Revised Common Lectionary (Complementary)
ರಚನೆಗಾರ: ದಾವೀದ.
6 ಯೆಹೋವನೇ, ಕೋಪದಿಂದ ನನ್ನನ್ನು ಶಿಕ್ಷಿಸಬೇಡ;
ರೋಷದಿಂದ ನನ್ನನ್ನು ದಂಡಿಸಬೇಡ.
2 ಯೆಹೋವನೇ, ನನ್ನನ್ನು ಕನಿಕರಿಸು!
ನಾನು ರೋಗಿಯಾಗಿದ್ದೇನೆ, ಬಲಹೀನನಾಗಿದ್ದೇನೆ,
ನನ್ನನ್ನು ಗುಣಪಡಿಸು! ನನ್ನ ಎಲುಬುಗಳು ನಡುಗುತ್ತಿವೆ.
3 ನನ್ನ ಇಡೀ ದೇಹ ನಡುಗುತ್ತಿದೆ.
ಯೆಹೋವನೇ, ನನ್ನನ್ನು ಗುಣಪಡಿಸಲು ಇನ್ನೆಷ್ಟುಕಾಲ ಬೇಕು?
4 ಯೆಹೋವನೇ, ನನ್ನನ್ನು ಮತ್ತೆ ಬಲಪಡಿಸು!
ನಿನ್ನ ಮಹಾಕೃಪೆಯಿಂದ ನನ್ನನ್ನು ರಕ್ಷಿಸು.
5 ಸತ್ತವರು ನಿನ್ನನ್ನು ಜ್ಞಾಪಿಸಿಕೊಳ್ಳುವರೇ?
ಸಮಾಧಿಗಳಲ್ಲಿರುವವರು ನಿನ್ನನ್ನು ಸ್ತುತಿಸುವರೇ?
ಆದ್ದರಿಂದ ನನ್ನನ್ನು ಗುಣಪಡಿಸು.
6 ಯೆಹೋವನೇ, ರಾತ್ರಿಯೆಲ್ಲಾ ನಿನಗೆ ಪ್ರಾರ್ಥಿಸಿದೆನು.
ನನ್ನ ಹಾಸಿಗೆಯು ನನ್ನ ಕಣ್ಣೀರಿನಿಂದ ಒದ್ದೆಯಾಗಿದೆ.
ನನ್ನ ಹಾಸಿಗೆಯಿಂದ ಕಣ್ಣೀರು ತೊಟ್ಟಿಕ್ಕುತ್ತಿದೆ.
ನಾನು ಅತ್ತು ಗೋಳಾಡಿ ಬಲಹೀನನಾಗಿದ್ದೇನೆ.
7 ನನ್ನ ವೈರಿಗಳು ನನಗೆ ಅನೇಕ ತೊಂದರೆಗಳನ್ನು ಮಾಡಿರುವುದರಿಂದ ನನಗೆ ದುಃಖವೂ ಗೋಳಾಟವೂ ಉಂಟಾಗಿವೆ.
ನನ್ನ ಕಣ್ಣುಗಳು ಬಲಹೀನಗೊಂಡಿವೆ; ಅತ್ತತ್ತು ಆಯಾಸಗೊಂಡಿವೆ.
8 ದುಷ್ಟರೇ, ತೊಲಗಿಹೋಗಿರಿ.
ಯಾಕೆಂದರೆ ಯೆಹೋವನು ನನ್ನ ಗೋಳಾಟಕ್ಕೆ ಕಿವಿಗೊಟ್ಟಿದ್ದಾನೆ.
9 ಯೆಹೋವನು ನನ್ನ ವಿಜ್ಞಾಪನೆಯನ್ನು ಕೇಳಿದ್ದಾನೆ.
ಆತನು ನನ್ನ ಪ್ರಾರ್ಥನೆಯನ್ನು ಸ್ವೀಕರಿಸಿ ಸದುತ್ತರವನ್ನು ದಯಪಾಲಿಸುವನು.
10 ನನ್ನ ವೈರಿಗಳೆಲ್ಲ ಗಲಿಬಿಲಿಗೊಂಡು ನಿರಾಶರಾಗುವರು.
ಇದ್ದಕ್ಕಿದ್ದಂತೆ ಅವಮಾನಿತರಾಗಿ ಹಿಂತಿರುಗುವರು.
ಯೆರೆಮೀಯನನ್ನು ಒಂದು ಬಾವಿಯಲ್ಲಿ ಹಾಕಲಾಯಿತು.
38 ಯೆರೆಮೀಯನು ಪ್ರವಾದಿಸುತ್ತಿರುವುದನ್ನು ಕೆಲವು ಜನ ರಾಜಾಧಿಕಾರಿಗಳು ಕೇಳಿಸಿಕೊಂಡರು. ಮತ್ತಾನನ ಮಗನಾದ ಶೆಫತ್ಯ, ಪಷ್ಹೂರನ ಮಗನಾದ ಗೆದಲ್ಯ, ಸೆಲೆಮ್ಯನ ಮಗನಾದ ಯೂಕಲ, ಮಲ್ಕೀಯನ ಮಗನಾದ ಪಷ್ಹೂರ ಇವರುಗಳು ಅವನ ಮಾತನ್ನೆಲ್ಲಾ ಕೇಳಿಸಿಕೊಂಡರು. ಯೆರೆಮೀಯನು ಎಲ್ಲಾ ಜನರಿಗೆ ಈ ಸಂದೇಶವನ್ನು ಹೇಳುತ್ತಿದ್ದನು. 2 “ಯೆಹೋವನು ಹೀಗೆನ್ನುತ್ತಾನೆ: ‘ಜೆರುಸಲೇಮಿನಲ್ಲಿರುವ ಪ್ರತಿಯೊಬ್ಬರು ಖಡ್ಗದಿಂದಾಗಲಿ ಕ್ಷಾಮದಿಂದಾಗಲಿ ಭಯಂಕರವಾದ ವ್ಯಾಧಿಯಿಂದಾಗಲಿ ಸತ್ತುಹೋಗುವರು. ಆದರೆ ಬಾಬಿಲೋನಿನ ಸೈನಿಕರಿಗೆ ಶರಣಾಗುವ ಪ್ರತಿಯೊಬ್ಬರು ಬದುಕುವರು. ಅವರು ಜೀವಂತ ಉಳಿಯುವರು.’ 3 ಯೆಹೋವನು ಹೀಗೆನ್ನುತ್ತಾನೆ: ‘ಈ ಜೆರುಸಲೇಮ್ ನಗರವನ್ನು ಖಂಡಿತವಾಗಿಯೂ ಬಾಬಿಲೋನ್ ರಾಜನ ಸೈನಿಕರ ಕೈಗೆ ಒಪ್ಪಿಸಲಾಗುವುದು. ಅವನು ಈ ನಗರವನ್ನು ಸ್ವಾಧೀನಪಡಿಸಿಕೊಳ್ಳುವನು.’”
4 ಯೆರೆಮೀಯನು ಜನರಿಗೆ ಹೇಳುತ್ತಿರುವ ವಿಷಯಗಳನ್ನು ಕೇಳಿದ ರಾಜಾಧಿಕಾರಿಗಳು ರಾಜನಾದ ಚಿದ್ಕೀಯನ ಬಳಿಗೆ ಹೋಗಿ, “ಯೆರೆಮೀಯನಿಗೆ ಮರಣದಂಡನೆಯಾಗಬೇಕು. ಇನ್ನೂ ನಗರದಲ್ಲಿರುವ ಸೈನಿಕರನ್ನೂ ಎಲ್ಲರನ್ನೂ ತನ್ನ ಮಾತುಗಳಿಂದ ಧೈರ್ಯಗೆಡಿಸುತ್ತಿದ್ದಾನೆ. ನಮಗೆ ಒಳ್ಳೆಯದಾಗಬೇಕೆಂದು ಅವನು ಬಯಸದೆ ಜೆರುಸಲೇಮಿನ ಜನರ ನಾಶನವನ್ನು ಬಯಸುತ್ತಾನೆ” ಎಂದು ಹೇಳಿದರು.
5 ಆಗ ರಾಜನಾದ ಚಿದ್ಕೀಯನು, “ಯೆರೆಮೀಯನು ನಿಮ್ಮ ಅಧಿನದಲ್ಲಿದ್ದಾನೆ. ನೀವು ಏನು ಬೇಕಾದರೂ ಮಾಡಿ” ಎಂದು ಆ ಅಧಿಕಾರಿಗಳಿಗೆ ಹೇಳಿದನು.
6 ಆಗ ಆ ಅಧಿಕಾರಿಗಳು ಯೆರೆಮೀಯನನ್ನು ಹಿಡಿದು ಮಲ್ಕೀಯನ ಬಾವಿಯೊಳಗೆ ಹಾಕಿದರು. (ಮಲ್ಕೀಯನು ರಾಜವಂಶದವನಾಗಿದ್ದನು.) ಆ ಬಾವಿಯು ಕಾರಾಗೃಹದ ಅಂಗಳದಲ್ಲಿತ್ತು. ಆ ಅಧಿಕಾರಿಗಳು ಹಗ್ಗಗಳನ್ನು ಕಟ್ಟಿ ಯೆರೆಮೀಯನನ್ನು ಬಾವಿಯಲ್ಲಿ ಇಳಿಬಿಟ್ಟರು. ಆ ಬಾವಿಯಲ್ಲಿ ಸ್ವಲ್ಪವೂ ನೀರಿರಲಿಲ್ಲ. ಕೇವಲ ಕೇಸರಿತ್ತು. ಯೆರೆಮೀಯನು ಕೆಸರಿನಲ್ಲಿ ಮುಳುಗಿಹೋದನು.
7 ಆ ಅಧಿಕಾರಿಗಳು ಯೆರೆಮೀಯನನ್ನು ಬಾವಿಗೆ ಹಾಕಿದ ಸಂಗತಿಯು ಎಬೆದ್ಮೆಲೆಕನೆಂಬ ಮನುಷ್ಯನ ಕಿವಿಗೆ ಬಿತ್ತು. ಎಬೆದ್ಮೆಲೆಕನು ಇಥಿಯೋಪಿಯದವನಾಗಿದ್ದು ಅರಮನೆಯಲ್ಲಿ ಕಂಚುಕಿಯಾಗಿದ್ದನು. ರಾಜನಾದ ಚಿದ್ಕೀಯನು ಬೆನ್ಯಾಮೀನ್ ಊರ ಬಾಗಲಲ್ಲಿ ಕುಳಿತಿದ್ದನು. ಎಬೆದ್ಮೆಲೆಕನು ಅರಮನೆಯನ್ನು ಬಿಟ್ಟು ಬೆನ್ಯಾಮೀನ್ ಊರಹೆಬ್ಬಾಗಿಲಿನ ಹತ್ತಿರ ಕುಳಿತಿದ್ದ ರಾಜನಾದ ಚಿದ್ಕೀಯನ ಹತ್ತಿರ ಬಂದು ಹೀಗೆ ಹೇಳಿದನು: 8-9 “ನನ್ನ ಒಡೆಯನಾದ ರಾಜನೇ, ಆ ಅಧಿಕಾರಿಗಳು ದುಷ್ಟ ರೀತಿಯಲ್ಲಿ ವರ್ತಿಸಿದ್ದಾರೆ. ಅವರು ಪ್ರವಾದಿಯಾದ ಯೆರೆಮೀಯನೊಂದಿಗೆ ದುಷ್ಟತನದಿಂದ ವ್ಯವಹರಿಸಿದ್ದಾರೆ. ಅವರು ಅವನನ್ನು ಒಂದು ಬಾವಿಯಲ್ಲಿ ಎಸೆದಿದ್ದಾರೆ. ಅವನನ್ನು ಅಲ್ಲಿಯೇ ಸಾಯಲು ಬಿಟ್ಟಿದ್ದಾರೆ” ಎಂದು ಹೇಳಿದನು.
10 ಆಗ ರಾಜನಾದ ಚಿದ್ಕೀಯನು ಇಥಿಯೋಪಿಯದವನಾದ ಎಬೆದ್ಮೆಲೆಕನಿಗೆ, “ಅರಮನೆಯಿಂದ ಮೂರು ಜನರನ್ನು ನಿನ್ನ ಸಂಗಡ ಕರೆದುಕೊಂಡು ಹೋಗು. ಯೆರೆಮೀಯನನ್ನು ಅವನು ಸಾಯುವ ಮುಂಚೆ ಬಾವಿಯಿಂದ ಮೇಲೆತ್ತು” ಎಂದು ಅಪ್ಪಣೆಕೊಟ್ಟನು.
11 ಎಬೆದ್ಮೆಲೆಕನು ಆ ಜನರನ್ನು ಕರೆದುಕೊಂಡು ಹೊರಟನು. ಅವನು ಮೊದಲು ಅರಮನೆಯ ಉಗ್ರಾಣದ ಕೆಳಗಿರುವ ಕೋಣೆಗೆ ಹೋದನು. ಆ ಕೋಣೆಯಿಂದ ಅವನು ಕೆಲವು ಹಳೆಯದಾದ ಮತ್ತು ಹರಿದುಹೋದ ಬಟ್ಟೆಗಳನ್ನು ತೆಗೆದುಕೊಂಡನು. ಆ ಚಿಂದಿಬಟ್ಟೆಗಳನ್ನು ಒಂದು ಹಗ್ಗಕ್ಕೆ ಕಟ್ಟಿ ಆಳವಾದ ಬಾವಿಯಲ್ಲಿ ಯೆರೆಮೀಯನಿಗೆ ತಲುಪುವಂತೆ ಇಳಿಬಿಟ್ಟನು. 12 ಆಗ ಇಥಿಯೋಪಿಯದವನಾದ ಎಬೆದ್ಮೆಲೆಕನು, “ಆ ಹರಿದುಹೋದ ಮತ್ತು ಹಳೆಯದಾದ ಬಟ್ಟೆಗಳನ್ನು ನಿನ್ನ ಕಂಕುಳಲ್ಲಿ ಇಟ್ಟುಕೋ. ನಾವು ನಿನ್ನನ್ನು ಮೇಲಕ್ಕೆಳೆಯುವಾಗ ನಿನ್ನ ಕಂಕುಳಿಗೆ ಹಗ್ಗಗಳಿಂದ ಗಾಯಗಳಾಗುವದಿಲ್ಲ” ಎಂದನು. ಯೆರೆಮೀಯನು ಎಬೆದ್ಮೆಲೆಕನು ಹೇಳಿದಂತೆ ಮಾಡಿದನು. 13 ಅವರು ಯೆರೆಮೀಯನನ್ನು ಹಗ್ಗದಿಂದ ಮೇಲಕ್ಕೆ ಎಳೆದು ಬಾವಿಯಿಂದ ಹೊರತೆಗೆದರು. ಯೆರೆಮೀಯನು ಕಾರಾಗೃಹದ ಅಂಗಳದಲ್ಲಿ ವಾಸಿಸಿದನು.
5 ಯೇಸು ಈ ಹನ್ನೆರಡು ಅಪೊಸ್ತಲರಿಗೆ ಕೆಲವು ಆಜ್ಞೆಗಳನ್ನು ನೀಡಿ ಪರಲೋಕರಾಜ್ಯವನ್ನು ಕುರಿತು ತಿಳಿಸುವುದಕ್ಕಾಗಿ ಅವರನ್ನು ಕಳುಹಿಸಿದನು. ಯೇಸು ಅವರಿಗೆ ಹೇಳಿದ್ದೇನೆಂದರೆ: “ಯೆಹೂದ್ಯರಲ್ಲದ ಜನರ ಬಳಿಗಾಗಲಿ ಸಮಾರ್ಯದವರು ವಾಸಿಸುವ ಯಾವ ಊರಿಗಾಗಲಿ ಹೋಗಬೇಡಿ. 6 ಆದರೆ ತಪ್ಪಿಸಿಕೊಂಡ ಕುರಿಗಳಂತಿರುವ ಇಸ್ರೇಲರ ಬಳಿಗೆ ಹೋಗಿ, 7 ಪರಲೋಕರಾಜ್ಯವು ಬೇಗನೆ ಬರುತ್ತದೆ ಎಂದು ಬೋಧಿಸಿ. 8 ರೋಗಿಗಳನ್ನು ವಾಸಿಮಾಡಿರಿ. ಸತ್ತವರನ್ನು ಬದುಕಿಸಿರಿ. ಕುಷ್ಠರೋಗಿಗಳನ್ನು ವಾಸಿಮಾಡಿರಿ. ಜನರನ್ನು ದೆವ್ವಗಳಿಂದ ಬಿಡಿಸಿರಿ. ನಾನು ನಿಮಗೆ ಈ ಅಧಿಕಾರಗಳನ್ನು ಉಚಿತವಾಗಿ ಕೊಡುತ್ತೇನೆ. ಆದ್ದರಿಂದ ಬೇರೆಯವರಿಗೆ ಉಚಿತವಾಗಿ ಸಹಾಯಮಾಡಿ. 9 ನಿಮ್ಮೊಂದಿಗೆ ಹಣವನ್ನಾಗಲಿ ತಾಮ್ರ, ಬೆಳ್ಳಿಬಂಗಾರಗಳನ್ನಾಗಲಿ ತೆಗೆದುಕೊಂಡು ಹೋಗಬೇಡಿ. 10 ಚೀಲವನ್ನಾಗಲಿ ಹೆಚ್ಚಿನ ಬಟ್ಟೆಗಳನ್ನಾಗಲಿ ಪಾದರಕ್ಷೆಗಳನ್ನಾಗಲಿ ಊರುಗೋಲುಗಳನ್ನಾಗಲಿ ತೆಗೆದುಕೊಂಡು ಹೋಗಬೇಡಿ. ಕೆಲಸಗಾರನಿಗೆ ಅಗತ್ಯವಾದವುಗಳನ್ನು ಒದಗಿಸಲಾಗುವುದು.
11 “ನೀವು ಯಾವುದೇ ಊರಿನೊಳಕ್ಕೆ ಅಥವಾ ನಗರಕ್ಕೆ ಪ್ರವೇಶಿಸಿದಾಗ ಅಲ್ಲಿರುವ ಉತ್ತಮ ವ್ಯಕ್ತಿಯನ್ನು ಗುರುತಿಸಿ, ನೀವು ಆ ಊರನ್ನು ಬಿಡುವ ತನಕ ಅವನ ಮನೆಯಲ್ಲೇ ತಂಗಿರಿ. 12 ಆ ಮನೆಗೆ ನೀವು ಪ್ರವೇಶಿಸಿದಾಗ, ‘ನಿಮಗೆ ಶುಭವಾಗಲಿ’ ಎಂದು ಹೇಳಿರಿ. 13 ಆ ಮನೆಯಲ್ಲಿರುವ ಜನರು ನಿಮ್ಮನ್ನು ಸ್ವಾಗತಿಸಿದರೆ ನಿಮ್ಮ ಆಶೀರ್ವಾದಕ್ಕೆ ಅವರು ಯೋಗ್ಯರಾಗಿರುವುದರಿಂದ ಆ ಆಶೀರ್ವಾದವು ಅವರಿಗೆ ದೊರೆಯಲಿ. ಅವರು ನಿಮ್ಮನ್ನು ಸ್ವಾಗತಿಸದಿದ್ದರೆ, ನಿಮ್ಮ ಆಶೀರ್ವಾದವು ನಿಮಗೇ ಹಿಂತಿರುಗಿಬರಲಿ. 14 ಒಂದು ಮನೆಯವರು ಅಥವಾ ಒಂದು ಊರಿನವರು ನಿಮ್ಮನ್ನು ಸ್ವಾಗತಿಸದಿದ್ದರೆ ಇಲ್ಲವೇ ನಿಮ್ಮ ಮಾತನ್ನು ಕೇಳದಿದ್ದರೆ ನೀವು ಆ ಸ್ಥಳವನ್ನು ಬಿಟ್ಟುಹೋಗುವಾಗ, ನಿಮ್ಮ ಕಾಲಿಗೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ. 15 ನ್ಯಾಯವಿಚಾರಣೆಯ ದಿನದಲ್ಲಿ ಈ ಊರಿನ ಗತಿಯು ಸೊದೋಮ್ ಮತ್ತು ಗೊಮೋರಗಳಿಗಿಂತ ಬಹಳ ಕೆಟ್ಟದ್ದಾಗಿರುವುದು ಎಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ.
ಹಿಂಸೆಯ ಕುರಿತು ಯೇಸುವಿನ ಎಚ್ಚರಿಕೆ
(ಮಾರ್ಕ 13:9-13; ಲೂಕ 21:12-17)
16 “ಕೇಳಿರಿ! ತೋಳಗಳ ನಡುವೆ ಕುರಿಗಳನ್ನು ಬಿಟ್ಟಂತೆ ನಾನು ನಿಮ್ಮನ್ನು ಕಳುಹಿಸುತ್ತಿದ್ದೇನೆ. ಆದ್ದರಿಂದ ನೀವು ಹಾವುಗಳಂತೆ ಸೂಕ್ಷ್ಮ ಬುದ್ದಿಯುಳ್ಳವರಾಗಿರಿ, ಪಾರಿವಾಳಗಳಂತೆ ಯಾವ ಹಾನಿಯನ್ನೂ ಮಾಡದಿರಿ. 17 ಜನರ ವಿಷಯದಲ್ಲಿ ಎಚ್ಚರಿಕೆಯಿಂದಿರಿ. ನಿಮ್ಮನ್ನು ಅವರು ಬಂಧಿಸಿ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗುವರು. ಅವರು ತಮ್ಮ ಸಭಾಮಂದಿರಗಳಲ್ಲಿ ನಿಮ್ಮನ್ನು ಕೊರಡೆಗಳಿಂದ ಹೊಡೆಯುವರು. 18 ನಿಮ್ಮನ್ನು ಅಧಿಕಾರಿಗಳ ಸಮ್ಮುಖಕ್ಕೂ ಅರಸುಗಳ ಸಮ್ಮುಖಕ್ಕೂ ಕರೆದುಕೊಂಡು ಹೋಗುವರು. ನನ್ನ ನಿಮಿತ್ತ ಜನರು ನಿಮಗೆ ಹೀಗೆ ಮಾಡುವರು. ಆದರೆ ನೀವು ಆ ಅರಸುಗಳಿಗೂ ಅಧಿಕಾರಿಗಳಿಗೂ ಯಹೂದ್ಯರಲ್ಲದ ಜನರಿಗೂ ನನ್ನ ವಿಷಯವಾಗಿ ಹೇಳುವಿರಿ. 19 ನಿಮ್ಮನ್ನು ಬಂಧಿಸಿದಾಗ ನೀವು ಏನು ಮಾತಾಡಬೇಕು, ಹೇಗೆ ಮಾತಾಡಬೇಕು ಎಂದು ಚಿಂತಿಸಬೇಡಿ. ನೀವು ಹೇಳಬೇಕಾದುವುಗಳನ್ನು ಆ ಸಮಯದಲ್ಲಿ ನಿಮಗೆ ಅನುಗ್ರಹಿಸಲಾಗುವುದು. 20 ಮಾತಾಡುವವರು ನಿಜವಾಗಿಯೂ ನೀವಲ್ಲ. ನಿಮ್ಮ ತಂದೆಯ ಆತ್ಮನೇ ನಿಮ್ಮ ಮೂಲಕ ಮಾತನಾಡುತ್ತಾನೆ.
21 “ಸಹೋದರರು ಸ್ವಂತ ಸಹೋದರರಿಗೆ ವಿರೋಧವಾಗಿ ತಿರುಗಿಬಿದ್ದು ಅವರನ್ನು ಮರಣದಂಡನೆಗೆ ಒಪ್ಪಿಸುವರು. ತಂದೆಯಂದಿರು ತಮ್ಮ ಸ್ವಂತ ಮಕ್ಕಳಿಗೆ ವಿರೋಧವಾಗಿ ತಿರುಗಿಬಿದ್ದು ಅವರನ್ನು ಮರಣದಂಡನೆಗೆ ಒಪ್ಪಿಸುವರು. 22 ನೀವು ನನ್ನನ್ನು ಹಿಂಬಾಲಿಸುವುದರಿಂದ ಜನರೆಲ್ಲರೂ ನಿಮ್ಮನ್ನು ದ್ವೇಷಿಸುತ್ತಾರೆ. ಆದರೆ ಕಡೆಯವರೆಗೂ ತಾಳಿಕೊಳ್ಳುವವನು ರಕ್ಷಣೆ ಹೊಂದುವನು. 23 ಒಂದು ಊರಿನಲ್ಲಿ ನಿಮ್ಮನ್ನು ಹಿಂಸಿಸಿದರೆ ಮತ್ತೊಂದು ಊರಿಗೆ ಹೋಗಿ. ಮನುಷ್ಯಕುಮಾರನು ಪುನಃ ಬರುವುದಕ್ಕಿಂತ ಮುಂಚೆ ನೀವು ಇಸ್ರೇಲರ ಊರುಗಳಿಗೆಲ್ಲಾ ಹೋಗುವುದನ್ನು ಮುಗಿಸಿರುವುದಿಲ್ಲ ಎಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ.
Kannada Holy Bible: Easy-to-Read Version. All rights reserved. © 1997 Bible League International