Revised Common Lectionary (Complementary)
ರಚನೆಗಾರ: ದಾವೀದ.
6 ಯೆಹೋವನೇ, ಕೋಪದಿಂದ ನನ್ನನ್ನು ಶಿಕ್ಷಿಸಬೇಡ;
ರೋಷದಿಂದ ನನ್ನನ್ನು ದಂಡಿಸಬೇಡ.
2 ಯೆಹೋವನೇ, ನನ್ನನ್ನು ಕನಿಕರಿಸು!
ನಾನು ರೋಗಿಯಾಗಿದ್ದೇನೆ, ಬಲಹೀನನಾಗಿದ್ದೇನೆ,
ನನ್ನನ್ನು ಗುಣಪಡಿಸು! ನನ್ನ ಎಲುಬುಗಳು ನಡುಗುತ್ತಿವೆ.
3 ನನ್ನ ಇಡೀ ದೇಹ ನಡುಗುತ್ತಿದೆ.
ಯೆಹೋವನೇ, ನನ್ನನ್ನು ಗುಣಪಡಿಸಲು ಇನ್ನೆಷ್ಟುಕಾಲ ಬೇಕು?
4 ಯೆಹೋವನೇ, ನನ್ನನ್ನು ಮತ್ತೆ ಬಲಪಡಿಸು!
ನಿನ್ನ ಮಹಾಕೃಪೆಯಿಂದ ನನ್ನನ್ನು ರಕ್ಷಿಸು.
5 ಸತ್ತವರು ನಿನ್ನನ್ನು ಜ್ಞಾಪಿಸಿಕೊಳ್ಳುವರೇ?
ಸಮಾಧಿಗಳಲ್ಲಿರುವವರು ನಿನ್ನನ್ನು ಸ್ತುತಿಸುವರೇ?
ಆದ್ದರಿಂದ ನನ್ನನ್ನು ಗುಣಪಡಿಸು.
6 ಯೆಹೋವನೇ, ರಾತ್ರಿಯೆಲ್ಲಾ ನಿನಗೆ ಪ್ರಾರ್ಥಿಸಿದೆನು.
ನನ್ನ ಹಾಸಿಗೆಯು ನನ್ನ ಕಣ್ಣೀರಿನಿಂದ ಒದ್ದೆಯಾಗಿದೆ.
ನನ್ನ ಹಾಸಿಗೆಯಿಂದ ಕಣ್ಣೀರು ತೊಟ್ಟಿಕ್ಕುತ್ತಿದೆ.
ನಾನು ಅತ್ತು ಗೋಳಾಡಿ ಬಲಹೀನನಾಗಿದ್ದೇನೆ.
7 ನನ್ನ ವೈರಿಗಳು ನನಗೆ ಅನೇಕ ತೊಂದರೆಗಳನ್ನು ಮಾಡಿರುವುದರಿಂದ ನನಗೆ ದುಃಖವೂ ಗೋಳಾಟವೂ ಉಂಟಾಗಿವೆ.
ನನ್ನ ಕಣ್ಣುಗಳು ಬಲಹೀನಗೊಂಡಿವೆ; ಅತ್ತತ್ತು ಆಯಾಸಗೊಂಡಿವೆ.
8 ದುಷ್ಟರೇ, ತೊಲಗಿಹೋಗಿರಿ.
ಯಾಕೆಂದರೆ ಯೆಹೋವನು ನನ್ನ ಗೋಳಾಟಕ್ಕೆ ಕಿವಿಗೊಟ್ಟಿದ್ದಾನೆ.
9 ಯೆಹೋವನು ನನ್ನ ವಿಜ್ಞಾಪನೆಯನ್ನು ಕೇಳಿದ್ದಾನೆ.
ಆತನು ನನ್ನ ಪ್ರಾರ್ಥನೆಯನ್ನು ಸ್ವೀಕರಿಸಿ ಸದುತ್ತರವನ್ನು ದಯಪಾಲಿಸುವನು.
10 ನನ್ನ ವೈರಿಗಳೆಲ್ಲ ಗಲಿಬಿಲಿಗೊಂಡು ನಿರಾಶರಾಗುವರು.
ಇದ್ದಕ್ಕಿದ್ದಂತೆ ಅವಮಾನಿತರಾಗಿ ಹಿಂತಿರುಗುವರು.
ಆಲಯದಲ್ಲಿ ಯೆರೆಮೀಯನ ಪ್ರಸಂಗ
26 ಯೆಹೋಯಾಕೀಮನು ಯೆಹೂದದ ರಾಜನಾದ ಮೊದಲನೇ ವರ್ಷದಲ್ಲಿ ಯೆಹೋವನಿಂದ ಈ ಸಂದೇಶ ಬಂದಿತು. ಯೆಹೋಯಾಕೀಮನು ರಾಜನಾದ ಯೋಷೀಯನ ಮಗನಾಗಿದ್ದನು. 2 ಯೆಹೋವನು ಹೀಗೆಂದನು, “ಯೆರೆಮೀಯನೇ, ಯೆಹೋವನ ಆಲಯದ ಅಂಗಳದಲ್ಲಿ ನಿಲ್ಲು, ಯೆಹೋವನ ಆಲಯದಲ್ಲಿ ಆರಾಧನೆಗೆಂದು ಬರುವ ಯೆಹೂದದ ಎಲ್ಲಾ ಜನರಿಗೆ ಈ ಸಂದೇಶವನ್ನು ತಿಳಿಸು. ನಾನು ನಿನಗೆ ತಿಳಿಸೆಂದು ಹೇಳುವ ಎಲ್ಲವನ್ನೂ ಅವರಿಗೆ ಹೇಳು. ನನ್ನ ಸಂದೇಶದ ಯಾವ ಭಾಗವನ್ನೂ ಬಿಡಬೇಡ. 3 ಅವರು ನನ್ನ ಸಂದೇಶವನ್ನು ಕೇಳಿ ಅದರಂತೆ ನಡೆಯಬಹುದು; ತಮ್ಮ ಕೆಟ್ಟ ಜೀವನವನ್ನು ತ್ಯಜಿಸಿ ಸನ್ಮಾರ್ಗವನ್ನು ಹಿಡಿಯಬಹುದು. ಅವರು ಪರಿವರ್ತನೆ ಹೊಂದಿದರೆ ನಾನು ಅವರನ್ನು ಶಿಕ್ಷಿಸಬೇಕೆಂದು ಮಾಡಿದ ಯೋಚನೆಗಳನ್ನು ಬದಲಾಯಿಸುವೆನು. ಅವರು ಅನೇಕ ದುಷ್ಕೃತ್ಯಗಳನ್ನು ಮಾಡಿದ್ದರಿಂದ ಅವರನ್ನು ಶಿಕ್ಷಿಸಬೇಕೆಂದು ನಾನು ಯೋಚಿಸುತ್ತಿದ್ದೇನೆ. 4 ನೀನು ಅವರಿಗೆ ಹೀಗೆ ಹೇಳು: ‘ಯೆಹೋವನು ಹೀಗೆನ್ನುತ್ತಾನೆ: ನಾನು ನಿಮಗೆ ನನ್ನ ಧರ್ಮೋಪದೇಶಗಳನ್ನು ಕೊಟ್ಟಿದ್ದೇನೆ. ನೀವು ಅವುಗಳನ್ನು ಪಾಲಿಸಬೇಕು; ಅನುಸರಿಸಬೇಕು. 5 ನನ್ನ ಸೇವಕರು ಹೇಳುವುದನ್ನು ನೀವು ಕೇಳಬೇಕು. ಪ್ರವಾದಿಗಳು ನನ್ನ ಸೇವಕರಾಗಿದ್ದಾರೆ. ನಾನು ಮತ್ತೆಮತ್ತೆ ನನ್ನ ಪ್ರವಾದಿಗಳನ್ನು ನಿಮ್ಮಲ್ಲಿಗೆ ಕಳುಹಿಸಿದೆನು. ಆದರೆ ನೀವು ಅವರ ಮಾತುಗಳಿಗೆ ಕಿವಿಗೊಡಲಿಲ್ಲ. 6 ನೀವು ನನ್ನ ಆಜ್ಞಾಪಾಲನೆ ಮಾಡದಿದ್ದರೆ ಜೆರುಸಲೇಮಿನ ನನ್ನ ಈ ಆಲಯಕ್ಕೆ ಶಿಲೋವಿನ ನನ್ನ ಪವಿತ್ರವಾದ ಗುಡಾರದ ಗತಿಯನ್ನು ತರುತ್ತೇನೆ. ಜಗತ್ತಿನ ಜನರು ಬೇರೆ ನಗರಗಳಿಗೆ ದುರ್ಗತಿ ಬರಲಿ ಎಂದು ಕೇಳಿಕೊಳ್ಳುವಾಗ ಜೆರುಸಲೇಮನ್ನು ಜ್ಞಾಪಿಸಿಕೊಳ್ಳುವರು.’”
7 ಯೆಹೋವನ ಆಲಯದಲ್ಲಿ ಯೆರೆಮೀಯನು ಹೇಳಿದ ಇದೆಲ್ಲವನ್ನು ಯಾಜಕರು, ಪ್ರವಾದಿಗಳು ಮತ್ತು ಎಲ್ಲಾ ಜನರು ಕೇಳಿದರು. 8 ಯೆಹೋವನು ಜನರಿಗೆ ತಿಳಿಸಬೇಕೆಂದು ಹೇಳಿದ ಎಲ್ಲವನ್ನು ಯೆರೆಮೀಯನು ಹೇಳಿ ಮುಗಿಸಿದನು. ಆಗ ಯಾಜಕರು, ಪ್ರವಾದಿಗಳು ಮತ್ತು ಎಲ್ಲಾ ಜನರು ಯೆರೆಮೀಯನನ್ನು ಹಿಡಿದುಕೊಂಡರು. ಅವರು “ನೀನು ಇಂಥಾ ಭಯಂಕರವಾದ ವಿಷಯವನ್ನು ಹೇಳಿದ್ದಕ್ಕಾಗಿ ನಿನಗೆ ಮರಣವೇ ಗತಿ! 9 ಯೆಹೋವನ ಹೆಸರಿನಲ್ಲಿ ಹಾಗೆ ಪ್ರವಾದಿಸಲು ನಿನಗೆ ಹೇಗೆ ಧೈರ್ಯ ಬಂದಿತು? ಶಿಲೋವಿನಂತೆ ಯೆಹೋವನ ಈ ಆಲಯವು ಹಾಳಾಗುವದೆಂದು ಹೇಳಲು ನಿನಗೆ ಹೇಗೆ ಧೈರ್ಯ ಬಂದಿತು? ಜೆರುಸಲೇಮು ಜನರಿಲ್ಲದ ಒಂದು ಮರುಭೂಮಿಯಾಗುವುದೆಂದು ಹೇಳಲು ನಿನಗೆ ಹೇಗೆ ಧೈರ್ಯ ಬಂದಿತು?” ಎಂದು ಕೇಳಿದರು. ಯೆಹೋವನ ಆಲಯದಲ್ಲಿ ಎಲ್ಲಾ ಜನರು ಯೆರೆಮೀಯನನ್ನು ಮುತ್ತಿದರು.
10 ನಡೆಯುತ್ತಿರುವ ಎಲ್ಲಾ ಘಟನೆಗಳ ಬಗ್ಗೆ ಯೆಹೂದದ ಅಧಿಪತಿಗಳು ಕೇಳಿದರು. ಅವರು ರಾಜನ ಅರಮನೆಯಿಂದ ಹೊರಗೆ ಬಂದರು. ಅವರು ಯೆಹೋವನ ಆಲಯದವರೆಗೆ ಹೋದರು. ಅಲ್ಲಿ ಅವರು ಹೊಸ ಬಾಗಿಲಿನಲ್ಲಿದ್ದ ತಮ್ಮ ಆಸನಗಳಲ್ಲಿ ಕುಳಿತುಕೊಂಡರು. ಹೊಸಬಾಗಿಲಿನಿಂದ ದಾರಿ ಯೆಹೋವನ ಆಲಯಕ್ಕೆ ಹೋಗುತ್ತದೆ. 11 ಆಗ ಯಾಜಕರು ಮತ್ತು ಪ್ರವಾದಿಗಳು ಅಧಿಪತಿಗಳಿಗೂ ಇನ್ನುಳಿದ ಜನರಿಗೂ ಹೀಗೆ ಹೇಳಿದರು: “ಯೆರೆಮೀಯನನ್ನು ಕೊಲ್ಲಬೇಕು. ಅವನು ಜೆರುಸಲೇಮಿನ ಬಗ್ಗೆ ಕೆಟ್ಟ ಮಾತುಗಳನ್ನಾಡಿದ್ದಾನೆ. ಅವನು ಆಡಿದ ಆ ಮಾತುಗಳನ್ನು ನೀವೇ ಕೇಳಿದ್ದೀರಿ.”
12 ಆಗ ಯೆರೆಮೀಯನು ಯೆಹೂದದ ಸಕಲ ಸರದಾರರಿಗೂ ಸಮಸ್ತ ಜನರಿಗೂ ಹೀಗೆ ಹೇಳಿದನು: “ಈ ಆಲಯದ ಬಗ್ಗೆ ಮತ್ತು ಈ ನಗರದ ಬಗ್ಗೆ ಹೀಗೆ ಹೇಳಲು ಯೆಹೋವನು ನನ್ನನ್ನು ಕಳುಹಿಸಿಕೊಟ್ಟಿದ್ದಾನೆ. ನೀವು ಕೇಳಿದ ಪ್ರತಿಯೊಂದು ವಿಷಯವೂ ಯೆಹೋವನಿಂದಲೇ ಬಂದದ್ದು.
ಸ್ಮುರ್ನದಲ್ಲಿರುವ ಸಭೆಗೆ ಯೇಸುವಿನ ಪತ್ರ
8 “ಸ್ಮುರ್ನದಲ್ಲಿರುವ ಸಭೆಯ ದೂತನಿಗೆ ಇದನ್ನು ಬರೆ:
“ಆದಿಯೂ ಅಂತ್ಯವೂ ಆಗಿರುವಾತನು ನಿನಗೆ ಇವುಗಳನ್ನು ಹೇಳುತ್ತಾನೆ. ಸತ್ತು ಜೀವಂತವಾಗಿ ಎದ್ದುಬಂದಾತನು ಆತನೇ.
9 “ನಿನ್ನ ಸಂಕಟಗಳನ್ನು ನಾನು ಬಲ್ಲೆನು. ನೀನು ಬಡವನೆಂಬುದೂ ನನಗೆ ತಿಳಿದಿದೆ. ಆದರೆ ನೀನು ನಿಜವಾಗಿಯೂ ಶ್ರೀಮಂತ. ನಿನ್ನ ಬಗ್ಗೆ ಕೆಲವು ಜನರು ಹೇಳುವ ಕೆಟ್ಟ ಸಂಗತಿಗಳು ನನಗೆ ತಿಳಿದಿವೆ. ಆ ಜನರು ತಮ್ಮನ್ನು ಯೆಹೂದ್ಯರೆಂದು ಹೇಳಿಕೊಳ್ಳುತ್ತಾರೆ. ಆದರೆ ಅವರು ನಿಜವಾದ ಯೆಹೂದ್ಯರಲ್ಲ. ಅವರು ಸೈತಾನನ ಸಮಾಜದವರಾಗಿದ್ದಾರೆ. 10 ನಿನಗೆ ಸಂಭವಿಸುವ ಸಂಗತಿಗಳ ವಿಷಯದಲ್ಲಿ ಭಯಪಡಬೇಡ. ನಾನು ನಿನಗೆ ಹೇಳುವುದೇನೆಂದರೆ, ಸೈತಾನನು ನಿಮ್ಮಲ್ಲಿ ಕೆಲವರನ್ನು ಪರೀಕ್ಷಿಸುವುದಕ್ಕಾಗಿ ಸೆರೆಮನೆಗೆ ಹಾಕಿಸುತ್ತಾನೆ. ನೀವು ಹತ್ತು ದಿನಗಳ ಕಾಲ ಸಂಕಟವನ್ನು ಅನುಭವಿಸುವಿರಿ. ನೀನು ಸಾಯಬೇಕಾದರೂ ನಂಬಿಗಸ್ತನಾಗಿದ್ದರೆ, ನಾನು ನಿನಗೆ ಜೀವವೆಂಬ ಕಿರೀಟವನ್ನು ದಯಪಾಲಿಸುವೆನು.
11 “ಪವಿತ್ರಾತ್ಮನು ಸಭೆಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು. ಜಯಹೊಂದುವವನಿಗೆ ಎರಡನೆಯ ಮರಣದಿಂದ ಕೇಡಾಗುವುದೇ ಇಲ್ಲ.
Kannada Holy Bible: Easy-to-Read Version. All rights reserved. © 1997 Bible League International