Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 119:113-128

113 ನಿನಗೆ ಪೂರ್ಣವಾಗಿ ನಂಬಿಗಸ್ತರಾಗಿಲ್ಲದವರನ್ನು ದ್ವೇಷಿಸುವೆನು.
    ನಾನಾದರೋ ನಿನ್ನ ಉಪದೇಶಗಳನ್ನು ಪ್ರೀತಿಸುವೆನು.
114 ನನ್ನ ಆಶ್ರಯವೂ ಗುರಾಣಿಯೂ ನೀನೇ.
    ಯೆಹೋವನೇ, ನಿನ್ನ ವಾಕ್ಯದಲ್ಲಿ ಭರವಸವಿಟ್ಟಿರುವೆ.
115 ಕೆಡುಕರನ್ನು ನನ್ನ ಬಳಿಗೆ ಬರಗೊಡಿಸಬೇಡ.
    ಆಗ ನಾನು ನಿನ್ನ ಆಜ್ಞೆಗಳಿಗೆ ವಿಧೇಯನಾಗುವೆನು.
116 ನಿನ್ನ ವಾಗ್ದಾನಕ್ಕನುಸಾರವಾಗಿ ನನಗೆ ಸಹಾಯಮಾಡು, ಆಗ ನಾನು ಬದುಕಿಕೊಳ್ಳುವೆ.
    ನಾನು ನಿನ್ನಲ್ಲಿ ಭರವಸವಿಟ್ಟಿರುವೆ, ನನ್ನನ್ನು ನಿರಾಶೆಗೊಳಿಸಬೇಡ.
117 ನನಗೆ ಸಹಾಯಮಾಡು, ಆಗ ನಾನು ರಕ್ಷಿಸಲ್ಪಡುವೆನು.
    ನಾನು ನಿನ್ನ ಕಟ್ಟಳೆಗಳನ್ನು ಯಾವಾಗಲೂ ಕಲಿಯುತ್ತಿರುವೆನು.
118 ನಿನ್ನ ಕಟ್ಟಳೆಗಳನ್ನು ಅನುಸರಿಸದವರನ್ನು ನೀನು ತಳ್ಳಿಬಿಡುವೆ.
    ಯಾಕೆಂದರೆ, ಅವರು ನಿನಗೆ ದ್ರೋಹ ಮಾಡಿದರು.
119 ಭೂಮಿಯ ಮೇಲಿರುವ ದುಷ್ಟರನ್ನು ನೀನು ಕಸದಂತೆ ಕಾಣುವೆ.
    ಆದ್ದರಿಂದ ನಾನು ನಿನ್ನ ಒಡಂಬಡಿಕೆಯನ್ನು ಸದಾಕಾಲ ಪ್ರೀತಿಸುವೆನು.
120 ನಾನು ನಿನ್ನಲ್ಲಿ ಭಯವುಳ್ಳವನಾಗಿದ್ದೇನೆ.
    ನಾನು ನಿನ್ನ ತೀರ್ಪುಗಳಿಗೆ ಅಂಜಿಕೊಂಡಿದ್ದೇನೆ.

121 ನ್ಯಾಯನೀತಿಗಳುಳ್ಳ ಕಾರ್ಯಗಳನ್ನೇ ನಾನು ಮಾಡಿರುವೆ,
    ಕೆಡುಕರಿಗೆ ನನ್ನನ್ನು ಒಪ್ಪಿಸಿಕೊಡಬೇಡ.
122 ನಿನ್ನ ಸೇವಕನಾದ ನನಗೆ ಸಹಾಯಮಾಡುವುದಾಗಿ ವಾಗ್ದಾನಮಾಡು.
    ನನಗೆ ಕೇಡುಮಾಡಲು ಆ ಗರ್ವಿಷ್ಠರಿಗೆ ಅವಕಾಶ ಕೊಡಬೇಡ.
123 ನಿನ್ನ ರಕ್ಷಣೆಗಾಗಿಯೂ ನಿನ್ನ ಒಳ್ಳೆಯ ಮಾತಿಗಾಗಿಯೂ
    ಎದುರುನೋಡುತ್ತಾ ನನ್ನ ಕಣ್ಣುಗಳು ಆಯಾಸಗೊಂಡಿವೆ.
124 ನಿನ್ನ ಸೇವಕನಾದ ನನಗೆ ನಿನ್ನ ಶಾಶ್ವತ ಪ್ರೀತಿಯನ್ನು ತೋರಿಸು.
    ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು.
125 ನಾನು ನಿನ್ನ ಸೇವಕ,
    ನಿನ್ನ ಒಡಂಬಡಿಕೆಯನ್ನು ಗ್ರಹಿಸಿಕೊಳ್ಳಲು ನನಗೆ ಬೇಕಾದ ವಿವೇಕವನ್ನು ದಯಪಾಲಿಸು.
126 ಯೆಹೋವನೇ, ನಿನ್ನ ಕಾರ್ಯಾಚರಣೆಗೆ ಇದು ತಕ್ಕ ಸಮಯವಾಗಿದೆ.
    ಜನರು ನಿನ್ನ ಧರ್ಮಶಾಸ್ತ್ರವನ್ನು ಮೀರಿದ್ದಾರೆ.
127 ನಾನು ನಿನ್ನ ಆಜ್ಞೆಗಳನ್ನು ಬಂಗಾರಕ್ಕಿಂತಲೂ
    ಅಪರಂಜಿಗಿಂತಲೂ ಹೆಚ್ಚಾಗಿ ಪ್ರೀತಿಸುವೆನು.
128 ನಾನು ನಿನ್ನ ಆಜ್ಞೆಗಳಿಗೆಲ್ಲಾ ಎಚ್ಚರಿಕೆಯಿಂದ ವಿಧೇಯನಾಗುವೆನು.
    ನಾನು ಸುಳ್ಳು ಉಪದೇಶಗಳನ್ನು ದ್ವೇಷಿಸುವೆನು.

1 ಸಮುವೇಲನು 19:8-17

ದಾವೀದನನ್ನು ಕೊಲ್ಲಲು ಸೌಲನ ಮರುಪ್ರಯತ್ನ

ಯುದ್ಧವು ಮತ್ತೆ ಬಂದಿತು. ದಾವೀದನು ಫಿಲಿಷ್ಟಿಯರ ಮೇಲೆ ಯುದ್ಧಕ್ಕೆ ಹೋಗಿ ಅವರನ್ನು ಸೋಲಿಸಿ ಓಡಿಸಿಬಿಟ್ಟನು. ಆದರೆ ಯೆಹೋವನಿಂದ ಬಂದ ದುರಾತ್ಮವು ಸೌಲನ ಮೈಮೇಲೆ ಬಂದಿತು. ಸೌಲನು ತನ್ನ ಮನೆಯಲ್ಲಿ ಕುಳಿತಿದ್ದನು. ಸೌಲನ ಈಟಿಯು ಅವನ ಕೈಯಲ್ಲಿಯೇ ಇದ್ದಿತು. 10 ದಾವೀದನು ಕಿನ್ನರಿಯನ್ನು ಬಾರಿಸುತ್ತಿದ್ದನು. ದಾವೀದನನ್ನು ಗೋಡೆಗೆ ಹತ್ತಿಕೊಳ್ಳುವಂತೆ ತಿವಿಯಬೇಕೆಂದು ಸೌಲನು ತನ್ನ ಈಟಿಯನ್ನು ಎಸೆದನು. ಆದರೆ ದಾವೀದನು ಸರಿದುಕೊಂಡಿದ್ದರಿಂದ ಈಟಿಯು ಗೋಡೆಗೆ ನಾಟಿಕೊಂಡಿತು. ದಾವೀದನು ಆ ದಿನ ರಾತ್ರಿಯಲ್ಲೇ ತಪ್ಪಿಸಿಕೊಂಡು ಓಡಿಹೋದನು.

11 ಸೌಲನು ದಾವೀದನ ಮನೆಗೆ ತನ್ನ ಜನರನ್ನು ಕಳುಹಿಸಿದನು. ಅವರು ದಾವೀದನ ಮನೆಯನ್ನು ಕಾಯ್ದರು. ಅವರು ರಾತ್ರಿಯೆಲ್ಲಾ ಅಲ್ಲಿಯೇ ಇದ್ದರು. ಅವರು ದಾವೀದನನ್ನು ಬೆಳಿಗ್ಗೆ ಕೊಲ್ಲಲು ಕಾಯುತ್ತಿದ್ದರು. ಆದರೆ ದಾವೀದನ ಹೆಂಡತಿಯಾದ ಮೀಕಲಳು ಅವನಿಗೆ, “ನೀನು ಈ ರಾತ್ರಿಯೇ ಓಡಿಹೋಗಿ, ನಿನ್ನ ಜೀವವನ್ನು ಕಾಪಾಡಿಕೋ. ಇಲ್ಲವಾದರೆ, ನಿನ್ನನ್ನು ಅವರು ಕೊಂದುಬಿಡುತ್ತಾರೆ” ಎಂದು ಎಚ್ಚರಿಸಿದಳು. 12 ನಂತರ ಮೀಕಲಳು ಕಿಟಿಕಿಯಿಂದ ದಾವೀದನನ್ನು ಹೊರಗೆ ಇಳಿಸಿದಳು. ದಾವೀದನು ತಪ್ಪಿಸಿಕೊಂಡು ಓಡಿಹೋದನು. 13 ಮೀಕಲಳು ಮನೆಯಲ್ಲಿದ್ದ ವಿಗ್ರಹವನ್ನು ಹಾಸಿಗೆಯ ಮೇಲೆ ಇಟ್ಟು ಅದಕ್ಕೆ ಬಟ್ಟೆಗಳನ್ನು ತೊಡಿಸಿ ಅದರ ತಲೆಗೆ ಹೋತದ ಕೂದಲನ್ನೂ ಅಂಟಿಸಿದಳು.

14 ಸೌಲನು ದಾವೀದನನ್ನು ಬಂಧಿಸಿ ಕರೆತರಲು ಸಂದೇಶಕರನ್ನು ಕಳುಹಿಸಿದನು. ಆದರೆ ಮೀಕಲಳು, “ದಾವೀದನಿಗೆ ಹುಷಾರಿಲ್ಲ” ಎಂದು ಹೇಳಿದಳು.

15 ಸಂದೇಶಕರು ಹೋಗಿ ಸೌಲನಿಗೆ ವಿಷಯ ತಿಳಿಸಿದಾಗ ಅವನು ದಾವೀದನನ್ನು ನೋಡಲು ಮತ್ತೆ ಸಂದೇಶಕರನ್ನು ಕಳುಹಿಸಿದನು. ಸೌಲನು ಅವರಿಗೆ, “ದಾವೀದನನ್ನು ನನ್ನ ಬಳಿಗೆ ಕರೆತನ್ನಿ! ಹಾಸಿಗೆಯ ಮೇಲೆ ಮಲಗಿರುವ ಅವನನ್ನು ಹಾಸಿಗೆಯ ಸಮೇತವಾಗಿ ತೆಗೆದುಕೊಂಡು ಬನ್ನಿ! ನಾನು ಅವನನ್ನು ಕೊಲ್ಲುತ್ತೇನೆ” ಎಂದು ಹೇಳಿದನು.

16 ಸಂದೇಶಕರು ದಾವೀದನ ಮನೆಗೆ ಹೋದರು. ಅವರು ದಾವೀದನನ್ನು ಕರೆದೊಯ್ಯಲು ಒಳಗಡೆ ಹೋದಾಗ ಹಾಸಿಗೆಯ ಮೇಲಿರುವುದು ಕೇವಲ ವಿಗ್ರಹವೆಂಬುದೂ ಅದರ ಕೂದಲು ಕೇವಲ ಹೋತದ ಕೂದಲೆಂಬುದೂ ಅವರಿಗೆ ಗೊತ್ತಾಯಿತು.

17 ಸೌಲನು ಮೀಕಲಳಿಗೆ, “ನೀನು ಈ ರೀತಿ ನನಗೆ ಮೋಸ ಮಾಡಿದ್ದೇಕೆ? ನನ್ನ ಶತ್ರುವು ತಪ್ಪಿಸಿಕೊಳ್ಳಲು ನೀನು ಅವಕಾಶ ಮಾಡಿಕೊಟ್ಟೆ! ದಾವೀದನು ಓಡಿಹೋದನಲ್ಲಾ!” ಎಂದು ಹೇಳಿದನು.

ಮೀಕಲಳು ಸೌಲನಿಗೆ, “ತಪ್ಪಿಸಿಕೊಳ್ಳಲು ತನಗೆ ಸಹಾಯ ಮಾಡದಿದ್ದರೆ ನನ್ನನ್ನು ಕೊಲ್ಲುವುದಾಗಿ ದಾವೀದನು ತಿಳಿಸಿದ!” ಎಂದು ಹೇಳಿದಳು.

ಮಾರ್ಕ 6:45-52

ನೀರಿನ ಮೇಲೆ ಕಾಲ್ನಡಿಗೆ

(ಮತ್ತಾಯ 14:22-33; ಯೋಹಾನ 6:15-21)

45 ಆಗ ಯೇಸು ತನ್ನ ಶಿಷ್ಯರಿಗೆ ದೋಣಿಯೊಳಕ್ಕೆ ಹೋಗಲು ತಿಳಿಸಿದನು. ಸರೋವರದ ಆಚೆಯ ದಡದಲ್ಲಿದ್ದ ಬೆತ್ಸಾಯಿದಕ್ಕೆ ಹೋಗಬೇಕೆಂತಲೂ ಸ್ವಲ್ಪ ಸಮಯದ ನಂತರ ತಾನು ಬರುವುದಾಗಿಯೂ ಯೇಸು ಅವರಿಗೆ ಹೇಳಿ ಅವರನ್ನು ಕಳುಹಿಸಿದನು. ತಮ್ಮತಮ್ಮ ಮನೆಗಳಿಗೆ ಹೋಗುವಂತೆ ಜನರಿಗೆ ತಿಳಿಸುವುದಕ್ಕಾಗಿ ಯೇಸು ಅಲ್ಲಿ ಉಳಿದುಕೊಂಡನು. 46 ಯೇಸು ಜನರನ್ನು ಬೀಳ್ಕೊಟ್ಟ ಮೇಲೆ ಪ್ರಾರ್ಥಿಸುವುದಕ್ಕಾಗಿ ಬೆಟ್ಟದ ಮೇಲಕ್ಕೆ ಹೋದನು.

47 ಅಂದು ರಾತ್ರಿ ದೋಣಿಯು ಸರೋವರದ ಮಧ್ಯದಲ್ಲಿಯೇ ಇದ್ದಿತು. ಯೇಸು ಒಬ್ಬನೇ ದಡದ ಮೇಲಿದ್ದನು. 48 ದೋಣಿಯು ಸರೋವರದ ಮೇಲೆ ದೂರದಲ್ಲಿರುವುದನ್ನೂ ಶಿಷ್ಯರು ಅದನ್ನು ದಡಕ್ಕೆ ಸಾಗಿಸಲು ಬಹಳ ಕಷ್ಟಪಡುತ್ತಿರುವುದನ್ನೂ ಯೇಸು ನೋಡಿದನು. ಗಾಳಿಯು ಅವರಿಗೆ ಪ್ರತಿಕೂಲವಾಗಿ ಬೀಸುತ್ತಿತ್ತು. ಮುಂಜಾನೆ ಮೂರರಿಂದ ಆರು ಗಂಟೆಯ ಸಮಯದಲ್ಲಿ, ಯೇಸು ನೀರಿನ ಮೇಲೆ ನಡೆದುಕೊಂಡು ದೋಣಿಯ ಸಮೀಪಕ್ಕೆ ಬಂದು ಅವರನ್ನು ಹಾದು ಮುಂದೆ ಹೋಗುವುದರಲ್ಲಿದ್ದನು. 49 ಆದರೆ ನೀರಿನ ಮೇಲೆ ನಡೆಯುತ್ತಿದ್ದ ಆತನನ್ನು ಕಂಡ ಶಿಷ್ಯರು ಆತನನ್ನು ಭೂತವೆಂದು ಭ್ರಮಿಸಿಕೊಂಡು ಭಯದಿಂದ ಕಿರುಚಿದರು. 50 ಶಿಷ್ಯರೆಲ್ಲರೂ ಯೇಸುವನ್ನು ನೋಡಿ ಬಹಳವಾಗಿ ಹೆದರಿದ್ದರು. ಆದರೆ ಯೇಸು ಅವರೊಂದಿಗೆ ಮಾತನಾಡಿ, “ಚಿಂತಿಸದಿರಿ! ನಾನೇ! ಅಂಜಬೇಡಿ” ಎಂದು ಹೇಳಿದನು. 51 ನಂತರ ಯೇಸು ತನ್ನ ಶಿಷ್ಯರಿದ್ದ ದೋಣಿಯೊಳಕ್ಕೆ ಹತ್ತಿದನು. ಆಗ ಗಾಳಿಯು ನಿಂತುಹೋಯಿತು. ಶಿಷ್ಯರಿಗೆ ಬಹಳ ಆಶ್ಚರ್ಯವಾಯಿತು. 52 ಯೇಸು ಐದು ರೊಟ್ಟಿಗಳಿಂದ ಐದು ಸಾವಿರ ಜನರಿಗೆ ಊಟ ಮಾಡಿಸಿದ್ದನ್ನು ಅವರು ನೋಡಿದ್ದರೂ ಅದರ ಅರ್ಥವನ್ನು ಗ್ರಹಿಸಲಿಲ್ಲ. ಅವರು ಅದನ್ನು ಅರ್ಥಮಾಡಿಕೊಳ್ಳುವಷ್ಟು ಸಮರ್ಥರಾಗಿರಲಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International