Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
2 ಸಮುವೇಲನು 18:5-9

ರಾಜನು ಯೋವಾಬನಿಗೆ, ಅಬೀಷೈಯನಿಗೆ ಮತ್ತು ಇತ್ತೈಯನಿಗೆ, “ನೀವು ನನಗೋಸ್ಕರವಾಗಿ ಯುವಕನಾದ ಅಬ್ಷಾಲೋಮನಿಗೆ ಕರುಣೆ ತೋರಿಸಿ!” ಎಂದು ಆಜ್ಞಾಪಿಸಿದನು. ಅಬ್ಷಾಲೋಮನ ಬಗ್ಗೆ ತನ್ನ ಸೇನಾಪತಿಗಳಿಗೆ ರಾಜನು ನೀಡಿದ ಆಜ್ಞೆಯು ಜನರೆಲ್ಲರಿಗೂ ಕೇಳಿಸಿತು.

ದಾವೀದನ ಸೈನ್ಯವು ಅಬ್ಷಾಲೋಮನ ಸೈನ್ಯವನ್ನು ಸೋಲಿಸಿತು

ದಾವೀದನ ಸೈನ್ಯವು ಇಸ್ರೇಲರಾದ ಅಬ್ಷಾಲೋಮನ ವಿರುದ್ಧ ಎಫ್ರಾಯೀಮ್ ಕಾಡಿನಲ್ಲಿ ಯುದ್ಧಮಾಡಿತು. ದಾವೀದನ ಸೈನ್ಯವು ಇಸ್ರೇಲರನ್ನು ಸೋಲಿಸಿತು. ಅಂದು ಇಪ್ಪತ್ತು ಸಾವಿರ ಜನರು ಕೊಲ್ಲಲ್ಪಟ್ಟರು. ಯುದ್ಧವು ದೇಶವನ್ನೆಲ್ಲ ವ್ಯಾಪಿಸಿತು. ಆದರೆ ಅಂದು ಕತ್ತಿಯಿಂದ ಸತ್ತ ಜನರಿಗಿಂತ ಹೆಚ್ಚು ಜನರು ಕಾಡಿನಲ್ಲಿ ಸತ್ತರು.

ಅಬ್ಷಾಲೋಮನು ದಾವೀದನ ಸೈನಿಕರ ಕೈಗೆ ಸಿಕ್ಕಿಕೊಂಡನು. ಅವನು ಹೇಸರಕತ್ತೆಯ ಮೇಲೆ ಸವಾರಿ ಮಾಡುತ್ತಾ ತಪ್ಪಿಸಿಕೊಳ್ಳಲು ಹೋದನು. ಆ ಹೇಸರಕತ್ತೆಯು ದೊಡ್ಡ ಓಕ್ ಮರದ ರೆಂಬೆಗಳ ಕೆಳಗೆ ಓಡುತ್ತಾ ಹೋಯಿತು. ಆ ರೆಂಬೆಗಳು ದಟ್ಟವಾಗಿದ್ದುದರಿಂದ ಅಬ್ಷಾಲೋಮನ ತಲೆಯು ಮರದಲ್ಲಿ ಸಿಕ್ಕಿಹಾಕಿಕೊಂಡಿತು. ಅವನು ಕುಳಿತುಕೊಂಡಿದ್ದ ಹೇಸರಕತ್ತೆಯು ಓಡಿಹೋದುದರಿಂದ ಅಬ್ಷಾಲೋಮನು ಮರದಲ್ಲಿ[a] ನೇತಾಡುವವನಾದನು.

2 ಸಮುವೇಲನು 18:15

15 ಯೋವಾಬನೊಂದಿಗೆ ಹತ್ತು ಮಂದಿ ಯುವಕರು ಅವನಿಗೆ ಯುದ್ಧದಲ್ಲಿ ಸಹಾಯ ಮಾಡಿದರು. ಈ ಹತ್ತು ಜನರೂ ಅಬ್ಷಾಲೋಮನನ್ನು ಸುತ್ತುವರಿದು ಅವನನ್ನು ಕೊಂದರು.

2 ಸಮುವೇಲನು 18:31-33

31 ಇಥಿಯೋಪ್ಯದವನು ಬಂದನು. ಅವನು, “ನನ್ನ ರಾಜನಾದ ಪ್ರಭುವಿಗೆ ಸುದ್ದಿಯಿದೆ, ನಿನ್ನ ವಿರುದ್ಧವಾಗಿದ್ದ ಜನರನ್ನು ಇಂದು ಯೆಹೋವನು ದಂಡಿಸಿದನು!” ಎಂದು ಹೇಳಿದನು.

32 ರಾಜನು ಅವನಿಗೆ, “ಯುವಕನಾದ ಅಬ್ಷಾಲೋಮನು ಕ್ಷೇಮವಾಗಿರುವನೇ?” ಎಂದು ಕೇಳಿದನು.

ಇಥಿಯೋಪ್ಯದವನು, “ನಿನ್ನ ಶತ್ರುಗಳು ಮತ್ತು ನಿನಗೆ ಕೇಡುಮಾಡಲು ನಿನಗೆ ವಿರುದ್ಧವಾಗಿ ಬಂದ ಜನರೆಲ್ಲರು ಈ ಯುವಕನಂತೆಯೇ ದಂಡಿಸಲ್ಪಡುವರು” ಎಂದು ಉತ್ತರಿಸಿದನು.

33 ಅಬ್ಷಾಲೋಮನು ಸತ್ತಿದ್ದಾನೆಂಬುದು ಆಗ ರಾಜನಿಗೆ ತಿಳಿಯಿತು. ರಾಜನು ಬಹಳ ತಳಮಳಗೊಂಡನು. ಅವನು ನಗರ ದ್ವಾರದಲ್ಲಿದ್ದ ಕೊಠಡಿಗೆ ಹೋಗಿ ಅಲ್ಲಿ ಗೋಳಾಡಿದನು. ಬಳಿಕ ಅಲ್ಲಿಂದ ತನ್ನ ಕೊಠಡಿಗೆ ಹೋಗುತ್ತಾ, “ನನ್ನ ಮಗನೇ, ಅಬ್ಷಾಲೋಮನೇ, ನನ್ನ ಮಗನಾದ ಅಬ್ಷಾಲೋಮನೇ! ನಿನಗೆ ಬದಲಾಗಿ ನಾನು ಸತ್ತಿದ್ದರೆ ಚೆನ್ನಾಗಿತ್ತು. ನನ್ನ ಮಗನಾದ ಅಬ್ಷಾಲೋಮನೇ, ನನ್ನ ಮಗನೇ!” ಎಂದು ಗೋಳಾಡಿದನು.

ಕೀರ್ತನೆಗಳು 130

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

130 ಯೆಹೋವನೇ, ಮಹಾ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡಿದ್ದೇನೆ;
    ಸಹಾಯಕ್ಕಾಗಿ ನಿನ್ನನ್ನೇ ಕೂಗಿಕೊಳ್ಳುತ್ತಿದ್ದೇನೆ.
ನನ್ನ ಒಡೆಯನೇ, ನನಗೆ ಕಿವಿಗೊಡು.
    ನನ್ನ ಮೊರೆಯನ್ನು ಆಲಿಸು.
ಯೆಹೋವನೇ, ನೀನು ಮನುಷ್ಯರನ್ನು ಅವರೆಲ್ಲರ ಪಾಪಗಳಿಗೆ ತಕ್ಕಂತೆ ದಂಡಿಸಿದರೆ
    ಒಬ್ಬನೂ ಜೀವಂತವಾಗಿ ಉಳಿಯಲಾರ.
ಯೆಹೋವನೇ, ನಿನ್ನ ಜನರನ್ನು ಕ್ಷಮಿಸು.
    ಆಗ, ನಿನ್ನನ್ನು ಆರಾಧಿಸುವುದಕ್ಕೆ ಜನರಿರುವರು.

ನಾನು ಯೆಹೋವನ ಸಹಾಯಕ್ಕಾಗಿ ಕಾಯುತ್ತಿದ್ದೇನೆ.
    ನನ್ನ ಪ್ರಾಣವು ಆತನಿಗಾಗಿ ಕಾದುಕೊಂಡಿರುವುದು.
    ಆತನು ನುಡಿಯನ್ನು ನಂಬಿಕೊಂಡಿದ್ದೇನೆ.
ನಾನು ನನ್ನ ಒಡೆಯನಿಗಾಗಿ ಮುಂಜಾನೆಗೋಸ್ಕರ ಎದುರುನೋಡುತ್ತಿರುವ
    ಕಾವಲುಗಾರರಂತೆ ನಿರೀಕ್ಷಿಸುತ್ತಿದ್ದೇನೆ.
ಇಸ್ರೇಲೇ, ಯೆಹೋವನಲ್ಲಿ ಭರವಸವಿಡು.
    ಆತನಲ್ಲಿ ಮಾತ್ರ ನಿಜವಾದ ಪ್ರೀತಿಯಿದೆ.
ಆತನು ನಮ್ಮನ್ನು ಯಾವಾಗಲೂ ರಕ್ಷಿಸುವನು.
    ಆತನೇ ಇಸ್ರೇಲರ ಎಲ್ಲಾ ಪಾಪಗಳನ್ನು ಕ್ಷಮಿಸುವನು.

ಎಫೆಸದವರಿಗೆ 4:25-5:2

25 ಆದ್ದರಿಂದ ನೀವು ಸುಳ್ಳು ಹೇಳದೆ ಒಬ್ಬರಿಗೊಬ್ಬರು ಯಾವಾಗಲೂ ಸತ್ಯವನ್ನೇ ಹೇಳಿರಿ. ಏಕೆಂದರೆ ನಾವೆಲ್ಲರೂ ಒಂದೇ ದೇಹಕ್ಕೆ ಸೇರಿದ ಅಂಗಗಳಾಗಿದ್ದೇವೆ. 26 ಕೋಪಗೊಂಡರೂ ಪಾಪ ಮಾಡಬೇಡಿ ಮತ್ತು ದಿನವೆಲ್ಲಾ ಕೋಪದಿಂದಿರಬೇಡಿ.(A) 27 ನಿಮ್ಮನ್ನು ಸೋಲಿಸಲು ಸೈತಾನನಿಗೆ ಅವಕಾಶಕೊಡಬೇಡಿ. 28 ಕಳ್ಳನು ಕದಿಯುವುದನ್ನು ನಿಲ್ಲಿಸಿ ತಾನೇ ದುಡಿದು ಸಂಪಾದಿಸಲಿ; ಅವನು ತನ್ನ ಕೈಗಳನ್ನು ಒಳ್ಳೆಯದನ್ನು ಮಾಡುವುದಕ್ಕಾಗಿ ಉಪಯೋಗಿಸಲಿ. ಆಗ ಬಡವರಿಗೂ ಸಹಾಯ ಮಾಡಲು ಅವನಿಗೆ ಸಾಧ್ಯವಾಗುವುದು.

29 ನಿಮ್ಮ ಬಾಯಿಂದ ಕೆಟ್ಟ ಮಾತುಗಳು ಬಾರದಿರಲಿ. ಭಕ್ತಿಯನ್ನು ವೃದ್ಧಿಮಾಡುವಂಥ ಕಾಲೋಚಿತವಾದ ಮಾತು ಇದ್ದರೆ ಕೇಳುವವರ ಹಿತಕ್ಕಾಗಿ ಅದನ್ನು ಆಡಿರಿ. 30 ಪವಿತ್ರಾತ್ಮನನ್ನು ದುಃಖಪಡಿಸಬೇಡಿ. ನೀವು ದೇವರಿಗೆ ಸೇರಿದವರೆಂಬುದಕ್ಕೆ ಆತನೇ ದೇವರ ಪ್ರಮಾಣವಾಗಿದ್ದಾನೆ. ಸೂಕ್ತ ಸಮಯದಲ್ಲಿ ನಿಮ್ಮನ್ನು ಬಿಡುಗಡೆ ಮಾಡುತ್ತೇನೆ ಎಂಬುದನ್ನು ತೋರಿಸುವುದಕ್ಕಾಗಿಯೇ ದೇವರು ನಿಮಗೆ ಆತನನ್ನು ಕೊಟ್ಟನು. 31 ಎಲ್ಲಾ ದ್ವೇಷ, ಕೋಪ, ಕ್ರೋಧ, ಕಲಹ, ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನವನ್ನೂ ನಿಮ್ಮಿಂದ ದೂರಮಾಡಿರಿ. 32 ಒಬ್ಬರಿಗೊಬ್ಬರು ಕರುಣೆ ತೋರಿರಿ. ಒಬ್ಬರನ್ನೊಬ್ಬರು ಪ್ರೀತಿಸಿರಿ. ದೇವರು ಕ್ರಿಸ್ತನಲ್ಲಿ ನಿಮ್ಮನ್ನು ಕ್ಷಮಿಸಿದಂತೆ ನೀವೂ ಒಬ್ಬರನ್ನೊಬ್ಬರು ಕ್ಷಮಿಸಿರಿ.

ನೀವು ದೇವರ ಪ್ರಿಯ ಮಕ್ಕಳಾಗಿದ್ದೀರಿ; ಆದ್ದರಿಂದ ನೀವು ಆತನನ್ನು ಅನುಸರಿಸಬೇಕು. ಪ್ರೀತಿಯಿಂದ ಬಾಳಿರಿ. ಕ್ರಿಸ್ತನು ನಮ್ಮನ್ನು ಪ್ರೀತಿಸಿದಂತೆ ನೀವೂ ಇತರರನ್ನು ಪ್ರೀತಿಸಿರಿ. ಕ್ರಿಸ್ತನು ನಮಗೋಸ್ಕರವಾಗಿ ತನ್ನನ್ನೇ ಪರಿಮಳದ ಕಾಣಿಕೆಯಾಗಿಯೂ ಯಜ್ಞವಾಗಿಯೂ ದೇವರಿಗೆ ಸಮರ್ಪಿಸಿಕೊಂಡನು.

ಯೋಹಾನ 6:35

35 ಅದಕ್ಕೆ ಯೇಸು, “ನಾನೇ ಜೀವಕೊಡುವ ರೊಟ್ಟಿ. ನನ್ನ ಬಳಿಗೆ ಬರುವವನಿಗೆ ಎಂದಿಗೂ ಹಸಿವೆಯಾಗದು. ನನ್ನಲ್ಲಿ ನಂಬಿಕೆ ಇಡುವವನಿಗೆ ಎಂದಿಗೂ ಬಾಯಾರಿಕೆಯಾಗದು.

ಯೋಹಾನ 6:41-51

41 ಯೆಹೂದ್ಯರು ಯೇಸುವಿನ ಬಗ್ಗೆ ಗುಣುಗುಟ್ಟಿದರು. “ಪರಲೋಕದಿಂದ ಇಳಿದುಬರುವ ರೊಟ್ಟಿಯೇ ನಾನು” ಎಂದು ಆತನು ಹೇಳಿದ್ದರಿಂದ ಅವರು ಆಕ್ಷೇಪಿಸಿದರು. 42 ಯೆಹೂದ್ಯರು, “ಇವನು ಯೇಸು. ಇವನ ತಂದೆತಾಯಿಗಳನ್ನು ನಾವು ಬಲ್ಲೆವು. ಇವನು ಕೇವಲ ಯೋಸೇಫನ ಮಗನು. ‘ನಾನು ಪರಲೋಕದಿಂದ ಇಳಿದುಬಂದೆನು’ ಎಂದು ಇವನು ಹೇಳುವುದಕ್ಕೆ ಹೇಗೆ ಸಾಧ್ಯ?” ಎಂದರು.

43 ಅದಕ್ಕೆ ಯೇಸು, “ನೀವು ಗುಣುಗುಟ್ಟುತ್ತಿರುವುದನ್ನು ನಿಲ್ಲಿಸಿರಿ. 44 ತಂದೆಯೇ ನನ್ನನ್ನು ಕಳುಹಿಸಿದನು ಮತ್ತು ತಂದೆಯೇ ನನ್ನ ಬಳಿಗೆ ಜನರನ್ನು ಕರೆತರುವನು. ಅಂತಿಮ ದಿನದಂದು ನಾನು ಆ ಜನರನ್ನು ಜೀವಂತವಾಗಿ ಎಬ್ಬಿಸುವೆನು. ತಂದೆಯು ನನ್ನ ಬಳಿಗೆ ಕರೆದುಕೊಂಡು ಬರದ ಹೊರತು ಯಾವನೂ ನನ್ನ ಬಳಿಗೆ ಬರಲಾರನು. 45 ‘ದೇವರು ಎಲ್ಲಾ ಜನರಿಗೆ ಉಪದೇಶಿಸುವನು’(A) ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ಜನರು ತಂದೆಗೆ ಕಿವಿಗೊಟ್ಟು ಆತನಿಂದ ಕಲಿತುಕೊಳ್ಳುವರು. ಆ ಜನರು ನನ್ನ ಬಳಿಗೆ ಬರುವರು. 46 ತಂದೆಯಿಂದ ಬಂದಿರುವಾತನು ಮಾತ್ರ ತಂದೆಯನ್ನು ನೋಡಿದವನಾಗಿದ್ದಾನೆ. ಬೇರೆ ಯಾವ ವ್ಯಕ್ತಿಯೂ ತಂದೆಯನ್ನು ಎಂದೂ ನೋಡಿಲ್ಲ.

47 “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನನ್ನನ್ನು ನಂಬಿರುವವನು ನಿತ್ಯಜೀವವನ್ನು ಹೊಂದಿದ್ದಾನೆ. 48 ನಾನೇ ಜೀವಕೊಡುವ ರೊಟ್ಟಿ. 49 ನಿಮ್ಮ ಪಿತೃಗಳು ತಮಗೆ ದೇವರು ಮರುಭೂಮಿಯಲ್ಲಿ ಕೊಟ್ಟ ಮನ್ನವನ್ನು ತಿಂದರು. ಆದರೆ ಎಲ್ಲಾ ಜನರಂತೆ ಅವರೂ ಸತ್ತುಹೋದರು. 50 ಪರಲೋಕದಿಂದ ಇಳಿದುಬರುವ ರೊಟ್ಟಿ ನಾನೇ. ಈ ರೊಟ್ಟಿಯನ್ನು ತಿನ್ನುವವನು ಎಂದಿಗೂ ಸಾಯುವುದಿಲ್ಲ. 51 ಪರಲೋಕದಿಂದ ಇಳಿದುಬಂದ ಜೀವವುಳ್ಳ ರೊಟ್ಟಿ ನಾನೇ. ಈ ರೊಟ್ಟಿಯನ್ನು ತಿನ್ನುವವನು ಶಾಶ್ವತವಾಗಿ ಜೀವಿಸುವನು. ಈ ರೊಟ್ಟಿಯೇ ನನ್ನ ದೇಹ. ಈ ಲೋಕದಲ್ಲಿರುವ ಜನರು ಜೀವವನ್ನು ಹೊಂದಿಕೊಳ್ಳಲೆಂದು ನಾನು ನನ್ನ ದೇಹವನ್ನೇ ಕೊಡುತ್ತೇನೆ” ಎಂದು ಉತ್ತರಕೊಟ್ಟನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International