Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ವಿಮೋಚನಕಾಂಡ 19:2-8

ಜನರು ರೆಫೀದೀಮನ್ನು ಬಿಟ್ಟು ಸೀನಾಯ್ ಮರುಭೂಮಿಗೆ ಬಂದಿದ್ದರು. ಅಲ್ಲಿ ಅವರು ಬೆಟ್ಟದ ಬಳಿ ತಂಗಿದರು. ಆಗ ಮೋಶೆ ಬೆಟ್ಟವನ್ನೇರಿ ಯೆಹೋವನ ಸನ್ನಿಧಿಗೆ ಹೋದನು. ಮೋಶೆಯು ಬೆಟ್ಟದ ಮೇಲೆ ಇದ್ದಾಗ ಯೆಹೋವನು ಅವನಿಗೆ, “ಯಾಕೋಬನ ಮಹಾ ಕುಟುಂಬವಾದ ಇಸ್ರೇಲರಿಗೆ ಈ ಸಂಗತಿಗಳನ್ನು ಹೇಳು: ‘ನಾನು ನನ್ನ ವೈರಿಗಳಿಗೆ ಮಾಡುವ ಸಂಗತಿಗಳನ್ನು ನೀವು ನೋಡಿದ್ದೀರಿ. ನಾನು ಈಜಿಪ್ಟಿನವರಿಗೆ ಏನು ಮಾಡಿದೆನೆಂದು ನೀವು ನೋಡಿದಿರಿ. ಹದ್ದು ತನ್ನ ಮರಿಗಳನ್ನು ಹೊತ್ತುಕೊಂಡು ಬರುವಂತೆ ನಾನು ನಿಮ್ಮನ್ನು ಈಜಿಪ್ಟಿನಿಂದ ಇಲ್ಲಿಗೆ ಕರೆದುಕೊಂಡು ಬಂದದ್ದನ್ನು ನೀವು ನೋಡಿದಿರಿ. ಆದ್ದರಿಂದ ನನ್ನ ಆಜ್ಞೆಗಳಿಗೆ ವಿಧೇಯರಾಗಬೇಕೆಂದು ನಾನು ನಿಮಗೆ ಹೇಳುತ್ತೇನೆ. ನನ್ನ ಒಡಂಬಡಿಕೆಯನ್ನು ಕೈಕೊಂಡು ನಡೆಯಿರಿ. ಆಗ ನೀವು ನನಗೆ ವಿಶೇಷವಾದ ಜನರಾಗುವಿರಿ. ಈ ಲೋಕವೆಲ್ಲಾ ನನ್ನದೇ. ಆದರೆ ನಾನು ನಿಮ್ಮನ್ನು ನನ್ನ ಸ್ವಂತ ಜನಾಂಗವನ್ನಾಗಿ ಆರಿಸಿಕೊಳ್ಳುತ್ತಿದ್ದೇನೆ. ನೀವು ಯಾಜಕರ ರಾಜ್ಯ’ ಎಂಬ ವಿಶೇಷವಾದ ಜನಾಂಗವಾಗುವಿರಿ. ಮೋಶೆಯೇ, ನಾನು ನಿನಗೆ ಹೇಳಿದ ಸಂಗತಿಗಳನ್ನು ನೀನು ಇಸ್ರೇಲರಿಗೆ ಹೇಳಲೇಬೇಕು” ಎಂದನು.

ಆದ್ದರಿಂದ ಮೋಶೆ ಬೆಟ್ಟದಿಂದಿಳಿದು ಬಂದು ಜನರ ಹಿರಿಯರನ್ನು ಒಟ್ಟಾಗಿ ಕರೆಸಿದನು. ಯೆಹೋವನು ಹೇಳಬೇಕೆಂದು ಆಜ್ಞಾಪಿಸಿದ ಸಂಗತಿಗಳನ್ನೆಲ್ಲಾ ಮೋಶೆಯು ಹಿರಿಯರಿಗೆ ಹೇಳಿದನು. ಜನರೆಲ್ಲರೂ ಒಟ್ಟಾಗಿ ಮಾತಾಡಿದರು. “ಯೆಹೋವನು ಹೇಳುವ ಪ್ರತಿಯೊಂದಕ್ಕೂ ನಾವು ವಿಧೇಯರಾಗುವೆವು” ಎಂದು ಅವರು ಅರಿಕೆಮಾಡಿದರು.

ಬಳಿಕ ಮೋಶೆಯು ತಿರುಗಿ ಬೆಟ್ಟವನ್ನೇರಿ ಯೆಹೋವನ ಸನ್ನಿಧಿಗೆ ಹೋಗಿ ಜನರ ಪ್ರತಿಕ್ರಿಯೆಯನ್ನು ದೇವರಿಗೆ ತಿಳಿಸಿದನು.

ಕೀರ್ತನೆಗಳು 100

ಕೃತಜ್ಞತಾ ಸ್ತುತಿಗೀತೆ.

100 ಸಮಸ್ತ ಭೂನಿವಾಸಿಗಳೇ,
    ಯೆಹೋವನಿಗೆ ಗಾಯನ ಮಾಡಿರಿ!
ಯೆಹೋವನ ಸೇವೆಯನ್ನು ಸಂತೋಷದಿಂದ ಮಾಡಿರಿ;
    ಹರ್ಷಗೀತೆಗಳೊಡನೆ ಆತನ ಸನ್ನಿಧಿಗೆ ಬನ್ನಿರಿ!
ಯೆಹೋವನೇ ದೇವರೆಂದು ತಿಳಿದುಕೊಳ್ಳಿರಿ.
    ನಮ್ಮನ್ನು ಸೃಷ್ಟಿಸಿದವನು ಆತನೇ, ನಾವು ಆತನವರು.
    ನಾವು ಆತನ ಜನರೂ ಮಂದೆಯೂ ಆಗಿದ್ದೇವೆ.
ಕೃತಜ್ಞತಾಗೀತೆಗಳೊಡನೆ ಆತನ ಪಟ್ಟಣಕ್ಕೆ ಬನ್ನಿರಿ.
    ಸ್ತುತಿಗೀತೆಗಳೊಡನೆ ಆತನ ಆಲಯಕ್ಕೆ ಬನ್ನಿರಿ.
    ಆತನನ್ನು ಸನ್ಮಾನಿಸುತ್ತಾ ಆತನ ಹೆಸರನ್ನು ಕೊಂಡಾಡಿರಿ.
ಯೆಹೋವನು ಒಳ್ಳೆಯವನು!
    ಆತನ ಪ್ರೀತಿಯು ಶಾಶ್ವತವಾದದ್ದು,
    ಆತನ ನಂಬಿಗಸ್ತಿಕೆಯು ನಿರಂತರವಾದದ್ದು.

ರೋಮ್ನಗರದವರಿಗೆ 5:1-8

ನೀತಿನಿರ್ಣಯ

ಹೀಗಿರಲಾಗಿ, ನಾವು ನಂಬಿಕೆಯ ಮೂಲಕ ನೀತಿವಂತರಾಗಿದ್ದೇವೆ. ಆದಕಾರಣ ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಮೂಲಕ ನಮಗೆ ದೇವರೊಂದಿಗೆ ಸಮಾಧಾನವಿದೆ. ಈಗ ನಾವು ಆನಂದಿಸುತ್ತಿರುವ ದೇವರ ಕೃಪಾಶ್ರಯಕ್ಕೆ ಕ್ರಿಸ್ತನೇ ನಮ್ಮನ್ನು ನಮ್ಮ ನಂಬಿಕೆಯ ಮೂಲಕ ತಂದಿದ್ದಾನೆ. ದೇವರ ಮಹಿಮೆಯನ್ನು ಹೊಂದುವೆವು ಎಂಬ ನಿರೀಕ್ಷೆಯು ನಮಗಿರುವುದರಿಂದ ನಾವು ಬಹು ಸಂತೋಷವಾಗಿದ್ದೇವೆ. ಅಲ್ಲದೆ, ನಮ್ಮ ಕಷ್ಟಸಂಕಟಗಳಲ್ಲಿಯೂ ಸಂತೋಷವಾಗಿದ್ದೇವೆ. ಏಕೆಂದರೆ, ಈ ಕಷ್ಟಸಂಕಟಗಳು ನಮ್ಮಲ್ಲಿ ಹೆಚ್ಚು ತಾಳ್ಮೆಯನ್ನು ಉಂಟುಮಾಡುತ್ತವೆ. ನಾವು ಬಲಶಾಲಿಗಳಾಗಿದ್ದೇವೆ ಎಂಬುದಕ್ಕೆ ಈ ತಾಳ್ಮೆಯೇ ಆಧಾರ. ನಮಗೆ ನಿರೀಕ್ಷೆಯನ್ನು ಕೊಡುವಂಥದ್ದು ಈ ಆಧಾರವೇ. ನಮ್ಮ ಈ ನಿರೀಕ್ಷೆಯು ನಮ್ಮನ್ನು ಎಂದಿಗೂ ನಿರಾಶರನ್ನಾಗಿ ಮಾಡುವುದಿಲ್ಲ. ಅದು ಎಂದಿಗೂ ವ್ಯರ್ಥವಾಗುವುದಿಲ್ಲ. ಏಕೆಂದರೆ ದೇವರು ನಮಗೆ ಉಡುಗೊರೆಯಾಗಿ ಕೊಟ್ಟಿರುವ ಪವಿತ್ರಾತ್ಮನ ಮೂಲಕ ತನ್ನ ಪ್ರೀತಿಯನ್ನು ಧಾರಾಳವಾಗಿ ಸುರಿಸಿದ್ದಾನೆ.

ನಾವು ಬಲಹೀನರೂ ದೇವರಿಗೆ ವಿರೋಧವಾಗಿ ಜೀವಿಸುವವರೂ ಆಗಿದ್ದಾಗಲೇ ಕ್ರಿಸ್ತನು ನೇಮಿತ ಕಾಲದಲ್ಲಿ ನಮಗೋಸ್ಕರ ಪ್ರಾಣಕೊಟ್ಟನು. ನೀತಿವಂತನ ಪ್ರಾಣವನ್ನು ರಕ್ಷಿಸುವುದಕ್ಕಾಗಿ ಒಬ್ಬನು ಪ್ರಾಣಕೊಡುವುದು ಅಪರೂಪ. ನಿಜವಾಗಿಯೂ ಒಳ್ಳೆಯವನಾಗಿರುವ ಒಬ್ಬನಿಗಾಗಿ ಪ್ರಾಣಕೊಡಲು ಒಬ್ಬನು ಧೈರ್ಯಮಾಡಿದರೂ ಮಾಡಬಹುದು. ಆದರೆ ನಾವು ಇನ್ನೂ ಪಾಪಿಗಳಾಗಿದ್ದಾಗಲೇ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟನು. ದೇವರಿಗೆ ನಮ್ಮ ಮೇಲಿರುವ ಮಹಾ ಪ್ರೀತಿಯನ್ನು ಇದು ವ್ಯಕ್ತಪಡಿಸಿದೆ.

ಮತ್ತಾಯ 9:35-10:8

ಜನರ ವಿಷಯದಲ್ಲಿ ಯೇಸುವಿನ ದುಃಖ

35 ಯೇಸು ಊರುಗಳಲ್ಲೆಲ್ಲಾ ಮತ್ತು ಹಳ್ಳಿಗಳಲ್ಲೆಲ್ಲಾ ಸಂಚಾರ ಮಾಡಿದನು. ಯೇಸು ಅವರ ಸಭಾಮಂದಿರಗಳಲ್ಲಿ ಉಪದೇಶಿಸಿ ಪರಲೋಕರಾಜ್ಯದ ವಿಷಯವಾಗಿ ಶುಭವಾರ್ತೆಯನ್ನು ಹೇಳಿದನು. ಎಲ್ಲಾ ತರದ ರೋಗಗಳನ್ನು ಬೇನೆಗಳನ್ನು ವಾಸಿಮಾಡಿದನು. 36 ನೋವಿನಿಂದ ನರಳುತ್ತಿದ್ದ ಮತ್ತು ಅಸಹಾಯಕರಾಗಿದ್ದ ಅನೇಕ ಜನರನ್ನು ಯೇಸು ನೋಡಿ ದುಃಖಪಟ್ಟನು. ಕುರುಬನಿಲ್ಲದ ಕುರಿಗಳಂತೆ ಅವರಿದ್ದರು. 37 ಯೇಸು ತನ್ನ ಶಿಷ್ಯರಿಗೆ, “ಬೆಳೆಯು ಬಹಳ, ಆದರೆ ಕೆಲಸಗಾರರು ಸ್ವಲ್ಪ. 38 ಬೆಳೆಯ ಯಜಮಾನ ದೇವರೇ. ಆದ್ದರಿಂದ ಹೆಚ್ಚು ಕೆಲಸಗಾರರನ್ನು ಸುಗ್ಗಿಗಾಗಿ ಕಳುಹಿಸಿಕೊಡುವಂತೆ ಆತನಿಗೆ ಪ್ರಾರ್ಥನೆ ಮಾಡಿರಿ” ಎಂದು ಹೇಳಿದನು.

ಯೇಸು ಅಪೊಸ್ತಲರಿಗೆ ಕೊಟ್ಟ ಆದೇಶ

(ಮಾರ್ಕ 3:13-19; 6:7-13; ಲೂಕ 6:12-16; 9:1-6)

10 ಯೇಸು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಒಟ್ಟಿಗೆ ಕರೆದು, ಅವರಿಗೆ ದುರಾತ್ಮಗಳನ್ನು ಬಿಡಿಸುವುದಕ್ಕೂ ಎಲ್ಲಾ ತರದ ವ್ಯಾಧಿ ಮತ್ತು ಕಾಯಿಲೆಗಳನ್ನು ವಾಸಿಮಾಡುವುದಕ್ಕೂ ಅಧಿಕಾರ ಕೊಟ್ಟನು. ಹನ್ನೆರಡು ಮಂದಿ ಅಪೊಸ್ತಲರ ಹೆಸರುಗಳು ಹೀಗಿವೆ:

ಸೀಮೋನ (ಪೇತ್ರನೆಂದು ಕರೆಯುತ್ತಾರೆ) ಮತ್ತು

ಇವನ ಸಹೋದರ ಅಂದ್ರೆಯ,

ಜೆಬೆದಾಯನ ಮಗನಾದ ಯಾಕೋಬ,

ಅವನ ಸಹೋದರ ಯೋಹಾನ,

ಫಿಲಿಪ್ಪ

ಮತ್ತು ಬಾರ್ತೊಲೊಮಾಯ,

ತೋಮ,

ಸುಂಕವಸೂಲಿಗಾರನಾಗಿದ್ದ ಮತ್ತಾಯ,

ಅಲ್ಛಾಯನ ಮಗನಾದ ಯಾಕೋಬ,

ತದ್ದಾಯ,

ಯೆಹೂದ್ಯರ ರಾಜಕೀಯ ಪಂಗಡಕ್ಕೆ ಸೇರಿದ ಸಿಮೋನ

ಮತ್ತು ಯೇಸುವನ್ನು ಶತ್ರುಗಳಿಗೆ ಒಪ್ಪಿಸಿದ ಇಸ್ಕರಿಯೋತ ಯೂದ.

ಯೇಸು ಈ ಹನ್ನೆರಡು ಅಪೊಸ್ತಲರಿಗೆ ಕೆಲವು ಆಜ್ಞೆಗಳನ್ನು ನೀಡಿ ಪರಲೋಕರಾಜ್ಯವನ್ನು ಕುರಿತು ತಿಳಿಸುವುದಕ್ಕಾಗಿ ಅವರನ್ನು ಕಳುಹಿಸಿದನು. ಯೇಸು ಅವರಿಗೆ ಹೇಳಿದ್ದೇನೆಂದರೆ: “ಯೆಹೂದ್ಯರಲ್ಲದ ಜನರ ಬಳಿಗಾಗಲಿ ಸಮಾರ್ಯದವರು ವಾಸಿಸುವ ಯಾವ ಊರಿಗಾಗಲಿ ಹೋಗಬೇಡಿ. ಆದರೆ ತಪ್ಪಿಸಿಕೊಂಡ ಕುರಿಗಳಂತಿರುವ ಇಸ್ರೇಲರ ಬಳಿಗೆ ಹೋಗಿ, ಪರಲೋಕರಾಜ್ಯವು ಬೇಗನೆ ಬರುತ್ತದೆ ಎಂದು ಬೋಧಿಸಿ. ರೋಗಿಗಳನ್ನು ವಾಸಿಮಾಡಿರಿ. ಸತ್ತವರನ್ನು ಬದುಕಿಸಿರಿ. ಕುಷ್ಠರೋಗಿಗಳನ್ನು ವಾಸಿಮಾಡಿರಿ. ಜನರನ್ನು ದೆವ್ವಗಳಿಂದ ಬಿಡಿಸಿರಿ. ನಾನು ನಿಮಗೆ ಈ ಅಧಿಕಾರಗಳನ್ನು ಉಚಿತವಾಗಿ ಕೊಡುತ್ತೇನೆ. ಆದ್ದರಿಂದ ಬೇರೆಯವರಿಗೆ ಉಚಿತವಾಗಿ ಸಹಾಯಮಾಡಿ.

ಮತ್ತಾಯ 10:9-23

ನಿಮ್ಮೊಂದಿಗೆ ಹಣವನ್ನಾಗಲಿ ತಾಮ್ರ, ಬೆಳ್ಳಿಬಂಗಾರಗಳನ್ನಾಗಲಿ ತೆಗೆದುಕೊಂಡು ಹೋಗಬೇಡಿ. 10 ಚೀಲವನ್ನಾಗಲಿ ಹೆಚ್ಚಿನ ಬಟ್ಟೆಗಳನ್ನಾಗಲಿ ಪಾದರಕ್ಷೆಗಳನ್ನಾಗಲಿ ಊರುಗೋಲುಗಳನ್ನಾಗಲಿ ತೆಗೆದುಕೊಂಡು ಹೋಗಬೇಡಿ. ಕೆಲಸಗಾರನಿಗೆ ಅಗತ್ಯವಾದವುಗಳನ್ನು ಒದಗಿಸಲಾಗುವುದು.

11 “ನೀವು ಯಾವುದೇ ಊರಿನೊಳಕ್ಕೆ ಅಥವಾ ನಗರಕ್ಕೆ ಪ್ರವೇಶಿಸಿದಾಗ ಅಲ್ಲಿರುವ ಉತ್ತಮ ವ್ಯಕ್ತಿಯನ್ನು ಗುರುತಿಸಿ, ನೀವು ಆ ಊರನ್ನು ಬಿಡುವ ತನಕ ಅವನ ಮನೆಯಲ್ಲೇ ತಂಗಿರಿ. 12 ಆ ಮನೆಗೆ ನೀವು ಪ್ರವೇಶಿಸಿದಾಗ, ‘ನಿಮಗೆ ಶುಭವಾಗಲಿ’ ಎಂದು ಹೇಳಿರಿ. 13 ಆ ಮನೆಯಲ್ಲಿರುವ ಜನರು ನಿಮ್ಮನ್ನು ಸ್ವಾಗತಿಸಿದರೆ ನಿಮ್ಮ ಆಶೀರ್ವಾದಕ್ಕೆ ಅವರು ಯೋಗ್ಯರಾಗಿರುವುದರಿಂದ ಆ ಆಶೀರ್ವಾದವು ಅವರಿಗೆ ದೊರೆಯಲಿ. ಅವರು ನಿಮ್ಮನ್ನು ಸ್ವಾಗತಿಸದಿದ್ದರೆ, ನಿಮ್ಮ ಆಶೀರ್ವಾದವು ನಿಮಗೇ ಹಿಂತಿರುಗಿಬರಲಿ. 14 ಒಂದು ಮನೆಯವರು ಅಥವಾ ಒಂದು ಊರಿನವರು ನಿಮ್ಮನ್ನು ಸ್ವಾಗತಿಸದಿದ್ದರೆ ಇಲ್ಲವೇ ನಿಮ್ಮ ಮಾತನ್ನು ಕೇಳದಿದ್ದರೆ ನೀವು ಆ ಸ್ಥಳವನ್ನು ಬಿಟ್ಟುಹೋಗುವಾಗ, ನಿಮ್ಮ ಕಾಲಿಗೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ. 15 ನ್ಯಾಯವಿಚಾರಣೆಯ ದಿನದಲ್ಲಿ ಈ ಊರಿನ ಗತಿಯು ಸೊದೋಮ್ ಮತ್ತು ಗೊಮೋರಗಳಿಗಿಂತ ಬಹಳ ಕೆಟ್ಟದ್ದಾಗಿರುವುದು ಎಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ.

ಹಿಂಸೆಯ ಕುರಿತು ಯೇಸುವಿನ ಎಚ್ಚರಿಕೆ

(ಮಾರ್ಕ 13:9-13; ಲೂಕ 21:12-17)

16 “ಕೇಳಿರಿ! ತೋಳಗಳ ನಡುವೆ ಕುರಿಗಳನ್ನು ಬಿಟ್ಟಂತೆ ನಾನು ನಿಮ್ಮನ್ನು ಕಳುಹಿಸುತ್ತಿದ್ದೇನೆ. ಆದ್ದರಿಂದ ನೀವು ಹಾವುಗಳಂತೆ ಸೂಕ್ಷ್ಮ ಬುದ್ದಿಯುಳ್ಳವರಾಗಿರಿ, ಪಾರಿವಾಳಗಳಂತೆ ಯಾವ ಹಾನಿಯನ್ನೂ ಮಾಡದಿರಿ. 17 ಜನರ ವಿಷಯದಲ್ಲಿ ಎಚ್ಚರಿಕೆಯಿಂದಿರಿ. ನಿಮ್ಮನ್ನು ಅವರು ಬಂಧಿಸಿ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗುವರು. ಅವರು ತಮ್ಮ ಸಭಾಮಂದಿರಗಳಲ್ಲಿ ನಿಮ್ಮನ್ನು ಕೊರಡೆಗಳಿಂದ ಹೊಡೆಯುವರು. 18 ನಿಮ್ಮನ್ನು ಅಧಿಕಾರಿಗಳ ಸಮ್ಮುಖಕ್ಕೂ ಅರಸುಗಳ ಸಮ್ಮುಖಕ್ಕೂ ಕರೆದುಕೊಂಡು ಹೋಗುವರು. ನನ್ನ ನಿಮಿತ್ತ ಜನರು ನಿಮಗೆ ಹೀಗೆ ಮಾಡುವರು. ಆದರೆ ನೀವು ಆ ಅರಸುಗಳಿಗೂ ಅಧಿಕಾರಿಗಳಿಗೂ ಯಹೂದ್ಯರಲ್ಲದ ಜನರಿಗೂ ನನ್ನ ವಿಷಯವಾಗಿ ಹೇಳುವಿರಿ. 19 ನಿಮ್ಮನ್ನು ಬಂಧಿಸಿದಾಗ ನೀವು ಏನು ಮಾತಾಡಬೇಕು, ಹೇಗೆ ಮಾತಾಡಬೇಕು ಎಂದು ಚಿಂತಿಸಬೇಡಿ. ನೀವು ಹೇಳಬೇಕಾದುವುಗಳನ್ನು ಆ ಸಮಯದಲ್ಲಿ ನಿಮಗೆ ಅನುಗ್ರಹಿಸಲಾಗುವುದು. 20 ಮಾತಾಡುವವರು ನಿಜವಾಗಿಯೂ ನೀವಲ್ಲ. ನಿಮ್ಮ ತಂದೆಯ ಆತ್ಮನೇ ನಿಮ್ಮ ಮೂಲಕ ಮಾತನಾಡುತ್ತಾನೆ.

21 “ಸಹೋದರರು ಸ್ವಂತ ಸಹೋದರರಿಗೆ ವಿರೋಧವಾಗಿ ತಿರುಗಿಬಿದ್ದು ಅವರನ್ನು ಮರಣದಂಡನೆಗೆ ಒಪ್ಪಿಸುವರು. ತಂದೆಯಂದಿರು ತಮ್ಮ ಸ್ವಂತ ಮಕ್ಕಳಿಗೆ ವಿರೋಧವಾಗಿ ತಿರುಗಿಬಿದ್ದು ಅವರನ್ನು ಮರಣದಂಡನೆಗೆ ಒಪ್ಪಿಸುವರು. 22 ನೀವು ನನ್ನನ್ನು ಹಿಂಬಾಲಿಸುವುದರಿಂದ ಜನರೆಲ್ಲರೂ ನಿಮ್ಮನ್ನು ದ್ವೇಷಿಸುತ್ತಾರೆ. ಆದರೆ ಕಡೆಯವರೆಗೂ ತಾಳಿಕೊಳ್ಳುವವನು ರಕ್ಷಣೆ ಹೊಂದುವನು. 23 ಒಂದು ಊರಿನಲ್ಲಿ ನಿಮ್ಮನ್ನು ಹಿಂಸಿಸಿದರೆ ಮತ್ತೊಂದು ಊರಿಗೆ ಹೋಗಿ. ಮನುಷ್ಯಕುಮಾರನು ಪುನಃ ಬರುವುದಕ್ಕಿಂತ ಮುಂಚೆ ನೀವು ಇಸ್ರೇಲರ ಊರುಗಳಿಗೆಲ್ಲಾ ಹೋಗುವುದನ್ನು ಮುಗಿಸಿರುವುದಿಲ್ಲ ಎಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International