Revised Common Lectionary (Complementary)
41 ಯೆಹೋವನೇ, ನಿನ್ನ ಶಾಶ್ವತ ಪ್ರೀತಿಯನ್ನು ನನಗೆ ತೋರಿಸು.
ನಿನ್ನ ವಾಗ್ದಾನದಂತೆ ನನ್ನನ್ನು ರಕ್ಷಿಸು.
42 ನನ್ನನ್ನು ಗೇಲಿಮಾಡುವ ಜನರಿಗೆ ಆಗ ನಾನು ಉತ್ತರ ಕೊಡುವೆನು.
ಯೆಹೋವನೇ, ನಿನ್ನ ಮಾತುಗಳಲ್ಲೇ ನಾನು ಭರವಸವಿಟ್ಟಿದ್ದೇನೆ.
43 ನಿನ್ನ ಸತ್ಯೋಪದೇಶಗಳನ್ನು ನಾನು ಯಾವಾಗಲೂ ಮಾತಾಡುವಂತಾಗಲಿ.
ನಿನ್ನ ಜ್ಞಾನದ ನಿರ್ಧಾರಗಳನ್ನೇ ನಾನು ಆಶ್ರಯಿಸಿಕೊಂಡಿದ್ದೇನೆ.
44 ನಿನ್ನ ಉಪದೇಶಗಳನ್ನು ಎಂದೆಂದಿಗೂ ಅನುಸರಿಸುವೆನು.
45 ಯಾಕೆಂದರೆ, ನಿನ್ನ ನಿಯಮಗಳಿಗೆ ವಿಧೇಯನಾಗಲು
ನಾನು ಬಹಳವಾಗಿ ಪ್ರಯತ್ನಿಸುತ್ತಿರುವುದರಿಂದ ಯಾರ ಹಂಗಿಲ್ಲದೆ ನಡೆಯುವೆನು.
46 ರಾಜರುಗಳ ಮುಂದೆಯೂ
ಯೆಹೋವನ ಒಡಂಬಡಿಕೆಯ ಕುರಿತು ಚರ್ಚಿಸುವೆನು, ನಾಚಿಕೆಪಡುವುದಿಲ್ಲ.
47 ನಿನ್ನ ಆಜ್ಞೆಗಳಲ್ಲಿ ಆನಂದಿಸುವೆನು;
ಅವು ನನಗೆ ಇಷ್ಟವಾಗಿವೆ.
48 ನಿನ್ನ ಆಜ್ಞೆಗಳನ್ನು ಕೊಂಡಾಡುವೆನು, ಅವುಗಳನ್ನು ಧ್ಯಾನಿಸುವೆನು.
ಅವು ನನಗೆ ಇಷ್ಟವಾಗಿವೆ.
16 ಜನರು ತಾವು ಹೇಳಬೇಕಾದದ್ದನ್ನು ಆಲೋಚಿಸಿಕೊಂಡರೂ ನಾಲಿಗೆಗೆ ತಕ್ಕ ಮಾತುಗಳನ್ನು ಕೊಡುವವನು ಯೆಹೋವನೇ.
2 ಜನರು ತಮ್ಮ ಕಾರ್ಯಗಳೆಲ್ಲಾ ಸರಿಯೆಂದು ಆಲೋಚಿಸಿಕೊಂಡರೂ ಅವುಗಳ ಉದ್ದೇಶಕ್ಕನುಸಾರವಾಗಿ ತೀರ್ಪು ಕೊಡುವವನು ಯೆಹೋವನೇ.
3 ನಿಮ್ಮ ಕಾರ್ಯಗಳನ್ನು ಯೆಹೋವನಿಗೆ ವಹಿಸಿರಿ; ಆಗ ನಿಮ್ಮ ಯೋಜನೆಗಳೆಲ್ಲಾ ಸಫಲವಾಗುವವು.
4 ಯೆಹೋವನು ಪ್ರತಿಯೊಂದನ್ನು ತನ್ನ ಉದ್ದೇಶಕ್ಕನುಸಾರವಾಗಿ ಮಾಡಿದ್ದಾನೆ. ಆತನು ಕೆಡುಕರನ್ನು ನಾಶನದ ದಿನಕ್ಕಾಗಿ ಇಟ್ಟಿದ್ದಾನೆ.
5 ಗರ್ವಿಷ್ಠರು ಯೆಹೋವನಿಗೆ ಅಸಹ್ಯ. ಆ ಗರ್ವಿಷ್ಠರಿಗೆ ಯೆಹೋವನ ದಂಡನೆ ಖಂಡಿತ.
6 ಪ್ರೀತಿ ಮತ್ತು ನಂಬಿಗಸ್ತಿಕೆಗಳು ದೋಷಕ್ಕೆ ಪ್ರಾಯಶ್ಚಿತ್ತವಾಗಿವೆ. ಯೆಹೋವನಲ್ಲಿ ಭಯಭಕ್ತಿಯಿಂದಿರಿ, ಆಗ ನೀವು ದುಷ್ಟತನದಿಂದ ದೂರವಾಗುವಿರಿ.
7 ಯೆಹೋವನ ಚಿತ್ತಕ್ಕನುಸಾರವಾಗಿ ಜೀವಿಸುವವನು ತನ್ನ ವೈರಿಗಳೊಡನೆಯೂ ಸಮಾಧಾನದಿಂದಿರುವನು.
8 ಅನ್ಯಾಯದಿಂದ ಹೆಚ್ಚು ಸಂಪಾದಿಸುವುದಕ್ಕಿಂತ ನ್ಯಾಯವಾಗಿ ಸ್ವಲ್ಪ ಸಂಪಾದಿಸುವುದೇ ಉತ್ತಮ.
9 ಒಬ್ಬನು ಅನೇಕ ಯೋಜನೆಗಳನ್ನು ಮಾಡಿಕೊಂಡರೂ ಭವಿಷ್ಯತ್ತನ್ನು ನಿರ್ಧರಿಸುವವನು ಯೆಹೋವನೇ.
10 ರಾಜನ ಮಾತು ದೇವರಿಂದ ಬಂದ ಸಂದೇಶದಂತಿದೆ. ಅವನ ತೀರ್ಮಾನ ಯಾವಾಗಲೂ ನ್ಯಾಯವಾಗಿರಬೇಕು.
11 ಎಲ್ಲಾ ನ್ಯಾಯವಾದ ಅಳತೆಮಾಪಕಗಳು ಮತ್ತು ತಕ್ಕಡಿಗಳು ಯೆಹೋವನಿಗೆ ಇಷ್ಟ. ನ್ಯಾಯವಾದ ಒಪ್ಪಂದವು ಆತನಿಗೆ ಇಷ್ಟ.
12 ರಾಜನು ಕೆಟ್ಟದ್ದನ್ನು ಸಹಿಸಲಾರನು; ಯಾಕೆಂದರೆ ಒಳ್ಳೆಯದರಿಂದಲೇ ಅವನ ರಾಜ್ಯಕ್ಕೆ ಬಲ.
13 ರಾಜರಿಗೆ ಸತ್ಯವನ್ನು ಕೇಳಲು ಇಷ್ಟ, ಸುಳ್ಳಾಡದ ಜನರೂ ಇಷ್ಟ.
14 ರಾಜನು ಕೋಪದಿಂದಿರುವಾಗ ಯಾರನ್ನಾದರೂ ಕೊಂದರೂ ಕೊಲ್ಲಬಹುದು. ಆದರೆ ಜ್ಞಾನಿಯು ಆತನ ಕೋಪವನ್ನು ಶಮನಗೊಳಿಸಬಲ್ಲನು.
15 ರಾಜನು ಸಂತೋಷದಿಂದಿರುವಾಗ ಎಲ್ಲರ ಜೀವನವು ಉತ್ತಮವಾಗಿರುವುದು. ರಾಜನು ನಿನ್ನನ್ನು ಮೆಚ್ಚಿಕೊಂಡರೆ, ಅದು ನಿನ್ನ ಪಾಲಿಗೆ ಮೋಡದಿಂದ ಸುರಿಯುವ ಮುಂಗಾರು ಮಳೆಯಂತಿರುವುದು.
16 ಜ್ಞಾನ ಸಂಪಾದನೆಯು ಬಂಗಾರ ಸಂಪಾದನೆಗಿಂತಲೂ ಶ್ರೇಷ್ಠ. ವಿವೇಕ ಸಂಪಾದನೆಯು ಬೆಳ್ಳಿ ಸಂಪಾದನೆಗಿಂತಲೂ ಉತ್ತಮ.
17 ನೀತಿವಂತನ ಜೀವಿತವು ದುಷ್ಟತನದಿಂದ ದೂರವಾಗಿರುವುದು. ತನ್ನ ಜೀವಿತದ ಬಗ್ಗೆ ಎಚ್ಚರಿಕೆಯುಳ್ಳವನು ತನ್ನ ಪ್ರಾಣವನ್ನು ಕಾಪಾಡಿಕೊಳ್ಳುವನು.
18 ಅಹಂಕಾರಿಯು ನಾಶನದ ಅಪಾಯದಲ್ಲಿದ್ದಾನೆ. ದುರಾಭಿಮಾನಿಯು ಸೋಲಿನ ಅಪಾಯದಲ್ಲಿದ್ದಾನೆ.
19 ಗರ್ವಿಷ್ಠರೊಡನೆ ಐಶ್ವರ್ಯವನ್ನು ಹಂಚಿಕೊಳ್ಳುವದಕ್ಕಿಂತ ದೀನರಾಗಿದ್ದು ಬಡಜನರೊಡನೆ ವಾಸಿಸುವುದೇ ಉತ್ತಮ.
20 ಉಪದೇಶವನ್ನು ಗಮನವಿಟ್ಟು ಕೇಳುವವನು ಅದರ ಲಾಭ ಹೊಂದುವನು; ಯೆಹೋವನಲ್ಲಿ ಭರವಸೆ ಇಡುವವನು ಆಶೀರ್ವಾದ ಹೊಂದುವನು.
ಧನಿಕ ಯುವಕನ ಸಮಸ್ಯೆ
(ಮಾರ್ಕ 10:17-31; ಲೂಕ 18:18-30)
16 ಒಬ್ಬನು ಯೇಸುವಿನ ಬಳಿಗೆ ಬಂದು, “ಬೋಧಕನೇ ನಾನು ನಿತ್ಯಜೀವ ಹೊಂದಲು ಯಾವ ಒಳ್ಳೆಯ ಕಾರ್ಯವನ್ನು ಮಾಡಬೇಕು?” ಎಂದು ಕೇಳಿದನು.
17 ಯೇಸು, “ಒಳ್ಳೆಯದನ್ನು ಕುರಿತು ನೀನು ನನ್ನನ್ನು ಕೇಳುವುದೇಕೆ? ದೇವರೊಬ್ಬನೇ ಒಳ್ಳೆಯವನು. ಆದರೆ ನೀನು ನಿತ್ಯಜೀವವನ್ನು ಹೊಂದಬೇಕೆಂದಿದ್ದರೆ ಈ ಆಜ್ಞೆಗಳಿಗೆ ವಿಧೇಯನಾಗು” ಎಂದು ಉತ್ತರಕೊಟ್ಟನು.
18 ಆ ಮನುಷ್ಯನು, “ಯಾವ ಆಜ್ಞೆಗಳು?” ಎಂದು ಕೇಳಿದನು.
ಯೇಸು “ಕೊಲೆ ಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು. 19 ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು ಮತ್ತು ನಿನ್ನನ್ನು ನೀನು ಪ್ರೀತಿಸುವಂತೆ ಬೇರೆಯವರನ್ನೂ ಪ್ರೀತಿಸಬೇಕು”(A) ಎಂದು ಉತ್ತರಕೊಟ್ಟನು.
20 ಆ ಯುವಕನು, “ನಾನು ಇವೆಲ್ಲವುಗಳಿಗೆ ವಿಧೇಯನಾಗಿದ್ದೇನೆ. ನಾನು ಬೇರೆ ಏನಾದರೂ ಮಾಡಬೇಕೇ?” ಎಂದು ಕೇಳಿದನು.
21 ಯೇಸು, “ನೀನು ಸಂಪೂರ್ಣನಾಗಬೇಕೆಂದಿದ್ದರೆ ಹೋಗಿ ನಿನ್ನ ಆಸ್ತಿಯನ್ನೆಲ್ಲಾ ಮಾರಿ, ಬಂದ ಹಣವನ್ನು ಬಡವರಿಗೆ ಕೊಡು. ಆಗ ನಿನಗೆ ಪರಲೋಕದಲ್ಲಿ ದೊಡ್ಡ ಭಂಡಾರ ಇರುವುದು. ನಂತರ ಬಂದು ನನ್ನನ್ನು ಹಿಂಬಾಲಿಸು!” ಎಂದು ಉತ್ತರಕೊಟ್ಟನು.
22 ಇದನ್ನು ಕೇಳಿದಾಗ ಅವನು ಬಹಳ ದುಃಖದಿಂದ ಹೊರಟುಹೋದನು. ಏಕೆಂದರೆ ಅವನು ದೊಡ್ಡ ಐಶ್ವರ್ಯವಂತನಾಗಿದ್ದನು.
Kannada Holy Bible: Easy-to-Read Version. All rights reserved. © 1997 Bible League International