Revised Common Lectionary (Complementary)
ರಚನೆಗಾರ: ಜೇರಹ ಕುಟುಂಬದ ಏತಾನ.
89 ಯೆಹೋವನೇ, ನಿನ್ನ ಪ್ರೀತಿಯನ್ನೂ
ನಂಬಿಗಸ್ತಿಕೆಯನ್ನೂ ಸದಾಕಾಲ ಹಾಡಿ ಕೊಂಡಾಡುವೆನು!
2 ನಿನ್ನ ಶಾಶ್ವತ ಪ್ರೀತಿಯಲ್ಲಿ ನನಗೆ ದೃಢವಾದ ನಂಬಿಕೆಯಿದೆ.
ನಿನ್ನ ನಂಬಿಗಸ್ತಿಕೆಯು ಆಕಾಶಗಳಂತೆ ಶಾಶ್ವತವಾಗಿದೆ.
3 ಆತನು ಹೇಳಿದ್ದೇನೆಂದರೆ: “ನಾನು ಆರಿಸಿಕೊಂಡ ರಾಜನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡೆನು.
ನನ್ನ ಸೇವಕನಾದ ದಾವೀದನಿಗೆ ಒಂದು ವಾಗ್ದಾನವನ್ನು ಮಾಡಿದೆನು; ಅದೇನೆಂದರೆ,
4 ‘ದಾವೀದನೇ, ನಿನ್ನ ಕುಟುಂಬವನ್ನು ಶಾಶ್ವಾತಗೊಳಿಸುವೆನು,
ನಿನ್ನ ರಾಜ್ಯವನ್ನೂ ಶಾಶ್ವತಗೊಳಿಸುವೆನು.’”
15 ಯೆಹೋವನೇ, ನಿನ್ನ ಸದ್ಭಕ್ತರು ನಿಜವಾಗಿಯೂ ಸಂತೋಷವಾಗಿದ್ದಾರೆ.
ಅವರು ನಿನ್ನ ಕರುಣೆಯ ಬೆಳಕಿನಲ್ಲಿ ವಾಸಿಸುತ್ತಿದ್ದಾರೆ.
16 ನಿನ್ನ ಹೆಸರು ಅವರನ್ನು ಯಾವಾಗಲೂ ಸಂತೋಷಗೊಳಿಸುತ್ತದೆ.
ಅವರು ನಿನ್ನ ನೀತಿಯನ್ನು ಸ್ತುತಿಸುವರು.
17 ನೀನೇ ಅವರ ಅದ್ಭುತ ಶಕ್ತಿಯಾಗಿರುವೆ.
ಅವರ ಶಕ್ತಿಯು ನಿನ್ನಿಂದಲೇ ಬರುತ್ತದೆ.
18 ಯೆಹೋವನೇ, ನೀನೇ ನಮ್ಮ ಸಂರಕ್ಷಕನು.
ಇಸ್ರೇಲಿನ ಪರಿಶುದ್ಧನೇ ನಮ್ಮ ರಾಜನು.
ಯೆರೆಮೀಯನ ಬೋಧನೆಯ ಸಾರಾಂಶ
25 ಯೆಹೂದದ ಎಲ್ಲಾ ಜನರ ಬಗ್ಗೆ ಯೆರೆಮೀಯನಿಗೆ ಈ ಸಂದೇಶವು ಬಂದಿತು. ಈ ಸಂದೇಶವು ಯೆಹೂದದ ಅರಸನಾದ ಯೆಹೋಯಾಕೀಮನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ ಬಂದಿತು. ಯೆಹೋಯಾಕೀಮನು ಯೋಷೀಯನ ಮಗ. ಅವನ ಆಳ್ವಿಕೆಯ ನಾಲ್ಕನೇ ವರ್ಷದಲ್ಲಿ ಅಂದರೆ ಬಾಬಿಲೋನಿನಲ್ಲಿ ನೆಬೂಕದ್ನೆಚ್ಚರನ ಆಳ್ವಿಕೆಯ ಮೊದಲನೇ ವರ್ಷದಲ್ಲಿ 2 ಯೆರೆಮೀಯನು ಈ ಸಂದೇಶವನ್ನು ಯೆಹೂದದ ಜನರೆಲ್ಲರಿಗೂ ಜೆರುಸಲೇಮಿನ ಜನರೆಲ್ಲರಿಗೂ ಸಾರಿದನು.
3 ಕಳೆದ ಇಪ್ಪತ್ಮೂರು ವರ್ಷಗಳಿಂದ ನಾನು ನಿಮಗೆ ಮತ್ತೆಮತ್ತೆ ಯೆಹೋವನ ಸಂದೇಶವನ್ನು ಕೊಡುತ್ತಿದ್ದೇನೆ. ಅಮೋನನ ಮಗನಾದ ಯೋಷೀಯನು ಯೆಹೂದದ ರಾಜನಾದ ಹದಿಮೂರನೆ ವರ್ಷದಿಂದ ನಾನು ಪ್ರವಾದಿಯಾಗಿದ್ದೇನೆ. ಅಂದಿನಿಂದ ಇಂದಿನವರೆಗೆ ನಾನು ಯೆಹೋವನ ಸಂದೇಶಗಳನ್ನು ನಿಮಗೆ ತಿಳಿಸುತ್ತಾ ಬಂದಿದ್ದೇನೆ. ಆದರೆ ನೀವು ಕಿವಿಗೆ ಹಾಕಿಕೊಂಡಿಲ್ಲ. 4 ಯೆಹೋವನು ತನ್ನ ಸೇವಕರಾದ ಪ್ರವಾದಿಗಳನ್ನು ಮತ್ತೆಮತ್ತೆ ನಿಮ್ಮಲ್ಲಿಗೆ ಕಳುಹಿಸಿದ್ದಾನೆ. ಆದರೆ ನೀವು ಅವರ ಮಾತುಗಳನ್ನು ಕಿವಿಗೆ ಹಾಕಿಕೊಂಡಿಲ್ಲ. ನೀವು ಅವರ ಕಡೆಗೆ ಸ್ವಲ್ಪವೂ ಗಮನಕೊಟ್ಟಿಲ್ಲ.
5 ಆ ಪ್ರವಾದಿಗಳು, “ನಿಮ್ಮ ಜೀವನಕ್ರಮವನ್ನು ಬದಲಾಯಿಸಿಕೊಳ್ಳಿರಿ. ದುಷ್ಕೃತ್ಯಗಳನ್ನು ಮಾಡುವದನ್ನು ನಿಲ್ಲಿಸಿಬಿಡಿ. ನೀವು ಬದಲಾದರೆ, ಯೆಹೋವನು ನಿಮಗೂ ನಿಮ್ಮ ಪೂರ್ವಿಕರಿಗೂ ಬಹಳ ಹಿಂದೆ ಕೊಟ್ಟ ಭೂಮಿಯಲ್ಲಿ ನೀವು ನೆಲೆಸಬಹುದು. ನೀವು ಶಾಶ್ವತವಾಗಿ ವಾಸಿಸಬೇಕೆಂದು ಆತನು ಈ ಭೂಮಿಯನ್ನು ಕೊಟ್ಟಿದ್ದಾನೆ. 6 ಬೇರೆ ದೇವರುಗಳನ್ನು ಅನುಸರಿಸಬೇಡಿರಿ; ಅವುಗಳ ಸೇವೆ ಮಾಡಬೇಡಿರಿ; ಅವುಗಳನ್ನು ಪೂಜಿಸಬೇಡಿರಿ. ಮನುಷ್ಯ ನಿರ್ಮಿತವಾದ ವಿಗ್ರಹಗಳನ್ನು ಪೂಜಿಸಬೇಡಿ. ನೀವು ಪೂಜಿಸಿದರೆ ನಿಮ್ಮ ಮೇಲೆ ನಾನು ಕೋಪಗೊಂಡು ನಿಮಗೆ ಕೇಡುಮಾಡುವೆನು” ಎಂದು ಹೇಳಿದರು.
7 “ನೀವು ನನ್ನ ಮಾತನ್ನು ಕೇಳಲಿಲ್ಲ.” ಇದು ಯೆಹೋವನ ನುಡಿ. “ನೀವು ಮನುಷ್ಯನು ಮಾಡಿದ ವಿಗ್ರಹಗಳನ್ನು ಪೂಜಿಸಿದಿರಿ. ಅದೇ ನನಗೆ ಕೋಪ ತಂದಿತು. ಅದು ನಿಮಗೇ ಕೇಡನ್ನು ಉಂಟುಮಾಡಿತು.”
2 ಕೇಳಿ, ನಾನೇ ಪೌಲನು. ನೀವು ಸುನ್ನತಿ ಮಾಡಿಸಿಕೊಂಡು ಧರ್ಮಶಾಸ್ತ್ರಕ್ಕೆ ಹಿಂತಿರುಗಿಕೊಳ್ಳುವುದಾದರೆ ಕ್ರಿಸ್ತನಿಂದ ನಿಮಗೇನೂ ಪ್ರಯೋಜನವಿಲ್ಲ. 3 ಮತ್ತೆ ನಾನು ಪ್ರತಿಯೊಬ್ಬನನ್ನೂ ಎಚ್ಚರಿಸುತ್ತೇನೆ. ನೀವು ಸುನ್ನತಿ ಮಾಡಿಸಿಕೊಂಡರೆ, ಧರ್ಮಶಾಸ್ತ್ರವನ್ನೆಲ್ಲಾ ಅನುಸರಿಸಬೇಕು. 4 ನೀವು ಧರ್ಮಶಾಸ್ತ್ರದ ಮೂಲಕ ನೀತಿವಂತರಾಗಲು ಪ್ರಯತ್ನಿಸುವವರಾಗಿದ್ದರೆ, ದೇವರ ಕೃಪಾಶ್ರಯದಿಂದ ಬಿದ್ದುಹೋದ ಕಾರಣ ಕ್ರಿಸ್ತನೊಂದಿಗಿರುವ ನಿಮ್ಮ ಜೀವಿತವು ಅಂತ್ಯಗೊಳ್ಳುವುದು. 5 ಆದರೆ ನಾವು ನಂಬಿಕೆಯ ಮೂಲಕ ನೀತಿವಂತರಾಗಿದ್ದೇವೆ ಎಂಬ ನಿರೀಕ್ಷೆ ನಮಗುಂಟು. ದೇವರಾತ್ಮನ ಸಹಾಯದಿಂದ ಈ ನಿರೀಕ್ಷೆ ಸಫಲವಾಗುವುದೆಂದು ತವಕದಿಂದ ಎದುರುನೋಡುತ್ತಿದ್ದೇವೆ. 6 ಒಬ್ಬನು ಕ್ರಿಸ್ತ ಯೇಸುವಿನಲ್ಲಿರುವಾಗ ಸುನ್ನತಿ ಹೊಂದಿದ್ದಾನೋ ಇಲ್ಲವೋ ಎಂಬುದು ಮುಖ್ಯವಲ್ಲ. ಮುಖ್ಯವಾದದ್ದೇನೆಂದರೆ ಪ್ರೀತಿಯಿಂದ ಕಾರ್ಯನಡೆಸುವ ನಂಬಿಕೆ.
Kannada Holy Bible: Easy-to-Read Version. All rights reserved. © 1997 Bible League International