Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 105:1-11

105 ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ. ಆತನ ಹೆಸರನ್ನು ಆರಾಧಿಸಿರಿ.
    ಆತನ ಅದ್ಭುತಕಾರ್ಯಗಳ ಕುರಿತು ಜನಾಂಗಗಳಿಗೆ ಸಾರಿ ಹೇಳಿರಿ.
ಯೆಹೋವನಿಗೆ ಗಾನಮಾಡಿರಿ; ಆತನನ್ನು ಸಂಕೀರ್ತಿಸಿರಿ.
    ಆತನ ಮಹತ್ಕಾರ್ಯಗಳ ಕುರಿತು ಕೊಂಡಾಡಿರಿ.
ಆತನ ಪವಿತ್ರ ನಾಮದಲ್ಲಿ ಹೆಮ್ಮೆಪಡಿರಿ.
    ಯೆಹೋವನ ಆರಾಧಕರೇ, ಸಂತೋಷಪಡಿರಿ.
ಯೆಹೋವನನ್ನೂ ಆತನ ಬಲವನ್ನೂ ಆಶ್ರಯಿಸಿಕೊಳ್ಳಿರಿ;
    ಸಹಾಯಕ್ಕಾಗಿ ಆತನ ಬಳಿಗೇ ಹೋಗಿರಿ.
ಆತನ ಅದ್ಭುತಕಾರ್ಯಗಳನ್ನು ಜ್ಞಾಪಿಸಿಕೊಳ್ಳಿರಿ.
    ಆತನ ಮಹತ್ಕಾರ್ಯಗಳನ್ನೂ ವಿವೇಕದ ನಿರ್ಧಾರಗಳನ್ನೂ ಜ್ಞಾಪಿಸಿಕೊಳ್ಳಿರಿ.
ನೀವು ಆತನ ಸೇವಕನಾದ ಅಬ್ರಹಾಮನ ಸಂತತಿಯವರಾಗಿದ್ದೀರಿ;
    ಆತನು ಆರಿಸಿಕೊಂಡ ಯಾಕೋಬನ ಸಂತತಿಯವರಾಗಿದ್ದೀರಿ.
ಯೆಹೋವನೇ ನಮ್ಮ ದೇವರು.
    ಆತನು ಇಡೀ ಪ್ರಪಂಚವನ್ನು ಆಳುವನು.[a]
ಆತನು ತನ್ನ ಒಡಂಬಡಿಕೆಯನ್ನು ಯಾವಾಗಲೂ ಜ್ಞಾಪಿಸಿಕೊಳ್ಳುವನು.
    ಆತನು ತನ್ನ ಆಜ್ಞೆಗಳನ್ನು ಸಾವಿರ ತಲೆಮಾರುಗಳವರೆಗೂ ಜ್ಞಾಪಿಸಿಕೊಳ್ಳುವನು.
ಆತನು ಅಬ್ರಹಾಮನೊಡನೆ ಒಡಂಬಡಿಕೆ ಮಾಡಿಕೊಂಡನು.
    ಆತನು ಇಸಾಕನಿಗೆ ವಾಗ್ದಾನ ಮಾಡಿದನು.
10 ಆತನು ಅದನ್ನು ಯಾಕೋಬನಿಗೆ ಕಟ್ಟಳೆಯನ್ನಾಗಿ ಮಾಡಿದನು.
    ದೇವರು ಇಸ್ರೇಲನೊಂದಿಗೆ ತನ್ನ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಂಡನು.
11 “ನಾನು ನಿನಗೆ ಕಾನಾನ್ ದೇಶವನ್ನು ಕೊಡುವೆನು.
    ಆ ದೇಶವು ನಿನ್ನದಾಗಿರುತ್ತದೆ” ಎಂದು ಆತನು ಹೇಳಿದನು.

ಕೀರ್ತನೆಗಳು 105:37-45

37 ಆತನು ತನ್ನ ಜನರನ್ನು ಈಜಿಪ್ಟಿನಿಂದ ಕರೆದುಕೊಂಡು ಹೋದನು.
    ಅವರು ತಮ್ಮೊಂದಿಗೆ ಬೆಳ್ಳಿಬಂಗಾರಗಳನ್ನು ತೆಗೆದುಕೊಂಡು ಬಂದರು.
    ದೇವಜನರಲ್ಲಿ ಯಾರೂ ಎಡವಿಬೀಳಲಿಲ್ಲ.
38 ದೇವಜನರು ಈಜಿಪ್ಟಿನಿಂದ ಹೊರಟಾಗ ಸಂತೋಷಪಟ್ಟರು;
    ಯಾಕೆಂದರೆ ಅವರು ದೇವಜನರಿಗೆ ಹೆದರಿಕೊಂಡಿದ್ದರು.
39 ಆತನು ಹಗಲಿನಲ್ಲಿ ನೆರಳಿಗೋಸ್ಕರ ಮೋಡವನ್ನು ಕಂಬಳಿಯಂತೆ ಹರಡಿದನು;
    ರಾತ್ರಿಯಲ್ಲಿ ಬೆಳಕಿಗಾಗಿ ಅಗ್ನಿಸ್ತಂಭವನ್ನು ದಯಪಾಲಿಸಿದನು.
40 ಜನರು ಮಾಂಸಕ್ಕಾಗಿ ಕೇಳಿಕೊಂಡಾಗ ಆತನು ಅವರಿಗೆ ಲಾವಕ್ಕಿಗಳನ್ನು ಬರಮಾಡಿದನು;
    ಪರಲೋಕದಿಂದ ಮನ್ನವನ್ನು ದಯಪಾಲಿಸಿದನು.
41 ಆತನು ಬಂಡೆಯನ್ನು ಸೀಳಿದಾಗ ನೀರು ಚಿಮ್ಮುತ್ತಾ ಹೊರಬಂದಿತು;
    ಅರಣ್ಯದಲ್ಲಿ ನದಿಯು ಹರಿಯತೊಡಗಿತು!

42 ಆತನು ತನ್ನ ಸೇವಕನಾದ ಆಬ್ರಹಾಮನಿಗೆ
    ತಾನು ಮಾಡಿದ ವಾಗ್ದಾನವನ್ನು ಜ್ಞಾಪಿಸಿಕೊಂಡನು.
43 ಆತನು ತನ್ನ ಜನರನ್ನು ಈಜಿಪ್ಟಿನಿಂದ ಹೊರತಂದನು.
    ಜನರು ಉಲ್ಲಾಸಪಡುತ್ತಾ ಹರ್ಷಗೀತೆಗಳನ್ನು ಹಾಡುತ್ತಾ ಹೊರಬಂದರು!
44 ಅನ್ಯಜನರು ವಾಸವಾಗಿದ್ದ ದೇಶವನ್ನು ದೇವರು ತನ್ನ ಜನರಿಗೆ ಕೊಟ್ಟನು.
    ಅನ್ಯಜನರು ದುಡಿದು ಸಂಪಾದಿಸಿದ್ದವುಗಳನ್ನು ದೇವಜನರು ಪಡೆದುಕೊಂಡರು.
45 ತನ್ನ ಜನರು ತನ್ನ ಕಟ್ಟಳೆಗಳಿಗೆ ವಿಧೇಯರಾಗಲೆಂದೂ
    ತನ್ನ ಉಪದೇಶಗಳನ್ನು ಎಚ್ಚರಿಕೆಯಿಂದ ಪಾಲಿಸಲೆಂದೂ ಆತನು ಹೀಗೆ ಮಾಡಿದನು.

ಯೆಹೋವನನ್ನು ಕೊಂಡಾಡಿರಿ.

ಯೆಹೋಶುವನು 1:1-11

ದೇವರು ಯೆಹೋಶುವನನ್ನು ಇಸ್ರೇಲರ ನಾಯಕನನ್ನಾಗಿ ಆರಿಸಿದನು

ಮೋಶೆಯು ಯೆಹೋವನ ಸೇವಕನಾಗಿದ್ದನು. ನೂನನ ಮಗನಾದ ಯೆಹೋಶುವನು ಮೋಶೆಯ ಸಹಾಯಕನಾಗಿದ್ದನು. ಮೋಶೆಯ ಮರಣಾನಂತರ ಯೆಹೋವನು ಯೆಹೋಶುವನೊಡನೆ ಮಾತನಾಡಿ, “ನನ್ನ ಸೇವಕನಾದ ಮೋಶೆಯು ಸತ್ತನು. ಈಗ ನೀನು ಮತ್ತು ಈ ಜನರು ಜೋರ್ಡನ್ ನದಿಯನ್ನು ದಾಟಿಹೋಗಬೇಕು. ಇಸ್ರೇಲಿನ ಜನರಾದ ನಿಮಗೆ ನಾನು ಕೊಡಲಿರುವ ದೇಶಕ್ಕೆ ನೀವು ಹೋಗಬೇಕು. ನಾನು ಆ ದೇಶವನ್ನು ನಿಮಗೆ ಕೊಡುವುದಾಗಿ ಮೋಶೆಗೆ ವಾಗ್ದಾನ ಮಾಡಿದ್ದೇನೆ. ಆದ್ದರಿಂದ ನೀವು ಕಾಲಿಡುವ ಪ್ರದೇಶವನ್ನೆಲ್ಲಾ ನಿಮಗೆ ಕೊಡುತ್ತೇನೆ. ಅರಣ್ಯ ಮತ್ತು ಲೆಬನೋನ್ ಪರ್ವತ ಇವುಗಳನ್ನು ಮೊದಲುಗೊಂಡು ಯೂಫ್ರೇಟೀಸ್ ಮಹಾನದಿಯವರೆಗಿರುವ ಹಿತ್ತಿಯರ ಪ್ರದೇಶವೆಲ್ಲಾ ನಿಮ್ಮದಾಗುವುದು. ನಿಮ್ಮ ಪ್ರದೇಶವು ಪಶ್ಚಿಮದಲ್ಲಿನ ಮೆಡಿಟರೇನಿಯನ್ ಸಮುದ್ರದವರೆಗೆ ವಿಸ್ತರಿಸಿಕೊಳ್ಳುವುದು. ನಾನು ಮೋಶೆಯ ಸಂಗಡ ಇದ್ದಂತೆ ನಿನ್ನ ಸಂಗಡವೂ ಇರುತ್ತೇನೆ. ನಿನ್ನ ಜೀವಮಾನದಲ್ಲೆಲ್ಲಾ ಯಾವನೂ ನಿನ್ನನ್ನು ತಡೆಯಲಾರನು. ನಾನು ನಿನ್ನನ್ನು ಕೈಬಿಡುವುದಿಲ್ಲ; ತೊರೆದುಬಿಡುವುದಿಲ್ಲ” ಎಂದು ಹೇಳಿದನು.

“ಯೆಹೋಶುವನೇ, ನೀನು ಸ್ಥಿರಚಿತ್ತನಾಗಿರಬೇಕು; ಧೈರ್ಯವಂತನಾಗಿರಬೇಕು; ಈ ಜನರು ತಮ್ಮ ದೇಶವನ್ನು ಪಡೆಯುವುದಕ್ಕೆ ನೀನು ಇವರ ಮುಂದಾಳಾಗಿ ನಡೆಸಬೇಕು. ನಾನು ಇವರಿಗೆ ಈ ಪ್ರದೇಶವನ್ನು ಕೊಡುವುದಾಗಿ ಇವರ ಪೂರ್ವಿಕರಿಗೆ ಪ್ರಮಾಣ ಮಾಡಿದ್ದೇನೆ. ಆದರೆ ನೀನು ಇನ್ನೊಂದು ವಿಷಯದಲ್ಲಿಯೂ ಸ್ಥಿರಚಿತ್ತನಾಗಿರಬೇಕು; ಧೈರ್ಯವಂತನಾಗಿರಬೇಕು. ನನ್ನ ಸೇವಕನಾಗಿದ್ದ ಮೋಶೆಯು ನಿನಗೆ ಕೊಟ್ಟ ಆಜ್ಞೆಗಳನ್ನು ನೀನು ನಿಶ್ಚಿತವಾಗಿ ಪಾಲಿಸಬೇಕು. ಅವನ ಧರ್ಮೋಪದೇಶವನ್ನೆಲ್ಲಾ ಚಾಚೂತಪ್ಪದೆ ಅನುಸರಿಸಿದ್ದೇ ಆದರೆ ನೀನು ಮಾಡುವ ಎಲ್ಲ ಕಾರ್ಯಗಳಲ್ಲಿ ನಿನಗೆ ಜಯಸಿಗುವುದು ಖಂಡಿತ. ಆ ಧರ್ಮಶಾಸ್ತ್ರದಲ್ಲಿ ಬರೆದ ವಿಷಯಗಳನ್ನು ಸದಾ ನೆನಪಿಡು. ಹಗಲೂ ರಾತ್ರಿ ಆ ಧರ್ಮಶಾಸ್ತ್ರವನ್ನು ಧ್ಯಾನಿಸು. ಆಗ ಅದರಲ್ಲಿ ಬರೆದ ವಿಷಯಗಳಿಗೆ ನೀನು ನಿಶ್ಚಿತವಾಗಿ ವಿಧೇಯನಾಗಿರುವೆ. ನೀನು ಹೀಗೆ ಮಾಡಿದರೆ ನೀನು ಮಾಡುವ ಪ್ರತಿಯೊಂದು ಕಾರ್ಯದಲ್ಲಿ ನೀನು ವಿವೇಕಶಾಲಿಯಾಗುವೆ ಮತ್ತು ಜಯಶಾಲಿಯಾಗುವೆ. ನೆನಪಿಡು, ನೀನು ಸ್ಥಿರಚಿತ್ತನಾಗಿರಬೇಕೆಂತಲೂ ಧೈರ್ಯಶಾಲಿಯಾಗಿರಬೇಕೆಂತಲೂ ನಾನು ನಿನಗೆ ಆಜ್ಞಾಪಿಸುತ್ತೇನೆ. ಆದ್ದರಿಂದ ಹೆದರಬೇಡ, ಯಾಕೆಂದರೆ ನೀನು ಹೋಗುವಲ್ಲೆಲ್ಲಾ ನಿನ್ನ ದೇವರಾದ ಯೆಹೋವನೇ ನಿನ್ನ ಸಂಗಡ ಇರುವನು” ಎಂದು ಹೇಳಿದನು.

ಯೆಹೋಶುವನು ಅಧಿಪತ್ಯವನ್ನು ವಹಿಸಿಕೊಂಡನು

10 ಆಗ ಯೆಹೋಶುವನು ಜನಾಧಿಪತಿಗಳಿಗೆ, 11 “ನೀವು ಪಾಳೆಯದ ಎಲ್ಲಾ ಕಡೆಗೆ ಹೋಗಿ ಜನರಿಗೆ ಸಿದ್ಧವಾಗಿರಲು ತಿಳಿಸಿರಿ; ಸ್ವಲ್ಪ ಆಹಾರವನ್ನು ಸಿದ್ಧಪಡಿಸಿಕೊಳ್ಳಲು ಹೇಳಿರಿ. ಇನ್ನು ಮೂರು ದಿವಸಗಳಲ್ಲಿ ನಾವು ಈ ಜೋರ್ಡನ್ ನದಿಯನ್ನು ದಾಟಿ ಹೋಗುವೆವು. ನಾನು ಹೋಗಿ ಯೆಹೋವನಾದ ನಮ್ಮ ದೇವರು ನಮಗೆ ಕೊಡುವ ದೇಶವನ್ನು ವಶಪಡಿಸಿಕೊಳ್ಳುವೆವು ಎಂದು ಹೇಳಿರಿ” ಎಂದು ಆಜ್ಞಾಪಿಸಿದನು.

1 ಥೆಸಲೋನಿಕದವರಿಗೆ 3:1-5

ನಾವು ನಿಮ್ಮ ಬಳಿಗೆ ಬರಲಾಗಲಿಲ್ಲ, ಆದರೆ ಇನ್ನೂ ಹೆಚ್ಚುಕಾಲ ಕಾಯಲು ಬಹಳ ಕಷ್ಟಕರವಾಗಿದೆ. ಆದುದರಿಂದ ಅಥೆನ್ಸಿನಲ್ಲಿ ಉಳಿದುಕೊಂಡು ತಿಮೊಥೆಯನನ್ನು ನಿಮ್ಮ ಬಳಿಗೆ ಕಳುಹಿಸಲು ತೀರ್ಮಾನಿಸಿದೆವು. ತಿಮೊಥೆಯನು ನಮ್ಮ ಸಹೋದರ. ಅವನು ದೇವರಿಗೋಸ್ಕರ ನಮ್ಮೊಡನೆ ಕೆಲಸ ಮಾಡುತ್ತಿದ್ದಾನೆ. ಕ್ರಿಸ್ತನ ವಿಷಯವಾದ ಸುವಾರ್ತೆಯನ್ನು ಜನರಿಗೆ ತಿಳಿಸಲು ಅವನು ನಮಗೆ ಸಹಾಯ ಮಾಡುತ್ತಿದ್ದಾನೆ. ನಿಮ್ಮ ನಂಬಿಕೆಯನ್ನು ಬಲಗೊಳಿಸಲು ಮತ್ತು ನಿಮ್ಮನ್ನು ಸಂತೈಸಲು ತಿಮೊಥೆಯನನ್ನು ಕಳುಹಿಸಿದ್ದೇವೆ. ನಮಗೀಗ ಬಂದಿರುವ ಕಷ್ಟಗಳಿಂದ ನಿಮ್ಮಲ್ಲಿ ಯಾರೂ ತಳಮಳಗೊಳ್ಳಬಾರದೆಂದು ತಿಮೊಥೆಯನನ್ನು ಕಳುಹಿಸಿದ್ದೇವೆ. ನಮಗೆ ಇಂಥಾ ಕಷ್ಟಗಳು ಬರಲೇಬೇಕೆಂದು ನಿಮಗೇ ತಿಳಿದಿದೆ. ನಾವು ನಿಮ್ಮೊಡನಿದ್ದಾಗ, ನಾವೆಲ್ಲರೂ ಹಿಂಸೆಯನ್ನು ಅನುಭವಿಸಬೇಕಾಗುತ್ತದೆಯೆಂದು ನಿಮಗೆ ತಿಳಿಸಿದೆವು. ನಾವು ಹೇಳಿದಂತೆಯೇ ಅದು ಸಂಭವಿಸಿತು ಎಂಬುದು ನಿಮಗೆ ತಿಳಿದಿದೆ. ನಿಮ್ಮ ನಂಬಿಕೆಯ ಬಗ್ಗೆ ತಿಳಿದುಕೊಳ್ಳಬೇಕೆಂಬ ಕಾರಣದಿಂದಲೇ ನಾನು ತಿಮೊಥೆಯನನ್ನು ನಿಮ್ಮ ಬಳಿಗೆ ಕಳುಹಿಸಿದೆನು. ಇನ್ನೂ ಹೆಚ್ಚುಕಾಲ ಕಾಯಲು ಸಾಧ್ಯವಿಲ್ಲವೆನಿಸಿದ್ದರಿಂದಲೇ ನಾನು ಅವನನ್ನು ಕಳುಹಿಸಿದೆನು. ಜನರನ್ನು ಶೋಧನೆಗೆ ಒಳಪಡಿಸುವ ಸೈತಾನನು ನಿಮ್ಮನ್ನು ಈಗಾಗಲೇ ಶೋಧನೆಗಳಿಂದ ಸೋಲಿಸಿರಬಹುದೆಂಬ ಭಯ ನನಗಿತ್ತು. ಒಂದುವೇಳೆ, ಹಾಗೇನಾದರೂ ಆಗಿದ್ದರೆ ನಮ್ಮ ಪ್ರಯಾಸವೆಲ್ಲಾ ನಿರರ್ಥಕವಾಗುತ್ತಿತ್ತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International