Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 130

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

130 ಯೆಹೋವನೇ, ಮಹಾ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡಿದ್ದೇನೆ;
    ಸಹಾಯಕ್ಕಾಗಿ ನಿನ್ನನ್ನೇ ಕೂಗಿಕೊಳ್ಳುತ್ತಿದ್ದೇನೆ.
ನನ್ನ ಒಡೆಯನೇ, ನನಗೆ ಕಿವಿಗೊಡು.
    ನನ್ನ ಮೊರೆಯನ್ನು ಆಲಿಸು.
ಯೆಹೋವನೇ, ನೀನು ಮನುಷ್ಯರನ್ನು ಅವರೆಲ್ಲರ ಪಾಪಗಳಿಗೆ ತಕ್ಕಂತೆ ದಂಡಿಸಿದರೆ
    ಒಬ್ಬನೂ ಜೀವಂತವಾಗಿ ಉಳಿಯಲಾರ.
ಯೆಹೋವನೇ, ನಿನ್ನ ಜನರನ್ನು ಕ್ಷಮಿಸು.
    ಆಗ, ನಿನ್ನನ್ನು ಆರಾಧಿಸುವುದಕ್ಕೆ ಜನರಿರುವರು.

ನಾನು ಯೆಹೋವನ ಸಹಾಯಕ್ಕಾಗಿ ಕಾಯುತ್ತಿದ್ದೇನೆ.
    ನನ್ನ ಪ್ರಾಣವು ಆತನಿಗಾಗಿ ಕಾದುಕೊಂಡಿರುವುದು.
    ಆತನು ನುಡಿಯನ್ನು ನಂಬಿಕೊಂಡಿದ್ದೇನೆ.
ನಾನು ನನ್ನ ಒಡೆಯನಿಗಾಗಿ ಮುಂಜಾನೆಗೋಸ್ಕರ ಎದುರುನೋಡುತ್ತಿರುವ
    ಕಾವಲುಗಾರರಂತೆ ನಿರೀಕ್ಷಿಸುತ್ತಿದ್ದೇನೆ.
ಇಸ್ರೇಲೇ, ಯೆಹೋವನಲ್ಲಿ ಭರವಸವಿಡು.
    ಆತನಲ್ಲಿ ಮಾತ್ರ ನಿಜವಾದ ಪ್ರೀತಿಯಿದೆ.
ಆತನು ನಮ್ಮನ್ನು ಯಾವಾಗಲೂ ರಕ್ಷಿಸುವನು.
    ಆತನೇ ಇಸ್ರೇಲರ ಎಲ್ಲಾ ಪಾಪಗಳನ್ನು ಕ್ಷಮಿಸುವನು.

1 ಸಮುವೇಲನು 20:1-25

ದಾವೀದ ಮತ್ತು ಯೋನಾತಾನರ ಒಪ್ಪಂದ

20 ದಾವೀದನು ರಾಮದ ಪಾಳೆಯದಿಂದ ಓಡಿಹೋದನು. ದಾವೀದನು ಯೋನಾತಾನನ ಬಳಿಗೆ ಹೋಗಿ, “ನಾನು ಮಾಡಿರುವ ತಪ್ಪೇನು? ನನ್ನ ಅಪರಾಧವೇನು? ನಿನ್ನ ತಂದೆಯು ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿರುವುದೇಕೆ?” ಎಂದು ಕೇಳಿದನು.

ಯೋನಾತಾನನು, “ಎಂದಿಗೂ ಇಲ್ಲ. ನನ್ನ ತಂದೆಯು ನಿನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿಲ್ಲ! ನನ್ನ ತಂದೆಯು ನನಗೆ ತಿಳಿಸದೆ ಏನನ್ನೂ ಮಾಡುವುದಿಲ್ಲ. ಅದು ಬಹು ಮುಖ್ಯವಾದದ್ದೇ ಆಗಿರಲಿ ಇಲ್ಲವೆ ಮುಖ್ಯವಾಗಿಲ್ಲದ್ದೇ ಆಗಿರಲಿ, ನನ್ನ ತಂದೆಯು ನನಗೆ ತಿಳಿಸೇ ತಿಳಿಸುತ್ತಾನೆ. ನನ್ನ ತಂದೆಯು ನಿನ್ನನ್ನು ಕೊಲ್ಲಬೇಕೆಂದಿದ್ದರೆ ನಾನು ನಿನಗೆ ತಿಳಿಸುತ್ತಿರಲಿಲ್ಲವೇ?” ಎಂದು ಹೇಳಿದನು.

ಆದರೆ ದಾವೀದನು, “ನಾನು ನಿನ್ನ ಗೆಳೆಯನೆಂಬುದು ನಿನ್ನ ತಂದೆಗೆ ಚೆನ್ನಾಗಿ ತಿಳಿದಿದೆ. ನಿನ್ನ ತಂದೆಯು, ‘ಯೋನಾತಾನನಿಗೆ ಇದು ತಿಳಿಯಲೇಬಾರದು. ಅವನಿಗೆ ತಿಳಿದುಬಿಟ್ಟರೆ ಅವನು ತನ್ನ ಹೃದಯದಲ್ಲಿ ದುಃಖಪಟ್ಟು ದಾವೀದನಿಗೆ ಹೇಳಿಬಿಡುತ್ತಾನೆ’ ಎಂದುಕೊಂಡಿದ್ದಾನೆ. ಯೆಹೋವನಾಣೆ, ನಿನ್ನ ಜೀವದಾಣೆ, ನಾನು ಸಾವಿಗೆ ಬಹು ಹತ್ತಿರವಾಗಿದ್ದೇನೆ” ಎಂದು ಹೇಳಿದನು.

ಯೋನಾತಾನನು, “ನೀನು ಬಯಸುವ ಏನನ್ನಾದರೂ ಮಾಡಲು ನಾನು ಸಿದ್ಧನಿದ್ದೇನೆ” ಎಂದು ದಾವೀದನಿಗೆ ಹೇಳಿದನು.

ಆಗ ದಾವೀದನು, “ನಾಳೆ ಅಮಾವಾಸ್ಯೆ ಹಬ್ಬ, ನಾನು ರಾಜನ ಜೊತೆಯಲ್ಲಿ ಊಟಮಾಡಬೇಕಾಗಿದೆ. ಆದರೆ ನಾನು ಈಗಲೇ ಹೋಗಿ ಸಂಜೆಯವರೆಗೆ ಹೊಲದಲ್ಲಿ ಅಡಗಿಕೊಳ್ಳಲು ಅವಕಾಶ ಮಾಡಿಕೊಡು. ನಾನು ಇಲ್ಲದಿರುವುದನ್ನು ನಿಮ್ಮ ತಂದೆಯು ಗಮನಿಸಿದರೆ ಅವನಿಗೆ, ‘ದಾವೀದನು ಬೆತ್ಲೆಹೇಮಿನ ತನ್ನ ಮನೆಗೆ ಹೋಗಲು ಬಯಸಿದನು. ಅವನ ಕುಟುಂಬದವರು ಅಲ್ಲಿ ವಾರ್ಷಿಕಯಜ್ಞದ ಔತಣವನ್ನು ಏರ್ಪಡಿಸಿದ್ದಾರೆ. ಬೆತ್ಲೆಹೇಮಿಗೆ ಹೋಗಿ ತನ್ನ ಕುಟುಂಬದವರ ಜೊತೆಯಿರಲು ಅವಕಾಶ ಕೊಡಬೇಕೆಂದು ದಾವೀದನು ನನ್ನನ್ನು ಕೇಳಿಕೊಂಡನು’ ಎಂದು ಹೇಳು. ನಿನ್ನ ತಂದೆಯು, ‘ಒಳ್ಳೆಯದಾಯಿತು’ ಎಂದರೆ ನಾನು ಬದುಕಿದೆ. ಆದರೆ ನಿನ್ನ ತಂದೆಯು ಕೋಪಗೊಂಡರೆ ಅವನು ನನಗೆ ಕೇಡುಮಾಡಲು ಬಯಸಿದ್ದಾನೆಂದು ತಿಳಿದುಕೋ. ಯೋನಾತಾನನೇ, ನನ್ನ ಮೇಲೆ ದಯೆಯಿರಲಿ. ನಾನು ನಿನ್ನ ಸೇವಕ. ನೀನು ಯೆಹೋವನ ಮುಂದೆ ನನ್ನೊಂದಿಗೆ ಒಪ್ಪಂದ ಮಾಡಿಕೊಂಡಿರುವೆ. ನಾನು ತಪ್ಪಿತಸ್ಥನಾಗಿದ್ದರೆ, ನೀನೇ ನನ್ನನ್ನು ಕೊಂದುಬಿಡು! ಆದರೆ ನಿನ್ನ ತಂದೆಯ ಹತ್ತಿರಕ್ಕೆ ನನ್ನನ್ನು ಕರೆದೊಯ್ಯಬೇಡ” ಎಂದು ಹೇಳಿದನು.

ಯೋನಾತಾನನು, “ಇಲ್ಲ, ಎಂದೆಂದಿಗೂ ಇಲ್ಲ! ನನ್ನ ತಂದೆಯು ನಿನಗೆ ಕೇಡು ಮಾಡುವುದಕ್ಕಾಗಿ ಉಪಾಯ ಮಾಡುತ್ತಿರುವುದು ನನಗೆ ತಿಳಿದುಬಂದರೆ ನಾನು ನಿನ್ನನ್ನು ಎಚ್ಚರಿಸುತ್ತೇನೆ” ಎಂದು ಉತ್ತರಿಸಿದನು.

10 ದಾವೀದನು, “ನಿನ್ನ ತಂದೆಯು ನಿನಗೆ ಕೆಟ್ಟ ಸಂಗತಿಗಳನ್ನು ಹೇಳಿದರೆ, ನನ್ನನ್ನು ಎಚ್ಚರಿಸುವವರು ಯಾರು?” ಎಂದು ಕೇಳಿದನು.

11 ಆಗ ಯೋನಾತಾನನು, “ನಾವು ಹೊಲದೊಳಕ್ಕೆ ಹೋಗೋಣ ಬಾ” ಎಂದು ಹೇಳಿದನು. ಅಂತೆಯೇ ಯೋನಾತಾನನು ಮತ್ತು ದಾವೀದನು ಒಟ್ಟಾಗಿ ಹೊಲದೊಳಕ್ಕೆ ಹೋದರು.

12 ಯೋನಾತಾನನು ದಾವೀದನಿಗೆ, “ನಾನು ಇಸ್ರೇಲರ ದೇವರಾದ ಯೆಹೋವನ ಎದುರಿನಲ್ಲಿ ಈ ಪ್ರಮಾಣವನ್ನು ಮಾಡುತ್ತೇನೆ. ನನ್ನ ತಂದೆಯು ನಿನ್ನ ಬಗ್ಗೆ ಒಳ್ಳೆಯ ಭಾವನೆಯನ್ನು ಹೊಂದಿರುವನೊ ಇಲ್ಲವೊ ಎಂಬುದನ್ನು ತಿಳಿದುಕೊಳ್ಳುತ್ತೇನೆ. ನಂತರ ಸಂದೇಶವೊಂದನ್ನು ನಾನು ಮೂರು ದಿನಗಳೊಳಗಾಗಿ ನಿನಗೆ ಕಳುಹಿಸಿಕೊಡುತ್ತೇನೆ. 13 ನನ್ನ ತಂದೆಯು ನಿನಗೆ ಕೇಡುಮಾಡಬೇಕೆಂದಿದ್ದರೆ, ಅದನ್ನು ನಾನು ನಿನಗೆ ತಿಳಿಸಿ, ನೀನು ಸುರಕ್ಷಿತವಾಗಿರಲು ಅವಕಾಶ ಮಾಡಿಕೊಡುತ್ತೇನೆ. ಈ ಕಾರ್ಯವನ್ನು ನಾನು ಮಾಡದೆ ಹೋದರೆ ಯೆಹೋವನು ನನ್ನನ್ನು ದಂಡಿಸಲಿ. ಯೆಹೋವನು ನನ್ನ ತಂದೆಯ ಜೊತೆಯಲ್ಲಿದ್ದಂತೆ ನಿನ್ನ ಜೊತೆಯೂ ಇರಲಿ. 14 ನನ್ನ ಜೀವಮಾನವೆಲ್ಲಾ ನೀನು ನನಗೆ ದಯಾಳುವಾಗಿರು. 15 ನನ್ನ ಕುಟುಂಬದ ಮೇಲೆ ಶಾಶ್ವತವಾಗಿ ನಿನ್ನ ದಯೆಯಿರಲಿ. ಭೂಮಿಯ ಮೇಲಿರುವ ನಿನ್ನ ಶತ್ರುಗಳೆಲ್ಲರನ್ನೂ ಯೆಹೋವನು ನಾಶಪಡಿಸುತ್ತಾನೆ. 16 ಒಂದುವೇಳೆ ಆ ಸಮಯದಲ್ಲಿ ಯೋನಾತಾನನ ಕುಟುಂಬವು ದಾವೀದನಿಂದ ಅಗಲಿ ಹೋಗಬೇಕಿದ್ದರೆ ಅಗಲಿ ಹೋಗಲಿ. ದಾವೀದನ ಶತ್ರುಗಳನ್ನು ಯೆಹೋವನು ದಂಡಿಸಲಿ” ಎಂದು ಹೇಳಿದನು.

17 ಯೋನಾತಾನನು ದಾವೀದನಿಂದ ತನ್ನ ಪ್ರೀತಿಯ ವಾಗ್ದಾನವನ್ನು ಮತ್ತೆ ಹೇಳಿಸಿದನು. ಯೋನಾತಾನನು ತನ್ನನ್ನು ತಾನು ಪ್ರೀತಿಸುತ್ತಿದ್ದಷ್ಟೆ ದಾವೀದನನ್ನೂ ಪ್ರೀತಿಸುತ್ತಿದ್ದುದ್ದೇ ಅದಕ್ಕೆ ಕಾರಣ.

18 ಯೋನಾತಾನನು ದಾವೀದನಿಗೆ, “ನಾಳೆ ಅಮಾವಾಸ್ಯೆಯ ಔತಣ. ನಿನ್ನ ಸ್ಥಳವು ಖಾಲಿಯಾಗಿರುವುದನ್ನು ನನ್ನ ತಂದೆಯು ಕಂಡು, ನೀನು ಹೊರಟುಹೋಗಿರುವೆ ಎಂದು ತಿಳಿದುಕೊಳ್ಳುವನು. 19 ಈ ತೊಂದರೆಯು ಆರಂಭವಾದಾಗ ಎಲ್ಲಿ ಅಡಗಿದ್ದೆಯೋ ಅದೇ ಸ್ಥಳಕ್ಕೆ ಮೂರನೆಯ ದಿನ ಹೋಗು. ಆ ಬೆಟ್ಟದ ಸಮೀಪದಲ್ಲಿ ಕಾಯುತ್ತಿರು. 20 ಮೂರನೆಯ ದಿನ, ನಾನು ಆ ಬೆಟ್ಟಕ್ಕೆ ಹೋಗುತ್ತೇನೆ ಮತ್ತು ಗುರಿಯಿಟ್ಟು ಹೊಡೆಯುವವನಂತೆ ಕೆಲವು ಬಾಣಗಳನ್ನು ಹೊಡೆಯುತ್ತೇನೆ. 21 ನಂತರ ಆ ಬಾಣಗಳನ್ನು ಹುಡುಕಿಕೊಂಡು ಬರಲು ಹುಡುಗನನ್ನು ಕಳುಹಿಸುತ್ತೇನೆ. ಎಲ್ಲವೂ ಒಳಿತಾಗಿದ್ದರೆ ನಾನು ಆ ಹುಡುಗನಿಗೆ, ‘ನೀನು ಬಹು ದೂರ ಹೋಗಿರುವೆ! ಬಾಣಗಳು ನನ್ನ ಹತ್ತಿರದಲ್ಲೇ ಇವೆ. ಹಿಂತಿರುಗಿಬಂದು ಅವುಗಳನ್ನು ತೆಗೆದುಕೋ’ ಎಂದು ಹೇಳುತ್ತೇನೆ. ನಾನು ಆ ರೀತಿ ಹೇಳಿದರೆ, ನೀನು ಅಡಗಿದ್ದ ಸ್ಥಳದಿಂದ ಹೊರಗೆ ಬಾ. ಯೆಹೋವನಾಣೆ, ನೀನು ಸುರಕ್ಷಿತನಾಗಿರುವೆ. ನಿನಗೆ ಯಾವ ಅಪಾಯವೂ ಇಲ್ಲ. 22 ಆದರೆ ಅಲ್ಲಿ ತೊಂದರೆಯಿರುವುದಾದರೆ, ನಾನು ಆ ಹುಡುಗನಿಗೆ, ‘ಬಾಣಗಳು ಬಹಳ ದೂರದಲ್ಲಿವೆ. ಹೋಗಿ ಅವುಗಳನ್ನು ತೆಗೆದುಕೊಂಡು ಬಾ’ ಎಂದು ಹೇಳುವೆ. ನಾನು ಆ ರೀತಿ ಹೇಳಿದರೆ, ನೀನು ಅಲ್ಲಿಂದ ಹೊರಟುಹೋಗು. ಯೆಹೋವನೇ ನಿನ್ನನ್ನು ದೂರ ಕಳುಹಿಸುತ್ತಿದ್ದಾನೆ. 23 ನಿನ್ನ ಮತ್ತು ನನ್ನ ಮಧ್ಯೆ ನಡೆದ ಈ ಒಪ್ಪಂದವನ್ನು ಜ್ಞಾಪಿಸಿಕೊ. ಯೆಹೋವನು ಸದಾಕಾಲ ನಮಗೆ ಸಾಕ್ಷಿಯಾಗಿರುವನು” ಎಂದು ಹೇಳಿದನು.

24 ನಂತರ ದಾವೀದನು ಹೊಲದಲ್ಲಿ ಅಡಗಿಕೊಂಡನು.

ಔತಣದಲ್ಲಿ ಸೌಲನ ವರ್ತನೆ

ಅಮಾವಾಸ್ಯೆಯ ಔತಣದ ಸಮಯವು ಬಂದಿತು. ರಾಜನು ಊಟಕ್ಕೆ ಕುಳಿತನು. 25 ರಾಜನು ತಾನು ಯಾವಾಗಲೂ ಕುಳಿತುಕೊಳ್ಳುವಂತೆ ಗೋಡೆಯ ಸಮೀಪದಲ್ಲಿ ಕುಳಿತುಕೊಂಡನು. ಯೋನಾತಾನನು ಸೌಲನ ಎದುರಾಗಿ ಕುಳಿತುಕೊಂಡನು. ಸೌಲನ ಪಕ್ಕದಲ್ಲಿ ಅಬ್ನೇರನು ಕುಳಿತುಕೊಂಡನು. ಆದರೆ ದಾವೀದನ ಸ್ಥಳವು ಖಾಲಿಯಾಗಿತ್ತು.

2 ಕೊರಿಂಥದವರಿಗೆ 8:1-7

ಕ್ರೈಸ್ತರ ಕೊಡುವಿಕೆ

ಸಹೋದರ ಸಹೋದರಿಯರೇ, ಮಕೆದೋನಿಯದ ಸಭೆಗಳಲ್ಲಿ ದೇವರು ತೋರಿದ ಕೃಪೆಯ ಬಗ್ಗೆ ನಿಮಗೆ ತಿಳಿಸಲು ಇಷ್ಟಪಡುತ್ತೇವೆ. ಆ ವಿಶ್ವಾಸಿಗಳು ಅತೀವ ಕಷ್ಟಗಳಿಂದ ಪರೀಕ್ಷಿಸಲ್ಪಟ್ಟಿದ್ದಾರೆ. ಅವರು ಬಹಳ ಬಡಜನರು. ಆದರೆ ಅವರು ತಮ್ಮ ಮಹಾ ಆನಂದದಿಂದ ಬಹಳವಾಗಿ ಕೊಟ್ಟರು. ತಮ್ಮಿಂದ ಸಾಧ್ಯವಾದಷ್ಟರ ಮಟ್ಟಿಗೆ ಕೊಟ್ಟಿದ್ದಾರೆಂದು ನಾನು ನಿಮಗೆ ಹೇಳುತ್ತೇನೆ. ಅವರು ತಮ್ಮ ಶಕ್ತಿಮೀರಿ ಕೊಟ್ಟಿದ್ದಾರೆ. ಅವರು ತಾವಾಗಿಯೇ ಕೊಟ್ಟರು. ಕೊಡಬೇಕೆಂದು ಅವರಿಗೆ ಯಾರೂ ಹೇಳಲಿಲ್ಲ. ದೇವಜನರಿಗೋಸ್ಕರವಾದ ಈ ಸೇವೆಯಲ್ಲಿ ತಾವೂ ಪಾಲುಗಾರರಾಗುವ ಭಾಗ್ಯ ದೊರೆಯಬೇಕೆಂದು ಅವರು ನಮ್ಮನ್ನು ಪದೇಪದೇ ಕೇಳಿಕೊಂಡರು ಮತ್ತು ಬೇಡಿಕೊಂಡರು. ನಾವೆಂದೂ ನೆನಸಿಲ್ಲದ ರೀತಿಯಲ್ಲಿ ಅವರು ಕೊಟ್ಟರು. ಅವರು ತಮ್ಮ ಹಣವನ್ನು ನಮಗೆ ಕೊಡುವುದಕ್ಕಿಂತ ಮೊದಲು ತಮ್ಮನ್ನೇ ಪ್ರಭುವಿಗೂ ನಮಗೂ ಒಪ್ಪಿಸಿಕೊಟ್ಟರು. ದೇವರು ಬಯಸುವುದು ಇದನ್ನೇ.

ಆದ್ದರಿಂದ, ವಿಶೇಷವಾದ ಈ ಕೃಪಾಕಾರ್ಯವನ್ನು ಪೂರೈಸಲು ನಿಮಗೆ ಸಹಾಯ ಮಾಡಬೇಕೆಂದು ನಾವು ತೀತನನ್ನು ಕೇಳಿಕೊಂಡೆವು. ಈ ಕಾರ್ಯವನ್ನು ಪ್ರಾರಂಭಿಸಿದವನು ತೀತನೇ. ನೀವು ಪ್ರತಿಯೊಂದರಲ್ಲಿಯೂ ಅಂದರೆ, ನಂಬಿಕೆಯಲ್ಲಿ, ಮಾತಾಡುವುದರಲ್ಲಿ, ಜ್ಞಾನದಲ್ಲಿ, ಸಹಾಯಮಾಡಬೇಕೆಂಬ ಆಸಕ್ತಿಯಲ್ಲಿ ಮತ್ತು ನಮ್ಮಿಂದ ಕಲಿತುಕೊಂಡ ಪ್ರೀತಿಯಲ್ಲಿ ಶ್ರೀಮಂತರಾಗಿದ್ದೀರಿ. ಆದ್ದರಿಂದ ಕೃಪಾಕಾರ್ಯದಲ್ಲಿಯೂ ನೀವು ಶ್ರೀಮಂತರಾಗಿರಬೇಕೆಂದು ನಾವು ಬಯಸುತ್ತೇವೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International