Revised Common Lectionary (Complementary)
7 ನಾಚಿಕೆಯು ನನ್ನ ಮುಖವನ್ನು ಕವಿದಿದೆ.
ನಿನಗೋಸ್ಕರವಾಗಿ ಈ ನಾಚಿಕೆಯನ್ನು ಹೊತ್ತುಕೊಂಡಿದ್ದೇನೆ.
8 ನನ್ನ ಸಹೋದರರು ನನ್ನನ್ನು ಅಪರಿಚಿತನಂತೆ ಕಾಣುತ್ತಾರೆ.
ನನ್ನ ತಾಯಿಯ ಪುತ್ರರು ನನ್ನನ್ನು ಪರಕೀಯನಂತೆ ಕಾಣುತ್ತಾರೆ.
9 ನಿನ್ನ ಆಲಯಾಭಿಮಾನವು ನನ್ನನ್ನು ಬೆಂಕಿಯಂತೆ ದಹಿಸುತ್ತಿದೆ.
ನಿನ್ನನ್ನು ಗೇಲಿಮಾಡುವ ಜನರಿಂದ ನನಗೆ ಅಪಮಾನವಾಗುತ್ತಿದೆ.
10 ನಾನು ಅಳುತ್ತಾ ಉಪವಾಸಮಾಡುವೆನು.
ಅವರು ಅದಕ್ಕೂ ನನ್ನನ್ನು ಗೇಲಿಮಾಡುವರು.
11 ನಾನು ಶೋಕವಸ್ತ್ರವನ್ನು ಧರಿಸಿಕೊಂಡದ್ದು
ಗಾದೆಯ ಮಾತಾಯಿತು.
12 ಅವರು ನನ್ನ ಬಗ್ಗೆ ಬಹಿರಂಗ ಸ್ಥಳಗಳಲ್ಲಿ ಮಾತಾಡುವರು.
ಕುಡುಕರು ನನ್ನ ವಿಷಯದಲ್ಲಿ ಹಾಡನ್ನು ರಚಿಸುವರು.
13 ಯೆಹೋವನೇ, ನಾನಾದರೋ, ನಿನಗೆ ಮೊರೆಯಿಟ್ಟಿದ್ದೇನೆ;
ನಿನ್ನ ಕೃಪೆಗೆ ತಕ್ಕಕಾಲ ಇದೇ.
ದೇವರೇ, ನಿನ್ನ ಮಹಾಪ್ರೀತಿಯಿಂದಲೂ
ನಿಶ್ಚಿತವಾದ ರಕ್ಷಣೆಯಿಂದಲೂ ನನಗೆ ಉತ್ತರಿಸು.
14 ನನ್ನನ್ನು ಕಳ್ಳುಸುಬಿನಿಂದ ಮೇಲೆತ್ತು;
ಮುಳುಗಿಹೋಗಲು ಬಿಡಬೇಡ.
ನನ್ನನ್ನು ದ್ವೇಷಿಸುವ ಜನರಿಂದ ನನ್ನನ್ನು ರಕ್ಷಿಸು.
ಈ ಆಳವಾದ ನೀರಿನಿಂದ ನನ್ನನ್ನು ರಕ್ಷಿಸು.
15 ಅಲೆಗಳು ನನ್ನನ್ನು ಮುಳುಗಿಸಲು ಬಿಡಬೇಡ.
ಆಳವಾದ ಹಳ್ಳವು ನನ್ನನ್ನು ಎಳೆದುಕೊಳ್ಳಲು ಬಿಡಬೇಡ.
ಸಮಾಧಿಯು ನನ್ನನ್ನು ನುಂಗಲು ಬಿಡಬೇಡ.
16 ಯೆಹೋವನೇ, ನಿನ್ನ ಪ್ರೀತಿ ಎಷ್ಟೋ ಒಳ್ಳೆಯದು.
ನಿನ್ನ ಪೂರ್ಣಪ್ರೀತಿಯಿಂದ ನನಗೆ ಉತ್ತರಿಸು.
ನಿನ್ನ ಪೂರ್ಣ ಕರುಣೆಯಿಂದ ನನ್ನ ಕಡೆಗೆ ತಿರುಗಿ ಸಹಾಯಮಾಡು.
17 ನಿನ್ನ ಸೇವಕನಿಗೆ ವಿಮುಖನಾಗಬೇಡ.
ನಾನು ಆಪತ್ತಿನಲ್ಲಿದ್ದೇನೆ! ಬೇಗನೆ ನನಗೆ ಸಹಾಯಮಾಡು!
18 ಬಂದು ನನ್ನ ಪ್ರಾಣವನ್ನು ರಕ್ಷಿಸು.
ನನ್ನ ಶತ್ರುಗಳಿಂದ ನನ್ನನ್ನು ವಿಮೋಚಿಸು.
ಯೆರೆಮೀಯ ಮತ್ತು ಪಷ್ಹೂರನು
20 ಪಷ್ಹೂರನೆಂಬುವನು ಯಾಜಕನಾಗಿದ್ದನು. ಅವನು ಯೆಹೋವನ ಆಲಯದ ಮುಖ್ಯಾಧಿಕಾರಿಯಾಗಿದ್ದನು. ಪಷ್ಹೂರನು ಇಮ್ಮೇರನ ಮಗನು. ಯೆಹೋವನ ಆಲಯದ ಪ್ರಾಕಾರದಲ್ಲಿ ಯೆರೆಮೀಯನು ಮಾಡಿದ ಪ್ರವಾದನೆಯನ್ನು ಪಷ್ಹೂರನು ಕೇಳಿದನು. 2 ಅವನು ಪ್ರವಾದಿಯಾದ ಯೆರೆಮೀಯನನ್ನು ಹೊಡೆಯಿಸಿ ಯೆಹೋವನ ಆಲಯಕ್ಕೆ ಸೇರಿದ ಮೇಲಣ ಬೆನ್ಯಾಮೀನ್ ದ್ವಾರದಲ್ಲಿದ್ದ ಕೋಳಕ್ಕೆ ಹಾಕಿಸಿದನು. 3 ಮರುದಿನ ಪಷ್ಹೂರನು ಯೆರೆಮೀಯನನ್ನು ಕೋಳದಿಂದ ಬಿಡಿಸಿದನು. ಆಗ ಯೆರೆಮೀಯನು ಪಷ್ಹೂರನಿಗೆ ಹೀಗೆ ಹೇಳಿದನು: “ದೇವರು ನಿನ್ನನ್ನು ಪಷ್ಹೂರ್ ಎಂದು ಹೇಳುವದಿಲ್ಲ. ಈಗ ಯೆಹೋವನು ನಿನಗಿಟ್ಟ ಹೆಸರು, ‘ಪ್ರತಿಯೊಂದು ಭಾಗದಲ್ಲಿಯೂ ಭಯಂಕಾರಿ.’ 4 ಅದು ನಿನ್ನ ಹೆಸರು. ಏಕೆಂದರೆ ಯೆಹೋವನು ಹೇಳುತ್ತಾನೆ: ‘ನಾನು ತಕ್ಷಣ ನಿನ್ನನ್ನು ನಿನಗೆ ಭಯಂಕಾರಿಯನ್ನಾಗಿ ಮಾಡುವೆನು. ನಾನು ನಿನ್ನನ್ನು ನಿನ್ನ ಎಲ್ಲಾ ಸ್ನೇಹಿತರಿಗೆ ಭಯಂಕಾರಿಯನ್ನಾಗಿ ಮಾಡುವೆನು. ವೈರಿಗಳು ಖಡ್ಗಗಳಿಂದ ನಿನ್ನ ಸ್ನೇಹಿತರನ್ನು ಕೊಲ್ಲುವುದನ್ನು ನೀನು ನೋಡುವೆ. ಯೆಹೂದದ ಎಲ್ಲಾ ಜನರನ್ನು ನಾನು ಬಾಬಿಲೋನಿನ ರಾಜನಿಗೆ ಒಪ್ಪಿಸುವೆನು. ಅವನು ಯೆಹೂದ್ಯರನ್ನು ಬಾಬಿಲೋನಿಗೆ ತೆಗೆದುಕೊಂಡು ಹೋಗುವನು; ಅವನ ಸೈನಿಕರು ಯೆಹೂದ್ಯರನ್ನು ತಮ್ಮ ಕತ್ತಿಗಳಿಂದ ಕೊಂದುಹಾಕುವರು. 5 ಸಂಪತ್ತನ್ನು ಸಂಗ್ರಹಿಸಿ ಸಿರಿವಂತರಾಗಲು ಜೆರುಸಲೇಮಿನ ಜನರು ಬಹಳ ಕಷ್ಟಪಟ್ಟು ದುಡಿದರು. ಆದರೆ ನಾನು ಅದೆಲ್ಲವನ್ನು ಅವರ ವೈರಿಗಳಿಗೆ ಒಪ್ಪಿಸುವೆನು. ಜೆರುಸಲೇಮಿನ ರಾಜನ ಬಳಿ ಅನೇಕ ನಿಧಿನಿಕ್ಷೇಪಗಳಿವೆ. ಆದರೆ ನಾನು ಆ ನಿಧಿನಿಕ್ಷೇಪಗಳನ್ನೆಲ್ಲಾ ವೈರಿಗೆ ಒಪ್ಪಿಸುತ್ತೇನೆ. ವೈರಿಯು ಅವುಗಳನ್ನು ಬಾಬಿಲೋನ್ ದೇಶಕ್ಕೆ ತೆಗೆದುಕೊಂಡು ಹೋಗುವನು. 6 ಪಷ್ಹೂರನೇ, ನಿನ್ನನ್ನೂ ನಿನ್ನ ಮನೆಯಲ್ಲಿರುವವರೆಲ್ಲರನ್ನೂ ಬಲವಂತವಾಗಿ ಬಾಬಿಲೋನ್ ದೇಶಕ್ಕೆ ಸೆರೆ ಒಯ್ಯಲಾಗುವುದು. ನೀನು ಬಾಬಿಲೋನ್‌ನಲ್ಲಿ ಮರಣಹೊಂದುವೆ; ನಿನ್ನನ್ನು ಆ ಪರದೇಶದಲ್ಲಿಯೇ ಹೂಳಲಾಗುವುದು. ನೀನು ನಿನ್ನ ಸ್ನೇಹಿತರಿಗೆ ಸುಳ್ಳುಬೋಧನೆಯನ್ನು ಮಾಡಿದೆ. ಹೀಗಾಗುವುದಿಲ್ಲವೆಂದು ನೀನು ಹೇಳಿದೆ. ಆದರೆ ನಿನ್ನೆಲ್ಲ ಸ್ನೇಹಿತರು ಸಹ ಸತ್ತು ಬಾಬಿಲೋನಿನಲ್ಲಿ ಹೂಳಲ್ಪಡುವರು.’”
53 ಯೇಸು ಅಲ್ಲಿಂದ ಹೊರಟಾಗ ಧರ್ಮೋಪದೇಶಕರು ಮತ್ತು ಫರಿಸಾಯರು ಆತನಿಗೆ ಮತ್ತಷ್ಟು ತೊಂದರೆ ಕೊಡಲು ಪ್ರಾರಂಭಿಸಿದರು. ಅವರು ಅನೇಕ ಸಂಗತಿಗಳ ಕುರಿತು ಪ್ರಶ್ನೆಗಳನ್ನು ಕೇಳಿ, ಆತನಿಂದ ಉತ್ತರ ಹೇಳಿಸುವುದಕ್ಕೆ ಪ್ರಯತ್ನಿಸಿದರು. 54 ಯೇಸುವನ್ನು ಮಾತಿನಲ್ಲಿ ಹಿಡಿಯಬೇಕೆಂದು ಯೋಚಿಸಿ, ಆತನು ಏನಾದರೂ ತಪ್ಪು ಹೇಳುವಂತೆ ಮಾಡಲು ಪ್ರಯತ್ನಿಸುತ್ತಿದ್ದರು.
ಫರಿಸಾಯರಂತಾಗಬೇಡಿ
12 ಸಾವಿರಾರು ಜನರು ಒಬ್ಬರನ್ನೊಬ್ಬರು ನೂಕುತ್ತಾ ಕಿಕ್ಕಿರಿದು ನೆರೆದಿದ್ದರು. ಜನರಿಗೆ ಉಪದೇಶಿಸುವ ಮೊದಲು ಯೇಸು ತನ್ನ ಶಿಷ್ಯರಿಗೆ, “ಫರಿಸಾಯರ ಹುಳಿಹಿಟ್ಟಿನ ಬಗ್ಗೆ ಅಂದರೆ ಅವರ ಕಪಟತನದ ಬಗ್ಗೆ ಎಚ್ಚರಿಕೆಯಾಗಿರಿ. 2 ಮರೆಯಾದ ಪ್ರತಿಯೊಂದೂ ಬಯಲಾಗುವುದು. ಗುಪ್ತವಾಗಿರುವ ಪ್ರತಿಯೊಂದೂ ಪ್ರಕಟಿಸಲ್ಪಡುವುದು. 3 ಕತ್ತಲಿನಲ್ಲಿ (ಗುಪ್ತವಾಗಿ) ನೀವು ಹೇಳುವ ವಿಷಯಗಳು ಬೆಳಕಿನಲ್ಲಿ (ಬಹಿರಂಗವಾಗಿ) ತಿಳಿಸಲ್ಪಡುವವು. ಗುಪ್ತವಾಗಿ ಕೋಣೆಯಲ್ಲಿ ನೀವು ಪಿಸುಗುಟ್ಟುವ ವಿಷಯಗಳು, ಮನೆಯ ಮೇಲಿನಿಂದ ಗಟ್ಟಿಯಾಗಿ ಪ್ರಕಟಿಸಲ್ಪಡುವವು” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International