Revised Common Lectionary (Semicontinuous)
99 ಯೆಹೋವನೇ ರಾಜನು!
ಜನಾಂಗಗಳು ಭಯದಿಂದ ನಡುಗಲಿ.
ಆತನು ಕೆರೂಬಿಗಳ ಮೇಲೆ ರಾಜನಂತೆ ಕುಳಿತುಕೊಂಡಿದ್ದಾನೆ.
ಭೂಮಿಯು ಭಯದಿಂದ ನಡುಗಲಿ.
2 ಚೀಯೋನಿನ ಯೆಹೋವನು ದೊಡ್ಡವನು!
ಆತನು ಜನಾಂಗಗಳಿಗೆಲ್ಲಾ ಮಹಾನಾಯಕನಾಗಿದ್ದಾನೆ.
3 ಅವರೆಲ್ಲರೂ ನಿನ್ನ ಭಯಂಕರವಾದ ಹೆಸರನ್ನು ಕೊಂಡಾಡಲಿ.
ಆತನೇ ಪರಿಶುದ್ಧನು.
4 ಶಕ್ತಿಪೂರ್ಣನಾದ ರಾಜನು ನ್ಯಾಯವನ್ನು ಪ್ರೀತಿಸುವನು.
ದೇವರೇ, ನೀತಿಯನ್ನು ಸೃಷ್ಟಿಸಿದಾತನು ನೀನೇ.
ಯಾಕೋಬ್ಯರಲ್ಲಿ ನ್ಯಾಯನೀತಿಗಳನ್ನು ಸ್ಥಾಪಿಸಿದವನು ನೀನೇ.
5 ನಮ್ಮ ದೇವರಾದ ಯೆಹೋವನನ್ನು ಕೊಂಡಾಡಿರಿ,
ಆತನ ಪವಿತ್ರ ಪಾದಪೀಠಕ್ಕೆ[a] ಅಡ್ಡಬೀಳಿರಿ.
6 ಮೋಶೆಯೂ ಆರೋನನೂ ದೇವರ ಯಾಜಕರುಗಳಾಗಿದ್ದರು.
ಸಮುವೇಲನೂ ಆತನ ಹೆಸರಿನಲ್ಲಿ ಪ್ರಾರ್ಥಿಸಿದನು.
ಆತನು ಅವರೆಲ್ಲರ ಪ್ರಾರ್ಥನೆಗಳಿಗೆ ಉತ್ತರಿಸಿದನು.
7 ಆತನು ಮೇಘಸ್ತಂಭದಿಂದ ಅವರೊಂದಿಗೆ ಮಾತಾಡಿದನು.
ಅವರು ಆಜ್ಞೆಗಳಿಗೆ ವಿಧೇಯರಾದರು.
ಆತನು ಅವರಿಗೆ ಧರ್ಮಶಾಸ್ತ್ರವನ್ನು ಕೊಟ್ಟನು.
8 ನಮ್ಮ ದೇವರಾದ ಯೆಹೋವನೇ, ನೀನು ಅವರ ಪ್ರಾರ್ಥನೆಗಳಿಗೆ ಉತ್ತರಿಸಿದೆ.
ನೀನು ಕ್ಷಮಿಸುವ ದೇವರೆಂದೂ
ದುಷ್ಕೃತ್ಯಗಳಿಗೆ ದಂಡಿಸುವವನೆಂದೂ ಅವರಿಗೆ ತೋರ್ಪಡಿಸಿದೆ.
9 ನಮ್ಮ ದೇವರಾದ ಯೆಹೋವನನ್ನು ಕೊಂಡಾಡಿರಿ.
ಆತನ ಪವಿತ್ರ ಪರ್ವತದ ಕಡೆಗೆ ಅಡ್ಡಬಿದ್ದು ಆತನನ್ನು ಆರಾಧಿಸಿರಿ.
ನಮ್ಮ ದೇವರಾದ ಯೆಹೋವನೇ ಪರಿಶುದ್ಧನು!
ಏಲಿಯು ತನ್ನ ದುಷ್ಟಮಕ್ಕಳನ್ನು ಹತೋಟಿಯಲ್ಲಿಡಲಿಲ್ಲ
22 ಏಲಿಯು ಬಹಳ ವೃದ್ಧನಾದನು. ತನ್ನ ಗಂಡುಮಕ್ಕಳು ಶೀಲೋವಿನಲ್ಲಿ ಇಸ್ರೇಲರೊಂದಿಗೆ ನಡೆದುಕೊಳ್ಳುತ್ತಿರುವ ರೀತಿಯನ್ನು ಮತ್ತು ಅವರು ದೇವದರ್ಶನ ಗುಡಾರದ ಬಾಗಿಲಿನಲ್ಲಿ ಸೇವೆ ಮಾಡುತ್ತಿರುವ ಸ್ತ್ರೀಯರೊಡನೆ ಕೂಡುತ್ತಿರುವುದನ್ನು ಅವನು ಕೇಳುತ್ತಿದ್ದನು.
23 ಏಲಿಯು ತನ್ನ ಗಂಡುಮಕ್ಕಳಿಗೆ, “ಇಲ್ಲಿಯ ಜನರು ನೀವು ಮಾಡುವ ದುಷ್ಕೃತ್ಯಗಳ ಬಗ್ಗೆ ತಿಳಿಸಿದ್ದಾರೆ. ನೀವು ಇಂತಹ ದುಷ್ಕೃತ್ಯಗಳನ್ನು ಏಕೆ ಮಾಡುತ್ತೀರಿ? 24 ಮಕ್ಕಳೇ, ಇಂತಹ ದುಷ್ಕೃತ್ಯಗಳನ್ನು ಮಾಡಬೇಡಿ. ಯೆಹೋವನ ಜನರು ನಿಮ್ಮ ಬಗ್ಗೆ ಕೆಟ್ಟ ಸಂಗತಿಗಳನ್ನು ಮಾತಾಡುತ್ತಿದ್ದಾರೆ. 25 ಒಬ್ಬ ಮನುಷ್ಯನು ಬೇರೊಬ್ಬನ ವಿರುದ್ಧ ಅಪರಾಧ ಮಾಡಿದರೆ, ಯೆಹೋವನು ಅವನಿಗೆ ಸಹಾಯ ಮಾಡಬಹುದು, ಆದರೆ ಒಬ್ಬ ಮನುಷ್ಯನು ಯೆಹೋವನ ವಿರುದ್ಧವೇ ಅಪರಾಧ ಮಾಡಿದರೆ, ಆಗ ಅವನಿಗೆ ಸಹಾಯ ಮಾಡುವವರು ಯಾರು?” ಎಂದು ಬುದ್ಧಿಮಾತು ಹೇಳಿದನು.
ಆದರೆ ಏಲಿಯ ಮಾತನ್ನು ಅವನ ಮಕ್ಕಳು ಕೇಳಲಿಲ್ಲ. ಆದ್ದರಿಂದ ಯೆಹೋವನು ಏಲಿಯ ಮಕ್ಕಳನ್ನು ಕೊಲ್ಲಲು ನಿರ್ಧರಿಸಿದನು.
26 ಬಾಲಕನಾದ ಸಮುವೇಲನು ದೊಡ್ಡವನಾಗುತ್ತಲೇ ಇದ್ದನು. ಅವನು ದೇವರಿಗೆ ಮತ್ತು ಜನರಿಗೆ ಪ್ರಿಯನಾದನು.
ಏಲಿಯ ಕುಟುಂಬದ ಬಗ್ಗೆ ಭೀಕರ ಪ್ರವಾದನೆ
27 ದೇವಮನುಷ್ಯನೊಬ್ಬನು ಏಲಿಯ ಬಳಿಗೆ ಬಂದು, “ಯೆಹೋವನು ಈ ಸಂಗತಿಗಳನ್ನು ತಿಳಿಸಿದನು: ‘ನಿನ್ನ ಪೂರ್ವಿಕರು ಈಜಿಪ್ಟಿನಲ್ಲಿ ಫರೋಹನ ಗುಲಾಮರಾಗಿದ್ದರು. ಆಗ ನಾನು ನಿನ್ನ ಪೂರ್ವಿಕರಿಗೆ ದರ್ಶನ ನೀಡಿದೆ. 28 ಇಸ್ರೇಲಿನ ಎಲ್ಲಾ ಕುಲಗಳಲ್ಲಿ ನಿನ್ನ ಕುಟುಂಬದವರನ್ನು ನನ್ನ ಯಾಜಕರನ್ನಾಗಿ ಆರಿಸಿಕೊಂಡೆನು. ಏಫೋದನ್ನು ಧರಿಸಿಕೊಳ್ಳುವುದಕ್ಕೂ ಯಜ್ಞವನ್ನು ಅರ್ಪಿಸುವುದಕ್ಕೂ ಧೂಪಹಾಕುವುದಕ್ಕೂ ನಾನು ಅವರನ್ನು ಆರಿಸಿಕೊಂಡೆನು. ಇಸ್ರೇಲರು ನನಗೆ ಅರ್ಪಿಸುವ ಯಜ್ಞಗಳಲ್ಲಿ ಮಾಂಸವನ್ನು ಪಡೆಯುವ ಅವಕಾಶವನ್ನೂ ನಾನು ನಿಮ್ಮ ಕುಲದವರಿಗೆ ನೀಡಿದೆನು. 29 ಹೀಗಿರುವಾಗ ಆ ಯಜ್ಞಗಳನ್ನು ಮತ್ತು ಕಾಣಿಕೆಗಳನ್ನು ನೀವು ಗೌರವಿಸದಿರುವುದೇಕೇ? ನಿನ್ನ ಮಕ್ಕಳನ್ನು ನನಗಿಂತ ಹೆಚ್ಚು ಗೌರವಿಸುತ್ತಿರುವೆ. ಇಸ್ರೇಲರು ನನಗಾಗಿ ತರುವ ಯಜ್ಞಮಾಂಸದ ಉತ್ತಮ ಭಾಗಗಳಿಂದ ನಿಮ್ಮನ್ನು ಕೊಬ್ಬಿಸಿಕೊಂಡಿರುವಿರಿ.’
30 “ನಿಮ್ಮ ತಂದೆಯ ಕುಟುಂಬವು ಸರ್ವಕಾಲವೂ ಆತನ ಸೇವೆ ಮಾಡುವುದೆಂದು ಇಸ್ರೇಲಿನ ದೇವರಾದ ಯೆಹೋವನು ವಾಗ್ದಾನ ಮಾಡಿದ್ದನು. ಆದರೆ ಈಗ ಯೆಹೋವನು ಹೀಗೆನ್ನುತ್ತಾನೆ: ‘ಅದೆಂದಿಗೂ ಸಾಧ್ಯವಿಲ್ಲ. ನನ್ನನ್ನು ಸನ್ಮಾನಿಸುವವರನ್ನು ನಾನೂ ಸನ್ಮಾನಿಸುತ್ತೇನೆ. ಆದರೆ ನನ್ನನ್ನು ತಿರಸ್ಕರಿಸುವವರನ್ನು ನಾನೂ ತಿರಸ್ಕರಿಸುತ್ತೇನೆ. 31 ನಿನ್ನ ಸಂತತಿಯವರನ್ನೆಲ್ಲಾ ನಾಶಮಾಡುವ ಕಾಲವು ಬರುತ್ತಿದೆ. ನಿನ್ನ ಮನೆಯಲ್ಲಿ ಯಾರೂ ವೃದ್ಧಾಪ್ಯದವರೆಗೆ ಬದುಕುವುದಿಲ್ಲ. 32 ಇಸ್ರೇಲಿಗೆ ಶುಭಗಳಾದರೂ ನಿನ್ನ ಮನೆಯಲ್ಲಿ ಅಶುಭಗಳಿರುವುದನ್ನು ನೀನು ನೋಡುವೆ. ನಿನ್ನ ಕುಟುಂಬದಲ್ಲಿ ಯಾರೂ ವೃದ್ಧಾಪ್ಯದವರೆಗೆ ಬದುಕುವುದಿಲ್ಲ. 33 ನನ್ನ ಯಜ್ಞವೇದಿಕೆಯ ಬಳಿಯಲ್ಲಿ ಯಾಜಕಸೇವೆ ಮಾಡುವುದಕ್ಕಾಗಿ ನಾನು ಒಬ್ಬನನ್ನು ಉಳಿಸಿಕೊಳ್ಳುವೆನು. ಅವನು ಬಹುಮುಪ್ಪಿನವರೆಗೂ ಬದುಕುವನು. ಅವನ ಕಣ್ಣುಗಳು ಕಾಣದೆ ಹೋಗುವವರೆಗೂ ಬಲಹೀನನಾಗುವವರೆಗೂ ಅವನು ಬದುಕುವನು. ಉಳಿದ ನಿನ್ನ ಸಂತತಿಯವರೆಲ್ಲಾ ಖಡ್ಗದಿಂದ ಸಾಯುವರು. 34 ಈ ಸಂಗತಿಗಳು ನಿಜವಾಗುತ್ತವೆಯೆಂದು ತೋರಿಸಲು ನಾನು ನಿನಗೊಂದು ಗುರುತನ್ನು ಕೊಡುವೆನು. ನಿನ್ನ ಇಬ್ಬರು ಮಕ್ಕಳಾದ ಹೊಫ್ನಿ ಮತ್ತು ಫೀನೆಹಾಸರು ಒಂದೇ ದಿನದಲ್ಲಿ ಸಾಯುವರು. ಅದೇ ಆ ಗುರುತು. 35 ನಾನು ನನಗೋಸ್ಕರ ನಂಬಿಗಸ್ತನಾದ ಯಾಜಕನೊಬ್ಬನನ್ನು ಆರಿಸಿಕೊಳ್ಳುತ್ತೇನೆ. ಈ ಯಾಜಕನು ನಾನು ಹೇಳುವುದನ್ನು ಕೇಳುವನು ಮತ್ತು ನನಗೆ ಇಷ್ಟವಾದುದನ್ನು ಮಾಡುವನು. ಈ ಯಾಜಕನ ಕುಟುಂಬವನ್ನು ನಾನು ಬಲಗೊಳಿಸುವೆನು. ನಾನು ಆರಿಸಿಕೊಂಡಿರುವ ರಾಜನ ಬಳಿಯಲ್ಲಿ ಅವನು ಸದಾಕಾಲ ಸೇವೆಮಾಡುವನು. 36 ಆಗ ನಿನ್ನ ಕುಟುಂಬದವರಲ್ಲಿ ಉಳಿದವರೆಲ್ಲ ಬಂದು ಈ ಯಾಜಕನಿಗೆ ಅಡ್ಡಬೀಳುವರು. ಈ ಜನರೆಲ್ಲ ಅವನಲ್ಲಿ ಬಿಡಿಕಾಸನ್ನೂ ರೊಟ್ಟಿಯ ಚೂರನ್ನೂ ಬೇಡುವರು. ಅವರೆಲ್ಲ, “ನಮಗೆ ದೇವಸ್ಥಾನದಲ್ಲಿ ಯಾಜಕನ ಹುದ್ದೆಯನ್ನು ಕೊಡು, ಅದರಿಂದ ಹೊಟ್ಟೆ ತುಂಬಿಸಿಕೊಳ್ಳುತ್ತೇವೆ ಎಂದು ಬೇಡಿಕೊಳ್ಳುವರು”’” ಎಂದನು.
ಕೊಳದ ಬಳಿ ಗುಣಹೊಂದಿದ ರೋಗಿ
5 ತರುವಾಯ ಯೇಸು ಯೆಹೂದ್ಯರ ಒಂದು ಹಬ್ಬಕ್ಕಾಗಿ ಜೆರುಸಲೇಮಿಗೆ ಹೋದನು. 2 ಜೆರುಸಲೇಮಿನಲ್ಲಿ ಐದು ಮಂಟಪಗಳಿಂದ ಕೂಡಿದ ಒಂದು ಕೊಳವಿದೆ. ಯೆಹೂದ್ಯರ ಭಾಷೆಯಲ್ಲಿ ಅದಕ್ಕೆ “ಬೆತ್ಸಥ” ಎಂದು ಕರೆಯುತ್ತಾರೆ. ಈ ಕೊಳವು “ಕುರಿಬಾಗಿಲು” ಎಂಬ ಸ್ಥಳದ ಸಮೀಪದಲ್ಲಿದೆ. 3 ಕೊಳದ ಬಳಿಯಲ್ಲಿದ್ದ ಮಂಟಪಗಳಲ್ಲಿ ಅನೇಕ ರೋಗಿಗಳು ಬಿದ್ದುಕೊಂಡಿರುತ್ತಿದ್ದರು. ಅವರಲ್ಲಿ ಕೆಲವರು ಕುರಡರಾಗಿದ್ದರು, ಕೆಲವರು ಕುಂಟರಾಗಿದ್ದರು, ಮತ್ತೆ ಕೆಲವರು, ಪಾರ್ಶ್ವವಾಯು ರೋಗಿಗಳಾಗಿದ್ದರು.[a] 4 [b] 5 ಮೂವತ್ತೆಂಟು ವರ್ಷಗಳಿಂದ ರೋಗಿಯಾಗಿದ್ದ ಒಬ್ಬನು ಅಲ್ಲಿ ಬಿದ್ದುಕೊಂಡಿದ್ದನು. 6 ಯೇಸು ಅವನನ್ನು ನೋಡಿದನು. ಅವನು ಬಹುಕಾಲದಿಂದ ರೋಗಿಯಾಗಿರುವುದು ಆತನಿಗೆ ಗೊತ್ತಿತ್ತು. ಆದ್ದರಿಂದ ಆತನು ಅವನಿಗೆ, “ಗುಣಹೊಂದಲು ನಿನಗೆ ಅಪೇಕ್ಷೆ ಇದೆಯಾ?” ಎಂದು ಕೇಳಿದನು.
7 ಆ ರೋಗಿಯು, “ಅಯ್ಯಾ, ನೀರು ಉಕ್ಕುವಾಗ ಕೊಳದೊಳಗೆ ಇಳಿದುಹೋಗಲು ನನಗೆ ಯಾರೂ ಸಹಾಯ ಮಾಡುವುದಿಲ್ಲ. ನಾನು ಎಲ್ಲರಿಗಿಂತ ಮೊದಲೇ ನೀರಿಗೆ ಇಳಿಯಲು ಪ್ರಯತ್ನಿಸುವೆ. ಆದರೆ ಪ್ರತಿಸಲವೂ ನನಗಿಂತ ಮೊದಲೇ ಮತ್ತೊಬ್ಬನು ಇಳಿದುಬಿಡುತ್ತಾನೆ” ಎಂದು ಹೇಳಿದನು.
8 ಆಗ ಯೇಸು, “ಎದ್ದುನಿಲ್ಲು! ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆ” ಎಂದು ಹೇಳಿದನು. 9 ಆ ಕ್ಷಣವೇ ಆ ಮನುಷ್ಯನು ಗುಣಹೊಂದಿ, ತನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆದನು.
ಇದೆಲ್ಲಾ ನಡೆದದ್ದು ಸಬ್ಬತ್‌ದಿನದಲ್ಲಿ. 10 ಆದ್ದರಿಂದ ಯೆಹೂದ್ಯರು ಗುಣಹೊಂದಿದ ಆ ವ್ಯಕ್ತಿಗೆ, “ಇಂದು ಸಬ್ಬತ್‌ದಿನ. ನೀನು ಸಬ್ಬತ್‌ದಿನದಲ್ಲಿ[c] ಹಾಸಿಗೆಯನ್ನು ಹೊತ್ತುಕೊಂಡು ಹೋಗುವುದು ನಮ್ಮ ಧರ್ಮಶಾಸ್ತ್ರಕ್ಕೆ ವಿರುದ್ಧವಾದದ್ದು” ಎಂದರು.
11 ಅದಕ್ಕೆ ಅವನು, “ನನ್ನನ್ನು ಗುಣಪಡಿಸಿದವನೇ, ‘ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆ’ ಎಂದು ಹೇಳಿದನು” ಎಂಬುದಾಗಿ ಉತ್ತರಿಸಿದನು.
12 ಅದಕ್ಕೆ ಅವರು, “ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆಯಲು ನಿನಗೆ ಹೇಳಿದವನು ಯಾರು?” ಎಂದು ಕೇಳಿದರು.
13 ಆದರೆ ಗುಣಹೊಂದಿದ್ದ ವ್ಯಕ್ತಿಗೆ ತನ್ನನ್ನು ಗುಣಪಡಿಸಿದವನು ಯಾರೆಂಬುದು ಗೊತ್ತಿರಲಿಲ್ಲ. ಆ ಸ್ಥಳದಲ್ಲಿ ಅನೇಕ ಜನರಿದ್ದರು. ಯೇಸು ಆ ಸ್ಥಳದಿಂದ ನುಸುಳಿಕೊಂಡು ಹೊರಟುಹೋದನು.
14 ಅನಂತರ ಯೇಸು ಆ ಮನುಷ್ಯನನ್ನು ದೇವಾಲಯದಲ್ಲಿ ಕಂಡು ಅವನಿಗೆ, “ನೋಡು, ಈಗ ನೀನು ಗುಣಹೊಂದಿರುವೆ. ಆದರೆ ಪಾಪ ಮಾಡುವುದನ್ನು ಬಿಟ್ಟುಬಿಡು. ಇಲ್ಲದಿದ್ದರೆ ಹೆಚ್ಚಿನ ಕೇಡು ನಿನಗೆ ಸಂಭವಿಸಬಹುದು!” ಎಂದು ಹೇಳಿದನು.
15 ಆಗ ಆ ಮನುಷ್ಯನು ಆ ಯೆಹೂದ್ಯರ ಬಳಿಗೆ ಹೋಗಿ ತನ್ನನ್ನು ಗುಣಪಡಿಸಿದವನು ಯೇಸುವೇ ಎಂದು ತಿಳಿಸಿದನು.
16 ಯೇಸು ಈ ಕಾರ್ಯಗಳನ್ನು ಸಬ್ಬತ್‌ದಿನದಲ್ಲಿ ಮಾಡುತ್ತಿದ್ದನು. ಈ ಕಾರಣದಿಂದಾಗಿ ಯೆಹೂದ್ಯರು ಯೇಸುವನ್ನು ಹಿಂಸಿಸತೊಡಗಿದರು. 17 ಆದರೆ ಯೇಸು ಅವರಿಗೆ, “ನನ್ನ ತಂದೆಯು ತನ್ನ ಕಾರ್ಯವನ್ನು ಎಂದಿಗೂ ನಿಲ್ಲಿಸುವುದಿಲ್ಲ. ಆದ್ದರಿಂದ ನಾನು ಸಹ ಕಾರ್ಯನಿರತನಾಗಿದ್ದೇನೆ” ಎಂದು ತನ್ನನ್ನು ಪ್ರತಿಪಾದಿಸಿಕೊಂಡನು.
18 ಯೇಸು ಸಬ್ಬತ್ತನ್ನು ಉಲ್ಲಂಘಿಸಿದ್ದಲ್ಲದೆ ದೇವರನ್ನು ತನ್ನ ತಂದೆಯೆಂದು ಹೇಳಿಕೊಂಡು ತನ್ನನ್ನು ದೇವರಿಗೆ ಸರಿಸಮಾನನನ್ನಾಗಿ ಮಾಡಿಕೊಳ್ಳುತ್ತಿದ್ದಾನೆಂದು ಯೆಹೂದ್ಯರು ಆತನನ್ನು ಕೊಲ್ಲಲು ಮತ್ತಷ್ಟು ಪ್ರಯತ್ನಿಸಿದರು.
Kannada Holy Bible: Easy-to-Read Version. All rights reserved. © 1997 Bible League International