Revised Common Lectionary (Semicontinuous)
111 ಯೆಹೋವನಿಗೆ ಸ್ತೋತ್ರವಾಗಲಿ!
ನೀತಿವಂತರ ಸಭೆಯಲ್ಲಿ ನಾನು ಪೂರ್ಣಹೃದಯದಿಂದ
ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡುವೆನು.
2 ಯೆಹೋವನು ಮಹತ್ಕಾರ್ಯಗಳನ್ನು ಮಾಡುವನು.
ಜನರು ಅವುಗಳಲ್ಲಿ ಸಂತೋಷಿಸುತ್ತಾ ಅವುಗಳನ್ನೇ ಧ್ಯಾನಿಸುವರು.
3 ಆತನು ಮಹತ್ವವಾದ ಮತ್ತು ಅದ್ಭುತವಾದ ಕಾರ್ಯಗಳನ್ನು ಮಾಡುವನು.
ಆತನ ನೀತಿಯು ಶಾಶ್ವತವಾದದ್ದು.
4 ದೇವರು ಅಮೋಘವಾದ ಕಾರ್ಯಗಳನ್ನು ಮಾಡುವುದರಿಂದ
ಆತನ ದಯೆಯನ್ನೂ ಕೃಪೆಯನ್ನೂ ಜ್ಞಾಪಿಸಿಕೊಳ್ಳುತ್ತೇವೆ.
5 ಆತನು ತನ್ನ ಭಕ್ತರಿಗೆ ಆಹಾರವನ್ನು ಒದಗಿಸುವನು;
ಆತನು ತನ್ನ ಒಡಂಬಡಿಕೆಯನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವನು.
6 ಆತನು ಅನ್ಯಜನಾಂಗಗಳ ದೇಶವನ್ನು
ತನ್ನ ಜನರಿಗೆ ಕೊಡುವುದರ ಮೂಲಕ ಪ್ರಬಲವಾದ ಕಾರ್ಯಗಳನ್ನು ಮಾಡಿದ್ದಾನೆ.
7 ಆತನ ಪ್ರತಿಯೊಂದು ಕಾರ್ಯವು ಒಳ್ಳೆಯದೂ ನ್ಯಾಯವಾದದ್ದೂ ಆಗಿದೆ.
ಆತನ ಆಜ್ಞೆಗಳೆಲ್ಲಾ ನಂಬಿಕೆಗೆ ಯೋಗ್ಯವಾಗಿವೆ.
8 ದೇವರ ಆಜ್ಞೆಗಳು ಶಾಶ್ವತವಾಗಿವೆ.
ಅವು ಯಥಾರ್ಥವಾಗಿಯೂ ಮತ್ತು ಶುದ್ಧವಾಗಿಯೂ ಇವೆ.
9 ಆತನು ತನ್ನ ಜನರನ್ನು ರಕ್ಷಿಸಿ ಅವರೊಂದಿಗೆ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಂಡಿದ್ದಾನೆ.
ಆತನ ಹೆಸರು ಅದ್ಭುತವಾಗಿಯೂ ಪರಿಶುದ್ಧವಾಗಿಯೂ ಇದೆ.
10 ಯೆಹೋವನ ಮೇಲಿರುವ ಭಯಭಕ್ತಿಗಳಿಂದಲೇ ಜ್ಞಾನವು ಆರಂಭವಾಗುತ್ತದೆ.
ಆತನಲ್ಲಿ ಭಯಭಕ್ತಿಯುಳ್ಳವರು ಜ್ಞಾನಪೂರ್ಣರಾಗಿದ್ದಾರೆ.
ಆತನಿಗೆ ಸದಾಕಾಲ ಸ್ತೋತ್ರವಾಗಲಿ.
28 ಆಗ ರಾಜನಾದ ದಾವೀದನು, “ಒಳಗೆ ಬರಲು ಬತ್ಷೆಬೆಳಿಗೆ ಹೇಳಿ!” ಎಂದು ಹೇಳಿದನು. ಬತ್ಷೆಬೆಳು ರಾಜನ ಎದುರಿಗೆ ಬಂದಳು.
29 ಆಗ ರಾಜನು ಈ ಪ್ರಮಾಣವನ್ನು ಮಾಡಿದನು: “ದೇವರಾದ ಯೆಹೋವನು ನನ್ನನ್ನು ಎಲ್ಲಾ ತೊಂದರೆಗಳಿಂದ ರಕ್ಷಿಸಿದನು. ದೇವರಾಣೆಯಾಗಿಯೂ ನಾನು ನಿನಗೆ ಈ ಪ್ರಮಾಣವನ್ನು ಮಾಡುತ್ತೇನೆ. 30 ಅಂದು ನಾನು ನಿನಗೆ ಮಾಡಿದ ಪ್ರಮಾಣವನ್ನು ಇಂದು ಪೂರೈಸುತ್ತೇನೆ. ಇಸ್ರೇಲಿನ ದೇವರಾದ ಯೆಹೋವನ ಹೆಸರಿನಲ್ಲಿ ನಾನು ನಿನಗೆ ಆ ಪ್ರಮಾಣವನ್ನು ಮಾಡಿದ್ದೆನು. ನನ್ನ ನಂತರ ನಿನ್ನ ಮಗ ಸೊಲೊಮೋನನು ರಾಜನಾಗುವನೆಂದೂ ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವನೆಂದೂ ನಾನು ನಿನಗೆ ಪ್ರಮಾಣ ಮಾಡಿದ್ದೆನು. ನಾನು ನನ್ನ ವಾಗ್ದಾನವನ್ನು ಈಡೇರಿಸುತ್ತೇನೆ” ಎಂದು ಹೇಳಿದನು.
31 ಆಗ ಬತ್ಷೆಬೆಳು ರಾಜನಿಗೆ ಸಾಷ್ಟಾಂಗನಮಸ್ಕಾರ ಮಾಡಿದಳು. ಅವಳು, “ರಾಜನಾದ ದಾವೀದನು ಚಿರಾಯುವಾಗಿರಲಿ!” ಎಂದು ಹೇಳಿದಳು.
ಸೊಲೊಮೋನನು ಹೊಸ ರಾಜನಾಗಿ ಆರಿಸಲ್ಪಟ್ಟದ್ದು
32 ಆಗ ರಾಜನಾದ ದಾವೀದನು, “ಯಾಜಕನಾದ ಚಾದೋಕನಿಗೆ, ಪ್ರವಾದಿಯಾದ ನಾತಾನನಿಗೆ ಮತ್ತು ಯೆಹೋಯಾದಾವನ ಮಗನಾದ ಬೆನಾಯನಿಗೆ ಇಲ್ಲಿಗೆ ಬರಲು ಹೇಳು” ಎಂದು ಹೇಳಿದನು. ಈ ಮೂವರು ರಾಜನ ಬಳಿಗೆ ಬಂದರು. 33 ಆಗ ರಾಜನು ಅವರಿಗೆ, “ನನ್ನ ಸೇವಕರನ್ನು ಕರೆದುಕೊಂಡು ನನ್ನ ಮಗನಾದ ಸೊಲೊಮೋನನನ್ನು ನನ್ನ ಸ್ವಂತ ಹೇಸರಕತ್ತೆಯ ಮೇಲೆ ಕುಳ್ಳಿರಿಸಿಕೊಂಡು ಗೀಹೋನ್ ಬುಗ್ಗೆಗೆ ಹೋಗಿರಿ. 34 ಅಲ್ಲಿ ಯಾಜಕನಾದ ಚಾದೋಕನು ಮತ್ತು ಪ್ರವಾದಿಯಾದ ನಾತಾನನು ಅವನನ್ನು ಇಸ್ರೇಲಿನ ನೂತನ ರಾಜನನ್ನಾಗಿ ಅಭಿಷೇಕಿಸಲಿ. ಅನಂತರ ತುತ್ತೂರಿಯನ್ನು ಊದಿರಿ; ಎಲ್ಲರೂ ‘ರಾಜನಾದ ಸೊಲೊಮೋನನು ಚಿರಂಜೀವಿಯಾಗಿರಲಿ’ ಎಂದು ಆರ್ಭಟಿಸಲಿ. 35 ನಂತರ ಅವನೊಂದಿಗೆ ಹಿಂದಿರುಗಿ ಇಲ್ಲಿಗೆ ಬನ್ನಿ. ಸೊಲೊಮೋನನು ನನ್ನ ಸಿಂಹಾಸನದ ಮೇಲೆ ಕುಳಿತುಕೊಂಡು ಹೊಸ ರಾಜನಾಗಿ ರಾಜ್ಯಭಾರ ಮಾಡಲಿ. ನಾನು ಸೊಲೊಮೋನನನ್ನು ಇಸ್ರೇಲಿನ ಮತ್ತು ಯೆಹೂದದ ರಾಜನನ್ನಾಗಿ ಆರಿಸಿದ್ದೇನೆ” ಎಂದು ಹೇಳಿದನು.
36 ಯೆಹೋಯಾದಾವನ ಮಗನಾದ ಬೆನಾಯನು, “ಆಮೆನ್, ನಿನ್ನ ದೇವರಾದ ಯೆಹೋವನು ಇದನ್ನು ಕಾರ್ಯಗತಗೊಳಿಸಲಿ. 37 ನನ್ನ ಒಡೆಯನಾದ ರಾಜನೇ, ನಿನಗೆ ಯಾವಾಗಲೂ ಸಹಾಯಮಾಡಿದ ಯೆಹೋವನು ಸೊಲೊಮೋನನಿಗೂ ಸಹಾಯ ಮಾಡಲಿ. ನಿನ್ನ ರಾಜ್ಯಕ್ಕಿಂತಲೂ ಸೊಲೊಮೋನನ ರಾಜ್ಯವು ಹೆಚ್ಚು ಬಲಿಷ್ಠವಾಗಲಿ.” ಎಂದು ಉತ್ತರಿಸಿದನು.
38 ಚಾದೋಕನು, ನಾತಾನನು, ಬೆನಾಯನು ಮತ್ತು ರಾಜನ ಅಧಿಕಾರಿಗಳು ರಾಜನಾದ ದಾವೀದನಿಗೆ ವಿಧೇಯರಾದರು. ಅವರು ಸೊಲೊಮೋನನನ್ನು ರಾಜನಾದ ದಾವೀದನ ಹೇಸರಕತ್ತೆಯ ಮೇಲೆ ಕುಳ್ಳಿರಿಸಿ, ಅವನೊಂದಿಗೆ ಗೀಹೋನಿಗೆ ಹೋದರು. 39 ಯಾಜಕನಾದ ಚಾದೋಕನು ಪವಿತ್ರಗುಡಾರದಿಂದ ಎಣ್ಣೆಯನ್ನು ತೆಗೆದುಕೊಂಡು ಬಂದನು. ಸೊಲೊಮೋನನು ರಾಜನೆಂದು ತೋರಿಸಲು ಅವನ ತಲೆಯ ಮೇಲೆ ಚಾದೋಕನು ಎಣ್ಣೆಯನ್ನು ಸುರಿದನು. ದಾವೀದನ ಜನರು ತುತ್ತೂರಿಯನ್ನು ಊದಿದರು. ಆಗ ಎಲ್ಲಾ ಜನರೂ, “ರಾಜನಾದ ಸೊಲೊಮೋನನು ಚಿರಂಜೀವಿಯಾಗಿರಲಿ” ಎಂದು ಆರ್ಭಟಿಸಿದರು. 40 ಜನರೆಲ್ಲರೂ ಸೊಲೊಮೋನನನ್ನು ಹಿಂಬಾಲಿಸುತ್ತಾ ನಗರಕ್ಕೆ ಬಂದರು. ಅವರು ಕೊಳಲುಗಳನ್ನು ಊದುತ್ತಾ ಸಂತಸದಿಂದ ಕೂಗಾಡುತ್ತಾ ಬಂದರು. ಅವರು ಮಾಡಿದ ಶಬ್ದವು ಭೂಮಿಯನ್ನೇ ನಡುಗಿಸುವಂತಿತ್ತು.
41 ಆ ಸಮಯಕ್ಕೆ ಅದೋನೀಯನು ಮತ್ತು ಅವನೊಂದಿಗಿದ್ದ ಅತಿಥಿಗಳು ಊಟವನ್ನು ಮುಗಿಸುತ್ತಿದ್ದರು. ಅವರಿಗೆ ತುತ್ತೂರಿಯ ಶಬ್ದವು ಕೇಳಿಸಿತು. ಯೋವಾಬನು, “ಆ ಶಬ್ದವು ಏನು? ನಗರದಲ್ಲಿ ಏನು ನಡೆಯುತ್ತಿದೆ?” ಎಂದು ಕೇಳಿದನು.
42 ಯೋವಾಬನು ಮಾತನಾಡುತ್ತಿದ್ದಂತೆ, ಯಾಜಕನಾದ ಎಬ್ಯಾತಾರನ ಮಗನಾದ ಯೋನಾತಾನನು ಅಲ್ಲಿಗೆ ಬಂದನು. ಅದೋನೀಯನು, “ಇಲ್ಲಿಗೆ ಬಾ! ನೀನು ಒಬ್ಬ ಒಳ್ಳೆಯ ಮನುಷ್ಯ. ಆದ್ದರಿಂದ ನೀನು ನನಗೆ ಶುಭ ಸಮಾಚಾರವನ್ನೇ ತಂದಿರುವೆ” ಎಂದು ಹೇಳಿದನು.
43 ಆದರೆ ಯೋನಾತಾನನು, “ಇಲ್ಲ! ಇದು ನಿನಗೆ ಶುಭ ಸಮಾಚಾರವಲ್ಲ! ನಮ್ಮ ರಾಜನಾದ ದಾವೀದನು ಸೊಲೊಮೋನನನ್ನು ನೂತನ ರಾಜನನ್ನಾಗಿ ಮಾಡಿದನು. 44 ರಾಜನಾದ ದಾವೀದನು ಯಾಜಕನಾದ ಚಾದೋಕನನ್ನು, ಪ್ರವಾದಿಯಾದ ನಾತಾನನನ್ನು, ಯೆಹೋಯಾದಾವನ ಮಗನಾದ ಬೆನಾಯನನ್ನು ಮತ್ತು ರಾಜನ ಎಲ್ಲಾ ಅಧಿಕಾರಿಗಳನ್ನು ಅವನೊಂದಿಗೆ ಕಳುಹಿಸಿದನು. ಅವರು ಸೊಲೊಮೋನನನ್ನು ರಾಜನ ಸ್ವಂತ ಹೇಸರಕತ್ತೆಯ ಮೇಲೆ ಕುಳ್ಳಿರಿಸಿದರು. 45 ನಂತರ ಯಾಜಕನಾದ ಚಾದೋಕನು ಮತ್ತು ಪ್ರವಾದಿಯಾದ ನಾತಾನನು ಗೀಹೋನ್ ಬುಗ್ಗೆಯ ಹತ್ತಿರ ಸೊಲೊಮೋನನನ್ನು ಅಭಿಷೇಕಿಸಿದರು. ಅನಂತರ ಅವರು ನಗರಕ್ಕೆ ಹೋದರು. ಅವರನ್ನು ಜನರು ಹಿಂಬಾಲಿಸಿದರು. ಈಗ ನಗರದ ಜನರು ತುಂಬಾ ಸಂತೋಷದಿಂದ ಇದ್ದಾರೆ. ಆ ಶಬ್ದವನ್ನೇ ನೀವು ಕೇಳುತ್ತಿರುವುದು. 46-47 ಸೊಲೊಮೋನನು ಈಗ ರಾಜನ ಸಿಂಹಾಸನದ ಮೇಲೆ ಕುಳಿತಿದ್ದಾನೆ. ರಾಜನಾದ ದಾವೀದನು ಒಳ್ಳೆಯ ಕಾರ್ಯಮಾಡಿದನೆಂದು ಹೇಳಲು ರಾಜನ ಸೇವಕರೆಲ್ಲರೂ ಬಂದಿದ್ದಾರೆ. ‘ನಿನ್ನ ದೇವರು ಸೊಲೊಮೋನನನ್ನು ನಿನಗಿಂತಲೂ ಪ್ರಖ್ಯಾತನನ್ನಾಗಿ ಮಾಡಲಿ. ದೇವರು ಸೊಲೊಮೋನನ ರಾಜ್ಯವನ್ನು ನಿನ್ನ ರಾಜ್ಯಕ್ಕಿಂತಲೂ ಹೆಚ್ಚು ಬಲಿಷ್ಠಗೊಳಿಸಲಿ. ಅವನು ನಿನಗಿಂತಲೂ ಉತ್ತಮನಾಗಲಿ!’ ಎಂದು ಅವರು ಹೇಳುತ್ತಿದ್ದಾರೆ. ರಾಜನಾದ ದಾವೀದನೂ ಅಲ್ಲಿದ್ದನು. ಅವನು ತನ್ನ ಹಾಸಿಗೆಯಲ್ಲಿ ತಲೆಬಾಗಿಸಿಕೊಂಡು, 48 ‘ನಾನು ಕಣ್ಣಾರೆ ಕಾಣುವಂತೆ ನನ್ನ ಮಕ್ಕಳಲ್ಲಿ ಒಬ್ಬನನ್ನು ಇಂದು ಸಿಂಹಾಸನದ ಮೇಲೆ ಕುಳ್ಳಿರಿಸಿದ ಇಸ್ರೇಲಿನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ’ ಎಂದು ಹೇಳಿದ್ದಾನೆ” ಎಂದನು.
17 ಸಹೋದರ ಸಹೋದರಿಯರೇ, ನಿಮ್ಮಲ್ಲಿ ಒಡಕುಗಳನ್ನು ಉಂಟುಮಾಡುವ ಜನರ ವಿಷಯದಲ್ಲಿ ನೀವು ಬಹು ಜಾಗ್ರತೆಯಿಂದ ಇರಬೇಕೆಂದು ನಾನು ನಿಮ್ಮನ್ನು ಕೇಳಿಕೊಳ್ಳುತ್ತೇನೆ. ಇತರರ ನಂಬಿಕೆಯನ್ನು ಕೆಡಿಸುವಂಥವರ ಬಗ್ಗೆ ಬಹು ಎಚ್ಚರದಿಂದಿರಿ. ನೀವು ಕಲಿತಿರುವ ಉಪದೇಶಕ್ಕೆ ಅವರು ವಿರುದ್ಧವಾಗಿದ್ದಾರೆ. ನೀವು ಅವರಿಂದ ದೂರವಿರಿ. 18 ಅಂಥ ಜನರು ನಮ್ಮ ಪ್ರಭುವಾದ ಕ್ರಿಸ್ತನ ಸೇವೆ ಮಾಡುತ್ತಿಲ್ಲ. ಅವರು ಕೇವಲ ತಮ್ಮ ಸುಖಕ್ಕಾಗಿ ಈ ಕಾರ್ಯಗಳನ್ನು ಮಾಡುತ್ತಿದ್ದಾರೆ. ಕೆಟ್ಟದರ ಬಗ್ಗೆ ತಿಳಿದಿಲ್ಲದ ಜನರ ಮನಸ್ಸುಗಳನ್ನು ಮೋಸಗೊಳಿಸುವುದಕ್ಕಾಗಿ ಅವರು ನಯನಾಜುಕಿನ ನುಡಿಗಳನ್ನಾಡುತ್ತಾರೆ ಮತ್ತು ಮುಖಸ್ತುತಿಯ ಮಾತುಗಳನ್ನಾಡುತ್ತಾರೆ. 19 ನಿಮ್ಮ ವಿಧೇಯತ್ವವು ಎಲ್ಲಾ ವಿಶ್ವಾಸಿಗಳಿಗೆ ತಿಳಿದಿದೆ. ಆದ್ದರಿಂದ ನಿಮ್ಮ ವಿಷಯದಲ್ಲಿ ನಾನು ಬಹು ಸಂತೋಷಪಡುತ್ತೇನೆ. ಆದರೆ ಒಳ್ಳೆಯ ಸಂಗತಿಗಳ ಬಗ್ಗೆ ನೀವು ವಿವೇಕಿಗಳಾಗಿರಬೇಕೆಂದು ಮತ್ತು ಕೆಟ್ಟಸಂಗತಿಗಳ ಬಗ್ಗೆ ಏನೂ ತಿಳಿದಿಲ್ಲದವರಾಗಿರಬೇಕೆಂದು ನಾನು ಅಪೇಕ್ಷಿಸುತ್ತೇನೆ.
20 ಶಾಂತಿಯನ್ನು ಕೊಡುವ ದೇವರು ಬೇಗನೆ ಸೈತಾನನನ್ನು ಸೋಲಿಸಿ, ಅವನ ಮೇಲೆ ನಿಮಗೆ ಅಧಿಕಾರವನ್ನು ಕೊಡುವನು.
ನಮ್ಮ ಪ್ರಭುವಾದ ಯೇಸುವಿನ ಕೃಪೆಯು ನಿಮ್ಮೊಂದಿಗಿರಲಿ.
Kannada Holy Bible: Easy-to-Read Version. All rights reserved. © 1997 Bible League International