Revised Common Lectionary (Semicontinuous)
ರಚನೆಗಾರ: ದಾವೀದ.
20 ಇಕ್ಕಟ್ಟಿನಲ್ಲಿ ಯೆಹೋವನು ನಿನ್ನ ಮೊರೆಯನ್ನು ಕೇಳಲಿ.
ಯಾಕೋಬನ ದೇವರು ನಿನ್ನ ಹೆಸರನ್ನು ಪ್ರಖ್ಯಾತಿಪಡಿಸಲಿ.
2 ಆತನು ತನ್ನ ಪವಿತ್ರ ಸ್ಥಳದಿಂದ ನಿನಗೆ ಸಹಾಯಮಾಡಲಿ.
ಚೀಯೋನಿನಿಂದ ನಿನಗೆ ಆಧಾರ ನೀಡಲಿ.
3 ನೀನು ಅರ್ಪಿಸಿದ ಕಾಣಿಕೆಗಳನ್ನೆಲ್ಲ ಆತನು ಜ್ಞಾಪಿಸಿಕೊಳ್ಳಲಿ.
ನಿನ್ನ ಯಜ್ಞಗಳನ್ನೆಲ್ಲ ಆತನು ಸ್ವೀಕರಿಸಿಕೊಳ್ಳಲಿ.
4 ಆತನು ನಿನ್ನ ಬಯಕೆಗಳನ್ನು ಈಡೇರಿಸಲಿ.
ನಿನ್ನ ಆಲೋಚನೆಗಳನ್ನೆಲ್ಲ ನೆರವೇರಿಸಲಿ.
5 ದೇವರು ನಿನಗೆ ಸಹಾಯಮಾಡುವಾಗ ಹರ್ಷಿಸುವೆವು.
ಆತನ ಹೆಸರನ್ನು ಕೊಂಡಾಡೋಣ.
ಯೆಹೋವನು ನಿನ್ನ ಕೋರಿಕೆಗಳನ್ನೆಲ್ಲ ನೆರವೇರಿಸಲಿ.
6 ಯೆಹೋವನು ತಾನು ಅಭಿಷೇಕಿಸಿದ ರಾಜನಿಗೆ ಸಹಾಯಮಾಡುತ್ತಾನೆಂದು ಈಗ ನನಗೆ ಗೊತ್ತಾಯಿತು.
ದೇವರು ತಾನು ಆರಿಸಿಕೊಂಡ ರಾಜನಿಗೆ ಪರಲೋಕದಿಂದ ಉತ್ತರಿಸಿದನು;
ತನ್ನ ಮಹಾಶಕ್ತಿಯಿಂದ ಅವನನ್ನು ರಕ್ಷಿಸಿದನು.
7 ಕೆಲವರು ತಮ್ಮ ರಥಗಳಲ್ಲಿ ಭರವಸವಿಡುವರು.
ಕೆಲವರು ತಮ್ಮ ಸೈನಿಕರುಗಳಲ್ಲಿ ಭರವಸವಿಡುವರು.
ನಾವಾದರೋ ನಮ್ಮ ದೇವರಾದ ಯೆಹೋವನನ್ನೇ ಜ್ಞಾಪಿಸಿಕೊಳ್ಳುವೆವು.
8 ಅವರು ಸೋತುಹೋದರು; ಯುದ್ಧದಲ್ಲಿ ಸತ್ತುಹೋದರು;
ನಾವಾದರೋ ಜಯಗಳಿಸಿದೆವು! ನಾವು ಜಯಪ್ರದರಾಗಿ ನಿಂತುಕೊಳ್ಳುವೆವು!
9 ಯಾಕೆಂದರೆ ಯೆಹೋವನು ತಾನು ಅಭಿಷೇಕಿಸಿದ ರಾಜನನ್ನು ರಕ್ಷಿಸಿದನು!
ನಾವು ಸಹಾಯಕ್ಕಾಗಿ ಮೊರೆಯಿಟ್ಟಾಗ ಆತನು ಸದುತ್ತರವನ್ನು ದಯಪಾಲಿಸಿದನು.
ಸೌಲನು ಮಾಡಿದ ಮೊದಲ ತಪ್ಪು
13 ಆ ಸಮಯದಲ್ಲಿ ಸೌಲನು ರಾಜನಾಗಿ ಒಂದು ವರ್ಷವಾಗಿತ್ತು. ಸೌಲನು ಎರಡು ವರ್ಷಗಳ ಕಾಲ ಇಸ್ರೇಲನ್ನು ಆಳಿದ ನಂತರ, 2 ಅವನು ಮೂರು ಸಾವಿರ ಇಸ್ರೇಲ್ ಗಂಡಸರನ್ನು ಆರಿಸಿಕೊಂಡನು. ಅವರಲ್ಲಿ ಎರಡು ಸಾವಿರ ಗಂಡಸರು ಗುಡ್ಡಗಾಡು ಪ್ರದೇಶವಾದ ಬೇತೇಲಿನಲ್ಲಿಯೂ ಮಿಕ್ಮಾಷಿನಲ್ಲಿಯೂ ಅವನೊಂದಿಗೆ ಇದ್ದರು. ಉಳಿದ ಒಂದು ಸಾವಿರ ಗಂಡಸರು ಬೆನ್ಯಾಮೀನನ ಗಿಬೆಯದಲ್ಲಿ ಯೋನಾತಾನನೊಂದಿಗೆ ಇದ್ದರು. ಸೌಲನು ಸೈನ್ಯದಲ್ಲಿದ್ದ ಇತರರನ್ನು ಅವರವರ ಮನೆಗಳಿಗೆ ಮರಳಿ ಕಳುಹಿಸಿದನು.
3 ಯೋನಾತಾನನು ಫಿಲಿಷ್ಟಿಯರನ್ನು ಅವರ ಶಿಬಿರವಿದ್ದ ಗೆಬದಲ್ಲಿ ಸೋಲಿಸಿದನು. ಫಿಲಿಷ್ಟಿಯರು ಈ ವಿಚಾರವನ್ನು ಕೇಳಿ, “ಇಬ್ರಿಯರು ದಂಗೆ ಎದ್ದಿದ್ದಾರೆ” ಎಂದು ಹೇಳಿದರು.
ಸೌಲನು, “ಏನು ನಡೆಯಿತೆಂಬುದು ಇಬ್ರಿಯರಿಗೆ ತಿಳಿಯಲಿ” ಎಂದು ಹೇಳಿದನು. ಆದ್ದರಿಂದ ಸೌಲನು ಇಸ್ರೇಲ್ ದೇಶದಲ್ಲೆಲ್ಲಾ ಕೊಂಬೂದಿಸಬೇಕೆಂದು ಜನರಿಗೆ ಹೇಳಿದನು. 4 ಇಸ್ರೇಲರೆಲ್ಲರೂ ಈ ಸುದ್ದಿಯನ್ನು ಕೇಳಿ, “ಸೌಲನು ಫಿಲಿಷ್ಟಿಯರ ನಾಯಕನನ್ನು ಕೊಂದನು. ಈಗ ಫಿಲಿಷ್ಟಿಯರು ಇಸ್ರೇಲರನ್ನು ನಿಜವಾಗಿಯೂ ದ್ವೇಷಿಸುತ್ತಾರೆ” ಎಂದು ಹೇಳಿದರು.
ಇಸ್ರೇಲರೆಲ್ಲ ಗಿಲ್ಗಾಲಿನಲ್ಲಿ ಸೌಲನನ್ನು ಜೊತೆಸೇರಲು ಕರೆಹೋಯಿತು. 5 ಫಿಲಿಷ್ಟಿಯರು ಇಸ್ರೇಲರೊಡನೆ ಹೋರಾಡಲು ಒಟ್ಟುಗೂಡಿದರು. ಫಿಲಿಷ್ಟಿಯರಲ್ಲಿ ಮೂರು ಸಾವಿರ[a] ರಥಗಳಿದ್ದವು; ಆರು ಸಾವಿರ ಅಶ್ವಸೈನಿಕರಿದ್ದರು. ಫಿಲಿಷ್ಟಿಯರಲ್ಲಿ ನದಿದಂಡೆಯ ಮರಳಿನ ಕಣಗಳಷ್ಟು ಯೋಧರಿದ್ದರು. ಫಿಲಿಷ್ಟಿಯರು ಬೇತಾವೆನಿನ ಪೂರ್ವ ದಿಕ್ಕಿನಲ್ಲಿರುವ ಮಿಕ್ಮಾಷಿನಲ್ಲಿ ಪಾಳೆಯಮಾಡಿಕೊಂಡರು.
6 ಇಸ್ರೇಲರು ತಾವು ತೊಂದರೆಗೆ ಒಳಗಾಗಿರುವುದನ್ನೂ ಇಕ್ಕಟ್ಟಿನಲ್ಲಿ ಸಿಕ್ಕಿಬಿದ್ದಿರುವುದನ್ನೂ ತಿಳಿದುಕೊಂಡರು. ಅವರು ಗವಿಗಳಲ್ಲಿ ಮತ್ತು ಬಂಡೆಗಲ್ಲುಗಳ ಸಂಧಿಗಳಲ್ಲಿ ಅಡಗಿಕೊಳ್ಳಲು ಓಡಿಹೋದರು. ಅವರು ಬಂಡೆಗಳ ಮಧ್ಯದಲ್ಲಿಯೂ ಬಾವಿಗಳಲ್ಲಿಯೂ ಮತ್ತು ನೆಲದ ಕುಳಿಗಳಲ್ಲಿಯೂ ಅಡಗಿಕೊಂಡರು. 7 ಇಬ್ರಿಯರಲ್ಲಿ ಕೆಲವರು ಜೋರ್ಡನ್ ನದಿಯನ್ನು ದಾಟಿ ಗಾದ್ ಮತ್ತು ಗಿಲ್ಯಾದ್ ಪ್ರದೇಶಕ್ಕೆ ಹೊರಟುಹೋದರು. ಸೌಲನು ಇನ್ನೂ ಗಿಲ್ಗಾಲಿನಲ್ಲೇ ಇದ್ದನು. ಅವನ ಸೈನ್ಯದಲ್ಲಿದ್ದ ಜನರೆಲ್ಲ ಭಯದಿಂದ ನಡುಗತೊಡಗಿದರು.
8 ಸಮುವೇಲನು ತಾನು ಸೌಲನನ್ನು ಗಿಲ್ಗಾಲಿನಲ್ಲಿ ಭೇಟಿಮಾಡುವುದಾಗಿ ಹೇಳಿಕಳುಹಿಸಿದನು. ಆದ್ದರಿಂದ ಸೌಲನು ಏಳು ದಿನಗಳವರೆಗೆ ಅಲ್ಲಿ ಕಾದುಕೊಂಡಿದ್ದನು. ಆದರೆ ಸಮುವೇಲನು ಗಿಲ್ಗಾಲಿಗೆ ಬರುವುದಕ್ಕಿಂತ ಮೊದಲೇ ಸೈನಿಕರು ಸೌಲನನ್ನು ಬಿಟ್ಟುಹೋಗ ತೊಡಗಿದರು. 9 ಆದ್ದರಿಂದ ಸೌಲನು, “ಸರ್ವಾಂಗಹೋಮಕ್ಕೂ ಸಮಾಧಾನಯಜ್ಞಕ್ಕೂ ಬೇಕಾದವುಗಳನ್ನು ತನ್ನಿ” ಎಂದು ಹೇಳಿದನು. ಬಳಿಕ ಸೌಲನು ಸರ್ವಾಂಗಹೋಮವನ್ನು ಅರ್ಪಿಸಿದನು. 10 ಸೌಲನು ಸರ್ವಾಂಗಹೋಮವನ್ನು ಅರ್ಪಿಸಿ ಮುಗಿಸುವಷ್ಟರಲ್ಲೇ ಸಮುವೇಲನು ಬಂದನು. ಸೌಲನು ಅವನನ್ನು ವಂದಿಸಲು ಹೊರಗೆ ಹೋದನು.
11 ಸಮುವೇಲನು, “ನೀನು ಮಾಡಿದ್ದೇನು?” ಎಂದು ಕೇಳಿದನು.
ಸೌಲನು, “ಸೈನಿಕರು ನನ್ನನ್ನು ಬಿಟ್ಟುಹೋಗುತ್ತಿರುವುದನ್ನೂ ನೀನು ನಿಯಮಿತಕಾಲದಲ್ಲಿ ಇಲ್ಲಿ ಇಲ್ಲದಿರುವುದನ್ನೂ ಫಿಲಿಷ್ಟಿಯರು ಮಿಕ್ಮಾಷಿನಲ್ಲಿ ಒಟ್ಟುಗೂಡುತ್ತಿರುವುದನ್ನೂ ನೋಡಿದೆನು. 12 ನಾನು ನನ್ನಲ್ಲಿಯೇ ಯೋಚಿಸುತ್ತಾ, ‘ಫಿಲಿಷ್ಟಿಯರು ಇಲ್ಲಿಗೆ ಬಂದು ಗಿಲ್ಗಾಲಿನಲ್ಲಿ ನನ್ನ ಮೇಲೆ ಆಕ್ರಮಣ ಮಾಡುತ್ತಾರೆ. ನಮಗೆ ಸಹಾಯ ಮಾಡುವಂತೆ ನಾನು ದೇವರಲ್ಲಿ ಇನ್ನೂ ಪ್ರಾರ್ಥಿಸಿಲ್ಲ. ಆದ್ದರಿಂದ ನನ್ನಲ್ಲಿಯೇ ಆದ ಒತ್ತಡದಿಂದ ಸರ್ವಾಂಗಹೋಮವನ್ನು ಅರ್ಪಿಸಿದೆನು’” ಎಂದನು.
13 ಸಮುವೇಲನು, “ನೀನು ಬುದ್ಧಿಹೀನಕೃತ್ಯವನ್ನು ಮಾಡಿದೆ. ನಿನ್ನ ದೇವರಾದ ಯೆಹೋವನ ಆಜ್ಞೆಗೆ ನೀನು ವಿಧೇಯನಾಗಲಿಲ್ಲ. ನೀನು ಯೆಹೋವನ ಆಜ್ಞೆಗೆ ವಿಧೇಯನಾಗಿದ್ದರೆ, ನಿನ್ನ ಕುಟುಂಬವು ಇಸ್ರೇಲನ್ನು ಶಾಶ್ವತವಾಗಿ ಆಳುವಂತೆ ಯೆಹೋವನು ಮಾಡುತ್ತಿದ್ದನು. 14 ಆದರೆ ಈಗ ನಿನ್ನ ಆಳ್ವಿಕೆಯು ಮುಂದುವರಿಯುವುದಿಲ್ಲ. ಯೆಹೋವನು ತನಗೆ ವಿಧೇಯನಾಗಿರುವಂತಹ ಮನುಷ್ಯನಿಗಾಗಿ ಹುಡುಕುತ್ತಿದ್ದನು. ಯೆಹೋವನಿಗೆ ಅಂತಹ ಮನುಷ್ಯನು ಸಿಕ್ಕಿದ್ದಾನೆ. ತನ್ನ ಜನರನ್ನು ಆಳಲು ಯೆಹೋವನು ಅವನನ್ನು ಹೊಸ ನಾಯಕನನ್ನಾಗಿ ನೇಮಿಸುತ್ತಾನೆ. ನೀನು ಯೆಹೋವನ ಆಜ್ಞೆಗೆ ವಿಧೇಯನಾಗಲಿಲ್ಲ. ಆದ್ದರಿಂದ ಯೆಹೋವನು ಹೊಸ ನಾಯಕನನ್ನು ಆರಿಸಿಕೊಳ್ಳುವನು” ಎಂದು ಹೇಳಿದನು. 15 ನಂತರ ಸಮುವೇಲನು ಎದ್ದು ಗಿಲ್ಗಾಲನ್ನು ಬಿಟ್ಟುಹೊರಟನು.
ಮಿಕ್ಮಾಷಿನ ಕದನ
ಸೌಲನು ತನ್ನ ಸೈನ್ಯಸಮೇತವಾಗಿ ಗಿಲ್ಗಾಲಿನಿಂದ ಹೊರಟನು. ಅವರು ಬೆನ್ಯಾಮೀನ್ ಪ್ರಾಂತ್ಯದ ಗಿಬೆಯಕ್ಕೆ ಹೋದರು. ಸೌಲನು ತನ್ನೊಂದಿಗೆ ಇನ್ನೂ ಇದ್ದ ಜನರನ್ನು ಲೆಕ್ಕ ಹಾಕಿದನು. ಅವನ ಜೊತೆಯಲ್ಲಿ ಆರುನೂರು ಜನರಿದ್ದರು.
ಬೀಜ ಬಿತ್ತುವ ರೈತನ ಸಾಮ್ಯ
(ಮತ್ತಾಯ 13:1-9; 8:4-8)
4 ಮತ್ತೊಂದು ಸಮಯದಲ್ಲಿ ಯೇಸು ಸರೋವರದ ತೀರದಲ್ಲಿ ಉಪದೇಶಿಸಲಾರಂಭಿಸಿದನು. ಅನೇಕಾನೇಕ ಜನರು ಆತನ ಸುತ್ತಲೂ ಸೇರಿದರು. ಯೇಸು ಒಂದು ದೋಣಿಯೊಳಕ್ಕೆ ಹೋಗಿ ಕುಳಿತು ಸರೋವರದ ದಡದಿಂದ ಸ್ವಲ್ಪದೂರ ಹೋದನು. ಜನರೆಲ್ಲರೂ ಸರೋವರದ ದಡದ ಮೇಲಿದ್ದರು. 2 ಯೇಸು ದೋಣಿಯಲ್ಲಿ ಕುಳಿತುಕೊಂಡು ಅವರಿಗೆ ಅನೇಕ ಸಾಮ್ಯಗಳ ಮೂಲಕ ಉಪದೇಶಿಸಿದನು. ಆತನು ಹೇಳಿದ್ದೇನೆಂದರೆ:
3 “ಕೇಳಿರಿ! ಒಬ್ಬ ರೈತನು ಬೀಜ ಬಿತ್ತಲು ಹೊಲಕ್ಕೆ ಹೋದನು. 4 ಬಿತ್ತುವಾಗ ಕೆಲವು ಬೀಜಗಳು ರಸ್ತೆಯ ಮಗ್ಗುಲಲ್ಲಿ ಬಿದ್ದವು. ಹಕ್ಕಿಗಳು ಬಂದು ಆ ಬೀಜಗಳನ್ನೆಲ್ಲ ತಿಂದುಬಿಟ್ಟವು. 5 ಕೆಲವು ಬೀಜಗಳು ಬಂಡೆಯ ನೆಲದ ಮೇಲೆ ಬಿದ್ದವು. ಆ ನೆಲದಲ್ಲಿ ಸಾಕಷ್ಟು ಮಣ್ಣಿರಲಿಲ್ಲ. ನೆಲವು ಆಳವಾಗಿಲ್ಲದಿದ್ದ ಕಾರಣ ಬೀಜಗಳು ಬಹಳ ಬೇಗನೆ ಮೊಳೆತವು. 6 ಆದರೆ ಸೂರ್ಯನು ಮೇಲೇರಿದಾಗ, ಆಳವಾದ ಬೇರಿಲ್ಲದ ಕಾರಣ ಆ ಸಸಿಗಳು ಒಣಗಿಹೋದವು. 7 ಬೇರೆ ಕೆಲವು ಬೀಜಗಳು ಮುಳ್ಳುಗಿಡಗಳಲ್ಲಿ ಬಿದ್ದವು. ಮುಳ್ಳುಗಿಡಗಳು ಬೆಳೆದು, ಒಳ್ಳೆಯ ಗಿಡಗಳನ್ನು ಬೆಳೆಯದಂತೆ ತಡೆದವು. ಆದ್ದರಿಂದ ಆ ಗಿಡಗಳು ಫಲ ಕೊಡಲಿಲ್ಲ. 8 ಬೇರೆ ಕೆಲವು ಬೀಜಗಳು ಒಳ್ಳೆಯ ನೆಲದಲ್ಲಿ ಬಿದ್ದವು. ಆ ಬೀಜಗಳು ಮೊಳೆತು, ಬೆಳೆದು, ಫಲಬಿಟ್ಟವು. ಕೆಲವು ಗಿಡಗಳು ಮೂವತ್ತರಷ್ಟು ಹೆಚ್ಟಾಗಿ, ಇನ್ನು ಕೆಲವು ಗಿಡಗಳು ಅರವತ್ತರಷ್ಟು ಹೆಚ್ಚಾಗಿ ಮತ್ತು ಬೇರೆ ಕೆಲವು ಗಿಡಗಳು ನೂರರಷ್ಟು ಹೆಚ್ಚಾಗಿ ಫಲಕೊಟ್ಟವು.”
9 ನಂತರ ಯೇಸು, “ನನ್ನ ಮಾತನ್ನು ಕೇಳುವ ಜನರೇ, ಆಲಿಸಿರಿ!” ಎಂದು ಹೇಳಿದನು.
ಯೇಸು ಸಾಮ್ಯಗಳನ್ನು ಬಳಸಲು ಕಾರಣವೇನು?
(ಮತ್ತಾಯ 13:10-17; ಲೂಕ 8:9-10)
10 ತರುವಾಯ, ಯೇಸು ಒಬ್ಬನೇ ಇದ್ದಾಗ ಹನ್ನೆರಡು ಮಂದಿ ಅಪೊಸ್ತಲರು ಮತ್ತು ಯೇಸುವಿನ ಇತರ ಶಿಷ್ಯರು ಆ ಸಾಮ್ಯಗಳ ಕುರಿತು ಆತನನ್ನು ಕೇಳಿದರು.
11 ಯೇಸು, “ದೇವರ ರಾಜ್ಯದ ಸತ್ಯದ ಗುಟ್ಟನ್ನು ನೀವು ಮಾತ್ರ ತಿಳಿದುಕೊಳ್ಳತಕ್ಕದ್ದು. ಆದರೆ ಇತರ ಎಲ್ಲಾ ಜನರಿಗೆ ನಾನು ಸಾಮ್ಯಗಳ ಮೂಲಕವಾಗಿ ಎಲ್ಲವನ್ನೂ ಹೇಳುತ್ತೇನೆ. 12 ಏಕೆಂದರೆ:
‘ಅವರು ಕಣ್ಣಾರೆ ನೋಡಿಯೂ ಕಾಣರು.
ಕಿವಿಯಾರೆ ಕೇಳಿಯೂ ಗ್ರಹಿಸರು.
ಅವರು ನೋಡಿ ಗ್ರಹಿಸಿಕೊಂಡರೆ,
ಪರಿವರ್ತನೆಗೊಂಡು ಪಾಪಕ್ಷಮೆ ಹೊಂದಿಯಾರು’” ಎಂದನು.(A)
ಬಿತ್ತಲ್ಪಟ್ಟ ಬೀಜದ ಕುರಿತು ಯೇಸು ಕೊಟ್ಟ ವಿವರಣೆ
(ಮತ್ತಾಯ 13:18-23; ಲೂಕ 8:11-15)
13 ನಂತರ ಯೇಸು ತನ್ನ ಶಿಷ್ಯರಿಗೆ, “ನಿಮಗೆ ಈ ಸಾಮ್ಯ ಅರ್ಥವಾಯಿತೇ? ನೀವು ಇದನ್ನೇ ಅರ್ಥಮಾಡಿಕೊಳ್ಳದಿದ್ದರೆ ಬೇರೆ ಯಾವ ಸಾಮ್ಯವನ್ನು ಅರ್ಥಮಾಡಿಕೊಳ್ಳುವಿರಿ? 14 ರೈತನು ದೇವರ ವಾಕ್ಯವನ್ನು ಬಿತ್ತುವವನಿಗೆ ಹೋಲಿಕೆಯಾಗಿದ್ದಾನೆ. 15 ಕೆಲವು ಜನರು ದೇವರ ವಾಕ್ಯವನ್ನು ಕೇಳುತ್ತಾರೆ. ಆದರೆ ಅವರಲ್ಲಿ ಬಿತ್ತಿದ ವಾಕ್ಯವನ್ನು ಸೈತಾನನು ಬಂದು ತೆಗೆದುಬಿಡುತ್ತಾನೆ. ಈ ಜನರೇ ದಾರಿಯ ಮಗ್ಗುಲಾಗಿದ್ದಾರೆ.
16 “ಇನ್ನು ಕೆಲವರು ದೇವರ ವಾಕ್ಯವನ್ನು ಕೇಳುತ್ತಾರೆ ಮತ್ತು ಸಂತೋಷದಿಂದ ಅದನ್ನು ಬೇಗನೆ ಸ್ವೀಕರಿಸಿಕೊಳ್ಳುತ್ತಾರೆ. 17 ಆದರೆ ಆ ವಾಕ್ಯವು ತಮ್ಮಲ್ಲಿ ಆಳವಾಗಿ ಬೇರೂರಲು ಅವರು ಅವಕಾಶ ನೀಡುವುದಿಲ್ಲ. ಅವರು ಆ ವಾಕ್ಯವನ್ನು ಸ್ವಲ್ಪಕಾಲ ಮಾತ್ರ ಸ್ವೀಕರಿಸಿಕೊಂಡಿರುತ್ತಾರೆ. ಆ ವಾಕ್ಯದ ದೆಸೆಯಿಂದ ತೊಂದರೆಯಾಗಲಿ ಹಿಂಸೆಯಾಗಲಿ ಬಂದಾಗ ಅವರು ಅದನ್ನು ಬಹುಬೇಗನೆ ತ್ಯಜಿಸುತ್ತಾರೆ. ಇವರೇ ಬೀಜಬಿದ್ದ ಬಂಡೆಯ ನೆಲವಾಗಿದ್ದಾರೆ.
18 “ಇನ್ನು ಕೆಲವರು ಮುಳ್ಳಿನ ಗಿಡಗಳ ನೆಲದಂತಿರುವರು. ಈ ಜನರು ವಾಕ್ಯವನ್ನು ಕೇಳುತ್ತಾರೆ. 19 ಆದರೆ ಈ ಜೀವಿತದ ಚಿಂತೆಗಳು, ಹಣದ ಮೇಲಿನ ವ್ಯಾಮೋಹ ಮತ್ತು ಇತರ ಎಲ್ಲಾ ವಿಧವಾದ ಆಸೆಗಳು ಅವರಲ್ಲಿ ಬಿದ್ದ ವಾಕ್ಯಕ್ಕೆ ಬೆಳೆಯಲು ಅವಕಾಶ ಕೊಡುವುದಿಲ್ಲ. ಆದ್ದರಿಂದ ಅವರ ಜೀವಿತದಲ್ಲಿ ವಾಕ್ಯವು ಫಲ ಫಲಿಸುವುದಿಲ್ಲ.
20 “ಇನ್ನು ಕೆಲವರು ಬೀಜಬಿದ್ದ ಒಳ್ಳೆಯ ನೆಲದಂತಿದ್ದಾರೆ. ಅವರು ವಾಕ್ಯವನ್ನು ಸ್ವೀಕರಿಸಿಕೊಂಡು ಫಲವನ್ನು ಫಲಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಮೂವತ್ತರಷ್ಟು ಹೆಚ್ಚಾಗಿ, ಇನ್ನು ಕೆಲವು ಸಂದರ್ಭಗಳಲ್ಲಿ ಅರವತ್ತರಷ್ಟು ಹೆಚ್ಚಾಗಿ, ಮತ್ತೆ ಕೆಲವು ಸಂಧರ್ಭಗಳಲ್ಲಿ ನೂರರಷ್ಟು ಹೆಚ್ಚಾಗಿ ಫಲ ಫಲಿಸುತ್ತಾರೆ” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International