Revised Common Lectionary (Semicontinuous)
10 ನಂತರ ದಾವೀದನು ತೀರಿಕೊಂಡನು. ಅವನನ್ನು ದಾವೀದ ನಗರದಲ್ಲಿ ಸಮಾಧಿಮಾಡಿದರು. 11 ದಾವೀದನು ಇಸ್ರೇಲನ್ನು ನಲವತ್ತು ವರ್ಷಗಳ ಕಾಲ ಆಳಿದನು. ಅವನು ಏಳು ವರ್ಷ ಹೆಬ್ರೋನಿನಲ್ಲೂ ಮೂವತ್ತಮೂರು ವರ್ಷ ಜೆರುಸಲೇಮಿನಲ್ಲೂ ಆಡಳಿತ ನಡೆಸಿದನು.
ಸೊಲೊಮೋನ ಮತ್ತು ಅದೋನೀಯ
12 ಈಗ ಸೊಲೊಮೋನನು ತನ್ನ ತಂದೆಯ ಸಿಂಹಾಸನದ ಮೇಲೆ ಕುಳಿತು ಆಡಳಿತ ನಡೆಸತೊಡಗಿದನು. ರಾಜ್ಯವು ಅವನ ಪೂರ್ಣ ಹತೋಟಿಯಲ್ಲಿ ಇತ್ತು.
3 ಸೊಲೊಮೋನನು ತನಗೆ ಯೆಹೋವನ ಮೇಲಿದ್ದ ಪ್ರೀತಿಯನ್ನು ತೋರ್ಪಡಿಸಿದನು. ಅವನ ತಂದೆಯಾದ ದಾವೀದನು ಅವನಿಗೆ ಮಾಡಬೇಕೆಂದು ಹೇಳಿದ್ದ ಎಲ್ಲ ಕಾರ್ಯಗಳನ್ನು ಮಾಡುವುದರ ಮೂಲಕ ವಿಧೇಯತೆಯನ್ನು ತೋರ್ಪಡಿಸಿದನು. ಆದರೆ ಸೊಲೊಮೋನನು ತನಗೆ ದಾವೀದನು ಹೇಳದೆ ಇದ್ದ ಕೆಲವು ಕಾರ್ಯಗಳನ್ನೂ ಮಾಡಿದನು. ಸೊಲೊಮೋನನು ಎತ್ತರವಾದ ಸ್ಥಳಗಳನ್ನು ಯಜ್ಞವನ್ನರ್ಪಿಸಲು ಮತ್ತು ಧೂಪಹಾಕಲು ಉಪಯೋಗಿಸುತ್ತಿದ್ದನು.
4 ರಾಜನಾದ ಸೊಲೊಮೋನನು ಯಜ್ಞವನ್ನು ಅರ್ಪಿಸಲು ಗಿಬ್ಯೋನಿಗೆ ಹೋದನು. ಅದು ಅತ್ಯಂತ ಮುಖ್ಯವಾದ ಎತ್ತರದ ಸ್ಥಳವಾದುದರಿಂದ ಅವನು ಅಲ್ಲಿಗೆ ಹೋದನು. ಸೊಲೊಮೋನನು ಒಂದು ಸಾವಿರ ಯಜ್ಞಗಳನ್ನು ಯಜ್ಞವೇದಿಕೆಯ ಮೇಲೆ ಅರ್ಪಿಸಿದನು. 5 ಸೊಲೊಮೋನನು ಗಿಬ್ಯೋನಿನಲ್ಲಿದ್ದಾಗ, ಯೆಹೋವನು ರಾತ್ರಿ ಕನಸಿನಲ್ಲಿ ಅವನಿಗೆ ದರ್ಶನವನ್ನು ನೀಡಿ, “ನೀನು ಏನುಬೇಕಾದರೂ ಕೇಳು. ನಾನು ಅದನ್ನು ನಿನಗೆ ಕೊಡುತ್ತೇನೆ” ಎಂದು ಹೇಳಿದನು.
6 ಸೊಲೊಮೋನನು, “ನಿನ್ನ ಸೇವಕನೂ ನನ್ನ ತಂದೆಯೂ ಆದ ದಾವೀದನಿಗೆ ನೀನು ಬಹಳ ದಯಾಪರನಾಗಿದ್ದೆ. ಅವನು ನಿನ್ನನ್ನು ಅನುಸರಿಸಿದನು. ಅವನು ಒಳ್ಳೆಯವನಾಗಿದ್ದು ನೀತಿವಂತನಾಗಿ ಬದುಕಿದನು. ಅವನ ನಂತರ ಅವನ ಮಗನನ್ನು ಅವನ ಸಿಂಹಾಸನದಲ್ಲಿ ಕುಳ್ಳಿರಿಸಿ ಆಳಲು ನೇಮಿಸಿ ನೀನು ಮಹಾಕೃಪೆಯನ್ನು ತೋರಿಸಿದೆ. 7 ನನ್ನ ದೇವರಾದ ಯೆಹೋವನೇ, ನನ್ನ ತಂದೆಯ ಸ್ಥಾನದಲ್ಲಿ ನನ್ನನ್ನು ನೀನು ರಾಜನನ್ನಾಗಿ ಮಾಡಿದೆ. ಆದರೆ ನಾನೊಬ್ಬ ಚಿಕ್ಕ ಮಗುವಿನಂತಿದ್ದೇನೆ. ನಾನು ಮಾಡಬೇಕಾದ ಕಾರ್ಯಗಳನ್ನು ಮಾಡಲು ಇರಬೇಕಾದ ಬುದ್ದಿವಂತಿಕೆಯು ನನ್ನಲ್ಲಿಲ್ಲ. 8 ನಿನ್ನ ಸೇವಕನಾದ ನಾನು, ನೀನೇ ಆರಿಸಿಕೊಂಡಿರುವ ಜನರ ನಡುವೆ ಇದ್ದೇನೆ. ಇಲ್ಲಿ ಅನೇಕಾನೇಕ ಜನರಿದ್ದಾರೆ. ಅವರನ್ನು ಎಣಿಸಲಾಗದು, ಒಬ್ಬ ಆಡಳಿತಗಾರನು ಅವರ ಮಧ್ಯದಲ್ಲಿದ್ದು ಅನೇಕ ತೀರ್ಪುಗಳನ್ನು ಮಾಡಬೇಕಾಗುತ್ತದೆ. 9 ಆದ್ದರಿಂದ ನಿನ್ನ ಜನರನ್ನು ಒಳ್ಳೆಯ ರೀತಿಯಲ್ಲಿ ಆಳಲು ಮತ್ತು ಅವರಿಗೆ ಸರಿಯಾದ ತೀರ್ಪುಗಳನ್ನು ನೀಡಲು ನನಗೆ ವಿವೇಕವನ್ನು ಕರುಣಿಸು. ಇದು ನನಗೆ ಸರಿ ಮತ್ತು ತಪ್ಪುಗಳ ನಡುವಿರುವ ಭೇದವನ್ನು ತಿಳಿಸಿಕೊಡುತ್ತದೆ. ನನಗೆ ಉತ್ತಮವಾದ ವಿವೇಕವಿಲ್ಲದಿದ್ದರೆ, ನಾನು ಈ ಮಹಾಜನಾಂಗವನ್ನು ಆಳುವುದು ಸಾಧ್ಯವಾಗುವುದಿಲ್ಲ” ಎಂದು ಉತ್ತರಿಸಿದನು.
10 ಸೊಲೊಮೋನನ ಈ ಕೋರಿಕೆಯನ್ನು ಕೇಳಿ ಯೆಹೋವನಿಗೆ ಸಂತೋಷವಾಯಿತು. 11 ಆದ್ದರಿಂದ ದೇವರು ಅವನಿಗೆ, “ನೀನು ನಿನಗಾಗಿ ಹೆಚ್ಚು ಆಯಸ್ಸನ್ನೂ ಕೇಳಲಿಲ್ಲ, ಶ್ರೀಮಂತಿಕೆಯನ್ನೂ ಕೇಳಲಿಲ್ಲ, ನಿನ್ನ ಶತ್ರುಗಳಿಗೆ ಮರಣವನ್ನು ದಯಪಾಲಿಸೆಂದೂ ಕೇಳಲಿಲ್ಲ, ನೀನು ನ್ಯಾಯವಾದ ತೀರ್ಪು ನೀಡಲು ವಿವೇಕವನ್ನು ಕೇಳಿದೆ. 12 ನಿನ್ನ ಕೋರಿಕೆಯನ್ನು ಅನುಗ್ರಹಿಸುವೆನು; ನಿನ್ನನ್ನು ಜ್ಞಾನಿಯನ್ನಾಗಿಯೂ ವಿವೇಕಿಯನ್ನಾಗಿಯೂ ಮಾಡುವೆನು. ಪೂರ್ವಕಾಲದಲ್ಲಿ ನಿನ್ನಂತವರು ಯಾರೊಬ್ಬರೂ ಇರಲಿಲ್ಲ ಎನ್ನುವಷ್ಟು ಜ್ಞಾನಿಯನ್ನಾಗಿ ನಿನ್ನನ್ನು ಮಾಡುತ್ತೇನೆ. ಮುಂದೆ ನಿನ್ನಂತವರು ಯಾರೊಬ್ಬರೂ ಇರುವುದಿಲ್ಲ. 13 ನೀನು ಕೇಳದೆಹೋದ ಬಿನ್ನಹಗಳನ್ನು ನಾನು ನಿನಗೆ ಅನುಗ್ರಹಿಸುತ್ತೇನೆ. ನಿನ್ನ ಜೀವವಿರುವವರೆಗೆ ನೀನು ಶ್ರೀಮಂತನಾಗಿದ್ದು ಘನಮಾನವನ್ನು ಹೊಂದುವಿ. ಪ್ರಪಂಚದಲ್ಲಿ ನಿನ್ನಂತಹ ಉನ್ನತವಾದ ಬೇರೊಬ್ಬ ರಾಜನು ಇರುವುದಿಲ್ಲ. 14 ನೀನು ನನ್ನ ಕಟ್ಟಳೆಗಳನ್ನು ಆಜ್ಞೆಗಳನ್ನು ಅನುಸರಿಸುವುದರ ಮೂಲಕ ನನಗೆ ವಿಧೇಯನಾಗಿರಬೇಕು ಎಂದು ಹೇಳುತ್ತೇನೆ. ನಿನ್ನ ತಂದೆಯಾದ ದಾವೀದನು ನಡೆದ ಮಾರ್ಗದಲ್ಲಿ ನೀನೂ ನಡೆ. ಆಗ ನಾನು ನಿನಗೆ ದೀರ್ಘಾಯುಷ್ಯವನ್ನು ಕೊಡುತ್ತೇನೆ” ಎಂದು ಹೇಳಿದನು.
111 ಯೆಹೋವನಿಗೆ ಸ್ತೋತ್ರವಾಗಲಿ!
ನೀತಿವಂತರ ಸಭೆಯಲ್ಲಿ ನಾನು ಪೂರ್ಣಹೃದಯದಿಂದ
ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡುವೆನು.
2 ಯೆಹೋವನು ಮಹತ್ಕಾರ್ಯಗಳನ್ನು ಮಾಡುವನು.
ಜನರು ಅವುಗಳಲ್ಲಿ ಸಂತೋಷಿಸುತ್ತಾ ಅವುಗಳನ್ನೇ ಧ್ಯಾನಿಸುವರು.
3 ಆತನು ಮಹತ್ವವಾದ ಮತ್ತು ಅದ್ಭುತವಾದ ಕಾರ್ಯಗಳನ್ನು ಮಾಡುವನು.
ಆತನ ನೀತಿಯು ಶಾಶ್ವತವಾದದ್ದು.
4 ದೇವರು ಅಮೋಘವಾದ ಕಾರ್ಯಗಳನ್ನು ಮಾಡುವುದರಿಂದ
ಆತನ ದಯೆಯನ್ನೂ ಕೃಪೆಯನ್ನೂ ಜ್ಞಾಪಿಸಿಕೊಳ್ಳುತ್ತೇವೆ.
5 ಆತನು ತನ್ನ ಭಕ್ತರಿಗೆ ಆಹಾರವನ್ನು ಒದಗಿಸುವನು;
ಆತನು ತನ್ನ ಒಡಂಬಡಿಕೆಯನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವನು.
6 ಆತನು ಅನ್ಯಜನಾಂಗಗಳ ದೇಶವನ್ನು
ತನ್ನ ಜನರಿಗೆ ಕೊಡುವುದರ ಮೂಲಕ ಪ್ರಬಲವಾದ ಕಾರ್ಯಗಳನ್ನು ಮಾಡಿದ್ದಾನೆ.
7 ಆತನ ಪ್ರತಿಯೊಂದು ಕಾರ್ಯವು ಒಳ್ಳೆಯದೂ ನ್ಯಾಯವಾದದ್ದೂ ಆಗಿದೆ.
ಆತನ ಆಜ್ಞೆಗಳೆಲ್ಲಾ ನಂಬಿಕೆಗೆ ಯೋಗ್ಯವಾಗಿವೆ.
8 ದೇವರ ಆಜ್ಞೆಗಳು ಶಾಶ್ವತವಾಗಿವೆ.
ಅವು ಯಥಾರ್ಥವಾಗಿಯೂ ಮತ್ತು ಶುದ್ಧವಾಗಿಯೂ ಇವೆ.
9 ಆತನು ತನ್ನ ಜನರನ್ನು ರಕ್ಷಿಸಿ ಅವರೊಂದಿಗೆ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಂಡಿದ್ದಾನೆ.
ಆತನ ಹೆಸರು ಅದ್ಭುತವಾಗಿಯೂ ಪರಿಶುದ್ಧವಾಗಿಯೂ ಇದೆ.
10 ಯೆಹೋವನ ಮೇಲಿರುವ ಭಯಭಕ್ತಿಗಳಿಂದಲೇ ಜ್ಞಾನವು ಆರಂಭವಾಗುತ್ತದೆ.
ಆತನಲ್ಲಿ ಭಯಭಕ್ತಿಯುಳ್ಳವರು ಜ್ಞಾನಪೂರ್ಣರಾಗಿದ್ದಾರೆ.
ಆತನಿಗೆ ಸದಾಕಾಲ ಸ್ತೋತ್ರವಾಗಲಿ.
15 ಆದ್ದರಿಂದ ನೀವು ಹೇಗೆ ಜೀವಿಸುತ್ತಿದ್ದೀರಿ ಎಂಬುದರ ಬಗ್ಗೆ ಬಹು ಎಚ್ಚರಿಕೆಯಿಂದಿರಿ. ಅವಿವೇಕಿಗಳಂತೆ ಜೀವಿಸದೆ ವಿವೇಕಿಗಳಾಗಿ ಜೀವಿಸಿರಿ. 16 ಈ ದಿನಗಳು ಕೆಟ್ಟವುಗಳಾಗಿವೆ. ಆದ್ದರಿಂದ ನಿಮಗಿರುವ ಪ್ರತಿಯೊಂದು ಅವಕಾಶವನ್ನು ಒಳ್ಳೆಯದಕ್ಕಾಗಿ ಉಪಯೋಗಿಸಿರಿ. 17 ನಿಮ್ಮ ಜೀವಿತಗಳ ಬಗ್ಗೆ ಮೂರ್ಖರಾಗಿರದೆ ದೇವರ ಚಿತ್ತವೇನೆಂಬುದನ್ನು ತಿಳಿದುಕೊಳ್ಳಿರಿ. 18 ಮದ್ಯಪಾನಮಾಡಿ ಮತ್ತರಾಗಬೇಡಿ, ಅದು ಪಾಪಕೃತ್ಯಗಳಿಗೆ ನಡೆಸುತ್ತದೆ, ಆದರೆ ಯಾವಾಗಲೂ ಪವಿತ್ರಾತ್ಮಭರಿತರಾಗಿರಿ. 19 ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಆತ್ಮಿಕ ಹಾಡುಗಳಿಂದಲೂ ಒಬ್ಬರಿಗೊಬ್ಬರು ಮಾತಾಡಿರಿ. ನಿಮ್ಮ ಹೃದಯಗಳಲ್ಲಿ ಪ್ರಭುವಿಗೆ ವಾದ್ಯ ನುಡಿಸುತ್ತಾ ಹಾಡಿರಿ. 20 ಪ್ರತಿಯೊಂದು ವಿಷಯದಲ್ಲಿಯೂ ತಂದೆಯಾದ ದೇವರಿಗೆ ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಹೆಸರಿನಲ್ಲಿ ಯಾವಾಗಲೂ ಸ್ತೋತ್ರಮಾಡಿರಿ.
51 ಪರಲೋಕದಿಂದ ಇಳಿದುಬಂದ ಜೀವವುಳ್ಳ ರೊಟ್ಟಿ ನಾನೇ. ಈ ರೊಟ್ಟಿಯನ್ನು ತಿನ್ನುವವನು ಶಾಶ್ವತವಾಗಿ ಜೀವಿಸುವನು. ಈ ರೊಟ್ಟಿಯೇ ನನ್ನ ದೇಹ. ಈ ಲೋಕದಲ್ಲಿರುವ ಜನರು ಜೀವವನ್ನು ಹೊಂದಿಕೊಳ್ಳಲೆಂದು ನಾನು ನನ್ನ ದೇಹವನ್ನೇ ಕೊಡುತ್ತೇನೆ” ಎಂದು ಉತ್ತರಕೊಟ್ಟನು.
52 ಆಗ ಯೆಹೂದ್ಯರು, “ಈ ಮನುಷ್ಯನು ತನ್ನ ದೇಹವನ್ನು ನಮಗೆ ತಿನ್ನಲು ಹೇಗೆ ಕೊಡಲಾದೀತು?” ಎಂದು ತಮ್ಮತಮ್ಮೊಳಗೆ ವಾಗ್ವಾದ ಮಾಡತೊಡಗಿದರು.
53 ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಮನುಷ್ಯಕುಮಾರನ ದೇಹವನ್ನು ತಿನ್ನಲೇಬೇಕು. ಆತನ ರಕ್ತವನ್ನು ಕುಡಿಯಲೇಬೇಕು. ನೀವು ಹೀಗೆ ಮಾಡದಿದ್ದರೆ, ನಿಮ್ಮಲ್ಲಿ ನಿಜವಾದ ಜೀವ ಇರುವುದಿಲ್ಲ. 54 ನನ್ನ ದೇಹವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನು ನಿತ್ಯಜೀವವನ್ನು ಹೊಂದಿದ್ದಾನೆ. ಅಂತಿಮ ದಿನದಂದು ನಾನು ಆ ವ್ಯಕ್ತಿಯನ್ನು ಜೀವಂತವಾಗಿ ಎಬ್ಬಿಸುವೆನು. 55 ನನ್ನ ದೇಹವು ನಿಜವಾದ ಆಹಾರವಾಗಿದೆ. ನನ್ನ ರಕ್ತವು ನಿಜವಾದ ಪಾನೀಯವಾಗಿದೆ. 56 ನನ್ನ ದೇಹವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನು ನನ್ನಲ್ಲಿ ವಾಸಿಸುತ್ತಾನೆ. ನಾನು ಅವನಲ್ಲಿ ವಾಸಿಸುತ್ತೇನೆ.
57 “ತಂದೆಯೇ ನನ್ನನ್ನು ಕಳುಹಿಸಿದನು. ತಂದೆಯು ಜೀವಸ್ವರೂಪನಾಗಿದ್ದಾನೆ. ನಾನು ತಂದೆಯಿಂದಲೇ ಜೀವಿಸುತ್ತೇನೆ. ಆದ್ದರಿಂದ ನನ್ನನ್ನು ತಿನ್ನುವವನು ನನ್ನಿಂದಲೇ ಜೀವಿಸುವನು. 58 ನಮ್ಮ ಪಿತೃಗಳು ತಿಂದ ರೊಟ್ಟಿಯಂತಲ್ಲ ನಾನು. ಅವರು ಆ ರೊಟ್ಟಿಯನ್ನು ತಿಂದರೂ ಎಲ್ಲಾ ಜನರಂತೆ ಸತ್ತು ಹೋದರು. ನಾನು ಪರಲೋಕದಿಂದ ಇಳಿದುಬಂದ ರೊಟ್ಟಿ. ಈ ರೊಟ್ಟಿಯನ್ನು ತಿನ್ನುವವನು ಸದಾಕಾಲ ಜೀವಿಸುವನು,” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International