Revised Common Lectionary (Semicontinuous)
ರಚನೆಗಾರ: ದಾವೀದ.
20 ಇಕ್ಕಟ್ಟಿನಲ್ಲಿ ಯೆಹೋವನು ನಿನ್ನ ಮೊರೆಯನ್ನು ಕೇಳಲಿ.
ಯಾಕೋಬನ ದೇವರು ನಿನ್ನ ಹೆಸರನ್ನು ಪ್ರಖ್ಯಾತಿಪಡಿಸಲಿ.
2 ಆತನು ತನ್ನ ಪವಿತ್ರ ಸ್ಥಳದಿಂದ ನಿನಗೆ ಸಹಾಯಮಾಡಲಿ.
ಚೀಯೋನಿನಿಂದ ನಿನಗೆ ಆಧಾರ ನೀಡಲಿ.
3 ನೀನು ಅರ್ಪಿಸಿದ ಕಾಣಿಕೆಗಳನ್ನೆಲ್ಲ ಆತನು ಜ್ಞಾಪಿಸಿಕೊಳ್ಳಲಿ.
ನಿನ್ನ ಯಜ್ಞಗಳನ್ನೆಲ್ಲ ಆತನು ಸ್ವೀಕರಿಸಿಕೊಳ್ಳಲಿ.
4 ಆತನು ನಿನ್ನ ಬಯಕೆಗಳನ್ನು ಈಡೇರಿಸಲಿ.
ನಿನ್ನ ಆಲೋಚನೆಗಳನ್ನೆಲ್ಲ ನೆರವೇರಿಸಲಿ.
5 ದೇವರು ನಿನಗೆ ಸಹಾಯಮಾಡುವಾಗ ಹರ್ಷಿಸುವೆವು.
ಆತನ ಹೆಸರನ್ನು ಕೊಂಡಾಡೋಣ.
ಯೆಹೋವನು ನಿನ್ನ ಕೋರಿಕೆಗಳನ್ನೆಲ್ಲ ನೆರವೇರಿಸಲಿ.
6 ಯೆಹೋವನು ತಾನು ಅಭಿಷೇಕಿಸಿದ ರಾಜನಿಗೆ ಸಹಾಯಮಾಡುತ್ತಾನೆಂದು ಈಗ ನನಗೆ ಗೊತ್ತಾಯಿತು.
ದೇವರು ತಾನು ಆರಿಸಿಕೊಂಡ ರಾಜನಿಗೆ ಪರಲೋಕದಿಂದ ಉತ್ತರಿಸಿದನು;
ತನ್ನ ಮಹಾಶಕ್ತಿಯಿಂದ ಅವನನ್ನು ರಕ್ಷಿಸಿದನು.
7 ಕೆಲವರು ತಮ್ಮ ರಥಗಳಲ್ಲಿ ಭರವಸವಿಡುವರು.
ಕೆಲವರು ತಮ್ಮ ಸೈನಿಕರುಗಳಲ್ಲಿ ಭರವಸವಿಡುವರು.
ನಾವಾದರೋ ನಮ್ಮ ದೇವರಾದ ಯೆಹೋವನನ್ನೇ ಜ್ಞಾಪಿಸಿಕೊಳ್ಳುವೆವು.
8 ಅವರು ಸೋತುಹೋದರು; ಯುದ್ಧದಲ್ಲಿ ಸತ್ತುಹೋದರು;
ನಾವಾದರೋ ಜಯಗಳಿಸಿದೆವು! ನಾವು ಜಯಪ್ರದರಾಗಿ ನಿಂತುಕೊಳ್ಳುವೆವು!
9 ಯಾಕೆಂದರೆ ಯೆಹೋವನು ತಾನು ಅಭಿಷೇಕಿಸಿದ ರಾಜನನ್ನು ರಕ್ಷಿಸಿದನು!
ನಾವು ಸಹಾಯಕ್ಕಾಗಿ ಮೊರೆಯಿಟ್ಟಾಗ ಆತನು ಸದುತ್ತರವನ್ನು ದಯಪಾಲಿಸಿದನು.
ಸಮುವೇಲನಿಂದ ಸೌಲನಿಗೆ ಅಭಿಷೇಕ
10 ಸಮುವೇಲನು ವಿಶೇಷವಾದ ಎಣ್ಣೆಯ ಕುಪ್ಪಿಯನ್ನು ತೆಗೆದುಕೊಂಡು ಸೌಲನ ತಲೆಯ ಮೇಲೆ ಆ ಎಣ್ಣೆಯನ್ನು ಸುರಿದನು. ಸಮುವೇಲನು ಸೌಲನಿಗೆ ಮುದ್ದಿಟ್ಟು, “ಯೆಹೋವನು ತನ್ನ ಜನರನ್ನು ಮುಂದೆ ನಡೆಸಲು ನಿನ್ನನ್ನು ಅವರಿಗೆ ನಾಯಕನನ್ನಾಗಿ ಅಭಿಷೇಕಿಸಿದ್ದಾನೆ. ನೀನು ಯೆಹೋವನ ಜನರನ್ನು ಆಳುವೆ; ಅವರನ್ನು ಸುತ್ತುವರೆದಿರುವ ಶತ್ರುಗಳಿಂದ ರಕ್ಷಿಸುವೆ. ಯೆಹೋವನು ತನ್ನ ಜನರನ್ನು ಆಳುವುದಕ್ಕಾಗಿ ನಿನ್ನನ್ನು ಅಭಿಷೇಕಿಸಿದ್ದಾನೆ. ಇದು ನಿಜವೆಂಬುದಕ್ಕೆ ಸಾಕ್ಷಿಯೇನೆಂದರೆ: 2 ಈ ದಿನ ನನ್ನನ್ನು ಬಿಟ್ಟು ನೀನು ಮುಂದೆ ಸಾಗಿದಾಗ, ಬೆನ್ಯಾಮೀನನ ಮೇರೆಯಲ್ಲಿರುವ ಚೆಲ್ಚಹಿನಲ್ಲಿನ ರಾಹೇಲಳ ಸಮಾಧಿಯ ಬಳಿ ಇಬ್ಬರು ಮನುಷ್ಯರನ್ನು ಸಂಧಿಸುವೆ. ಅವರಿಬ್ಬರೂ ನಿನಗೆ, ‘ನೀನು ಹುಡುಕುತ್ತಿದ್ದ ಕತ್ತೆಗಳು ಒಬ್ಬನಿಗೆ ಸಿಕ್ಕಿವೆ. ನಿನ್ನ ತಂದೆಯು ಕತ್ತೆಗಳ ಬಗ್ಗೆ ಚಿಂತಿಸುವುದನ್ನು ಬಿಟ್ಟು ನಿನ್ನ ಬಗ್ಗೆ ಚಿಂತಿಸುತ್ತಿದ್ದಾನೆ. ನನ್ನ ಮಗನು ಎಲ್ಲಿಗೆ ಹೋದನೋ ಎಂದು ಹಂಬಲಿಸುತ್ತಿದ್ದಾನೆ’ ಎಂದು ಹೇಳುವರು” ಎಂದನು.
3 ಸಮುವೇಲನು, “ನೀನು ಅಲ್ಲಿಂದ ಮುಂದೆ ಹೋಗುತ್ತಾ ತಾಬೋರಿನ ಹತ್ತಿರವಿರುವ ಒಂದು ದೊಡ್ಡ ಓಕ್ ವೃಕ್ಷದ ಬಳಿಗೆ ಬರುವೆ. ಅಲ್ಲಿ ನಿನ್ನನ್ನು ಮೂರು ಜನರು ಭೇಟಿಯಾಗುತ್ತಾರೆ. ಆ ಮೂರು ಜನರು ದೇವರ ಆರಾಧನೆಗಾಗಿ ಬೇತೇಲಿಗೆ ಹೋಗುತ್ತಿರುತ್ತಾರೆ. ಮೊದಲನೆಯವನು ಮೂರು ಮರಿ ಹೋತಗಳನ್ನೂ ಎರಡನೆಯವನು ಮೂರು ರೊಟ್ಟಿಗಳನ್ನೂ ಮೂರನೆಯವನು ಒಂದು ಸೀಸೆ ದ್ರಾಕ್ಷಾರಸವನ್ನೂ ತೆಗೆದುಕೊಂಡು ಹೋಗುತ್ತಿರುತ್ತಾರೆ. 4 ಈ ಮೂವರೂ ನಿನ್ನ ಕ್ಷೇಮವನ್ನು ವಿಚಾರಿಸುತ್ತಾರೆ. ಅವರು ನಿನಗೆ ಎರಡು ರೊಟ್ಟಿಗಳನ್ನು ಕೊಡುತ್ತಾರೆ. ನೀನು ಆ ಎರಡು ರೊಟ್ಟಿಗಳನ್ನು ಅವರಿಂದ ತೆಗೆದುಕೊಳ್ಳುವೆ. 5 ನಂತರ ನೀನು ಗಿಬಿಯತ್ ಎಲೋಹಿಮಿಗೆ ಹೋಗುವೆ. ಅಲ್ಲಿ ಒಂದು ಫಿಲಿಷ್ಟಿಯರ ಕೋಟೆಯಿದೆ. ನೀನು ಆ ಪಟ್ಟಣಕ್ಕೆ ಬಂದಾಗ, ಪ್ರವಾದಿಗಳ ಗುಂಪೊಂದು ಹೊರಬರುತ್ತದೆ. ಈ ಪ್ರವಾದಿಗಳು ಆರಾಧನಾ ಸ್ಥಳದಿಂದ ಇಳಿದು ಬರುತ್ತಾರೆ, ಅವರು ಪ್ರವಾದಿಸುತ್ತಿರುತ್ತಾರೆ. ಅವರು ಸ್ವರಮಂಡಲವನ್ನೂ ದಮ್ಮಡಿಯನ್ನೂ ಕೊಳಲನ್ನೂ ಕಿನ್ನರಿಯನ್ನೂ ನುಡಿಸುತ್ತಿರುತ್ತಾರೆ. 6 ಆಗ ಯೆಹೋವನ ಆತ್ಮವು ಮಹಾಶಕ್ತಿಯೊಡನೆ ನಿನ್ನ ಮೈಮೇಲೆ ಬರುತ್ತದೆ. ನೀನು ಮಾರ್ಪಾಟಾಗಿ ಬೇರೊಬ್ಬ ಮನುಷ್ಯನಾಗುವೆ. ನೀನೂ ಆ ಪ್ರವಾದಿಗಳಂತೆ ಪ್ರವಾದಿಸಲು ಆರಂಭಿಸುವೆ. 7 ಈ ಕಾರ್ಯಗಳು ಸಂಭವಿಸಿದ ಮೇಲೆ, ನೀನು ನಿನ್ನ ನಿರ್ಧಾರದಂತೆ ಮಾಡು. ಯಾಕೆಂದರೆ ದೇವರು ನಿನ್ನೊಂದಿಗಿರುತ್ತಾನೆ.
8 “ನನಗಿಂತ ಮೊದಲು ನೀನು ಗಿಲ್ಗಾಲಿಗೆ ಹೋಗು. ನಾನು ನಿನ್ನನ್ನು ಅಲ್ಲಿ ಭೇಟಿಯಾಗುತ್ತೇನೆ. ನಾನು ಅಲ್ಲಿ ಸರ್ವಾಂಗಹೋಮಗಳನ್ನು ಮತ್ತು ಸಮಾಧಾನಯಜ್ಞಗಳನ್ನು ಅರ್ಪಿಸುತ್ತೇನೆ. ಆದರೆ ನೀನು ಏಳು ದಿನಗಳವರೆಗೆ ಕಾಯಲೇಬೇಕು. ಅನಂತರ ನಾನು ನಿನ್ನ ಬಳಿಗೆ ಬಂದು ನೀನು ಮಾಡಬೇಕಾದದ್ದನ್ನು ತಿಳಿಸುತ್ತೇನೆ” ಎಂದು ಹೇಳಿದನು.
4 ಕಾಯಿನ ಮತ್ತು ಹೇಬೆಲರಿಬ್ಬರೂ ದೇವರಿಗೆ ಯಜ್ಞಗಳನ್ನು ಅರ್ಪಿಸಿದರು. ಆದರೆ ಹೇಬೆಲನಲ್ಲಿ ನಂಬಿಕೆಯಿದ್ದುದರಿಂದ ಅವನು ದೇವರಿಗೆ ಉತ್ತಮವಾದ ಯಜ್ಞವನ್ನು ಅರ್ಪಿಸಿದನು. ಅವನು ಅರ್ಪಿಸಿದ ವಸ್ತುಗಳಿಂದ ತನಗೆ ಸಂತೋಷವಾಯಿತೆಂದು ದೇವರೇ ಹೇಳಿದನು. ಅವನಲ್ಲಿ ನಂಬಿಕೆಯಿದ್ದುದರಿಂದ ದೇವರು ಅವನನ್ನು ಒಳ್ಳೆಯ ಮನುಷ್ಯನೆಂದು ಕರೆದನು. ಹೇಬೆಲನು ಸತ್ತುಹೋದನು, ಆದರೂ ತನ್ನ ನಂಬಿಕೆಯ ಮೂಲಕ ಇನ್ನೂ ಮಾತನಾಡುತ್ತಿದ್ದಾನೆ.
5 ಹನೋಕನು ಸಾವನ್ನು ಅನುಭವಿಸದೆ ಈ ಲೋಕದಿಂದ ಮೇಲೋಕಕ್ಕೆ ಒಯ್ಯಲ್ಪಟ್ಟನು. ಪವಿತ್ರ ಗ್ರಂಥವು ಹೇಳುವಂತೆ, ಅವನು ಒಯ್ಯಲ್ಪಡುವುದಕ್ಕಿಂತ ಮೊದಲು ದೇವರಿಗೆ ನಿಜವಾಗಿಯೂ ಮೆಚ್ಚಿಕೆಯಾಗಿದ್ದನು. ತರುವಾಯ ಜನರಿಗೆ ಅವನು ಸಿಕ್ಕಲೇ ಇಲ್ಲ. ಅವನ ನಂಬಿಕೆಯ ದೆಸೆಯಿಂದ ದೇವರು ಅವನನ್ನು ತನ್ನೊಡನಿರಲು ಕೊಂಡೊಯ್ದನು. 6 ನಂಬಿಕೆಯಿಲ್ಲದೆ ದೇವರನ್ನು ಯಾರೂ ಮೆಚ್ಚಿಸಲಾಗುವುದಿಲ್ಲ. ದೇವರ ಬಳಿಗೆ ಬರುವ ಯಾರೇ ಆಗಲಿ, ದೇವರು ಇದ್ದಾನೆಂತಲೂ ಆತನನ್ನು ಮನಃಪೂರ್ವಕವಾಗಿ ಹುಡುಕುವ ಜನರಿಗೆ ಆತನು ಪ್ರತಿಫಲವನ್ನು ಕೊಡುತ್ತಾನೆಂತಲೂ ನಂಬಬೇಕು.
7 ಕಣ್ಣಿಗೆ ಇನ್ನೂ ಕಾಣದಿದ್ದ ಸಂಗತಿಗಳ ಬಗ್ಗೆ ದೇವರು ನೋಹನನ್ನು ಎಚ್ಚರಿಸಿದನು. ನೋಹನು ದೇವರಲ್ಲಿ ನಂಬಿಕೆಯಿಟ್ಟಿದ್ದನು ಮತ್ತು ಭಕ್ತಿಯುಳ್ಳವನಾಗಿದ್ದನು. ಆದ್ದರಿಂದ ಅವನು ತನ್ನ ಕುಟುಂಬ ರಕ್ಷಣೆಗಾಗಿ ದೊಡ್ಡ ನಾವೆಯನ್ನು ಕಟ್ಟಿ, ಈ ಲೋಕದ ತಪ್ಪನ್ನು ತೋರ್ಪಡಿಸಿದನು. ಹೀಗೆ, ನಂಬಿಕೆಯ ಮೂಲಕ ನೀತಿವಂತರಾದ ಜನರಲ್ಲಿ ಅವನೂ ಒಬ್ಬನಾದನು.
Kannada Holy Bible: Easy-to-Read Version. All rights reserved. © 1997 Bible League International