Revised Common Lectionary (Semicontinuous)
ದಾವೀದನ ಕೀರ್ತನೆ.
108 ದೇವರೇ, ನನ್ನ ಹೃದಯವು ಸ್ಥಿರವಾಗಿದೆ;
ನಾನು ಹೃದಯಪೂರ್ವಕವಾಗಿ ವಾದ್ಯ ನುಡಿಸುತ್ತಾ ಹಾಡುವೆನು.
2 ಹಾರ್ಪ್‌ವಾದ್ಯಗಳೇ, ಲೈರ್‌ವಾದ್ಯಗಳೇ,
ನಾವು ಸೂರ್ಯನನ್ನು ಎಚ್ಚರಗೊಳಿಸೋಣ!
3 ಯೆಹೋವನೇ, ಜನಾಂಗಗಳಲ್ಲಿಯೂ
ವಿದೇಶಿಯರಲ್ಲಿಯೂ ನಿನ್ನನ್ನು ಕೊಂಡಾಡುವೆನು.
4 ಯಾಕೆಂದರೆ ನಿನ್ನ ಪ್ರೀತಿಯು ಆಕಾಶಕ್ಕಿಂತಲೂ ಉನ್ನತವಾಗಿದೆ;
ನಿನ್ನ ನಂಬಿಗಸ್ತಿಕೆಯು ಮೋಡಗಳಿಗಿಂತಲೂ ಎತ್ತರವಾಗಿದೆ.
5 ದೇವರೇ, ಪರಲೋಕದಲ್ಲಿ ನಿನ್ನ ಪ್ರಭಾವವು ಮೆರೆಯಲಿ.
ನಿನ್ನ ಮಹಿಮೆಯು ಭೂಮಂಡಲವನ್ನೆಲ್ಲಾ ಆವರಿಸಿಕೊಳ್ಳಲಿ.
6 ನಿನ್ನ ಸ್ನೇಹಿತರಾದ ನಮ್ಮ ಪ್ರಾರ್ಥನೆಗೆ ಕಿವಿಗೊಟ್ಟು ನಮ್ಮನ್ನು ರಕ್ಷಿಸು.
ನಿನ್ನ ಬಲಗೈಯಿಂದ ನಮ್ಮನ್ನು ಕಾಪಾಡು.
7 ದೇವರು ತನ್ನ ಆಲಯದೊಳಗಿಂದ ಹೀಗೆಂದನು:
“ನಾನು ಯುದ್ಧದಲ್ಲಿ ಗೆದ್ದು ಜಯಘೋಷ ಮಾಡುವೆನು;
ಶೆಕೆಮ್ ಪ್ರದೇಶವನ್ನೂ ಸುಕ್ಕೋತ್ ಬಯಲನ್ನೂ ನನ್ನ ಜನರಿಗೆ ಕೊಡುವೆನು.
8 ಗಿಲ್ಯಾದ್ ಪ್ರಾಂತವೂ ಮನಸ್ಸೆ ಪ್ರಾಂತವೂ ನನ್ನದಾಗಿರುತ್ತವೆ.
ಎಫ್ರಾಯೀಮ್ ನನ್ನ ಶಿರಸ್ತ್ರಾಣವಾಗಿರುತ್ತದೆ.
ಯೆಹೂದವು ನನ್ನ ರಾಜದಂಡವಾಗಿರುತ್ತದೆ.
9 ಮೋವಾಬ್ ನನ್ನ ಪಾದತೊಳೆಯುವ ಬೋಗುಣಿಯಂತಿರುತ್ತದೆ.
ಎದೋಮ್ ನನ್ನ ಪಾದರಕ್ಷೆಗಳನ್ನು ಹೊತ್ತುಕೊಂಡು ಹೋಗುವ ಗುಲಾಮನಾಗಿರುತ್ತದೆ.
ಫಿಲಿಷ್ಟಿಯರನ್ನು ಸೋಲಿಸಿದ ಮೇಲೆ ನಾನು ಜಯಘೋಷ ಮಾಡುವೆನು.”
10 ವೈರಿಗಳ ಆಶ್ರಯದುರ್ಗಕ್ಕೆ ನನ್ನನ್ನು ನಡೆಸುವವರು ಯಾರು?
ಎದೋಮನ್ನು ಸೋಲಿಸಲು ನನಗೆ ಸಹಾಯ ಮಾಡುವವರು ಯಾರು?
11 ದೇವರೇ, ನೀನು ನಮ್ಮನ್ನು ತ್ಯಜಿಸಿ,
ನಮ್ಮ ಸೈನ್ಯದೊಡನೆ ಹೋಗದಿರುವುದು ನಿಜವೇ?
12 ನಮ್ಮ ಶತ್ರುವನ್ನು ಸೋಲಿಸಲು ದಯವಿಟ್ಟು ನಮಗೆ ಸಹಾಯಮಾಡು.
ಜನರು ನಮಗೆ ಸಹಾಯಮಾಡಲಾರರು!
13 ದೇವರು ಮಾತ್ರ ನಮ್ಮನ್ನು ಬಲಪಡಿಸಬಲ್ಲನು.
ಆತನು ಮಾತ್ರ ನಮ್ಮ ಶತ್ರುಗಳನ್ನು ಸೋಲಿಸಬಲ್ಲನು.
3 ಸಮುವೇಲನು ಇಸ್ರೇಲರಿಗೆ, “ನೀವು ಯೆಹೋವನ ಬಳಿಗೆ ಪೂರ್ಣಮನಸ್ಸಿನಿಂದ ಮತ್ತೆ ಬರುವುದಾದರೆ ನಿಮ್ಮ ಬಳಿಯಿರುವ ಅನ್ಯದೇವರುಗಳನ್ನು ಎಸೆಯಬೇಕು. ನೀವು ಅಷ್ಟೋರೆತ್ ದೇವತೆಯ ವಿಗ್ರಹಗಳನ್ನು ತ್ಯಜಿಸಬೇಕು. ನೀವು ನಿಮ್ಮನ್ನು ಯೆಹೋವನಿಗೆ ಸಂಪೂರ್ಣವಾಗಿ ಒಪ್ಪಿಸಿಕೊಟ್ಟು ಆತನ ಸೇವೆಯನ್ನು ಮಾತ್ರ ಮಾಡಬೇಕು. ಆಗ ಆತನು ನಿಮ್ಮನ್ನು ಫಿಲಿಷ್ಟಿಯರಿಂದ ರಕ್ಷಿಸುತ್ತಾನೆ” ಎಂದು ಹೇಳಿದನು.
4 ಆದ್ದರಿಂದ ಇಸ್ರೇಲರು ಬಾಳ್‌ದೇವರನ್ನೂ ಅಷ್ಟೋರೆತ್ ದೇವತೆಯನ್ನೂ ತ್ಯಜಿಸಿ ಯೆಹೋವನ ಸೇವೆಯನ್ನು ಮಾತ್ರ ಮಾಡಿದರು.
5 ಸಮುವೇಲನು ಅವರಿಗೆ, “ಇಸ್ರೇಲರೆಲ್ಲರೂ ಮಿಚ್ಪೆಯಲ್ಲಿ ಒಟ್ಟುಗೂಡಬೇಕು. ನಾನು ನಿಮಗಾಗಿ ಯೆಹೋವನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಹೇಳಿದನು.
6 ಇಸ್ರೇಲರೆಲ್ಲರು ಮಿಚ್ಪೆಯಲ್ಲಿ ಒಟ್ಟುಗೂಡಿದರು. ಅವರು ನೀರನ್ನು ತೆಗೆದುಕೊಂಡು ಬಂದು ಯೆಹೋವನ ಮುಂದೆ ಅದನ್ನು ಸುರಿದರು. ಈ ರೀತಿ ಅಂದು ಅವರು ಉಪವಾಸವನ್ನು ಆರಂಭಿಸಿದರು. ಅಂದು ಅವರು ಯಾವ ಆಹಾರವನ್ನೂ ತೆಗೆದುಕೊಳ್ಳಲಿಲ್ಲ. ಅಲ್ಲದೆ ಅವರು ತಮ್ಮ ಪಾಪಗಳನ್ನು ಅರಿಕೆ ಮಾಡಿದರು. “ನಾವು ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದ್ದೇವೆ” ಎಂದು ಅವರು ಹೇಳಿದರು. ಹೀಗಿರಲು, ಸಮುವೇಲನು ಇಸ್ರೇಲರ ನ್ಯಾಯಾಧೀಶನಾಗಿ ಮಿಚ್ಪೆಯಲ್ಲಿ ಸೇವೆ ಸಲ್ಲಿಸಿದನು.
7 ಇಸ್ರೇಲರೆಲ್ಲರು ಮಿಚ್ಪೆಯಲ್ಲಿ ಒಟ್ಟುಗೂಡಿರುವುದು ಫಿಲಿಷ್ಟಿಯರಿಗೆ ಗೊತ್ತಾಯಿತು. ಫಿಲಿಷ್ಟಿಯ ಅಧಿಪತಿಗಳು ಇಸ್ರೇಲರ ವಿರುದ್ಧ ಹೋರಾಡಲು ಹೊರಟರು. ಫಿಲಿಷ್ಟಿಯರು ಬರುತ್ತಿರುವುದನ್ನು ಕೇಳಿ ಇಸ್ರೇಲರು ಭಯಗೊಂಡರು. 8 ಇಸ್ರೇಲರು ಸಮುವೇಲನಿಗೆ, “ನಮ್ಮ ದೇವರಾದ ಯೆಹೋವನಲ್ಲಿ ನಮಗಾಗಿ ಪ್ರಾರ್ಥಿಸು! ನಿಲ್ಲಿಸಬೇಡ! ಫಿಲಿಷ್ಟಿಯರಿಂದ ನಮ್ಮನ್ನು ರಕ್ಷಿಸಲು ಯೆಹೋವನಲ್ಲಿ ಬೇಡಿಕೊ!” ಎಂದು ಹೇಳಿದರು.
9 ಸಮುವೇಲನು ಕುರಿಮರಿಯೊಂದನ್ನು ತಂದು ಯೆಹೋವನಿಗೆ ಸರ್ವಾಂಗಹೋಮವನ್ನಾಗಿ ಅರ್ಪಿಸಿದನು. ಸಮುವೇಲನು ಇಸ್ರೇಲರಿಗಾಗಿ ಯೆಹೋವನಲ್ಲಿ ಪ್ರಾರ್ಥಿಸಿದನು. ಯೆಹೋವನು ಸಮುವೇಲನ ಪ್ರಾರ್ಥನೆಗೆ ಉತ್ತರಿಸಿದನು. 10 ಸಮುವೇಲನು ಕುರಿಮರಿಯನ್ನು ಸಮರ್ಪಿಸುವಾಗ, ಫಿಲಿಷ್ಟಿಯರು ಇಸ್ರೇಲರೊಡನೆ ಹೋರಾಡಲು ಬಂದರು. ಆದರೆ ಯೆಹೋವನು ಫಿಲಿಷ್ಟಿಯರ ಹತ್ತಿರ ದೊಡ್ಡ ಗುಡುಗನ್ನು ಉಂಟುಮಾಡಿದನು. ಗುಡುಗಿನ ಶಬ್ದವು ಫಿಲಿಷ್ಟಿಯರಲ್ಲಿ ಕಳವಳವನ್ನೂ ಭಯವನ್ನೂ ಉಂಟುಮಾಡಿತು. ಅವರ ಸೇನಾಧಿಪತಿಗಳಿಗೆ ಅವರನ್ನು ಹತೋಟಿಯಲ್ಲಿಡಲಾಗಲಿಲ್ಲ. ಆದಕಾರಣ ಇಸ್ರೇಲರು ಫಿಲಿಷ್ಟಿಯರನ್ನು ಯುದ್ಧದಲ್ಲಿ ಸೋಲಿಸಿದರು. 11 ಇಸ್ರೇಲರು ಮಿಚ್ಪೆಯಿಂದ ಬಂದು ಫಿಲಿಷ್ಟಿಯರನ್ನು ದಾರಿಯುದ್ದಕ್ಕೂ ಸಂಹರಿಸುತ್ತಾ ಬೇತ್ಕರಿನವರೆಗೆ ಅಟ್ಟಿಸಿಕೊಂಡು ಹೋದರು.
ಇಸ್ರೇಲಿನಲ್ಲಿ ಶಾಂತಿ ಸ್ಥಾಪನೆ
12 ಅನಂತರ ಸಮುವೇಲನು ವಿಶೇಷವಾದ ಕಲ್ಲನ್ನು ನೆಡಿಸಿದನು. ಯೆಹೋವನು ಮಾಡಿದ ಕಾರ್ಯಗಳನ್ನು ಜನರು ಜ್ಞಾಪಿಸಿಕೊಳ್ಳುತ್ತಿರಲಿ ಎಂಬುದಕ್ಕಾಗಿ ಅವನು ಈ ರೀತಿ ಮಾಡಿದನು. ಸಮುವೇಲನು ಮಿಚ್ಪೆ ಮತ್ತು ಶೇನಿಗಳ ಮಧ್ಯೆ ಕಲ್ಲನ್ನು ನೆಟ್ಟು, “ಯೆಹೋವನು ಇಲ್ಲಿಯವರೆಗೂ ನಮಗೆ ಸಹಾಯ ಮಾಡಿದನು” ಎಂದು ಹೇಳಿ, ಅದಕ್ಕೆ “ಸಹಾಯದ ಕಲ್ಲು”[a] ಎಂದು ಹೆಸರಿಟ್ಟನು.
13 ಫಿಲಿಷ್ಟಿಯರು ಸೋತುಹೋದರು. ಅವರು ಮತ್ತೆ ಇಸ್ರೇಲರ ಭೂಮಿಯಲ್ಲಿ ಹೆಜ್ಜೆ ಇಡಲಿಲ್ಲ. ಸಮುವೇಲನ ಜೀವಿತದ ಉಳಿದ ಭಾಗದಲ್ಲಿ ಯೆಹೋವನು ಫಿಲಿಷ್ಟಿಯರಿಗೆ ವಿರುದ್ಧವಾಗಿದ್ದನು. 14 ಫಿಲಿಷ್ಟಿಯರು ಎಕ್ರೋನ್‌ನಿಂದ ಗತ್‌ವರೆಗಿನ ಪ್ರದೇಶದ ಇಸ್ರೇಲ್ ಪಟ್ಟಣಗಳನ್ನು ವಶಪಡಿಸಿಕೊಂಡಿದ್ದರು. ಆದರೆ ಇಸ್ರೇಲರು ಆ ಪಟ್ಟಣಗಳನ್ನು ಮರಳಿ ಗೆದ್ದುಕೊಂಡರು ಮತ್ತು ಆ ಪಟ್ಟಣದ ಸುತ್ತಲಿನ ಪ್ರದೇಶಗಳನ್ನು ವಶಪಡಿಸಿಕೊಂಡರು.
ಇಸ್ರೇಲರ ಮತ್ತು ಅಮೋರಿಯರ ಮಧ್ಯೆ ಶಾಂತಿ ನೆಲೆಸಿತ್ತು.
15 ಸಮುವೇಲನು ತನ್ನ ಜೀವಮಾನವೆಲ್ಲಾ ಇಸ್ರೇಲರನ್ನು ಮುನ್ನಡೆಸಿದನು;
ಒಂದುಸಾವಿರ ವರ್ಷಗಳು
20 ಆಗ ಒಬ್ಬ ದೇವದೂತನು ಪರಲೋಕದಿಂದ ಬರುತ್ತಿರುವುದನ್ನು ನಾನು ನೋಡಿದೆನು. ಆ ದೇವದೂತನು ತಳವಿಲ್ಲದ ಕೂಪದ ಬೀಗದ ಕೈಯನ್ನು ಹೊಂದಿದ್ದನು ಮತ್ತು ಒಂದು ದೊಡ್ಡ ಸರಪಣಿಯನ್ನೂ ತನ್ನ ಕೈಯಲ್ಲಿ ಹಿಡಿದಿದ್ದನು. 2 ಆ ದೇವದೂತನು ಪುರಾತನ ಘಟಸರ್ಪವನ್ನು ಹಿಡಿದನು. ಆ ಘಟಸರ್ಪವೇ ಸೈತಾನ. ದೇವದೂತನು ಅವನನ್ನು ಸರಪಣಿಗಳಿಂದ ಕಟ್ಟಿ ಒಂದುಸಾವಿರ ವರ್ಷಗಳ ಕಾಲ ಬಂಧನದಲ್ಲಿಟ್ಟನು. 3 ಆ ದೇವದೂತನು ಘಟಸರ್ಪವನ್ನು ತಳವಿಲ್ಲದ ಕೂಪಕ್ಕೆ ತಳ್ಳಿ ಬಾಗಿಲನ್ನು ಮುಚ್ಚಿ ಬೀಗಹಾಕಿದನು, ಆ ಘಟಸರ್ಪವು ಒಂದುಸಾವಿರ ವರ್ಷಗಳ ಕಾಲ ಮುಗಿಯುವ ತನಕ ಲೋಕದ ಜನರನ್ನು ಮರುಳು ಮಾಡದಿರಲೆಂದು ಆ ದೇವದೂತನು ಹೀಗೆ ಮಾಡಿದನು. ಒಂದುಸಾವಿರ ವರ್ಷಗಳ ತರುವಾಯ ಆ ಘಟಸರ್ಪಕ್ಕೆ ಸ್ವಲ್ಪಕಾಲ ಬಿಡುಗಡೆ ಮಾಡಲಾಗುವುದು.
4 ನಂತರ ನಾನು ಕೆಲವು ಸಿಂಹಾಸನಗಳನ್ನು ಮತ್ತು ಅವುಗಳ ಮೇಲೆ ಜನರು ಕುಳಿತಿರುವುದನ್ನು ನೋಡಿದೆನು. ಈ ಜನರು ತೀರ್ಪು ನೀಡುವ ಅಧಿಕಾರವನ್ನು ಹೊಂದಿದ್ದರು. ಯೇಸುವಿನ ಸತ್ಯಕ್ಕೆ ಮತ್ತು ದೇವರ ಸಂದೇಶಕ್ಕೆ ನಂಬಿಗಸ್ತರಾಗಿದ್ದರ ನಿಮಿತ್ತವಾಗಿ ಕೊಲ್ಲಲ್ಪಟ್ಟವರ ಜೀವಾತ್ಮಗಳನ್ನು ನಾನು ನೋಡಿದೆನು. ಆ ಜನರು ಮೃಗವನ್ನಾಗಲಿ ಅದರ ವಿಗ್ರಹವನ್ನಾಗಲಿ ಆರಾಧಿಸಿರಲಿಲ್ಲ. ಅವರು ತಮ್ಮ ಹಣೆಯ ಮೇಲಾಗಲಿ ಕೈಗಳ ಮೇಲಾಗಲಿ ಮೃಗದ ಗುರುತನ್ನು ಹಾಕಿಸಿಕೊಂಡಿರಲಿಲ್ಲ. ಆ ಜನರು ಮತ್ತೆ ಜೀವವನ್ನು ಪಡೆದು ಕ್ರಿಸ್ತನೊಂದಿಗೆ ಒಂದುಸಾವಿರ ವರ್ಷ ಆಳಿದರು. 5 (ಸತ್ತುಹೋಗಿದ್ದ ಇತರ ಜನರು ಒಂದುಸಾವಿರ ವರ್ಷಗಳು ಮುಗಿಯುವ ತನಕ ಜೀವಂತರಾಗಲೇ ಇಲ್ಲ.)
ಇದೇ ಪ್ರಥಮ ಪುನರುತ್ಥಾನ. 6 ಪ್ರಥಮ ಪುನರುತ್ಥಾನದಲ್ಲಿ ಸೇರಿರುವವರು ಪವಿತ್ರರೂ ಧನ್ಯರೂ ಆಗಿದ್ದಾರೆ. ಈ ಜನರ ಮೇಲೆ ಎರಡನೆ ಮರಣಕ್ಕೆ ಅಧಿಕಾರವಿಲ್ಲ. ಆ ಜನರು ದೇವರಿಗೆ ಮತ್ತು ಕ್ರಿಸ್ತನಿಗೆ ಯಾಜಕರಾಗಿರುತ್ತಾರೆ. ಅವರು ಆತನೊಂದಿಗೆ ಒಂದು ಸಾವಿರ ವರ್ಷ ಆಳುತ್ತಾರೆ.
Kannada Holy Bible: Easy-to-Read Version. All rights reserved. © 1997 Bible League International