Revised Common Lectionary (Semicontinuous)
ದಾವೀದನು ಬತ್ಷೆಬೆಳನ್ನು ಮದುವೆಯಾದನು
26 ತನ್ನ ಗಂಡನಾದ ಊರೀಯನು ಸತ್ತನೆಂಬ ಸುದ್ದಿಯು ಬತ್ಷೆಬೆಳಿಗೆ ತಿಳಿಯಿತು. ಆಗ ಅವಳು ತನ್ನ ಗಂಡನಿಗಾಗಿ ಗೋಳಾಡಿದಳು. 27 ಅವಳು ತನ್ನ ಶೋಕಕಾಲವನ್ನು ಮುಗಿಸಿದ ನಂತರ, ಅವಳನ್ನು ತನ್ನ ಮನೆಗೆ ಕರೆತರಲು ದಾವೀದನು ಸೇವಕರನ್ನು ಕಳುಹಿಸಿದನು. ಅವಳು ದಾವೀದನ ಪತ್ನಿಯಾದಳು. ಅವಳು ದಾವೀದನಿಂದ ಒಂದು ಗಂಡುಮಗುವಿಗೆ ಜನ್ಮನೀಡಿದಳು. ದಾವೀದನು ಮಾಡಿದ ಈ ಕೆಟ್ಟಕಾರ್ಯವು ಯೆಹೋವನಿಗೆ ದುಃಖವನ್ನುಂಟುಮಾಡಿತು.
ನಾತಾನನು ದಾವೀದನೊಂದಿಗೆ ಮಾತಾಡಿದ್ದು
12 ಯೆಹೋವನು ನಾತಾನನನ್ನು ದಾವೀದನ ಬಳಿಗೆ ಕಳುಹಿಸಿದನು. ನಾತಾನನು ದಾವೀದನ ಬಳಿಗೆ ಬಂದು, “ಒಂದು ನಗರದಲ್ಲಿ ಇಬ್ಬರು ಮನುಷ್ಯರಿದ್ದರು. ಒಬ್ಬನು ಶ್ರೀಮಂತ. ಆದರೆ ಮತ್ತೊಬ್ಬನು ತೀರಾ ಬಡವ. 2 ಶ್ರೀಮಂತನ ಹತ್ತಿರ ಅನೇಕ ಕುರಿಗಳು ಮತ್ತು ದನಗಳು ಇದ್ದವು. 3 ಆದರೆ ಬಡವನ ಹತ್ತಿರ ಅವನೇ ತಂದ ಒಂದು ಕುರಿಮರಿಯ ಹೊರತಾಗಿ ಬೇರೇನೂ ಇರಲಿಲ್ಲ. ಆ ಕುರಿಮರಿಯನ್ನು ಬಹು ಪ್ರೀತಿಯಿಂದ ಆ ಬಡವನು ಸಾಕಿದನು. ಅವನ ಮಕ್ಕಳೊಂದಿಗೆ ಈ ಕುರಿಮರಿಯೂ ಬೆಳೆಯಿತು. ಆ ಕುರಿಮರಿಯು ಬಡವನ ಊಟವನ್ನೇ ತಿನ್ನುತ್ತಿತ್ತು. ಅವನ ಬಟ್ಟಲಿನಲ್ಲಿಯೇ ಅದು ನೀರನ್ನು ಕುಡಿಯುತ್ತಿತ್ತು. ಅವನ ಎದೆಯ ಮೇಲೆಯೇ ಆ ಕುರಿಮರಿಯು ಮಲಗುತ್ತಿತ್ತು. ಆ ಕುರಿಮರಿಯು ಬಡವನಿಗೆ ಮಗಳಂತೆಯೇ ಇತ್ತು.
4 “ಆಗ ಶ್ರೀಮಂತನ ಮನೆಗೆ ಒಬ್ಬ ಪ್ರಯಾಣಿಕನು ಬಂದನು. ಶ್ರೀಮಂತನು ಆ ಪ್ರಯಾಣಿಕನಿಗೆ ಊಟವನ್ನು ಕೊಡಲು ಇಚ್ಛಿಸಿದನು. ಆದರೆ ಶ್ರೀಮಂತನು ಆ ಪ್ರಯಾಣಿಕನಿಗೆ ಕೊಡಲು ತನ್ನ ಸ್ವಂತ ಕುರಿಗಳಿಂದಾಗಲಿ ದನಗಳಿಂದಾಗಲಿ ಯಾವುದನ್ನೇ ಆಗಲಿ ತೆಗೆದುಕೊಳ್ಳಲು ಇಚ್ಛಿಸಲಿಲ್ಲ. ಶ್ರೀಮಂತನು ಆ ಬಡವನಿಂದ ಕುರಿಮರಿಯನ್ನು ತೆಗೆದುಕೊಂಡು ಅದನ್ನು ಕೊಯ್ಯಿಸಿ ತನ್ನ ಅತಿಥಿಗಾಗಿ ಅಡಿಗೆ ಮಾಡಿಸಿದನು” ಎಂದು ಹೇಳಿದನು.
5 ದಾವೀದನು ಶ್ರೀಮಂತನ ಮೇಲೆ ಬಹಳ ಕೋಪಗೊಂಡನು. ಅವನು ನಾತಾನನಿಗೆ, “ಯೆಹೋವನ ಆಣೆಯಾಗಿ ಈ ಕಾರ್ಯವನ್ನು ಮಾಡಿದ ಮನುಷ್ಯನು ಸಾಯಲೇಬೇಕು! 6 ಅವನು ಕರುಣೆಯಿಲ್ಲದೆ ಇಂತಹ ಕೆಟ್ಟಕಾರ್ಯವನ್ನು ಮಾಡಿದ್ದಕ್ಕಾಗಿ ಕುರಿಮರಿಯ ಬೆಲೆಯ ನಾಲ್ಕರಷ್ಟು ಹಿಂದಕ್ಕೆ ಕೊಡಲೇಬೇಕು” ಎಂದು ಹೇಳಿದನು.
ನಾತಾನನು ದಾವೀದನ ಪಾಪದ ಬಗ್ಗೆ ಹೇಳಿದನು
7 ಆಗ ನಾತಾನನು ದಾವೀದನಿಗೆ, “ನೀನೇ ಆ ಮನುಷ್ಯ! ಇಸ್ರೇಲರ ದೇವರಾದ ಯೆಹೋವನು ಹೀಗೆನ್ನುತ್ತಾನೆ: ‘ನಿನ್ನನ್ನು ಇಸ್ರೇಲರ ರಾಜನನ್ನಾಗಿ ಆರಿಸಿದವನು ನಾನೇ. ಸೌಲನಿಂದ ನಿನ್ನನ್ನು ರಕ್ಷಿಸಿದವನು ನಾನೇ. 8 ಅವನ ಕುಟುಂಬವನ್ನೂ ಅವನ ಪತ್ನಿಯರನ್ನೂ ನಿನಗೆ ಕೊಟ್ಟವನು ನಾನೇ. ನಿನ್ನನ್ನು ಇಸ್ರೇಲಿನ ಮತ್ತು ಯೆಹೂದದ ರಾಜನನ್ನಾಗಿ ಮಾಡಿದವನು ನಾನೇ. ಅದು ಸಾಲದು ಎನ್ನುವಂತೆ, ನಾನು ಮತ್ತಷ್ಟು ಹೆಚ್ಚಿನದನ್ನೂ ನೀಡಿದೆನು. 9 ನೀನು ಯೆಹೋವನ ಆಜ್ಞೆಯನ್ನು ಏಕೆ ಕಡೆಗಣಿಸಿದೆ? ಆತನು ತಪ್ಪೆಂದು ಹೇಳಿದ ಕಾರ್ಯವನ್ನು ಏಕೆ ಮಾಡಿದೆ? ಹಿತ್ತಿಯನಾದ ಊರೀಯನನ್ನು ಕತ್ತಿಯಿಂದ ನೀನು ಕೊಲ್ಲಿಸಿದೆ. ಅವನ ಪತ್ನಿಯನ್ನು ನಿನ್ನ ಪತ್ನಿಯನ್ನಾಗಿ ಸ್ವೀಕರಿಸಿದೆ. ಹೌದು, ನೀನು ಅಮ್ಮೋನಿಯರ ಕತ್ತಿಯಿಂದ ಊರೀಯನನ್ನು ಕೊಲ್ಲಿಸಿದೆ. 10 ನೀನು ಅವನ ಹೆಂಡತಿಯನ್ನು ತೆಗೆದುಕೊಂಡದ್ದರಿಂದ ಮತ್ತು ನನ್ನ ಆಜ್ಞೆಯನ್ನು ತಿರಸ್ಕರಿಸಿದ್ದರಿಂದ ಕತ್ತಿಯು ನಿನ್ನ ಕುಟುಂಬವನ್ನು ಸದಾ ಹಿಡಿದಿರುವುದು.’
11 “ಯೆಹೋವನು ಹೇಳುವುದೇನೆಂದರೆ: ‘ನಾನು ನಿನಗೆ ತೊಂದರೆಯನ್ನುಂಟುಮಾಡುತ್ತೇನೆ. ನಿನ್ನ ಸ್ವಂತ ಕುಟುಂಬದಿಂದಲೇ ಈ ತೊಂದರೆಯು ಬರುತ್ತದೆ. ನಾನು ನಿನ್ನ ಪತ್ನಿಯರನ್ನು ತೆಗೆದುಕೊಂಡು ನಿನಗೆ ತೀರ ಹತ್ತಿರನಾಗಿರುವ ಒಬ್ಬ ವ್ಯಕ್ತಿಗೆ ಕೊಡುತ್ತೇನೆ. ಅವನು ನಿನ್ನ ಪತ್ನಿಯರ ಜೊತೆಯಲ್ಲಿ ಮಲಗುತ್ತಾನೆ. ಇದು ಎಲ್ಲರಿಗೂ ತಿಳಿಯುತ್ತದೆ.[a] 12 ನೀನು ಬತ್ಷೆಬೆಳೊಂದಿಗೆ ಗುಟ್ಟಾಗಿ ಮಲಗಿದೆ. ಆದರೆ ನಾನು ಹೇಳುತ್ತಿರುವ ಮಾತೆಲ್ಲಾ ಇಸ್ರೇಲ್ ಜನರ ಕಣ್ಣೆದುರಿನಲ್ಲಿ ನಡೆಯುವುದು’”[b] ಎಂದು ಹೇಳಿದನು.
13 ಆಗ ದಾವೀದನು ನಾತಾನನಿಗೆ, “ನಾನು ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದೆನು” ಎಂದನು.
ನಾತಾನನು ದಾವೀದನಿಗೆ, “ಯೆಹೋವನು ನಿನ್ನ ಪಾಪವನ್ನು ಕ್ಷಮಿಸಿದ್ದಾನೆ. ನೀನು ಸಾಯುವುದಿಲ್ಲ.
ದಾವೀದನು ಬತ್ಷೆಬಳೊಂದಿಗೆ ವ್ಯಭಿಚಾರ ಮಾಡಿದಾಗ ಪ್ರವಾದಿಯಾದ ನಾತಾನನು ದಾವೀದನ ಬಳಿಗೆ ಹೋಗಿ ದೇವರ ನ್ಯಾಯತೀರ್ಪನ್ನು ಹೇಳುತ್ತಾನೆ. ಆಗ ಈ ಕೀರ್ತನೆ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.
51 ಪ್ರೀತಿಸ್ವರೂಪನಾದ ದೇವರೇ, ನನಗೆ ಕರುಣೆತೋರು;
ಕರುಣಾನಿಧಿಯೇ, ನನ್ನ ಪಾಪಗಳನ್ನೆಲ್ಲಾ ಅಳಿಸಿಬಿಡು.
2 ನನ್ನ ದೋಷವನ್ನು ತೊಳೆದುಬಿಡು.
ನನ್ನ ಪಾಪವನ್ನು ಪರಿಹರಿಸಿ ನನ್ನನ್ನು ಮತ್ತೆ ಶುದ್ಧೀಕರಿಸು!
3 ನಾನು ಪಾಪಮಾಡಿದ್ದೇನೆಂದು ನನಗೆ ಗೊತ್ತಿದೆ.
ಆ ಪಾಪಗಳು ನನ್ನ ಮುಂದೆಯೇ ಇವೆ.
4 ನಿನ್ನ ದೃಷ್ಟಿಗೆ ಕೆಟ್ಟದ್ದಾಗಿದ್ದನ್ನೇ ಮಾಡಿದ್ದೇನೆ.
ಹೌದು, ನಾನು ಪಾಪ ಮಾಡಿದ್ದು ನಿನಗೇ.
ನಾನು ತಪ್ಪಿತಸ್ಥನೆಂತಲೂ ನೀನು ನೀತಿವಂತನೆಂತಲೂ
ಜನರಿಗೆ ಗೊತ್ತಾಗಲೆಂದೇ ಇವುಗಳನ್ನು ಅರಿಕೆಮಾಡಿಕೊಳ್ಳುತ್ತಿದ್ದೇನೆ.
ನಿನ್ನ ತೀರ್ಪುಗಳು ನ್ಯಾಯಬದ್ಧವಾಗಿವೆ.
5 ಹುಟ್ಟಿದಂದಿನಿಂದ ನಾನು ಪಾಪಿಯೇ.
ಮಾತೃಗರ್ಭವನ್ನು ಪ್ರವೇಶಿಸಿದ ದಿನದಿಂದ ನಾನು ದ್ರೋಹಿಯೇ.
6 ದೇವರೇ, ನಾನು ನಿನಗೆ ನಂಬಿಗಸ್ತನಾಗಿರಬೇಕೆಂಬುದೇ ನಿನ್ನ ಅಪೇಕ್ಷೆ.
ಆದ್ದರಿಂದ ಸುಜ್ಞಾನದ ರಹಸ್ಯಗಳನ್ನು ನನಗೆ ಉಪದೇಶಿಸು.
7 ಹಿಸ್ಸೋಪ್ ಗಿಡದ ಬರಲಿನಿಂದ ನನ್ನನ್ನು ತೊಳೆದು ಶುದ್ಧೀಕರಿಸು;
ನಾನು ಹಿಮಕ್ಕಿಂತಲೂ ಬಿಳುಪಾಗುವ ತನಕ ನನ್ನನ್ನು ತೊಳೆ!
8 ನನ್ನಲ್ಲಿ ಆನಂದವನ್ನೂ ಉಲ್ಲಾಸವನ್ನೂ ಬರಮಾಡು.
ನೀನು ಜಜ್ಜಿಹಾಕಿದ ಮೂಳೆಗಳು ಮತ್ತೆ ಉಲ್ಲಾಸಿಸಲಿ!
9 ನನ್ನ ಪಾಪಗಳನ್ನು ನೋಡಬೇಡ!
ಅವುಗಳನ್ನೆಲ್ಲ ಅಳಿಸಿಬಿಡು!
10 ದೇವರೇ, ನನ್ನಲ್ಲಿ ಶುದ್ಧ ಹೃದಯವನ್ನು ನಿರ್ಮಿಸು!
ನನ್ನ ಆತ್ಮವನ್ನು ಮತ್ತೆ ಬಲಗೊಳಿಸಿ ನನ್ನನ್ನು ನೂತನಪಡಿಸು.
11 ನಿನ್ನ ಸನ್ನಿಧಿಯಿಂದ ನನ್ನನ್ನು ತಳ್ಳಿಬಿಡಬೇಡ!
ನಿನ್ನ ಪವಿತ್ರಾತ್ಮನನ್ನು ನನ್ನಿಂದ ತೆಗೆಯಬೇಡ!
12 ನಿನ್ನ ರಕ್ಷಣೆಯಿಂದುಂಟಾಗುವ ಆನಂದವನ್ನು ನನಗೆ ಮತ್ತೆ ದಯಪಾಲಿಸು!
ನಿನಗೆ ವಿಧೇಯನಾಗಿರಲು ನನ್ನ ಮನಸ್ಸನ್ನು ದೃಢಪಡಿಸು.
ದೇಹದ ಐಕ್ಯತೆ
4 ನಾನು ಪ್ರಭುವಿಗೆ ಸೇರಿದವನಾದ್ದರಿಂದ ಸೆರೆಯಲ್ಲಿದ್ದೇನೆ. ನೀವು ದೇವರಿಂದ ಕರಯಲ್ಪಟ್ಟಿದ್ದೀರಿ. ಆದ್ದರಿಂದ ನಿಮ್ಮ ಕರೆಯುವಿಕೆಗೆ ತಕ್ಕಂತೆ ಯೋಗ್ಯವಾಗಿ ಜೀವಿಸಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. 2 ಯಾವಾಗಲೂ ದೀನತೆಯಿಂದ, ಸಾತ್ವಿಕತೆಯಿಂದ ಮತ್ತು ತಾಳ್ಮೆಯಿಂದ ಕೂಡಿದವರಾಗಿದ್ದು ಒಬ್ಬರನ್ನೊಬ್ಬರು ಪ್ರೀತಿಯಿಂದ ಸಹಿಸಿಕೊಳ್ಳಿರಿ. 3 ನೀವು ಆತ್ಮನ ಮೂಲಕವಾಗಿ ಸಮಾಧಾನವೆಂಬ ಬಂಧನದಿಂದ ಒಂದಾಗಿದ್ದೀರಿ. ಈ ರೀತಿ ಜೀವಿಸಲು ನಿಮ್ಮಿಂದ ಸಾಧ್ಯವಾದಷ್ಟು ಪ್ರಯತ್ನಿಸಿ. ಸಮಾಧಾನವು ನಿಮ್ಮೆಲ್ಲರನ್ನು ಒಂದಾಗಿಸಲಿ. 4 ದೇಹವು ಒಂದೇ ಮತ್ತು ಆತ್ಮನು ಒಬ್ಬನೇ. ನೀವೆಲ್ಲರೂ ಒಂದೇ ನಿರೀಕ್ಷೆಯನ್ನು ಹೊಂದಿರಬೇಕೆಂದು ದೇವರು ನಿಮ್ಮನ್ನು ಕರೆದನು. 5 ಒಬ್ಬನೇ ಪ್ರಭು, ಒಂದೇ ನಂಬಿಕೆ, ಒಂದೇ ದೀಕ್ಷಾಸ್ನಾನ. 6 ಎಲ್ಲರಿಗೂ ತಂದೆಯಾಗಿರುವ ದೇವರು ಒಬ್ಬನೇ. ಆತನು ಸಮಸ್ತವನ್ನೂ ಆಳುತ್ತಾನೆ. ಆತನು ಸರ್ವವ್ಯಾಪಿಯಾಗಿದ್ದಾನೆ ಮತ್ತು ಎಲ್ಲರಲ್ಲಿ ವಾಸಿಸುವವನಾಗಿದ್ದಾನೆ.
7 ಕ್ರಿಸ್ತನು ನಮ್ಮಲ್ಲಿ ಪ್ರತಿಯೊಬ್ಬರಿಗೂ ವಿಶೇಷವಾದ ವರವನ್ನು ಕೊಟ್ಟಿದ್ದಾನೆ. ಪ್ರತಿಯೊಬ್ಬನು ಕ್ರಿಸ್ತನ ಇಷ್ಟಾನುಸಾರವಾಗಿ ವರವನ್ನು ಪಡೆದುಕೊಂಡಿದ್ದಾನೆ. 8 ಆದಕಾರಣವೇ ಪವಿತ್ರ ಗ್ರಂಥದಲ್ಲಿ ಈ ರೀತಿ ಬರೆದಿದೆ:
“ಆತನು ಆಕಾಶದ ಉನ್ನತಸ್ಥಾನಕ್ಕೆ ಏರಿಹೋದಾಗ,
ಶತ್ರುಗಳನ್ನು ಸೆರೆಯಾಳುಗಳಾಗಿ ಕೊಂಡೊಯ್ದು ಜನರಿಗೆ ದಾನಗಳನ್ನು ಮಾಡಿದನು.”(A)
9 “ಆತನು ಉನ್ನತಸ್ಥಾನಕ್ಕೆ ಏರಿಹೋದನು” ಎಂದರೆ ಆತನು ಭೂಲೋಕಕ್ಕೆ ಇಳಿದುಬಂದು, 10 ಭೂಮಿಯ ಅಧೋಭಾಗಕ್ಕೆ ಇಳಿದುಹೋಗಿ, ಅಲ್ಲಿಂದ ಆಕಾಶದ ಅತ್ಯುನ್ನತಸ್ಥಾನಕ್ಕೆ ಏರಿಹೋದನು ಎಂದರ್ಥ. ಸಮಸ್ತದಲ್ಲಿ ತಾನೇ ತುಂಬಿರಬೇಕೆಂದು ಕ್ರಿಸ್ತನು ಹಾಗೆ ಮಾಡಿದನು. 11 ಆತನು ಕೆಲವರನ್ನು ಅಪೊಸ್ತಲರನ್ನಾಗಿಯೂ ಕೆಲವರನ್ನು ಪ್ರವಾದಿಗಳನ್ನಾಗಿಯೂ ಕೆಲವರನ್ನು ಸುವಾರ್ತಿಕರನ್ನಾಗಿಯೂ ಕೆಲವರನ್ನು ಸಭಾಪಾಲಕರನ್ನಾಗಿಯೂ ಮತ್ತು ಉಪದೇಶಕರನ್ನಾಗಿಯೂ ನೇಮಿಸಿದನು. 12 ಸಭೆಯ ಸೇವೆಗೋಸ್ಕರ ದೇವರ ಪರಿಶುದ್ಧ ಜನರನ್ನು ಸಿದ್ಧಪಡಿಸುವುದಕ್ಕಾಗಿ ಆತನು ಅವರನ್ನು ನೇಮಿಸಿದನು. 13 ನಾವೆಲ್ಲರೂ ಒಂದೇ ನಂಬಿಕೆಯಿಂದಲೂ ದೇವಕುಮಾರನ ವಿಷಯವಾದ ಜ್ಞಾನದಿಂದಲೂ ಐಕ್ಯರಾಗುವತನಕ ಈ ಸೇವೆಯು ಮುಂದುವರಿಯಬೇಕು. ನಾವು ಪರಿಪೂರ್ಣರಾಗುವ ತನಕ ಅಂದರೆ ಕ್ರಿಸ್ತನ ಸರ್ವಸಂಪೂರ್ಣತೆಯನ್ನು ಮುಟ್ಟುವತನಕ ಬೆಳೆಯಬೇಕು.
14 ನಾವು ಇನ್ನು ಮೇಲೆ ಕೂಸುಗಳಾಗಿರಬಾರದು. ಸಮುದ್ರದ ಅಲೆಗಳಿಂದ ಅತ್ತಿಂದಿತ್ತ ಚಲಿಸುವ ಹಡಗಿನಂತೆ ಚಂಚಲರಾಗಿರಬಾರದು. ನಮ್ಮನ್ನು ವಂಚಿಸುವುದಕ್ಕಾಗಿ ಜನರು ಹೇಳುವ ಯಾವುದೇ ಹೊಸ ಉಪದೇಶದಿಂದಾಗಲಿ ನಾವು ಚಂಚಲರಾಗಬಾರದು. ಜನರನ್ನು ಮೋಸಗೊಳಿಸಿ ಕೆಟ್ಟದಾರಿಗೆ ನಡೆಸಬೇಕೆಂಬ ಉದ್ದೇಶದಿಂದ ಆ ದುರ್ಬೋಧಕರು ನಾನಾ ಬಗೆಯ ಕುತಂತ್ರವನ್ನು ಮಾಡುತ್ತಾರೆ. 15 ನಾವಾದರೊ ಸತ್ಯವನ್ನು ಪ್ರೀತಿಯಿಂದ ಹೇಳಬೇಕು; ಎಲ್ಲಾ ವಿಷಯಗಳಲ್ಲಿಯೂ ಬೆಳೆದು ಕ್ರಿಸ್ತನಂತಾಗಲು ಪ್ರಯತ್ನಿಸಬೇಕು. ಕ್ರಿಸ್ತನು ಶಿರಸ್ಸಾಗಿದ್ದಾನೆ ಮತ್ತು ನಾವು ದೇಹವಾಗಿದ್ದೇವೆ. 16 ಇಡೀ ದೇಹವು ಕ್ರಿಸ್ತನನ್ನು ಅವಲಂಬಿಸಿಕೊಂಡಿದೆ. ದೇಹದ ಒಂದೊಂದು ಅಂಗಗಳೂ ಒಂದಕ್ಕೊಂದು ಬಿಗಿದುಕೊಂಡಿವೆ. ಪ್ರತಿಯೊಂದು ಅಂಗವು ತನ್ನದೇ ಆದ ಕೆಲಸವನ್ನು ಮಾಡುವುದರಿಂದ ಇಡೀ ದೇಹವು ಬೆಳೆದು ಪ್ರೀತಿಯಲ್ಲಿ ಬಲವಾಗಿರಲು ಸಾಧ್ಯವಾಗುತ್ತದೆ.
24 ಯೇಸು ಮತ್ತು ಆತನ ಶಿಷ್ಯರು ಅಲ್ಲಿಲ್ಲದಿರುವುದನ್ನು ಜನರು ಕಂಡು ದೋಣಿಗಳನ್ನು ಹತ್ತಿ ಯೇಸುವನ್ನು ಹುಡುಕುತ್ತಾ ಕಪೆರ್ನೌಮಿಗೆ ಹೋದರು. ಅವರು ಯೇಸುವನ್ನು ಕಂಡುಕೊಳ್ಳಬೇಕೆಂದಿದ್ದರು.
ಯೇಸುವೇ ಜೀವದ ರೊಟ್ಟಿ
25 ಜನರು ಯೇಸುವನ್ನು ಸರೋವರದ ಆಚೆಯ ದಡದಲ್ಲಿ ಕಂಡುಕೊಂಡರು. ಅವರು ಆತನಿಗೆ, “ಗುರುವೇ, ನೀನು ಇಲ್ಲಿಗೆ ಯಾವಾಗ ಬಂದೆ?” ಎಂದು ಕೇಳಿದರು.
26 ಯೇಸು, “ನೀವು ನನ್ನನ್ನು ಏಕೆ ಹುಡುಕುತ್ತಿದ್ದೀರಿ? ನನ್ನ ಅಧಿಕಾರವನ್ನು ನಿರೂಪಿಸುವ ನನ್ನ ಅದ್ಭುತಕಾರ್ಯಗಳನ್ನು ಕಂಡು ನೀವು ನನ್ನನ್ನು ಹುಡುಕುತ್ತಿದ್ದೀರೋ? ಇಲ್ಲ! ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ರೊಟ್ಟಿಯನ್ನು ತೃಪ್ತಿಯಾಗುವಷ್ಟು ತಿಂದಕಾರಣ ನನ್ನನ್ನು ಹುಡುಕುತ್ತಿದ್ದೀರಿ. 27 ಈ ಲೋಕದ ಆಹಾರವು ಕೆಟ್ಟುಹೋಗುತ್ತದೆ ಮತ್ತು ಹಾಳಾಗುತ್ತದೆ. ಆದ್ದರಿಂದ ಅಂಥ ಆಹಾರವನ್ನು ಪಡೆದುಕೊಳ್ಳಲು ದುಡಿಯಬೇಡಿರಿ. ಆದರೆ ಎಂದಿಗೂ ಕೆಟ್ಟುಹೋಗದಂಥ ಮತ್ತು ನಿಮಗೆ ನಿತ್ಯಜೀವವನ್ನು ಕೊಡುವಂಥ ಆಹಾರವನ್ನು ಪಡೆದುಕೊಳ್ಳಲು ದುಡಿಯಿರಿ. ಮನುಷ್ಯಕುಮಾರನು ಆ ಆಹಾರವನ್ನು ನಿಮಗೆ ಕೊಡುವನು. ತಂದೆಯಾದ ದೇವರು ಆತನ ಮೇಲೆ ತನ್ನ ಅಧಿಕಾರದ ಮುದ್ರೆಯನ್ನು ಒತ್ತಿದ್ದಾನೆ” ಎಂದು ಹೇಳಿದನು.
28 ಜನರು ಯೇಸುವಿಗೆ, “ನಾವು ಯಾವ ಕಾರ್ಯಗಳನ್ನು ಮಾಡಬೇಕೆಂದು ದೇವರು ಬಯಸುತ್ತಾನೆ?” ಎಂದು ಕೇಳಿದರು.
29 ಯೇಸು, “ದೇವರು ಕಳುಹಿಸಿದಾತನನ್ನು ನೀವು ನಂಬಬೇಕು. ಈ ಕಾರ್ಯವನ್ನೇ ದೇವರು ನಿಮ್ಮಿಂದ ಅಪೇಕ್ಷಿಸುತ್ತಾನೆ” ಎಂದು ಉತ್ತರಕೊಟ್ಟನು.
30 ಆದ್ದರಿಂದ ಜನರು, “ದೇವರಿಂದ ಕಳುಹಿಸಲ್ಪಟ್ಟಾತನು ನೀನೇ ಎಂಬುದನ್ನು ನಿರೂಪಿಸುವುದಕ್ಕಾಗಿ ನೀನು ಯಾವ ಸೂಚಕಕಾರ್ಯವನ್ನು ಮಾಡುವೆ? 31 ನಮ್ಮ ಪಿತೃಗಳು ತಮಗೆ ದೇವರು ಮರುಭೂಮಿಯಲ್ಲಿ ಕೊಟ್ಟ ಮನ್ನವನ್ನು (ಆಹಾರವನ್ನು) ತಿಂದರು. ‘ದೇವರು ಅವರಿಗೆ ತಿನ್ನಲು ಪರಲೋಕದಿಂದ ರೊಟ್ಟಿಯನ್ನು ಕೊಟ್ಟನು’(A) ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ” ಎಂದು ಹೇಳಿದರು.
32 ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನಿಮ್ಮ ಜನರಿಗೆ ಪರಲೋಕದಿಂದ ರೊಟ್ಟಿಯನ್ನು ಕೊಟ್ಟವನು ಮೋಶೆಯಲ್ಲ. ಆದರೆ ನನ್ನ ತಂದೆಯು ನಿಮಗೆ ಪರಲೋಕದಿಂದ ನಿಜವಾದ ರೊಟ್ಟಿಯನ್ನು ಕೊಡುವನು. 33 ದೇವರ ರೊಟ್ಟಿ ಯಾವುದು? ಪರಲೋಕದಿಂದ ಇಳಿದುಬಂದು ಈ ಲೋಕಕ್ಕಾಗಿ ಜೀವವನ್ನು ಕೊಡುವಾತನೇ ದೇವರು ಕೊಡುವ ರೊಟ್ಟಿ” ಎಂದು ಹೇಳಿದನು.
34 ಜನರು, “ಅಯ್ಯಾ, ಆ ರೊಟ್ಟಿಯನ್ನು ನಮಗೆ ಯಾವಾಗಲೂ ಕೊಡು” ಎಂದು ಕೇಳಿಕೊಂಡರು.
35 ಅದಕ್ಕೆ ಯೇಸು, “ನಾನೇ ಜೀವಕೊಡುವ ರೊಟ್ಟಿ. ನನ್ನ ಬಳಿಗೆ ಬರುವವನಿಗೆ ಎಂದಿಗೂ ಹಸಿವೆಯಾಗದು. ನನ್ನಲ್ಲಿ ನಂಬಿಕೆ ಇಡುವವನಿಗೆ ಎಂದಿಗೂ ಬಾಯಾರಿಕೆಯಾಗದು.
Kannada Holy Bible: Easy-to-Read Version. All rights reserved. © 1997 Bible League International