Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 105:1-11

105 ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ. ಆತನ ಹೆಸರನ್ನು ಆರಾಧಿಸಿರಿ.
    ಆತನ ಅದ್ಭುತಕಾರ್ಯಗಳ ಕುರಿತು ಜನಾಂಗಗಳಿಗೆ ಸಾರಿ ಹೇಳಿರಿ.
ಯೆಹೋವನಿಗೆ ಗಾನಮಾಡಿರಿ; ಆತನನ್ನು ಸಂಕೀರ್ತಿಸಿರಿ.
    ಆತನ ಮಹತ್ಕಾರ್ಯಗಳ ಕುರಿತು ಕೊಂಡಾಡಿರಿ.
ಆತನ ಪವಿತ್ರ ನಾಮದಲ್ಲಿ ಹೆಮ್ಮೆಪಡಿರಿ.
    ಯೆಹೋವನ ಆರಾಧಕರೇ, ಸಂತೋಷಪಡಿರಿ.
ಯೆಹೋವನನ್ನೂ ಆತನ ಬಲವನ್ನೂ ಆಶ್ರಯಿಸಿಕೊಳ್ಳಿರಿ;
    ಸಹಾಯಕ್ಕಾಗಿ ಆತನ ಬಳಿಗೇ ಹೋಗಿರಿ.
ಆತನ ಅದ್ಭುತಕಾರ್ಯಗಳನ್ನು ಜ್ಞಾಪಿಸಿಕೊಳ್ಳಿರಿ.
    ಆತನ ಮಹತ್ಕಾರ್ಯಗಳನ್ನೂ ವಿವೇಕದ ನಿರ್ಧಾರಗಳನ್ನೂ ಜ್ಞಾಪಿಸಿಕೊಳ್ಳಿರಿ.
ನೀವು ಆತನ ಸೇವಕನಾದ ಅಬ್ರಹಾಮನ ಸಂತತಿಯವರಾಗಿದ್ದೀರಿ;
    ಆತನು ಆರಿಸಿಕೊಂಡ ಯಾಕೋಬನ ಸಂತತಿಯವರಾಗಿದ್ದೀರಿ.
ಯೆಹೋವನೇ ನಮ್ಮ ದೇವರು.
    ಆತನು ಇಡೀ ಪ್ರಪಂಚವನ್ನು ಆಳುವನು.[a]
ಆತನು ತನ್ನ ಒಡಂಬಡಿಕೆಯನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವನು.
    ಆತನು ತನ್ನ ಆಜ್ಞೆಗಳನ್ನು ಸಾವಿರ ತಲೆಮಾರುಗಳವರೆಗೂ ಜ್ಞಾಪಿಸಿಕೊಳ್ಳುವನು.
ಆತನು ಅಬ್ರಹಾಮನೊಡನೆ ಒಡಂಬಡಿಕೆ ಮಾಡಿಕೊಂಡನು.
    ಆತನು ಇಸಾಕನಿಗೆ ವಾಗ್ದಾನ ಮಾಡಿದನು.
10 ಆತನು ಅದನ್ನು ಯಾಕೋಬನಿಗೆ ಕಟ್ಟಳೆಯನ್ನಾಗಿ ಮಾಡಿದನು.
    ದೇವರು ಇಸ್ರೇಲನೊಂದಿಗೆ ತನ್ನ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಂಡನು.
11 “ನಾನು ನಿನಗೆ ಕಾನಾನ್ ದೇಶವನ್ನು ಕೊಡುವೆನು.
    ಆ ದೇಶವು ನಿನ್ನದಾಗಿರುತ್ತದೆ” ಎಂದು ಆತನು ಹೇಳಿದನು.

ಕೀರ್ತನೆಗಳು 105:37-45

37 ಆತನು ತನ್ನ ಜನರನ್ನು ಈಜಿಪ್ಟಿನಿಂದ ಕರೆದುಕೊಂಡು ಹೋದನು.
    ಅವರು ತಮ್ಮೊಂದಿಗೆ ಬೆಳ್ಳಿಬಂಗಾರಗಳನ್ನು ತೆಗೆದುಕೊಂಡು ಬಂದರು.
    ದೇವಜನರಲ್ಲಿ ಯಾರೂ ಎಡವಿಬೀಳಲಿಲ್ಲ.
38 ದೇವಜನರು ಈಜಿಪ್ಟಿನಿಂದ ಹೊರಟಾಗ ಸಂತೋಷಪಟ್ಟರು;
    ಯಾಕೆಂದರೆ ಅವರು ದೇವಜನರಿಗೆ ಹೆದರಿಕೊಂಡಿದ್ದರು.
39 ಆತನು ಹಗಲಿನಲ್ಲಿ ನೆರಳಿಗೋಸ್ಕರ ಮೋಡವನ್ನು ಕಂಬಳಿಯಂತೆ ಹರಡಿದನು;
    ರಾತ್ರಿಯಲ್ಲಿ ಬೆಳಕಿಗಾಗಿ ಅಗ್ನಿಸ್ತಂಭವನ್ನು ದಯಪಾಲಿಸಿದನು.
40 ಜನರು ಮಾಂಸಕ್ಕಾಗಿ ಕೇಳಿಕೊಂಡಾಗ ಆತನು ಅವರಿಗೆ ಲಾವಕ್ಕಿಗಳನ್ನು ಬರಮಾಡಿದನು;
    ಪರಲೋಕದಿಂದ ಮನ್ನವನ್ನು ದಯಪಾಲಿಸಿದನು.
41 ಆತನು ಬಂಡೆಯನ್ನು ಸೀಳಿದಾಗ ನೀರು ಚಿಮ್ಮುತ್ತಾ ಹೊರಬಂದಿತು;
    ಅರಣ್ಯದಲ್ಲಿ ನದಿಯು ಹರಿಯತೊಡಗಿತು!

42 ಆತನು ತನ್ನ ಸೇವಕನಾದ ಆಬ್ರಹಾಮನಿಗೆ
    ತಾನು ಮಾಡಿದ ವಾಗ್ದಾನವನ್ನು ಜ್ಞಾಪಿಸಿಕೊಂಡನು.
43 ಆತನು ತನ್ನ ಜನರನ್ನು ಈಜಿಪ್ಟಿನಿಂದ ಹೊರತಂದನು.
    ಜನರು ಉಲ್ಲಾಸಪಡುತ್ತಾ ಹರ್ಷಗೀತೆಗಳನ್ನು ಹಾಡುತ್ತಾ ಹೊರಬಂದರು!
44 ಅನ್ಯಜನರು ವಾಸವಾಗಿದ್ದ ದೇಶವನ್ನು ದೇವರು ತನ್ನ ಜನರಿಗೆ ಕೊಟ್ಟನು.
    ಅನ್ಯಜನರು ದುಡಿದು ಸಂಪಾದಿಸಿದ್ದವುಗಳನ್ನು ದೇವಜನರು ಪಡೆದುಕೊಂಡರು.
45 ತನ್ನ ಜನರು ತನ್ನ ಕಟ್ಟಳೆಗಳಿಗೆ ವಿಧೇಯರಾಗಲೆಂದೂ
    ತನ್ನ ಉಪದೇಶಗಳನ್ನು ಎಚ್ಚರಿಕೆಯಿಂದ ಪಾಲಿಸಲೆಂದೂ ಆತನು ಹೀಗೆ ಮಾಡಿದನು.

ಯೆಹೋವನನ್ನು ಕೊಂಡಾಡಿರಿ.

ಜ್ಞಾನೋಕ್ತಿಗಳು 4:10-27

10 ಮಗನೇ, ನನ್ನ ಮಾತನ್ನು ಕೇಳು. ನಾನು ಹೇಳಿದಂತೆ ಮಾಡು, ಆಗ ನೀನು ಬಹುಕಾಲ ಬದುಕುವೆ. 11 ನಾನು ನಿನಗೆ ಜ್ಞಾನದ ಕುರಿತು ಉಪದೇಶಿಸುತ್ತಿರುವೆನು. ನಾನು ನಿನ್ನನ್ನು ಧರ್ಮದ ಮಾರ್ಗದಲ್ಲಿ ನಡೆಸುತ್ತಿರುವೆನು. 12 ಈ ದಾರಿಯಲ್ಲೇ ಹೋಗು, ಆಗ ನಿನ್ನ ಕಾಲುಗಳು ಇಕ್ಕಟ್ಟಿಗೆ ಸಿಕ್ಕಿಕೊಳ್ಳುವುದಿಲ್ಲ. ನೀನು ಓಡಿದರೂ ಮುಗ್ಗರಿಸುವುದಿಲ್ಲ. 13 ಈ ಉಪದೇಶಗಳನ್ನು ಯಾವಾಗಲೂ ನೆನಪುಮಾಡಿಕೊ; ಮರೆತುಬಿಡಬೇಡ. ಅವು ನಿನಗೆ ಜೀವವಾಗಿವೆ!

14 ಕೆಡುಕರ ಮಾರ್ಗದಲ್ಲಿ ನಡೆಯಬೇಡ. ಅವರಂತೆ ಜೀವಿಸಬೇಡ. 15 ದುಷ್ಟತನಕ್ಕೆ ದೂರವಾಗಿರು. ಅದರ ಬಳಿಗೆ ಹೋಗಬೇಡ. ನೇರವಾಗಿ ನಡೆದು ಅದರಿಂದ ದೂರವಾಗು. 16 ಏನಾದರೂ ಕೇಡುಮಾಡದಿದ್ದರೆ ಕೆಡುಕರಿಗೆ ನಿದ್ರೆಬಾರದು. ಯಾರಿಗಾದರೂ ನೋವು ಮಾಡದೆ ಅವರು ನಿದ್ರಿಸಲಾರರು. 17 ಅವರು ಬೇರೆಯವರಿಗೆ ಕೇಡನ್ನಾಗಲಿ ನೋವನ್ನಾಗಲಿ ಮಾಡದೆ ಜೀವಿಸಲಾರರು. ಅದೇ ಅವರ ಆಹಾರ ಮತ್ತು ಪಾನೀಯ.

18 ನೀತಿವಂತರ ಜೀವಿತವು ಮಧ್ಯಾಹ್ನದವರೆಗೂ ಹೆಚ್ಚುತ್ತಾ ಬರುವ ಮುಂಜಾನೆಯ ಬೆಳಕಿನಂತಿರುವುದು. 19 ಆದರೆ ದುಷ್ಟರ ಜೀವಿತವು ರಾತ್ರಿಯ ಕತ್ತಲೆಯಂತಿದೆ. ಅವರು ಕತ್ತಲೆಯಲ್ಲಿ ತಪ್ಪಿಸಿಕೊಂಡಿದ್ದು ತಮಗೆ ಕಾಣದ ವಸ್ತುಗಳ ಮೇಲೆ ಎಡವಿ ಬೀಳುತ್ತಾರೆ.

20 ನನ್ನ ಮಗನೇ, ನನ್ನ ಮಾತುಗಳಿಗೆ ಗಮನಕೊಡು. ನನ್ನ ನುಡಿಗಳಿಗೆ ಕಿವಿಗೊಡು. 21 ನಿನ್ನ ದೃಷ್ಟಿಯು ಅವುಗಳ ಮೇಲಿರಲಿ, ಅವುಗಳನ್ನು ನಿನ್ನ ನೆನಪಿನಲ್ಲಿಟ್ಟುಕೋ. 22 ನನ್ನ ಉಪದೇಶಕ್ಕೆ ಕಿವಿಗೊಡುವವರು ಜೀವವನ್ನು ಹೊಂದಿಕೊಳ್ಳುವರು. ನನ್ನ ಮಾತುಗಳು ದೇಹಕ್ಕೆ ಒಳ್ಳೆಯ ಆರೋಗ್ಯವನ್ನು ನೀಡುತ್ತವೆ. 23 ನಿನ್ನ ಆಲೋಚನೆಗಳ ವಿಷಯದಲ್ಲಿ ಎಚ್ಚರಿಕೆಯಿಂದಿರು. ನಿನ್ನ ನಡತೆಯು ನಿನ್ನ ಆಲೋಚನೆಗಳ ಮೇಲೆ ಆಧಾರಗೊಂಡಿದೆ.

24 ಸತ್ಯವನ್ನು ಸೊಟ್ಟಗೆ ಮಾಡದಿರು; ಸುಳ್ಳನ್ನು ಹೇಳದಿರು. 25 ಒಳ್ಳೆಯದನ್ನೇ ದೃಷ್ಟಿಸು; ನಿನ್ನ ನೋಟವನ್ನು ನಿನ್ನ ಗುರಿಯ ಮೇಲೆ ಕೇಂದ್ರೀಕರಿಸು. 26 ನಿನ್ನ ಕಾರ್ಯಗಳನ್ನು ಎಚ್ಚರಿಕೆಯಿಂದ ಮಾಡು; ಆಗ ನಿನ್ನ ಜೀವನವು ದೃಢವಾಗಿರುವುದು. 27 ಒಳ್ಳೆಯ ಮಾರ್ಗವನ್ನು ಬಿಟ್ಟು ಹೋಗಬೇಡ; ಆದರೆ ಕೆಡುಕಿಗೆ ಯಾವಾಗಲೂ ದೂರವಾಗಿರು.

ಲೂಕ 6:12-19

ಯೇಸುವಿನ ಹನ್ನೆರಡು ಮಂದಿ ಅಪೊಸ್ತಲರು

(ಮತ್ತಾಯ 10:1-4; ಮಾರ್ಕ 3:13-19)

12 ಆ ಸಮಯದಲ್ಲಿ ಯೇಸು ಪ್ರಾರ್ಥನೆ ಮಾಡುವುದಕ್ಕಾಗಿ ಬೆಟ್ಟಕ್ಕೆ ಹೋದನು. ದೇವರಲ್ಲಿ ಪ್ರಾರ್ಥಿಸುತ್ತಾ ರಾತ್ರಿಯೆಲ್ಲಾ ಅಲ್ಲೇ ಇದ್ದನು. 13 ಮರುದಿನ ಬೆಳಿಗ್ಗೆ, ಯೇಸು ತನ್ನ ಶಿಷ್ಯರನ್ನು ಕರೆದನು. ಅವರಲ್ಲಿ ಹನ್ನೆರಡು ಮಂದಿಯನ್ನು ಆತನು ಆರಿಸಿಕೊಂಡನು. ಯೇಸು ಈ ಹನ್ನೆರಡು ಜನರಿಗೆ, “ಅಪೊಸ್ತಲರು” ಎಂದು ಹೆಸರಿಟ್ಟನು. ಅವರು ಯಾರೆಂದರೆ:

14 ಸೀಮೋನ (ಯೇಸು ಅವನಿಗೆ ಪೇತ್ರನೆಂದು ಹೆಸರಿಟ್ಟನು.)

ಮತ್ತು ಪೇತ್ರನ ಸಹೋದರನಾದ ಅಂದ್ರೆಯ,

ಯಾಕೋಬ

ಮತ್ತು ಯೋಹಾನ,

ಫಿಲಿಪ್ಪ

ಮತ್ತು ಬಾರ್ತೊಲೊಮಾಯ,

15 ಮತ್ತಾಯ,

ತೋಮ,

ಯಾಕೋಬ (ಅಲ್ಫಾಯನ ಮಗ)

ಮತ್ತು ದೇಶಾಭಿಮಾನಿ[a] ಎನಿಸಿಕೊಂಡಿದ್ದ ಸಿಮೋನ,

16 ಯೂದ (ಯಾಕೋಬನ ಮಗ)

ಮತ್ತು ಇಸ್ಕರಿಯೋತ ಯೂದ (ಯೇಸುವಿಗೆ ದ್ರೋಹ ಮಾಡಿದವನು ಇವನೇ.)

ಯೇಸುವಿನ ಉಪದೇಶ ಮತ್ತು ಜನರಿಗೆ ಆರೋಗ್ಯದಾನ

(ಮತ್ತಾಯ 4:23-25; 5:1-12)

17 ಯೇಸು ಮತ್ತು ಅಪೊಸ್ತಲರು ಬೆಟ್ಟದಿಂದಿಳಿದು ಸಮತಟ್ಟಾದ ಸ್ಥಳಕ್ಕೆ ಬಂದರು. ಆತನ ಹಿಂಬಾಲಕರ ಒಂದು ದೊಡ್ಡ ಗುಂಪು ಅಲ್ಲಿ ನೆರೆದಿತ್ತು. ಜುದೇಯ ಪ್ರಾಂತ್ಯದಿಂದಲೂ ಜೆರುಸಲೇಮಿನಿಂದಲೂ ಜನಸಮೂಹವು ಅಲ್ಲಿಗೆ ಬಂದಿತ್ತು. 18 ಅವರೆಲ್ಲರು ಯೇಸುವಿನ ಉಪದೇಶವನ್ನು ಕೇಳುವುದಕ್ಕೂ ಆತನಿಂದ ವಾಸಿಮಾಡಿಸಿಕೊಳ್ಳುವುದಕ್ಕೂ ಬಂದಿದ್ದರು. ದೆವ್ವಗಳಿಂದ ಪೀಡಿತರಾಗಿದ್ದ ಜನರನ್ನು ಯೇಸು ವಾಸಿಮಾಡಿದನು. 19 ಜನರೆಲ್ಲರೂ ಯೇಸುವನ್ನು ಮುಟ್ಟುವುದಕ್ಕೆ ಪ್ರಯತ್ನಿಸಿದರು, ಏಕೆಂದರೆ ಆತನಿಂದ ಶಕ್ತಿಯು ಹರಿದುಬಂದು ಎಲ್ಲರನ್ನೂ ಗುಣಪಡಿಸುತ್ತಿತ್ತು!

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International