Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 101

ರಚನೆಗಾರ: ದಾವೀದ.

101 ಆತನ ಪ್ರೀತಿಯನ್ನೂ ನೀತಿಯನ್ನೂ ಹಾಡಿಹರಸುವೆನು.
    ಯೆಹೋವನೇ, ನಿನಗೆ ಗಾಯನ ಮಾಡುವೆನು.
ನಾನು ಎಚ್ಚರಿಕೆಯಿಂದ ಪರಿಶುದ್ಧನಾಗಿ ಜೀವಿಸುವೆನು;
    ನನ್ನ ಮನೆಯಲ್ಲೂ ಪರಿಶುದ್ಧನಾಗಿರುವೆನು.
    ನೀನು ನನ್ನ ಬಳಿಗೆ ಬರುವುದು ಯಾವಾಗ?
ನನ್ನ ಎದುರಿನಲ್ಲಿ ಯಾವ ವಿಗ್ರಹಗಳೂ ಇಲ್ಲ.
    ನಿನಗೆ ದ್ರೋಹಮಾಡುವವರು ನನಗೆ ಅಸಹ್ಯ.
    ನಾನು ಅವರಂತೆ ಮಾಡುವುದಿಲ್ಲ!
ನಾನು ನಿನಗೆ ಯಥಾರ್ಥನಾಗಿರುವೆನು;
    ದುಷ್ಕೃತ್ಯಗಳನ್ನು ಮಾಡುವುದಿಲ್ಲ.
ನೆರೆಯವನ ಕುರಿತು ಗುಟ್ಟಾಗಿ
    ಚಾಡಿ ಹೇಳುವವನನ್ನು ನಾನು ತಡೆಯುವೆನು.
ಗರ್ವಪಡುವುದಕ್ಕಾಗಲಿ ತಮ್ಮನ್ನೇ ಉತ್ತಮರೆಂದು ಭಾವಿಸಿಕೊಳ್ಳುವುದಕ್ಕಾಗಲಿ
    ನಾನು ಅವರಿಗೆ ಅವಕಾಶ ಕೊಡುವುದಿಲ್ಲ.

ನಂಬಿಗಸ್ತರಿಗಾಗಿ ದೇಶದಲ್ಲೆಲ್ಲಾ ಹುಡುಕಿ ನೋಡುತ್ತೇನೆ.
    ನನ್ನ ಸೇವೆಗೆ ಅವರನ್ನೇ ನೇಮಿಸಿಕೊಳ್ಳುವೆನು.
    ಪರಿಶುದ್ಧರು ಮಾತ್ರ ನನ್ನ ಸೇವಕರಾಗಿರಲು ಸಾಧ್ಯ.
ನನ್ನ ಮನೆಯಲ್ಲಿ ವಾಸಿಸುವ ಸುಳ್ಳುಗಾರರಿಗೆ ಅವಕಾಶ ಕೊಡುವುದಿಲ್ಲ.
    ನನ್ನ ಸಮೀಪದಲ್ಲಿ ಇರುವುದಕ್ಕೂ ನಾನು ಅವರಿಗೆ ಆಸ್ಪದ ಕೊಡುವುದಿಲ್ಲ.
ಈ ದೇಶದಲ್ಲಿರುವ ದುಷ್ಟರನ್ನು ನಾನು ನಾಶಮಾಡುತ್ತೇನೆ.
    ಯೆಹೋವನ ಪಟ್ಟಣದಿಂದ ಕೆಡುಕರನ್ನು ಓಡಿಸುತ್ತೇನೆ.

1 ರಾಜರುಗಳು 3:16-28

16 ಒಂದು ದಿನ ಇಬ್ಬರು ವೇಶ್ಯೆಯರು ಸೊಲೊಮೋನನ ಹತ್ತಿರಕ್ಕೆ ಬಂದರು. ಅವರು ರಾಜನ ಎದುರಿನಲ್ಲಿ ನಿಂತರು. 17 ಒಬ್ಬ ಸ್ತ್ರೀಯು, “ಸ್ವಾಮಿ, ನಾನು ಮತ್ತು ಈ ಸ್ತ್ರೀಯು ಒಂದೇ ಮನೆಯಲ್ಲಿ ವಾಸಿಸುತ್ತಿದ್ದೇವೆ. ನಾವಿಬ್ಬರೂ ಗರ್ಭಿಣಿಯರಾಗಿದ್ದೆವು ಮತ್ತು ನಮ್ಮ ಮಕ್ಕಳಿಗೆ ಜನ್ಮಕೊಡಲು ಸಿದ್ಧರಾಗಿದ್ದೆವು. ಅವಳು ನನ್ನ ಹತ್ತಿರ ಇದ್ದಾಗ ನಾನು ನನ್ನ ಮಗುವಿಗೆ ಜನ್ಮನೀಡಿದೆ. 18 ಮೂರು ದಿನಗಳ ತರುವಾಯ, ಈ ಸ್ತ್ರೀಯೂ ತನ್ನ ಮಗುವಿಗೆ ಜನ್ಮನೀಡಿದಳು. ಮನೆಯಲ್ಲಿ ನಮ್ಮೊಡನೆ ಬೇರೆ ಯಾರೂ ಇರಲಿಲ್ಲ. ಅಲ್ಲಿ ನಾವಿಬ್ಬರೇ ಇದ್ದೆವು. 19 ಒಂದು ರಾತ್ರಿ, ಈ ಸ್ತ್ರೀಯು ಗಾಢನಿದ್ರೆಯಲ್ಲಿ ತನ್ನ ಮಗುವಿನ ಮೇಲೆ ಹೊರಳಿದ್ದರಿಂದ ಆ ಮಗು ಸತ್ತುಹೋಯಿತು. 20 ಅಂದು ರಾತ್ರಿ ನಾನು ಗಾಢನಿದ್ರೆಯಲ್ಲಿರುವಾಗ ಈಕೆಯು ನನ್ನ ಹಾಸಿಗೆಯಿಂದ ನನ್ನ ಮಗುವನ್ನು ತೆಗೆದುಕೊಂಡು ತನ್ನ ಹಾಸಿಗೆಗೆ ಹೋದಳು; ತನ್ನ ಸತ್ತ ಮಗುವನ್ನು ನನ್ನ ಹಾಸಿಗೆಯಲ್ಲಿಟ್ಟಳು. 21 ಮುಂಜಾನೆ ನಾನು ಎಚ್ಚರಗೊಂಡು ನನ್ನ ಮಗುವಿಗೆ ಹಾಲು ಕುಡಿಸಲು ಸಿದ್ಧಳಾದಾಗ ಮಗು ಸತ್ತುಹೋಗಿರುವುದನ್ನು ಕಂಡೆನು. ಆ ಮಗುವನ್ನು ನಾನು ಸೂಕ್ಷ್ಮವಾಗಿ ನೋಡಿದಾಗ ಆ ಮಗು ನನ್ನದಲ್ಲವೆಂಬುದು ನನಗೆ ತಿಳಿಯಿತು” ಎಂದು ಹೇಳಿದಳು.

22 ಆದರೆ ಇನ್ನೊಬ್ಬ ಸ್ತ್ರೀಯು, “ಇಲ್ಲ! ಜೀವಂತವಾಗಿರುವ ಮಗು ನನ್ನದು. ಸತ್ತಿರುವ ಮಗು ನಿನ್ನದು!” ಎಂದು ಹೇಳಿದಳು.

ಆದರೆ ಮೊದಲನೆಯ ಸ್ತ್ರೀಯು, “ಇಲ್ಲ! ನೀನು ಸುಳ್ಳು ಹೇಳುತ್ತಿರುವೆ! ಸತ್ತಿರುವ ಮಗು ನಿನ್ನದು. ಜೀವಂತವಾಗಿರುವ ಮಗು ನನ್ನದು!” ಎಂದು ಹೇಳಿದಳು. ಹೀಗೆ ಆ ಇಬ್ಬರು ಸ್ತ್ರೀಯರು ರಾಜನ ಎದುರಿನಲ್ಲಿ ವಾದಿಸಿದರು.

23 ಆಗ ರಾಜನಾದ ಸೊಲೊಮೋನನು, “ಜೀವಂತವಾಗಿರುವ ಮಗು ನನ್ನದೆಂದೂ ಸತ್ತಿರುವ ಮಗು ಅವಳದೆಂದೂ ನೀವಿಬ್ಬರೂ ಹೇಳುತ್ತಿದ್ದೀರಲ್ಲವೇ?” ಎಂದು ಹೇಳಿ, 24 ತನ್ನ ಸೇವಕರಿಗೆ, “ಒಂದು ಕತ್ತಿಯನ್ನು ತೆಗೆದುಕೊಂಡು ಬಂದು 25 ಜೀವಂತವಾಗಿರುವ ಮಗುವನ್ನು ಕತ್ತರಿಸಿ ಅವರಿಬ್ಬರಿಗೂ ಅರ್ಧರ್ಧ ಮಗುವನ್ನು ಕೊಟ್ಟುಬಿಡಿ” ಎಂದು ಆಜ್ಞಾಪಿಸಿದನು.

26 ಆಗ ಎರಡನೆಯ ಸ್ತ್ರೀಯು, “ಈಗ ಸರಿಹೋಯಿತು. ಮಗುವನ್ನು ಎರಡು ಹೋಳುಮಾಡಿ. ಆಗ ನಮ್ಮಿಬ್ಬರಿಗೂ ಅವನಿರುವುದಿಲ್ಲ” ಎಂದಳು. ಆದರೆ ಮೊದಲನೆಯ ಸ್ತ್ರೀಯು, ಅಂದರೆ, ತನ್ನ ಮಗುವಿನ ಮೇಲೆ ತುಂಬಾ ಪ್ರೀತಿಯನ್ನಿಟ್ಟಿದ ನಿಜವಾದ ತಾಯಿಯು ರಾಜನಿಗೆ, “ದಯವಿಟ್ಟು ಆ ಮಗುವನ್ನು ಕೊಲ್ಲಬೇಡಿ ಸ್ವಾಮಿ! ಅವಳಿಗೇ ಕೊಟ್ಟುಬಿಡಿ” ಎಂದು ಹೇಳಿದಳು.

27 ಆಗ ಸೊಲೊಮೋನನು, “ಮಗುವನ್ನು ಕೊಲ್ಲಬೇಡಿ! ಅದನ್ನು ಮೊದಲನೆಯ ಸ್ತ್ರೀಗೆ ಕೊಡಿ. ಅವಳೇ ನಿಜವಾದ ತಾಯಿ” ಎಂದು ಹೇಳಿದನು.

28 ಸೊಲೊಮೋನನ ತೀರ್ಪಿನ ವಿಚಾರವು ಇಸ್ರೇಲಿನ ಜನರಿಗೆ ತಿಳಿಯಿತು. ಅವನು ವಿವೇಕಿಯಾದುದರಿಂದ ಅವರು ಅವನನ್ನು ಗೌರವಿಸಿದರು ಮತ್ತು ಸನ್ಮಾನಿಸಿದರು. ಅವನು ದೇವರ ಜ್ಞಾನದಿಂದ ಸಮಂಜಸವಾದ ತೀರ್ಪು ನೀಡುತ್ತಾನೆಂದು ಅವರು ಕಂಡುಕೊಂಡರು.

ಅಪೊಸ್ತಲರ ಕಾರ್ಯಗಳು 6:1-7

ವಿಶೇಷ ಕಾರ್ಯಕ್ಕೆ ಏಳು ಮಂದಿಯ ಆಯ್ಕೆ

ಯೇಸುವಿನ ಶಿಷ್ಯರ ಸಂಖ್ಯೆಯು ಹೆಚ್ಚುಹೆಚ್ಚಾಗುತ್ತಿತ್ತು. ಆದರೆ ಈ ಸಮಯದಲ್ಲಿ ಗ್ರೀಕ್ ಮಾತಾಡುವ ಶಿಷ್ಯರು ಯೆಹೂದ್ಯ ಶಿಷ್ಯರಿಗೆ ದೂರು ಹೇಳಿದರು. ಪ್ರತಿದಿನ ಶಿಷ್ಯರಿಗೆ ಕೊಡುವಂಥವುಗಳಲ್ಲಿ ತಮ್ಮ ವಿಧವೆಯರಿಗೆ ಅವರ ಪಾಲು ದೊರೆಯುತ್ತಿಲ್ಲವೆಂದು ಅವರು ಆಪಾದಿಸಿದರು.

ಆಗ ಹನ್ನೆರಡು ಮಂದಿ ಅಪೊಸ್ತಲರು ಇಡೀ ಶಿಷ್ಯಸಮುದಾಯದ ಸಭೆಯನ್ನು ಕರೆದು ಅವರಿಗೆ, “ದೇವರ ವಾಕ್ಯವನ್ನು ಬೋಧಿಸುವುದು ನಮ್ಮ ಕೆಲಸ. ಆದರೆ ಅದು ನಿಂತುಹೋಗುವುದು ಸರಿಯಲ್ಲ! ನಾವು ಜನರಿಗೆ ಊಟವನ್ನು ಒದಗಿಸಲು ಸಹಾಯ ಮಾಡುವುದಕ್ಕಿಂತಲೂ ದೇವರ ವಾಕ್ಯೋಪದೇಶವನ್ನು ಮುಂದುವರಿಸುವುದು ಒಳ್ಳೆಯದು. ಆದ್ದರಿಂದ, ಸಹೋದರರೇ, ನಿಮ್ಮ ಜನರಲ್ಲಿ ಏಳು ಮಂದಿಯನ್ನು ಆರಿಸಿಕೊಳ್ಳಿರಿ. ಅವರು ಜನರಿಂದ ಒಳ್ಳೆಯವರು ಎನಿಸಿಕೊಂಡವರಾಗಿರಬೇಕು; ಜ್ಞಾನಪೂರ್ಣರಾಗಿರಬೇಕು ಮತ್ತು ಪವಿತ್ರಾತ್ಮಭರಿತರಾಗಿರಬೇಕು. ನಾವು ಅವರಿಗೆ ಈ ಕೆಲಸವನ್ನು ಒಪ್ಪಿಸಿಕೊಡುತ್ತೇವೆ. ಆಗ ನಾವು ನಮ್ಮ ಸಮಯವನ್ನೆಲ್ಲಾ ಪ್ರಾರ್ಥನೆಗೂ ದೇವರ ವಾಕ್ಯೋಪದೇಶಕ್ಕೂ ಕೊಡಲು ಸಾಧ್ಯವಾಗುತ್ತದೆ” ಎಂದು ಹೇಳಿದರು.

ಇಡೀ ಸಮುದಾಯವು ಈ ಆಲೋಚನೆಯನ್ನು ಇಷ್ಟಪಟ್ಟಿತು. ಆದ್ದರಿಂದ ಅವರು ಈ ಏಳು ಮಂದಿಯನ್ನು ಆರಿಸಿಕೊಂಡರು: ಸ್ತೆಫನ (ಮಹಾನಂಬಿಕೆಯುಳ್ಳ ಮತ್ತು ಪವಿತ್ರಾತ್ಮಭರಿತನಾಗಿದ್ದ ಮನುಷ್ಯ), ಫಿಲಿಪ್ಪ,[a] ಪ್ರೊಖೋರ, ನಿಕನೋರ, ತಿಮೋನ, ಪರ್ಮೇನ ಮತ್ತು ನಿಕೊಲಾಯ (ಮತಾಂತರ ಹೊಂದಿ ಯೆಹೂದ್ಯನಾಗಿದ್ದ ಇವನು ಅಂತಿಯೋಕ್ಯಕ್ಕೆ ಸೇರಿದವನು.) ಬಳಿಕ ಅವರು ಈ ಏಳು ಮಂದಿಯನ್ನು ಅಪೊಸ್ತಲರ ಮುಂದೆ ನಿಲ್ಲಿಸಿದರು. ಅಪೊಸ್ತಲರು ಪ್ರಾರ್ಥಿಸಿ, ಅವರ ತಲೆಗಳ ಮೇಲೆ ತಮ್ಮ ಕೈಗಳನ್ನಿಟ್ಟರು.

ದೇವರ ವಾಕ್ಯವು ಹೆಚ್ಚುಹೆಚ್ಚು ಜನರಿಗೆ ತಲುಪತೊಡಗಿತು. ಜೆರುಸಲೇಮಿನ ಶಿಷ್ಯಸಮುದಾಯವು ಹೆಚ್ಚುಹೆಚ್ಚು ದೊಡ್ಡದಾಗ ತೊಡಗಿತು. ಅನೇಕ ಯೆಹೂದ್ಯಯಾಜಕರು ನಂಬಿಕೊಂಡರು ಮತ್ತು ವಿಧೇಯರಾದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International