Revised Common Lectionary (Semicontinuous)
16 ದೇವರು ದುಷ್ಟರಿಗೆ ಹೀಗೆನ್ನುವನು:
“ನೀವು ನನ್ನ ಕಟ್ಟಳೆಗಳ ಕುರಿತು ಮಾತಾಡುವಿರಿ;
ನನ್ನ ಒಡಂಬಡಿಕೆಯ ಕುರಿತು ಮಾತಾಡುವಿರಿ.
17 ಹೀಗಿರಲು ನೀವು ನನ್ನ ಸುಶಿಕ್ಷಣವನ್ನು ದ್ವೇಷಿಸುವುದೇಕೆ?
ನಾನು ಹೇಳುವುದನ್ನು ನೀವು ತುಚ್ಛೀಕರಿಸುವುದೇಕೆ?
18 ನೀವು ಕಳ್ಳನನ್ನು ಕಂಡು ಅವನೊಂದಿಗೆ ಸೇರಿಕೊಳ್ಳಲು ಓಡಿಹೋಗುವಿರಿ;
ವ್ಯಭಿಚಾರಿಗಳ ಒಡನಾಟ ಮಾಡುವಿರಿ.
19 ನಿಮ್ಮ ಬಾಯಿಂದ ಕೇಡನ್ನು ಕಲ್ಪಿಸುವಿರಿ.
ನಿಮ್ಮ ನಾಲಿಗೆಯಿಂದ ಮೋಸವನ್ನು ನೇಯುವಿರಿ.
20 ಬೇರೆಯವರ ಮೇಲೆಯೂ ನಿಮ್ಮ ಸಹೋದರರ ಮೇಲೆಯೂ
ಕೆಟ್ಟದ್ದನ್ನು ಹೇಳುತ್ತಲೇ ಇರುತ್ತೀರಿ.
21 ನೀವು ಹೀಗೆ ಮಾಡಿದರೂ ನಾನು ಮೌನವಾಗಿದ್ದೆನು.
ಆದ್ದರಿಂದ ನಾನೂ ನಿಮ್ಮಂಥವನೆಂದು ನೀವು ಆಲೋಚಿಸಿಕೊಂಡಿರಿ.
ಈಗಲಾದರೋ ನಾನು ಮೌನವಾಗಿರುವುದಿಲ್ಲ!
ಎಲ್ಲವನ್ನು ನಿಮಗೆ ವಿವರಿಸಿ ನಿಮ್ಮ ಮುಂದೆಯೇ ನಿಮ್ಮನ್ನು ಟೀಕಿಸುವೆನು!
22 ದೇವರನ್ನು ಮರೆತುಬಿಟ್ಟವರೇ,
ಇದನ್ನು ಗಮನಕ್ಕೆ ತಂದುಕೊಳ್ಳಿರಿ.
ಇಲ್ಲವಾದರೆ ನಿಮ್ಮನ್ನು ತುಂಡುತಂಡು ಮಾಡುವೆನು;
ಯಾರೂ ನಿಮ್ಮನ್ನು ರಕ್ಷಿಸಲಾರರು!
23 ನನಗೆ ಕೃತಜ್ಞತಾಯಜ್ಞವನ್ನು ಅರ್ಪಿಸುವವನೇ ನನ್ನನ್ನು ಸನ್ಮಾನಿಸುವವನು.
ಆದರೆ ನೀತಿವಂತನಾಗಿ ಜೀವಿಸುವವನಿಗೆ ನನ್ನ ರಕ್ಷಣಾಶಕ್ತಿಯನ್ನು ತೋರಿಸುವೆನು.”
ದಾವೀದ ಮತ್ತು ಬತ್ಷೆಬೆಳ ಮಗುವಿನ ಮರಣ
15 ನಾತಾನನು ಮನೆಗೆ ಹೋದನು. ದಾವೀದನಿಗೆ ಊರೀಯನ ಹೆಂಡತಿಯಲ್ಲಿ ಹುಟ್ಟಿದ ಗಂಡುಮಗುವಿಗೆ ಯೆಹೋವನು ಬಹಳ ಕಾಯಿಲೆಯನ್ನು ಬರಮಾಡಿದನು. 16 ದಾವೀದನು ಮಗುವಿಗಾಗಿ ದೇವರಲ್ಲಿ ಪ್ರಾರ್ಥಿಸಿದನು. ಅವನು ಉಪವಾಸ ಮಾಡಿದನು. ಅವನು ತನ್ನ ಮನೆಯೊಳಗೇ ಇದ್ದನು. ಅವನು ರಾತ್ರಿಯೆಲ್ಲ ನೆಲದ ಮೇಲೆಯೇ ಬಿದ್ದುಕೊಂಡಿದ್ದನು.
17 ದಾವೀದನ ಕುಟುಂಬದ ನಾಯಕರು ಬಂದು ಅವನನ್ನು ನೆಲದಿಂದ ಮೇಲಕ್ಕೆತ್ತಲು ಪ್ರಯತ್ನಿಸಿದರು. ಆದರೆ ದಾವೀದನು ಮೇಲೇಳಲಿಲ್ಲ. ಅವನು ಈ ನಾಯಕರೊಂದಿಗೆ ಊಟ ಮಾಡಲಿಲ್ಲ. 18 ಏಳನೆಯ ದಿನ ಆ ಮಗು ಸತ್ತಿತು. ಮಗು ಸತ್ತದ್ದನ್ನು ದಾವೀದನಿಗೆ ತಿಳಿಸಲು ಅವನ ಸೇವಕರು ಅಂಜಿದರು. ಅವರು, “ನೋಡಿ, ಮಗು ಜೀವಂತವಾಗಿರುವಾಗ ನಾವು ದಾವೀದನೊಂದಿಗೆ ಮಾತನಾಡಲು ಪ್ರಯತ್ನಿಸಿದೆವು. ಆದರೆ ಅವನು ನಮ್ಮ ಮಾತನ್ನು ಕೇಳಲಿಲ್ಲ. ಮಗುವು ಸತ್ತಿತೆಂದು ನಾವು ದಾವೀದನಿಗೆ ತಿಳಿಸಿದರೆ, ಬಹುಶಃ ಅವನು ತನಗೆ ಏನಾದರೂ ಕೇಡುಮಾಡಿಕೊಳ್ಳುತ್ತಾನೆ” ಎಂಬುದಾಗಿ ಮಾತಾಡಿಕೊಂಡರು.
19 ಆದರೆ ದಾವೀದನು ತನ್ನ ಸೇವಕರು ಗುಸುಗುಸು ಮಾತನಾಡುವುದನ್ನು ಕೇಳಿ, ಮಗು ಸತ್ತಿದೆಯೆಂಬುದನ್ನು ಅರ್ಥಮಾಡಿಕೊಂಡನು. ಆದ್ದರಿಂದ ದಾವೀದನು ತನ್ನ ಸೇವಕರನ್ನು ಕರೆದು, “ಮಗು ಸತ್ತುಹೋಯಿತೇ?” ಎಂದು ಕೇಳಿದನು.
“ಹೌದು, ಸತ್ತುಹೋಯಿತು” ಎಂದು ಸೇವಕರು ಉತ್ತರಿಸಿದರು.
20 ಆಗ ದಾವೀದನು ನೆಲದಿಂದ ಮೇಲಕ್ಕೆದ್ದನು. ಅವನು ತನ್ನನ್ನು ಶುಚಿಗೊಳಿಸಿಕೊಂಡನು. ಅವನು ತನ್ನ ಬಟ್ಟೆಗಳನ್ನು ಬದಲಿಸಿ ಬೇರೆ ಬಟ್ಟೆಗಳನ್ನು ಧರಿಸಿದನು. ನಂತರ ಅವನು ಯೆಹೋವನನ್ನು ಆರಾಧಿಸುವುದಕ್ಕಾಗಿ ಆತನ ಆಲಯಕ್ಕೆ ಹೋದನು. ಅವನು ಮನೆಗೆ ಹೋಗಿ ತಿನ್ನಲು ಏನನ್ನಾದರೂ ಕೊಡುವಂತೆ ಕೇಳಿದನು. ಅವನ ಸೇವಕರು ಕೊಟ್ಟ ಸ್ವಲ್ಪ ಆಹಾರವನ್ನು ಅವನು ತಿಂದನು.
21 ದಾವೀದನ ಸೇವಕರು ಅವನಿಗೆ, “ನೀನು ಹೀಗೇಕೆ ಮಾಡುತ್ತಿರುವೆ? ಮಗುವು ಇನ್ನೂ ಜೀವಂತವಾಗಿದ್ದಾಗ ನೀನು ಊಟಮಾಡಲಿಲ್ಲ. ನೀನು ಗೋಳಾಡಿದೆ, ಆದರೆ ಮಗುವು ಸತ್ತಮೇಲೆ ನೀನು ಮೇಲಕ್ಕೆದ್ದು ಊಟ ಮಾಡಿದೆ?” ಎಂದು ಕೇಳಿದರು.
22 ದಾವೀದನು, “ಮಗು ಜೀವದಿಂದ ಇರುವಾಗ ನಾನು ಊಟಮಾಡದೆ ಗೋಳಾಡಿದೆ, ಏಕೆಂದರೆ ‘ಒಂದುವೇಳೆ ಯೆಹೋವನು ನನ್ನ ಬಗ್ಗೆ ಅನುಕಂಪವನ್ನು ತೋರಿ ಮಗುವನ್ನು ಬದುಕಿಸಬಹುದು’ ಎಂದು ನಾನು ಯೋಚಿಸಿಕೊಂಡಿದ್ದೆ. 23 ಆದರೆ ಈಗ ಮಗು ಸತ್ತುಹೋಗಿದೆ. ಆದ್ದರಿಂದ ಈಗ ನಾನೇಕೆ ಉಪವಾಸಮಾಡಬೇಕು? ಆ ಮಗುವಿಗೆ ಮತ್ತೆ ನಾನು ಜೀವವನ್ನು ಕೊಡಲು ಸಾಧ್ಯವೇ? ಇಲ್ಲ! ಎಂದಾದರೂ ಒಂದು ದಿನ ನಾನು ಅವನ ಬಳಿಗೆ ಹೋಗುತ್ತೇನೆ. ಆದರೆ ಅವನು ನನ್ನ ಬಳಿಗೆ ಹಿಂದಿರುಗುವುದಿಲ್ಲ” ಎಂದನು.
ಸೊಲೊಮೋನನು ಹುಟ್ಟಿದ್ದು
24 ನಂತರ ದಾವೀದನು ತನ್ನ ಪತ್ನಿಯಾದ ಬತ್ಷೆಬೆಳನ್ನು ಸಂತೈಸಿ ಅವಳೊಂದಿಗೆ ಮಲಗಿಕೊಂಡನು. ಬತ್ಷೆಬೆಳು ಮತ್ತೆ ಗರ್ಭಿಣಿಯಾದಳು. ಅವಳಿಗೆ ಮತ್ತೊಂದು ಗಂಡು ಮಗುವಾಯಿತು. ಆ ಮಗುವಿಗೆ ಸೊಲೊಮೋನ್ ಎಂದು ದಾವೀದನು ಹೆಸರಿಟ್ಟನು. ಯೆಹೋವನು ಸೊಲೊಮೋನನನ್ನು ಪ್ರೀತಿಸಿದನು. 25 ಯೆಹೋವನು ಪ್ರವಾದಿಯಾದ ನಾತಾನನ ಮೂಲಕವಾಗಿ ಸಂದೇಶವನ್ನು ಕಳುಹಿಸಿದನು. ಯೆಹೋವನು ಆಜ್ಞಾಪಿಸಿದಂತೆ ನಾತಾನನು ಸೊಲೊಮೋನನಿಗೆ ಯೆದೀದ್ಯನೆಂದು ಹೆಸರಿಟ್ಟನು.
ನೀವು ಜೀವಿಸಬೇಕಾದ ರೀತಿ
17 ಪ್ರಭುವಿಗೋಸ್ಕರ ನಾನು ನಿಮಗೆ ಇದನ್ನು ಹೇಳುತ್ತೇನೆ ಮತ್ತು ಎಚ್ಚರಿಸುತ್ತೇನೆ. ಅವಿಶ್ವಾಸಿಗಳಂತೆ ಇನ್ನು ಮೇಲೆ ಜೀವಿಸದಿರಿ. ಅವರ ಆಲೋಚನೆಗಳು ನಿಷ್ಪ್ರಯೋಜಕವಾಗಿವೆ. 18 ಅವರು ಅರ್ಥ ಮಾಡಿಕೊಳ್ಳುವುದಿಲ್ಲ. ಅವರು ಕಿವಿಗೊಡದ ಕಾರಣ ಅವರಿಗೆ ಏನೂ ಗೊತ್ತಿಲ್ಲ. ಆದ್ದರಿಂದ ದೇವರು ಕೊಡುವ ಜೀವಿತವನ್ನು ಹೊಂದಿಕೊಳ್ಳಲು ಅವರಿಗೆ ಸಾಧ್ಯವಿಲ್ಲ. 19 ಅವರಿಗೆ ನಾಚಿಕೆಯೇ ಇಲ್ಲ. ಅವರು ತಮ್ಮ ಜೀವಿತಗಳನ್ನು ದುಷ್ಕೃತ್ಯಗಳಿಗೆ ಉಪಯೋಗಿಸುತ್ತಾರೆ; ಎಲ್ಲಾ ಬಗೆಯ ಕೆಟ್ಟಕಾರ್ಯಗಳನ್ನು ಇನ್ನೂ ಹೆಚ್ಚೆಚ್ಚಾಗಿ ಮಾಡಲು ತವಕಪಡುತ್ತಾರೆ. 20 ಆದರೆ ಕ್ರಿಸ್ತನಿಂದ ನೀವು ಕಲಿತುಕೊಂಡದ್ದು ಅವುಗಳನ್ನಲ್ಲ. 21 ನೀವು ಆತನ ವಿಷಯವಾಗಿ ಕೇಳಿದ್ದೀರೆಂಬುದು ನನಗೆ ಗೊತ್ತಿದೆ. ನೀವು ಆತನಲ್ಲಿರುವುದರಿಂದ ಸತ್ಯವನ್ನು ಕಲಿತುಕೊಂಡಿರಿ. ಹೌದು, ಸತ್ಯವು ಯೇಸುವಿನಲ್ಲಿದೆ. 22 ನೀವು ನಿಮ್ಮ ಹಿಂದಿನ ಕೆಟ್ಟ ನಡತೆಯನ್ನು ಬಿಟ್ಟುಬಿಡಬೇಕೆಂಬುದನ್ನು ಅಂದರೆ ನಿಮ್ಮ ಹಳೆಯ ಸ್ವಭಾವವನ್ನು ತೊರೆದುಬಿಡಬೇಕೆಂಬುದನ್ನು ಕಲಿತುಕೊಂಡಿರಿ. ಜನರು ತಾವು ಮಾಡ ಬಯಸುವ ದುಷ್ಕೃತ್ಯಗಳಿಂದ ವಂಚಿತರಾಗಿರುವುದರಿಂದ ಆ ಹಳೆಯ ಸ್ವಭಾವವು ದಿನದಿಂದ ದಿನಕ್ಕೆ ಮತ್ತಷ್ಟು ಕೆಟ್ಟು ಹೋಗುತ್ತದೆ. 23 ಆದರೆ ಆಂತರ್ಯದಲ್ಲಿ ಹೊಸಬರಾಗಿ ನೂತನ ಸ್ವಭಾವವನ್ನು ಹೊಂದಿಕೊಳ್ಳತಕ್ಕ ರೀತಿಯನ್ನು ನೀವು ಕಲಿತುಕೊಂಡಿರಿ. 24 ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ ಸತ್ಯವಾದ ನೀತಿಯುಳ್ಳದಾಗಿಯೂ ಪರಿಶುದ್ಧವಾಗಿಯೂ ನಿರ್ಮಿಸಲ್ಪಟ್ಟಿದೆ.
Kannada Holy Bible: Easy-to-Read Version. All rights reserved. © 1997 Bible League International