Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 57

ಗುಹೆಯಲ್ಲಿ ಸೌಲನಿಂದ ಪಾರಾದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ

57 ದೇವರೇ, ನನ್ನನ್ನು ಕರುಣಿಸು, ನನ್ನನ್ನು ಕನಿಕರಿಸು.
    ನನ್ನ ಆತ್ಮವು ನಿನ್ನನ್ನೇ ಆಶ್ರಯಿಸಿಕೊಂಡಿದೆ.
ಆಪತ್ತು ಕೊನೆಗೊಳ್ಳುವ ತನಕ ಸಂರಕ್ಷಣೆಗಾಗಿ
    ನಿನ್ನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುವೆನು.
ಸಹಾಯಕ್ಕಾಗಿ ಮಹೋನ್ನತನಾದ ದೇವರಿಗೆ ಮೊರೆಯಿಡುವೆನು.
    ಆತನು ಕೊರತೆಗಳನ್ನೆಲ್ಲಾ ನೀಗಿಸುವನು.
ಆತನು ಪರಲೋಕದಿಂದ ನನಗೆ ಸಹಾಯಮಾಡಿ,
    ನನ್ನನ್ನು ಕಾಡಿಸುವವರನ್ನು ಸೋಲಿಸುವನು.
ದೇವರು ತನ್ನ ಪ್ರೀತಿಯನ್ನೂ
    ನಂಬಿಗಸ್ತಿಕೆಯನ್ನೂ ತೋರ್ಪಡಿಸುವನು.

ನನ್ನ ಪ್ರಾಣವು ಅಪಾಯದಲ್ಲಿದೆ.
    ನನ್ನ ಶತ್ರುಗಳು ನನ್ನನ್ನು ಮುತ್ತಿಕೊಂಡಿದ್ದಾರೆ.
ಅವರು ಸಿಂಹಗಳಂತಿದ್ದಾರೆ.
    ಅವರ ಹಲ್ಲುಗಳು ಬಾಣಗಳಂತಿವೆ;
    ಅವರ ನಾಲಿಗೆಗಳು ಹರಿತವಾದ ಖಡ್ಗಗಳಂತಿವೆ.

ದೇವರೇ, ಪರಲೋಕದಲ್ಲಿ ನಿನ್ನ ಪ್ರಭಾವವು ಮೆರೆಯಲಿ.
    ನಿನ್ನ ಮಹಿಮೆಯು ಭೂಮಂಡಲವನ್ನೆಲ್ಲಾ ಆವರಿಸಿಕೊಳ್ಳಲಿ.
ನನ್ನನ್ನು ಬಂಧಿಸಲು
    ನನ್ನ ವೈರಿಗಳು ನನಗೆ ಬಲೆಯೊಡ್ಡಿದ್ದಾರೆ.
ನನ್ನನ್ನು ಬೀಳಿಸಲು ಕುಣಿ ತೋಡಿದರು.
    ಆದರೆ ಅವರೇ ಅದರಲ್ಲಿ ಬಿದ್ದುಹೋದರು.

ದೇವರೇ, ನನ್ನ ಹೃದಯವು ಸ್ಥಿರವಾಗಿದೆ; ನನ್ನ ಹೃದಯವು ದೃಢವಾಗಿದೆ.
    ನಾನು ವಾದ್ಯ ಬಾರಿಸುತ್ತಾ ಹಾಡುವೆನು.
ನನ್ನ ಮನವೇ, ಎಚ್ಚರಗೊಳ್ಳು!
    ಹಾರ್ಪ್ ಮತ್ತು ಲೈರ್ ವಾದ್ಯಗಳೇ, ಎಚ್ಚರಗೊಳ್ಳಿರಿ.
    ಸಂಕೀರ್ತನೆಯಿಂದ ಸೂರ್ಯೋದಯವನ್ನು ಎದುರುಗೊಳ್ಳೋಣ.
ನನ್ನ ಒಡೆಯನೇ, ಜನಾಂಗಗಳ ನಡುವೆ ನಿನ್ನನ್ನು ಕೊಂಡಾಡುವೆನು.
    ಎಲ್ಲಾ ದೇಶಗಳಲ್ಲಿ ನಿನಗೆ ಸ್ತುತಿಗೀತೆಗಳನ್ನು ಹಾಡುವೆನು.
10 ಯಾಕೆಂದರೆ ನಿನ್ನ ಪ್ರೀತಿಯು ಮುಗಿಲನ್ನು ಮುಟ್ಟುವಷ್ಟೂ
    ನಿನ್ನ ನಂಬಿಗಸ್ತಿಕೆಯು ಆಕಾಶವನ್ನು ನಿಲುಕುವಷ್ಟೂ ದೊಡ್ಡದಾಗಿದೆ.
11 ದೇವರೇ, ಪರಲೋಕದಲ್ಲಿ ನಿನ್ನ ಪ್ರಭಾವವು ಮೆರೆಯಲಿ.
    ನಿನ್ನ ಮಹಿಮೆಯು ಭೂಮಂಡಲವನ್ನೆಲ್ಲಾ ಆವರಿಸಿಕೊಳ್ಳಲಿ.

2 ಸಮುವೇಲನು 15:13-31

ಅಬ್ಷಾಲೋಮನ ಯೋಜನೆಗಳ ಬಗ್ಗೆ ದಾವೀದನಿಗೆ ತಿಳಿದದ್ದು

13 ಒಬ್ಬನು ದಾವೀದನಿಗೆ ಸುದ್ದಿಯನ್ನು ಹೇಳಲು ಒಳಗೆ ಬಂದು, “ಇಸ್ರೇಲಿನ ಜನರು ಅಬ್ಷಾಲೋಮನನ್ನು ಹಿಂಬಾಲಿಸಲಾರಂಭಿಸಿದ್ದಾರೆ” ಎಂದು ಹೇಳಿದನು.

14 ಆಗ ದಾವೀದನು ಜೆರುಸಲೇಮಿನಲ್ಲಿ ತನ್ನೊಂದಿಗಿದ್ದ ತನ್ನ ಸೇವಕರಿಗೆಲ್ಲ, “ನಾವು ತಪ್ಪಿಸಿಕೊಳ್ಳಲೇಬೇಕು! ನಾವು ತಪ್ಪಿಸಿಕೊಳ್ಳದಿದ್ದರೆ ಅಬ್ಷಾಲೋಮನು ನಮ್ಮನ್ನು ಹೋಗಗೊಡಿಸುವುದಿಲ್ಲ. ಅಬ್ಷಾಲೋಮನು ನಮ್ಮನ್ನು ಹಿಡಿಯುವುದಕ್ಕಿಂತ ಮೊದಲೇ ಇಲ್ಲಿಂದ ಹೋಗಿಬಿಡೋಣ. ಅವನು ನಮ್ಮೆಲ್ಲರನ್ನೂ ನಾಶಮಾಡುತ್ತಾನೆ; ಅವನು ಜೆರುಸಲೇಮಿನ ಜನರನ್ನು ಕೊಂದುಹಾಕುತ್ತಾನೆ” ಎಂದು ಹೇಳಿದನು.

15 ರಾಜನ ಸೇವಕರು ರಾಜನಿಗೆ, “ನಿನ್ನ ನಿರ್ಧಾರದಂತೆ ನಾವು ಮಾಡುತ್ತೇವೆ” ಎಂದರು.

ದಾವೀದನು ಮತ್ತು ಅವನ ಜನರು ತಪ್ಪಿಸಿಕೊಂಡದ್ದು

16 ರಾಜನಾದ ದಾವೀದನು ತನ್ನ ಮನೆಯಲ್ಲಿದ್ದ ಎಲ್ಲಾ ಜನರೊಂದಿಗೆ ಹೊರಟನು. ಮನೆಯ ಉಸ್ತುವಾರಿಯನ್ನು ನೋಡಿಕೊಳ್ಳುವುದಕ್ಕಾಗಿ ರಾಜನು ತನ್ನ ಹತ್ತು ಮಂದಿ ಪತ್ನಿಯರನ್ನು ಅಲ್ಲಿಯೇ ಬಿಟ್ಟು, 17 ತನ್ನ ಹಿಂಬಾಲಕರೊಂದಿಗೆ ಹೊರಟುಹೋದನು. ಅವನು ಕೊನೆಯ ಮನೆಯ ಹತ್ತಿರ ನಿಂತುಕೊಂಡನು. 18 ಅವನ ಸೇವಕರೆಲ್ಲ ರಾಜನನ್ನು ದಾಟಿ ಮುಂದೆ ಹೋದರು. ಕೆರೇತ್ಯರು, ಪೆಲೇತ್ಯರು ಮತ್ತು ಗಿತ್ತೀಯರು (ಗತ್‌ನ ಆರುನೂರು ಜನರು) ರಾಜನನ್ನು ದಾಟಿಹೋದರು.

19 ರಾಜನು ಗತ್‌ನ ಇತ್ತೈಯನಿಗೆ, “ನೀನು ಸಹ ನಮ್ಮೊಂದಿಗೆ ಏಕೆ ಬರುತ್ತಿರುವೆ? ಹಿಂದಿರುಗಿಹೋಗಿ, ಹೊಸ ರಾಜನೊಂದಿಗೆ ನೆಲೆಸು. ನೀನು ಹೊರದೇಶೀಯನು. ಇದು ನಿನ್ನ ಸ್ವದೇಶವಲ್ಲ. 20 ನೀನು ನನ್ನ ಜೊತೆ ಸೇರಿಕೊಳ್ಳಲು ಬಂದದ್ದು ನಿನ್ನೆಯಷ್ಟೇ. ನೀನು ಈಗ ನನ್ನೊಂದಿಗೆ ಬೇರೆಬೇರೆ ಸ್ಥಳಗಳಲ್ಲಿ ಅಲೆಯಬೇಕೇ? ಇಲ್ಲ! ನಿನ್ನ ಸೋದರರನ್ನೂ ನಿನ್ನ ಜೊತೆಯಲ್ಲಿ ಕರೆದುಕೊಂಡು ಹಿಂತಿರುಗಿಹೋಗು. ದಯೆಯೂ ನಂಬಿಗಸ್ತಿಕೆಯೂ ನಿನ್ನಲ್ಲಿ ತೋರಿಬರಲಿ” ಎಂದನು.

21 ಅದಕ್ಕೆ ಇತ್ತೈಯನು ರಾಜನಿಗೆ, “ಯೆಹೋವನಾಣೆ ಮತ್ತು ನಿನ್ನಾಣೆ, ನಾನಂತೂ ನಿನ್ನೊಂದಿಗೆ ಇರುತ್ತೇನೆ. ನನಗೆ ಜೀವ ಹೋದರೂ ಉಳಿದರೂ ನಿನ್ನೊಂದಿಗೆ ಇರುತ್ತೇನೆ” ಎಂದು ಹೇಳಿದನು.

22 ದಾವೀದನು ಇತ್ತೈಯನಿಗೆ, “ಬಾ, ಕಿದ್ರೋನ್ ಹಳ್ಳವನ್ನು ದಾಟೋಣ” ಎಂದನು.

ಗತ್‌ನ ಇತ್ತೈಯನೂ ಅವನ ಜನರೂ ಅವರ ಮಕ್ಕಳೆಲ್ಲರೂ ಕಿದ್ರೋನ್ ಹಳ್ಳವನ್ನು ದಾಟಿಹೋದರು. 23 ಜನರೆಲ್ಲರೂ ಜೋರಾಗಿ ಅಳುತ್ತಿದ್ದರು. ರಾಜನಾದ ದಾವೀದನು ಕಿದ್ರೋನ್ ಹಳ್ಳವನ್ನು ದಾಟಿಹೋದನು. ನಂತರ ಜನರೆಲ್ಲರೂ ಅರಣ್ಯಕ್ಕೆ ಹೋದರು. 24 ಚಾದೋಕನು ಮತ್ತು ಅವನೊಂದಿಗಿದ್ದ ಲೇವಿಯರೆಲ್ಲ ದೇವರ ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡಿದ್ದರು. ಅವರು ದೇವರ ಪವಿತ್ರ ಪೆಟ್ಟಿಗೆಯನ್ನು ಇಳಿಸಿದರು. ಜೆರುಸಲೇಮಿನಿಂದ ಜನರೆಲ್ಲರೂ ಹೊರಗೆ ಹೋಗುವವರೆಗೆ ಎಬ್ಯಾತಾರನು ಪ್ರಾರ್ಥನೆಗಳನ್ನು ಮಾಡಿದನು.

25 ರಾಜನಾದ ದಾವೀದನು ಚಾದೋಕನಿಗೆ, “ದೇವರ ಪವಿತ್ರ ಪೆಟ್ಟಿಗೆಯನ್ನು ಜೆರುಸಲೇಮಿಗೆ ಮತ್ತೆ ತೆಗೆದುಕೊಂಡು ಹೋಗು. ಯೆಹೋವನು ನನಗೆ ದಯಾಪರನಾಗಿದ್ದರೆ, ನನ್ನನ್ನು ಮತ್ತೆ ಬರಮಾಡುತ್ತಾನೆ. ಜೆರುಸಲೇಮನ್ನು ಮತ್ತು ಆತನ ಆಲಯವನ್ನು ಮತ್ತೆ ನಾನು ನೋಡುವ ಹಾಗೆ ಯೆಹೋವನು ಮಾಡುತ್ತಾನೆ. 26 ಆದರೆ ನನ್ನ ಮೇಲೆ ಯೆಹೋವನಿಗೆ ಇಷ್ಟವಿಲ್ಲವೆಂದು ತೋರಿದರೆ, ಆಗ ನನ್ನ ವಿರುದ್ಧವಾಗಿ ಆತನು ತನಗೆ ತೋಚಿದ್ದನ್ನು ಮಾಡಲಿ” ಎಂದನು.

27 ರಾಜನು ಯಾಜಕನಾದ ಚಾದೋಕನಿಗೆ, “ನೀನೊಬ್ಬ ದೇವದರ್ಶಿ. ಸಮಾಧಾನದಿಂದ ನಗರಕ್ಕೆ ಹಿಂದಿರುಗು. ನಿನ್ನ ಮಗನಾದ ಅಹೀಮಾಚನನ್ನು ಮತ್ತು ಎಬ್ಯಾತಾರನ ಮಗನಾದ ಯೋನಾತಾನನನ್ನು ನಿನ್ನೊಂದಿಗೆ ಕರೆದುಕೊಂಡು ಹೋಗು. 28 ಜನರು ಮರಳುಗಾಡಿಗೆ ದಾಟಿಹೋಗುವ ಸ್ಥಳದಲ್ಲಿ ನಾನು ಕಾದಿರುತ್ತೇನೆ. ನಾನು ನಿನ್ನಿಂದ ವರ್ತಮಾನ ಬರುವವರೆಗೆ ಅಲ್ಲಿ ಕಾದಿರುತ್ತೇನೆ” ಎಂದನು.

29 ಆದ್ದರಿಂದ ಚಾದೋಕನು ಮತ್ತು ಎಬ್ಯಾತಾರನು ದೇವರ ಪವಿತ್ರ ಪೆಟ್ಟಿಗೆಯನ್ನು ಹೊತ್ತುಕೊಂಡು ಜೆರುಸಲೇಮಿಗೆ ಹಿಂದಿರುಗಿ, ಅಲ್ಲಿಯೇ ಉಳಿದುಕೊಂಡರು.

ಅಹೀತೋಫೆಲನ ವಿರುದ್ಧವಾಗಿ ದಾವೀದನ ಪ್ರಾರ್ಥನೆ

30 ದಾವೀದನು ಆಲೀವ್ ಮರಗಳ ದಿಣ್ಣೆಯನ್ನೇರಿದನು. ಅವನು ಗೋಳಾಡುತ್ತಿದ್ದನು. ಅವನು ತಲೆಯ ಮೇಲೆ ಮುಸುಕೆಳೆದುಕೊಂಡು ಬರಿಗಾಲಿನಲ್ಲಿ ನಡೆದುಕೊಂಡು ಹೋದನು. ದಾವೀದನ ಜೊತೆಯಲ್ಲಿದ್ದ ಅವನ ಜನರೆಲ್ಲರೂ ತಲೆಯ ಮೇಲೆ ಮುಸುಕು ಹಾಕಿಕೊಂಡು ಗೋಳಾಡುತ್ತಾ ದಾವೀದನೊಂದಿಗೆ ಹೋದರು.

31 ಒಬ್ಬನು ದಾವೀದನಿಗೆ, “ಅಬ್ಷಾಲೋಮನ ಜೊತೆಯಲ್ಲಿ ಉಪಾಯಗಳನ್ನು ಮಾಡಿದ ಜನರಲ್ಲಿ ಅಹೀತೋಫೆಲನೂ ಒಬ್ಬನು” ಎಂದು ಹೇಳಿದನು. ಆಗ ದಾವೀದನು, “ಯೆಹೋವನೇ, ಅಹೀತೋಫೆಲನ ಸಲಹೆಗಳನ್ನು ವಿಫಲಗೊಳಿಸು” ಎಂದು ಪ್ರಾರ್ಥಿಸಿದನು.

ಎಫೆಸದವರಿಗೆ 5:1-14

ನೀವು ದೇವರ ಪ್ರಿಯ ಮಕ್ಕಳಾಗಿದ್ದೀರಿ; ಆದ್ದರಿಂದ ನೀವು ಆತನನ್ನು ಅನುಸರಿಸಬೇಕು. ಪ್ರೀತಿಯಿಂದ ಬಾಳಿರಿ. ಕ್ರಿಸ್ತನು ನಮ್ಮನ್ನು ಪ್ರೀತಿಸಿದಂತೆ ನೀವೂ ಇತರರನ್ನು ಪ್ರೀತಿಸಿರಿ. ಕ್ರಿಸ್ತನು ನಮಗೋಸ್ಕರವಾಗಿ ತನ್ನನ್ನೇ ಪರಿಮಳದ ಕಾಣಿಕೆಯಾಗಿಯೂ ಯಜ್ಞವಾಗಿಯೂ ದೇವರಿಗೆ ಸಮರ್ಪಿಸಿಕೊಂಡನು.

ಆದರೆ ನಿಮ್ಮ ಮಧ್ಯದಲ್ಲಿ ಲೈಂಗಿಕ ಪಾಪವಿರಕೂಡದು. ಯಾವ ಬಗೆಯ ದುಷ್ಟತ್ವವಾಗಲಿ ಸ್ವಾರ್ಥತೆಯಾಗಲಿ ಇರಕೂಡದು. ಏಕೆಂದರೆ ಅವುಗಳು ದೇವರ ಪರಿಶುದ್ಧ ಜನರಿಗೆ ಯೋಗ್ಯವಾದವುಗಳಲ್ಲ. ಅಲ್ಲದೆ ನಿಮ್ಮ ಮಧ್ಯದಲ್ಲಿ ಕೆಟ್ಟಮಾತುಗಳು ಇರಕೂಡದು. ನೀವು ಮೂರ್ಖತನದಿಂದ ಮಾತಾಡಕೂಡದು ಮತ್ತು ಹೊಲಸಾದ ಹಾಸ್ಯನುಡಿಗಳನ್ನು ಹೇಳಕೂಡದು. ಇವುಗಳು ನಿಮಗೆ ಯೋಗ್ಯವಾದವುಗಳಲ್ಲ. ಆದರೆ ನೀವು ದೇವರಿಗೆ ಸ್ತೋತ್ರ ಸಲ್ಲಿಸುವವರಾಗಿರಬೇಕು. ಇದು ನಿಮಗೆ ಚೆನ್ನಾಗಿ ತಿಳಿದಿರಲಿ: ಲೈಂಗಿಕ ಪಾಪಮಾಡುವವರಿಗೆ, ದುಷ್ಕೃತ್ಯಗಳನ್ನು ಮಾಡುವವರಿಗೆ, ಸ್ವಾರ್ಥಿಗಳಿಗೆ, ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಸ್ಥಳವೇ ಇಲ್ಲ. ಸ್ವಾರ್ಥತೆಯು ವಿಗ್ರಹಾರಾಧನೆಗೆ ಸಮಾನವಾಗಿದೆ.

ಅಸತ್ಯವಾದ ಸಂಗತಿಗಳನ್ನು ಹೇಳಿ ನಿಮ್ಮನ್ನು ಮೋಸಪಡಿಸಲು ಯಾರಿಗೂ ಅವಕಾಶ ಕೊಡಬೇಡಿ. ಆ ಕೆಟ್ಟಸಂಗತಿಗಳ ನಿಮಿತ್ತ ದೇವರ ಕೋಪವು ಆತನಿಗೆ ವಿಧೇಯರಾಗದ ಜನರ ಮೇಲೆ ಬರುತ್ತದೆ. ಆದ್ದರಿಂದ ನೀವು ಅಂಥ ಜನರೊಂದಿಗೆ ಪಾಲುಗಾರರಾಗಬೇಡಿ. ಹಿಂದಿನ ಕಾಲದಲ್ಲಿ ನೀವು ಕಗ್ಗತ್ತಲೆಯಾಗಿದ್ದಿರಿ. ಈಗಲಾದರೋ ನೀವು ಕರ್ತನಲ್ಲಿ ಪೂರ್ಣಬೆಳಕಾಗಿದ್ದೀರಿ. ಆದ್ದರಿಂದ ಬೆಳಕಿಗೆ ಸೇರಿದ ಮಕ್ಕಳಂತೆ ಜೀವಿಸಿರಿ. ಬೆಳಕಿನ ಫಲವು ಉಪಕಾರದಲ್ಲಿಯೂ ನೀತಿಯಲ್ಲಿಯೂ ಸತ್ಯದಲ್ಲಿಯೂ ಕಂಡುಬರುತ್ತದೆ. 10 ಪ್ರಭುವಿಗೆ ಯಾವುದು ಮೆಚ್ಚಿಕೆಯಾದದ್ದೆಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿ. 11 ಕತ್ತಲೆಯಲ್ಲಿರುವ ಜನರು ಮಾಡುವಂಥ ಕಾರ್ಯಗಳನ್ನು ಮಾಡಬೇಡಿ. ಅವುಗಳಿಂದ ಒಳ್ಳೆಯದೇನೂ ಆಗುವುದಿಲ್ಲ. ಆದರೆ ಕತ್ತಲೆಯಲ್ಲಿ ನಡೆಯುವ ಕಾರ್ಯಗಳು ತಪ್ಪಾದವುಗಳೆಂದು ತೋರಿಸಲು ಒಳ್ಳೆಯ ಕಾರ್ಯಗಳನ್ನು ಮಾಡಿರಿ. 12 ಆ ಜನರು ಕತ್ತಲೆಯಲ್ಲಿ ಮಾಡುವ ಗುಪ್ತಕಾರ್ಯಗಳ ಬಗ್ಗೆ ಮಾತಾಡುವುದಕ್ಕೂ ನಾಚಿಕೆಯಾಗುತ್ತದೆ. 13 ಆದರೆ ಆ ಕಾರ್ಯಗಳು ತಪ್ಪಾದವುಗಳೆಂದು ನಾವು ತೋರಿಸುವಾಗ ಬೆಳಕಿನಿಂದ ಆ ಕಾರ್ಯಗಳು ಸ್ಪಷ್ಟವಾಗಿ ಕಾಣಿಸುತ್ತವೆ. 14 ಪ್ರತಿಯೊಂದನ್ನು ಸ್ಪಷ್ಟವಾಗಿ ತೋರಿಸುವಂಥದ್ದೇ ಬೆಳಕು. ಆದ್ದರಿಂದಲೇ ಹೀಗೆ ಬರೆದದೆ:

“ನಿದ್ರೆಮಾಡುವವನೇ, ಎಚ್ಚರವಾಗು!
    ಸತ್ತವರನ್ನು ಬಿಟ್ಟು ಎದ್ದೇಳು,
ಕ್ರಿಸ್ತನು ನಿನ್ನ ಮೇಲೆ ಪ್ರಕಾಶಿಸುವನು.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International