Revised Common Lectionary (Semicontinuous)
113 ನಿನಗೆ ಪೂರ್ಣವಾಗಿ ನಂಬಿಗಸ್ತರಾಗಿಲ್ಲದವರನ್ನು ದ್ವೇಷಿಸುವೆನು.
ನಾನಾದರೋ ನಿನ್ನ ಉಪದೇಶಗಳನ್ನು ಪ್ರೀತಿಸುವೆನು.
114 ನನ್ನ ಆಶ್ರಯವೂ ಗುರಾಣಿಯೂ ನೀನೇ.
ಯೆಹೋವನೇ, ನಿನ್ನ ವಾಕ್ಯದಲ್ಲಿ ಭರವಸವಿಟ್ಟಿರುವೆ.
115 ಕೆಡುಕರನ್ನು ನನ್ನ ಬಳಿಗೆ ಬರಗೊಡಿಸಬೇಡ.
ಆಗ ನಾನು ನಿನ್ನ ಆಜ್ಞೆಗಳಿಗೆ ವಿಧೇಯನಾಗುವೆನು.
116 ನಿನ್ನ ವಾಗ್ದಾನಕ್ಕನುಸಾರವಾಗಿ ನನಗೆ ಸಹಾಯಮಾಡು, ಆಗ ನಾನು ಬದುಕಿಕೊಳ್ಳುವೆ.
ನಾನು ನಿನ್ನಲ್ಲಿ ಭರವಸವಿಟ್ಟಿರುವೆ, ನನ್ನನ್ನು ನಿರಾಶೆಗೊಳಿಸಬೇಡ.
117 ನನಗೆ ಸಹಾಯಮಾಡು, ಆಗ ನಾನು ರಕ್ಷಿಸಲ್ಪಡುವೆನು.
ನಾನು ನಿನ್ನ ಕಟ್ಟಳೆಗಳನ್ನು ಯಾವಾಗಲೂ ಕಲಿಯುತ್ತಿರುವೆನು.
118 ನಿನ್ನ ಕಟ್ಟಳೆಗಳನ್ನು ಅನುಸರಿಸದವರನ್ನು ನೀನು ತಳ್ಳಿಬಿಡುವೆ.
ಯಾಕೆಂದರೆ, ಅವರು ನಿನಗೆ ದ್ರೋಹ ಮಾಡಿದರು.
119 ಭೂಮಿಯ ಮೇಲಿರುವ ದುಷ್ಟರನ್ನು ನೀನು ಕಸದಂತೆ ಕಾಣುವೆ.
ಆದ್ದರಿಂದ ನಾನು ನಿನ್ನ ಒಡಂಬಡಿಕೆಯನ್ನು ಸದಾಕಾಲ ಪ್ರೀತಿಸುವೆನು.
120 ನಾನು ನಿನ್ನಲ್ಲಿ ಭಯವುಳ್ಳವನಾಗಿದ್ದೇನೆ.
ನಾನು ನಿನ್ನ ತೀರ್ಪುಗಳಿಗೆ ಅಂಜಿಕೊಂಡಿದ್ದೇನೆ.
121 ನ್ಯಾಯನೀತಿಗಳುಳ್ಳ ಕಾರ್ಯಗಳನ್ನೇ ನಾನು ಮಾಡಿರುವೆ,
ಕೆಡುಕರಿಗೆ ನನ್ನನ್ನು ಒಪ್ಪಿಸಿಕೊಡಬೇಡ.
122 ನಿನ್ನ ಸೇವಕನಾದ ನನಗೆ ಸಹಾಯಮಾಡುವುದಾಗಿ ವಾಗ್ದಾನಮಾಡು.
ನನಗೆ ಕೇಡುಮಾಡಲು ಆ ಗರ್ವಿಷ್ಠರಿಗೆ ಅವಕಾಶ ಕೊಡಬೇಡ.
123 ನಿನ್ನ ರಕ್ಷಣೆಗಾಗಿಯೂ ನಿನ್ನ ಒಳ್ಳೆಯ ಮಾತಿಗಾಗಿಯೂ
ಎದುರುನೋಡುತ್ತಾ ನನ್ನ ಕಣ್ಣುಗಳು ಆಯಾಸಗೊಂಡಿವೆ.
124 ನಿನ್ನ ಸೇವಕನಾದ ನನಗೆ ನಿನ್ನ ಶಾಶ್ವತ ಪ್ರೀತಿಯನ್ನು ತೋರಿಸು.
ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು.
125 ನಾನು ನಿನ್ನ ಸೇವಕ,
ನಿನ್ನ ಒಡಂಬಡಿಕೆಯನ್ನು ಗ್ರಹಿಸಿಕೊಳ್ಳಲು ನನಗೆ ಬೇಕಾದ ವಿವೇಕವನ್ನು ದಯಪಾಲಿಸು.
126 ಯೆಹೋವನೇ, ನಿನ್ನ ಕಾರ್ಯಾಚರಣೆಗೆ ಇದು ತಕ್ಕ ಸಮಯವಾಗಿದೆ.
ಜನರು ನಿನ್ನ ಧರ್ಮಶಾಸ್ತ್ರವನ್ನು ಮೀರಿದ್ದಾರೆ.
127 ನಾನು ನಿನ್ನ ಆಜ್ಞೆಗಳನ್ನು ಬಂಗಾರಕ್ಕಿಂತಲೂ
ಅಪರಂಜಿಗಿಂತಲೂ ಹೆಚ್ಚಾಗಿ ಪ್ರೀತಿಸುವೆನು.
128 ನಾನು ನಿನ್ನ ಆಜ್ಞೆಗಳಿಗೆಲ್ಲಾ ಎಚ್ಚರಿಕೆಯಿಂದ ವಿಧೇಯನಾಗುವೆನು.
ನಾನು ಸುಳ್ಳು ಉಪದೇಶಗಳನ್ನು ದ್ವೇಷಿಸುವೆನು.
ಯೋನಾತಾನನಿಂದ ದಾವೀದನಿಗೆ ಸಹಾಯ
19 ಸೌಲನು ತನ್ನ ಮಗನಾದ ಯೋನಾತಾನನಿಗೂ ತನ್ನ ಅಧಿಕಾರಿಗಳಿಗೂ ದಾವೀದನನ್ನು ಕೊಂದು ಹಾಕಲು ತಿಳಿಸಿದನು. ಆದರೆ ಯೋನಾತಾನನು ದಾವೀದನನ್ನು ಬಹಳ ಇಷ್ಟಪಡುತ್ತಿದ್ದನು. 2 ಯೋನಾತಾನನು ದಾವೀದನಿಗೆ, “ಎಚ್ಚರಿಕೆಯಿಂದಿರು! ಸೌಲನು ನಿನ್ನನ್ನು ಕೊಲ್ಲಲು ಅವಕಾಶವನ್ನು ಕಾಯುತ್ತಿದ್ದಾನೆ. ಬೆಳಿಗ್ಗೆ, ಹೊಲದೊಳಗೆ ಹೋಗಿ ಅಡಗಿಕೊ. 3 ನಾನು ನನ್ನ ತಂದೆಯೊಡನೆ ಹೊಲಕ್ಕೆ ಬರುತ್ತೇನೆ. ನೀನು ಅಡಗಿರುವ ಸ್ಥಳದ ಹತ್ತಿರ ನಾವು ನಿಲ್ಲುತ್ತೇವೆ. ನಾನು ನನ್ನ ತಂದೆಯೊಡನೆ ನಿನ್ನ ಬಗ್ಗೆ ಮಾತನಾಡುತ್ತೇನೆ. ನಂತರ ನಾನು ತಿಳಿದುಕೊಂಡದ್ದನ್ನು ನಿನಗೆ ಹೇಳುತ್ತೇನೆ” ಎಂದನು.
4 ಯೋನಾತಾನನು ತನ್ನ ತಂದೆಯಾದ ಸೌಲನೊಂದಿಗೆ ಮಾತನಾಡಿದನು. ಯೋನಾತಾನನು ದಾವೀದನ ಬಗ್ಗೆ ಒಳ್ಳೆಯ ಸಂಗತಿಗಳನ್ನು ತಿಳಿಸಿದನು. ಯೋನಾತಾನನು, “ನೀನು ರಾಜ. ದಾವೀದನು ನಿನ್ನ ಸೇವಕ. ದಾವೀದನು ನಿನಗೆ ಯಾವ ಕೇಡನ್ನೂ ಮಾಡಿಲ್ಲ. ಆದ್ದರಿಂದ ಅವನಿಗೆ ಯಾವ ಕೇಡನ್ನೂ ಮಾಡಬೇಡ. ದಾವೀದನು ನಿನಗೆ ಯಾವಾಗಲೂ ಒಳ್ಳೆಯವನಾಗಿಯೇ ಇದ್ದಾನೆ. 5 ದಾವೀದನು ಫಿಲಿಷ್ಟಿಯನಾದ ಗೊಲ್ಯಾತನನ್ನು ಕೊಂದಾಗ ತನ್ನ ಜೀವವನ್ನೇ ಪಣವಾಗಿಟ್ಟಿದ್ದನು. ಯೆಹೋವನು ಇಸ್ರೇಲರೆಲ್ಲರಿಗೂ ಬಹು ದೊಡ್ಡ ಜಯವನ್ನುಂಟುಮಾಡಿದನು. ನೀನು ಅದನ್ನು ನೋಡಿದೆ ಮತ್ತು ಸಂತೋಷಗೊಂಡೆ. ದಾವೀದನಿಗೆ ಕೇಡುಮಾಡಲು ನೀನು ಏಕೆ ಬಯಸಿರುವೆ? ಅವನು ನಿರಪರಾಧಿ. ಅವನನ್ನು ಕೊಲ್ಲಲು ಯಾವ ಕಾರಣವೂ ಇಲ್ಲ!” ಎಂದು ಹೇಳಿದನು.
6 ಯೋನಾತಾನನು ಹೇಳಿದ್ದನ್ನೆಲ್ಲ ಸೌಲನು ಕೇಳಿ, “ಯೆಹೋವನಾಣೆ, ದಾವೀದನನ್ನು ಕೊಲ್ಲುವುದಿಲ್ಲ” ಎಂದು ಪ್ರಮಾಣ ಮಾಡಿ ಹೇಳಿದನು.
7 ಆದ್ದರಿಂದ ಯೋನಾತಾನನು ದಾವೀದನನ್ನು ಕರೆದು ಅವನಿಗೆ ಎಲ್ಲವನ್ನೂ ತಿಳಿಸಿದನು. ಬಳಿಕ ಯೋನಾತಾನನು ದಾವೀದನನ್ನು ಸೌಲನ ಹತ್ತಿರಕ್ಕೆ ಕರೆದುಕೊಂಡು ಬಂದನು. ದಾವೀದನು ಮೊದಲಿನಂತೆ ಸೌಲನ ಜೊತೆಗಿದ್ದನು.
ನೌಕೆಯ ನಾಶ
39 ಬೆಳಗಾದಾಗ ನಾವಿಕರು ಭೂಮಿಯನ್ನು ಕಂಡರು. ಆದರೆ ಅದು ಯಾವ ಭೂಮಿಯೆಂದು ಗೊತ್ತಿರಲಿಲ್ಲ. ಅವರು ಕಂಡದ್ದು ಉಸುಬಿನ ದಡವುಳ್ಳ ಒಂದು ಕೊಲ್ಲಿ. ಸಾಧ್ಯವಾದರೆ ಹಡಗನ್ನು ಆ ಕೊಲ್ಲಿಗೆ ನಡೆಸಬೇಕೆಂದು ನಾವಿಕರು ಬಯಸಿದರು. 40 ಆದ್ದರಿಂದ ಅವರು ಚುಕ್ಕಾಣಿಗಳನ್ನು[a] ಬಿಗಿಯಾಗಿ ಹಿಡಿದುಕೊಂಡಿದ್ದ ಹಗ್ಗಗಳನ್ನು ಕತ್ತರಿಸಿಹಾಕಿದರು. ಬಳಿಕ ಮುಂಭಾಗದ ಹಾಯಿಯನ್ನು ಗಾಳಿಗೆ ಎತ್ತಿಕಟ್ಟಿ ಹಡಗನ್ನು ದಡದತ್ತ ನಡೆಸತೊಡಗಿದರು. 41 ಆದರೆ ಹಡಗು ಉಸುಬಿನ ದಿಬ್ಬಕ್ಕೆ ಅಪ್ಪಳಿಸಿತು. ಹಡಗಿನ ಮುಂಭಾಗವು ಅದರಲ್ಲಿ ಸಿಕ್ಕಿಕೊಂಡಿತು. ಹಡಗು ಚಲಿಸಲಾಗಲಿಲ್ಲ. ಬಳಿಕ ದೊಡ್ಡ ಅಲೆಗಳು ಹಡಗಿನ ಹಿಂಭಾಗಕ್ಕೆ ಬಡಿದು ಚೂರುಚೂರು ಮಾಡಲಾರಂಭಿಸಿದವು.
42 ಕೈದಿಗಳಲ್ಲಿ ಯಾರೂ ಈಜಿಕೊಂಡು ಹೋಗಿ ತಪ್ಪಿಸಿಕೊಳ್ಳಬಾರದೆಂದು ಸೈನಿಕರು ಕೈದಿಗಳನ್ನು ಕೊಲ್ಲಲು ನಿರ್ಧರಿಸಿದರು. 43 ಆದರೆ ಸೇನಾಧಿಕಾರಿಯಾದ ಜೂಲಿಯಸನು ಪೌಲನನ್ನು ಉಳಿಸಲಪೇಕ್ಷಿಸಿ ಕೈದಿಗಳನ್ನು ಕೊಲ್ಲಲು ಸೈನಿಕರಿಗೆ ಅಪ್ಪಣೆ ಕೊಡಲಿಲ್ಲ. ಈಜು ಬಲ್ಲವರೆಲ್ಲರು ನೀರಿಗೆ ಧುಮುಕಿ ಈಜಿಕೊಂಡು ದಡಕ್ಕೆ ಹೋಗಬೇಕೆಂದು ಜೂಲಿಯಸನು ಹೇಳಿದನು. 44 ಉಳಿದ ಜನರು ಹಲಗೆಗಳ ಅಥವಾ ಹಡಗಿನ ತುಂಡುಗಳ ಸಹಾಯದಿಂದ ಹೋಗಬೇಕೆಂದು ತಿಳಿಸಿದನು. ಹೀಗೆ ಜನರೆಲ್ಲರೂ ದಡವನ್ನು ಸೇರಿದರು. ಅವರಲ್ಲಿ ಒಬ್ಬರೂ ಸಾಯಲಿಲ್ಲ.
Kannada Holy Bible: Easy-to-Read Version. All rights reserved. © 1997 Bible League International