Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 53

ರಚನೆಗಾರ: ದಾವೀದ.

53 ಮೂಢರು ದೇವರಿಲ್ಲವೆಂದು ಮನಸ್ಸಿನಲ್ಲಿ ಅಂದುಕೊಳ್ಳುವರು.
    ಅವರು ಕೆಟ್ಟುಹೋಗಿದ್ದಾರೆ; ದುಷ್ಕೃತ್ಯಗಳನ್ನು ನಡೆಸುವವರಾಗಿದ್ದಾರೆ.
    ಅವರು ಒಳ್ಳೆಯದನ್ನು ಮಾಡುವುದೇ ಇಲ್ಲ.
ಮನುಷ್ಯರಲ್ಲಿ ತನಗೋಸ್ಕರ ಹುಡುಕುತ್ತಿರುವ ಬುದ್ಧಿವಂತರು ಇದ್ದಾರೋ
    ಎಂದು ದೇವರು ಪರಲೋಕದಿಂದ ನೋಡುತ್ತಿದ್ದಾನೆ.
ಆದರೆ ಪ್ರತಿಯೊಬ್ಬರೂ ದೇವರಿಗೆ ವಿಮುಖರಾಗಿದ್ದಾರೆ.
    ಪ್ರತಿಯೊಬ್ಬನೂ ಕೆಟ್ಟುಹೋಗಿದ್ದಾನೆ.
ಯಾವನೂ ಒಳ್ಳೆಯದನ್ನು ಮಾಡುತ್ತಿಲ್ಲ.
    ಇಲ್ಲ, ಒಬ್ಬನಾದರೂ ಮಾಡುತ್ತಿಲ್ಲ!

ದೇವರು ಹೀಗೆನ್ನುತ್ತಾನೆ: “ಆ ದುಷ್ಟರಿಗೆ ಖಂಡಿತವಾಗಿ ಸತ್ಯವು ತಿಳಿದಿದೆ!
    ಆದರೆ ಅವರು ನನ್ನಲ್ಲಿ ಪ್ರಾರ್ಥಿಸುತ್ತಿಲ್ಲ.
    ಆಹಾರ ತಿನ್ನುವಂತೆ ಅವರು ನನ್ನ ಜನರನ್ನು ನಾಶಮಾಡಲು ಸಿದ್ಧರಾಗಿದ್ದಾರೆ.”

ಆ ದುಷ್ಟರು ಹಿಂದೆಂದೂ ಭಯಗೊಂಡಿಲ್ಲದ ರೀತಿಯಲ್ಲಿ ಭಯಭ್ರಾಂತರಾಗುವರು!
    ಅವರು ಇಸ್ರೇಲರ ಶತ್ರುಗಳು.
ದೇವರು ಅವರನ್ನು ತಿರಸ್ಕರಿಸಿದ್ದಾನೆ.
    ಆದ್ದರಿಂದ ದೇವಜನರು ಅವರನ್ನು ಸೋಲಿಸುವರು,
ದೇವರು ಆ ದುಷ್ಟರ ಎಲುಬುಗಳನ್ನು ಚದರಿಸಿಬಿಡುವನು.

ಚೀಯೋನ್ ಪರ್ವತದ ಮೇಲಿರುವಾತನು
    ಇಸ್ರೇಲಿಗೆ ಜಯವನ್ನು ತರುವನು!
ಆಗ ದೇವರು ತನ್ನ ಜನರನ್ನು ಸೆರೆವಾಸದಿಂದ ಬರಮಾಡುವನು.
    ಯಾಕೋಬನೇ ಉಲ್ಲಾಸಿಸು!
    ಇಸ್ರೇಲೇ ಬಹು ಸಂತೋಷಪಡು.

1 ಸಮುವೇಲನು 15:24-31

24 ಆಗ ಸೌಲನು ಸಮುವೇಲನಿಗೆ, “ನಾನು ಪಾಪ ಮಾಡಿದ್ದೇನೆ. ನಾನು ಯೆಹೋವನ ಆಜ್ಞೆಗಳಿಗೆ ವಿಧೇಯನಾಗಲಿಲ್ಲ; ನೀನು ಹೇಳಿದ್ದನ್ನು ನಾನು ಮಾಡಲಿಲ್ಲ. ನಾನು ಜನರಿಗೆ ಹೆದರಿ ಅವರು ಹೇಳಿದಂತೆ ಮಾಡಿದೆ. 25 ಈಗ ನಾನು ನಿನ್ನಲ್ಲಿ ಬೇಡಿಕೊಳ್ಳುತ್ತೇನೆ, ನನ್ನ ಪಾಪವನ್ನು ಕ್ಷಮಿಸು. ನನ್ನೊಂದಿಗೆ ಹಿಂದಿರುಗಿ ಬಾ, ಆಗ ನಾನು ಯೆಹೋವನನ್ನು ಆರಾಧಿಸಲು ಸಾಧ್ಯವಾಗುವುದು” ಎಂದು ಅವನನ್ನು ಬೇಡಿಕೊಂಡನು.

26 ಆದರೆ ಸಮುವೇಲನು ಸೌಲನಿಗೆ, “ನಾನು ಹಿಂದಿರುಗಿ ನಿನ್ನ ಜೊತೆಯಲ್ಲಿ ಬರುವುದಿಲ್ಲ; ನೀನು ಯೆಹೋವನ ಆಜ್ಞೆಯನ್ನು ನಿರಾಕರಿಸಿರುವೆ. ಈಗ ಆತನೂ ನಿನ್ನನ್ನು ಇಸ್ರೇಲಿನ ರಾಜತ್ವದಿಂದ ನಿರಾಕರಿಸುತ್ತಾನೆ” ಎಂದು ಹೇಳಿದನು.

27 ಸಮುವೇಲನು ಹೋಗಲು ತಿರುಗಿದಾಗ ಸೌಲನು ಸಮುವೇಲನ ಮೇಲಂಗಿಯ ಅಂಚನ್ನು ಹಿಡಿದು ಎಳೆದನು. ಮೇಲಂಗಿಯು ಹರಿದುಹೋಯಿತು. 28 ಆಗ ಸಮುವೇಲನು ಸೌಲನಿಗೆ, “ನೀನು ನನ್ನ ಮೇಲಂಗಿಯನ್ನು ಹರಿದುಹಾಕಿದೆ. ಇದೇರೀತಿ ಯೆಹೋವನು ಈ ದಿನ ನಿನ್ನಿಂದ ಇಸ್ರೇಲ್ ರಾಜ್ಯವನ್ನು ಹರಿದುಹಾಕಿದನು. ನಿನ್ನ ಸ್ನೇಹಿತರಲ್ಲಿ ಒಬ್ಬನಿಗೆ ಯೆಹೋವನು ರಾಜ್ಯಾಧಿಕಾರವನ್ನು ಕೊಟ್ಟಿದ್ದಾನೆ. ಅವನು ನಿನಗಿಂತ ಉತ್ತಮ ವ್ಯಕ್ತಿ. 29 ಯೆಹೋವನು ಇಸ್ರೇಲಿನ ದೇವರಾಗಿದ್ದಾನೆ. ಯೆಹೋವನು ಸರ್ವಕಾಲದಲ್ಲೂ ಇರುವನು. ಯೆಹೋವನು ಸುಳ್ಳಾಡುವುದಿಲ್ಲ; ಆತನು ಮನುಷ್ಯನಂತೆ ಪದೇಪದೇ ಮನಸ್ಸನ್ನು ಬದಲಾಯಿಸುವವನಲ್ಲ” ಎಂದು ಹೇಳಿದನು.

30 ಅದಕ್ಕೆ ಸೌಲನು, “ನಾನು ಪಾಪಮಾಡಿದ್ದೇನೆಂಬುದು ಸರಿ. ಆದರೆ ದಯವಿಟ್ಟು ನನ್ನ ಜೊತೆಯಲ್ಲಿ ಹಿಂದಿರುಗಿ ಬಾ. ಇಸ್ರೇಲಿನ ಜನರೆದುರು ಮತ್ತು ನಾಯಕರೆದುರು ಸ್ವಲ್ಪ ಗೌರವವನ್ನು ತೋರಿಸು. ನನ್ನ ಜೊತೆಯಲ್ಲಿ ನೀನು ಹಿಂದಿರುಗಿ ಬಂದರೆ, ನಾನು ನಿನ್ನ ದೇವರಾದ ಯೆಹೋವನನ್ನು ಆರಾಧಿಸಬಹುದು” ಎಂದು ಬೇಡಿಕೊಂಡನು. 31 ಆಗ ಸಮುವೇಲನು ಸೌಲನ ಜೊತೆಯಲ್ಲಿ ಹೋದನು. ಸೌಲನು ದೇವರನ್ನು ಆರಾಧಿಸಿದನು.

ಲೂಕ 6:43-45

ಎರಡು ವಿಧವಾದ ಫಲ

(ಮತ್ತಾಯ 7:17-20; 12:34-35)

43 “ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡುವುದಿಲ್ಲ. ಅದೇ ರೀತಿಯಲ್ಲಿ ಕೆಟ್ಟಮರವು ಒಳ್ಳೆಯ ಫಲವನ್ನು ಕೊಡುವುದಿಲ್ಲ. 44 ಪ್ರತಿಯೊಂದು ಮರವನ್ನು ಅದರ ಫಲದಿಂದಲೇ ಗುರುತಿಸಲಾಗುವುದು. ಜನರು ಮುಳ್ಳುಗಿಡಗಳಲ್ಲಿ ಅಂಜೂರದ ಹಣ್ಣುಗಳನ್ನಾಗಲಿ ಪೊದೆಗಳಲ್ಲಿ ದ್ರಾಕ್ಷಿಹಣ್ಣುಗಳನ್ನಾಗಲಿ ಪಡೆಯುವುದಿಲ್ಲ! 45 ಒಳ್ಳೆಯವನ ಹೃದಯದಲ್ಲಿ ಒಳ್ಳೆಯವು ಇರುತ್ತವೆ. ಆದ್ದರಿಂದ ಅವನ ಹೃದಯದೊಳಗಿಂದ ಒಳ್ಳೆಯವು ಹೊರಬರುತ್ತವೆ. ಆದರೆ ಕೆಟ್ಟವನ ಹೃದಯದಲ್ಲಿ ಕೆಟ್ಟವು ಇರುತ್ತವೆ. ಆದ್ದರಿಂದ ಅವನ ಹೃದಯದೊಳಗಿಂದ ಕೆಟ್ಟವು ಹೊರಬರುತ್ತವೆ. ಹೃದಯದಲ್ಲಿ ತುಂಬಿರುವುದೇ ಬಾಯಲ್ಲಿ ಬರುವುದು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International