Revised Common Lectionary (Complementary)
5 ಪ್ರವಾದಿಯಾದ ಯೆರೆಮೀಯನು ಪ್ರವಾದಿಯಾದ ಹನನ್ಯನಿಗೆ ಹೀಗೆ ಉತ್ತರ ಕೊಟ್ಟನು. ಅವರು ಯೆಹೋವನ ಆಲಯದಲ್ಲಿ ನಿಂತಿದ್ದರು. ಯಾಜಕರೂ ಮತ್ತು ಅಲ್ಲಿಯ ಸಮಸ್ತ ಜನರು ಯೆರೆಮೀಯನ ಉತ್ತರವನ್ನು ಕೇಳಿಸಿಕೊಂಡರು. 6 ಯೆರೆಮೀಯನು ಹನನ್ಯನಿಗೆ, “ಹಾಗೆಯೇ ಆಗಲಿ, ನೀನು ಹೇಳಿದಂತೆ ಯೆಹೋವನು ಮಾಡಲಿ. ನೀನು ಪ್ರವಾದಿಸಿದ ಸಂದೇಶವನ್ನು ಯೆಹೋವನು ನಿಜವಾಗುವಂತೆ ಮಾಡುವನೆಂದು ನಾನು ಆಶಿಸುತ್ತೇನೆ. ಯೆಹೋವನು ಬಾಬಿಲೋನಿನಿಂದ ತನ್ನ ಆಲಯದ ವಸ್ತುಗಳನ್ನು ಇಲ್ಲಿಗೆ ತರುವನೆಂದು ನಾನು ಆಶಿಸುವೆ. ತಮ್ಮ ಮನೆಗಳನ್ನು ಬಿಟ್ಟುಹೋಗಲು ಒತ್ತಾಯಿಸಲ್ಪಟ್ಟ ಜನರನ್ನು ಮತ್ತೆ ಯೆಹೋವನು ಇಲ್ಲಿಗೆ ಕರೆತರುವನೆಂದು ನಾನು ಆಶಿಸುವೆ.
7 “ಹನನ್ಯನೇ, ನಾನು ಹೇಳಬೇಕಾದುದನ್ನು ಕೇಳು. ಸಮಸ್ತ ಜನರಿಗೆ ನಾನು ಹೇಳಬೇಕಾದುದನ್ನು ಕೇಳು. 8 ಹನನ್ಯನೇ, ನಾನು ಮತ್ತು ನೀನು ಪ್ರವಾದಿಗಳಾಗುವದಕ್ಕಿಂತ ಬಹಳ ಮುಂಚೆ ಪ್ರವಾದಿಗಳು ಇದ್ದರು. ಯುದ್ಧ, ಹಸಿವು ಮತ್ತು ಭಯಂಕರವಾದ ವ್ಯಾಧಿಗಳು ಅನೇಕ ದೇಶಗಳಿಗೆ ಮತ್ತು ದೊಡ್ಡದೊಡ್ಡ ರಾಜ್ಯಗಳಿಗೆ ಬರುತ್ತವೆ ಎಂದು ಅವರು ಪ್ರವಾದಿಸಿದ್ದಾರೆ. 9 ಆದರೆ ನಾವು ನೆಮ್ಮದಿಯಿಂದ ಇರುವೆವು ಎಂದು ಪ್ರವಾದಿಸುವ ಪ್ರವಾದಿಯು ನಿಜವಾಗಿಯೂ ಯೆಹೋವನಿಂದ ಕಳುಹಿಸಲ್ಪಟ್ಟಿರುವನೇ ಎಂಬುದನ್ನು ನಾವು ಪರೀಕ್ಷಿಸಬೇಕು. ಆ ಪ್ರವಾದಿಯ ಸಂದೇಶವು ಸತ್ಯವಾಗಿ ಪರಿಣಮಿಸಿದರೆ ಅವನು ನಿಜವಾಗಿ ಯೆಹೋವನಿಂದ ಕಳುಹಿಸಲ್ಪಟ್ಟವನೆಂದು ಜನರು ತಿಳಿದುಕೊಳ್ಳಬಹುದು.”
ರಚನೆಗಾರ: ಜೇರಹ ಕುಟುಂಬದ ಏತಾನ.
89 ಯೆಹೋವನೇ, ನಿನ್ನ ಪ್ರೀತಿಯನ್ನೂ
ನಂಬಿಗಸ್ತಿಕೆಯನ್ನೂ ಸದಾಕಾಲ ಹಾಡಿ ಕೊಂಡಾಡುವೆನು!
2 ನಿನ್ನ ಶಾಶ್ವತ ಪ್ರೀತಿಯಲ್ಲಿ ನನಗೆ ದೃಢವಾದ ನಂಬಿಕೆಯಿದೆ.
ನಿನ್ನ ನಂಬಿಗಸ್ತಿಕೆಯು ಆಕಾಶಗಳಂತೆ ಶಾಶ್ವತವಾಗಿದೆ.
3 ಆತನು ಹೇಳಿದ್ದೇನೆಂದರೆ: “ನಾನು ಆರಿಸಿಕೊಂಡ ರಾಜನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡೆನು.
ನನ್ನ ಸೇವಕನಾದ ದಾವೀದನಿಗೆ ಒಂದು ವಾಗ್ದಾನವನ್ನು ಮಾಡಿದೆನು; ಅದೇನೆಂದರೆ,
4 ‘ದಾವೀದನೇ, ನಿನ್ನ ಕುಟುಂಬವನ್ನು ಶಾಶ್ವಾತಗೊಳಿಸುವೆನು,
ನಿನ್ನ ರಾಜ್ಯವನ್ನೂ ಶಾಶ್ವತಗೊಳಿಸುವೆನು.’”
15 ಯೆಹೋವನೇ, ನಿನ್ನ ಸದ್ಭಕ್ತರು ನಿಜವಾಗಿಯೂ ಸಂತೋಷವಾಗಿದ್ದಾರೆ.
ಅವರು ನಿನ್ನ ಕರುಣೆಯ ಬೆಳಕಿನಲ್ಲಿ ವಾಸಿಸುತ್ತಿದ್ದಾರೆ.
16 ನಿನ್ನ ಹೆಸರು ಅವರನ್ನು ಯಾವಾಗಲೂ ಸಂತೋಷಗೊಳಿಸುತ್ತದೆ.
ಅವರು ನಿನ್ನ ನೀತಿಯನ್ನು ಸ್ತುತಿಸುವರು.
17 ನೀನೇ ಅವರ ಅದ್ಭುತ ಶಕ್ತಿಯಾಗಿರುವೆ.
ಅವರ ಶಕ್ತಿಯು ನಿನ್ನಿಂದಲೇ ಬರುತ್ತದೆ.
18 ಯೆಹೋವನೇ, ನೀನೇ ನಮ್ಮ ಸಂರಕ್ಷಕನು.
ಇಸ್ರೇಲಿನ ಪರಿಶುದ್ಧನೇ ನಮ್ಮ ರಾಜನು.
12 ಆದರೆ ನೀವು ಭೂಲೋಕದ ಜೀವನದಲ್ಲಿ ಪಾಪಕ್ಕೆ ಅಧೀನರಾಗಿರಬೇಡಿ; ನಿಮ್ಮ ಪಾಪಾಧೀನಸ್ವಭಾವದ ದುರಾಶೆಗಳ ಆಡಳಿತಕ್ಕೆ ಒಳಗಾಗಬೇಡಿ. 13 ನಿಮ್ಮ ದೇಹದ ಅಂಗಗಳನ್ನು ಪಾಪದ ಸೇವೆಗೆ ಒಪ್ಪಿಸಬೇಡಿ; ನಿಮ್ಮ ದೇಹಗಳನ್ನು ಪಾಪಕ್ಕೆ ಒಪ್ಪಿಸಿ ದುಷ್ಟತ್ವವನ್ನು ನಡೆಸುವ ಸಾಧನಗಳಾಗಬೇಡಿ. ಅದಕ್ಕೆ ಬದಲಾಗಿ, ನಿಮ್ಮನ್ನೇ ದೇವರಿಗೆ ಸಮರ್ಪಿಸಿಕೊಳ್ಳಿರಿ; ಸತ್ತು ಈಗ ಜೀವಂತವಾಗಿ ಎದ್ದುಬಂದಿರುವವರಂತೆ ಜೀವಿಸಿರಿ; ಒಳ್ಳೆಯ ಕಾರ್ಯಗಳನ್ನು ಮಾಡುವ ಸಾಧನಗಳನ್ನಾಗಿ ನಿಮ್ಮ ದೇಹದ ಅಂಗಗಳನ್ನು ದೇವರಿಗೆ ಸಮರ್ಪಿಸಿರಿ. 14 ಪಾಪವು ನಿಮ್ಮ ಒಡೆಯನಾಗಿರುವುದಿಲ್ಲ. ಏಕೆಂದರೆ, ನೀವು ಧರ್ಮಶಾಸ್ತ್ರಕ್ಕೆ ಅಧೀನರಲ್ಲ. ಈಗ ನೀವು ದೇವರ ಕೃಪೆಯಲ್ಲಿ ಜೀವಿಸುವವರಾಗಿದ್ದೀರಿ.
ನೀತಿಯ ಗುಲಾಮರು
15 ಹೀಗಿರಲಾಗಿ ನಾವೇನು ಮಾಡಬೇಕು? ನಾವು ಧರ್ಮಶಾಸ್ತ್ರದ ಅಧೀನದಲ್ಲಿರದೆ ಕೃಪೆಯ ಅಧೀನದಲ್ಲಿರುವುದರಿಂದ ಪಾಪ ಮಾಡಬೇಕೇ? ಇಲ್ಲ! 16 ನೀವು ಯಾವನಿಗೆ ಗುಲಾಮರಂತೆ ವಿಧೇಯರಾಗುತ್ತೇವೆ ಎಂದು ನಿಮ್ಮನ್ನು ಒಪ್ಪಿಸಿಕೊಡುತ್ತೀರೋ ಆ ವ್ಯಕ್ತಿಗೆ ನೀವು ನಿಜವಾಗಿಯೂ ಗುಲಾಮರಾಗಿದ್ದೀರಿ ಎಂಬುದು ನಿಮಗೆ ಖಂಡಿತವಾಗಿ ತಿಳಿದಿದೆ. ನೀವು ಯಾವನಿಗೆ ವಿಧೇಯರಾಗುತ್ತೀರೋ ಅವನೇ ನಿಮ್ಮ ಒಡೆಯನಾಗಿದ್ದಾನೆ. ನೀವು ಪಾಪವನ್ನಾದರೂ ಅನುಸರಿಸಬಹುದು ಅಥವಾ ದೇವರಿಗಾದರೂ ವಿಧೇಯರಾಗಬಹುದು. ಪಾಪವು ಆತ್ಮಿಕ ಮರಣವನ್ನು ಉಂಟುಮಾಡುತ್ತದೆ. ಆದರೆ ನೀವು ದೇವರಿಗೆ ವಿಧೇಯರಾದರೆ, ಆ ವಿಧೇಯತೆಯು ನಿಮ್ಮನ್ನು ನೀತಿವಂತರನ್ನಾಗಿ ಮಾಡುತ್ತದೆ. 17 ಹಿಂದಿನ ಕಾಲದಲ್ಲಿ ನೀವು ಪಾಪಕ್ಕೆ ಗುಲಾಮರಾಗಿದ್ದಿರಿ. ಪಾಪವು ನಿಮ್ಮನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿತ್ತು. ನಿಮಗೆ ಬೋಧಿಸಿದ ವಿಷಯಗಳಿಗೆ ನೀವು ಸಂಪೂರ್ಣವಾಗಿ ವಿಧೇಯರಾದ್ದರಿಂದ ದೇವರಿಗೆ ಸ್ತೋತ್ರವಾಗಲಿ. 18 ನೀವು ಪಾಪದಿಂದ ಬಿಡುಗಡೆ ಹೊಂದಿದ್ದೀರಿ. ಈಗ ನೀವು ನೀತಿಗೆ ಗುಲಾಮರಾಗಿದ್ದೀರಿ. 19 ಜನರಿಗೆ ತಿಳಿದಿರುವ ಉದಾಹರಣೆಯ ಮೂಲಕ ನಾನು ಇದನ್ನು ನಿಮಗೆ ವಿವರಿಸುತ್ತೇನೆ. ಹಿಂದಿನ ಕಾಲದಲ್ಲಿ ನೀವು ನಿಮ್ಮ ದೇಹದ ಅಂಗಗಳನ್ನು ಪಾಪಕ್ಕೂ ದುಷ್ಟತ್ವಕ್ಕೂ ಗುಲಾಮರನ್ನಾಗಿ ಒಪ್ಪಿಸಿಕೊಟ್ಟಿದ್ದಿರಿ. ನೀವು ದುಷ್ಟತ್ವಕ್ಕಾಗಿ ಮಾತ್ರ ಜೀವಿಸಿದಿರಿ. ಅದೇ ರೀತಿಯಲ್ಲಿ ಈಗ ನೀವು ನಿಮ್ಮ ದೇಹದ ಅಂಗಗಳನ್ನು ನೀತಿಗೆ ಗುಲಾಮರನ್ನಾಗಿ ಒಪ್ಪಿಸಿಕೊಡಬೇಕು. ಆಗ ನೀವು ದೇವರಿಗಾಗಿ ಮಾತ್ರ ಜೀವಿಸುತ್ತೀರಿ.
20 ಹಿಂದಿನ ಕಾಲದಲ್ಲಿ ನೀವು ಪಾಪಕ್ಕೆ ಗುಲಾಮರಾಗಿದ್ದಿರಿ ಮತ್ತು ನೀತಿಯ ಹತೋಟಿಗೆ ಒಳಗಾಗಿರಲಿಲ್ಲ. 21 ನೀವು ದುಷ್ಕೃತ್ಯಗಳನ್ನು ಮಾಡಿದಿರಿ. ಈಗ ನೀವು ಆ ಕಾರ್ಯಗಳ ವಿಷಯದಲ್ಲಿ ನಾಚಿಕೆಪಡುತ್ತೀರಿ. ಆ ಕಾರ್ಯಗಳು ನಿಮಗೆ ಸಹಾಯ ಮಾಡಿದವೇ? ಇಲ್ಲ. ಆ ಕಾರ್ಯಗಳು ಆತ್ಮಿಕ ಮರಣವನ್ನು ಮಾತ್ರ ಉಂಟುಮಾಡುತ್ತವೆ. 22 ಆದರೆ ಈಗ ನೀವು ಪಾಪದಿಂದ ಬಿಡುಗಡೆಯಾಗಿ ದೇವರ ಗುಲಾಮರಾಗಿದ್ದೀರಿ. ಇದರಿಂದ ನಿಮಗೆ ಪರಿಶುದ್ಧ ಜೀವನವೂ ನಿತ್ಯಜೀವವೂ ದೊರೆಯುತ್ತವೆ. 23 ಜನರು ಮಾಡುವ ಪಾಪಕ್ಕೆ ಮರಣವೇ ಸಂಬಳ. ಆದರೆ ದೇವರ ಉಚಿತವಾದ ಕೊಡುಗೆಯು ನಮ್ಮ ಪ್ರಭುವಾದ ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವ.
ದೇವಜನರನ್ನು ಸ್ವಾಗತಿಸುವವನಿಗೆ ಆಶೀರ್ವಾದ
(ಮಾರ್ಕ 9:41)
40 “ನಿಮ್ಮನ್ನು ಅಂಗೀಕರಿಸುವವನು ನನ್ನನ್ನು ಸಹ ಅಂಗೀಕರಿಸುವನು. ನನ್ನನ್ನು ಅಂಗೀಕರಿಸುವವನು ನನ್ನನ್ನು ಕಳುಹಿಸಿದಾತನನ್ನು (ದೇವರನ್ನು) ಸಹ ಅಂಗೀಕರಿಸುವನು. 41 ಪ್ರವಾದಿಯನ್ನು ಪ್ರವಾದಿಯೆಂದು ಸಂಧಿಸಿ ಸ್ವಾಗತಿಸುವವನು ಆ ಪ್ರವಾದಿಗೆ ಬರತಕ್ಕ ಪ್ರತಿಫಲವನ್ನು ಪಡೆಯುವನು. ಸತ್ಪುರುಷನನ್ನು ಸತ್ಪುರುಷನೆಂದು ಸ್ವಾಗತಿಸುವವನು ಆ ಸತ್ಪುರುಷನಿಗೆ ಬರತಕ್ಕ ಪ್ರತಿಫಲವನ್ನು ಪಡೆಯುವನು. 42 ದೀನರಾದ ಇವರಿಗೆ ನನ್ನ ಹಿಂಬಾಲಕರೆಂಬ ನಿಮಿತ್ತ ಸಹಾಯ ಮಾಡುವವನು ಖಂಡಿತವಾಗಿಯೂ ಪ್ರತಿಫಲವನ್ನು ಪಡೆಯುವನು. ನನ್ನ ಹಿಂಬಾಲಕರಿಗೆ ಕೇವಲ ಒಂದು ಬಟ್ಟಲು ತಣ್ಣೀರನ್ನು ಕೊಟ್ಟರೂ ಸಹ ಅದಕ್ಕೆ ಬರತಕ್ಕ ಪ್ರತಿಫಲವು ತಪ್ಪುವುದೇ ಇಲ್ಲ.”
Kannada Holy Bible: Easy-to-Read Version. All rights reserved. © 1997 Bible League International