Revised Common Lectionary (Complementary)
ಎದೋಮ್ಯನಾದ ದೋಯೇಗನು ಸೌಲನ ಬಳಿಗೆ ಹೋಗಿ, “ದಾವೀದನು ಅಹೀಮೆಲೆಕನ ಮನೆಯಲ್ಲಿದ್ದಾನೆ” ಎಂದು ತಿಳಿಸಿದಾಗ ರಚಿಸಲ್ಪಟ್ಟ ಕೀರ್ತನೆಯಿದು. ರಚನೆಗಾರ: ದಾವೀದ.
52 ದುಷ್ಟಾಧಿಕಾರಿಯೇ, ನಿನ್ನ ದುಷ್ಕೃತ್ಯಗಳ ಕುರಿತು ಜಂಬಪಡುವುದೇಕೇ?
ದೇವರ ದೃಷ್ಟಿಗೆ ನೀನು ಅಸಹ್ಯಕರವಾಗಿರುವೆ.
2 ಮೋಸಗಾರನೇ, ನಿನ್ನ ನಾಲಗೆಯು ಹರಿತವಾದ ಕ್ಷೌರ ಕತ್ತಿಯಂತಿದ್ದು
ನಾಶನದ ಸಂಚುಗಳನ್ನೇ ಮಾಡುವುದು.
3 ಒಳ್ಳೆಯದಕ್ಕಿಂತಲೂ ಕೆಟ್ಟದ್ದನ್ನೇ ನೀನು ಹೆಚ್ಚು ಪ್ರೀತಿಸುವೆ.
ನಿನಗೆ ಸತ್ಯಕ್ಕಿಂತಲೂ ಸುಳ್ಳೇ ಇಷ್ಟ.
4 ಮೋಸದ ನಾಲಿಗೆಯೇ, ಹಾನಿಕರವಾದ ಮಾತುಗಳೇ ನಿನಗೆ ಇಷ್ಟ.
5 ದೇವರು ನಿನ್ನನ್ನು ಶಾಶ್ವತವಾಗಿ ನಾಶಮಾಡುವನು,
ಗಿಡವನ್ನು ಬೇರು ಸಹಿತ ಕಿತ್ತುಹಾಕುವಂತೆ ಆತನು ನಿನ್ನನ್ನು ಹಿಡಿದು ನಿನ್ನ ಮನೆಯೊಳಗಿಂದ[a] ಕಿತ್ತು ಬೀಸಾಡುವನು.
6 ಒಳ್ಳೆಯವರು ಇದನ್ನು ಕಂಡು
ದೇವರಲ್ಲಿ ಭಯಭಕ್ತಿಯುಳ್ಳವರಾಗುವರು.
ಅವರು ನಿಮ್ಮನ್ನು ನೋಡಿ ನಗುತ್ತಾ ಹೀಗೆನ್ನುವರು:
7 “ದೇವರ ಮೇಲೆ ಅವಲಂಬಿಸಿಕೊಳ್ಳದ ಇವನಿಗೆ ಏನಾಯಿತು?
ತನ್ನ ಐಶ್ವರ್ಯವೂ ಸುಳ್ಳುಗಳೂ ತನ್ನನ್ನು ಕಾಪಾಡುತ್ತವೆ ಎಂದು ಭಾವಿಸಿಕೊಂಡವನು ಇವನೇ.”
8 ನಾನಾದರೋ ದೇವರ ಆಲಯದ ಅಂಗಳದಲ್ಲಿ ಹಸಿರಸಿರಾಗಿ ಬೆಳೆಯುವ ಆಲೀವ್ ಮರದಂತಿದ್ದೇನೆ.
ನಾನು ದೇವರ ಶಾಶ್ವತವಾದ ಪ್ರೀತಿಯಲ್ಲೇ ಯಾವಾಗಲೂ ಭರವಸವಿಟ್ಟಿರುವೆ.
9 ದೇವರೇ, ನಿನ್ನ ಉಪಕಾರಗಳಿಗಾಗಿ ನಾನು ನಿನ್ನನ್ನು ಎಂದೆಂದಿಗೂ ಕೊಂಡಾಡುವೆನು.
ನಿನ್ನ ಹೆಸರಿನಲ್ಲೇ ಭರವಸವಿಟ್ಟಿರುವೆ; ಯಾಕೆಂದರೆ ನಿನ್ನ ಹೆಸರು ಎಷ್ಟೋ ಒಳ್ಳೆಯದು.
ನಿನ್ನ ಪವಿತ್ರ ಜನರ ಸನ್ನಿಧಿಯಲ್ಲಿ ನಿನ್ನನ್ನು ಕೊಂಡಾಡುವೆನು.
12 “ಆದರೆ ಮನುಷ್ಯನು ಜ್ಞಾನವನ್ನು ಕಂಡುಕೊಳ್ಳುವುದೆಲ್ಲಿ?
ವಿವೇಕವು ದೊರೆಯುವ ಸ್ಥಳವೆಲ್ಲಿ?
13 ಜ್ಞಾನದ ಬೆಲೆಯು ಯಾರಿಗೂ ಗೊತ್ತಿಲ್ಲ.
ಜನರು ನೆಲವನ್ನು ಅಗೆದು ಜ್ಞಾನವನ್ನು ಕಂಡುಕೊಳ್ಳಲು ಸಾಧ್ಯವಿಲ್ಲ.
14 ‘ಜ್ಞಾನವು ನನ್ನೊಂದಿಗಿಲ್ಲ’ ಎಂದು ಆಳವಾದ ಸಾಗರವು ಹೇಳುತ್ತದೆ.
‘ಜ್ಞಾನವು ನನ್ನೊಂದಿಗಿಲ್ಲ’ ಎಂದು ಸಮುದ್ರವು ಹೇಳುತ್ತದೆ.
15 ಬಂಗಾರವನ್ನು ಕೊಟ್ಟು ಜ್ಞಾನವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ.
ಇಡೀ ಲೋಕದ ಬೆಳ್ಳಿಯನ್ನು ಕೊಟ್ಟು ಜ್ಞಾನವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ.
16 ಓಫೀರ್ ದೇಶದ ಬಂಗಾರದಿಂದಾಗಲಿ ಅಮೂಲ್ಯವಾದ ಗೋಮೇಧಕ ರತ್ನದಿಂದಾಗಲಿ
ಇಂದ್ರನೀಲಮಣಿಗಳಿಂದಾಗಲಿ ಜ್ಞಾನವನ್ನು ಕೊಂಡುಕೊಳ್ಳಲಾಗದು.
17 ಜ್ಞಾನವು ಬಂಗಾರಕ್ಕಿಂತಲೂ ಶ್ರೇಷ್ಠವಾದ ಗಾಜಿಗಿಂತಲೂ ಹೆಚ್ಚು ಬೆಲೆಬಾಳುತ್ತದೆ.
ಬಂಗಾರದ ಆಭರಣಗಳು ಜ್ಞಾನವನ್ನು ಕೊಂಡುಕೊಳ್ಳಲಾರವು.
18 ಜ್ಞಾನವು ಹವಳಕ್ಕಿಂತಲೂ ಸ್ಪಟಿಕಕ್ಕಿಂತಲೂ ಹೆಚ್ಚು ಬೆಲೆ ಬಾಳುತ್ತದೆ.
ಜ್ಞಾನವು ಮಾಣಿಕ್ಯಕ್ಕಿಂತಲೂ ಅಮೂಲ್ಯವಾಗಿದೆ.
19 ಇಥಿಯೋಪಿಯಾ ದೇಶದ ಪುಷ್ಯರಾಗವೂ ಜ್ಞಾನದಷ್ಟು ಅಮೂಲ್ಯವಲ್ಲ.
ಶುದ್ಧಬಂಗಾರವನ್ನು ಕೊಟ್ಟು ಜ್ಞಾನವನ್ನು ಕೊಂಡುಕೊಳ್ಳಲು ಅಸಾಧ್ಯ.
20 “ಹೀಗಿರುವಲ್ಲಿ ಜ್ಞಾನವು ಎಲ್ಲಿಂದ ಬರುವುದು?
ವಿವೇಕವು ಎಲ್ಲಿ ದೊರಕುವುದು?
21 ಜ್ಞಾನವು ಎಲ್ಲಾ ಜೀವಿಗಳಿಗೂ ಮರೆಯಾಗಿದೆ.
ಆಕಾಶದ ಪಕ್ಷಿಗಳು ಸಹ ಅದನ್ನು ಕಾಣಲಾರವು.
22 ನಾಶಲೋಕವೂ ಮೃತ್ಯುವೂ,
‘ನಾವು ಜ್ಞಾನದ ಬಗ್ಗೆ ಸುದ್ದಿಗಳನ್ನು ಮಾತ್ರ ಕೇಳಿದ್ದೇವೆ’ ಎಂದು ಹೇಳುತ್ತವೆ.
23 “ಜ್ಞಾನದ ಮಾರ್ಗವನ್ನು ತಿಳಿದಿರುವವನು ದೇವರೊಬ್ಬನೇ.
ಅದರ ವಾಸಸ್ಥಳವು ಗೊತ್ತಿರುವುದು ಆತನಿಗೊಬ್ಬನಿಗೇ.
24 ದೇವರು ಭೂಮಿಯ ಕಟ್ಟಕಡೆಯತನಕ ದೃಷ್ಟಿಸಿ
ಆಕಾಶದ ಕೆಳಗಿರುವ ಪ್ರತಿಯೊಂದನ್ನೂ ನೋಡುವವನಾಗಿದ್ದಾನೆ.
25 ಆತನು ಗಾಳಿಗೆ ಶಕ್ತಿಯನ್ನು ಕೊಟ್ಟಾಗಲೂ
ಸಾಗರಗಳ ವಿಸ್ತೀರ್ಣವನ್ನು ನಿರ್ಧರಿಸಿದಾಗಲೂ
26 ಮಳೆಯನ್ನೂ ಗುಡುಗುಸಿಡಿಲುಗಳ ಮಳೆಯನ್ನೂ
ಎಲ್ಲಿಗೆ ಕಳುಹಿಸಬೇಕೆಂದು ನಿರ್ಧರಿಸಿದಾಗಲೂ
27 ಜ್ಞಾನವನ್ನು ಕಂಡುಕೊಂಡನು;
ಅದರ ಬೆಲೆಯನ್ನು ಪರೀಕ್ಷಿಸಿ ತಿಳಿದುಕೊಂಡನು; ಅದಕ್ಕೆ ತನ್ನ ಒಪ್ಪಿಗೆಯನ್ನು ಸೂಚಿಸಿದನು.
28 ಇದಲ್ಲದೆ ದೇವರು ಮನುಷ್ಯರಿಗೆ,
‘ಯೆಹೋವನಲ್ಲಿ ಭಯಭಕ್ತಿಯಿಂದಿರುವುದೇ ಜ್ಞಾನ;
ದುಷ್ಟತನವನ್ನು ತೊರೆದುಬಿಡುವುದೇ ವಿವೇಕ’ ಎಂದು ಹೇಳಿದನು.”
ನಿತ್ಯಜೀವದ ದಾರಿ ಕಷ್ಟಕರ
(ಲೂಕ 13:24)
13 “ಇಕ್ಕಟ್ಟಾದ ಬಾಗಿಲಿನ ಮೂಲಕ ಪರಲೋಕರಾಜ್ಯವನ್ನು ಪ್ರವೇಶಿಸಿರಿ. ನರಕಕ್ಕೆ ಹೋಗುವ ದಾರಿ ದೊಡ್ಡದು, ಬಾಗಿಲು ಬಹಳ ವಿಶಾಲ. ಅನೇಕ ಜನರು ಆ ಬಾಗಿಲಲ್ಲಿ ಪ್ರವೇಶಿಸುತ್ತಾರೆ. 14 ಆದರೆ ನಿತ್ಯಜೀವಕ್ಕಿರುವ ಬಾಗಿಲು ಬಹಳ ಚಿಕ್ಕದು, ದಾರಿ ಕಷ್ಟಕರ. ಕೆಲವರು ಮಾತ್ರ ಆ ಮಾರ್ಗವನ್ನು ಕಂಡುಕೊಳ್ಳುವರು.
ಜನರ ನಡತೆಯನ್ನು ಗಮನಿಸಿ
(ಲೂಕ 6:43-44; 13:25-27)
15 “ಸುಳ್ಳುಪ್ರವಾದಿಗಳ ಬಗ್ಗೆ ಎಚ್ಚರವಾಗಿರಿ. ಅವರು ಕುರಿಗಳ ಹಾಗೆ ಕಾಣಿಸಿಕೊಂಡು ನಿಮ್ಮ ಬಳಿಗೆ ಬರುತ್ತಾರೆ. ಆದರೆ ಅವರು ತೋಳಗಳಂತೆ ನಿಜವಾಗಿಯೂ ಅಪಾಯಕಾರಿಗಳಾಗಿದ್ದಾರೆ. 16 ಅವರ ಕ್ರಿಯೆಗಳಿಂದ ನೀವು ಅವರನ್ನು ತಿಳಿದುಕೊಳ್ಳುವಿರಿ. ಮುಳ್ಳಿನ ಪೊದೆಗಳಲ್ಲಿ ದ್ರಾಕ್ಷಿಯು ಹೇಗೆ ದೊರೆಯುವುದಿಲ್ಲವೋ ಅದೇ ರೀತಿ ಒಳ್ಳೆಯವುಗಳು ಕೆಟ್ಟ ಜನಗಳಿಂದ ಬರುವುದಿಲ್ಲ. ಅಂಜೂರವು ಮುಳ್ಳುಗಿಡಗಳಲ್ಲಿ ದೊರೆಯುವುದಿಲ್ಲ. 17 ಅದೇ ರೀತಿ ಪ್ರತಿಯೊಂದು ಒಳ್ಳೆಯ ಮರವು ಒಳ್ಳೆಯ ಫಲವನ್ನು ಕೊಡುತ್ತದೆ. ಕೆಟ್ಟ ಮರವು ಕೆಟ್ಟ ಫಲವನ್ನು ಕೊಡುತ್ತದೆ. 18 ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡುವುದಿಲ್ಲ ಮತ್ತು ಕೆಟ್ಟ ಮರವು ಒಳ್ಳೆಯ ಫಲವನ್ನು ಕೊಡುವುದಿಲ್ಲ. 19 ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಯಲ್ಲಿ ಎಸೆಯಲಾಗುವುದು. 20 ಈ ಸುಳ್ಳು ಬೋಧಕರನ್ನು ಅವರು ಕೊಡುವ ಫಲದಿಂದಲೇ (ಕಾರ್ಯಗಳಿಂದಲೇ) ನೀವು ತಿಳಿದುಕೊಳ್ಳುವಿರಿ.
Kannada Holy Bible: Easy-to-Read Version. All rights reserved. © 1997 Bible League International