Revised Common Lectionary (Complementary)
7 ಸೇನಾಧೀಶ್ವರನಾದ ದೇವರೇ, ನಮ್ಮನ್ನು ಮತ್ತೆ ಸ್ವೀಕರಿಸಿಕೊ.
ಪ್ರಸನ್ನಮುಖದಿಂದ ನಮ್ಮ ಕಡೆಗೆ ನೋಡಿ ನಮ್ಮನ್ನು ರಕ್ಷಿಸು.
8 ಹಿಂದಿನ ಕಾಲದಲ್ಲಿ ನೀನು ನಮ್ಮನ್ನು
ಅಮೂಲ್ಯವಾದ ಸಸಿಯಂತೆ ನೋಡಿಕೊಂಡೆ.
ನಿನ್ನ “ದ್ರಾಕ್ಷಾಲತೆ”ಯನ್ನು ಈಜಿಪ್ಟಿನಿಂದ ತೆಗೆದುಕೊಂಡು ಬಂದೆ.
ನೀನು ಬೇರೆ ಜನರನ್ನು ಈ ನಾಡಿನಿಂದ ಹೊರಗಟ್ಟಿ ನಿನ್ನ “ದ್ರಾಕ್ಷಾಲತೆ”ಯನ್ನು ನೆಟ್ಟೆ.
9 “ದ್ರಾಕ್ಷಾಲತೆ”ಯು ಬೆಳೆಯಲೆಂದು ಭೂಮಿಯನ್ನು ಹದ ಮಾಡಿದೆ.
ಅದರ ಬೇರುಗಳು ಬಲವಾಗಿ ಬೆಳೆಯಲು ಸಹಾಯಮಾಡಿದೆ.
ಬಹುಬೇಗನೆ “ದ್ರಾಕ್ಷಾಲತೆ”ಯು ದೇಶದಲ್ಲೆಲ್ಲಾ ಹಬ್ಬಿಕೊಂಡಿತು.
10 ಅದರ ನೆರಳಿನಿಂದ ಬೆಟ್ಟಗಳು ಕವಿದುಕೊಂಡವು.
ಅದರ ಎಲೆಗಳ ನೆರಳಿನಿಂದ ದೇವದಾರು ವೃಕ್ಷಗಳು ಕವಿದುಕೊಂಡವು.
11 ಅದರ ಬಳ್ಳಿಗಳು ಮೆಡಿಟರೇನಿಯನ್ ಸಮುದ್ರದವರೆಗೂ ಹಬ್ಬಿಕೊಂಡವು.
ಅದರ ರೆಂಬೆಗಳು ಯೂಫ್ರೇಟೀಸ್ ನದಿಯವರೆಗೂ ಹಬ್ಬಿಕೊಂಡವು.
12 ನಿನ್ನ “ದ್ರಾಕ್ಷಾಲತೆ”ಯ ಸಂರಕ್ಷಣೆಗಾಗಿ ಕಟ್ಟಿದ್ದ ಗೋಡೆಗಳನ್ನು ನೀನು ಕೆಡವಿಬಿಟ್ಟದ್ದೇಕೆ?
ಈಗ ಅದರ ಸಮೀಪದಲ್ಲಿ ಹೋಗುವ ಪ್ರತಿಯೊಬ್ಬರೂ ಅದರ ಹಣ್ಣುಗಳನ್ನು ತೆಗೆದುಕೊಳ್ಳುವರು.
13 ಕಾಡುಹಂದಿಗಳು ಬಂದು ನಿನ್ನ “ದ್ರಾಕ್ಷಾಲತೆ”ಯ ಮೇಲೆ ನಡೆಯುತ್ತವೆ.
ಕಾಡುಪ್ರಾಣಿಗಳು ಬಂದು ಅವುಗಳ ಎಲೆಗಳನ್ನು ತಿನ್ನುತ್ತವೆ.
14 ಸೇನಾಧೀಶ್ವರನಾದ ದೇವರೇ, ಹಿಂತಿರುಗಿ ಬಾ.
ಪರಲೋಕದಿಂದ ನಿನ್ನ “ದ್ರಾಕ್ಷಾಲತೆ”ಯನ್ನು ನೋಡಿ ಅದನ್ನು ಸಂರಕ್ಷಿಸು.
15 ನಿನ್ನ ಸ್ವಂತ ಕೈಗಳಿಂದ ನೀನು ನೆಟ್ಟ “ದ್ರಾಕ್ಷಾಲತೆ”ಯನ್ನು ನೋಡು.
ನೀನು ಬೆಳೆಸಿದ ಎಳೆ ಸಸಿಯನ್ನು[a] ನೋಡು.
14 “ಇಸ್ರೇಲಿನ ಜನರು ಗುಲಾಮರಾಗಿರುವರೇ?
ಅವರು ಗುಲಾಮರಾಗಿ ಹುಟ್ಟಿದ ಮನುಷ್ಯನಂತಿರುವರೇ?
ಬೇರೆಯವರು ಇಸ್ರೇಲರ ಸಂಪತ್ತನ್ನು ಏಕೆ ತೆಗೆದುಕೊಂಡರು?
15 ಪ್ರಾಯದಸಿಂಹಗಳು (ವೈರಿಗಳು) ಇಸ್ರೇಲ್ ಜನಾಂಗದ ಮೇಲೆ ಗರ್ಜಿಸುತ್ತಿವೆ.
ಆ ಸಿಂಹಗಳು ಆರ್ಭಟಿಸುತ್ತಿವೆ; ಇಸ್ರೇಲರ ನಾಡನ್ನು ನಾಶಮಾಡಿವೆ.
ಇಸ್ರೇಲ್‌ನ ನಗರಗಳು ಸುಡಲ್ಪಟ್ಟಿವೆ;
ಅವುಗಳು ನಿರ್ಜನವಾಗಿವೆ.
16 ಮೆಂಫೀಸ್ ಮತ್ತು ತಹಪನೇಸ್ ನಗರಗಳ ಜನರು
ನಿನ್ನ ತಲೆಬುರುಡೆಯನ್ನು ಒಡೆದುಬಿಟ್ಟಿದ್ದಾರೆ.
17 ತೊಂದರೆಯು ನಿನ್ನ ತಪ್ಪಿನ ಫಲ.
ನಿನ್ನನ್ನು ಸರಿಯಾದ ಮಾರ್ಗದಲ್ಲಿ ನಡೆಸುತ್ತಿದ್ದ
ನಿನ್ನ ದೇವರಾದ ಯೆಹೋವನಿಗೆ ನೀನು ವಿಮುಖನಾದೆ.
18 ಯೆಹೂದದ ಜನರೇ, ಅದರ ಬಗ್ಗೆ ಯೋಚಿಸಿರಿ.
ಇದರಿಂದ ನಿಮಗೆ ಈಜಿಪ್ಟಿಗೆ ಹೋಗಲು ಸಹಾಯವಾಯಿತೇ?
ನೈಲ್ ನದಿಯ ನೀರನ್ನು ಕುಡಿಯಲು ಈಜಿಪ್ಟಿಗೆ ಹೋಗುವುದೇಕೆ?[a]
ಅವರ ನದಿಯ ನೀರನ್ನು ಕುಡಿಯಲು ಅಸ್ಸೀರಿಯಕ್ಕೆ ಹೋಗುವುದೇಕೆ?
19 ನೀವು ಕೆಟ್ಟದ್ದನ್ನು ಮಾಡಿದರೆ
ಆ ಕೆಟ್ಟತನ ನಿಮಗೆ ಶಿಕ್ಷೆಯಾಗುವಂತೆ ಮಾತ್ರ ಮಾಡುತ್ತದೆ.
ನಿಮಗೆ ವಿಪತ್ತು ಬರುತ್ತದೆ.
ಆ ವಿಪತ್ತು ನಿಮಗೊಂದು ಪಾಠವನ್ನು ಕಲಿಸುತ್ತದೆ.
ಅದರ ಬಗ್ಗೆ ಯೋಚಿಸಿರಿ.
ಆಗ ನಿಮ್ಮ ದೇವರಿಗೆ ವಿಮುಖರಾಗುವುದು ಎಷ್ಟು ಕೆಟ್ಟದ್ದೆಂದು ನಿಮಗೆ ಗೊತ್ತಾಗುತ್ತದೆ.
ನನಗೆ ಭಯಭಕ್ತಿ ತೋರದೆ ಇರುವದು ತಪ್ಪು.”
ಈ ಸಂದೇಶವು ನನ್ನ ಒಡೆಯನೂ ಸರ್ವಶಕ್ತನೂ ಆಗಿರುವ ಯೆಹೋವನಿಂದ ಬಂದಿತು.
20 “ಯೆಹೂದವೇ, ಬಹಳ ದಿನಗಳ ಹಿಂದೆಯೇ ನೀನು ನಿನ್ನ ನೊಗವನ್ನು ಕಳಚಿ ಎಸೆದುಬಿಟ್ಟೆ.
ನನ್ನೊಂದಿಗೆ ಬಂಧಿಸಿದ ಕಣ್ಣಿಗಳನ್ನು ಹರಿದುಬಿಟ್ಟೆ.
‘ನಾನು ನಿನ್ನನ್ನು ಸೇವಿಸುವದಿಲ್ಲ’ ವೆಂದು ನನಗೆ ಹೇಳಿಬಿಟ್ಟೆ.
ನಿಜವಾಗಿ ನೋಡಿದರೆ ಎತ್ತರವಾದ ಎಲ್ಲಾ ಪರ್ವತಗಳ ಮೇಲೂ ಮತ್ತು ಸೊಂಪಾಗಿ ಬೆಳೆದ ಎಲ್ಲಾ ಮರಗಳ ಕೆಳಗೂ
ನೀನು ಮಲಗಿಕೊಂಡು ವೇಶ್ಯೆಯರಂತೆ ವರ್ತಿಸಿದೆ.[b]
21 ಯೆಹೂದವೇ, ನಾನು ನಿನ್ನನ್ನು ಅತ್ಯುತ್ತಮ ದ್ರಾಕ್ಷಾಲತೆಯಂತೆ ನೆಟ್ಟೆ.
ನೀನು ಒಳ್ಳೆಯ ಬೀಜದಂತಿದ್ದಿ.
ನೀನು ಕೆಟ್ಟ ಫಲಗಳನ್ನು ಫಲಿಸುವ ಬೇರೆ ದ್ರಾಕ್ಷಿಯ ಬಳ್ಳಿಯಾದದ್ದು ಹೇಗೆ?
22 ನೀನು ಚೌಳನಿಂದ ತೊಳೆದುಕೊಂಡರೂ
ಹೆಚ್ಚು ಸೋಪನ್ನು ಉಪಯೋಗಿಸಿದರೂ
ನಾನು ನಿನ್ನ ದೋಷವನ್ನು ಕಂಡುಹಿಡಿಯಬಲ್ಲೆ” ಅನ್ನುತ್ತಾನೆ ಯೆಹೋವನು.
ಮಾನವ ನಿರ್ಮಿತ ನಿಯಮಗಳನ್ನು ಅನುಸರಿಸಬೇಡಿ
16 ಹೀಗಿರುವುದರಿಂದ ತಿಂದು ಕುಡಿಯುವುದರ ಬಗ್ಗೆ ಇಲ್ಲವೆ ಯೆಹೂದ್ಯರ ಪದ್ಧತಿಗಳ (ಹಬ್ಬಗಳು, ಅಮಾವಾಸ್ಯೆಯ ಆಚರಣೆಗಳು, ಸಬ್ಬತ್ ದಿನಗಳು) ಬಗ್ಗೆ ನಿಮಗೆ ನಿಯಮಗಳನ್ನು ರೂಪಿಸಲು ಯಾರಿಗೂ ಅವಕಾಶ ಕೊಡಬೇಡಿ. 17 ಪೂರ್ವಕಾಲದಲ್ಲಿ ಈ ಸಂಗತಿಗಳೆಲ್ಲ ಮುಂದೆ ಬರಬೇಕಾಗಿದ್ದವುಗಳ ಛಾಯೆಗಳಾಗಿದ್ದವು. ಅವುಗಳ ನಿಜರೂಪವು ಕ್ರಿಸ್ತನಲ್ಲಿ ತೋರಿಬಂದಿತು. 18 ಕೆಲವರು ದೇವದೂತರ ಪೂಜೆಯಲ್ಲಿಯೂ ಅತಿವಿನಯವಂತರಂತೆ ನಟಿಸುವುದರಲ್ಲಿಯೂ ಆಸಕ್ತರಾಗಿದ್ದಾರೆ. ಆ ಜನರು ತಾವು ಕಂಡ ದರ್ಶನಗಳ ಬಗ್ಗೆ ಯಾವಾಗಲೂ ಮಾತನಾಡುತ್ತಿರುತ್ತಾರೆ. “ನೀವು ಇಂಥಿಂಥ ಕಾರ್ಯಗಳನ್ನು ಮಾಡದಿರುವುದರಿಂದ ತಪ್ಪಿತಸ್ಥರಾಗಿದ್ದೀರಿ” ಎಂದು ಆ ಜನರು ನಿಮ್ಮ ಬಗ್ಗೆ ಹೇಳಲು ಅವಕಾಶಕೊಡಬೇಡಿ. ಅವರ ಪ್ರಾಪಂಚಿಕ ಆಲೋಚನೆಯು ಅವರನ್ನು ನಿಷ್ಕಾರಣವಾಗಿ ಗರ್ವದಿಂದ ಉಬ್ಬಿಸುತ್ತದೆ. 19 ಆ ಜನರು ತಮ್ಮನ್ನು ಕ್ರಿಸ್ತನೆಂಬ ಶಿರಸ್ಸಿನ ಅಧೀನಕ್ಕೆ ಒಳಪಡಿಸುವುದಿಲ್ಲ. ಇಡೀ ದೇಹವು ಆತನನ್ನೇ ಅವಲಂಬಿಸಿಕೊಂಡಿದೆ. ಆತನಿಂದಲೇ ದೇಹದ ಅಂಗಾಂಗಗಳು ಇತರ ಅಂಗಗಳ ಬಗ್ಗೆ ಚಿಂತಿಸುತ್ತವೆ ಮತ್ತು ಪರಸ್ಪರ ಸಹಾಯ ಮಾಡುತ್ತವೆ. ಇದರಿಂದ ದೇಹವು ಬಲಗೊಂಡು ಒಂದಾಗಿ ಕೂಡಿಸಲ್ಪಡುತ್ತದೆ. ಹೀಗೆ, ದೇವರ ಇಚ್ಛೆಯಂತೆ ದೇಹವು ಬೆಳೆಯುತ್ತದೆ.
20 ನೀವು ಕ್ರಿಸ್ತನೊಂದಿಗೆ ಸತ್ತು ಪ್ರಾಪಂಚಿಕವಾದ ನಿರರ್ಥಕ ನಿಯಮಗಳಿಂದ ಬಿಡುಗಡೆ ಹೊಂದಿದ್ದೀರಿ. ಹೀಗಿದ್ದರೂ ನೀವು ಈ ಲೋಕಕ್ಕೆ ಸೇರಿದವರಂತೆ ವರ್ತಿಸುವುದೇಕೆ? ಈ ನಿಯಮಗಳನ್ನು ಏಕೆ ಅನುಸರಿಸುತ್ತಿರುವಿರಿ ಎಂಬುದೇ ನನ್ನ ಮಾತಿನ ಅರ್ಥ: 21 “ಇದನ್ನು ತಿನ್ನಬೇಡ”, “ಅದರ ರುಚಿ ನೋಡಬೇಡ”, “ಅದನ್ನು ಮುಟ್ಟಬೇಡ” ಎಂದು ಹೇಳುವುದೇಕೆ? 22 ಪ್ರಾಪಂಚಿಕ ವಿಷಯಗಳ ಕುರಿತಾದ ಈ ನಿಯಮಗಳೆಲ್ಲ ಬಳಸಿದ ಮೇಲೆ ನಾಶವಾಗುತ್ತವೆ. ಅವುಗಳು ಜನರ ಆಜ್ಞೆ ಮತ್ತು ಜನರ ಉಪದೇಶಗಳೇ ಹೊರತು ದೇವರವಲ್ಲ. 23 ಈ ನಿಯಮಗಳು ನೋಡುವುದಕ್ಕೆ ಬದ್ಧಿಯುಳ್ಳವಾಗಿವೆ. ಆದರೆ ಅತಿವಿನಯವಂತರಂತೆ ನಟಿಸಲು ಮತ್ತು ತಮ್ಮ ದೇಹಗಳನ್ನು ದಂಡಿಸಲು ಜನರನ್ನು ಪ್ರೆರೇಪಿಸುವ ಅವುಗಳು ಕೇವಲ ಮಾನವ ನಿರ್ಮಿತವಾದ ಧರ್ಮದ ಒಂದು ಭಾಗವಾಗಿವೆ. ಆದರೆ ಪಾಪಸ್ವಭಾವವು ಇಚ್ಛಿಸುವ ದುಷ್ಕೃತ್ಯಗಳನ್ನು ಮಾಡದಂತೆ ಅವು ಜನರಿಗೆ ಯಾವ ಸಹಾಯವನ್ನೂ ಮಾಡುವುದಿಲ್ಲ.
Kannada Holy Bible: Easy-to-Read Version. All rights reserved. © 1997 Bible League International