Revised Common Lectionary (Complementary)
ರಚನೆಗಾರ: ದಾವೀದ.
40 ನಾನು ಯೆಹೋವನಿಗೋಸ್ಕರ ತಾಳ್ಮೆಯಿಂದ ನಿರೀಕ್ಷಿಸಿದೆನು;
ಆತನು ನನ್ನ ಮೊರೆಗೆ ಕಿವಿಗೊಟ್ಟು ಕೇಳಿದನು.
2 ಆತನು ನನ್ನನ್ನು ನಾಶನದ ಗುಂಡಿಯೊಳಗಿಂದ[a] ಎತ್ತಿದನು.
ಆತನು ನನ್ನನ್ನು ಕೆಸರಿನ ಸ್ಥಳದಿಂದ[b]
ಮೇಲೆತ್ತಿ ಬಂಡೆಯ ಮೇಲಿರಿಸಿದನು;
ದೃಢವಾಗಿ ಹೆಜ್ಜೆಯಿಡುವಂತೆ ಮಾಡಿದನು.
3 ಆತನು ನನ್ನ ಬಾಯಲ್ಲಿ ಹೊಸ ಕೀರ್ತನೆಯನ್ನು ಹುಟ್ಟಿಸಿದ್ದಾನೆ.
ಅದು ನನ್ನ ದೇವರ ಸ್ತುತಿಗೀತೆ.
ನನಗೆ ಸಂಭವಿಸಿದವುಗಳನ್ನು ಅನೇಕರು ನೋಡಿ
ಯೆಹೋವನಲ್ಲಿ ಭರವಸವಿಟ್ಟು ಆತನನ್ನು ಆರಾಧಿಸುವರು.
4 ಯಾವನು ಯೆಹೋವನಲ್ಲಿ ಭರವಸವಿಟ್ಟಿದ್ದಾನೋ ಅವನೇ ಧನ್ಯನು.
ಸಹಾಯಕ್ಕಾಗಿ ವಿಗ್ರಹಗಳ ಕಡೆಗೂ ಸುಳ್ಳುದೇವರುಗಳ ಕಡೆಗೂ ತಿರುಗಿಕೊಳ್ಳದವನೇ ಭಾಗ್ಯವಂತನು.
5 ಯೆಹೋವನೇ, ನನ್ನ ದೇವರೇ, ನೀನು ಅನೇಕ ಮಹತ್ಕಾರ್ಯಗಳನ್ನು ಮಾಡಿರುವೆ!
ನನ್ನ ವಿಷಯದಲ್ಲಿ ನಿನಗೆ ಅತಿಶಯವಾದ ಆಲೋಚನೆಗಳಿವೆ.
ಅವುಗಳನ್ನು ವಿವರಿಸಿ ಹೇಳಲು ಸಾಧ್ಯವಿಲ್ಲ;
ಅವು ಅಸಂಖ್ಯಾತವಾಗಿವೆ.
6 ನಾನು ಗ್ರಹಿಸಿಕೊಂಡಿದ್ದೇನೆಂದರೆ,
ಯಜ್ಞಗಳಾಗಲಿ ಧಾನ್ಯಸಮರ್ಪಣೆಗಳಾಗಲಿ
ಸರ್ವಾಂಗಹೋಮಗಳಾಗಲಿ ಪಾಪಪರಿಹಾರಕ ಯಜ್ಞಗಳಾಗಲಿ ನಿನಗೆ ಬೇಕಿಲ್ಲ.
7 ಆದ್ದರಿಂದ ನಾನು, “ಇಗೋ, ಬರುತ್ತಿದ್ದೇನೆ.
ನನ್ನ ವಿಷಯವಾಗಿ ಗ್ರಂಥದಲ್ಲಿ ಇದನ್ನು ಬರೆಯಲಾಗಿದೆ.
8 ನನ್ನ ದೇವರೇ, ನಿನ್ನ ಚಿತ್ತಾನುಸಾರವಾಗಿ ಮಾಡುತ್ತೇನೆ.
ನಿನ್ನ ಉಪದೇಶಗಳನ್ನು ಹೃದಯದಲ್ಲಿಟ್ಟುಕೊಂಡಿದ್ದೇನೆ” ಅಂದೆನು.
ಯೆಹೋವನ ಬಳಿಗೆ ಹಿಂದಿರುಗಿರಿ
14 ಇಸ್ರೇಲೇ, ನೀನು ಜಾರಿಬಿದ್ದು ದೇವರಿಗೆ ವಿರುದ್ಧವಾಗಿ ಪಾಪಮಾಡಿದಿ. ನಿನ್ನ ದೇವರಾದ ಯೆಹೋವನ ಬಳಿಗೆ ಹಿಂದಿರುಗಿ ಬಾ. 2 ನೀನು ಹೇಳಬೇಕಾದ ವಿಷಯಗಳ ಕುರಿತು ನೀನು ಆಲೋಚಿಸು ಮತ್ತು ಯೆಹೋವನ ಬಳಿಗೆ ಹಿಂದಿರುಗಿ ಬಾ ಮತ್ತು ಆತನಿಗೆ ಹೀಗೆ ಹೇಳು:
“ನಮ್ಮ ಪಾಪಗಳನ್ನು ನಮ್ಮಿಂದ ತೆಗೆ.
ನಾವು ಮಾಡುವ ಒಳ್ಳೆಯ ಕಾರ್ಯಗಳನ್ನು ಸ್ವೀಕರಿಸು.
ಆಗ ನಮ್ಮ ತುಟಿಗಳಿಂದ ನಿನಗೆ ಸ್ತೋತ್ರವೆಂಬ ಕಾಣಿಕೆಯನ್ನು ಸಮರ್ಪಿಸುವೆವು.
3 ಅಶ್ಶೂರವು ನಮ್ಮನ್ನು ರಕ್ಷಿಸಲಾರದು.
ನಾವು ಕುದುರೆ ಮೇಲೆ ಸವಾರಿ ಮಾಡುವದಿಲ್ಲ.
ನಮ್ಮ ಕೈಗಳು ತಯಾರಿಸಿದ ಬೊಂಬೆಗಳಿಗೆ ನಾವು ಇನ್ನು
‘ನಮ್ಮ ದೇವರು’ ಎಂದು ಹೇಳುವದಿಲ್ಲ.
ಯಾಕೆಂದರೆ ಅನಾಥರಿಗೆ
ಕರುಣೆಯನ್ನು ತೋರಿಸುವವನು ನೀನೇ.”
ಯೆಹೋವನು ಇಸ್ರೇಲನ್ನು ಕ್ಷಮಿಸುವನು
4 ಯೆಹೋವನು ಹೇಳುವುದೇನೆಂದರೆ,
“ಅವರು ನನ್ನನ್ನು ತೊರೆದುಬಿಟ್ಟಿದ್ದನ್ನು ನಾನು ಕ್ಷಮಿಸುವೆನು.
ಅವರನ್ನು ಅಧಿಕವಾಗಿಯೂ ಸ್ವಇಚ್ಛೆಯಿಂದಲೂ ಪ್ರೀತಿಸುವೆನು.
ಈಗ ಅವರ ಮೇಲೆ ನಾನು ಕೋಪಿಸುವದಿಲ್ಲ.
5 ಇಸ್ರೇಲಿಗೆ ನಾನು ಇಬ್ಬನಿಯಂತಿರುವೆನು.
ನೆಲದಾವರೆಯಂತೆ ಇಸ್ರೇಲ್ ಅರಳುವನು.
ಲೆಬನೋನಿನ ದೇವದಾರು ವೃಕ್ಷಗಳಂತೆ ಸೊಂಪಾಗಿ ಬೆಳೆಯುವನು.
6 ಅವನ ಕೊಂಬೆಗಳು ಬೆಳೆದು ಹರಡಿಕೊಳ್ಳುತ್ತವೆ;
ಅವನು ಅಂದವಾದ ಆಲೀವ್ ಮರದಂತಿರುವನು.
ಲೆಬನೋನಿನ ದೇವದಾರು ಮರಗಳ ಸುವಾಸನೆಯಂತೆ
ಅವನು ಗಮಗಮಿಸುವನು.
7 ಇಸ್ರೇಲಿನ ಜನರು ಮತ್ತೆ ನನ್ನ ಆಶ್ರಯದಲ್ಲಿ ವಾಸಿಸುವರು.
ಧಾನ್ಯದ ಸಸಿಗಳಂತೆ ಬೆಳೆಯುವರು,
ದ್ರಾಕ್ಷಾಲತೆಯಿಂದ ಚಿಗುರುವರು.
ಲೆಬನೋನಿನ ದ್ರಾಕ್ಷಿಬಳ್ಳಿಯಂತೆ ಅವರು ಇರುವರು.”
ವಿಗ್ರಹಗಳ ಬಗ್ಗೆ ಯೆಹೋವನ ಎಚ್ಚರಿಕೆ
8 “ಎಫ್ರಾಯೀಮೇ, ಇನ್ನುಮುಂದೆ ವಿಗ್ರಹವು ನಿನ್ನಲ್ಲಿರಬಾರದು.
ನಿನ್ನ ಪ್ರಾರ್ಥನೆಗೆ ಉತ್ತರಿಸುವವನು ನಾನೇ.
ನಿನ್ನನ್ನು ಕಾಯುವವನು ನಾನೇ.
ನಾನು ತುರಾಯಿ ಮರದಂತೆ ಸದಾ ಹಸಿರಾಗಿರುವೆನು.
ನಿನ್ನ ಫಲಗಳು ನನ್ನಿಂದ ಬರುವದು.”
ಅಂತಿಮ ಸಲಹೆ
9 ಬುದ್ಧಿವಂತ ಮನುಷ್ಯನು ಇವುಗಳನ್ನು ಅರ್ಥಮಾಡಿಕೊಳ್ಳುತ್ತಾನೆ.
ಜಾಣನು ಇದನ್ನು ಕಲಿತುಕೊಳ್ಳುತ್ತಾನೆ.
ಯೆಹೋವನ ಮಾರ್ಗವು ಸರಿಯಾದದ್ದು.
ಒಳ್ಳೆಯ ಜನರು ಅವರೊಂದಿಗೆ ಜೀವಿಸುವರು.
ಪಾಪಿಗಳು ಅವುಗಳಿಂದ ಸಾಯುವರು.
ಕೆಲವು ಯೆಹೂದ್ಯರು ಯೇಸುವಿನ ಕುರಿತು ಮಾಡಿದ ಟೀಕೆ
(ಮಾರ್ಕ 2:23-28; ಲೂಕ 6:1-5)
12 ಅಂದು ಸಬ್ಬತ್ ದಿನ. ಯೇಸು ಧಾನ್ಯದ ಹೊಲಗಳ ಮಾರ್ಗವಾಗಿ ನಡೆದುಹೋಗುತ್ತಿದ್ದನು. ಯೇಸುವಿನ ಶಿಷ್ಯರು ಆತನೊಂದಿಗಿದ್ದರು. ಅವರು ಹಸಿದಿದ್ದರು. ಆದ್ದರಿಂದ ಶಿಷ್ಯರು ತೆನೆಗಳನ್ನು ಕಿತ್ತುಕೊಂಡು ತಿನ್ನತೊಡಗಿದರು. 2 ಇದನ್ನು ಕಂಡ ಫರಿಸಾಯರು ಯೇಸುವಿಗೆ, “ನೋಡು! ಸಬ್ಬತ್‌ದಿನದಂದು ಮಾಡತಕ್ಕ ಕಾರ್ಯಗಳನ್ನು ಕುರಿತು ಯೆಹೂದ್ಯರ ಧರ್ಮಶಾಸ್ತ್ರದಲ್ಲಿ ವಿಧಿಸಿರುವ ನಿಯಮಗಳಿಗೆ ವಿರುದ್ಧವಾಗಿ ನಿನ್ನ ಶಿಷ್ಯರು ಮಾಡುತ್ತಿದ್ದಾರೆ” ಎಂದು ಹೇಳಿದರು.
3 ಅದಕ್ಕೆ ಯೇಸು, “ತಾನೂ ತನ್ನೊಂದಿಗಿದ್ದ ಜನರೂ ಹಸಿದಾಗ ದಾವೀದನು ಏನು ಮಾಡಿದನೆಂಬುದನ್ನು ನೀವು ಓದಲಿಲ್ಲವೇ? 4 ದಾವೀದನು ದೇವರ ಮಂದಿರದೊಳಗೆ ಹೋದನು. ದೇವರಿಗೆ ಸಮರ್ಪಿಸಿದ್ದ ರೊಟ್ಟಿಯನ್ನು ದಾವೀದನು ಮತ್ತು ಅವನೊಂದಿಗಿದ್ದ ಜನರು ತಿಂದರು. ಅವರು ಆ ರೊಟ್ಟಿಯನ್ನು ತಿನ್ನುವುದು ಧರ್ಮಶಾಸ್ತ್ರಕ್ಕೆ ವಿರೋಧವಾಗಿತ್ತು. ಅದನ್ನು ತಿನ್ನಲು ಯಾಜಕರಿಗೆ ಮಾತ್ರ ಅವಕಾಶವಿತ್ತು. 5 ಪ್ರತಿಯೊಂದು ಸಬ್ಬತ್ ದಿನದಲ್ಲಿ ಯಾಜಕರು ದೇವಾಲಯದಲ್ಲಿ ಸಬ್ಬತ್ ದಿನದ ನಿಯಮಗಳನ್ನು ಮೀರಿದರೂ ತಪ್ಪಿತಸ್ಥರಾಗುವುದಿಲ್ಲವೆಂದು ನೀವು ಮೋಶೆಯ ಧರ್ಮಶಾಸ್ತ್ರದಲ್ಲಿ ಓದಲಿಲ್ಲವೇ? 6 ಆದರೆ ದೇವಾಲಯಕ್ಕಿಂತಲೂ ಹೆಚ್ಚಿನವನು ಇಲ್ಲಿದ್ದಾನೆಂದು ನಾನು ನಿಮಗೆ ಹೇಳುತ್ತೇನೆ. 7 ‘ಪಶುಯಜ್ಞಗಳು ನನಗೆ ಬೇಡ, ಕರುಣೆಯೇ ನನಗೆ ಬೇಕು’(A) ಎಂದು ಪವಿತ್ರಗ್ರಂಥವು ಹೇಳುತ್ತದೆ. ಅದರ ಅರ್ಥವನ್ನು ನೀವು ನಿಜವಾಗಿಯೂ ಅರಿತಿಲ್ಲ. ನೀವು ಅದರ ಅರ್ಥವನ್ನು ತಿಳಿದುಕೊಂಡರೆ ತಪ್ಪನ್ನೇನೂ ಮಾಡದ ಇವರಿಗೆ ತಪ್ಪಿತಸ್ಥರೆಂದು ತೀರ್ಪು ಮಾಡುವುದಿಲ್ಲ.
8 “ಮನುಷ್ಯಕುಮಾರನು ಸಬ್ಬತ್ ದಿನಕ್ಕೂ ಪ್ರಭುವಾಗಿದ್ದಾನೆ” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International