Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 99

99 ಯೆಹೋವನೇ ರಾಜನು!
    ಜನಾಂಗಗಳು ಭಯದಿಂದ ನಡುಗಲಿ.
ಆತನು ಕೆರೂಬಿಗಳ ಮೇಲೆ ರಾಜನಂತೆ ಕುಳಿತುಕೊಂಡಿದ್ದಾನೆ.
    ಭೂಮಿಯು ಭಯದಿಂದ ನಡುಗಲಿ.
ಚೀಯೋನಿನ ಯೆಹೋವನು ದೊಡ್ಡವನು!
    ಆತನು ಜನಾಂಗಗಳಿಗೆಲ್ಲಾ ಮಹಾನಾಯಕನಾಗಿದ್ದಾನೆ.
ಅವರೆಲ್ಲರೂ ನಿನ್ನ ಭಯಂಕರವಾದ ಹೆಸರನ್ನು ಕೊಂಡಾಡಲಿ.
    ಆತನೇ ಪರಿಶುದ್ಧನು.
ಶಕ್ತಿಪೂರ್ಣನಾದ ರಾಜನು ನ್ಯಾಯವನ್ನು ಪ್ರೀತಿಸುವನು.
    ದೇವರೇ, ನೀತಿಯನ್ನು ಸೃಷ್ಟಿಸಿದಾತನು ನೀನೇ.
    ಯಾಕೋಬ್ಯರಲ್ಲಿ ನ್ಯಾಯನೀತಿಗಳನ್ನು ಸ್ಥಾಪಿಸಿದವನು ನೀನೇ.
ನಮ್ಮ ದೇವರಾದ ಯೆಹೋವನನ್ನು ಕೊಂಡಾಡಿರಿ,
    ಆತನ ಪವಿತ್ರ ಪಾದಪೀಠಕ್ಕೆ[a] ಅಡ್ಡಬೀಳಿರಿ.
ಮೋಶೆಯೂ ಆರೋನನೂ ದೇವರ ಯಾಜಕರುಗಳಾಗಿದ್ದರು.
    ಸಮುವೇಲನೂ ಆತನ ಹೆಸರಿನಲ್ಲಿ ಪ್ರಾರ್ಥಿಸಿದನು.
ಆತನು ಅವರೆಲ್ಲರ ಪ್ರಾರ್ಥನೆಗಳಿಗೆ ಉತ್ತರಿಸಿದನು.
ಆತನು ಮೇಘಸ್ತಂಭದಿಂದ ಅವರೊಂದಿಗೆ ಮಾತಾಡಿದನು.
    ಅವರು ಆಜ್ಞೆಗಳಿಗೆ ವಿಧೇಯರಾದರು.
    ಆತನು ಅವರಿಗೆ ಧರ್ಮಶಾಸ್ತ್ರವನ್ನು ಕೊಟ್ಟನು.
ನಮ್ಮ ದೇವರಾದ ಯೆಹೋವನೇ, ನೀನು ಅವರ ಪ್ರಾರ್ಥನೆಗಳಿಗೆ ಉತ್ತರಿಸಿದೆ.
    ನೀನು ಕ್ಷಮಿಸುವ ದೇವರೆಂದೂ
    ದುಷ್ಕೃತ್ಯಗಳಿಗೆ ದಂಡಿಸುವವನೆಂದೂ ಅವರಿಗೆ ತೋರ್ಪಡಿಸಿದೆ.
ನಮ್ಮ ದೇವರಾದ ಯೆಹೋವನನ್ನು ಕೊಂಡಾಡಿರಿ.
    ಆತನ ಪವಿತ್ರ ಪರ್ವತದ ಕಡೆಗೆ ಅಡ್ಡಬಿದ್ದು ಆತನನ್ನು ಆರಾಧಿಸಿರಿ.
    ನಮ್ಮ ದೇವರಾದ ಯೆಹೋವನೇ ಪರಿಶುದ್ಧನು!

1 ಸಮುವೇಲನು 2:18-21

18 ಆದರೆ ಬಾಲಕನಾದ ಸಮುವೇಲನು ಏಫೋದ್ ಎಂಬ ನಾರುಬಟ್ಟೆಯನ್ನು ಧರಿಸಿ ಯೆಹೋವನ ಸೇವೆ ಮಾಡುತ್ತಿದ್ದನು. 19 ಸಮುವೇಲನ ತಾಯಿಯು ಪ್ರತಿವರ್ಷವೂ ಒಂದು ಚಿಕ್ಕ ಮೇಲಂಗಿಯನ್ನು ಅವನಿಗಾಗಿ ತಯಾರಿಸಿ, ಗಂಡನೊಡನೆ ವಾರ್ಷಿಕ ಯಜ್ಞವನ್ನು ಅರ್ಪಿಸಲು ಶೀಲೋವಿಗೆ ಹೋದಾಗ ಅವನಿಗೆ ಕೊಡುತ್ತಿದ್ದಳು.

20 ಏಲಿಯು ಎಲ್ಕಾನನನ್ನು ಮತ್ತು ಅವನ ಹೆಂಡತಿಯಾದ ಹನ್ನಳನ್ನು ಆಶೀರ್ವದಿಸಿ, “ಹನ್ನಳು ಯೆಹೋವನನ್ನು ಪ್ರಾರ್ಥಿಸಿ ಪಡೆದ ಮಗನನ್ನು ಆತನಿಗೆ ಒಪ್ಪಿಸಿದ್ದರಿಂದ ಯೆಹೋವನು ಅವಳಿಗೆ ಬೇರೆ ಮಕ್ಕಳನ್ನು ಅನುಗ್ರಹಿಸಲಿ” ಎಂದು ಹೇಳಿದನು.

ಆಮೇಲೆ ಎಲ್ಕಾನ ಮತ್ತು ಹನ್ನ ಮನೆಗೆ ಹೋದರು. 21 ಯೆಹೋವನು ಹನ್ನಳಿಗೆ ದಯೆತೋರಿದನು. ಅವಳಿಗೆ ಮೂರು ಮಂದಿ ಗಂಡುಮಕ್ಕಳೂ ಇಬ್ಬರು ಹೆಣ್ಣುಮಕ್ಕಳೂ ಆದರು. ಬಾಲಕನಾದ ಸಮುವೇಲನು ಯೆಹೋವನ ಸನ್ನಿಧಿಯಲ್ಲಿ ದೊಡ್ಡವನಾದನು.

ಅಪೊಸ್ತಲರ ಕಾರ್ಯಗಳು 15:1-5

ಜೆರುಸಲೇಮಿನಲ್ಲಿ ಸಮ್ಮೇಳನ

15 ಬಳಿಕ ಕೆಲವು ಜನರು ಜುದೇಯದಿಂದ ಅಂತಿಯೋಕ್ಯಕ್ಕೆ ಬಂದರು. “ನೀವು ಸುನ್ನತಿ ಮಾಡಿಸಿಕೊಳ್ಳದಿದ್ದರೆ ನಿಮಗೆ ರಕ್ಷಣೆಯಾಗುವುದಿಲ್ಲ. ಸುನ್ನತಿ ಮಾಡಿಸಿಕೊಳ್ಳಬೇಕೆಂದು ಮೋಶೆಯೇ ಹೇಳಿದ್ದಾನೆ” ಎಂದು ಅವರು ಯೆಹೂದ್ಯರಲ್ಲದ ವಿಶ್ವಾಸಿಗಳಿಗೆ ಉಪದೇಶಿಸತೊಡಗಿದರು. ಪೌಲ ಬಾರ್ನಬರು ಈ ಉಪದೇಶಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿ ಅವರೊಂದಿಗೆ ವಾದ ಮಾಡಿದರು. ಈ ಸಮಸ್ಯೆಯ ಬಗ್ಗೆ ಅಪೊಸ್ತಲರೊಡನೆ ಮತ್ತು ಹಿರಿಯರೊಡನೆ ಚರ್ಚಿಸಲು ಪೌಲ ಬಾರ್ನಬರನ್ನು ಮತ್ತು ಇತರ ಕೆಲವರನ್ನು ಜೆರುಸಲೇಮಿಗೆ ಕಳುಹಿಸಲು ಸಭೆ ನಿರ್ಧರಿಸಿತು.

ಅಂತೆಯೇ ಸಭೆಯು ಇವರನ್ನು ಕಳುಹಿಸಿತು. ಇವರು ಫೆನಿಷ್ಯ ಮತ್ತು ಸಮಾರ್ಯದ ಮಾರ್ಗವಾಗಿ ಪ್ರಯಾಣಮಾಡಿದರು. ಯೆಹೂದ್ಯರಲ್ಲದ ಜನರು ನಿಜದೇವರ ಕಡೆಗೆ ತಿರುಗಿಕೊಂಡಿದ್ದರ ಬಗ್ಗೆ ಈ ನಾಡುಗಳಲ್ಲಿ ವಿವರಿಸಿದರು. ಇದನ್ನು ಕೇಳಿ ಸಹೋದರರಿಗೂ ಬಹಳ ಸಂತೋಷವಾಯಿತು. ಪೌಲ ಬಾರ್ನಬರು ಮತ್ತು ಇತರರು ಜೆರುಸಲೇಮನ್ನು ತಲುಪಿದರು. ಅಪೊಸ್ತಲರು, ಹಿರಿಯರು ಮತ್ತು ಸಭೆಯವರು ಇವರನ್ನು ಸ್ವಾಗತಿಸಿದರು. ದೇವರು ತಮ್ಮೊಂದಿಗಿದ್ದು ಮಾಡಿದ ಎಲ್ಲಾ ಕಾರ್ಯಗಳ ಬಗ್ಗೆ ಪೌಲ ಬಾರ್ನಬರು ಮತ್ತು ಇತರರು ವಿವರಿಸಿದರು. ಜೆರುಸಲೇಮಿನಲ್ಲಿದ್ದ ವಿಶ್ವಾಸಿಗಳಲ್ಲಿ ಕೆಲವರು ಫರಿಸಾಯರ ಗುಂಪಿಗೆ ಸೇರಿದವರಾಗಿದ್ದರು. ಅವರು ಎದ್ದು ನಿಂತುಕೊಂಡು, “ಯೆಹೂದ್ಯರಲ್ಲದ ವಿಶ್ವಾಸಿಗಳು ಸುನ್ನತಿ ಮಾಡಿಸಿಕೊಳ್ಳಬೇಕು. ಮೋಶೆಯ ಧರ್ಮಶಾಸ್ತ್ರಕ್ಕೆ ವಿಧೇಯರಾಗಬೇಕೆಂದು ನಾವು ಅವರಿಗೆ ಹೇಳಬೇಕು!” ಎಂದರು.

ಅಪೊಸ್ತಲರ ಕಾರ್ಯಗಳು 15:22-35

ಯೆಹೂದ್ಯರಲ್ಲದ ವಿಶ್ವಾಸಿಗಳಿಗೆ ಪತ್ರ

22 ಅಪೊಸ್ತಲರು, ಹಿರಿಯರು ಮತ್ತು ಇಡೀ ಸಭೆಯವರು ಪೌಲ ಬಾರ್ನಬರೊಂದಿಗೆ ಕೆಲವು ಜನರನ್ನು ಅಂತಿಯೋಕ್ಯಕ್ಕೆ ಕಳುಹಿಸಬಯಸಿದರು. ತಮ್ಮವರೇ ಆದ ಕೆಲವರನ್ನು ಆರಿಸಿಕೊಳ್ಳಲು ಸಭೆಯು ನಿರ್ಧರಿಸಿತು. ಅವರು ಯೂದನನ್ನು (ಬಾರ್ಸಬನೆಂದೂ ಕರೆಯುತ್ತಿದ್ದರು) ಮತ್ತು ಸೀಲನನ್ನು ಆರಿಸಿಕೊಂಡರು. ಇವರು ಜೆರುಸಲೇಮಿನ ಸಭೆಯವರಲ್ಲಿ ಪ್ರಮುಖರಾಗಿದ್ದರು. 23 ಸಭೆಯು ಇವರ ಕೈಯಲ್ಲಿ ಪತ್ರವನ್ನು ಕಳುಹಿಸಿಕೊಟ್ಟಿತು. ಆ ಪತ್ರದಲ್ಲಿ ಹೀಗೆ ಬರೆದಿತ್ತು:

ಅಂತಿಯೋಕ್ಯ ಪಟ್ಟಣದಲ್ಲಿಯೂ ಸಿರಿಯ ಮತ್ತು ಸಿಲಿಸಿಯ ನಾಡುಗಳಲ್ಲಿಯೂ ಇರುವ ಯೆಹೂದ್ಯರಲ್ಲದ ಸಹೋದರರಿಗೆಲ್ಲಾ, ನಿಮ್ಮ ಸಹೋದರರಾದ ಅಪೊಸ್ತಲರೂ ಹಿರಿಯರೂ ಬರೆಯುವುದೇನೆಂದರೆ:

ಪ್ರಿಯ ಸಹೋದರರೇ,

24 ನಮ್ಮ ಸಮುದಾಯದಿಂದ ನಿಮ್ಮ ಬಳಿಗೆ ಬಂದ ಕೆಲವರು ನಿಮಗೆ ಕೆಲವು ಸಂಗತಿಗಳನ್ನು ಹೇಳುವುದರ ಮೂಲಕ ನಿಮ್ಮನ್ನು ತೊಂದರೆಗೆ ಈಡುಮಾಡಿ ನಿಮ್ಮಲ್ಲಿ ಗಲಿಬಿಲಿ ಉಂಟುಮಾಡಿದರೆಂಬ ಸಮಾಚಾರ ನಮಗೆ ತಿಳಿಯಿತು. ಆದರೆ ಹೀಗೆ ಮಾಡಬೇಕೆಂದು ನಾವು ಅವರಿಗೆ ಹೇಳಿರಲಿಲ್ಲ! 25 ಆದ್ದರಿಂದ ನಾವೆಲ್ಲರೂ ಕೆಲವರನ್ನು ಸರ್ವಾನುಮತದಿಂದ ಆರಿಸಿ ನಿಮ್ಮ ಬಳಿಗೆ ಕಳುಹಿಸಲು ನಿರ್ಧರಿಸಿದೆವು. ನಮ್ಮ ಪ್ರಿಯ ಸಹೋದರರಾದ ಬಾರ್ನಬ ಮತ್ತು ಪೌಲರೊಂದಿಗೆ ಅವರು ಬರುತ್ತಿದ್ದಾರೆ. 26 ಬಾರ್ನಬನು ಮತ್ತು ಪೌಲನು ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಸೇವೆಗಾಗಿ ತಮ್ಮ ಜೀವಿತಗಳನ್ನೇ ಕೊಟ್ಟಿದ್ದಾರೆ. 27 ಆದ್ದರಿಂದ ನಾವು ಯೂದನನ್ನು ಮತ್ತು ಸೀಲನನ್ನು ಅವರೊಂದಿಗೆ ಕಳುಹಿಸಿದ್ದೇವೆ. ಕೆಳಕಂಡ ಸಂಗತಿಗಳನ್ನೆಲ್ಲ ಅವರು ನಿಮಗೆ ತಿಳಿಸುವರು. 28 ನಿಮಗೆ ಇನ್ನೂ ಹೆಚ್ಚಿನ ಭಾರಗಳು ಇರಕೂಡದೆಂಬುದು ಪವಿತ್ರಾತ್ಮನ ನಿರ್ಧಾರ. ಅದಕ್ಕೆ ನಾವು ಒಪ್ಪಿಕೊಂಡಿದ್ದೇವೆ. ನೀವು ಈ ನಿಯಮಗಳನ್ನು ಮಾತ್ರ ಅನುಸರಿಸಬೇಕಾಗಿದೆ:

29 ವಿಗ್ರಹಗಳಿಗೆ ಅರ್ಪಿಸಿರುವ ಆಹಾರವನ್ನು ತಿನ್ನಬೇಡಿ.

ರಕ್ತವನ್ನು ತಿನ್ನಬೇಡಿ. ಕುತ್ತಿಗೆ ಹಿಸುಕಿ ಕೊಂದ ಪ್ರಾಣಿಗಳ ಮಾಂಸವನ್ನು ತಿನ್ನಬೇಡಿ.

ಯಾವುದೇ ಬಗೆಯ ಲೈಂಗಿಕ ಪಾಪವನ್ನು ಮಾಡಬೇಡಿ.

ನೀವು ಇವುಗಳಿಂದ ದೂರವಿದ್ದರೆ ನಿಮಗೆ ಒಳ್ಳೆಯದಾಗುವುದು. ನಿಮಗೆ ಶುಭವಾಗಲಿ!

30 ಆದ್ದರಿಂದ ಪೌಲ ಬಾರ್ನಬರು ಮತ್ತು ಯೂದ ಸೀಲರು ಜೆರುಸಲೇಮಿನಿಂದ ಹೊರಟರು. ಅವರು ಅಂತಿಯೋಕ್ಯಕ್ಕೆ ಹೋಗಿ, ಅಲ್ಲಿ ವಿಶ್ವಾಸಿಗಳ ಸಭೆಸೇರಿಸಿ ಅವರಿಗೆ ಪತ್ರವನ್ನು ಕೊಟ್ಟರು. 31 ವಿಶ್ವಾಸಿಗಳು ಅದನ್ನು ಓದಿ ಬಹು ಸಂತೋಷಪಟ್ಟರು. ಆ ಪತ್ರವು ಅವರನ್ನು ಸಂತೈಸಿತು. 32 ಯೂದ ಸೀಲರು ಸಹ ಪ್ರವಾದಿಗಳಾಗಿದ್ದರು. ಅವರು ಅನೇಕ ಸಂಗತಿಗಳನ್ನು ಸಹೋದರರಿಗೆ ತಿಳಿಸಿ ಅವರನ್ನು ಬಲಪಡಿಸಿದರು. 33 ಯೂದ ಸೀಲರು ಸ್ವಲ್ಪಕಾಲ ಅಲ್ಲಿದ್ದು ಸಹೋದರರಿಂದ ಸಮಾಧಾನವೆಂಬ ಆಶೀರ್ವಾದವನ್ನು ಪಡೆದುಕೊಂಡರು. ಬಳಿಕ ಅವರು ತಮ್ಮನ್ನು ಕಳುಹಿಸಿಕೊಟ್ಟಿದ್ದ ಜೆರುಸಲೇಮಿನ ಸಹೋದರರ ಬಳಿಗೆ ಹಿಂತಿರುಗಿದರು. 34 [a]

35 ಆದರೆ ಪೌಲ ಬಾರ್ನಬರು ಅಂತಿಯೋಕ್ಯದಲ್ಲಿ ತಂಗಿದ್ದು ಇತರ ಅನೇಕರೊಂದಿಗೆ ಸೇರಿಕೊಂಡು ಸುವಾರ್ತೆಯನ್ನು ಸಾರಿದರು ಮತ್ತು ಪ್ರಭುವಿನ ಸಂದೇಶವನ್ನು ಜನರಿಗೆ ಬೋಧಿಸಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International