Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 130

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

130 ಯೆಹೋವನೇ, ಮಹಾ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡಿದ್ದೇನೆ;
    ಸಹಾಯಕ್ಕಾಗಿ ನಿನ್ನನ್ನೇ ಕೂಗಿಕೊಳ್ಳುತ್ತಿದ್ದೇನೆ.
ನನ್ನ ಒಡೆಯನೇ, ನನಗೆ ಕಿವಿಗೊಡು.
    ನನ್ನ ಮೊರೆಯನ್ನು ಆಲಿಸು.
ಯೆಹೋವನೇ, ನೀನು ಮನುಷ್ಯರನ್ನು ಅವರೆಲ್ಲರ ಪಾಪಗಳಿಗೆ ತಕ್ಕಂತೆ ದಂಡಿಸಿದರೆ
    ಒಬ್ಬನೂ ಜೀವಂತವಾಗಿ ಉಳಿಯಲಾರ.
ಯೆಹೋವನೇ, ನಿನ್ನ ಜನರನ್ನು ಕ್ಷಮಿಸು.
    ಆಗ, ನಿನ್ನನ್ನು ಆರಾಧಿಸುವುದಕ್ಕೆ ಜನರಿರುವರು.

ನಾನು ಯೆಹೋವನ ಸಹಾಯಕ್ಕಾಗಿ ಕಾಯುತ್ತಿದ್ದೇನೆ.
    ನನ್ನ ಪ್ರಾಣವು ಆತನಿಗಾಗಿ ಕಾದುಕೊಂಡಿರುವುದು.
    ಆತನು ನುಡಿಯನ್ನು ನಂಬಿಕೊಂಡಿದ್ದೇನೆ.
ನಾನು ನನ್ನ ಒಡೆಯನಿಗಾಗಿ ಮುಂಜಾನೆಗೋಸ್ಕರ ಎದುರುನೋಡುತ್ತಿರುವ
    ಕಾವಲುಗಾರರಂತೆ ನಿರೀಕ್ಷಿಸುತ್ತಿದ್ದೇನೆ.
ಇಸ್ರೇಲೇ, ಯೆಹೋವನಲ್ಲಿ ಭರವಸವಿಡು.
    ಆತನಲ್ಲಿ ಮಾತ್ರ ನಿಜವಾದ ಪ್ರೀತಿಯಿದೆ.
ಆತನು ನಮ್ಮನ್ನು ಯಾವಾಗಲೂ ರಕ್ಷಿಸುವನು.
    ಆತನೇ ಇಸ್ರೇಲರ ಎಲ್ಲಾ ಪಾಪಗಳನ್ನು ಕ್ಷಮಿಸುವನು.

1 ಸಮುವೇಲನು 20:27-42

27 ಮಾರನೆಯ ದಿನದಲ್ಲಿ, ಅಂದರೆ ಆ ತಿಂಗಳ ಎರಡನೆಯ ದಿನದಲ್ಲಿ ದಾವೀದನ ಸ್ಥಳವು ಮತ್ತೆ ಖಾಲಿಯಾಗಿತ್ತು. ಆಗ ಸೌಲನು ತನ್ನ ಮಗನಾದ ಯೋನಾತಾನನಿಗೆ, “ನಿನ್ನೆ ಮತ್ತು ಇಂದು ಅಮಾವಾಸ್ಯೆ ಔತಣಕ್ಕೆ ಇಷಯನ ಮಗನಾದ ದಾವೀದನು ಏಕೆ ಬರಲಿಲ್ಲ?” ಎಂದು ಕೇಳಿದನು.

28 ಯೋನಾತಾನನು, “ಬೆತ್ಲೆಹೇಮಿಗೆ ಹೋಗಲು ತನಗೆ ಅವಕಾಶಕೊಡಬೇಕೆಂದು ದಾವೀದನು ನನ್ನನ್ನು ಬಹಳವಾಗಿ ಕೇಳಿಕೊಂಡನು. 29 ‘ನಮ್ಮ ಗೋತ್ರದವರು ಬೆತ್ಲೆಹೇಮಿನಲ್ಲಿ ಯಜ್ಞವನ್ನು ಅರ್ಪಿಸುತ್ತಿರುವುದರಿಂದ ನನ್ನ ಸಹೋದರರು ನನಗೂ ಬರಬೇಕೆಂದು ಕೇಳಿಕೊಂಡಿದ್ದಾರೆ. ನೀನು ನನ್ನ ಗೆಳೆಯನಾಗಿರುವುದಾದರೆ ನನ್ನ ಸೋದರರನ್ನು ನೋಡಿಕೊಂಡು ಬರಲು ದಯವಿಟ್ಟು ನನಗೆ ಅವಕಾಶಕೊಡು ಎಂದು ಹೇಳಿದನು.’ ಆದ್ದರಿಂದಲೇ ದಾವೀದನು ರಾಜನ ಊಟದ ಮೇಜಿಗೆ ಬಂದಿಲ್ಲ” ಎಂದು ಉತ್ತರಿಸಿದನು.

30 ಸೌಲನು ಯೋನಾತಾನನ ಮೇಲೆ ಬಹಳ ಕೋಪಗೊಂಡು, “ನೀನು ಅವಿಧೇಯಳಾದ ದಾಸಿಯ ಮಗ. ನೀನೂ ಅವಳಂತೆಯೇ ಅವಿಧೇಯ. ನೀನು ದಾವೀದನ ಪಕ್ಷವಹಿಸಿರುವುದು ನನಗೆ ಗೊತ್ತಿದೆ. ನೀನು ನಿನಗೂ ಮತ್ತು ನಿನ್ನ ತಾಯಿಗೂ ನಾಚಿಕೆಯನ್ನು ತಂದಿರುವೆ. 31 ಇಷಯನ ಮಗ ಬದುಕಿರುವವರೆಗೆ ನೀನು ರಾಜನಾಗುವುದೇ ಇಲ್ಲ; ನಿನಗೆ ರಾಜ್ಯಾಧಿಕಾರವೂ ಸಿಗುವುದಿಲ್ಲ. ಈಗ ದಾವೀದನನ್ನು ಕರೆದುಕೊಂಡು ಬಾ! ಅವನೊಬ್ಬ ಸತ್ತಮನುಷ್ಯ!” ಎಂದು ಹೇಳಿದನು.

32 ಯೋನಾತಾನನು ತನ್ನ ತಂದೆಗೆ, “ದಾವೀದನನ್ನು ಏಕೆ ಕೊಲ್ಲಬೇಕು? ಅವನು ಮಾಡಿದ ತಪ್ಪಾದರೂ ಏನು?” ಎಂದು ಕೇಳಿದನು.

33 ಆದರೆ ಸೌಲನು ಯೋನಾತಾನನನ್ನು ಕೊಲ್ಲುವುದಕ್ಕಾಗಿ ಈಟಿಯನ್ನು ಅವನ ಕಡೆಗೆ ಎಸೆದನು. ದಾವೀದನನ್ನು ಕೊಲ್ಲಲು ತನ್ನ ತಂದೆಯು ದೃಢನಿರ್ಧಾರ ಮಾಡಿದ್ದಾನೆಂದು ಯೋನಾತಾನನು ತಿಳಿದುಕೊಂಡನು. 34 ಯೋನಾತಾನನು ಬಹಳ ಕೋಪಗೊಂಡು ಊಟದ ಮೇಜನ್ನು ಬಿಟ್ಟುಹೋದನು. ಯೋನಾತಾನನು ತನ್ನ ತಂದೆಯ ಮೇಲೆ ಬಹಳವಾಗಿ ಬೇಸರಗೊಂಡಿದ್ದರಿಂದ ಮತ್ತು ಕೋಪವುಳ್ಳವನಾಗಿದ್ದರಿಂದ ಎರಡನೆ ದಿನ ಔತಣದಲ್ಲಿ ಅವನು ಏನನ್ನೂ ತಿನ್ನಲಿಲ್ಲ. ಸೌಲನು ದಾವೀದನಿಗೆ ಅವಮಾನ ಮಾಡಿದ್ದರಿಂದ ಯೋನಾತಾನನು ಕೋಪಗೊಂಡಿದ್ದನು. ಸೌಲನು ದಾವೀದನನ್ನು ಕೊಲ್ಲಬೇಕೆಂದಿದ್ದುದರಿಂದ ಯೋನಾತಾನನು ದುಃಖಿಸಿದನು.

ದಾವೀದ ಮತ್ತು ಯೋನಾತಾನರ ಬೀಳ್ಕೊಡುಗೆ

35 ಮಾರನೆಯ ದಿನ ಬೆಳಿಗ್ಗೆ ಯೋನಾತಾನನು ಹೊಲಕ್ಕೆ ಹೋದನು. ಅವನು ದಾವೀದನೊಂದಿಗೆ ಮಾಡಿಕೊಂಡಿದ್ದ ಒಪ್ಪಂದದಂತೆ ಅವನನ್ನು ನೋಡಲು ಹೋದನು. ಯೋನಾತಾನನು ಒಬ್ಬ ಬಾಲಕನನ್ನು ತನ್ನೊಂದಿಗೆ ಕರೆದುಕೊಂಡು ಹೋದನು. 36 ಯೋನಾತಾನನು ಆ ಬಾಲಕನಿಗೆ, “ನಾನು ಪ್ರಯೋಗಿಸುವ ಬಾಣಗಳನ್ನು ಹುಡುಕಲು ಹೋಗು” ಎಂದು ಹೇಳಿದನು. ಬಾಲಕನು ಓಡಲು ಆರಂಭಿಸಿದನು, ಯೋನಾತಾನನು ಆ ಬಾಲಕನ ಆಚೆಗೆ ಬಾಣಗಳನ್ನು ಪ್ರಯೋಗಿಸಿದನು. 37 ಬಾಣಗಳು ಹೋಗಿ ಬಿದ್ದ ಸ್ಥಳಕ್ಕೆ ಬಾಲಕನು ಹೋದನು. ಆದರೆ ಯೋನಾತಾನನು, “ಬಾಣಗಳು ಬಹಳ ದೂರದಲ್ಲಿವೆ!” ಎಂದು ಹೇಳಿದನು. 38 ನಂತರ ಯೋನಾತಾನನು, “ಬೇಗ ಹೋಗು! ಅವುಗಳನ್ನು ತೆಗೆದುಕೊಂಡು ಬಾ! ಅಲ್ಲಿಯೇ ನಿಲ್ಲಬೇಡ!” ಎಂದು ಕೂಗಿಹೇಳಿದನು. ಆ ಬಾಲಕನು ಬಾಣಗಳನ್ನೆಲ್ಲ ಆರಿಸಿಕೊಂಡು ತನ್ನ ಒಡೆಯನ ಬಳಿಗೆ ತಂದನು. 39 ಅಲ್ಲಿ ಏನು ನಡೆಯಿತು ಎಂಬುದು ಬಾಲಕನಿಗೇನೂ ತಿಳಿಯಲಿಲ್ಲ. ಯೋನಾತಾನ ಮತ್ತು ದಾವೀದರಿಗೆ ಮಾತ್ರ ತಿಳಿದಿತ್ತು. 40 ಯೋನಾತಾನನು ತನ್ನ ಬಿಲ್ಲು ಮತ್ತು ಬಾಣಗಳನ್ನು ಬಾಲಕನಿಗೆ ಕೊಟ್ಟನು. ನಂತರ ಯೋನಾತಾನನು ಆ ಬಾಲಕನಿಗೆ, “ಪಟ್ಟಣಕ್ಕೆ ಹಿಂದಿರುಗಿ ಹೋಗು” ಎಂದು ಹೇಳಿದನು.

41 ಬಾಲಕನು ಹೊರಟುಹೋದನು. ದಾವೀದನು ತಾನು ಅಡಗಿದ್ದ ಬೆಟ್ಟದ ಮತ್ತೊಂದು ಕಡೆಯ ಸ್ಥಳದಿಂದ ಹೊರಬಂದನು. ದಾವೀದನು ಯೋನಾತಾನನ ಮುಂದೆ ಬಂದು ಮೂರು ಸಲ ತನ್ನ ಮುಖವನ್ನು ನೆಲದವರೆಗೂ ಬಗ್ಗಿಸಿ ನಮಸ್ಕರಿಸಿದನು. ನಂತರ ದಾವೀದ ಮತ್ತು ಯೋನಾತಾನರು ಪರಸ್ಪರ ಮುದ್ದಿಟ್ಟರು, ಅವರಿಬ್ಬರೂ ಒಟ್ಟಾಗಿ ಅತ್ತರು. ದಾವೀದನು ಯೋನಾತಾನನಿಗಿಂತ ಹೆಚ್ಚು ಅತ್ತನು.

42 ಯೋನಾತಾನನು ದಾವೀದನಿಗೆ, “ಸಮಾಧಾನದಿಂದ ಹೋಗು. ನಾವಿಬ್ಬರೂ ಗೆಳೆಯರಾಗಿರಲು ಯೆಹೋವನ ಹೆಸರಿನಲ್ಲಿ ಪ್ರಮಾಣಮಾಡಿದ್ದೇವೆ. ನಮ್ಮಿಬ್ಬರಿಗೂ ನಮ್ಮ ಸಂತತಿಯವರಿಗೂ ಇರುವ ಸಂಬಂಧಕ್ಕೆ ಯೆಹೋವನೇ ಸಾಕ್ಷಿ ಎಂದು ಹೇಳಿದ್ದೇವೆ” ಎಂದನು.

ಲೂಕ 4:31-37

ದೆವ್ವದಿಂದ ಪೀಡಿತನಾಗಿದ್ದವನಿಗೆ ಬಿಡುಗಡೆ

(ಮಾರ್ಕ 1:21-28)

31 ಯೇಸು ಗಲಿಲಾಯದ ಕಪೆರ್ನೌಮ್ ಎಂಬ ಊರಿಗೆ ಹೋದನು. ಸಬ್ಬತ್‌ದಿನದಂದು ಯೇಸು ಜನರಿಗೆ ಉಪದೇಶಿಸಿದನು. 32 ಯೇಸುವಿನ ಉಪದೇಶಕ್ಕೆ ಅವರು ಅತ್ಯಾಶ್ಚರ್ಯಪಟ್ಟರು. ಏಕೆಂದರೆ ಆತನು ಅಧಿಕಾರದಿಂದ ಮಾತಾಡಿದನು.

33 ಸಭಾಮಂದಿರದಲ್ಲಿ ದೆವ್ವದಿಂದ ಪೀಡಿತನಾದ ಒಬ್ಬ ಮನುಷ್ಯನಿದ್ದನು. ಅವನು ಗಟ್ಟಿಯಾದ ಧ್ವನಿಯಿಂದ, 34 “ನಜರೇತಿನ ಯೇಸುವೇ! ನಮ್ಮ ಗೊಡವೆ ನಿನಗೇಕೆ? ನಮ್ಮನ್ನು ನಾಶಮಾಡಲು ಇಲ್ಲಿಗೆ ಬಂದಿರುವೆಯಾ? ನೀನು ಯಾರೆಂದು ನಾನು ಬಲ್ಲೆನು. ನೀನು ದೇವರಿಂದ ಕಳುಹಿಸಲ್ಪಟ್ಟ ಪರಿಶುದ್ಧನು!” ಎಂದು ಕೂಗಿದನು. 35 ಆದರೆ ಯೇಸು ಆ ದೆವ್ವಕ್ಕೆ, “ಸುಮ್ಮನಿರು! ಇವನನ್ನು ಬಿಟ್ಟು ಹೊರಗೆ ಬಾ!” ಎಂದು ಆಜ್ಞಾಪಿಸಿದನು. ದೆವ್ವವು ಅವನನ್ನು ಜನರೆಲ್ಲರ ಎದುರಿನಲ್ಲಿಯೇ ಕೆಡವಿ ಯಾವ ಕೇಡೂ ಮಾಡದೆ ಬಿಟ್ಟು ಹೋಯಿತು.

36 ಜನರೆಲ್ಲರೂ ಬೆರಗಾಗಿ, “ಎಂಥಾ ಮಾತುಗಳಿವು! ಆತನು ಅಧಿಕಾರದಿಂದಲೂ ಶಕ್ತಿಯಿಂದಲೂ ದೆವ್ವಗಳಿಗೆ ಆಜ್ಞಾಪಿಸಲು, ಅವು ಬಿಟ್ಟುಹೋಗುತ್ತವೆಯಲ್ಲಾ” ಎಂದು ಮಾತಾಡಿಕೊಂಡರು. 37 ಹೀಗಾಗಿ ಯೇಸುವಿನ ಸುದ್ದಿಯು ಆ ಪ್ರಾಂತ್ಯದಲ್ಲೆಲ್ಲಾ ಹಬ್ಬಿಕೊಂಡಿತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International