Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 50:16-23

16 ದೇವರು ದುಷ್ಟರಿಗೆ ಹೀಗೆನ್ನುವನು:
    “ನೀವು ನನ್ನ ಕಟ್ಟಳೆಗಳ ಕುರಿತು ಮಾತಾಡುವಿರಿ;
    ನನ್ನ ಒಡಂಬಡಿಕೆಯ ಕುರಿತು ಮಾತಾಡುವಿರಿ.
17 ಹೀಗಿರಲು ನೀವು ನನ್ನ ಸುಶಿಕ್ಷಣವನ್ನು ದ್ವೇಷಿಸುವುದೇಕೆ?
    ನಾನು ಹೇಳುವುದನ್ನು ನೀವು ತುಚ್ಛೀಕರಿಸುವುದೇಕೆ?
18 ನೀವು ಕಳ್ಳನನ್ನು ಕಂಡು ಅವನೊಂದಿಗೆ ಸೇರಿಕೊಳ್ಳಲು ಓಡಿಹೋಗುವಿರಿ;
    ವ್ಯಭಿಚಾರಿಗಳ ಒಡನಾಟ ಮಾಡುವಿರಿ.
19 ನಿಮ್ಮ ಬಾಯಿಂದ ಕೇಡನ್ನು ಕಲ್ಪಿಸುವಿರಿ.
    ನಿಮ್ಮ ನಾಲಿಗೆಯಿಂದ ಮೋಸವನ್ನು ನೇಯುವಿರಿ.
20 ಬೇರೆಯವರ ಮೇಲೆಯೂ ನಿಮ್ಮ ಸಹೋದರರ ಮೇಲೆಯೂ
    ಕೆಟ್ಟದ್ದನ್ನು ಹೇಳುತ್ತಲೇ ಇರುತ್ತೀರಿ.
21 ನೀವು ಹೀಗೆ ಮಾಡಿದರೂ ನಾನು ಮೌನವಾಗಿದ್ದೆನು.
    ಆದ್ದರಿಂದ ನಾನೂ ನಿಮ್ಮಂಥವನೆಂದು ನೀವು ಆಲೋಚಿಸಿಕೊಂಡಿರಿ.
ಈಗಲಾದರೋ ನಾನು ಮೌನವಾಗಿರುವುದಿಲ್ಲ!
    ಎಲ್ಲವನ್ನು ನಿಮಗೆ ವಿವರಿಸಿ ನಿಮ್ಮ ಮುಂದೆಯೇ ನಿಮ್ಮನ್ನು ಟೀಕಿಸುವೆನು!
22 ದೇವರನ್ನು ಮರೆತುಬಿಟ್ಟವರೇ,
    ಇದನ್ನು ಗಮನಕ್ಕೆ ತಂದುಕೊಳ್ಳಿರಿ.
ಇಲ್ಲವಾದರೆ ನಿಮ್ಮನ್ನು ತುಂಡುತಂಡು ಮಾಡುವೆನು;
    ಯಾರೂ ನಿಮ್ಮನ್ನು ರಕ್ಷಿಸಲಾರರು!
23 ನನಗೆ ಕೃತಜ್ಞತಾಯಜ್ಞವನ್ನು ಅರ್ಪಿಸುವವನೇ ನನ್ನನ್ನು ಸನ್ಮಾನಿಸುವವನು.
    ಆದರೆ ನೀತಿವಂತನಾಗಿ ಜೀವಿಸುವವನಿಗೆ ನನ್ನ ರಕ್ಷಣಾಶಕ್ತಿಯನ್ನು ತೋರಿಸುವೆನು.”

2 ಸಮುವೇಲನು 13:1-19

ಅಮ್ನೋನನು ತಾಮಾರಳನ್ನು ಮೋಹಿಸಿದ್ದು

13 ದಾವೀದನಿಗೆ ಅಬ್ಷಾಲೋಮನೆಂಬ ಮಗನಿದ್ದನು. ಅವನಿಗೆ ತಾಮಾರಳೆಂಬ ತಂಗಿಯಿದ್ದಳು. ಆಕೆ ಬಹಳ ಸುಂದರಿಯಾಗಿದ್ದಳು. ದಾವೀದನ ಮತ್ತೊಬ್ಬ ಮಗನಾದ ಅಮ್ನೋನನು, ತಾಮಾರಳನ್ನು ಮೋಹಿಸಿದನು. ತಾಮಾರಳು ಕನ್ಯೆಯಾಗಿದ್ದಳು. ಈ ಕಾರಣದಿಂದ ಅವನು ಆಕೆಗೆ ಏನು ಮಾಡಲೂ ಸಾಧ್ಯವಿರಲಿಲ್ಲ. ಅವಳ ಮೋಹದಲ್ಲಿಯೇ ಅಮ್ನೋನನು ಬಲಹೀನನಾದನು.[a]

ಅಮ್ನೋನನಿಗೆ ಶಿಮ್ಮನ ಮಗನಾದ ಯೋನಾದಾಬನೆಂಬ ಹೆಸರಿನ ಗೆಳೆಯನಿದ್ದನು. (ಶಿಮ್ಮನು ದಾವೀದನ ಸೋದರ.) ಯೋನಾದಾಬನು ಬಹಳ ಯುಕ್ತಿಯುಳ್ಳ ಮನುಷ್ಯ. ಯೋನಾದಾಬನು ಅಮ್ನೋನನಿಗೆ, “ದಿನದಿಂದ ದಿನಕ್ಕೆ ನೀನು ತೆಳ್ಳಗಾಗುತ್ತಲೇ ಇರುವೆ. ನೀನು ರಾಜನ ಮಗ, ನಿನ್ನ ಬಳಿ ತಿನ್ನಲು ಬಹಳ ಇದ್ದರೂ ನೀನು ತೆಳ್ಳಗಾಗುತ್ತಿರುವುದು ಏಕೆ? ನನಗೆ ತಿಳಿಸು” ಎಂದು ಕೇಳಿದನು.

ಅಮ್ನೋನನು ಯೋನಾದಾಬನಿಗೆ, “ನಾನು ತಾಮಾರಳನ್ನು ಮೋಹಿಸಿದ್ದೇನೆ. ಆದರೆ ಅವಳು ನನ್ನ ಸೋದರನಾದ ಅಬ್ಷಾಲೋಮನ ತಂಗಿ” ಎಂದು ಹೇಳಿದನು.

ಯೋನಾದಾಬನು ಅಮ್ನೋನನಿಗೆ, “ನೀನು ಹೋಗಿ ಹಾಸಿಗೆಯಲ್ಲಿ ಮಲಗಿಕೋ. ನೀನು ಕಾಯಿಲೆಯವನಂತೆ ನಟಿಸು. ಆಗ ನಿನ್ನನ್ನು ನೋಡಲು ನಿನ್ನ ತಂದೆಯು ಬರುತ್ತಾನೆ. ಆಗ ನೀನು ಅವನಿಗೆ, ‘ದಯವಿಟ್ಟು ನನ್ನ ಸೋದರಿಯಾದ ತಾಮಾರಳು ಇಲ್ಲಿಗೆ ಬಂದು, ನನಗೆ ಊಟವನ್ನು ಕೊಡಲಿ. ಅವಳು ನನ್ನ ಎದುರಿನಲ್ಲೇ ಅಡಿಗೆಯನ್ನು ಮಾಡಲಿ. ನಾನು ಅದನ್ನು ಕಣ್ಣಾರೆ ಕಂಡು ಅವಳ ಕೈಗಳಿಂದ ಊಟಮಾಡುತ್ತೇನೆ’ ಎಂದು ಹೇಳು” ಎಂಬುದಾಗಿ ಹೇಳಿಕೊಟ್ಟನು.

ಅಮ್ನೋನನು ಹಾಸಿಗೆಯಲ್ಲಿ ಮಲಗಿ ಕಾಯಿಲೆಯವನಂತೆ ನಟಿಸಿದನು. ಅವನನ್ನು ನೋಡಲು ರಾಜನಾದ ದಾವೀದನು ಅಲ್ಲಿಗೆ ಬಂದನು. ಅಮ್ನೋನನು ರಾಜನಾದ ದಾವೀದನಿಗೆ, “ದಯವಿಟ್ಟು ನನ್ನ ಸೋದರಿಯಾದ ತಾಮಾರಳನ್ನು ಒಳಕ್ಕೆ ಕರೆಯಿರಿ. ನಾನು ನೋಡುತ್ತಿರುವಂತೆ ಅವಳು ನನಗಾಗಿ ಎರಡು ಸಿಹಿ ರೊಟ್ಟಿಗಳನ್ನು ತಯಾರಿಸಲಿ. ಅವಳ ಕೈಗಳಿಂದ ಮಾಡಿದ ರೊಟ್ಟಿಗಳನ್ನೇ ನಾನು ತಿನ್ನುತ್ತೇನೆ” ಎಂದು ಬೇಡಿಕೊಂಡನು.

ದಾವೀದನು ತಾಮಾರಳ ಮನೆಗೆ ಸಂದೇಶಕರನ್ನು ಕಳುಹಿಸಿದನು. ಸಂದೇಶಕರು ತಾಮಾರಳಿಗೆ, “ನಿನ್ನ ಸೋದರನಾದ ಅಮ್ನೋನನ ಮನೆಗೆ ಹೋಗಿ ಅವನಿಗೋಸ್ಕರ ಸ್ವಲ್ಪ ಊಟವನ್ನು ತಯಾರಿಸು” ಎಂದರು.

ತಾಮಾರಳು ತನ್ನ ಸೋದರನಾದ ಅಮ್ನೋನನ ಮನೆಗೆ ಹೋದಳು. ಅಮ್ನೋನನು ಹಾಸಿಗೆಯಲ್ಲಿ ಮಲಗಿದ್ದನು. ತಾಮಾರಳು ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಅದನ್ನು ತನ್ನ ಕೈಗಳಿಂದಲೇ ಕಲಸಿ ಅಮ್ನೋನನ ಕಣ್ಣೆದುರಿನಲ್ಲಿಯೇ ನಾದಿದಳು. ನಂತರ ಅವಳು ನಾದಿದ ಹಿಟ್ಟನ್ನು ಸುಟ್ಟು, ರೊಟ್ಟಿಗಳನ್ನು ಮಾಡಿದಳು. ತಾಮಾರಳು ರೊಟ್ಟಿಗಳನ್ನು, ರೊಟ್ಟಿಮಾಡುವ ಪಾತ್ರೆಯಿಂದ ಹೊರ ತೆಗೆದು ಅಮ್ನೋನನಿಗೋಸ್ಕರ ಅವುಗಳನ್ನು ಬಡಿಸಿದಳು. ಆದರೆ ಅಮ್ನೋನನು ತಿನ್ನಲಿಲ್ಲ. ಅಮ್ನೋನನು ತನ್ನ ಸೇವಕರೆಲ್ಲರಿಗೆ, “ನೀವೆಲ್ಲರೂ ನನ್ನನ್ನು ಒಬ್ಬಂಟಿಗನನ್ನಾಗಿ ಬಿಟ್ಟು ಹೋಗಿ!” ಎಂದನು. ಆದ್ದರಿಂದ ಸೇವಕರೆಲ್ಲರೂ ಅಮ್ನೋನನ ಕೊಠಡಿಯಿಂದ ಹೊರಗೆ ಹೋದರು.

ಅಮ್ನೋನನು ತಾಮಾರಳನ್ನು ಕೆಡಿಸಿದ್ದು

10 ಅಮ್ನೋನನು ತಾಮಾರಳಿಗೆ, “ರೊಟ್ಟಿಗಳನ್ನು ಒಳ ಕೋಣೆಗೆ ತೆಗೆದುಕೊಂಡು ಬಾ. ನಾನು ನಿನ್ನ ಕೈಗಳಿಂದಲೇ ತಿನ್ನುತ್ತೇನೆ” ಎಂದನು.

ತಾಮಾರಳು ತನ್ನ ಸೋದರನಾದ ಅಮ್ನೋನನಿದ್ದ ಒಳಕೋಣೆಗೆ ಹೋದಳು. ಅವಳು ತಾನು ಮಾಡಿದ ರೊಟ್ಟಿಗಳನ್ನು ತಂದಳು. 11 ತನ್ನ ಕೈಗಳಿಂದಲೇ ಅಮ್ನೋನನು ತಿನ್ನಲಿ ಎಂಬುದಕ್ಕಾಗಿ ಅವಳು ಅವನ ಬಳಿಗೆ ಹೋದಳು. ಆದರೆ ಅಮ್ನೋನನು ತಾಮಾರಳನ್ನು ಬಿಗಿಯಾಗಿ ಹಿಡಿದುಕೊಂಡನು. ಅವನು ಅವಳಿಗೆ, “ತಂಗಿಯೇ, ಬಂದು ನನ್ನ ಜೊತೆಯಲ್ಲಿ ಮಲಗು” ಎಂದು ಹೇಳಿದನು.

12 ತಾಮಾರಳು ಅಮ್ನೋನನಿಗೆ, “ಸೋದರನೇ ಬೇಡ! ನನ್ನನ್ನು ಬಲಾತ್ಕರಿಸದಿರು! ಇಸ್ರೇಲಿನಲ್ಲಿ ಇಂತಹ ಕಾರ್ಯ ಎಂದೆಂದಿಗೂ ನಡೆಯಬಾರದು! ಅಪಮಾನಕರವಾದ ಈ ಕಾರ್ಯವನ್ನು ಮಾಡಬೇಡ! 13 ನನಗಾದ ಈ ಕಳಂಕವನ್ನು ಎಂದೆಂದಿಗೂ ನಾನು ತೊಡೆದುಹಾಕಲಾಗುವುದಿಲ್ಲ. ಇಸ್ರೇಲಿನ ಜನರಲ್ಲಿ ತಮ್ಮ ಅಪಮಾನಕರವಾದ ಕಾರ್ಯಗಳಿಂದ ನೀಚರೆನಿಸಿಕೊಳ್ಳುವ ಜನರಂತೆ ನೀನೂ ಆಗಿಬಿಡುವೆ. ದಯವಿಟ್ಟು ರಾಜನೊಂದಿಗೆ ಮಾತನಾಡು. ಅವನು ನಿನ್ನ ಜೊತೆಯಲ್ಲಿ ನನ್ನ ಮದುವೆ ಮಾಡಲಿ” ಎಂದಳು.

14 ಆದರೆ ತಾಮಾರಳ ಮಾತುಗಳನ್ನು ಅಮ್ನೋನನು ಕೇಳಲಿಲ್ಲ. ಅವನು ತಾಮಾರಳಿಗಿಂತ ಬಲಶಾಲಿಯಾಗಿದ್ದುದರಿಂದ ಅವಳ ಮೇಲೆ ಬಲಾತ್ಕಾರ ಮಾಡಿದನು. 15 ಅನಂತರ ಅಮ್ನೋನನು ತಾಮಾರಳನ್ನು ದ್ವೇಷಿಸಿದನು. ಅಮ್ನೋನನು ತಾನು ಅವಳನ್ನು ಮೊದಲು ಮೋಹಿಸಿದುದಕ್ಕಿಂತ ಹೆಚ್ಚಾಗಿ ದ್ವೇಷಿಸಿದನು. ಅಮ್ನೋನನು ತಾಮಾರಳಿಗೆ, “ಮೇಲೇಳು, ಹೊರಟುಹೋಗು!” ಎಂದನು.

16 ತಾಮಾರಳು ಅಮ್ನೋನನಿಗೆ, “ಇಲ್ಲ! ನನ್ನನ್ನು ಹೊರಗೆ ಕಳುಹಿಸುವುದು ನೀನು ಮೊದಲು ಮಾಡಿದ್ದಕ್ಕಿಂತಲೂ ಹೆಚ್ಚಿನ ದುಷ್ಕೃತ್ಯವಾಗಿದೆ” ಎಂದು ಹೇಳಿದಳು.

ಆದರೆ ಅಮ್ನೋನನು ತಾಮಾರಳ ಮಾತುಗಳನ್ನು ಆಲಿಸಲಿಲ್ಲ. 17 ಅಮ್ನೋನನು ತನ್ನ ಕಿರಿಯ ಸೇವಕನೊಬ್ಬನನ್ನು ಕರೆದು, “ಈ ಹುಡುಗಿಯನ್ನು ಈಗಲೇ ಈ ಕೊಠಡಿಯಿಂದ ಹೊರಗೆ ನೂಕು! ಅವಳು ಹೋದ ನಂತರ ಬಾಗಿಲಿಗೆ ಬೀಗಹಾಕು” ಎಂದು ಹೇಳಿದನು.

18 ಅಮ್ನೋನನ ಸೇವಕನು ತಾಮಾರಳನ್ನು ಹೊರನೂಕಿ ಅವಳು ಹೋದ ನಂತರ ಬಾಗಿಲಿಗೆ ಬೀಗವನ್ನು ಹಾಕಿದನು.

ತಾಮಾರಳು ನಾನಾ ಬಣ್ಣದ ನಿಲುವಂಗಿಯನ್ನು ಧರಿಸಿಕೊಂಡಿದ್ದಳು. ರಾಜನ ಹೆಣ್ಣುಮಕ್ಕಳು ಕನ್ಯೆಯರಾಗಿದ್ದಾಗ ಇಂತಹ ನಿಲುವಂಗಿಗಳನ್ನು ಧರಿಸುತ್ತಿದ್ದರು. 19 ತಾಮಾರಳು ಬೂದಿಯನ್ನು ತೆಗೆದುಕೊಂಡು ತನ್ನ ತಲೆಯ ಮೇಲೆ ಸುರಿದುಕೊಂಡು ತನ್ನ ನಿಲುವಂಗಿಯನ್ನು ಹರಿದುಕೊಂಡಳು; ತನ್ನ ತಲೆಯ ಮೇಲೆ ಕೈಗಳನ್ನಿಟ್ಟುಕೊಂಡು ಗಟ್ಟಿಯಾಗಿ ಗೋಳಾಡಿದಳು.

1 ಕೊರಿಂಥದವರಿಗೆ 12:27-31

27 ನೀವೆಲ್ಲರೂ ಒಂದುಗೂಡಿ ಕ್ರಿಸ್ತನ ದೇಹವಾಗಿದ್ದೀರಿ. ನಿಮ್ಮಲ್ಲಿ ಪ್ರತಿಯೊಬ್ಬರೂ ಅದರ ಅಂಗವಾಗಿದ್ದೀರಿ. 28 ದೇವರು ಸಭೆಯಲ್ಲಿ ಅಪೊಸ್ತಲರಿಗೆ ಮೊದಲನೆಯ ಸ್ಥಾನವನ್ನೂ ಪ್ರವಾದಿಗಳಿಗೆ ಎರಡನೆಯ ಸ್ಥಾನವನ್ನೂ ಉಪದೇಶಕರಿಗೆ ಮೂರನೆಯ ಸ್ಥಾನವನ್ನೂ ಇಟ್ಟಿದ್ದಾನೆ. ಇದಲ್ಲದೆ ದೇವರು, ಅದ್ಭುತಕಾರ್ಯಗಳನ್ನು ಮಾಡುವ ಜನರಿಗೂ ಸ್ಪಸ್ಥಪಡಿಸುವ ಜನರಿಗೂ ಇತರರಿಗೆ ಸಹಾಯಮಾಡುವ ಜನರಿಗೂ ಮುನ್ನಡೆಸಬಲ್ಲ ಜನರಿಗೂ ವಿವಿಧ ಭಾಷೆಗಳನ್ನು ಮಾತಾಡಬಲ್ಲ ಜನರಿಗೂ ಸಭೆಯಲ್ಲಿ ಸ್ಥಾನವನ್ನು ಕೊಟ್ಟಿದ್ದಾನೆ. 29 ಎಲ್ಲಾ ಜನರು ಅಪೊಸ್ತಲರುಗಳಲ್ಲ. ಎಲ್ಲಾ ಜನರು ಪ್ರವಾದಿಗಳಲ್ಲ. ಎಲ್ಲಾ ಜನರು ಉಪದೇಶಕರುಗಳಲ್ಲ. ಎಲ್ಲಾ ಜನರು ಅದ್ಭುತಕಾರ್ಯಗಳನ್ನು ಮಾಡುವುದಿಲ್ಲ. 30 ಎಲ್ಲಾ ಜನರು ಗುಣಪಡಿಸುವ ವರವನ್ನು ಹೊಂದಿಲ್ಲ. ಎಲ್ಲಾ ಜನರು ವಿವಿಧ ಭಾಷೆಗಳನ್ನು ಮಾತಾಡುವುದಿಲ್ಲ. ಎಲ್ಲಾ ಜನರು ಆ ಭಾಷೆಗಳನ್ನು ಅನುವಾದಿಸುವುದಿಲ್ಲ. 31 ಆದರೆ ನೀವು ಪವಿತ್ರಾತ್ಮನ ಇನ್ನೂ ಶ್ರೇಷ್ಠವಾದ ವರಗಳನ್ನು ಯಥಾರ್ಥವಾಗಿ ಅಪೇಕ್ಷಿಸತಕ್ಕದ್ದು. ಈಗ ನಾನು ನಿಮಗೆ ಎಲ್ಲಕ್ಕಿಂತಲೂ ಉತ್ತಮವಾದ ಮಾರ್ಗವನ್ನು ತೋರಿಸುತ್ತೇನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International