋಣ? ನಿತ್ಯಜೀವವನ್ನು ಕೊಡುವ ಸಂಗತಿಗಳು ನಿನ್ನಲ್ಲಿವೆ. 69 ನಾವು ನಿನ್ನಲ್ಲಿ ನಂಬಿಕೆ ಇಡುತ್ತೇವೆ. ನೀನು ದೇವರಿಂದ ಬಂದ ಪರಿಶುದ್ಧನೆಂದು ನಮಗೆ ಗೊತ್ತಿದೆ” ಎಂದು ಉತ್ತರಕೊಟ್ಟನು.
Kannada Holy Bible: Easy-to-Read Version. All rights reserved. © 1997 Bible League International