Revised Common Lectionary (Semicontinuous)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.
130 ಯೆಹೋವನೇ, ಮಹಾ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡಿದ್ದೇನೆ;
ಸಹಾಯಕ್ಕಾಗಿ ನಿನ್ನನ್ನೇ ಕೂಗಿಕೊಳ್ಳುತ್ತಿದ್ದೇನೆ.
2 ನನ್ನ ಒಡೆಯನೇ, ನನಗೆ ಕಿವಿಗೊಡು.
ನನ್ನ ಮೊರೆಯನ್ನು ಆಲಿಸು.
3 ಯೆಹೋವನೇ, ನೀನು ಮನುಷ್ಯರನ್ನು ಅವರೆಲ್ಲರ ಪಾಪಗಳಿಗೆ ತಕ್ಕಂತೆ ದಂಡಿಸಿದರೆ
ಒಬ್ಬನೂ ಜೀವಂತವಾಗಿ ಉಳಿಯಲಾರ.
4 ಯೆಹೋವನೇ, ನಿನ್ನ ಜನರನ್ನು ಕ್ಷಮಿಸು.
ಆಗ, ನಿನ್ನನ್ನು ಆರಾಧಿಸುವುದಕ್ಕೆ ಜನರಿರುವರು.
5 ನಾನು ಯೆಹೋವನ ಸಹಾಯಕ್ಕಾಗಿ ಕಾಯುತ್ತಿದ್ದೇನೆ.
ನನ್ನ ಪ್ರಾಣವು ಆತನಿಗಾಗಿ ಕಾದುಕೊಂಡಿರುವುದು.
ಆತನು ನುಡಿಯನ್ನು ನಂಬಿಕೊಂಡಿದ್ದೇನೆ.
6 ನಾನು ನನ್ನ ಒಡೆಯನಿಗಾಗಿ ಮುಂಜಾನೆಗೋಸ್ಕರ ಎದುರುನೋಡುತ್ತಿರುವ
ಕಾವಲುಗಾರರಂತೆ ನಿರೀಕ್ಷಿಸುತ್ತಿದ್ದೇನೆ.
7 ಇಸ್ರೇಲೇ, ಯೆಹೋವನಲ್ಲಿ ಭರವಸವಿಡು.
ಆತನಲ್ಲಿ ಮಾತ್ರ ನಿಜವಾದ ಪ್ರೀತಿಯಿದೆ.
ಆತನು ನಮ್ಮನ್ನು ಯಾವಾಗಲೂ ರಕ್ಷಿಸುವನು.
8 ಆತನೇ ಇಸ್ರೇಲರ ಎಲ್ಲಾ ಪಾಪಗಳನ್ನು ಕ್ಷಮಿಸುವನು.
ಅಬ್ಷಾಲೋಮನಿಗೆ ಅನೇಕರು ಸ್ನೇಹಿತರಾದದ್ದು
15 ಇದಾದನಂತರ, ಅಬ್ಷಾಲೋಮನು ತನಗಾಗಿ ರಥವನ್ನೂ ಕುದರೆಗಳನ್ನೂ ಪಡೆದನು. ಅವನು ರಥವನ್ನು ನಡೆಸುವಾಗ ಅವನ ಮುಂದೆ ಓಡಲು ಐವತ್ತು ಜನರಿದ್ದರು. 2 ಅಬ್ಷಾಲೋಮನು ಹೊತ್ತಾರೆಯಲ್ಲಿಯೇ ಎದ್ದು ದ್ವಾರದ[a] ಹತ್ತಿರದಲ್ಲಿ ನಿಂತುಕೊಳ್ಳುತ್ತಿದ್ದನು. ತೊಂದರೆಯಲ್ಲಿ ಸಿಕ್ಕಿಕೊಂಡಿರುವ ಯಾವನಾದರೂ ತೀರ್ಪಿಗಾಗಿ ರಾಜನಾದ ದಾವೀದನ ಬಳಿಗೆ ಹೋಗುತ್ತಿರುವುದನ್ನು ಅಬ್ಷಾಲೋಮನು ಕಂಡರೆ ಅವನನ್ನು ತನ್ನ ಬಳಿಗೆ ಕರೆಯುತ್ತಿದ್ದನು. ಅಬ್ಷಾಲೋಮನು, “ನೀನು ಯಾವ ನಗರದಿಂದ ಬಂದೆ?” ಎಂದು ಕೇಳುತ್ತಿದ್ದನು. ಆ ಮನುಷ್ಯನು, “ನಾನು ಇಸ್ರೇಲಿನ ಇಂಥ ಕುಲಕ್ಕೆ ಸೇರಿದವನು” ಎಂದು ಉತ್ತರಿಸುತ್ತಿದ್ದನು. 3 ಆಗ ಅಬ್ಷಾಲೋಮನು ಆ ಮನುಷ್ಯನಿಗೆ, “ನೋಡು, ನಿನ್ನ ಬೇಡಿಕೆಗಳು ಸರಿಯಾಗಿವೆ. ಆದರೆ ರಾಜನಾದ ದಾವೀದನು ನಿನ್ನ ಮಾತುಗಳನ್ನು ಕೇಳುವುದಿಲ್ಲ” ಎಂದು ಹೇಳುತ್ತಿದ್ದನು.
4 ಅಲ್ಲದೆ ಅಬ್ಷಾಲೋಮನು, “ಯಾರಾದರೂ ನನ್ನನ್ನು ಈ ದೇಶದಲ್ಲಿ ನ್ಯಾಯಾಧೀಶನನ್ನಾಗಿ ಮಾಡಿದ್ದರೆ ಒಳ್ಳೆಯದಾಗುತ್ತಿತ್ತು. ತೀರ್ಪಿಗಾಗಿ ತಮ್ಮ ತೊಂದರೆಗಳೊಂದಿಗೆ ಬರುವ ಪ್ರತಿಯೊಬ್ಬನಿಗೂ ಆಗ ನಾನು ಸಹಾಯ ಮಾಡಬಹುದಾಗಿತ್ತು. ಅವನ ತೊಂದರೆಗೆ ತೃಪ್ತಿಕರವಾದ ಪರಿಹಾರವನ್ನು ನೀಡಲು ನಾನು ಸಹಾಯ ಮಾಡಬಹುದಾಗಿತ್ತು” ಎಂದು ಹೇಳುತ್ತಿದ್ದನು.
5 ಯಾವನಾದರೂ ಅಬ್ಷಾಲೋಮನ ಹತ್ತಿರಕ್ಕೆ ಬಂದು ಸಾಷ್ಟಾಂಗನಮಸ್ಕಾರಮಾಡಲು ಬಾಗಿದಾಗ, ಅಬ್ಷಾಲೋಮನು ಕೈಚಾಚಿ ಅವನನ್ನು ಅಪ್ಪಿಕೊಂಡು ಮುದ್ದಿಡುತ್ತಿದ್ದನು. 6 ರಾಜನಾದ ದಾವೀದನ ಬಳಿಗೆ ತೀರ್ಪಿಗಾಗಿ ಬರುವ ಎಲ್ಲಾ ಇಸ್ರೇಲರಿಗೆ ಅಬ್ಷಾಲೋಮನು ಇದೇ ರೀತಿ ಮಾಡುತ್ತಿದ್ದನು. ಹೀಗೆ, ಅಬ್ಷಾಲೋಮನು ಇಸ್ರೇಲಿನ ಜನರೆಲ್ಲರ ಹೃದಯಗಳನ್ನು ಗೆದ್ದುಕೊಂಡನು.
ದಾವೀದನ ರಾಜ್ಯಾಧಿಕಾರವನ್ನು ಪಡೆದುಕೊಳ್ಳಲು ಅಬ್ಷಾಲೋಮನ ಆಲೋಚನೆ
7 ನಾಲ್ಕು ವರ್ಷಗಳ ಬಳಿಕ[b] ಅಬ್ಷಾಲೋಮನು ರಾಜನಾದ ದಾವೀದನಿಗೆ, “ನಾನು ಹೆಬ್ರೋನಿನಲ್ಲಿ ಯೆಹೋವನೊಂದಿಗೆ ಮಾಡಿದ ವಿಶೇಷ ಪ್ರಮಾಣವನ್ನು ಪೂರ್ಣಗೊಳಿಸುವುದಕ್ಕೆ ದಯವಿಟ್ಟು ಅನುಮತಿಕೊಡು. 8 ನಾನು ಅರಾಮಿನ ಗೆಷೂರಿನಲ್ಲಿ ನೆಲೆಸಿದ್ದಾಗ, ‘ಯೆಹೋವನು ನನ್ನನ್ನು ಜೆರುಸಲೇಮಿಗೆ ಮತ್ತೆ ಕರೆಸಿಕೊಂಡರೆ, ನಾನು ಯೆಹೋವನ ಆರಾಧನೆ ಮಾಡುತ್ತೇನೆ, ಎಂಬ ವಿಶೇಷ ಪ್ರಮಾಣವನ್ನು ಮಾಡಿದ್ದೆನು’” ಎಂದನು.
9 “ಸಮಾಧಾನದಿಂದ ಹೋಗು” ಎಂದು ರಾಜನಾದ ದಾವೀದನು ಹೇಳಿದನು.
ಅಬ್ಷಾಲೋಮನು ಹೆಬ್ರೋನಿಗೆ ಹೋದನು. 10 ಆದರೆ ಅಬ್ಷಾಲೋಮನು ಇಸ್ರೇಲಿನ ಎಲ್ಲಾ ಕುಲಗಳಿಗೂ ಗೂಢಚಾರರನ್ನು ಕಳುಹಿಸಿದನು. ಈ ಗೂಢಚಾರರು ಜನರಿಗೆ, “ನೀವು ಕಹಳೆಯ ಧ್ವನಿಯನ್ನು ಕೇಳಿದಾಗ, ‘ಅಬ್ಷಾಲೋಮನು ಹೆಬ್ರೋನಿನಲ್ಲಿ ರಾಜನಾದ’ನೆಂದು ಹೇಳಿ” ಎಂಬುದಾಗಿ ತಿಳಿಸಿದರು.
11 ಅಬ್ಷಾಲೋಮನು ತನ್ನೊಂದಿಗೆ ಬರಲು ಇನ್ನೂರು ಜನರನ್ನು ಆಹ್ವಾನಿಸಿದನು. ಆ ಜನರು ಜೆರುಸಲೇಮನ್ನು ಬಿಟ್ಟು ಅವನೊಂದಿಗೆ ಹೊರಟರು. ಆದರೆ ಅವನು ಯೋಚಿಸಿದ ಕಾರ್ಯವು ಅವರಿಗೆ ತಿಳಿದಿರಲಿಲ್ಲ. 12 ಅಹೀತೋಫೆಲನೆಂಬವನು ದಾವೀದನ ಸಲಹೆಗಾರರಲ್ಲಿ ಒಬ್ಬನಾಗಿದ್ದನು. ಅಹೀತೋಫೆಲನು ಗೀಲೋವ ಎಂಬ ಪಟ್ಟಣದವನು. ಅಬ್ಷಾಲೋಮನು ಯಜ್ಞಗಳನ್ನು ಅರ್ಪಿಸುತ್ತಿರುವಾಗ ಅಹೀತೋಫೆಲನನ್ನು ಅವನ ಪಟ್ಟಣವಾದ ಗೀಲೋವದಿಂದ ಕರೆಯಿಸಿದನು. ಜನರು ಅಬ್ಷಾಲೋಮನನ್ನು ಕೂಡಿಕೊಳ್ಳುತ್ತಾ ಬಂದದ್ದರಿಂದ ಅವನು ಮಾಡಿದ ಒಳಸಂಚು ಸಫಲವಾಗತೊಡಗಿತು.
ಅಬ್ಷಾಲೋಮನ ಯೋಜನೆಗಳ ಬಗ್ಗೆ ದಾವೀದನಿಗೆ ತಿಳಿದದ್ದು
13 ಒಬ್ಬನು ದಾವೀದನಿಗೆ ಸುದ್ದಿಯನ್ನು ಹೇಳಲು ಒಳಗೆ ಬಂದು, “ಇಸ್ರೇಲಿನ ಜನರು ಅಬ್ಷಾಲೋಮನನ್ನು ಹಿಂಬಾಲಿಸಲಾರಂಭಿಸಿದ್ದಾರೆ” ಎಂದು ಹೇಳಿದನು.
ಪ್ರಾರ್ಥನೆಯ ಪ್ರತಿಫಲ
(ಲೂಕ 11:9-13)
7 “ಬೇಡಿಕೊಳ್ಳಿರಿ, ಆಗ ದೇವರು ನಿಮಗೆ ಕೊಡುತ್ತಾನೆ. ಹುಡುಕಿರಿ, ಆಗ ನೀವು ಕಂಡುಕೊಳ್ಳುವಿರಿ. ಬಾಗಿಲು ತಟ್ಟಿರಿ, ಆಗ ಅದು ನಿಮಗೆ ತೆರೆಯುವುದು. 8 ಹೌದು, ಕೇಳುತ್ತಲೇ ಇರುವವನು ಪಡೆದುಕೊಳ್ಳುತ್ತಾನೆ, ಹುಡುಕುತ್ತಲೇ ಇರುವವನು ಕಂಡುಕೊಳ್ಳುತ್ತಾನೆ, ತಟ್ಟುತ್ತಲೇ ಇರುವವನಿಗೆ ಬಾಗಿಲು ತೆರೆಯುತ್ತದೆ.
9 “ನಿಮ್ಮ ಮಗನು ರೊಟ್ಟಿಯನ್ನು ಕೇಳಿದರೆ ಕಲ್ಲನ್ನು ಕೊಡುವಿರೋ? 10 ಮೀನನ್ನು ಕೇಳಿದರೆ, ಹಾವನ್ನು ಕೊಡುವಿರೋ? 11 ನೀವು ದೇವರಂತೆ ಒಳ್ಳೆಯವರಲ್ಲ, ಕೆಟ್ಟವರು. ಆದರೂ ನಿಮ್ಮ ಮಕ್ಕಳಿಗೆ ಒಳ್ಳೆಯ ವಸ್ತುಗಳನ್ನು ಕೊಡಬೇಕೆಂಬುದು ನಿಮಗೆ ತಿಳಿದಿದೆ. ಹೀಗಿರಲಾಗಿ ಪರಲೋಕದ ನಿಮ್ಮ ತಂದೆಯು ಸಹ ತನ್ನನ್ನು ಕೇಳುವವರಿಗೆ ಒಳ್ಳೆಯ ವಸ್ತುಗಳನ್ನು ನಿಶ್ಚಯವಾಗಿಯೂ ಕೊಡುತ್ತಾನೆ.
Kannada Holy Bible: Easy-to-Read Version. All rights reserved. © 1997 Bible League International