Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 6

ರಚನೆಗಾರ: ದಾವೀದ.

ಯೆಹೋವನೇ, ಕೋಪದಿಂದ ನನ್ನನ್ನು ಶಿಕ್ಷಿಸಬೇಡ;
    ರೋಷದಿಂದ ನನ್ನನ್ನು ದಂಡಿಸಬೇಡ.
ಯೆಹೋವನೇ, ನನ್ನನ್ನು ಕನಿಕರಿಸು!
    ನಾನು ರೋಗಿಯಾಗಿದ್ದೇನೆ, ಬಲಹೀನನಾಗಿದ್ದೇನೆ,
ನನ್ನನ್ನು ಗುಣಪಡಿಸು! ನನ್ನ ಎಲುಬುಗಳು ನಡುಗುತ್ತಿವೆ.
ನನ್ನ ಇಡೀ ದೇಹ ನಡುಗುತ್ತಿದೆ.
    ಯೆಹೋವನೇ, ನನ್ನನ್ನು ಗುಣಪಡಿಸಲು ಇನ್ನೆಷ್ಟುಕಾಲ ಬೇಕು?
ಯೆಹೋವನೇ, ನನ್ನನ್ನು ಮತ್ತೆ ಬಲಪಡಿಸು!
    ನಿನ್ನ ಮಹಾಕೃಪೆಯಿಂದ ನನ್ನನ್ನು ರಕ್ಷಿಸು.
ಸತ್ತವರು ನಿನ್ನನ್ನು ಜ್ಞಾಪಿಸಿಕೊಳ್ಳುವರೇ?
    ಸಮಾಧಿಗಳಲ್ಲಿರುವವರು ನಿನ್ನನ್ನು ಸ್ತುತಿಸುವರೇ?
    ಆದ್ದರಿಂದ ನನ್ನನ್ನು ಗುಣಪಡಿಸು.

ಯೆಹೋವನೇ, ರಾತ್ರಿಯೆಲ್ಲಾ ನಿನಗೆ ಪ್ರಾರ್ಥಿಸಿದೆನು.
    ನನ್ನ ಹಾಸಿಗೆಯು ನನ್ನ ಕಣ್ಣೀರಿನಿಂದ ಒದ್ದೆಯಾಗಿದೆ.
ನನ್ನ ಹಾಸಿಗೆಯಿಂದ ಕಣ್ಣೀರು ತೊಟ್ಟಿಕ್ಕುತ್ತಿದೆ.
    ನಾನು ಅತ್ತು ಗೋಳಾಡಿ ಬಲಹೀನನಾಗಿದ್ದೇನೆ.
ನನ್ನ ವೈರಿಗಳು ನನಗೆ ಅನೇಕ ತೊಂದರೆಗಳನ್ನು ಮಾಡಿರುವುದರಿಂದ ನನಗೆ ದುಃಖವೂ ಗೋಳಾಟವೂ ಉಂಟಾಗಿವೆ.
    ನನ್ನ ಕಣ್ಣುಗಳು ಬಲಹೀನಗೊಂಡಿವೆ; ಅತ್ತತ್ತು ಆಯಾಸಗೊಂಡಿವೆ.

ದುಷ್ಟರೇ, ತೊಲಗಿಹೋಗಿರಿ.
    ಯಾಕೆಂದರೆ ಯೆಹೋವನು ನನ್ನ ಗೋಳಾಟಕ್ಕೆ ಕಿವಿಗೊಟ್ಟಿದ್ದಾನೆ.
ಯೆಹೋವನು ನನ್ನ ವಿಜ್ಞಾಪನೆಯನ್ನು ಕೇಳಿದ್ದಾನೆ.
    ಆತನು ನನ್ನ ಪ್ರಾರ್ಥನೆಯನ್ನು ಸ್ವೀಕರಿಸಿ ಸದುತ್ತರವನ್ನು ದಯಪಾಲಿಸುವನು.

10 ನನ್ನ ವೈರಿಗಳೆಲ್ಲ ಗಲಿಬಿಲಿಗೊಂಡು ನಿರಾಶರಾಗುವರು.
    ಇದ್ದಕ್ಕಿದ್ದಂತೆ ಅವಮಾನಿತರಾಗಿ ಹಿಂತಿರುಗುವರು.

ಮೀಕ 7:1-7

ಜನರ ದುಷ್ಟತನವನ್ನು ನೋಡಿ ಮೀಕನಿಗಾದ ಬೇಸರ

ನಾನು ಬೇಸರಗೊಂಡಿದ್ದೇನೆ. ಯಾಕೆಂದರೆ ನಾನು ಕೂಡಿಸಲ್ಪಟ್ಟ ಹಣ್ಣಿನಂತಿದ್ದೇನೆ;
    ಕೊಯಿದು ಶೇಖರಿಸಿದ ದ್ರಾಕ್ಷಿಹಣ್ಣಿನಂತಿದ್ದೇನೆ.
ತಿನ್ನಲು ದ್ರಾಕ್ಷಿಹಣ್ಣು ಏನೂ ಉಳಿಯಲಿಲ್ಲ.
    ನನಗೆ ಪ್ರಿಯವಾದ ಫಲಕಾಲದ ಆರಂಭದಲ್ಲೇ ಫಲಿಸುವ ಅಂಜೂರದ ಹಣ್ಣು ಸಿಕ್ಕಲೇ ಇಲ್ಲ.
ನಾನು ಹೇಳುವುದೇನೆಂದರೆ ನಂಬಿಗಸ್ತ ಜನರೆಲ್ಲಾ ಹೋಗಿಬಿಟ್ಟರು.
    ಈ ದೇಶದಲ್ಲಿ ಒಳ್ಳೆಯ ಜನರು ಯಾರೂ ಉಳಿಯಲಿಲ್ಲ.
ಪ್ರತಿಯೊಬ್ಬನೂ ಇನ್ನೊಬ್ಬನನ್ನು ಕೊಲ್ಲಲು ಕಾಯುತ್ತಿದ್ದಾನೆ.
    ಪ್ರತಿಯೊಬ್ಬನೂ ತನ್ನ ಸೋದರನನ್ನು ಸಿಕ್ಕಿಸಿಹಾಕಲು ಕಾಯುತ್ತಿದ್ದಾನೆ.
ಕೆಟ್ಟದ್ದನ್ನು ಎರಡೂ ಕೈಗಳಿಂದ ಮಾಡಲು ಜನರು ನಿಪುಣರಾಗಿದ್ದಾರೆ.
    ಅಧಿಕಾರಿಗಳು ಲಂಚ ಕೇಳುತ್ತಾರೆ.
ನ್ಯಾಯಾಧೀಶರು ತಮ್ಮ ತೀರ್ಪು ಬದಲಾಯಿಸಲು ಹಣ ಕೇಳುತ್ತಾರೆ.
    “ಪ್ರಮುಖ ನಾಯಕರು” ನ್ಯಾಯವಾದ ಮತ್ತು ಜನರಿಗೆ ಹಿತವಾದ ತೀರ್ಮಾನವನ್ನು ಮಾಡುವದಿಲ್ಲ.
    ತಮ್ಮ ಇಷ್ಟಪ್ರಕಾರ ಅವರು ಮಾಡುತ್ತಿದ್ದಾರೆ.
ಅವರಲ್ಲಿರುವ ಉತ್ತಮರೂ ಸಹ ಮುಳ್ಳಿನ ಪೊದೆಯಂತಿದ್ದಾರೆ.
    ಅವರಲ್ಲಿರುವ ಉತ್ತಮರೂ ಸಹ ಡೊಂಕುಡೊಂಕಾಗಿರುವ ಮುಳ್ಳುಪೊದೆಗಿಂತಲೂ ಡೊಂಕಾಗಿದ್ದಾರೆ.

ಶಿಕ್ಷೆಯ ದಿನ ಬರುತ್ತಿದೆ

ನಿನ್ನ ಪ್ರವಾದಿಗಳು ಈ ದಿನವು ಬರುತ್ತಿದೆ ಎಂದು ಹೇಳುತ್ತಿದ್ದಾರೆ.
    ನಿನ್ನ ಪ್ರವಾದಿಗಳ ದಿವಸವು ಬಂದದೆ.
ಈಗ ನೀನು ಶಿಕ್ಷಿಸಲ್ಪಡುವೆ.
    ನೀನು ಈಗ ಗಲಿಬಿಲಿಗೆ ಒಳಗಾಗುವೆ!
ನಿನ್ನ ನೆರೆಯವನ ಮೇಲೆ ನಂಬಿಕೆ ಇಡಬೇಡ!
    ನಿನ್ನ ಸ್ನೇಹಿತನ ಮೇಲೆ ಭರವಸವಿಡಬೇಡ!
ನಿನ್ನ ಹೆಂಡತಿಯೊಂದಿಗೂ
    ನಿನ್ನ ಮನಸ್ಸಿನಲ್ಲಿರುವ ವಿಷಯವನ್ನು ತಿಳಿಸಬೇಡ.
ಒಬ್ಬನ ವೈರಿಯು ಅವನ ಮನೆಯವರೇ ಆಗಿರುತ್ತಾರೆ.
    ಮಗನು ತಂದೆಗೆ ಗೌರವವನ್ನು ಕೊಡುವದಿಲ್ಲ.
ಮಗಳು ತಾಯಿಗೆ ವಿರುದ್ಧವಾಗಿ ನಡೆಯುವಳು.
    ಸೊಸೆಯು ಅತ್ತೆಗೆ ವಿರುದ್ಧವಾಗಿ ನಡೆಯುವಳು.

ಯೆಹೋವನೇ ರಕ್ಷಕನು

ನಾನು ಸಹಾಯಕ್ಕಾಗಿ ಯೆಹೋವನ ಕಡೆಗೆ ನೋಡುತ್ತೇನೆ.
    ದೇವರ ರಕ್ಷಣೆಗಾಗಿ ನಿರೀಕ್ಷಿಸುತ್ತೇನೆ.
    ನನ್ನ ದೇವರು ನನಗೆ ಕಿವಿಗೊಡುತ್ತಾನೆ.

ಪ್ರಕಟನೆ 2:1-7

ಎಫೆಸದಲ್ಲಿರುವ ಸಭೆಗೆ ಯೇಸುವಿನ ಪತ್ರ

“ಎಫೆಸದಲ್ಲಿರುವ ಸಭೆಯ ದೂತನಿಗೆ ಇದನ್ನು ಬರೆ:

“ತನ್ನ ಬಲಗೈಯಲ್ಲಿ ಏಳು ನಕ್ಷತ್ರಗಳನ್ನು ಹಿಡಿದಿರುವಾತನು ಮತ್ತು ಏಳು ದೀಪಸ್ತಂಭಗಳ ನಡುವೆ ತಿರುಗಾಡುವಾತನು ನಿನಗೆ ಇವುಗಳನ್ನು ಹೇಳುತ್ತಾನೆ.

“ನೀನು ಮಾಡುತ್ತಿರುವುದು ನನಗೆ ತಿಳಿದಿದೆ. ನೀನು ಕಷ್ಟಪಟ್ಟು ಕೆಲಸಮಾಡುತ್ತಾ ತಾಳ್ಮೆಯಿಂದಿರುವೆ. ನೀನು ಕೆಟ್ಟ ಜನರನ್ನು ಸಹಿಸಿಕೊಳ್ಳುವುದಿಲ್ಲ ಎಂಬುದು ನನಗೆ ತಿಳಿದಿದೆ. ಅಪೊಸ್ತಲರಾಗಿಲ್ಲದಿದ್ದರೂ ತಮ್ಮನ್ನು ಅಪೊಸ್ತಲರೆಂದು ಹೇಳಿಕೊಳ್ಳುವವರನ್ನು ನೀನು ಪರೀಕ್ಷಿಸಿ, ಅವರು ಸುಳ್ಳುಗಾರರೆಂಬುದನ್ನು ಕಂಡುಹಿಡಿದಿರುವೆ. ನೀನು ತಾಳ್ಮೆಯಿಂದ ಸತತವಾಗಿ ಪ್ರಯತ್ನಿಸುತ್ತಿರುವೆ; ನನ್ನ ಹೆಸರಿನ ನಿಮಿತ್ತ ಬಾಧೆಯನ್ನು ಬೇಸರಪಡದೆ ಸಹಿಸಿಕೊಂಡೆ.

“ಆದರೆ ನಿನ್ನ ವಿರುದ್ಧವಾಗಿ ನಾನು ಹೇಳುವುದೇನೆಂದರೆ: ನಿನ್ನ ಮೊದಲಿನ ಪ್ರೀತಿಯನ್ನು ತೊರೆದುಬಿಟ್ಟಿರುವೆ. ಆದ್ದರಿಂದ ನೀನು ಎಲ್ಲಿಂದ ಬಿದ್ದಿದ್ದೀ ಎಂಬುದನ್ನು ನೆನಪು ಮಾಡಿಕೊ; ಮನಸ್ಸನ್ನು ಪರಿವರ್ತಿಸಿಕೊ. ನೀನು ಮೊದಲು ಮಾಡಿದ ಕಾರ್ಯಗಳನ್ನು ಮಾಡು. ನೀನು ಪರಿವರ್ತನೆಗೊಳ್ಳದಿದ್ದರೆ ನಾನು ನಿನ್ನಲ್ಲಿಗೆ ಬಂದು ನಿನ್ನ ದೀಪಸ್ತಂಭವನ್ನು ಅದರ ಸ್ಥಳದಿಂದ ತೆಗೆದುಬಿಡುತ್ತೇನೆ. ಆದರೆ ನೀನು ಯೋಗ್ಯವಾದ ಒಂದನ್ನು ಮಾಡುತ್ತಿರುವೆ. ಅದೇನೆಂದರೆ, ನಿಕೊಲಾಯಿತರು[a] ಮಾಡುವ ಕಾರ್ಯಗಳನ್ನು ನೀನು ದ್ವೇಷಿಸುತ್ತಿ. ನಾನು ಸಹ ಅವರ ಕಾರ್ಯಗಳನ್ನು ದ್ವೇಷಿಸುತ್ತೇನೆ.

“ಪವಿತ್ರಾತ್ಮನು ಸಭೆಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು. ಯಾವನು ಜಯಗಳಿಸುತ್ತಾನೋ ಅವನಿಗೆ ತಿನ್ನಲು ಜೀವದಾಯಕ ಮರದ ಹಣ್ಣನ್ನು ಕೊಡುತ್ತೇನೆ. ಈ ಮರವು ದೇವರ ತೋಟದಲ್ಲಿದೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International