Revised Common Lectionary (Complementary)
15 ಜನರು ತಮ್ಮ ದೋಷವನ್ನು ಒಪ್ಪಿಕೊಳ್ಳುವ ತನಕ
ನಾನು ನನ್ನ ಸ್ಥಳಕ್ಕೆ ಹಿಂತಿರುಗಿ ಹೋಗುವೆನು,
ಅವರು ನನ್ನನ್ನು ಹುಡುಕುವರು.
ಹೌದು, ತಮ್ಮ ಸಂಕಟದಲ್ಲಿ ನನ್ನನ್ನು ಹುಡುಕಲು ಅತಿಯಾಗಿ ಪ್ರಯತ್ನಿಸುವರು.”
ಯೆಹೋವನ ಬಳಿಗೆ ಹಿಂತಿರುಗಿ ಬರುವಾಗ ದೊರಕುವ ಬಹುಮಾನ
6 “ಬನ್ನಿರಿ, ನಾವು ಯೆಹೋವನ ಬಳಿಗೆ ಹಿಂತಿರುಗೋಣ.
ಆತನು ನಮಗೆ ಗಾಯ ಮಾಡಿದರೂ ಗುಣಮಾಡುವನು.
ನಮ್ಮ ಗಾಯಗಳಿಗೆ ಬಟ್ಟೆಯನ್ನು ಸುತ್ತುವನು.
2 ಎರಡು ದಿವಸಗಳ ತರುವಾಯ ನಮ್ಮನ್ನು ತಿರುಗಿ ಜೀವಂತ ಮಾಡುವನು.
ಮೂರನೇ ದಿವಸದಲ್ಲಿ ನಮ್ಮನ್ನು ಎಬ್ಬಿಸುವನು.
ಆಗ ನಾವು ಆತನ ಸಮೀಪದಲ್ಲಿ ವಾಸಿಸಬಹುದು.
3 ಯೆಹೋವನ ವಿಷಯವಾಗಿ ನಾವು ಕಲಿಯೋಣ.
ಆತನನ್ನು ಅರಿತುಕೊಳ್ಳಲು ಅತಿಯಾಗಿ ಪ್ರಯತ್ನಿಸೋಣ.
ಸೂರ್ಯೋದಯ ಆಗುತ್ತದೆಯೆಂಬುದು ನಮಗೆ ಗೊತ್ತಿರುವಂತೆಯೇ ಆತನು ಬರುವುದೂ ನಮಗೆ ಗೊತ್ತಿದೆ.
ವಸಂತಕಾಲದ ಮಳೆಯಂತೆ ಯೆಹೋವನು ಬರುವನು.”
ಜನರು ನಿಷ್ಠಾವಂತರಲ್ಲ
4 “ಎಫ್ರಾಯೀಮೇ, ನಿನಗೆ ನಾನು ಏನು ಮಾಡಲಿ?
ಯೆಹೂದವೇ, ನಿನಗೆ ನಾನು ಏನು ಮಾಡಬೇಕು?
ನಿನ್ನ ನಂಬಿಗಸ್ತಿಕೆಯು ಮುಂಜಾನೆಯ ಮಂಜಿನಂತಿದೆ.
ನಿನ್ನ ನಂಬಿಗಸ್ತಿಕೆಯು ಇಬ್ಬನಿಯಂತಿದೆ.
ಅದು ಬೇಗನೆ ಇಲ್ಲದೆಹೋಗುವದು.
5 ನಾನು ಪ್ರವಾದಿಗಳ ಮೂಲಕ ಜನರಿಗೆ ಕಟ್ಟಳೆಗಳನ್ನು ವಿಧಿಸಿದೆನು.
ನನ್ನ ಅಪ್ಪಣೆಯ ಮೇರೆಗೆ ಜನರು ಕೊಲ್ಲಲ್ಪಟ್ಟರು.
6 ಯಾಕೆಂದರೆ ನನಗೆ ವಿಧೇಯತೆಯಿಂದ
ಕೂಡಿದ ಪ್ರೀತಿಯು ಬೇಕೇ ಹೊರತು ಯಜ್ಞವಲ್ಲ.
ಜನರು ತರುವ ಸರ್ವಾಂಗಹೋಮಗಳಿಗಿಂತಲೂ
ಅವರು ನನ್ನನ್ನು (ದೇವರನ್ನು) ತಿಳಿದುಕೊಳ್ಳಬೇಕೆಂಬುದೇ ನನಗೆ ಇಷ್ಟ.
7 ದೇವರು ಹೀಗೆನ್ನುತ್ತಾನೆ: “ನನ್ನ ಜನರೇ, ಇಸ್ರೇಲರೇ, ನನಗೆ ಕಿವಿಗೊಡಿರಿ!
ನಾನು ನಿಮಗೆ ವಿರುದ್ಧವಾಗಿ ಸಾಕ್ಷಿ ಹೇಳುವೆನು.
ದೇವರಾದ ನಾನೇ ನಿಮ್ಮ ದೇವರು!
8 ನಿಮ್ಮ ಯಜ್ಞಗಳ ಬಗ್ಗೆ ನಾನು ದೂರು ಹೇಳುತ್ತಿಲ್ಲ.
ಇಸ್ರೇಲರಾದ ನೀವು ನನಗೆ ಸರ್ವಾಂಗಹೋಮಗಳನ್ನು ನಿತ್ಯವೂ ಅರ್ಪಿಸುತ್ತಲೇ ಇದ್ದೀರಿ.
9 ನಿಮ್ಮಮನೆಗಳಿಂದ ನಾನು ಹೋರಿಗಳನ್ನು ತೆಗೆದುಕೊಳ್ಳುವುದಿಲ್ಲ;
ನಿಮ್ಮ ದೊಡ್ಡಿಗಳಿಂದ ಆಡುಗಳನ್ನು ತೆಗೆದುಕೊಳ್ಳುವುದಿಲ್ಲ.
10 ನನಗೆ ಆ ಪಶುಗಳ ಅಗತ್ಯವಿಲ್ಲ.
ಕಾಡಿನಲ್ಲಿರುವ ಸರ್ವ ಮೃಗಗಳೂ ಗುಡ್ಡಗಳ ಮೇಲಿರುವ ಸಾವಿರಾರು ಪಶುಗಳೂ ನನ್ನವೇ.
11 ಅತ್ಯಂತ ಉನ್ನತವಾದ ಬೆಟ್ಟಗಳ ಮೇಲಿರುವ ಪಕ್ಷಿಗಳೆಲ್ಲಾ ನನಗೆ ಗೊತ್ತುಂಟು.
ಬೆಟ್ಟಗಳ ಮೇಲೆ ಚಲಿಸುವ ಜೀವಜಂತುಗಳೆಲ್ಲಾ ನನ್ನವೇ.
12 ನನಗೆ ಹಸಿವೆಯಾಗಿದ್ದರೆ, ಆಹಾರಕ್ಕಾಗಿ ನಿಮ್ಮನ್ನು ಕೇಳಬೇಕಿಲ್ಲ.
ಲೋಕವೂ ಅದರಲ್ಲಿರುವ ಸಮಸ್ತವೂ ನನ್ನದೇ.
13 ನಾನು ಹೋರಿಗಳ ಮಾಂಸವನ್ನು ತಿನ್ನುವೆನೇ?
ನಾನು ಆಡುಗಳ ರಕ್ತವನ್ನು ಕುಡಿಯುವೆನೇ?”
14 ಕೃತಜ್ಞತಾಯಜ್ಞಗಳನ್ನು ದೇವರಿಗೆ ಅರ್ಪಿಸಿರಿ.
ನೀವು ಮಾಡಿಕೊಂಡ ಹರಕೆಗಳನ್ನು ಮಹೋನ್ನತನಿಗೆ ಸಲ್ಲಿಸಿರಿ.
15 ದೇವರು ಹೀಗೆನ್ನುತ್ತಾನೆ: “ಆಪತ್ಕಾಲಗಳಲ್ಲಿ ನನಗೆ ಮೊರೆಯಿಡಿರಿ!
ನಾನು ನಿಮಗೆ ಸಹಾಯ ಮಾಡುವೆನು, ಆಗ ನೀವು ನನ್ನನ್ನು ಸನ್ಮಾನಿಸುವಿರಿ.”
ವಾಗ್ದಾನವನ್ನು ಹೊಂದಿಕೊಳ್ಳಲು ನಂಬಿಕೆಯೇ ಮಾರ್ಗ
13 ಅಬ್ರಹಾಮನಿಗೂ ಅವನ ಸಂತತಿಯವರಿಗೂ ಜಗತ್ತನ್ನೇ ಕೊಡುವುದಾಗಿ ದೇವರು ವಾಗ್ದಾನ ಮಾಡಿದನು. ಆದರೆ ಅಬ್ರಹಾಮನು ಆ ವಾಗ್ದಾನವನ್ನು ಹೊಂದಿಕೊಂಡದ್ದು ಧರ್ಮಶಾಸ್ತ್ರವನ್ನು ಅನುಸರಿಸಿದ್ದರಿಂದಲ್ಲ. ಅಬ್ರಹಾಮನು ನಂಬಿಕೆಯ ಮೂಲಕ ನೀತಿವಂತನಾದ ಕಾರಣ ಆ ವಾಗ್ದಾನವನ್ನು ಹೊಂದಿಕೊಂಡನು. 14 ದೇವರು ವಾಗ್ದಾನ ಮಾಡಿದವುಗಳನ್ನು ಜನರು ಧರ್ಮಶಾಸ್ತ್ರವನ್ನು ಅನುಸರಿಸುವುದರ ಮೂಲಕ ಹೊಂದಿಕೊಳ್ಳಬಲ್ಲವರಾಗಿದ್ದರೆ, ನಂಬಿಕೆಯು ನಿಷ್ಪ್ರಯೋಜಕವಾಗಿದೆ. ಅಲ್ಲದೆ ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನವೂ ನಿಷ್ಪ್ರಯೋಜಕವಾಗಿದೆ. 15 ಏಕೆಂದರೆ ಧರ್ಮಶಾಸ್ತ್ರಕ್ಕೆ ವಿಧೇಯರಾಗದೆ ಹೋದಾಗ, ಧರ್ಮಶಾಸ್ತ್ರವು ದೇವರ ಕೋಪವನ್ನು ಮಾತ್ರ ತರುತ್ತದೆ. ಆದರೆ ಧರ್ಮಶಾಸ್ತ್ರವು ಇಲ್ಲದಿದ್ದರೆ ಅವಿಧೇಯರಾಗುವುದಕ್ಕೆ ಏನೂ ಇರುವುದಿಲ್ಲ.
16 ಆದಕಾರಣ ಜನರು ನಂಬಿಕೆಯ ಮೂಲಕವಾಗಿ ದೇವರ ವಾಗ್ದಾನವನ್ನು ಹೊಂದಿಕೊಳ್ಳುವರು. ವಾಗ್ದಾನವು ಉಚಿತ ಕೊಡುಗೆಯಾಗಬೇಕೆಂತಲೇ ಹೀಗಾಯಿತು. ವಾಗ್ದಾನವು ಉಚಿತ ಕೊಡುಗೆಯಾಗಿದ್ದರೆ, ಅಬ್ರಹಾಮನ ಜನರೆಲ್ಲರೂ ಆ ವಾಗ್ದಾನವನ್ನು ಹೊಂದಿಕೊಳ್ಳುವರು. ಈ ವಾಗ್ದಾನವನ್ನು ಮೋಶೆಯ ಧರ್ಮಶಾಸ್ತ್ರಕ್ಕೆ ಅಧೀನರಾಗಿ ಜೀವಿಸುವ ಜನರಿಗೆ ಮಾತ್ರವಲ್ಲ, ಅಬ್ರಹಾಮನಂತೆ ನಂಬಿಕೆಯಲ್ಲಿ ಜೀವಿಸುವ ಎಲ್ಲರಿಗೂ ಕೊಡಲಾಗಿದೆ. ಅಬ್ರಹಾಮನು ನಮ್ಮೆಲ್ಲರಿಗೂ ತಂದೆಯಾಗಿದ್ದಾನೆ. 17 “ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ತಂದೆಯನ್ನಾಗಿ ಮಾಡಿದ್ದೇನೆ”(A) ಎಂದು ಪವಿತ್ರ ಗ್ರಂಥದಲ್ಲೇ ಬರೆದಿದೆ. ಇದು ದೇವರ ಸನ್ನಿಧಿಯಲ್ಲಿ ಸತ್ಯವಾಗಿದೆ. ಸತ್ತವರಿಗೆ ಜೀವವನ್ನು ಕೊಡುವವನೂ ಇನ್ನೂ ಸಂಭವಿಸಿಲ್ಲದ ಕಾರ್ಯಗಳನ್ನು ಮಾಡುವವನೂ ಆಗಿರುವ ದೇವರನ್ನು ಅಬ್ರಹಾಮನು ನಂಬಿದನು.
18 ಅಬ್ರಹಾಮನಿಗೆ ಮಕ್ಕಳಾಗುವ ಆಸ್ಪದವೇ ಇರಲಿಲ್ಲ. ಆದರೂ ಅವನು ದೇವರನ್ನು ನಂಬಿ ತನ್ನ ನಿರೀಕ್ಷೆಯಲ್ಲಿಯೇ ಮುಂದುವರೆದನು. ಆದಕಾರಣವೇ ಅವನು ಅನೇಕ ಜನಾಂಗಗಳಿಗೆ ತಂದೆಯಾದನು. ದೇವರು ಅವನಿಗೆ, “ನೀನು ಅನೇಕ ಜನಾಂಗಗಳನ್ನು ಪಡೆಯುವೆ”(B) ಎಂದು ಹೇಳಿದ್ದಂತೆಯೇ ಇದಾಯಿತು. 19 ಅಬ್ರಹಾಮನು ಸುಮಾರು ನೂರು ವರ್ಷದವನಾಗಿದ್ದರಿಂದ ಅವನ ದೇಹವು ದುರ್ಬಲವಾಗಿತ್ತು. ಆದಕಾರಣ ಅವನು ಮಕ್ಕಳನ್ನು ಪಡೆಯುವ ಸಾಧ್ಯತೆ ಇರಲಿಲ್ಲ. ಅಲ್ಲದೆ ಸಾರಳಿಗೂ ಮಕ್ಕಳಾಗುವ ಸಾಧ್ಯತೆ ಇರಲಿಲ್ಲ. ಅಬ್ರಹಾಮನು ಇದರ ಬಗ್ಗೆ ಆಲೋಚಿಸಿದನು. ಆದರೂ ದೇವರ ಮೇಲೆ ಅವನಿಗಿದ್ದ ನಂಬಿಕೆಯು ಬಲಹೀನವಾಗಲಿಲ್ಲ. 20 ದೇವರು ಮಾಡಿದ ವಾಗ್ದಾನದ ವಿಷಯದಲ್ಲಿ ಅವನು ಸಂಶಯಪಡಲಿಲ್ಲ ಮತ್ತು ತನ್ನ ನಂಬಿಕೆಯನ್ನು ಕೊನೆಗೊಳಿಸಲಿಲ್ಲ. ಅವನು ತನ್ನ ನಂಬಿಕೆಯಲ್ಲಿ ಬಲವಾಗಿ ಬೆಳೆದನು ಮತ್ತು ದೇವರಿಗೆ ಸ್ತೋತ್ರ ಸಲ್ಲಿಸಿದನು. 21 ದೇವರು ತಾನು ಮಾಡಿದ ವಾಗ್ದಾನವನ್ನು ಖಂಡಿತವಾಗಿ ನೆರವೇರಿಸಬಲ್ಲನೆಂದು ಅಬ್ರಹಾಮನು ದೃಢವಾಗಿ ನಂಬಿದನು. 22 ಆದ್ದರಿಂದ, “ದೇವರು ಅಬ್ರಹಾಮನ ನಂಬಿಕೆಯನ್ನು ಸ್ವೀಕರಿಸಿದನು. ಅದು ಅವನನ್ನು ನೀತಿವಂತನನ್ನಾಗಿ ಮಾಡಿತು.” 23 ಆ ಮಾತುಗಳು ಬರೆಯಲ್ಪಟ್ಟಿರುವುದು ಅಬ್ರಹಾಮನಿಗೆ ಮಾತ್ರವಲ್ಲ. 24 ನಮಗಾಗಿಯೂ ಬರೆಯಲ್ಪಟ್ಟಿವೆ. ನಾವು ನಂಬುವುದರಿಂದ ದೇವರು ನಮ್ಮನ್ನು ಸಹ ಸ್ವೀಕರಿಸಿಕೊಳ್ಳುವನು. ನಮ್ಮ ಪ್ರಭುವಾದ ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದಾತನಲ್ಲಿ (ದೇವರಲ್ಲಿ) ನಾವು ನಂಬಿಕೆ ಇಡುತ್ತೇವೆ. 25 ನಮ್ಮ ಪಾಪಗಳ ದೆಸೆಯಿಂದ ಯೇಸುವನ್ನು ಮರಣಕ್ಕೆ ಒಪ್ಪಿಸಲಾಯಿತು. ನಮ್ಮನ್ನು ನೀತಿವಂತರನ್ನಾಗಿ ಮಾಡುವುದಕ್ಕಾಗಿ ಆತನನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಲಾಯಿತು.
ಸುಂಕದವನು
(ಮಾರ್ಕ 2:13-17; ಲೂಕ 5:27-32)
9 ಯೇಸು ಹೋಗುತ್ತಿರುವಾಗ, ಮತ್ತಾಯ ಎಂಬ ವ್ಯಕ್ತಿಯನ್ನು ಕಂಡನು. ಮತ್ತಾಯನು ಸುಂಕದಕಟ್ಟೆಯಲ್ಲಿ ಕುಳಿತಿದ್ದನು. ಯೇಸು ಅವನಿಗೆ, “ನನ್ನನ್ನು ಹಿಂಬಾಲಿಸು” ಅಂದನು. ಆಗ ಮತ್ತಾಯನು ಎದ್ದು ಯೇಸುವನ್ನು ಹಿಂಬಾಲಿಸಿದನು.
10 ಯೇಸು ಮತ್ತಾಯನ ಮನೆಯಲ್ಲಿ ಊಟಕ್ಕೆ ಕುಳಿತುಕೊಂಡನು. ಅನೇಕ ಮಂದಿ ಸುಂಕವಸೂಲಿಗಾರರು ಮತ್ತು ಕೆಟ್ಟ ಜನರು ಸಹ ಯೇಸುವಿನ ಸಂಗಡ ಮತ್ತು ಆತನ ಹಿಂಬಾಲಕರ ಸಂಗಡ ಊಟಕ್ಕೆ ಕುಳಿತುಕೊಂಡರು. 11 ಇದನ್ನು ಕಂಡ ಫರಿಸಾಯರು ಯೇಸುವಿನ ಶಿಷ್ಯರಿಗೆ, “ನಿಮ್ಮ ಬೋಧಕನು ಸುಂಕವಸೂಲಿಗಾರರೊಂದಿಗೆ ಮತ್ತು ಕೆಟ್ಟ ಜನರೊಂದಿಗೆ ಏಕೆ ಊಟಮಾಡುತ್ತಾನೆ?” ಎಂದು ಕೇಳಿದರು.
12 ಫರಿಸಾಯರು ಹೇಳಿದ್ದನ್ನು ಕೇಳಿಸಿಕೊಂಡ ಯೇಸು ಅವರಿಗೆ, “ಆರೋಗ್ಯವುಳ್ಳ ಜನರಿಗೆ ವೈದ್ಯನ ಅವಶ್ಯಕತೆಯಿಲ್ಲ. ಕಾಯಿಲೆಯ ಜನರಿಗೆ ವೈದ್ಯನು ಅವಶ್ಯ. 13 ನೀವು ಹೋಗಿ, ‘ನನಗೆ ಯಜ್ಞ ಬೇಡ, ದಯೆ ಬೇಕು’(A) ಎಂದು ಪವಿತ್ರ ಗ್ರಂಥದಲ್ಲಿ ಬರೆದಿರುವ ವಾಕ್ಯದ ಅರ್ಥವನ್ನು ಕಲಿತುಕೊಳ್ಳಿ. ನಾನು ನೀತಿವಂತರನ್ನು ಕರೆಯಲು ಬರಲಿಲ್ಲ, ಪಾಪಿಗಳನ್ನು ಕರೆಯಲು ಬಂದೆನು” ಎಂದು ಹೇಳಿದನು.
ಮರುಜೀವ ಹೊಂದಿದ ಬಾಲಕಿ ಮತ್ತು ಗುಣಮುಖಳಾದ ಸ್ತ್ರೀ
(ಮಾರ್ಕ 5:21-43; ಲೂಕ 8:40-56)
18 ಯೇಸು ಈ ಸಂಗತಿಗಳನ್ನು ಹೇಳುತ್ತಿರುವಾಗ ಸಭಾಮಂದಿರದ ಅಧಿಕಾರಿಯೊಬ್ಬನು ಆತನ ಬಳಿಗೆ ಬಂದು ಆತನಿಗೆ ಬಾಗಿ ನಮಸ್ಕರಿಸಿ, “ನನ್ನ ಮಗಳು ಈಗ ತಾನೇ ಸತ್ತುಹೋದಳು. ನೀನು ಬಂದು ಅವಳನ್ನು ಮುಟ್ಟಿದರೆ ಅವಳು ಮತ್ತೆ ಜೀವಂತಳಾಗುವಳು” ಎಂದು ಹೇಳಿದನು.
19 ಆದ್ದರಿಂದ ಯೇಸು ಎದ್ದು ಅಧಿಕಾರಿಯ ಸಂಗಡ ಹೋದನು. ಯೇಸುವಿನ ಶಿಷ್ಯರು ಸಹ ಹೋದರು.
20 ಹನ್ನೆರಡು ವರ್ಷಗಳಿಂದ ರಕ್ತಸ್ರಾವ ಕಾಯಿಲೆ ಹೊಂದಿದ್ದ ಒಬ್ಬ ಹೆಂಗಸು ಅಲ್ಲಿದ್ದಳು. ಆ ಹೆಂಗಸು ಯೇಸುವಿನ ಹಿಂದೆಯೇ ಬಂದು ಆತನ ಮೇಲಂಗಿಯ ತುದಿಯನ್ನು ಮುಟ್ಟಿದಳು. 21 ಆ ಹೆಂಗಸು, “ನಾನು ಆತನ ಅಂಗಿಯನ್ನು ಮುಟ್ಟಿದರೆ ಸಾಕು, ನಾನು ಗುಣವಾಗಬಲ್ಲೆ” ಎಂದು ಆಲೋಚನೆ ಮಾಡಿಕೊಂಡಿದ್ದಳು.
22 ಯೇಸು ಹಿಂತಿರುಗಿ ಆ ಹೆಂಗಸನ್ನು ನೋಡಿ, “ಮಗಳೇ, ಸಂತೋಷಪಡು! ನಿನ್ನ ನಂಬಿಕೆಯಿಂದಲೇ ನಿನಗೆ ಗುಣವಾಯಿತು” ಎಂದು ಹೇಳಿದನು. ಆಗ ಅವಳು ಗುಣಮುಖಳಾದಳು.
23 ಬಳಿಕ ಯೇಸು ಅಧಿಕಾರಿಯೊಡನೆ ಮುಂದೆ ಸಾಗಿ ಅವನ ಮನೆಯೊಳಕ್ಕೆ ಹೋದನು. ಶವಸಂಸ್ಕಾರಕ್ಕಾಗಿ ಬಂದಿದ್ದ ವಾದ್ಯವೃಂದದವರಿಗೂ ಗೋಳಾಡುತ್ತಿದ್ದವರಿಗೂ ಯೇಸು, 24 “ದೂರ ಹೋಗಿರಿ, ಹುಡುಗಿ ಸತ್ತಿಲ್ಲ. ಅವಳು ನಿದ್ದೆ ಮಾಡುತ್ತಿದ್ದಾಳೆ” ಅಂದನು. ಆದರೆ ಅವರು ಯೇಸುವನ್ನು ಅಪಹಾಸ್ಯ ಮಾಡಿದರು. 25 ಜನರನ್ನು ಮನೆಯ ಹೊರಗೆ ಕಳುಹಿಸಿದ ಮೇಲೆ ಯೇಸು ಹುಡುಗಿಯ ಕೋಣೆಯ ಒಳಗೆ ಹೋದನು. ಯೇಸು ಹುಡುಗಿಯ ಕೈಯನ್ನು ಹಿಡಿದಾಗ ಆ ಹುಡುಗಿಯು ಎದ್ದುನಿಂತಳು. 26 ಈ ಸುದ್ದಿಯು ಸುತ್ತಮುತ್ತಲಿನ ಪ್ರದೇಶದಲ್ಲೆಲ್ಲಾ ಹಬ್ಬಿತು.
Kannada Holy Bible: Easy-to-Read Version. All rights reserved. © 1997 Bible League International