Revised Common Lectionary (Complementary)
ಸ್ತುತಿಗೀತೆ.
98 ಯೆಹೋವನಿಗೆ ಹೊಸಹಾಡನ್ನು ಹಾಡಿರಿ.
ಆತನು ಅಮೋಘವಾದ ಕಾರ್ಯಗಳನ್ನು ಮಾಡಿದ್ದಾನೆ!
ಆತನ ಬಲಗೈಯೂ ಪರಿಶುದ್ಧ ಬಾಹುವೂ
ಆತನಿಗೆ ಜಯವನ್ನು ಉಂಟುಮಾಡಿವೆ.
2 ಯೆಹೋವನು ತನ್ನ ರಕ್ಷಣಾಶಕ್ತಿಯನ್ನು ಜನಾಂಗಗಳಿಗೆ ತೋರಿದನು.
ಆತನು ತನ್ನ ನೀತಿಯನ್ನು ಅವರಿಗೆ ಪ್ರಕಟಿಸಿದ್ದಾನೆ.
3 ಇಸ್ರೇಲರ ಕಡೆಗಿದ್ದ ಆತನ ಪ್ರೀತಿಸತ್ಯತೆಗಳನ್ನು ಆತನ ಜನರು ಜ್ಞಾಪಿಸಿಕೊಂಡಿದ್ದಾರೆ.
ದೂರದೇಶಗಳ ಜನರು ನಮ್ಮ ದೇವರ ರಕ್ಷಣಾಶಕ್ತಿಯನ್ನು ಕಂಡಿದ್ದಾರೆ.
4 ಭೂನಿವಾಸಿಗಳೆಲ್ಲರೇ, ಯೆಹೋವನಿಗೆ ಆನಂದ ಘೋಷಮಾಡಿರಿ.
ಆತನಿಗೆ ಸ್ತುತಿಗೀತೆಗಳನ್ನು ಹಾಡಿರಿ!
5 ಹಾರ್ಪ್ವಾದ್ಯಗಳೊಡನೆ, ಯೆಹೋವನನ್ನು ಕೊಂಡಾಡಿರಿ.
ಹಾರ್ಪ್ವಾದ್ಯಗಳನ್ನು ನುಡಿಸುತ್ತಾ ಆತನನ್ನು ಸುತ್ತಿಸಿರಿ.
6 ತುತ್ತೂರಿಗಳನ್ನೂ ಕೊಂಬುಗಳನ್ನೂ ಊದಿರಿ.
ನಮ್ಮ ರಾಜನಾದ ಯೆಹೋವನಿಗೆ ಆನಂದಘೋಷ ಮಾಡಿರಿ!
7 ಸಮುದ್ರವೂ ಭೂಮಿಯೂ
ಅವುಗಳಲ್ಲಿರುವ ಸಮಸ್ತವೂ ಗಟ್ಟಿಯಾಗಿ ಹಾಡಲಿ.
8 ನದಿಗಳೇ, ಚಪ್ಪಾಳೆ ತಟ್ಟಿರಿ!
ಬೆಟ್ಟಗಳೇ, ಒಟ್ಟಾಗಿ ಹಾಡಿರಿ!
9 ಯೆಹೋವನ ಎದುರಿನಲ್ಲಿ ಹಾಡಿರಿ,
ಯಾಕೆಂದರೆ ಆತನು ಭೂಲೋಕವನ್ನು ಆಳಲು[a] ಬರುತ್ತಿದ್ದಾನೆ.
ಆತನು ಪ್ರಪಂಚವನ್ನು ನ್ಯಾಯವಾಗಿ ಆಳುತ್ತಾನೆ.
ಆತನು ಜನರನ್ನು ನೀತಿಯಿಂದ ಆಳುತ್ತಾನೆ.
ಬಂಗಾರದ ವಿಗ್ರಹ ಮತ್ತು ಉರಿಯುವ ಕುಲುಮೆ
3 ಅರಸನಾದ ನೆಬೂಕದ್ನೆಚ್ಚರನು ಒಂದು ಬಂಗಾರದ ವಿಗ್ರಹವನ್ನು ಮಾಡಿಸಿದ್ದನು. ಆ ವಿಗ್ರಹವು ಅರವತ್ತು ಮೊಳ ಎತ್ತರವಾಗಿತ್ತು. ಆರು ಮೊಳ ಅಗಲವಾಗಿತ್ತು. ಆ ವಿಗ್ರಹವನ್ನು ಬಾಬಿಲೋನ್ ಪ್ರಾಂತ್ಯದ ದೂರಾ ಎಂಬ ಬಯಲಿನಲ್ಲಿ ನಿಲ್ಲಿಸಿದನು. 2 ಅರಸನು ಆ ವಿಗ್ರಹದ ಪ್ರತಿಷ್ಠಾಪನೆಯ ಮಹೋತ್ಸವಕ್ಕೆ ಉಪರಾಜರನ್ನು, ನಾಯಕರನ್ನು, ದೇಶಾಧಿಪತಿಗಳನ್ನು, ಮಂತ್ರಿಗಳನ್ನು, ಕೋಶಾಧ್ಯಕ್ಷರನ್ನು, ನ್ಯಾಯಾಧಿಪತಿಗಳನ್ನು ಮತ್ತು ಉಳಿದೆಲ್ಲ ಅಧಿಕಾರಿಗಳನ್ನು ಕರೆಸಿದನು.
3 ಅವರೆಲ್ಲರು ಬಂದು ಅರಸನಾದ ನೆಬೂಕದ್ನೆಚ್ಚರನು ನಿಲ್ಲಿಸಿದ ವಿಗ್ರಹದ ಎದುರಿಗೆ ನಿಂತುಕೊಂಡರು. 4 ಆಗ ಸಾರುವವನು ದೊಡ್ಡ ಧ್ವನಿಯಲ್ಲಿ, “ವಿವಿಧ ಜನಾಂಗ, ಕುಲ, ಭಾಷೆಗಳ ಜನರೇ, ನಾನು ಹೇಳುವುದನ್ನು ಕೇಳಿರಿ. 5 ವಾದ್ಯಗಳ ಧ್ವನಿಯನ್ನು ಕೇಳಿದ ಕೂಡಲೇ ನೀವು ಅಡ್ಡಬೀಳಬೇಕು. ಇದು ರಾಜಾಜ್ಞೆ. ತುತ್ತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ, ವಾಲಗ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಕೂಡಲೆ ನೀವು ಬಂಗಾರದ ವಿಗ್ರಹವನ್ನು ಪೂಜಿಸಬೇಕು. ಅರಸನಾದ ನೆಬೂಕದ್ನೆಚ್ಚರನು ಈ ವಿಗ್ರಹವನ್ನು ನಿಲ್ಲಿಸಿದ್ದಾನೆ. 6 ಯಾರಾದರೂ ಈ ಬಂಗಾರದ ವಿಗ್ರಹಕ್ಕೆ ಅಡ್ಡಬೀಳದಿದ್ದರೆ ಮತ್ತು ಪೂಜಿಸದಿದ್ದರೆ ತಕ್ಷಣ ಅವರನ್ನು ಬೆಂಕಿಯ ಕೊಂಡಕ್ಕೆ ಎಸೆಯಲಾಗುವುದು” ಎಂದು ಸಾರಿದನು.
7 ಆದ್ದರಿಂದ ತುತ್ತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಕೂಡಲೆ ಅವರು ಅಡ್ಡಬಿದ್ದು ಬಂಗಾರದ ವಿಗ್ರಹವನ್ನು ಪೂಜಿಸಿದರು. ಅರಸನಾದ ನೆಬೂಕದ್ನೆಚ್ಚರನು ನಿಲ್ಲಿಸಿದ ವಿಗ್ರಹವನ್ನು ಎಲ್ಲ ಜನಾಂಗಗಳ, ಭಾಷೆಗಳ ಜನರು ಪೂಜಿಸಿದರು.
8 ಆಗ ಕೆಲವು ಜನ ಕಲ್ದೀಯರು ಅರಸನ ಬಳಿಗೆ ಬಂದು ಅವರು ಯೆಹೂದ್ಯರ ವಿರುದ್ಧ ಮಾತನಾಡತೊಡಗಿದರು. 9 ಅರಸನಾದ ನೆಬೂಕದ್ನೆಚ್ಚರನಿಗೆ ಅವರು, “ಮಹಾರಾಜನೇ, ಚಿರಂಜೀವಿಯಾಗಿರು! 10 ಅರಸನೇ, ತುತ್ತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ, ವಾಲಗ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಪ್ರತಿಯೊಬ್ಬನೂ ಅಡ್ಡಬಿದ್ದು ಬಂಗಾರದ ವಿಗ್ರಹವನ್ನು ಪೂಜಿಸಬೇಕು ಎಂದು ತಾವು ಆಜ್ಞೆ ಕೊಟ್ಟಿದ್ದೀರಿ. 11 ಯಾರಾದರೂ ಅಡ್ಡಬಿದ್ದು ಬಂಗಾರದ ವಿಗ್ರಹವನ್ನು ಪೂಜಿಸದಿದ್ದರೆ ಅವರನ್ನು ಉರಿಯುವ ಬೆಂಕಿಯ ಕೊಂಡದಲ್ಲಿ ಎಸೆಯಲಾಗುವುದೆಂದು ಕೂಡ ತಾವು ಹೇಳಿದ್ದೀರಿ. 12 ಅರಸನೇ, ಕೆಲವು ಜನ ಯೆಹೂದ್ಯರು ತಮ್ಮ ಆಜ್ಞೆಯನ್ನು ಪಾಲಿಸಲಿಲ್ಲ. ಆ ಯೆಹೂದ್ಯರನ್ನು ತಾವು ಬಾಬಿಲೋನ್ ಪ್ರಾಂತ್ಯದಲ್ಲಿ ಪ್ರಮುಖ ಅಧಿಕಾರಿಗಳನ್ನಾಗಿ ನೇಮಿಸಿದ್ದೀರಿ. ಅವರ ಹೆಸರುಗಳು, ಶದ್ರಕ್, ಮೇಶಕ್, ಅಬೇದ್ನೆಗೋ ಎಂದು. ಅವರು ನಿಮ್ಮ ದೇವರುಗಳನ್ನು ಪೂಜಿಸುವುದಿಲ್ಲ. ನೀವು ನಿಲ್ಲಿಸಿದ ಬಂಗಾರದ ವಿಗ್ರಹಕ್ಕೆ ಅಡ್ಡಬಿದ್ದು ಪೂಜಿಸುವದಿಲ್ಲ” ಎಂದು ಚಾಡಿ ಹೇಳಿದರು.
13 ನೆಬೂಕದ್ನೆಚ್ಚರನಿಗೆ ಬಹಳ ಕೋಪ ಬಂತು. ಅವನು ಶದ್ರಕ್, ಮೇಶಕ್, ಅಬೇದ್ನೆಗೋ ಇವರುಗಳನ್ನು ಕರೆಸಿದನು. ಅವರನ್ನು ಅರಸನ ಬಳಿಗೆ ಕರೆದುತರಲಾಯಿತು. 14 ನೆಬೂಕದ್ನೆಚ್ಚರನು ಅವರಿಗೆ, “ಶದ್ರಕ್, ಮೇಶಕ್, ಅಬೆದ್ನೆಗೋ, ನೀವು ನನ್ನ ದೇವರುಗಳನ್ನು ಪೂಜಿಸುವುದಿಲ್ಲವಂತೆ, ಇದು ನಿಜವೇ? ನಾನು ನಿಲ್ಲಿಸಿದ ಬಂಗಾರದ ವಿಗ್ರಹವನ್ನು ನೀವು ಅಡ್ಡಬಿದ್ದು ಪೂಜಿಸಲಿಲ್ಲವಂತೆ, ಇದು ನಿಜವೇ? 15 ಈಗಲಾದರೋ ತುತ್ತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ, ವಾಲಗ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಕೂಡಲೆ ನೀವು ಅಡ್ಡಬಿದ್ದು ಚಿನ್ನದ ವಿಗ್ರಹವನ್ನು ಪೂಜಿಸಬೇಕು. ನಾನು ಮಾಡಿಸಿದ ಈ ವಿಗ್ರಹವನ್ನು ಪೂಜಿಸಲು ನೀವು ಸಿದ್ಧರಾಗಿದ್ದರೆ ಸರಿ. ನೀವು ಅದನ್ನು ಪೂಜಿಸದಿದ್ದರೆ ತಕ್ಷಣ ನಿಮ್ಮನ್ನು ಉರಿಯುವ ಕೊಂಡದಲ್ಲಿ ಎಸೆಯಲಾಗುವುದು. ಆಗ ನನ್ನ ಕೈಯಿಂದ ನಿಮ್ಮನ್ನು ಬಿಡಿಸುವುದು ಯಾವ ದೇವರಿಗೂ ಸಾಧ್ಯವಾಗಲಾರದು” ಎಂದು ಹೇಳಿದನು.
16 ಇದನ್ನು ಕೇಳಿ ಶದ್ರಕ್, ಮೇಶಕ್, ಅಬೇದ್ನೆಗೋ ಎಂಬುವವರು ಅರಸನಿಗೆ, “ನೆಬೂಕದ್ನೆಚ್ಚರನೇ, ಈ ವಿಷಯದಲ್ಲಿ ನಾವು ನಿನಗೆ ಏನೂ ಹೇಳಬೇಕಾಗಿಲ್ಲ. 17 ನೀನು ನಮ್ಮನ್ನು ಉರಿಯುವ ಕೊಂಡದಲ್ಲಿ ಎಸೆದರೆ ನಾವು ಆರಾಧಿಸುವ ದೇವರು ನಮ್ಮನ್ನು ರಕ್ಷಿಸಬಲ್ಲನು. ಆತನು ಇಚ್ಛಿಸಿದರೆ ನಮ್ಮನ್ನು ನಿನ್ನ ಕೈಯಿಂದ ಬಿಡಿಸಬಲ್ಲನು. 18 ಅರಸನೇ, ಒಂದುವೇಳೆ ದೇವರು ನಮ್ಮನ್ನು ರಕ್ಷಿಸದಿದ್ದರೂ ನಾವು ನಿನ್ನ ದೇವರುಗಳನ್ನು ಪೂಜಿಸುವುದಿಲ್ಲ. ನೀನು ನಿಲ್ಲಿಸಿದ ಬಂಗಾರದ ವಿಗ್ರಹವನ್ನು ಪೂಜಿಸುವುದಿಲ್ಲ. ಇದು ನಿನಗೆ ತಿಳಿದಿರಲಿ” ಎಂದು ಖಂಡಿತವಾಗಿ ಹೇಳಿದರು.
ಬಾಬಿಲೋನ್ ನಾಶವಾಯಿತು
18 ನಂತರ ಮತ್ತೊಬ್ಬ ದೇವದೂತನು ಪರಲೋಕದಿಂದ ಬರುತ್ತಿರುವುದನ್ನು ನಾನು ನೋಡಿದೆನು. ಈ ದೇವದೂತನಿಗೆ ಮಹಾ ಅಧಿಕಾರವಿತ್ತು. ಈ ದೇವದೂತನ ಪ್ರಭಾವವು ಭೂಮಿಯನ್ನು ಪ್ರಕಾಶಗೊಳಿಸಿತು. 2 ದೇವದೂತನು ತನ್ನ ಶಕ್ತಿಯುತವಾದ ಧ್ವನಿಯಿಂದ ಆರ್ಭಟಿಸಿದನು:
“ಅವಳು ನಾಶವಾದಳು!
ಬಾಬಿಲೋನೆಂಬ ಮಹಾನಗರಿಯು ನಾಶವಾದಳು!
ಅವಳು (ಬಾಬಿಲೋನ್) ದೆವ್ವಗಳಿಗೆ ವಾಸಸ್ಥಾನವಾದಳು,
ಸಕಲ ಅಶುದ್ಧಾತ್ಮಗಳಿಗೆ ನೆಲೆಯಾದಳು,
ಅಶುದ್ಧವಾದ ಮತ್ತು ಅಸಹ್ಯವಾದ
ಸಕಲ ಹಕ್ಕಿಗಳಿಗೆ ಆಶ್ರಯವಾದಳು.”
3 ದೇವರ ಕೋಪವೆಂಬ ಮತ್ತು ಅವಳ ಲೈಂಗಿಕ ಪಾಪವೆಂಬ ದ್ರಾಕ್ಷಾರಸವನ್ನು ಲೋಕದ ಜನರೆಲ್ಲರೂ ಕುಡಿದು ಮತ್ತರಾದರು.
ಭೂಲೋಕದ ರಾಜರುಗಳೆಲ್ಲ ಅವಳೊಂದಿಗೆ ಲೈಂಗಿಕ ಪಾಪ ಮಾಡಿದರು.
ಭೂಲೋಕದ ವರ್ತಕರು ಅವಳ ಅತಿಯಾದ ಸುಖದಿಂದ ಶ್ರೀಮಂತರಾದರು.
4 ನಂತರ ಪರಲೋಕದಿಂದ ಮತ್ತೊಂದು ಧ್ವನಿಯು ಹೀಗೆ ಹೇಳುವುದು ನನಗೆ ಕೇಳಿತು:
“ನನ್ನ ಜನರೇ, ನೀವು ಆ ನಗರದಿಂದ ಹೊರಗೆ ಬಂದುಬಿಡಿ.
ಆಗ ನೀವು ಅವಳ ಪಾಪಗಳಲ್ಲಿ ಪಾಲುಗಾರರಾಗುವುದಿಲ್ಲ;
ಅವಳಿಗಾಗುವ ಉಪದ್ರವಗಳು ನಿಮಗೆ ಸಂಭವಿಸುವುದಿಲ್ಲ.
5 ಆ ನಗರಿಯ ಪಾಪಗಳು ಪರಲೋಕವನ್ನು ಮುಟ್ಟುವಂತೆ ಬೆಳೆದುನಿಂತಿವೆ.
ಅವಳು ಮಾಡಿದ ಕೆಟ್ಟಕಾರ್ಯಗಳನ್ನು ದೇವರು ಮರೆತಿಲ್ಲ.
6 ಆ ನಗರಿಯು ಬೇರೆಯವರಿಗೆ ಕೊಟ್ಟಂತೆ ನೀವೂ ಅವಳಿಗೆ ಕೊಡಿರಿ.
ಅವಳು ಮಾಡಿದ್ದಕ್ಕೆ ಪ್ರತಿಯಾಗಿ ಎರಡರಷ್ಟನ್ನು ಅವಳಿಗೆ ಕೊಡಿರಿ.
ಅವಳು ಇತರರಿಗೆ ಕೊಟ್ಟ ದ್ರಾಕ್ಷಾರಸಕ್ಕಿಂತ ಎರಡರಷ್ಟು ಗಟ್ಟಿಯಾದ
ದ್ರಾಕ್ಷಾರಸವನ್ನು ಅವಳಿಗೆ ಸಿದ್ಧಪಡಿಸಿಕೊಡಿರಿ.
7 ಅವಳು ತನ್ನನ್ನು ಘನಪಡಿಸಿಕೊಂಡು ವೈಭವದಿಂದ ಜೀವಿಸಿದಳು.
ಆದ್ದರಿಂದ ಅದಕ್ಕೆ ತಕ್ಕಂತೆ ಸಂಕಟವನ್ನೂ ದುಃಖವನ್ನೂ ಅವಳಿಗೆ ಬರಮಾಡಿರಿ.
‘ನಾನು ನನ್ನ ಸಿಂಹಾಸನದ ಮೇಲೆ ಕುಳಿತಿರುವ ರಾಣಿ.
ನಾನು ವಿಧವೆಯಲ್ಲ,
ನಾನು ಎಂದೆಂದಿಗೂ ದುಃಖಿಸುವುದಿಲ್ಲ’ ಎಂದು ಅವಳು ತನಗೆ ತಾನೇ ಹೇಳಿಕೊಳ್ಳುತ್ತಾಳೆ.
8 ಆದ್ದರಿಂದ ಅವಳಿಗೆ ಮರಣ, ಗೋಳಾಟ,
ಭೀಕರ ಕ್ಷಾಮ ಎಂಬ ಉಪದ್ರವಗಳು ಒಂದೇ ದಿನದಲ್ಲಿ ಬರುತ್ತವೆ.
ಅವಳಿಗೆ ತೀರ್ಪು ನೀಡಿದ ದೇವರಾಗಿರುವ ಪ್ರಭುವು
ಬಲಿಷ್ಠನಾಗಿರುವುದರಿಂದ ಅವಳು ಬೆಂಕಿಯಿಂದ ನಾಶವಾಗುತ್ತಾಳೆ.”
9 ಅವಳೊಂದಿಗೆ ಲೈಂಗಿಕ ಪಾಪಮಾಡಿ ಅವಳ ಸಂಪತ್ತಿನಲ್ಲಿ ಪಾಲುಗಾರರಾದ ಲೋಕದ ರಾಜರುಗಳು ಅವಳ ದಹನದಿಂದೇರುವ ಹೊಗೆಯನ್ನು ನೋಡುತ್ತಾರೆ. ಅವಳು ಸಾಯುತ್ತಿರುವುದನ್ನು ಕಂಡು ರಾಜರುಗಳು ಗೋಳಾಡುವರು ಮತ್ತು ದುಃಖಿಸುವರು. 10 ಅವಳ ಯಾತನೆಯನ್ನು ಕಂಡು ರಾಜರುಗಳು ಭಯದಿಂದ ದೂರನಿಂತು ಹೀಗೆನ್ನುವರು:
‘ಅಯ್ಯೋ, ಅಯ್ಯೋ, ಮಹಾನಗರಿಯೇ,
ಬಲಿಷ್ಠವಾದ ಬಾಬಿಲೋನ್ ಪಟ್ಟಣವೇ,
ಒಂದೇ ಗಳಿಗೆಯಲ್ಲಿ ನಿನಗೆ ದಂಡನೆ ಆಯಿತಲ್ಲಾ!’
19 ಅವರು ತಮ್ಮ ತಲೆಯ ಮೇಲೆ ಧೂಳನ್ನು ಸುರಿದುಕೊಂಡು, ದುಃಖದಿಂದ ಗೋಳಾಡುತ್ತಾ ಹೀಗೆ ಹೇಳಿದರು:
‘ಅಯ್ಯೋ! ಅಯ್ಯೋ! ಈ ಮಹಾನಗರಿಗೆ ಎಂಥಾ ಗತಿಯಾಯಿತು!
ಸಮುದ್ರದ ಮೇಲೆ ಹಡಗುಗಳನ್ನು ಹೊಂದಿದ್ದ ಜನರೆಲ್ಲರೂ ಅವಳ ಸಂಪತ್ತಿನಿಂದ ಶ್ರೀಮಂತರಾದರು!
ಆದರೆ ಅವಳು ಒಂದೇ ಗಳಿಗೆಯಲ್ಲಿ ನಾಶವಾಗಿಬಿಟ್ಟಳು!
20 ಪರಲೋಕವೇ, ಇದರಿಂದ ನೀನೂ ಸಂತೋಷಪಡು!
ದೇವರ ಪರಿಶುದ್ಧ ಜನರೇ, ಅಪೊಸ್ತಲರೇ, ಪ್ರವಾದಿಗಳೇ, ನೀವೂ ಸಂತೋಷಪಡಿರಿ!
ಅವಳು ನಿಮಗೆ ಮಾಡಿದ ಕೇಡುಗಳಿಗಾಗಿ ದೇವರು ಅವಳನ್ನು ದಂಡಿಸಿದನು.’”
Kannada Holy Bible: Easy-to-Read Version. All rights reserved. © 1997 Bible League International