Revised Common Lectionary (Semicontinuous)
ಗುಹೆಯಲ್ಲಿ ಸೌಲನಿಂದ ಪಾರಾದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ
57 ದೇವರೇ, ನನ್ನನ್ನು ಕರುಣಿಸು, ನನ್ನನ್ನು ಕನಿಕರಿಸು.
ನನ್ನ ಆತ್ಮವು ನಿನ್ನನ್ನೇ ಆಶ್ರಯಿಸಿಕೊಂಡಿದೆ.
ಆಪತ್ತು ಕೊನೆಗೊಳ್ಳುವ ತನಕ ಸಂರಕ್ಷಣೆಗಾಗಿ
ನಿನ್ನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುವೆನು.
2 ಸಹಾಯಕ್ಕಾಗಿ ಮಹೋನ್ನತನಾದ ದೇವರಿಗೆ ಮೊರೆಯಿಡುವೆನು.
ಆತನು ಕೊರತೆಗಳನ್ನೆಲ್ಲಾ ನೀಗಿಸುವನು.
3 ಆತನು ಪರಲೋಕದಿಂದ ನನಗೆ ಸಹಾಯಮಾಡಿ,
ನನ್ನನ್ನು ಕಾಡಿಸುವವರನ್ನು ಸೋಲಿಸುವನು.
ದೇವರು ತನ್ನ ಪ್ರೀತಿಯನ್ನೂ
ನಂಬಿಗಸ್ತಿಕೆಯನ್ನೂ ತೋರ್ಪಡಿಸುವನು.
4 ನನ್ನ ಪ್ರಾಣವು ಅಪಾಯದಲ್ಲಿದೆ.
ನನ್ನ ಶತ್ರುಗಳು ನನ್ನನ್ನು ಮುತ್ತಿಕೊಂಡಿದ್ದಾರೆ.
ಅವರು ಸಿಂಹಗಳಂತಿದ್ದಾರೆ.
ಅವರ ಹಲ್ಲುಗಳು ಬಾಣಗಳಂತಿವೆ;
ಅವರ ನಾಲಿಗೆಗಳು ಹರಿತವಾದ ಖಡ್ಗಗಳಂತಿವೆ.
5 ದೇವರೇ, ಪರಲೋಕದಲ್ಲಿ ನಿನ್ನ ಪ್ರಭಾವವು ಮೆರೆಯಲಿ.
ನಿನ್ನ ಮಹಿಮೆಯು ಭೂಮಂಡಲವನ್ನೆಲ್ಲಾ ಆವರಿಸಿಕೊಳ್ಳಲಿ.
6 ನನ್ನನ್ನು ಬಂಧಿಸಲು
ನನ್ನ ವೈರಿಗಳು ನನಗೆ ಬಲೆಯೊಡ್ಡಿದ್ದಾರೆ.
ನನ್ನನ್ನು ಬೀಳಿಸಲು ಕುಣಿ ತೋಡಿದರು.
ಆದರೆ ಅವರೇ ಅದರಲ್ಲಿ ಬಿದ್ದುಹೋದರು.
7 ದೇವರೇ, ನನ್ನ ಹೃದಯವು ಸ್ಥಿರವಾಗಿದೆ; ನನ್ನ ಹೃದಯವು ದೃಢವಾಗಿದೆ.
ನಾನು ವಾದ್ಯ ಬಾರಿಸುತ್ತಾ ಹಾಡುವೆನು.
8 ನನ್ನ ಮನವೇ, ಎಚ್ಚರಗೊಳ್ಳು!
ಹಾರ್ಪ್ ಮತ್ತು ಲೈರ್ ವಾದ್ಯಗಳೇ, ಎಚ್ಚರಗೊಳ್ಳಿರಿ.
ಸಂಕೀರ್ತನೆಯಿಂದ ಸೂರ್ಯೋದಯವನ್ನು ಎದುರುಗೊಳ್ಳೋಣ.
9 ನನ್ನ ಒಡೆಯನೇ, ಜನಾಂಗಗಳ ನಡುವೆ ನಿನ್ನನ್ನು ಕೊಂಡಾಡುವೆನು.
ಎಲ್ಲಾ ದೇಶಗಳಲ್ಲಿ ನಿನಗೆ ಸ್ತುತಿಗೀತೆಗಳನ್ನು ಹಾಡುವೆನು.
10 ಯಾಕೆಂದರೆ ನಿನ್ನ ಪ್ರೀತಿಯು ಮುಗಿಲನ್ನು ಮುಟ್ಟುವಷ್ಟೂ
ನಿನ್ನ ನಂಬಿಗಸ್ತಿಕೆಯು ಆಕಾಶವನ್ನು ನಿಲುಕುವಷ್ಟೂ ದೊಡ್ಡದಾಗಿದೆ.
11 ದೇವರೇ, ಪರಲೋಕದಲ್ಲಿ ನಿನ್ನ ಪ್ರಭಾವವು ಮೆರೆಯಲಿ.
ನಿನ್ನ ಮಹಿಮೆಯು ಭೂಮಂಡಲವನ್ನೆಲ್ಲಾ ಆವರಿಸಿಕೊಳ್ಳಲಿ.
ಯೋವಾಬನು ದಾವೀದನನ್ನು ಖಂಡಿಸಿದ್ದು
19 ಈ ಸುದ್ದಿಯನ್ನು ಜನರು ಯೋವಾಬನಿಗೆ ತಿಳಿಸಿದರು. ಅವರು ಯೋವಾಬನಿಗೆ, “ನೋಡು, ರಾಜನು ಅಳುತ್ತಿದ್ದಾನೆ ಮತ್ತು ಅಬ್ಷಾಲೋಮನಿಗಾಗಿ ಬಹಳ ದುಃಖಪಡುತ್ತಿದ್ದಾನೆ” ಎಂದು ಹೇಳಿದರು. 2 ದಾವೀದನ ಸೈನ್ಯವು ಅಂದು ಯುದ್ಧದಲ್ಲಿ ಜಯಗಳಿಸಿತು. ಆದರೆ ಜನರಿಗೆಲ್ಲ ಆ ದಿನವೇ ಅತ್ಯಂತ ಶೋಕದ ದಿನವೂ ಆಯಿತು. “ರಾಜನು ಮಗನಿಗಾಗಿ ಬಹಳ ದುಃಖಪಡುತ್ತಿದ್ದಾನೆ” ಎಂಬುದನ್ನು ಜನರು ಕೇಳಿ ದುಃಖಪಟ್ಟರು.
3 ಜನರು ನಾಚಿಕೆಯಿಂದ ನಗರದೊಳಕ್ಕೆ ಸದ್ದಿಲ್ಲದೆ ಬಂದರು. ಅವರು ಯುದ್ಧದಲ್ಲಿ ಸೋತುಬಂದವರಂತೆ ಕಾಣುತ್ತಿದ್ದರು. 4 ರಾಜನು ತನ್ನ ಮುಖವನ್ನು ಮುಚ್ಚಿಕೊಂಡಿದ್ದನು. ರಾಜನು, “ನನ್ನ ಮಗನೇ, ಅಬ್ಷಾಲೋಮನೇ, ಅಬ್ಷಾಲೋಮನೇ, ನನ್ನ ಮಗನೇ, ಮಗನೇ” ಎಂದು ಗಟ್ಟಿಯಾಗಿ ಅಳುತ್ತಿದ್ದನು.
5 ಯೋವಾಬನು ರಾಜನ ಮನೆಗೆ ಬಂದನು. ಅವನು ರಾಜನಿಗೆ, “ನೀನು ನಿನ್ನ ಎಲ್ಲಾ ಸೈನಿಕರನ್ನು ಅವಮಾನ ಮಾಡುತ್ತಿರುವೆ! ನಿನ್ನ ಸೈನಿಕರು ಇಂದು ನಿನ್ನ ಜೀವವನ್ನು ರಕ್ಷಿಸಿದರು. ಅವರು ನಿನ್ನ ಗಂಡುಮಕ್ಕಳ, ಹೆಣ್ಣುಮಕ್ಕಳ, ಪತ್ನಿಯರ ಮತ್ತು ದಾಸಿಯರ ಜೀವಗಳನ್ನು ರಕ್ಷಿಸಿದರು. 6 ನಿನ್ನನ್ನು ದ್ವೇಷಿಸುವ ಜನರನ್ನು ನೀನು ಪ್ರೀತಿಸುವೆ; ನಿನ್ನನ್ನು ಪ್ರೀತಿಸುವ ಜನರನ್ನು ನೀನು ದ್ವೇಷಿಸುವೆ. ಆದ್ದರಿಂದ ನಿನ್ನ ಸೇವಕರು ಅವಮಾನಿತರಾಗಿದ್ದಾರೆ. ನಿನ್ನ ಅಧಿಕಾರಿಗಳು ಮತ್ತು ನಿನ್ನ ಜನರು ನಿನಗೆ ಮುಖ್ಯವಲ್ಲ ಎಂಬುದನ್ನು ನೀನಿಂದು ರುಜುವಾತುಪಡಿಸಿದೆ. ಇಂದು ಅಬ್ಷಾಲೋಮನು ಬದುಕಿದ್ದು, ನಾವೆಲ್ಲರೂ ಸತ್ತಿದ್ದರೆ, ನೀನು ಬಹಳ ಹರ್ಷಗೊಳುತ್ತಿದ್ದೆ ಎಂಬುದನ್ನು ನಾನು ಈ ದಿನ ಕಂಡುಕೊಂಡೆನು. 7 ಈಗ ಮೇಲೆದ್ದು ನಿನ್ನ ಸೇವಕರೊಂದಿಗೆ ಮಾತನಾಡು; ಅವರನ್ನು ಪ್ರೋತ್ಸಾಹಿಸು. ಯೆಹೋವನಾಣೆ, ಈ ಕಾರ್ಯವನ್ನು ಮಾಡಲು ನೀನಿಂದು ಹೊರಗೆ ಹೋಗದಿದ್ದರೆ, ರಾತ್ರಿಯ ವೇಳೆಗೆ ನಿನ್ನೊಂದಿಗೆ ಯಾವ ಮನುಷ್ಯನೂ ಉಳಿಯುವುದಿಲ್ಲ. ನೀನು ನಿನ್ನ ಚಿಕ್ಕಂದಿನಿಂದ ಈವರೆಗೆ ಅನುಭವಿಸಿದ ಸಂಕಷ್ಟಗಳಲ್ಲೆಲ್ಲ ಇದು ತೀರ ಕೆಟ್ಟದಾಗಿರುತ್ತದೆ” ಎಂದು ಹೇಳಿದನು.
8 ಆಗ ರಾಜನು ನಗರದ ಬಾಗಿಲಿಗೆ ಹೋದನು. ರಾಜನು ಬಾಗಿಲಿನ ಬಳಿಯಲ್ಲಿದ್ದಾನೆಂಬ ಸುದ್ದಿಯು ಹರಡಿತು. ಆದ್ದರಿಂದ ಜನರೆಲ್ಲರೂ ರಾಜನನ್ನು ನೋಡಲು ಬಂದರು. ಅಬ್ಷಾಲೋಮನ ಹಿಂಬಾಲಕರಾದ ಇಸ್ರೇಲರೆಲ್ಲ ಮನೆಗಳಿಗೆ ಓಡಿಹೋದರು.
ದಾವೀದನು ಮತ್ತೆ ರಾಜನಾದನು
9 ಇಸ್ರೇಲಿನ ಕುಲಗಳ ಜನರೆಲ್ಲರೂ ತಮ್ಮಲ್ಲೇ ಚರ್ಚಿಸಿದರು. ಅವರು, “ರಾಜನಾದ ದಾವೀದನು ಫಿಲಿಷ್ಟಿಯರಿಂದ ಮತ್ತು ಇತರ ಶತ್ರುಗಳಿಂದ ನಮ್ಮನ್ನು ರಕ್ಷಿಸಿದನು. ಅಬ್ಷಾಲೋಮನಿಂದಾಗಿ ದಾವೀದನು ಓಡಿಹೋಗಬೇಕಾಯಿತು. 10 ನಾವು ನಮ್ಮನ್ನು ಆಳಲು ಅಬ್ಷಾಲೋಮನನ್ನು ಆರಿಸಿಕೊಂಡೆವು. ಆದರೆ ಅವನೀಗ ಯುದ್ಧದಲ್ಲಿ ಸತ್ತಿದ್ದಾನೆ. ದಾವೀದನನ್ನು ನಾವು ಮತ್ತೆ ರಾಜನನ್ನಾಗಿ ಮಾಡೋಣ” ಎಂದರು.
11 ಈ ಸುದ್ದಿ ರಾಜನಿಗೆ ಮುಟ್ಟಿತು. ಆಗ ಅವನು ಯಾಜಕರಾದ ಚಾದೋಕನಿಗೆ ಮತ್ತು ಎಬ್ಯಾತಾರನಿಗೆ ಸಂದೇಶವನ್ನು ಕಳುಹಿಸಿದನು. ಅವನು ಹೇಳಿದ್ದೇನೆಂದರೆ, “ಯೆಹೂದದ ನಾಯಕರೊಂದಿಗೆ ಮಾತಾಡಿರಿ. ಅವರಿಗೆ, ‘ಅರಸನಾದ ನನ್ನನ್ನು ಅರಮನೆಗೆ ಕರೆದುಕೊಂಡು ಹೋಗುವುದರಲ್ಲಿ ನೀವು ಕೊನೆಯವರಾದದ್ದೇಕೆ? ನೋಡಿ, ರಾಜನನ್ನು ಹಿಂದೆ ಕರೆತರಬೇಕೆಂದು ಇಸ್ರೇಲರೆಲ್ಲ ಮಾತನಾಡಿಕೊಳ್ಳುತ್ತಿದ್ದಾರೆ. 12 ನೀವು ನನ್ನ ಸೋದರರು, ನೀವು ನನ್ನ ಕುಟುಂಬದವರು. ಹೀಗಿರುವಾಗ ನನ್ನನ್ನು ಮತ್ತೆ ಕರೆತರಲು ನೀವೇಕೆ ಕೊನೆಯವರಾದಿರಿ?’ ಎಂದು ಹೇಳಿ. 13 ಅಲ್ಲದೆ ಅಮಾಸನಿಗೆ, ‘ನೀನು ನನ್ನ ಕುಟುಂಬದ ಒಂದು ಭಾಗವಾಗಿರುವೆ. ನಾನು ನಿನ್ನನ್ನು ಯೋವಾಬನ ಸ್ಥಾನದಲ್ಲಿ ಸೇನಾಪತಿಯನ್ನಾಗಿ ಮಾಡದೆ ಹೋದರೆ, ದೇವರು ನನ್ನನ್ನು ದಂಡಿಸಲಿ’ ಎಂದು ಹೇಳಿ” ಎಂದನು.
14 ದಾವೀದನ ಮಾತುಗಳು ಯೆಹೂದದ ಜನರೆಲ್ಲರ ಹೃದಯಗಳಿಗೆ ತಾಕಿದವು, ಅವರೆಲ್ಲರೂ ಒಂದೇ ಮನಸ್ಸಿನಿಂದ ಒಪ್ಪಿಕೊಂಡರು. ಯೆಹೂದದ ಜನರು ರಾಜನಿಗೆ, “ನೀನು ನಿನ್ನ ಸೇವಕರೆಲ್ಲರೊಡನೆ ಹಿಂದಿರುಗಿ ಬಾ” ಎಂಬ ಸಂದೇಶವೊಂದನ್ನು ಕಳುಹಿಸಿದರು.
15 ಆಗ ರಾಜನಾದ ದಾವೀದನು ಜೋರ್ಡನ್ ನದಿಯ ಬಳಿಗೆ ಬಂದನು. ಯೆಹೂದದ ಜನರು ರಾಜನನ್ನು ಭೇಟಿ ಮಾಡಲು ಗಿಲ್ಗಾಲಿಗೆ ಬಂದರು. ರಾಜನಾದ ದಾವೀದನನ್ನು ಜೋರ್ಡನ್ ನದಿಯಿಂದ ಈಚೆಗೆ ಕರೆತರಬೇಕೆಂದು ಅವರೆಲ್ಲ ಬಂದರು.
ಶಿಮ್ಮಿಯು ದಾವೀದನಿಂದ ಕ್ಷಮೆ ಕೇಳಿದ್ದು
16 ಗೇರನ ಮಗನಾದ ಶಿಮ್ಮಿಯು ಬೆನ್ಯಾಮೀನ್ ಕುಲದವನು. ಅವನು ಬಹುರೀಮಿನಲ್ಲಿ ನೆಲೆಸಿದ್ದನು. ರಾಜನಾದ ದಾವೀದನನ್ನು ಭೇಟಿ ಮಾಡಲು ಶಿಮ್ಮಿಯು ತ್ವರಿತವಾಗಿ ಯೆಹೂದದ ಜನರೊಂದಿಗೆ ಬಂದನು. 17 ಬೆನ್ಯಾಮೀನ್ ಕುಲದ ಒಂದು ಸಾವಿರ ಜನರು ಸಹ ಶಿಮ್ಮಿಯೊಂದಿಗೆ ಬಂದರು. ಸೌಲನ ಕುಲದಲ್ಲಿ ಸೇವಕನಾಗಿದ್ದ ಚೀಬನು ಸಹ ಬಂದನು. ಚೀಬನು ತನ್ನ ಹದಿನೈದು ಜನ ಮಕ್ಕಳನ್ನು ಮತ್ತು ಇಪ್ಪತ್ತು ಜನ ಸೇವಕರನ್ನು ತನ್ನೊಂದಿಗೆ ಕರೆತಂದನು. ಇವರೆಲ್ಲರೂ ರಾಜನಾದ ದಾವೀದನನ್ನು ಸಂಧಿಸಲು ಜೋರ್ಡನ್ ನದಿಯ ಹತ್ತಿರಕ್ಕೆ ಬಂದರು.
18 ರಾಜನ ಕುಟುಂಬವನ್ನು ಯೆಹೂದಕ್ಕೆ ಕರೆತರಲು ಜನರೆಲ್ಲರೂ ಜೋರ್ಡನ್ ನದಿಯನ್ನು ದಾಟಿ ಹೋದರು. ರಾಜನು ಅಪೇಕ್ಷೆಪಟ್ಟಿದ್ದನ್ನು ಜನರು ಮಾಡಿದರು. ರಾಜನು ನದಿಯನ್ನು ದಾಟುತ್ತಿರುವಾಗ, ಗೇರನ ಮಗನಾದ ಶಿಮ್ಮಿಯು ಅವನನ್ನು ಸಂಧಿಸಲು ಬಂದನು. ರಾಜನ ಎದುರಿನಲ್ಲಿ ಶಿಮ್ಮಿಯು ನೆಲಕ್ಕೆ ಬಾಗಿ ನಮಸ್ಕರಿಸಿದನು.
35 ಅದಕ್ಕೆ ಯೇಸು, “ನಾನೇ ಜೀವಕೊಡುವ ರೊಟ್ಟಿ. ನನ್ನ ಬಳಿಗೆ ಬರುವವನಿಗೆ ಎಂದಿಗೂ ಹಸಿವೆಯಾಗದು. ನನ್ನಲ್ಲಿ ನಂಬಿಕೆ ಇಡುವವನಿಗೆ ಎಂದಿಗೂ ಬಾಯಾರಿಕೆಯಾಗದು. 36 ನಾನು ನಿಮಗೆ ಮೊದಲೇ ಹೇಳಿದಂತೆ, ನೀವು ನನ್ನನ್ನು ನೋಡಿದ್ದರೂ ಇನ್ನೂ ನನ್ನನ್ನು ನಂಬುತ್ತಿಲ್ಲ. 37 ತಂದೆಯು ನನ್ನ ಜನರನ್ನು ನನಗೆ ಕೊಡುತ್ತಾನೆ. ಆ ಜನರಲ್ಲಿ ಪ್ರತಿಯೊಬ್ಬರೂ ನನ್ನ ಬಳಿಗೆ ಬರುತ್ತಾರೆ. ನನ್ನಲ್ಲಿಗೆ ಬರುವ ಪ್ರತಿಯೊಬ್ಬರನ್ನೂ ನಾನು ಖಂಡಿತವಾಗಿ ಸ್ವೀಕರಿಸಿಕೊಳ್ಳುವೆನು, ಅವರನ್ನು ಎಂದಿಗೂ ತಳ್ಳಿಬಿಡುವುದಿಲ್ಲ. 38 ನಾನು ಪರಲೋಕದಿಂದ ಇಳಿದು ಬಂದದ್ದು ದೇವರ ಚಿತ್ತಕ್ಕನುಸಾರವಾಗಿ ಮಾಡುವುದಕ್ಕಾಗಿಯೇ ಹೊರತು ನನ್ನ ಚಿತ್ತಕ್ಕನುಸಾರವಾಗಿಯಲ್ಲ. 39 ದೇವರು ನನಗೆ ಕೊಟ್ಟಿರುವ ಯಾವ ವ್ಯಕ್ತಿಯನ್ನೂ ನಾನು ಕಳೆದುಕೊಳ್ಳಕೂಡದು. ಅಲ್ಲದೆ ಅಂತಿಮ ದಿನದಂದು ನಾನು ಆ ಜನರನ್ನು ಜೀವಂತವಾಗಿ ಎಬ್ಬಿಸಬೇಕು. ನನ್ನನ್ನು ಕಳುಹಿಸಿದಾತನು ಆ ಕಾರ್ಯವನ್ನೇ ನನ್ನಿಂದ ಅಪೇಕ್ಷಿಸುತ್ತಾನೆ. 40 ಮಗನನ್ನು ನೋಡಿ ಆತನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬನೂ ನಿತ್ಯಜೀವವನ್ನು ಹೊಂದಿದ್ದಾನೆ. ಅಂತಿಮ ದಿನದಂದು ನಾನು ಆ ವ್ಯಕ್ತಿಯನ್ನು ಜೀವಂತವಾಗಿ ಎಬ್ಬಿಸುವೆನು. ನನ್ನ ತಂದೆಯು ಬಯಸುವುದು ಇದನ್ನೇ” ಎಂದನು.
Kannada Holy Bible: Easy-to-Read Version. All rights reserved. © 1997 Bible League International